ಕರ್ನಾಟಕ ಸರಕಾರದ ಯಾವುದೇ ಅಕಾಡೆಮಿ ಗಳಿರಬಹುದು ಅದಕ್ಕೆ ಸೂಕ್ತ, ಅರ್ಹ ವ್ಯಕ್ತಿಗಳ ನಾಮಾಕರಣ ಮಾಡಬೇಕೇ ಹೊರತು ಪಕ್ಷಕ್ಕಾಗಿ ಕೆಲಸ ಮಾಡಿದ ವಿವಿಧ ಪಕ್ಷಗಳ ಏಜೆಂಟ್‌ಗಳ ಅಯ್ಕೆ ಸರಿಯಲ್ಲ. ಕಾಂಗ್ರೇಸ್ ಬಂದರೆ ಕಾಂಗ್ರೇಸಿಗರನ್ನು, ಬಿಜೆಪಿ ಬಂದರೆ ದೇಶಭಕ್ತಿಯ ನಾಟಕ ಆಡುವವರನ್ನು, ದುಡ್ಡು ಕೊಟ್ಟವರನ್ನು, ಚುನಾವಣೆಯಲ್ಲಿ ಕೆಲಸ ಮಾಡಿದವರನ್ನೆಲ್ಲ ತಂದು ಅಕಾಡೆಮಿಗಳ ಕುರ್ಚಿಗಳಲ್ಲಿ ಕುಳ್ಳಿರಿಸಿದರೆ ಅಕಾಡೆಮಿಗಳು ಕೆಲಸ ಮಾಡಬೇಕಲ್ಲ. ಅಕಾ ಡೆಮಿಗಳ ಕುರ್ಚಿ ಬಿಸಿ ಮಾಡಿದರಷ್ಟೇ ಸಾಲದು.
ಈಗ ತುಳು ಅಕಾಡೆಮಿಯೇ ಇರಲಿ. ದಕ್ಷಿಣ ಕನ್ನಡದಲ್ಲಿ ತುಳು ಭಾಷೆಗೆ, ಸಂಸ್ಸೃತಿಗೆ ಕೆಲಸ ಮಾಡಿದವರು ತುಂಬಾ ಜನ ಇದ್ದಾರೆ. ಅವನು ಸಮಾಜದ ಕಟ್ಟ ಕಡೆಯಿಂದ ಬಂದ ವನಾದರೂ ಆಗಿರಬಹುದು. ಅಲ್ಪಸಂಖ್ಯಾತನೂ ಆಗಿರ ಬಹುದು. ಅವನಿಂದ ತುಳು ಭಾಷೆಗೆ ಅಮೋಘ ಸೇವೆ ಸಂದಿರ ಬೇಕು ಮತ್ತು ಅವನು ಅಕಾಡೆಮಿ ಸೀಟಲ್ಲಿ ಕೂರಲು ಅರ್ಹನಾಗಿರಬೇಕು. ಇದು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆಂದು ರಾಮ ದೂಮ ಚೋಮರನ್ನೆಲ್ಲ ಅಕಾಡೆಮಿ ಸೀಟಲ್ಲಿ ಕೂರಿಸಿದರೆ ಅಕಾಡೆಮಿಗೆ ಬಂದ ದುಡ್ಡನ್ನೆಲ್ಲ ನುಂಗಿ ಬಿಡುತ್ತಾರೆ. ಅದೇ ರೀತಿ ಅರೆಭಾಷೆ, ಕೊಂಕಣಿ, ಬ್ಯಾರಿ ಅಕಾಡೆಮಿಗಳದ್ದೂ ಇದೇ ಸಮಸ್ಯೆ.
ಇನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿದ್ದೂ ಅದೇ ರಾಗ ಅದೇ ತಾಳ. ಕೊಡವ ಅಕಾಡೆಮಿಯ ತಿರುಗುವ ಕುರ್ಚಿಯಲ್ಲಿ ಕೂರಲು ಅವನು ಕೇವಲ ಕೊಡವನಾಗಿದ್ದರೆ ಸಾಲದು, ಅವನು ಕೊಡವ ಕಲೆ. ಸಂಸ್ಕೃತಿ, ಭಾಷೆಗೆ ಪೂರಕವಾಗಿ ಕೆಲಸ ಮಾಡಿರಬೇಕು, ಅವನೊಬ್ಬ ಉತ್ತಮ ಸಂಘಟಕನಾಗಿರಬೇಕು, ವಿದ್ಯೆಯಲ್ಲಿ, ಭಾಷೆಯಲ್ಲಿ ಪಾಂಡಿತ್ಯ ಪಡೆದವನಾಗಿರಬೇಕು, ಕೊಡವ ಸಮುದಾಯ ಮತ್ತು ಸರಕಾರಗಳ ನಡುವೆ ಮಧ್ಯಸ್ಥನಾಗಿ ಕೆಲಸ ಮಾಡಿ ಆ ಮೂಲಕ ಕೊಡವ ಭಾಷೆಯನ್ನು, ಸಂಸ್ಸೃತಿಯನ್ನು ಶ್ರೀಮಂತ ಗೊಳಿಸುವ ಗಟ್ಟಿಗನಾಗಿರಬೇಕು. ಅದೆಲ್ಲ ಬಿಟ್ಟು ಪಕ್ಷಗಳ ಪರವಾಗಿ ಎರಡಕ್ಷರ ಗೀಚಿ ಕುರ್ಚಿ ಪಡಕೊಳ್ಳುವ ಅವ ಕಾಶವಾದಿಗಳಿಗೆ ಸ್ಥಾನ ಕೊಟ್ಟರೆ ಅವರಿಂದ ಭಾಷೆ, ಸಂಸ್ಸೃತಿಯ ಏಳಿಗೆ ಮಾಡಲು ಸಾಧ್ಯವೇ ಇಲ್ಲ. ಇನ್ನು ಕೊಡವರಲ್ಲಿ 18 ಮೂಲ ನಿವಾಸಿ ಪಂಗಡಗಳಿದ್ದು ಸರಕಾರ ಆ ಹದಿನೆಂಟರಿಂದ ಕೊಡವ ಭಾಷೆ, ಸಂಸ್ಸೃತಿಗೆ ಕೆಲಸ ಮಾಡಿದ, ಮುಂದೆ ಕೆಲಸ ಮಾಡುವ ಸಂಘಟನಾ ಚತುರನನ್ನು ಹುಡುಕಿ, ಹೆಕ್ಕಿ ತೆಗೆದು ಕೊಡವ ಸಾಹಿತ್ಯ ಅಕಾಡೆಮಿಗೆ ನೇಮಕ ಮಾಡಬೇಕು. ಯಾರೋ ಬೆಂಗಳೂರಲ್ಲಿ ಕುಂತು ಸರಕಾರದ ಅಸ್ಥಾನದಲ್ಲಿ ವಂಧಿಮಾಗಧ ಕೆಲಸ ಮಾಡುವವರಿಗೆ ಕೊಡವ ಸಾಹಿತ್ಯದ ಬದನೆ ಕಾಯಿಯೂ ಗೊತ್ತಿರಲ್ಲ. ಕೇವಲ ಕೊಡವ ಭಾಷೆಗೆ ಅ,ಆ ಇ,ಈ ಬರೆದರೆ ಸಾಲದು, ಗ್ರಂಥಗಳನ್ನೇ ಬರೆದಿರಬೇಕು. ಯಾಕೆಂದರೆ ಕೊಡವ ಭಾಷೆ, ಸಂಸ್ಕೃತಿ ಅಗರ್ಭ ಶ್ರೀಮಂತವಾಗಿಯೇ ಇದೆ. ಆ ಶ್ರೀಮಂತಿಕೆಯನ್ನು ಉಳಿಸಿ ಕೊಳ್ಳಬೇಕಲ್ಲ ಅದಕ್ಕೆ ಸರಕಾರವೇ ಕೊಡಗರ ಆ ಹದಿನೆಂಟು ಮೂಲ ನಿವಾಸಿಗಳಿಂದ ಸಂಘಟನಾ ಚಾತುರ್ಯ ಇರುವ, ಕೊಡವ ಭಾಷಾ ಪಾಂಡಿತ್ಯ ಇರುವ, ಕೊಡವ ಸಾಹಿತ್ಯದ ಬಗ್ಗೆ ಒಲವಿರುವ ಮತ್ತು ಅಗಾಧ ಜ್ಞಾನ ಇರುವವರನ್ನೇ ಭೂತಗನ್ನಡಿ ಹಿಡಿದು ಹುಡುಕಿ ಹೆಕ್ಕಿ ಸಾರಥ್ಯ ಕೊಡಲಿ ಎಂಬುದು ಸಮಸ್ತ ಕೊಡಗರ ಆಶಯ.
Post a Comment