August 2023

                                               


    ಹಾಗೆಂದು ಕೆಲವು ವರ್ಷಗಳ ಹಿಂದೆಯೇ ನರಿಮೊಗರು ಗ್ರಾಮಕ್ಕೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಒಂದು ಕೌ ಆಸ್ಪತ್ರೆ ಸ್ಯಾಂಕ್ಷನ್ ಆಗಿತ್ತು. ಪುರುಷರ ಕಟ್ಟೆಯಲ್ಲಿ ಸರ್ವೇ ನಂಬರ್ 312ರಲ್ಲಿ ಈ ಇಲಾಖೆಗಳಿಗೆ ಸ್ಥಳ ಕೂಡ ಗುರುತಿಸಲ್ಪ ಟ್ಟಿತ್ತು. ಆದರೆ ನರಿಮೊಗರು ಗ್ರಾಮಕ್ಕೆ ಮಂಜೂರಾಗಿದ್ದ ಆರೋಗ್ಯ ಕೇಂದ್ರ  ಮತ್ತು ಕೌ ಆಸ್ಪತ್ರೆಯನ್ನು ಕೇವಲ ಆ ಜಾಗವನ್ನು ನುಂಗುವ ಸಲುವಾಗಿ ‌ಹತ್ತಿರದ ಭಕ್ತ ಕೋಡಿಗೆ ಶಿಫ್ಟ್ ಮಾಡಲಾಗಿತ್ತು. 
   ಭಕ್ತಕೋಡಿಯಿಂದ ಕೆಲವೇ ಕೆಲವು ಮೈಲು ದೂರದಲ್ಲಿ ತಿಂಗಳಾಡಿ ಆರೋಗ್ಯ ಕೇಂದ್ರ ಕೂಡ  ಇದ್ದು ಕೆಲವೇ ಮೈಲಿಗಳ ಅಂತರದಲ್ಲಿ ಎರಡೆರಡು ಆರೋಗ್ಯ ಕೇಂದ್ರ ಯಾಕೆ ನೊಣ ಹೊಡಿಲಿಕ್ಕಾ ಎಂಬ ಪ್ರಶ್ನೆ ಚಿಂತನೆ ಮಾಡಬೇಕಾಗಿದೆ. ಹಾಗೆ ನರಿಮೊಗರು ಗ್ರಾಮಕ್ಕೆ ಮಂಜೂರಾಗಿದ್ದ ಆರೋಗ್ಯ ಕೇಂದ್ರದ ಜಾಗವನ್ನು ಅನಂತರ ಆಕ್ರಮಣ ಮಾಡಿ ಅದನ್ನು ದರ್ಖಾಸ್ ಮಾಡಿ ಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಇದೀಗ ಆ ಜಾಗ ಯಾರದೋ ಹೆಸರಿನಲ್ಲಿದ್ದು ಪುರುಷರ ಕಟ್ಟೆಯ ಶಾಂತಿ ಗೋಡು ರಸ್ತೆಯಲ್ಲಿ ಅಲ್ಲೇ ಸೊಸೈಟಿ ಬಳಿ ಲೊಕೇಶನ್ ತೋರಿಸುತ್ತಿದೆ.


   

    







                                              



   ಕಲಾವಿದರು ಮುಂದೆ ಬಂದು ಅವಕಾಶವ ಬೆಳೆಸಿ ಕೊಳ್ಳಬೇಕು. ಅವಕಾಶ ಎನ್ನುವುದು ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇರುತ್ತದೆ. ತಮ್ಮ ಪ್ರತಿಭೆಯ ತೋರಿಸಿಕೊಂಡಾಗ ಒಂದಷ್ಟು ಜನರಿಗೆ ಪರಿಚಯವಾಗಲು ಸಾಧ್ಯ, ಹಾಗೆಯೇ ಸಮಾಜದ ದೃಷ್ಟಿಕೋನ ಬದಲಾಗಬೇಕು ಎಂದರೆ ಹದಿಯರೆಯ ವಿದ್ಯಾರ್ಥಿಗಳು ಪ್ರೇಮ ವೈಕಾಲ್ಯಕ್ಕೆ ಹಿಡಿತದಲ್ಲಿರಬೇಕು ಎಂದು ತೇಜಕುಮಾರ್ ಬಡ್ಡಡ್ಕ ಹೇಳಿ ದರು.
   ಇವರು ಸುಳ್ಯದ ಎ ಪಿ ಎಂ ಸಿ ಸಭಾಂಗಣದಲ್ಲಿ ನಡೆದ ಲವ್ ಮೈನಸ್ 18ಎನ್ನುವ ಪ್ರೀಮಿಯರ್ ಶೋ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.
   ಸುಳ್ಯದಲ್ಲಿ ಕಲಾವಿದರು ಹೆಚ್ಚಿನ ಟಿವಿ ಚಾನೆಲ್ ಗಳಲ್ಲಿ ಮುಂದೆ ಬರುತ್ತಿದ್ದಾರೆ ಎನ್ನುವುದು  ಸಂತಸದ ಸುದ್ದಿ ಆಗಿದೆ . ಬೇರೆ ಬೇರೆ ದೇಶಗಳಲ್ಲಿ ಆಗುವ ಎಲ್ಲಾ ಸಿನಿಮಾಗಳನ್ನು ನಾವು ವೀಕ್ಷಿಸಲು  ಹೊರದೇಶಕ್ಕೆ ಹೋಗುತ್ತೇವೆ ಅಂತದರ ನಡುವೆ  ನಮ್ಮ ಕರಾವಳಿಯ ಸ್ಥಳಗಳಲ್ಲಿಯೇ ಚಿತ್ರೀಕರಣ ಆದ ಚಿತ್ರವು ಹದಿಯರೆಯ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಸ್ಫೂರ್ತಿಯಾಗಿದೆ ಇನ್ನಷ್ಟು ಸಿನಿಮಾ ತರಲಿ ಎಂದು ತಂಡಕ್ಕೆ ರಂಗನಿರ್ಧೇಶಕ ಕೃಷ್ಣಪ್ಪ  ಬಿಂಬಿಲ ಶುಭ ಹಾರೈಸಿದರು.
   ಕಾರ್ಯಕ್ರಮದಲ್ಲಿ ನಿರ್ದೇಶಕ ಚಿದಾನಂದ ಪರಪ್ಪ, ಛಾಯಾಗ್ರಾಹಕ ಯಶ್ ಫೋಟೋಗ್ರಫಿ, ಹಿರಿಯ ಸಾಹಿತಿ ಭೀಮರಾವ್ ವಾಷ್ಠರ್ ಹಾಗೂ ಕಲಾವಿದರು ಉಪಸ್ಥಿತ ರಿದ್ದರು. ಪ್ರಸಾದ್ ಕಾಟೂರು  ನಿರ್ವಹಿಸಿದರು‌.


   

    







                                             

    ಮೊನ್ನೆಯಿಂದ ಕುದ್ಮಾರು ಗ್ರಾಮದ ಬರೆಪ್ಪಾಡಿಯದ್ದೇ ಸುದ್ದಿ. ಬರೆಪ್ಪಾಡಿಯಲ್ಲಿ ಕುದ್ಮಾರು ಶಾಲೆಯ ಎದುರುಗಡೆಯೇ ಒಂದು ಬಾರ್ ತಲೆ ಎತ್ತಲಿದೆ ಎಂದು ಬರೆದ ಮರುದಿನವೇ ಬರೆಪ್ಪಾಡಿಯಲ್ಲಿ ಮತ್ತೊಂದು ಬಾರ್ ಓಪನ್ ಆಗಲಿದೆ ಎಂದು ಮಾಹಿತಿ ಬಂದ ಕಾರಣ ಆ ಬಾರ್ ಬಗ್ಗೆಯೂ ನಾಲ್ಕಕ್ಷರ ಟೈಟಾಗಿ ಬರೆದಿದ್ದೆವು. ಇದೀಗ ಅದೇ ಬರೆಪ್ಪಾಡಿಯಲ್ಲಿ ಓಪನ್ ಆಗಲಿರುವ ಮೂರನೇ ಬಾರಿನ ಕತೆಯೂ ಬಂದಿದೆ. ಹೌದು ಬರೆಪ್ಪಾಡಿಯಲ್ಲಿ ಮೂರನೇ ಬಾರ್ ಓಪನ್ ಮಾಡಲು ಈಗಾಗಲೇ ಚಪ್ಪರ ಹಾಕಿಯಾಗಿದೆ. ಇನ್ನು ಬೋರ್ಡ್ ಸಿಕ್ಕಿಸಿ ಕುಡುಕಣ್ಣ ಬಂದರೆ ಮುಗಿಯಿತು ಅಷ್ಟೇ. ಬಾಕಿ ಎಲ್ಲಾ ಕೆಲಸ ಮುಗಿದಿದೆ.
   ಹಾಗೆಂದು ಬರೆಪ್ಪಾಡಿಯಲ್ಲಿ ಓಪನ್ ಆಗಲಿರುವ ಮೂರನೇ ಪೊಯ್ಯೆ ಬಾರ್ ಬರೆಪ್ಪಾಡಿ ಜಂಕ್ಷನ್ ಬಿಟ್ಟು ಸ್ವಲ್ಪ ಪಡ್ಡಾಯಿ ಭಾಗದ ನೂಜೋಲ್ತಡ್ಕ ಎಂಬ ಜಂಕ್ಷನ್ ಬಳಿ ಓಪನ್ ಆಗಲಿದೆ. ಇತ್ತೀಚಿನ ದಿನಗಳಲ್ಲಿ ನೂಜೋಲ್ತಡ್ಕ ಜಂಕ್ಷನ್ ನಿಂತಿಕಲ್ ವೇಗದಲ್ಲಿ ಬೆಳೆಯುತ್ತಿದ್ದು ಆಚೆ ಹೋದರೆ ಪುತ್ತೂರು, ಈಚೆ ಬಂದರೆ ಕಾಣಿಯೂರು, ಮೇಲೆ ಹೋದರೆ ಆಲಂಕಾರು, ಕೆಳಗೆ ಹೋದರೆ ದೈಪಿಲ ಚಾರ್ವಾಕ ಹೀಗೆ ಎಲ್ಲಾ ಸೈಜಿನ ಜನರು ಬಂದು ಹೋಗುವ ಒಂದು ಜಂಕ್ಷನ್ ಇದಾಗಿದೆ. ಹಾಗೆ ಇಲ್ಲಿಗೆ ಬರುವ ಎಲ್ಲಾ ಸೈಜಿನ ಜನರ ತೃಷೆಯ ಬಗ್ಗೆ ಅರಿವಿದ್ದ ನೂಜೋಲ್ತಡ್ಕದ ಶಿಲ್ಪಿ ಇಲ್ಲಿ ಒಂದು ಬಾರ್ ಓಪನ್ ಮಾಡಲು ರಾಕ್ಷಸ ಕ್ರೀಯೆ, ದೇವಕ್ರೀಯೆ ಎರಡರಲ್ಲೂ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಂದೇ ಗ್ರಾಮದಲ್ಲಿ ಮೂರು ಬಾರ್, ಒಂದೇ ಜಂಕ್ಷನ್ ನಲ್ಲಿ ಮೂರು ಬಾರ್. ಬರೆಪ್ಪಾಡಿಯನ್ನು ಗೋವಾ ಮಾಡಲು ಹೊರಟಿರುವ ಅಬಕಾರಿ ಇಲಾಖೆಗೆ ಒಂದು ದೊಡ್ಡ ಸೈಜಿನ ಧಿಕ್ಕಾರವಿರಲಿ. ಅದರಲ್ಲೂ ವಿಶೇಷವೇನೆಂದರೆ ಮೊದಲನೇ ಬಾರ್ ಕುದ್ಮಾರು ಶಾಲೆಯ ಎದುರೇ ಓಪನ್ ಆದರೆ ಮೂರನೇ ಬಾರ್ ಕುದ್ಮಾರು ಅಂಗನವಾಡಿಯ ಎದುರೇ ಓಪನ್ ಆಗಲಿದೆ. ಕುದ್ಮಾರು ಅಂಗನವಾಡಿ ಮುಂದೆ ಓಪನ್ ಆಗಲಿರುವ ಬಾರ್ ನ ವಿಶೇಷತೆ ಏನೆಂದರೆ ಇಲ್ಲಿ ಒಂದು ಪಂಪೂ ಇದ್ದೂ ಇಲ್ಲೇ ಗಾಡಿಗೂ ಇಂಧನ ಹಾಕಬಹುದು ನಮಗೂ ಹಾಕಿಕೊಳ್ಳಬಹುದು. ಅಂಥದ್ದೊಂದು ವ್ಯವಸ್ಥೆ ನೂಜೋಲ್ತಡ್ಕದ ಶಿಲ್ಪಿಯಿಂದ ಆದರೆ ಕುದ್ಮಾರು ಗ್ರಾಮ ಧನ್ಯ ಧನ್ಯ.



   

    







                                            



    ಈ ಸರ್ಕಾರಗಳೇ ಹೀಗೆ. ಏನೋ ಸಾಧಿಸ ಬೇಕೆಂದು ಏನೇನೋ ಶುರು ಮಾಡಿಬಿಡುತ್ತದೆ. ಆಮೇಲೆ ನಂಬಿದವರನ್ನು ನಡು ನೀರಿನಲ್ಲಿ ಕೈ ಬಿಡುವುದು ಸರ್ಕಾರಗಳ ಚಾಳಿ. ಇದೀಗ ಎರಡು ವರ್ಷಗಳ ಹಿಂದೆ ಸರ್ಕಾರವೇ ಶುರು  ಮಾಡಿದ್ದ ಕಟ್ಟಡ ಕಾರ್ಮಿಕರ  ಮಕ್ಕಳ ಅಂಗನವಾಡಿಗಳಿಗೆ ಸರ್ಕಾರವೇ ಈಗ ಬೀಗ ರೆಡಿ ಮಾಡಿದೆ. ಈಗ ಒಮ್ಮಿಂದೊಮ್ಮೆಲೆ ಬೀಗ ಹಾಕ್ತೇವೆ ಅಂದರೆ ಅಂಗನವಾಡಿ ಕಾರ್ಯಕರ್ತೆಯರು ಎಲ್ಲಿಗೆ ಹೋಗ ಬೇಕು, ಪುಟ್ಟಪುಟ್ಟ ಮಕ್ಕಳು ಎಲ್ಲಿಗೆ ಹೋಗಬೇಕು?




 ಇದೆಲ್ಲ ಶುರುವಾಗಿದ್ದು ಎರಡು ವರ್ಷಗಳ ಹಿಂದೆ. ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅಂಗನವಾಡಿ ಪ್ರಾರಂಭಿಸಲು ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದಿತ್ತು. ಅದರಂತೆ ಆ ಯೋಜನೆಗೆ CRECHE ಎಂದು ಹೆಸರಿಟ್ಟು ತೊಟ್ಟಿಲಲ್ಲಿ ಹಾಕಿ ಜೋಯಿ ಹಾಡಲಾಗಿತ್ತು. ಕಟ್ಟಡ ಕಾರ್ಮಿಕರ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದಿದ್ದರು. ಆದರೆ ಇದೀಗ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಲು ತೀರ್ಮಾನಿಸಿದೆ. ಇದಕ್ಕೆ ಸರ್ಕಾರ ಏನು ಕಾರಣ ಕೊಟ್ಟಿದೆ ಅಂದರೆ ಪ್ರತಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ವಿಹಾರಗಳು ಇರುವ ಕಾರಣ ಸಚಿವ ಶ್ರೀ ಸಂತೋಷ್ ಲಾಡ್ ಸಾಹೇಬ್ರಿಗೆ CRECHE ಯೋಜನೆಯನ್ನು ಮುಂದುವರೆಸಲು ಇಷ್ಟವಿಲ್ಲದ ಕಾರಣ ಈ ತಿಂಗಳ ಕೊನೆಯಲ್ಲಿ ಎಲ್ಲಾ CRECHEಗಳನ್ನು ಮುಚ್ಚಲು  ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.


   ಹಾಗಾದರೆ ಈ ಶಿಶು ವಿಹಾರಗಳ ಮಕ್ಕಳನ್ನು ಪುನಃ ಬೇರೆ ಬೇರೆ ಅಂಗನವಾಡಿಗಳಿಗೆ ಸೇರಿಸಬೇಕು. ಇಲ್ಲಿ ಮಕ್ಕಳ ಸಮಸ್ಯೆ ದೊಡ್ಡದಲ್ಲ. ಅವರನ್ನು ಬೇರೆ ಬೇರೆ ಅಂಗನವಾಡಿ ಗಳಿಗೆ ಸೇರಿಸಬಹುದು. ಆದರೆ ಈ CRECHEಯಲ್ಲಿ ಕೆಲಸ ಮಾಡುತ್ತಿದ್ದ ಟೀಚರ್ಸ್ ಮತ್ತು ಹೆಲ್ಪರ್ ಗಳ ಗತಿ ಏನು. ಅವರೆಲ್ಲ ಈ ಸರ್ಕಾರವನ್ನು ನಂಬಿ ಇದ್ದ ಕೆಲಸ ಕೈ ಬಿಟ್ಟು ಇದಕ್ಕೆ ಸೇರಿ ಈಗ ಅದೂ ಇಲ್ಲ ಇದೂ ಇಲ್ಲ ಎಂಬ ಪರಿಸ್ಥಿತಿಗೆ ಮುಟ್ಟಿದ್ದಾರೆ. ಆದ್ದರಿಂದ ಸರ್ಕಾರ ಈ ಕಾರ್ಯಕರ್ತೆಯರನ್ನು ಅರ್ಧ ನೀರಲ್ಲಿ ಕೈ ಬಿಟ್ಟ ಕಾರಣ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯೋಚಿಸ ಬೇಕಾಗಿದೆ.


   

    







                                           

    ನಾವು ಮೊನ್ನೆ ತಾನೇ ಕುದ್ಮಾರು‌ ಗ್ರಾಮದ ಬರೆಪ್ಪಾಡಿಯಲ್ಲಿ ಬಾರ್ ಒಂದು ಓಪನ್ ಆಗುತ್ತಿದೆ ಎಂದು ಬರೆದು ಕೈಪಸೆ ಆಜಿರಲಿಲ್ಲ ಮಾರಾಯ್ರೆ. ಈಗ ನೋಡಿದರೆ ಅದೇ ಬರೆಪ್ಪಾಡಿ ಯಲ್ಲಿ ಇನ್ನೊಂದು ಬಾರ್  ಓಪನ್ ಆಗಲಿದೆಯಂತೆ. ಒಂದು ಬಾರ್ ಬಂಡಸಾಲೆಯ ಬಲತ್ತ ಮೈಟ್, ಇನ್ನೊಂದು ಬಾರ್ ಬಂಡಸಾಲೆಯ ಎಡತ್ತ ಮೈಟ್. ಒಂದು ಕಾಂಗ್ರೆಸ್ ಬಾರ್ ಇನ್ನೊಂದು ಬಿಜೆಪಿ ಬಾರ್. ಒಂದು ಬಾರ್ ಶೆಟ್ರುಗಳದ್ದು ಇನ್ನೊಂದು ಬಾರ್ ಗೌಡ್ರುಗಳದ್ದು. ಆದರೆ ಕುಡುಕರು ಮಾತ್ರ ಸರ್ವ ಧರ್ಮಗಳಿಗೆ ಸೇರಿದವರು.
   ಹಾಗೆಂದು ಕಾಣಿಯೂರು-ಸುಬ್ರಮಣ್ಯ ರಸ್ತೆಯಲ್ಲಿ ನೀವು ಸವಣೂರು ಚಡವು ದಾಟಿ ಥರ್ಡ್ ಗೇರ್ ಬದಲಿಸಿ ಟಾಪ್ ಗೇರಲ್ಲಿ ಚಾಪಲ್ಲ ಚಡವು ಹತ್ತಿ ಟಾಪೆಂಡ್ ಟಾಪಲ್ಲಿ ಹೋಗುವಾಗ ಬರೆಪ್ಪಾಡಿ ಎಂಬ ಊರು ಸಿಗುತ್ತದೆ. ಈ ಜಂಕ್ಷನ್ ಹಿಂದೆ ಕುದ್ಮಾರು ಗ್ರಾಮದ ರಾಜಧಾನಿಯಾಗಿತ್ತು. ಹಾಗೆಂದು ಬರೆಪ್ಪಾಡಿ ಜಂಕ್ಷನ್ ಬಹಳ ಹಿಂದೆ ದೊಡ್ಡ ದೊಡ್ಡ ಪೆಟ್ಟಿಸ್ಟ್ ಗಳ ಅಡ್ಡೆಯಾಗಿತ್ತು. ಇಲ್ಲಿ ಪೆಟ್ಟು ಗುಟ್ಟು ನಡೆಯದ ದಿನಗಳೇ ಕ್ಯಾಲೆಂಡರ್ ನಲ್ಲಿ ಇರುತ್ತಿರಲಿಲ್ಲ. ಕಡಬ ಪೊಲೀಸರಿಗಂತೂ ಇಲ್ಲಿ ಓಡಿ ಓಡಿ ಓಡಿ ಸಾಕೋ ಸಾಕಾಗಿತ್ತು. ಪೋಲಿಸ್ ಜೀಪ್ ಕಂಡರೆ ಸಾಕು ಪೆಟ್ಟಿಸ್ಟ್ ಗಳು  ಜಂಕ್ಷನ್ ನಿಂದ ಒಂದು ಜಂಪು ರೈಲ್ದ‌ ಪಟ್ಟೆಗೆ, ಅಲ್ಲಿಂದ ಇನ್ನೊಂದು ಜಂಪು ಡೆಬ್ಬೆಲಿಗೆ ಹಾರಿ ಡೆಬ್ಬೆಲಿಯ ನೀರಿನಲ್ಲಿ ಕಂಬಳದಲ್ಲಿ ಓಡಿದ ಹಾಗೇ ಒಯ್ತಬುಡಿ ಮಾಡಿ ಕುಮಾರಜ್ಜನ ತೋಟ ಹತ್ತಿದರೆ ಸಾಕು ಕಡಬ ಪೊಲೀಸರ ಬಂದ ದಾರಿಗೆ ಸುಂಕ ಇಲ್ಲದಾಗುತ್ತಿತ್ತು. ಅಂಥ ಟೈಮಲ್ಲಿ ಬರೆಪ್ಪಾಡಿಯಲ್ಲಿ ಇದ್ದದ್ದು ಒಂದು ಕಲಿತ್ತ ಗಡಂಗ್ ಇನ್ನೊಂದು ತೊಟ್ಟೆ ಗಡಂಗ್. ಅದನ್ನು ಕುಡಿದೇ ಬರೆಪ್ಪಾಡಿಯ ಪೆಟ್ಟಿಸ್ಟ್ ಗಳು ಮಾಡಿದ ಕಾರುಬಾರು ಗಳು ಇವತ್ತಿಗೂ ದಂತಕತೆಗಳಾಗಿ ಉಳಿದುಕೊಂಡಿದೆ. ಇದೀಗ ಎರಡೆರಡು ಬಾರ್ ಗಳಾದರೆ‌ ಗತಿ ಏನು. ಪುಣ್ಯಕ್ಕೆ ಹಿಂದಿನ ಪೆಟ್ಟಿಸ್ಟ್ ಗಳೆಲ್ಲ ಈಗ ನಿವೃತ್ತರಾಗಿದ್ದು ಬರೆಪ್ಪಾಡಿ ಶಾಂತ ವಾಗಿದೆ. ಇಲ್ಲಿ ಸದ್ಯಕ್ಕೆ ಹೊಸ ಪೆಟ್ಟಿಸ್ಟ್ ಗಳು ಇಲ್ಲ.

 
 ಹಾಗೇ ನೋಡಿದರೆ ಬರೆಪ್ಪಾಡಿಯಲ್ಲಿ ಎರಡೆರಡು ಬಾರ್ ಯಾರಿಗೆ ಕುಡುದು ಸೂಸು ಮಾಡಲೆಂದೇ ಅರ್ಥ ಆಗುತ್ತಿಲ್ಲ. ಇವರಿಗೆ ಬಿಸಿನೆಸ್ ಸಿಕ್ಕಿದರೂ ಅಂಚಿ ಬೈತ್ತಡ್ಕ ಸಂಕದಿಂದ ಇಂಚಿ ಚಾಪಲ್ಲ ಸಂಕದವರೆಗಿನ ಕುಡುಕರದ್ದು ಸಿಗಬಹುದು. ಬೈತ್ತಡ್ಕ ಸಂಕ ದಾಟಿದರೆ ಕಾಣಿಯೂರಿನ ಬಾರ್ ಕುಡುಕರನ್ನು ಕೈ ಬೀಸಿ ಕರೆಯುತ್ತದೆ. ಇನ್ನು ಇತ್ಲಕಡೆ ಚಾಪಲ್ಲ ಸಂಕದ ಮಂಡೆ ದಾಟಿದರೆ ಸವಣೂರು ಬಾರ್ ಗಳು ಕುಡುಕರನ್ನು ಪುಸ್ಕ ಅಂತ ಎಳ್ಕೊಂಡು ಬಿಡುತ್ತದೆ. ಹಾಗಾದರೆ ಬರೆಪ್ಪಾಡಿ ಬಾರ್ ಗಳಿಗೆ ಕುಡುಕರನ್ನು ಎಲ್ಲಿಂದ ತರೋದು? ಅದರಲ್ಲೂ ಬೆಳಂದೂರು ಗ್ರಾಮದಲ್ಲಿ "ನಂಗಳೆ ಆಳ್" ಜಾಸ್ತಿ. ಬಾಕಿಯವರು ಮಾರಿ ಯಿಂದ ಮಾರಿಗೆ ಕುಡಿಯುವವರು. ಇನ್ನು ಕುದ್ಮಾರು ಗ್ರಾಮದ ಕುಡುಕರು ಬಯ್ಯಬಯ್ಯ ಆನಗ, ಬಾಯಿ ಚಪ್ಪೆ ಚಪ್ಪೆ ಆನಗ ಬಾರ್ ನತ್ತ ಮುಖ ಮಾಡುವ ಚಾನ್ಸಸ್ ಉಂಟು. ಇನ್ನು ಕಾಯ್ಮಣ ಗ್ರಾಮದವರಿಗೆ ಆಚೆ ನಿಂತರೆ ಕಾಣಿಯೂರು ಈಚೆ ನಿಂತರೆ  ಮಾತ್ರ ಬರೆಪ್ಪಾಡಿಗೆ ಬರಬಹುದು. ಚಾರ್ವಾಕ ದವರದ್ದೂ ಇದೇ ಕತೆ. ಎರಡು ಬಾರ್ ಬೇಡ ಇತ್ತು ಬರೆಪ್ಪಾಡಿ ಯಲ್ಲಿ.
   ಹಾಗೆಂದು ಒಂದು ಬಾರ್ ಶಾಲೆಯ ಎದುರೇ ಎಂದು ಯಾರೋ ಬರೆದಿದ್ದರು. ಬಹುಶಃ ನಾನೇ ಬರೆದಿರಬೇಕು. ಆದರೆ ಎಕೇಶೀಯಾ ಮರಗಳು ಬಾರನ್ನು ಶಾಲೆಯ ಮಕ್ಕಳಿಂದ ರಕ್ಷಿಸಿದೆ. ಆದರೆ ಶಾಲೆಯ ಮಕ್ಕಳು ದಿನಾ ಶಾಲೆಗೆ ಹೋಗುವ ಸಾದಿಯಲ್ಲೇ ಬಾರಿದೆ. ಇನ್ನೊಂದು ಬಾರ್ ಸಿಎಲ್  ಸೆವೆನಂತೆ. ಅದು ಕಾಣಿಯೂರು-ಸುಬ್ರಮಣ್ಯ ಸ್ಟೇಟ್ ಹೈವೇಗೆ ಪೀಂಕನ್ ಹಾಕಿ ಬಿಸಿನೆಸ್ ಶುರು ಮಾಡಲಿದೆಯಂತೆ. ಅಂದರೆ ಕುಡುಕರು ಹಿಂದಿನಿಂದ ಬಂದು ಒಳಗೆ ಹೋಗುವ ವ್ಯವಸ್ಥೆ. ಅದರಲ್ಲೂ ಗಮ್ಮತ್ತಿನ ವಿಷಯ ಏನೆಂದರೆ ಒಂದು ಬಾರ್ ಸ್ಟೇಟ್ ಹೈವೇ ಬದಿಯಲ್ಲೇ ಶುರುವಾಗಲಿದ್ದು ಕುಡುಕರಿಗೆ ಬಸ್ಸ್ ಹತ್ತಲು, ಬಸ್ಸಿಂದ ಬೀಳಲು ಹೇಳಿ ಮಾಡಿಸಿದಂತಿದೆ. ಇನ್ನೊಂದು ಬಾರ್ ನ ಹತ್ತಿರ ಬೆಂಗ-ಮಂಗ ರೈಲ್ವೇ ಟ್ರ್ಯಾಕ್ ಹೋಗಿದ್ದು ಕುಡುಕರಿಗೆ ಬೆಂಗಳೂರಿಗೆ ಅಥವಾ ಎಲ್ಲಿಗೆ ಬೇಕಾದರೂ ಟಿಕೇಟ್ ಪಡೆಯಲು ಅವಕಾಶಗಳಿವೆ. ಟೋಟಲಿ ಯಾಗಿ ಹೇಳುವುದಾದರೆ ಬರೆಪ್ಪಾಡಿಗೆ ಎರಡು ಬಾರ್ ಬೇಡ ಇತ್ತು. ನಾವು ಸಮಾಜದಲ್ಲಿ ಕುಡುಕರನ್ನು ಕಡಿಮೆ ಮಾಡಬೇಕೆ ಹೊರತು ಇಡೀ ಸಮಾಜಕ್ಕೆ ಕುಡಿತದ ಚಟವನ್ನು ಅಂಟಿಸುವು ದಲ್ಲ. ಅದರಲ್ಲೂ ಒಂದೇ ಗ್ರಾಮದಲ್ಲಿ ಒಂದೇ ಜಂಕ್ಷನ್ ನಲ್ಲಿ ಎರಡೆರಡು ಬಾರ್ ಗಳಿಗೆ ಅನುಮತಿ ಕೊಟ್ಟಿದ್ದೇ ತಪ್ಪು. ಇವರೆಲ್ಲ ಸಮಾಜವನ್ನು ಏನು ಮಾಡಲು ಹೊರಟಿದ್ದಾರೆಂದೇ ಅರ್ಥವಾಗುತ್ತಿಲ್ಲ. ಹರ್ ಘರ್ ಹರ್  ಬಾರ್? ಏನೇ ಆಗಲಿ ಬೆಳಂದೂರು ಕುದ್ಮಾರು ಗ್ರಾಮದ ಕುಡುಕರಿಗೆ ಇನ್ನು ನಿತ್ಯ ಹಬ್ಬ ಹರಿದಿನ.


   

    







                                         



    ಹಾಗೆಂದು ‌ಬೆಳಂದೂರು, ಕುದ್ಮಾರು ಗ್ರಾಮಗಳ ‌ರಣ ಕುಡುಕರಿಗೆ ದೊಂಡೆ ಪಸೆ ಆಜಿದಾಗಲೆಲ್ಲ ಒಂದೋ ಸವ ಣೂರು ಅಥವಾ ಕಾಣಿಯೂರಿಗೆ ಬಸ್ ಹತ್ತಬೇಕಿತ್ತು, ಇಲ್ಲ ಆಟೋ ಮಾಡ್ಕೊಂಡು ಹೋಗಿ ಲಿವರ್ ತುಂಬಾ ತುಂಬ್ಕೊಂ ಡು ಬರಬೇಕಿತ್ತು. ಕುಡುಕರ ಈ ಸಮಸ್ಯೆಯನ್ನು ಮನಗಂಡು ಅವರಿಗೊಂದು ಶಾಶ್ವತ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕುದ್ಮಾರು ಗ್ರಾಮದ ಹಿಂದಿನ ರಾಜಧಾನಿ ಬರೆಪ್ಪಾಡಿಯಲ್ಲಿ ಒಂದು  ಗಡಂಗ್ ಓಪನ್ ಮಾಡುವರೇ ಕೆಲಸ ಟ್ವೆಂಟಿ ಫೋರ್ ಇನ್ ಟೂ ಸೆವೆನ್ ವೇಗದಲ್ಲಿ ನಡೆಯುತ್ತಿದೆ. ಅವಳಿ ಗ್ರಾಮಗಳ ಟೈಟ್ ಮಾಸ್ತರ್ ಗಳ ಮುಖದಲ್ಲಿ ಮುಗುರು ತೆಲಿಕೆ, ಮಂದಹಾಸ ಮೂಡಿದ್ದು ಕೆಲವರಂತೂ ಹಿರಿ ಹಿರಿ ಹಿಗ್ಗುತ್ತಿದ್ದಾರೆ, ಕುಣಿದು ಕುಪ್ಪಳಿಸುತ್ತಿದ್ದಾರೆ.
   ಹಾಗೆಂದು ಬರೆಪ್ಪಾಡಿಯಲ್ಲಿ ಓಪನ್  ಆಗುತ್ತಿರುವ ಬಾರ್ ಎಲ್ಲೋ ಅಂಡಮಾನ್ ನಲ್ಲಿ ಅಲ್ಲ. ಅದು ಸರಿಯಾಗಿ ಕುದ್ಮಾರು ಶಾಲೆಯ ಎದುರುಗಡೆಯೇ ಓಪನ್ ಆಗುತ್ತಿದೆ. ಶಾಲಾ ಮಕ್ಕಳಿಗೆ ಇನ್ನು ಕುಡುಕರನ್ನು ನೋಡಲು ಸವಣೂರು, ಕಾಣಿಯೂರು ಎಂದು ಅಲೆದಾಡಬೇಕಿಲ್ಲ. ತಮ್ಮ ತಮ್ಮ ಕ್ಲಾಸಿ ನಿಂದಲೇ ನೋಡಬಹುದು. ಆತ್ ಮುಟ್ಟ.


   

    







                                        




    ಅಲ್ಲಿ ಗುತ್ತಿಗಾರು ಸಮೀಪದ ಮಾವಿನ ಕಟ್ಟೆಯ ತಮಿಳ್ ಕಾಲೋನಿಯಲ್ಲಿ ಒಂದು ಬಾಲೆ ವಿವಾಹ ಇಲಾಖೆಗಳ ಮಧ್ಯ ಪ್ರವೇಶದಿಂದ ಕ್ಯಾನ್ಸಲ್ ಆದ ವಿಷಯ ಹೊರಗೆ ಬಿದ್ದಿದೆ. ಮಾವಿನ ಕಟ್ಟೆಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ತಮಿಳು ನಾಡಿನಿಂದ ಬಂದ ರಬ್ಬರ್  ಟ್ಯಾಪರ್ ಗಳ ಒಂದು ಕಾಲೊನಿ ಇದೆ. ಕಳೆದ ಸುಗ್ಗಿ ಪಗ್ಗು ತಿಂಗಳಲ್ಲಿ ಈ ಕಾಲೋನಿಯಲ್ಲಿ ಅಪ್ರಾಪ್ತ ಜೋಡಿಯೊಂದರ ಮದುವೆಯ ಸಿದ್ಧತೆ ನಡೆದಿತ್ತು. ಆವು ಪೋವು ಲೆವೆಲ್, ಎಂಗೇಜ್ಮೆಂಟ್ ಲೆವೆಲ್, ಕಾಕಜಿ ಪ್ರಿಂಟ್, ಅಡಿಗೆಗೆ ಜನ ಹೀಗೆ  ಮದುವೆಗೆ ಬೇಕಾದ ಎಲ್ಲಾ ಪ್ರಕ್ರಿಯೆಗಳು ನಡೆದು ಹೋಗಿತ್ತು. 
   ಇನ್ನೇನು ಮದುವೆಗೆ ಕೆಲವೇ ದಿನಗಳಿರುವಾಗ ಯಾರೋ ಪುಣ್ಯಾತ್ಮರು ಸುಳ್ಯಕ್ಕೆ ಓಡಿ ಹೋಗಿ ಮಕ್ಕಳ ಕಲ್ಯಾಣ ಇಲಾಖೆ ಕಿವಿಗೆ ವಿಷಯ ಹಾಕಿದ್ದಾರೆ. ಕೂಡಲೇ ಫೀಲ್ಡಿಗೆ ಇಳಿದ ಇಲಾಖೆ ಮದುವೆಯನ್ನು ತಡೆದಿದೆ ಎಂದು ತಿಳಿದು ಬಂದಿದೆ.


   

    







                                       


   ಹಾಗೆಂದು ಮೊನ್ನೆ ಆಧಾರ್ ಕಾರ್ಡ್ ರಿಪೇರಿಗೆಂದು ಅರಂತೋಡಿಗೆ ಬಂದು ಕಾಣೆಯಾದ ಮತ್ತು ಅರಂಬೂರು ಪಾಲಡ್ಕದ ಪಯಸ್ವಿನಿ ನದಿಯಲ್ಲಿ ಶವವಾಗಿ ಸಿಕ್ಕಿದ ಮಿನುಂ ಗೂರು ಬಾಲಣ್ಣನ ಸಾವಿನ ಹಿಂದೆ ಕತೆಯಿದೆ. ತೀರಾ ಸಾಧು ಆಗಿದ್ದ ಬಾಲಣ್ಣ ಎಲ್ಲರಿಗೂ ಬೇಕಾದವರಾಗಿದ್ದರು. ಆದರೆ ಕೆಲವರು ಬಾಲಣ್ಣನಿಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದ ಕಾರಣ ಆ ಕಿರುಕುಳದಿಂದ ಬೇಸತ್ತು ಬಾಲಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎರಡೂ ಚೆಂಬುಗಳಲ್ಲಿ ಸುದ್ದಿ ಯಾಗಿದೆ.‌ 
   ಹಾಗಾದರೆ ಬಾಲಣ್ಣ ಆತ್ಮಹತ್ಯೆ ಮಾಡಿಕೊಳ್ಳುವ ತನಕ ಅವರಿಗೆ ಕಿರುಕುಳ ಕೊಟ್ಟವರು ಯಾರು ಎಂಬುದನ್ನು ಹೇಳಲು ಹೋದರೆ ಅದೇ ದೊಡ್ಡ ಸುದ್ದಿಯಾದೀತು. ಅಲ್ಲಾ ಮಾರಾಯ್ರೆ ಬಾಲಣ್ಣ ಹೇಗೂ ಪಯಸ್ವಿನಿಗೆ ಹಾರಿ ಹೋಗಿ ಬಿಟ್ಟರು,  ಆದರೆ ಅವರ ಡೆಡ್ ಬಾಡಿಯನ್ನು ಅವರ ಮನೆಗೆ ಕೊಂಡು ಹೋಗಲಾಗದಷ್ಟು ಅವರು ಯಾರಿಗಾದರೂ ಅನ್ಯಾಯ ಮಾಡಿದ್ದಾರಾ? ಅವರಿಗೆ ಅವರ ಸ್ವಂತ ಆಸ್ತಿ, ಭೂಮಿ ಇತ್ತಲ್ಲ. ಅಲ್ಲಿ ಅವರ ಅಂತ್ಯಕ್ರಿಯೆ ಮಾಡುವ ಬದಲು ಯಾವುದೋ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ಮಾಡಿದ ಬಗ್ಗೆ ಚೆಂಬು ಗ್ರಾಮಸ್ಥರಿಗೆ ಅಸಹನೆ ಇದೆ. ಸಜ್ಜನನ ಸಾವು ಈ ರೀತಿ ಆಗಬಾರದಿತ್ತು.


   

    







                                      




     ಈ ದೇಶಭಕ್ತರೇ ಹೀಗೆ, ಧನಕ್ಕಾಗಿ ಜಯ ಕಳೆದು ಕೊಳ್ಳುವುದರಲ್ಲಿ ನಿಸ್ಸೀಮರು. ಈ ದೇಶಭಕ್ತರು ಇತ್ತೆತ್ತೆ ಭಾರೀ ದುರಂತ ನಾಯಕರಾಗುತ್ತಿದ್ದಾರೆ ಮಾರಾಯ್ರೆ. ಅವರ ಸ್ಥಿತಿ ಇತ್ತೀ ಚಿನ ದಿನಗಳಲ್ಲಿ ನೋಡಕ್ಕಾಗುತ್ತಿಲ್ಲ. ಇದೀಗ ಕಡಬ ತಾ ಲೂಕಿನ ಐತ್ತೂರು ಪಂಚಾಯಿತಿಯಲ್ಲೂ ದೇಶಭಕ್ತರು ಕೇಂಕ ಣ್ ಗೆ ಇಟ್ಟಿದ್ದು ಗುರಿ ತಪ್ಪಿದೆ. ಇಲ್ಲಿ ಧನ ದೇಶಭಕ್ತರು ಇಟ್ಟು ಕೊಂಡರೆ ಜಯ ವಿರೋಧಿಗಳ ಪಾಲಾಗಿದೆ.
   ಹಾಗೆಂದು ಐತ್ತೂರು ಪಂಚಾಯ್ತಿಯಲ್ಲಿ ಯಾವಾಗಲೂ ಕುರ್ಚಿಗಾಗಿ ಸಣ್ಣಪುಟ್ಟ ಕುಸ್ತಿ ಕದನಗಳು ಇಂದು ನಿನ್ನೆಯದಲ್ಲ. ಇದೀಗ ಮುಂದಿನ ಎರಡೂವರೆ ವರ್ಷಗಳ ಉಪಾಧ್ಯಕ್ಷರ ಕುರ್ಚಿಗಾಗಿ ಮೇಲಾಟ ನಡೆದು ದೇಶಭಕ್ತರು ಇದ್ದ ಒಂದು ಮೆಂಬರನ್ನೂ ಕಳಕ್ಕೊಂಡು ಉಪಾಧ್ಯಕ್ಷರ ಕುರ್ಚಿಯನ್ನೂ ಕಳಕ್ಕೊಂಡು ನೆಮ್ಮದಿ ಇಲ್ಲದಂತಾಗಿ  ಹೋಗಿದ್ದಾರೆ.
   ಕಡಬ ತಾಲೂಕಿನ ಐತ್ತೂರು ಪಂಚಾಯ್ತಿಯಲ್ಲಿ ಟೋಟಲಿ ಹನ್ನೊಂದು ಜನ ಮೆಂಬರ್ ಗಳಿದ್ದಾರೆ. ಒಂದು ಕ್ರಿಕೆಟ್ ಟೀಮಿನ ಹಾಗೆ. ಅದರಲ್ಲಿ ಆರು ಜನ ದೇಶ ಭಕ್ತರ ಬ್ಯಾಟ್ಸ್ಮನ್ ಇದ್ದರೆ ಉಳಿದ ಐವರು ಕಾಂಗ್ರೆಸ್ ಬೌಲರ್ಸ್. ಇಲ್ಲಿ ಅಧ್ಯಕ್ಷರ ಕುರ್ಚಿಗೆ ಅದಾಗಲೇ ದೇಸ ಭಕ್ತರ ಟೀಮಿನ ವತ್ಸಲಕ್ಕ ಸೆಲೆಕ್ಟ್ ಆಗಿ ಕುರ್ಚಿ ಅಲಂಕರಿಸಿದ್ದರು. ಉಳಿದದ್ದು ಉಪಾಧ್ಯಕ್ಷರ ಕುರ್ಚಿ. ಅದಕ್ಕೆ ಇಬ್ಬರು ಲಕ್ಷ್ಮಿಗಳ ಮಧ್ಯೆ ಜಟಾಪಟಿ ಶುರು ಆಯಿತು. ಒಬ್ಬರು  ಲಕ್ಷ್ಮಿ ರಚ್ಚೆಯಿಂದ ಬಿಡಲಿಲ್ಲ ಇನ್ನೊಬ್ಬರು ಲಕ್ಷ್ಮಿ ಕೂಂಜಿಯಿಂದ ಬಿಡಲಿಲ್ಲ. ಕಡೆಗೆ ದೇಶಭಕ್ತರ ಗಡಣ ಧನಲಕ್ಷ್ಮಿ ನಮ್ಮ ಕ್ಯಾಂಡಿಡೇಟ್ ಎಂದು ಘೋಷಣೆ ಮಾಡಿ ಬಿಟ್ಟಿತು. ಇದನ್ನೇ ಕಾಯುತ್ತಿದ್ದ ಕಾಂಗ್ರೆಸ್ ಕಲಿಗಳು ಜಯ ಜಯ ಜಯಲಕ್ಷ್ಮಿ ಅಂದು ಬಿಟ್ಟರು. ಜಯಲಕ್ಷ್ಮಿ ಇಂಚಿಗ್. ಯಾರಾಗ ಬಹುದೆಂದು ಓಟಾಯಿತು. ಧನಲಕ್ಷ್ಮಿಗೆ ದೇಶ ಭಕ್ತರ ಐದು ಓಟು ಸಿಕ್ಕರೆ, ಜಯಲಕ್ಷ್ಮಿಗೆ ಕಾಂಗ್ರೆಸ್ಸಿಗರ ಐದು ಮತ್ತು ಅವರದ್ದೇ ಒಂದಾಗಿ ಆರು ಬಿತ್ತು. ಹಾಗಾಗಿ ಜಯಲಕ್ಷ್ಮಿಗೆ ಜಯ ಎಂದು ಘೋಷಿಸಲಾಯಿತು. ಇದೀಗ ಪಂಚಾ ಯ್ತಿಯಲ್ಲಿ ದೇಶಭಕ್ತರ ಅಧ್ಯಕ್ಷರು ಮತ್ತು ಕಾಂಗ್ರೆಸಿಗರ ಉಪಾಧ್ಯಕ್ಷರ ಜುಗಲ್ ಬಂಧಿ ಶುರುವಾಗಿದೆ. ಯಾವಾಗ ಕಡಬ ಪೊಲೀಸರಿಗೆ ಕಾಲ್ ಬರ್ತದೆ ಅಂತ ಹೇಳಕ್ಕಾಗಲ್ಲ. ಲಕ್ಷ್ಮಿ ವರ್ಸಸ್  ಲಕ್ಷ್ಮಿ ಮುಂದುವರೆಯಲಿದೆ.


   

    







                                     


      ಅಧರ್ಮದ ವಿರುದ್ಧ ರೊಚ್ಚಿಗೆದ್ದಿರುವ ಹಿಂದೂ ಬಾಂಧವರ ‌ಹೋರಾಟ ಕೊನೆಗೂ ಅವರವರೊಳಗಿನ ಸ್ಪರ್ಧೆಯತ್ತ ನಿಧಾನವಾಗಿ ಹೊರಳುತ್ತಿದೆ. ಇದನ್ನೆಲ್ಲ ಮೊದಲೇ ‌ಊಹಿಸಲಾಗಿತ್ತು. ಈ ಬೆಳವಣಿಗೆಗಳು ಬಹಳ ಹಿಂದಿನಿಂ ದಲೂ ಈ ದೇಶದೊಳಗೆ ನಡೆದು ಕೊಂಡು ಬಂದಿದೆ.‌‌ ಹಾಗೇ ನಮ್ಮೊಳಗೆ ಸ್ಪರ್ಧೆ ಬಿದ್ದ ಕಾರಣದಿಂದಲೇ ಈ ದೇಶವನ್ನು ಅಫ್ಘಾನಿಸ್ತಾನದ ಮೊಗಲರು, ಇಂಗ್ಲೇಂಡ್ ನ ಇಂಗ್ಲೀಷರು ಆಳಿಹೋದರು, ದೋಚಿ ಹೋದರು. ಇದೀಗ ಧರ್ಮಸ್ಥಳದ ಅಧರ್ಮದ ವಿರುದ್ಧ ನಾವು ನೀವೆಲ್ಲ ‌ಮೆರವಣಿಗೆ ಹೊರ ಟ್ಟಿದ್ದೇವಲ್ಲ ಈ‌ ಹೋರಾಟ ಕೂಡ ರಾಯರ ಕುದುರೆಯ ಪರಿಸ್ಥಿತಿಯತ್ತ ವಾಲುತ್ತಿದೆ. ಯಾಕೆಂದರೆ ಈ‌ ಹೋರಾಟಕ್ಕೆ ಒಂದು ಗೊತ್ತಿಲ್ಲ, ಗುರಿಯಿಲ್ಲ. ಆ ಕೇಸ್ ಗಳನ್ನ ಲಗಾಡಿ ತೆಗೆ ದವರನ್ನ ಟಾರ್ಗೆಟ್ ಮಾಡಬೇಕೇ ವಿನಃ ನಾವು ನಮ್ಮ ಶ್ರದ್ಧಾ ‌ಕೇಂದ್ರವನ್ನೇ ಗುರಿಯಾಗಿಸಿಕೊಂಡು, ಅದನ್ನು ಜೆಸಿಬಿ ತಂದು ಒಡೆಯ ಬೇಕು ಅಂತ ಪ್ಲಾನ್ ಹಾಕುವುದು, ಅದನ್ನು ಒಳಗೆ ಹಾಕಲು ನೋಡುವುದು, ಅದರ ದಾಖಲೆಗಳ ಬಗ್ಗೆ ವಿಚಾರಣೆ ಮಾಡುವುದು, ಗಾಳಿಯಲ್ಲಿ ಕಂಡ ಕಂಡವರಿಗೆ ಗುಂಡು ಹೊಡೆ ಯೋದು ಇತ್ಯಾದಿ ಮಾಡುತ್ತಾ ನಮ್ಮ ಧರ್ಮ ದೇವರುಗಳ ಮೇಲೆಯೇ ಆಕ್ರಮಣ  ಮಾಡುತ್ತಿದ್ದೇವೆ. ಬೇರೆ ಜನ ಚಪ್ಪಾಳೆ ತಟ್ಟಿ ಹಿರಿ ಹಿರಿ ಹಿಗ್ಗುತ್ತಿದ್ದಾರೆ ನಮ್ಮ ನಿಮ್ಮ ಕೋಲ ನೋಡಿ.


   ಹಾಗೆಂದು ಈ ಕೇಸ್ ಹನ್ನೊಂದು ವರ್ಷಗಳ ಮೊದಲೇ ಹಳ್ಳ ಹಿಡಿದು ಹೋಗಿದೆ. ಮತ್ತೆ ಅದಕ್ಕೆ ಜೀವ ಕೊಡಲು ನಾವು ಹೋರಾಟ ಮಾಡುತ್ತಿದ್ದೇವೆ. ಆದರೆ ಅದರ ಹಿಂದಿನ ಗುರಿ ಬೇರೆಯೇ. ಈ ಸಮೂಹ ಸನ್ನಿ ಹೋರಾಟದ ಅತಿರೇಕ ಎಲ್ಲಿ ತನಕ ಮುಟ್ಟಿದೆ ಅಂದರೆ ನಾವು ಧರ್ಮವನ್ನು ಅಧರ್ಮ ಅಂತಲೂ, ದೇವಸ್ಥಾನ ಒಡೆಯ ಬೇಕು ಅಂತ ಹೇಳುವ ಅಧರ್ಮೀಗಳನ್ನು  ಧರ್ಮೀಗಳೆಂದೂ ನಂಬಿದ್ದೇವೆ.
   ಧರ್ಮಸ್ಥಳದ ಬಗೆಗಿನ ನನ್ನ ಅಕ್ಷರಗಳ ಮೆರವಣಿಗೆಯನ್ನು ನೋಡಿ ಕೆಲವು ನನ್ನ ಫ್ರೆಂಡ್ಸ್ ಗಳೇ ದೇವಸ್ಥಾನಕ್ಕೂ ಕೊಲೆ ಕೇಸ್ ಗೂ ಯಾಕೆ ಲಿಂಕ್ ಮಾಡುತ್ತೀಯಾ, ಧರ್ಮಸ್ಥಳದವರು ಧರ್ಮ ರಕ್ಷಣೆಗಾಗಿ ಸುರಿದ ದುಡ್ಡಿನ ಲೆಕ್ಕಾಚಾರ ಈಗ ಯಾಕೆ ಎಂದೆಲ್ಲಾ ಕೇಳಿದ್ದರು. ಸೌಜನ್ಯ ಪ್ರಕರಣಕ್ಕೂ ಧರ್ಮಸ್ಥಳಕ್ಕೂ ಲಿಂಕ್ ಮೊದಲು ಕೊಟ್ಟಿದ್ದು ಯಾರು? ಧರ್ಮಸ್ಥಳದಲ್ಲಿ ಅಧರ್ಮ ನಡೆಯುತ್ತಿದೆ ಎಂದು ಜನ ಬೊಬ್ಬೆ ಹೊಡೆದದ್ದಕ್ಕೆ ಅಲ್ಲಿ ನಡೆದ ಧರ್ಮದ ಲೆಕ್ಕ ಕೊಟ್ಟಿದ್ದು ನಾನು ಎಂದು ಅವರಲ್ಲಿ ಹೇಳಿಲ್ಲ.ಹೇಳಿದ್ರೆ ವಿಷಯ ದೊಡ್ಡದಾಗಿ ಬಿಡುತ್ತದೆ. ಅವರಲ್ಲಿ ಮಾತೆತ್ತಿದರೆ ಪೆಟ್ಟಿಗೇ ಏಳುತ್ತಾರೆ. ನಾವು ಮಾಡುವ ಮನವರಿಕೆ ಕೇಳಲು ಅವರಿಗೆ ಮನಸಿಲ್ಲ. ಅದಕ್ಕೆ ಸಂಭಾಷಣೆ ನಡೆಸದಿದ್ದರೇ ಒಳ್ಳೆದು ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಟೋಟಲಿಯಾಗಿ ನಮ್ಮ ಅಜೆಂಡಾ ಒಂದೇ. ಅದು ಜೈನರ ಕೈಯಲ್ಲಿರುವ ಮಂಜುನಾಥನ ಆಲಯವನ್ನು ಗುಳುಂ ಮಾಡು ವುದು. ಆ ಮೂಲಕ ಜೈನರನ್ನು ಶಾಶ್ವತವಾಗಿ ಹಿಂದೂ ಧರ್ಮದ ಧಾರ್ಮಿಕ ವ್ಯವಸ್ಥೆಗಳಿಂದ ಹೊರಗಿಡುವುದು ಮತ್ತು ಆ ಕುರ್ಚಿಯನ್ನು ತಾವು ಅಲಂಕರಿಸುವುದು. ಇದು ಟಾರ್ಗೆಟ್. ಅಂದರೆ ಇದರ ಸೂಕ್ಷ್ಮ ಅರ್ಥ ಏನೆಂದರೆ ಈ "ಅಣ್ಣೆರ್" ಶಬ್ಧ ಉಂಟಲ್ಲ. ಈ "ಅಣ್ಣೆರ್" ಶಬ್ದದ ಮೂರು ಅಕ್ಷರಗಳಿಂದ ಕೊನೆಯ ಅಕ್ಷರ 'ರ್' ತೆಗೆದು ಬಿಟ್ಟರೆ  ಅಲ್ಲಿ ಉಳಿಯುವುದು ಎರಡೇ ಅಕ್ಷರ. "ಅಣ್ಣೆ" ಮಾತ್ರ. ಈಗ ನಾವು ಅಧರ್ಮದ ವಿರುದ್ಧ ಮೆರವಣಿಗೆ ಹೊರಟಿರುವುದು ಇದೇ ಎರಡಕ್ಷರದ "ಅಣ್ಣ" ನ ಜೊತೆ. ಯಾರ ವಿರುದ್ಧ? ಮೂರು ಅಕ್ಷರಗಳ "ಅಣ್ಣೆರ್" ವಿರುದ್ಧ. ಇರಲಿ ನಮಗೆ ಮೂರಕ್ಷರ ಹೇಳಲು ಕಷ್ಟವಾದರೆ ಎರಡೇ ಸಾಕು. ಅಣ್ಣೆರ್ ಬೇಡ ಅಣ್ಣ ಸಾಕು. ಅಣ್ಣೆರ್ ಹೇಗಿದ್ದರೂ ಬೇರೆ ಧರ್ಮದವರು, ಅಣ್ಣ ನಮ್ಮ ಧರ್ಮದವರೇ ಎಂಬ ಸಮಾಧಾನ ನಮಗೆ. ಇದರಲ್ಲಿ ನನಗೊಂದು ದೊಡ್ಡ ಹೆದರಿಕೆ ಇದೆ. ಈಗ ನಾವೆಲ್ಲ ಅಣ್ಣೆರ್ ಶಬ್ಧದಿಂದ ಒಂದು ಅಕ್ಷರ ತೆಗೆದು ಎರಡಕ್ಷರ ಅಣ್ಣೆ ಮಾತ್ರ ಉಳಿಸಿಕೊಳ್ಳಲು ತವಕದಲ್ಲಿದ್ದೇವೆ. ಆದರೆ ಈ ಎರಡಕ್ಷರದ ಅಣ್ಣೆಯಿಂದ ಇನ್ನೂ ಒಂದಕ್ಷರ "ಣ್ಣೆ" ಯಾರಾದರೂ ತೆಗೆದು ಬಿಟ್ಟರೆ ಉಳಿಯೋದು "ಅ" ಮಾತ್ರ. ಅ ಅಂದರೆ ಅಹಾಕಾರ. ಈ ಎರಡಕ್ಷರವನ್ನು ಒಂದಕ್ಷರ ಮಾಡಲು ನಾವು ನೀವು ಮೆರವಣಿಗೆ ಹೋಗ ಬೇಕೆಂದಿಲ್ಲ. ಅದರ ಕೆಲಸ ಅವರು ಮಾಡುತ್ತಾರೆ. ಹಾಗೇ ಮಾಡುವವರನ್ನು ನಾವೀಗ ಗಿಳಿ ಸಾಕಿದ ಹಾಗೇ ಸಾಕುತ್ತಿದ್ದೇವೆ. ಗಿಳಿ ಹದ್ದಾಗಿ ನಮ್ಮನ್ನು ಕುಕ್ಕುವ ಸಮಯ  ಯಾವಾಗ ಬರುತ್ತದೆ ಅಂದರೆ 2040 ಅಥವಾ 2050 ರಲ್ಲಿ. ಆ ಕಾಲದಲ್ಲಿ ನಮಗೆ ಒಂದೇ ಅಕ್ಷರ ಉಳಿದಿ ರುತ್ತದೆ. ಅ ಅಂದರೆ ಅಹಾಕಾರ.


     ಇದೀಗ ನಾಳೆ ಪುತ್ತೂರಿನಲ್ಲಿ ಪುತ್ತಿಲ  ಪರಿವಾರದ ಪ್ರತಿಭಟನೆ. ಅಧರ್ಮದ ವಿರುದ್ಧ. ಕೇವಲ ಸೌಜನ್ಯ ಎಂಬ ಹೆಣ್ಣು ಮಗಳ ಕೊಲೆಯ ನ್ಯಾಯಕ್ಕಾಗಿ ಎಂದು ಸಂಘಟಕರು ಎಷ್ಟು ಹೇಳಿಕೊಂಡರೂ ಅಲ್ಲಿ ಏಳುವುದು ಹಿಂದೂ ಸುನಾಮಿ. ಈಗ ಹಿಂದೂ ಬಿಸಿ ರಕ್ತದಲ್ಲಿ ಹರಿಯುವ ಕಣ ಕಣದಲ್ಲೂ ಮಂಜುನಾಥ ಇದ್ದಾನೆ. ಧರ್ಮಸ್ಥಳದಲ್ಲಿ ಅಧರ್ಮ ನಡೆ ಯುತ್ತಿದೆ ಎಂಬ ಮೆಂಟಾಲಿಟಿ ಇವರಲ್ಲಿ ಬೆಳೆದು ಬೆಳೆದು ಹೆಮ್ಮರವಾಗಿದೆ. ಈ ಮೆಂಟಾಲಿಟಿ ಹೀಗೆ ಹೆಮ್ಮರವಾಗಿ ಬೆಳೆಯಲು ನೀರು, ರಸಗೊಬ್ಬರ, ಸಾವಯವ ಎಲ್ಲಾ ಹಾಕಿ ಬೆಳೆಸಿದ್ದು ಜಾಲತಾಣಗಳು ಎಂಬ ಮೆಂಟಲ್ ಹಾಸ್ಪಿಟಲ್ ಗಳು. ಇಲ್ಲಿಗೆ ಅಡ್ಮಿಟ್ ಆದವನು ಕ್ಷಣ ಮಾತ್ರದಲ್ಲಿ ಚಾಣಕ್ಯನ ಮೊಮ್ಮಗ, ಬ್ರಹಸ್ಪತಿಯ ಮರಿ ಮಗನಾಗಿ ಬಿಡುತ್ತಾನೆ. ಹಾಗೇ ಈ ಹೋರಾಟಗಳು ಧರ್ಮದ ವಿರುದ್ಧ ನಡೆಯುತ್ತಿದ್ದೆಯೋ ಅಥವಾ ಅಧರ್ಮದ ವಿರುದ್ಧ ನಡೆಯುತ್ತಿದೆಯೋ ಎಂದು ಅರ್ಥವಾಗುತ್ತಿಲ್ಲ. ದ್ವಂದ್ವಕ್ಕೆ ಬಿದ್ದಿದ್ದೇನೆ. ಧರ್ಮಸ್ಥಳದಲ್ಲಿ ಅಧರ್ಮ ನಡೆಯುತ್ತಿದೆ ಎಂದು ನೀವೆಲ್ಲಿಯಾದರೂ ಅಂದು ಕೊಂಡಿದ್ದರೆ ಈ ಕೆಳಗೆ ಒಂದು ಲಿಸ್ಟ್ ಕೊಟ್ಟಿದ್ದೇನೆ. ಅದರಲ್ಲಿ ಪುತ್ತೂರು ತಾಲೂಕಿಗೆ ಧರ್ಮ ರಕ್ಷಣೆಗಾಗಿ ಧರ್ಮಸ್ಥಳದಿಂದ ಬಂದ ಹಣಕಾಸಿನ ಬಗ್ಗೆ ಡೀಟೈಲ್ಸ್ ಇದೆ. ಓದಿಕೊಳ್ಳಿ. ಅಲ್ಲಿ ಅಧರ್ಮವೇ ನಡೆದಿದ್ದರೆ ಲಿಸ್ಟ್ ನಲ್ಲಿರುವುದು ಏನು? ಓದಿಕೊಳ್ಳಿ ನಂತರ ಧರ್ಮಸ್ಥಳಕ್ಕೆ ಬನ್ನಿ. ಊಟ ಮಾಡಿ ಹೋಗುವಿರಂತೆ.











                                    


      ಮೊನ್ನೆ ಮಾರಾಯ್ರೆ ಒಂದು ಘಂಟೆ ರಾತ್ರಿ ವೇಳೆ ತಮ್ಮ ಸುಪ್ರೀತ್ ಕಾಲ್ ಮಾಡಿದ್ದ. "ನೋಡು ಹಿಂದೂ ಬಾಂಧವರ ಬಗ್ಗೆ ಬರಿ ಬೇಡ, ಅವರು ನಮಗೆ ಬೇಕಲ್ಲ. ಈ ಟೈಮಲ್ಲಿ ನಾವು ಅವರಿಗೆ ಏನು ಹೇಳಿದರೂ ಅರ್ಥ ಆಗಲ್ಲ. ಅವರನ್ನು ಅವ ರಷ್ಟಕ್ಕೇ ಬಿಟ್ಟು ಬಿಡು" ಅಂದಿದ್ದ. ನನಗೆ ನಿದ್ದೆ ಇಲ್ಲ.
   ಹಾಗೆಂದು ನಾನು ಹಿಂದೂ ಬಾಂಧವರ ಬಗ್ಗೆ ವಿರೋಧಿಸಿ ಬರೆದಿಲ್ಲ. ಈ ದೇಶ ಹಿಂದೂ ದೇಶ ಆಗಬೇಕೆಂದೇ ನನ್ನ ಹೆಬ್ಬ ಯಕೆ ಕೂಡ. ಅದಕ್ಕೆಂದೇ ದೇಶ ಭಕ್ತರ ಸಹವಾಸ, ಅರುಣ್ ಪುತ್ತಿಲನ ಗಡ್ಡದಲ್ಲಿ ನೇತಾಡುವುದು, ನಳಿನ್ ಕುಮಾರ್ ನ ಭಾವನೊಂದಿಗೆ  ನಿದ್ರೆ ಬಿಟ್ಟು ಪಟ್ಟಾಂಗ ಹೊಡೆಯೋದು, ಹರೀಶ್ ಕಂಜಿಪಿಲಿಗೆ ದೊಡ್ಡ ನಮಸ್ಕಾರ ಹೊಡೆಯೋದು. ಈ ದೇಶದಲ್ಲಿ ಹಿಂದೂಗಳನ್ನು ಎದುರಾಕ್ಕೊಂಡು ನಾವು ಯಾ ರೊಂದಿಗೆ ಬದುಕಲಿ. ಈ ಭರತ ಖಂಡ ಅವರೀಗೇ ಇರಲಿ. ಆದರೆ ಸುಖಾಸುಮ್ಮನೆ ಒಂದು ಶ್ರದ್ಧಾ ಕೇಂದ್ರದ ಹೆಸರು ಕೆಡಿಸುವ ಹುನ್ನಾರಕ್ಕೆ ನನ್ನ ವಿರೋಧ ಇದೆ. ಹಿಂದೂ ಮಹಾ ಸಾಗರದಲ್ಲಿ ಸುನಾಮಿ ಏಳ ಬೇಕು, ಆದರೆ ಅಕಾಲಿಕವಾಗಿ ಎದ್ದರೆ ಸಮಸ್ಯೆ ಯಾರಿಗೆ? ಹಿಂದೂ ಮಹಾ ಸಾಗರದ ಸುನಾಮಿಗೆ ನಾನೂ ತಲೆಬಾಗುತ್ತೇನೆ, ಆದರೆ ಅದು ಏಳಲು ಕಾರಣಗಳಿರ ಬೇಕು ಮತ್ತು ಅದು ಏಳುವವರ ವಿರುದ್ಧವೇ ಏಳಬೇಕು. ಇದು ಯಾವನೋ ಒಬ್ಬ ಪ್ರಶಾಂತವಾಗಿದ್ದ ಹಿಂದೂ ಜೈನ ಸರೋವರಕ್ಕೆ ಕಲ್ಲು ಬಿಸಾಡಿ ಎಬ್ಬಿಸಿದ ಅಲೆ ಯಲ್ಲಿ ನನ್ನ ಹಿಂದೂ ಬಾಂಧವರು ಬೊಳ್ಳಕ್ಕೆ ಹೋಗುತ್ತಿ ದ್ದಾರಲ್ಲ ಎಂಬ ಚಡಪಡಿಕೆ ನನ್ನದು, ಬೇಸರ ನನ್ನದು. ಅವರೊಂದಿಗೆ ನೀವೂ ಬೊಳ್ಳಕ್ಕೆ ಹೋಗಬೇಡಿ, ಅವರು ಲಾಭವಿಲ್ಲದೆ ಬೊಳ್ಳಕ್ಕೆ ಹೋಗುವ ಜಾತಿ ಅಲ್ಲ ಎಂದು ಬಡಕ್ಕೊಂಡರೂ  ನನ್ನ ಹಿಂದೂ ಬಾಂಧವರಿಗೆ ಅರ್ಥವೇ ಆಗಲ್ಲ. ದುಡ್ಡು ಬಿಸಾಡಿ, ಪ್ರಭಾವ ಬಳಸಿ ಒಂದು ಕೊಲೆ ಕೇಸಿಂದ ಸೇಫ್ ಆಗ ಬಹುದು ಎಂಬುದು ಮೆರವಣಿಗೆ ಹೊರಟಿರುವ ನಮ್ಮ ಭ್ರಮೆ ಅಷ್ಟೆ. ಹಾಗೆ ಆಗುತ್ತಿದ್ದರೆ ಕಂಚಿ ಕಾಮಕೋಟಿ ಶ್ರೀಗಳು ಜೈಲಿಗೆ ಹೋಗುತ್ತಿರಲಿಲ್ಲ. ಇನ್ನು ಮುರುಘಾ ಸ್ವಾಮಿ ಕತೆ ಗೊತ್ತಲ್ಲ? ಈ ರಾಜ್ಯದ ನಂಬರ್ ಟೂ ಲಿಂಗಾಯತ ಸ್ವಾಮಿ. ಸರ್ಕಾರವೂ ಲಿಂಗಾಯತ ಮುಖ್ಯ ಮಂತ್ರಿಗಳದ್ದೇ ಇತ್ತು. ಏನಾಯ್ತು? ಒದ್ದು ಒಳಗೆ ಹಾಕಲಾ ಯಿತು. ಇನ್ನು ಮುಖ್ಯ ಮಂತ್ರಿ ಯಡಿಯೂರಪ್ಪ, ಜಯಲಲಿತಾ, ಲಾಲೂ, ಕನಿಮೋಳಿ, ಚಿದೂ, ರಾಜೆರ್ ಹೀಗೆ ಎಲ್ಲರೂ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವಾಗಲೇ ಇಳಿದು ಜೈಲಿಗೆ ಹೋದವರು. ಜಯಲಲಿತಾನ ಹತ್ರ ದುಡ್ಡಿತ್ತಲ್ಲ. ಗೋಣಿ ಗೋಣಿ ಕೊಡಬಹುದಿತ್ತು. ನಡಿಯಿತಾ ಅವಳ ಆಟ? ಹಾಗೇ ಧರ್ಮ ಸ್ಥಳ ಕೂಡ. ಇಂಥ ಹೈಪ್ರೊಫೈಲ್ ಕೇಸ್ ಗಳಲ್ಲಿ ಕಾರ್ಯಾಂಗವನ್ನು ಪರ್ಚೇಸ್ ಮಾಡಲಾಗಲ್ಲ.


   ಇದೀಗ ಉಜಿರೆಯ ಹುಲಿ ಮನೆಗೆ ಧಾರವಾಡದ ಇನ್ನೊಂದು ಹುಲಿ ಬಂದು ಕೂತಿದೆ. ದೇಶಭಕ್ತರೂ ಯುದ್ಧ ಘೋಷಣೆ ಮಾಡಿದ್ದಾರೆ. ಎಲ್ಲರ ಬಾಯಲ್ಲೂ ಸೌಜನ್ಯ ಎಂಬ ಹೆಣ್ಣು ಮಗಳಿಗೆ ನ್ಯಾಯ ಒದಗಿಸುವ ಮಾತುಗಳು. ಯಾಕೆಂದರೆ ಲೋಕಸಭಾ ಚುನಾವಣೆ ಬಂತಲ್ಲ ಅದಕ್ಕೆ ಈಗಿಂದಲೇ ತಯಾರಿ. ಒಬ್ಬ ಹೆಣ್ಣು ಮಗಳ ಸಾವಿನ ಮೇಲೆ ಇಷ್ಟೊಂದು ರಾಜಕೀಯ ಮಾಡೋದು, ಅದನ್ನೇ  ತಮ್ಮ ರಾಜಕೀಯದ  ಮೆಟ್ಟಿಲುಗಳನ್ನಾಗಿ ಮಾಡಿ ಕೊಳ್ಳುವುದು, ಆ ಮಗಳ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಮ್ಮ ರಾಜಕೀಯ ಜೀವನದಲ್ಲಿ ಮೈಲೇಜ್ ಪಡಕೊಳ್ಳುವುದು ಮುಂತಾದ ಕೆಲಸ ಕಾರ್ಯಗಳು ಬಹುಷಃ ಈ ದೇಶದಲ್ಲಿ ಮಾತ್ರ ನಡೆಯುತ್ತಿದೆ. ಹಾಗೆಂದು ಹೆಣ್ಣಿನ ಕಾರಣಕ್ಕೆ ಅತೀ ಹೆಚ್ಚು ಗಲಾಟೆಗಳು ಆಗುವುದು ಬಹುಷಃ ಈ ದೇಶದಲ್ಲಿ ಮಾತ್ರ ಅಂತ ಅನ್ನಿಸ್ತಿದೆ. ಅದೆಲ್ಲ ತ್ರೇತಾಯುಗದಿಂದಲೇ ಶುರುವಾಗಿ ದ್ವಾಪರದಲ್ಲಿ ಮುಂದುವರೆದು ಈಗ ಕಲಿಯು ಗದಲ್ಲಿ ಅದರ ಪರಾಕಾಷ್ಠೆ ತಲುಪಿದೆ. ಸೀತೆಗೆ ನ್ಯಾಯ ಸಿಗದೆ ಅವಳು ಧರೆಗಿಳಿದು ಹೋದಳು, ದ್ರೌಪದಿಯ ಸಾರಿ ಎಳೆಯುವಾಗಲೇ ನಾವೆಲ್ಲ ಕೈ ಕಟ್ಟಿ ಕುಂತದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಸೀತೆಯನ್ನು ಭೂತಾಯಿಯೇ ಬಂದು ಕರಕ್ಕೊಂಡು ಹೋದರೆ, ದ್ರೌಪದಿಯನ್ನು ದೇವರೇ ಬಂದು ರಕ್ಷಿಸಿದ. ಆ ಎರಡು ಹೆಣ್ಣಿನ ಶಾಪ ಮುಂದಿನ ಕಲಿಯುಗದಲ್ಲಿಯೂ ಮುಂದುವರೆಯಿತು. ರಾಣಿ ಪದ್ಮಿನಿ  ಮುಸ್ಲಿಂ ದಂಡನಾಯಕನಿಂದ ತನ್ನ ಮಾನವನ್ನು ಕಾಪಾಡಿ ಕೊಳ್ಳಲು ಗಂಡನ ಚಿತೆಗೆ ಜೀವಂತ ಹಾರಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದಳು. ಆ ರಾಣಿ ಪದ್ಮಿನಿಯ ಶಾಪ ಉಂಟಲ್ಲ ಅದು ಈ ದೇಶಕ್ಕೆ ಇವತ್ತಿಗೂ ಬಾಧೆಯಾಗಿಯೇ ಉಳಿದಿದೆ. ಇವತ್ತಿಗೂ ಈ ದೇಶದಲ್ಲಿ ಪ್ರತಿ ದಿನ ಹುಡುಗಿ ವಿಷಯದಲ್ಲಿ ಗಲಾಟೆಗಳು ಆಗುತ್ತಲೇ ಇದೆ. ಹಿಂದೂ ಹುಡುಗಿಯರು ಅನ್ಯ ಕೋಮಿನ ಹುಡುಗರೊಂದಿಗೆ ಸಿಕ್ಕಿ ಬೀಳುತ್ತಲೇ ಇದ್ದಾರೆ ಪ್ರತೀ ದಿನ. ಆದರೂ ನಮಗೆ ಏನೂ ಮಾಡ ಕ್ಕಾಗಲ್ಲ. ರಾಣಿ ಪದ್ಮಿನಿಯ ಶಾಪಕ್ಕೆ ಹೀಗೆಲ್ಲ ಆಗುತ್ತಿ ದೆಯಾ?


     ಈಗ ಗಮ್ಮತ್ತು ಏನು ಗೊತ್ತಾ? ಈ ಹುಲಿಗಳು ಏನೆಲ್ಲಾ ಮಾಡುತ್ತವೆ ಎಂಬುದು. ಸೌಜನ್ಯ ಹೋರಾಟದಲ್ಲಿ ಒಂದು ಹುಲಿ ಇತ್ತು. ಈಗ ಎರಡಾಗಿದೆ. ಎಲ್ಲಾ ಹುಲಿಗಳ ಟಾರ್ಗೆಟ್ ಹಿಂದೂ ಧರ್ಮ ರಕ್ಷಣೆಗೆ ಹಾಲೆರೆದ ಪುಣ್ಯಕೋಟಿ. ಹುಲಿಗಳಿಗೆ ಬೇಟೆ ಆಡಲೇ ಬೇಕು. ಬೇಟೆ ಆಡಿದರೆ ಮಾತ್ರ ಹುಲಿ ಗಳ ಹೊಟ್ಟೆ ತುಂಬೋದು. ಬೇಟೆ ಬಿಟ್ಟು ಹುಲಿಗಳಿಗೆ ಬಿರಿಯಾನಿ ತಿಂದು ಅಭ್ಯಾಸ ಇಲ್ಲ. ಈ ಕಾರಣಕ್ಕಾಗಿಯೇ ದೇಶಭಕ್ತರು ಇಂತಹ ಹುಲಿಗಳ ಗಡ್ಡ ಮೀಸೆ ತೆಗೆದು, ಹಲ್ಲು ಕಿತ್ತು, ಉಗುರು ತೆಗೆದು ಪುಚ್ಚೆಯಂತೆ ಮಾಡಿದ್ದರು.ಇದೀಗ ಹುಲಿಗಳು ಸುಣ್ಣ ಬಣ್ಣ ಬಳಿದುಕ್ಕೊಂಡು ಸೌಜನ್ಯ ಹೋರಾ ಟದ ಹೆಸರಿನಲ್ಲಿ ಪುಣ್ಯಕೋಟಿಯ ಬೇಟೆಗೆ ಇಳಿದಿರುವುದು ವಿಪರ್ಯಾಸವೇ ಸರಿ.
     ಹಾಗೆಂದು ಸೌಜನ್ಯ ಕೊಲೆಗಡುಕರಿಗೆ ಮರಣ ದಂಡಣೆ ಆಗಲೇ ಬೇಕೆಂದು ನಾವು ಹೋರಾಟ ಮಾಡುತ್ತಿದ್ದೇವೆ. ಯಾಕೆಂದರೆ ನಮ್ಮಲ್ಲಿ ಇರೋದು ಅದೇ ದೊಡ್ಡ ಶಿಕ್ಷೆ. ಶಿಕ್ಷೆ ಅದಲ್ಲ ಅವರಿಗೆ. ಅವರಿಗೆ ನಾವು ಶಿಕ್ಷೆ ಕೊಡಬಾರದು. ಆ ವ್ಯವಸ್ಥೆಯನ್ನು ಅಣ್ಣಪ್ಪ ಸ್ವಾಮಿಗೆ ಬಿಡಬೇಕು. ಆ ಕೊಲೆಗ ಡುಕರನ್ನು ಹಾಗೇ ಅಣ್ಣಪ್ಪ ಸ್ವಾಮಿಗೆ ಬಿಟ್ಟು ಬಿಡಬೇಕು. ಅವರಿಗೆ ನಾಯಿಗಿಂತ ಕಡೆಯಾಗಿ ಹುಚ್ಚು ಹಿಡಿಯಬೇಕು. ಉಜಿರೆ-ಧರ್ಮಸ್ಥಳ- ಬೆಳ್ತಂಗಡಿ ಮಧ್ಯೆ ಅವರು ಭಯಂಕರ ಹುಚ್ಚಿನಲ್ಲಿ ಅಲೆದಾಡುತ್ತಾ ಇರಬೇಕು. ಆ ಹುಚ್ಚಿಗೆ ಕಿರೀಟ ಎಂಬಂತೆ ಅವನಿಗೆ ಕುಷ್ಠ ರೋಗವೂ ಆಂಟಿಕೊಳ್ಳ ಬೇಕು. ಅವನು ಅದರಿಂದ ಸಾಯ ಬಾರದು. ನರಕ ಬಂದು ಬಂದು ಪಶ್ಚಾತ್ತಾಪ ಪಡಬೇಕು. ಅವನನ್ನು ನೋಡಿದಾಗಲೆಲ್ಲ ನೀಚ ಸಮುದಾಯಕ್ಕೆ ಒಬ್ಬ ಅಮಾಯಕ ಹುಡುಗಿಯ ಮೈ ಮುಟ್ಟಿದರೆ ಏನೆಲ್ಲಾ ಆಗುತ್ತದೆ ಎಂಬ ಮನವರಿಕೆ ಆಗುವಂತಿ ರಬೇಕು. ಅಣ್ಣಪ್ಪ ಸ್ವಾಮಿ ಹಾಗೇ ಮಾಡಲಿ.
     ಹಾಗೆಂದು ಈ ಹೋರಾಟ ಈಗ ಒಂದು ಸಮೂಹ ಸನ್ನಿ ಆದದ್ದು ವಿಪರ್ಯಾಸವೇ ಸರಿ. ಸೌಜನ್ಯ ಪರ  ಅಂತ ಎಷ್ಟೇ ಹೇಳಿಕೊಂಡರೂ ಎಲ್ಲರೂ ಒಂದೊಂದು ಟಾರ್ಗೆಟ್ ಮಾಡಿ ಯೇ ಇಳಿಯುತ್ತಾರೆ. ಅದರಲ್ಲಿ ದೊಡ್ಡ ಟಾರ್ಗೆಟ್ ಮಂಜುನಾ ಥನ ಆಲಯ. ಕೂದಲು ಕಟ್ಟಿ ಹಿಮಾಲಯವನ್ನು ಎಳೆದಂತೆ. ಹೋದರೆ ಎರಡು ಕೂದಲು, ಬಂದರೆ ಇಡೀ ಹಿಮಾಲಯ. ಧರ್ಮಸ್ಥಳಕ್ಕೆ ಬನ್ನಿ, ಊಟ ಮಾಡಿ ಹೋಗುವಿರಂತೆ.








                                    




      ಅಲ್ಲಿ ಕೊಲ್ಲಮೊಗ್ರ‌-‌ಕಲ್ಮಕಾರ್ ಸೈಡಿನ ಪಡ್ಡೆ ಹುಡುಗರು ಯಾವ ಸೈಜಲ್ಲಿ ಬ್ಯಾಡ್ ಬಾಯ್ಸ್ ಆಗುತ್ತಿದ್ದಾರೆಂದರೆ ಅದನ್ನು ಯಾವ ಭಾಷೆಯಲ್ಲಿ ಹೇಳಬೇಕೋ ಗೊತ್ತಾಗುತ್ತಿಲ್ಲ. ಮೊದ ಮೊದಲೆಲ್ಲ ಈ ಭಾಗದ ಪಡ್ಡೆ ಹುಡುಗರು ಜರ್ಸಿ ಪೆತ್ತದ ಬೋರಿ ಕಂಜಿಯಂತೆ ಪಾಪ ಇದ್ದರು. ಸಣ್ಸಣ್ಣ ಮರ, ಸುಟ್ಟತ್ ಮಲೆಯ ಕಲ್ಲು ಮತ್ತು ಸಂಜೆಗೆ ‌ನೈಂಟಿಗೆ ಹೋದಗಡ ಬಂದಗಡ ಮಾಡುತ್ತಿದ್ದರು ಅಷ್ಟೇ. ಪಾ......ಪ ಆಗಿದ್ದರು ಅವರು. ಆದರೆ ಯಾವಾಗ ಹರಿಹರದಲ್ಲಿ, ಕೊಲ್ಲಮೊಗ್ರದಲ್ಲಿ ಒಂದೇ ಏಟಿಗೆ ಎರಡೆರಡು ಗಡಂಗ್ ಶುರುವಾಯಿತೋ ಕೊಲ್ಲಮೊಗ್ರ ಪಡ್ಡೆಗಳು ಏಕಾಏಕಿ ಜರ್ಸಿ ಪೆತ್ತದ ಬೋರಿ ಕಂಜಿಯಂತೆ ಇದ್ದವರು ದೊಡ್ಡ ಬೋರಿಗಳಾಗಿ ಬಿಟ್ಟರು.‌ ಈಗ ಸಂಜೆ ನಾಲ್ಕು ಗಂಟೆಯ ನಂತರ ಅಲ್ಲೇ ಗಡಂಗಿನಲ್ಲಿ ನೈಂಟಿ ಹಾಕೋದು ಮೊಬೈಲ್ ನೋಡ್ಕೊಂಡು ಯಾವುದಾದರೂ ಕಟ್ಟೆ ಮೇಲೆ, ಮೋರಿ ಮೇಲೆ ಕೂತ್ತೊಂಡು "ತೋರ್ಸು.. ತೋರ್ಸು" ಎಂಬ ಜಪ ಬಿಟ್ಟರೆ ಬೇರೆ ಕೆಲಸ ಇಲ್ಲ.



    ಇದು ಕೊಲ್ಲಮೊಗ್ರ. ಇಲ್ಲಿಂದ ಅಂಚಿ  ಹೋದರೆ ಕಲ್ಮಕಾರು. ದಕ್ಷಿಣ ಕನ್ನಡ ಜಿಲ್ಲೆಯ ಗಡಿ. ಎರಡೂ ಊರುಗಳೂ ದೊಡ್ಡ ಅಂಡಮಾನ್. ಇಲ್ಲಿನ ಪಡ್ಡೆಗಳಿಗೆ ಮನರಂಜನೆ ಕಡಿಮೆ. ಹಾಗಾಗಿ ಯಾವಾಗ ಅಂಗೈಯಗಲದ ಮೊಬೈಲ್ ಗಳು ಮಾರು ಕಟ್ಟೆಯಲ್ಲಿ ಬಂತೋ ಪಡ್ಡೆಗಳು ಭಾರೀ ಖುಷಿ ಪಟ್ಟರು. ಇದೀಗ ಗಡಂಗ್ ಗಳೂ ಅಲ್ಲೆ ಇರುವ ಕಾರಣ ಪಡ್ಡೆಗಳ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಪರಿಸ್ಥಿತಿ ಶುರುವಾಗಿತ್ತು. ಆದರೆ ಅಲ್ಲಿ ಒಂದು ಸಮಸ್ಯೆ ಇತ್ತು ಪಡ್ಡೆಗಳಿಗೆ. ಪಡ್ಡೆಗಳಿಗೆ ಸ್ಪೀಕಿಂಗ್ ಗೆ, ಚಾಟಿಂಗ್ ಗೆ, ವೀಡಿಯೋ ಕಾಲಿಂಗ್ ಗೆ ಹುಡುಗಿಯರು ಸಿಗುತ್ತಿರಲಿಲ್ಲ. ಈಗ ಅದನ್ನೂ ಸೆಟ್ ಮಾಡಿಕ್ಕೊಂಡಿದ್ದಾರೆ. ಈಗ ಸದ್ಯಕ್ಕೆ ಇಲ್ಲಿ "ತೋರ್ಸು ತೋರ್ಸು" ಜೋರಾಗಿದೆ.
   ಹಾಗೆಂದು ಈ ಭಾಗದಲ್ಲಿ ಇವರನ್ನೆಲ್ಲ ಕೇಳೂವವರೂ ಯಾರೂ ಇಲ್ಲ. ಇನ್ನು ಇಲ್ಲಿ ಪೋಲಿಸರ ಒಂದು ಪಾಸ್ಪೋರ್ಟ್ ಸೈಜು ಕೂಡ ಸಿಗಲ್ಲ. ಇಲ್ಲಿ ಪೋಲಿಸರನ್ನು ನೋಡಬೇಕಾದರೆ ಒಂದೋ ಟಿವಿ ನೋಡಬೇಕು ಇಲ್ಲಾಂದ್ರೆ ಸುಬ್ರಹ್ಮಣ್ಯಕ್ಕೆ ಬರಬೇಕು. ಯಾರದೋ ಮನೆಯ ಹುಡುಗಿ, ಯಾರದೋ ಹೆಂಡತಿ, ಯಾರೋ ವಿಧವೆ, ಇನ್ಯಾರೋ ಡೈವೋರ್ಸೀ‌ ಹೀಗೆ ಟೋಟಲಿಯಾಗಿ ಚೂಡಿ ಸಿಕ್ಕಿಸಿಕೊಂಡಿದ್ದಾರೆ ಸಾಕು ಅವ ರೊಂದಿಗೆ ಲೈನ್ ಕನೆಕ್ಟ್ ಮಾಡಿಕ್ಕೊಂಡು ವೀಡಿಯೋ ಪಟ್ಟಾಂಗ ಶುರುವಿಟ್ಟುಕೊಳ್ಳುತ್ತಾರೆ. ನಂತರದ ಬೆಳವಣಿಗೆ ಯೇ "ತೋರ್ಸು ತೋರ್ಸು".
   ಇದೀಗ ಮೊನ್ನೆ ಕೊಲ್ಲಮೊಗ್ರದ ಒಬ್ಬಳು ದೇಶ ಭಕ್ತರ ನಾಯಕಿ ತೋರಿಸಲು ಹೋಗಿ, ನಡುಗುವ ಕೈಗಳಿಂದ ತೋರಿಸಲು ಹೇಳಿದವನ ನಂಬರ್ ಒತ್ತುವ ಬದಲು ಒಂದು ನಂಬರ್ ಅಂಚಿಂಚಿ ಆಗಿ ಅದು ಗುತ್ತಿಗಾರಿನ ಯಾವುದೋ ಗ್ರೂಪಿಗೆ ಸೆಂಡ್ ಆಗಿ, ಅವರು ಅದನ್ನು ನೋಡಿ ಹೆದರಿ, ಬೆದರಿ, ಬೆವರಿ ಜ್ವರ ಬಂದು ಮಲಗಿದವರು ಒಂದು ವಾರ ಸೈಲೆಂಟ್ ಮೂಡಿಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಯಾಕೆ ಪಡ್ಡೆಗಳಿಗೆ ಈ ಕೆಲಸ ಎಂದೇ ಅರ್ಥವಾಗುತ್ತಿಲ್ಲ. ಅದರಲ್ಲೂ ಈ ಮದುವೆ ಆಗಿ, ಎರಡೆರಡು ಮಕ್ಕಳಿರುವ ದಗಣೆಗಳಿಗೂ ಎಂಥ ಮರ್ಲ್ ಮಾರಾಯ್ರೆ. ಮೊನ್ನೆ ವಿಶ್ವರೂಪ ತೋರಿಸಿ ಸಿಕ್ಕಿ ಬಿದ್ದದ್ದೂ ದೊಡ್ಡ ದಗಣೆಯೇ. ಈ ಥರ್ಡ್ ಕ್ಲಾಸ್ ಪಡ್ಡೆ ಗಳಿಗಾಗಿ ತಮ್ಮ ಕೌಟುಂಬಿಕ ಜೀವನವನ್ನೇ ಹಾಳು ಮಾಡಿ ಕೊಳ್ಳುತ್ತಾರಲ್ಲ ಈ ಆಂಟಿಗಳು. ಸುಬ್ರಹ್ಮಣ್ಯ ಪೊಲೀಸರು ಒಂದು ರೌಂಡ್ ನೈಟ್ ಹತ್ತು ಗಂಟೆ ನಂತರ ನಡುಗಲ್ಲು - ಕಲ್ಮಕಾರು ರಸ್ತೆಯಲ್ಲಿ ಸಾಗಿ "ಓಡ್ಸು...ಓಡ್ಸು" ಅಂದರೂ ಸಾಕು "ತೋರ್ಸು ತೋರ್ಸು" ನಿಂತು ಬಿಡುತ್ತವೆ. ಇಲ್ಲದಿದ್ದರೆ ಈ ಬೆಳವಣಿಗೆಗಳು ಮುಂದೆ 302, 307 ಸೆಕ್ಷನ್ ಗಳಿಗೆ ಲಿಂಕ್ ಆಗುವ ಅಪಾಯಗಳಿವೆ.
   ಹಾಗೆಂದು ಕೊಲ್ಲಮೊಗ್ರ ಮೊದಲೇ ‌ಅಂಡಮಾನ್. ಮರಗಳ್ಳರು, ಮರಳು ಕಳ್ಳರು, ಹರಳು ಕಳ್ಳರು ಹೀಗೆ ಡಿಫರೆಂಟ್ ಸೈಜಿನ ಕಳ್ಳರ ನಡುವೆ ಈ ತೋರ್ಸು ತೋರ್ಸು ಗ್ಯಾಂಗ್. ಕೊಲ್ಲಮೊಗ್ರ ಸಮಾಜ ಕಂಟಕರ ಅಡ್ಡ ಆಗುವ ಮೊದಲು ಸುಬ್ರಹ್ಮಣ್ಯ ಪೊಲೀಸರು ಅಲ್ಲೊಂದು ಓಪಿ ಓಪನ್ ಮಾಡಿದರೆ ಮೂಡಾಯಿ ಕಳ್ಳರ ಉಸ್ಕುದಮ್ಮು ಸ್ವಲ್ಪ ಕಂಟ್ರೋಲ್ ಗೆ ತರಬಹುದು.










                                   


      ಸುಳ್ಯದಲ್ಲಿ ಭಾರೀ ಪ್ರತಿಭಟನೆ ಗಡ. ಗಡಗಡ ಅಂತ ಧರ್ಮಸ್ಥಳ ಅಲುಗಾಡಿದೆ. ಧರ್ಮಸ್ಥಳದ ಕತೆ ಮುಗಿಯಿತು ಎಂದೇ ಹೇಳುತ್ತಿದ್ದಾರೆ. ಅಧರ್ಮದ ವಿರುದ್ಧದ ಹೋರಾ ಟದಲ್ಲಿ ನಮಗೆಲ್ಲ ಏನು ಹುರುಪು, ಏನು ಘೋಷಣೆಗಳು, ಕೇಸರಿ ಶಾಲು ಹಾಕೊಂಡು ಬಂದಿದ್ದೇನು, ಸುಳ್ಯವೇ ನಡುಗಿ ಹೋಗುವಂತೆ ಬೊಬ್ಬೆ ಹಾಕಿದ್ದೇನು, ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ್ದೇನು, ಅಣ್ಣಪ್ಪನ ಗುಡಿಯನ್ನು, ಮಂಜು ನಾಥನ ಆಲಯವನ್ನು ಜೆಸಿಬಿಯಲ್ಲಿ ಒಡೆದು ಹಾಕಬೇಕು ಎಂದು ಕರೆ ಕೊಟ್ಟವರನ್ನು ಸ್ವಾಗತಿಸಿದ್ದು ಏನು, ಅವರಿಗೆ ಶಾಲು ಶಾಲು ಹೊದೆಸಿದ್ದೇನು, ಅವರ ಹಣೆಗೆ ಕೆಂಪು ಕೆಂಪು ಕೆಂಪು ತಿಲಕ ಇಟ್ಟದ್ದೇನು, ಛೇ ಸುಳ್ಯ ಪ್ರತಿಭಟನೆ ದೊಡ್ಡ ಸಕ್ಸಸ್. ಇನ್ನು ಸುಳ್ಯದಲ್ಲಿ ಓಟಿಗೆ ನಿಲ್ಲಬಹುದು ಅಷ್ಟು ದೊಡ್ಡ ಸಕ್ಸಸ್. ಅಧರ್ಮದ ವಿರುದ್ಧದ ಸುಳ್ಯದ ಮಹಾ ಜನತೆಯ ಹೋರಾಟ ನಿಜವಾಗಿಯೂ ಶ್ಲಾಘನೀಯ. ಅಧರ್ಮದ ವಿರುದ್ಧ ಹೋರಾಟ ಅಂದರೆ ಧರ್ಮ ಯಾವುದಯ್ಯ?



    ಹಾಗೆಂದು ನಾವು ಕೊಲೆಯಾಗಿ ಹೋದ ಹುಡುಗಿಯ ಪರ ನ್ಯಾಯಕ್ಕಾಗಿ ಹೋರಾಟ ಎಂದು ಎಷ್ಟು ಹೇಳಿಕೊಂಡರೂ ಆ ಮಾತುಗಳು  ಕೇವಲ ಉತ್ಸವ ಮೂರ್ತಿ ಅಷ್ಟೇ. ನಮ್ಮ ಗರ್ಭಗುಡಿಯೊಳಗೆ ಮಂಜುನಾಥನ  ಆಲಯ ಬಂದು ಕೂತಿದೆ. ಅದು ಕಳೆದ ಹನ್ನೊಂದು ವರ್ಷಗಳಿಂದ ಕೊತ ಕೊತ ಅಂತ ಕುದಿಯುತಿದೆ. ಹಿಂದೂ ದೇವಸ್ಥಾನದಲ್ಲಿ ಜೈನರಿಗೇನು ಕೆಲಸ, ಅದನ್ನು ಅವರಿಂದ ವಶಪಡಿಸಿಕೊಳ್ಳಬೇಕು, ಆ ಮೂಲಕ ಧರ್ಮ ರಕ್ಷಣೆ ಮಾಡ ಬೇಕೆಂಬುದು ನಮ್ಮ ಹೆಬ್ಬಯಕೆ. ಅದಕ್ಕೆ ಕೊಲೆಯಾದ ಹುಡುಗಿಯ ನೆಪ. ಆ ಮೂಲಕವಾದರೂ ಧರ್ಮಸ್ಥಳದಲ್ಲಿ ಮೀಸೆ ನುಗ್ಗಿಸಲು ಶತ ಪ್ರಯತ್ನ ನಮ್ಮದು. ಅಂಥ ಆಸೆಗಳನ್ನೆಲ್ಲ ಇಟ್ಟು ಕೊಂಡರೆ ನಮ್ಮಷ್ಟು ಮೂರ್ಖರು ಯಾರಿಲ್ಲ.  ಯಾಕೆಂದರೆ ಧರ್ಮ ರಕ್ಷಣೆಗಾಗಿ, ದಾನ ಧರ್ಮ ಗಳಲ್ಲಿ ಧರ್ಮಸ್ಥಳ ಮಾಡಿದಷ್ಟು ಕೆಲಸ ಈ ಭರತ ಖಂಡದಲ್ಲಿ ಬಹುಷಃ ಬೇರೆ ಯಾರೂ ಮಾಡಿರಲಿಕ್ಕಿಲ್ಲ. ಧರ್ಮಸ್ಥಳದ ದಾನ ಧರ್ಮದ, ಧರ್ಮ ರಕ್ಷಣೆಯ ಕತೆ ಇಂದು ನಿನ್ನೆಯದಲ್ಲ. ಅದಕ್ಕೆ ಎಂಟು ನೂರು ವರ್ಷಗಳ ಇತಿಹಾಸವಿದೆ. ಹಾಗೆ ಧರ್ಮಸ್ಥಳದಲ್ಲಿ ಧರ್ಮ ನೆಲೆಯಾಗಿದ್ದ ಕಾರಣದಿಂದಲೇ ಅಣ್ಣಪ್ಪ ಮಂಜುನಾಥನನ್ನು ಹೊತ್ತು ಕ್ಕೊಂಡು ಧರ್ಮಸ್ಥಳಕ್ಕೆ ಹೋದದ್ದು. ಸುಳ್ಯಕ್ಕೆ ಯಾಕೆ ಬರಲಿಲ್ಲ? ಇದೀಗ ನಾವು ಸುಳ್ಯದವರು ಧರ್ಮಸ್ಥಳದವರಿಗೆ ಧರ್ಮ ಬೋಧಿಸಲು ಹೊರಟಿದ್ದೇವೆ. ಅದೂ ಯಾರೊಟ್ಟಿಗೆ? ಅಣ್ಣಪ್ಪನ ಗುಡಿಯನ್ನು ಮತ್ತು ಮಂಜುನಾಥನ ಆಲಯವನ್ನು ಜೆಸಿಬಿಯಲ್ಲಿ ಒಡೆದು ಹಾಕಬೇಕು ಅನ್ನುವವರ ಒಟ್ಟಿಗೆ. ಧರ್ಮ ಯಾವುದಯ್ಯ?
   ಇದೀಗ ನಾವು ನೀವು ಧರ್ಮ ರಕ್ಷಣೆಗಾಗಿ ಅಧರ್ಮದ ವಿರುದ್ಧ ಹೋರಾಟ ಮಾಡುತ್ತಾ ಬೀದಿ ಬೀದಿಗಳಲ್ಲಿ ಮರ್ಲ ರಂತೆ ಅಲೆದಾಡುತ್ತಿದ್ದೇವೆ. ಧರ್ಮಸ್ಥಳದಲ್ಲಿ ಅಧರ್ಮ ನಡೆಯುತ್ತಿದೆ ಎಂದು ನಾವು ನೀವು ಮೊನ್ನೆ ಸುಳ್ಯದಲ್ಲಿ ಪ್ರತಿ ಭಟನೆ ಮಾಡಿದ್ದೇವಲ್ಲ, ಅಧರ್ಮ ನಡೆಯುತ್ತಿದೆ ಎಂಬ ಸ್ಥಳದಿಂದ ಸುಳ್ಯಕ್ಕೆ ಧರ್ಮ ರಕ್ಷಣೆಗಾಗಿ ದಾನ ಧರ್ಮದ ರೂಪದಲ್ಲಿ ಬಂದ ದುಡ್ಡಿನ ಲಿಸ್ಟ್ ಕೆಳಗೆ ಹಾಕಿದ್ದೇನೆ. ಓದ್ಕೊಳ್ಳಿ


   ಲಿಸ್ಟ್ ನೋಡಿದ್ರಾ? ನಾಲ್ಕು ಕೋಟಿ ಹತ್ರ ಹತ್ರ ಸುಳ್ಯಕ್ಕೆ ಮಂಜುನಾಥನ ಹೆಸರಿನಲ್ಲಿ ನಾವೀಗ ಯಾರ ವಿರುದ್ಧ ಹೋರಾಟ ಮಾಡುತ್ತಿದ್ದೇವೆಯೋ ಅವರು ಧರ್ಮ ರಕ್ಷಣೆಗಾಗಿ ಕಳಿಸಿ ಕೊಟ್ಟಿದ್ದಾರೆ. ನಾವೀಗ ಯಾವ‌ ದೇವಾಲಯವನ್ನು ಜೆಸಿಬಿ ತಂದು ಒಡೆಯ ಬೇಕು ಅಂತ ಹೇಳಿದವರ ಜೊತೆ ಮೆರವಣಿಗೆ ಹೋಗುತ್ತಿದ್ದೇವಲ್ಲ ಅದೇ ದೇವಸ್ಥಾನದ ದುಡ್ಡು. ಮಂಜುನಾಥನ ಕಾಣಿಕೆ ಡಬ್ಬಿಯಿಂದ ಮುಂಡಾಸು ಧಾರಿ, ಮುಂಡಾಸು ಧಾರಿ ಎಂದು ನಾವು ನಾವು ನೀವು ಘೋಷಣೆ ಕೂಗುತ್ತಾ ಮರ್ಲ ರಂತೆ ಬೀದಿ ಬೀದಿಗಳಲ್ಲಿ ಅಲೆಯು ತ್ತಿದ್ದೇವಲ್ಲ‌ ಅದೇ ಮುಂಡಾಸು ಧಾರಿ ಸುಳ್ಯ ತಾಲೂಕಿನಲ್ಲಿ ಧರ್ಮ ರಕ್ಷಣೆಗಾಗಿ ಕೊಟ್ಟದ್ದು ಈ ದುಡ್ಡು. ಇಷ್ಟು ಮಾತ್ರವಲ್ಲ. ಅಲ್ಲಿ ಸುಳ್ಯ ಚೆನ್ನಕೇಶವನ ದೇವಾಲಯದ ಮುಂದೆ ಎರಡು ಎಕರೆ ಜಾಗವನ್ನೂ ಅದೇ ನಾವು ನೀವು ಹೇಳುವ ಅಧರ್ಮ ನಡೆಸುವ ಧರ್ಮಸ್ಥಳದವರು ದೇವ ಸ್ಥಾನಕ್ಕೆ ಬಿಟ್ಟು ಕೊಟ್ಟಿದ್ದಾರೆ. ಮಂಜುನಾಥನ ಜಾಗ ಚೆನ್ನಕೇಶವನಿಗಿರಲಿ ಅಂತ. ಇಲ್ಲಿ ಒಂದು ಸೆಂಟ್ಸ್ ಜಾಗಕ್ಕೆ ಮಾರುಕಟ್ಟೆ  ಬೆಲೆ ಐದು ಲಕ್ಷ ಇದೆ. ಈಗ ಲೆಕ್ಕ ಮಾಡಿ. ಎರಡು ಎಕರೆಗೆ ಎಷ್ಟಾಗುತ್ತೆ? ಬಹುಶಃ ಹತ್ತು ಕೋಟಿ. ನಾವು ಆಗ ಲೆಕ್ಕ ಹಾಕಿದ್ದು ನಾಲ್ಕು ಕೋಟಿ. ಜಾಗದ್ದು ಹತ್ತು ಕೋಟಿ. ಒಟ್ಟು ಹದಿನಾಲ್ಕು ಕೋಟಿ.  ಸಾಕಾ? ಧರ್ಮ ಯಾವುದಯ್ಯಾ?
   ನಮ್ಮ ದುಡ್ಡು. ಮಾತೆತ್ತಿದರೆ ನಮ್ಮ ದುಡ್ಡು, ನಮ್ಮ ದುಡ್ಡು. ಎಲ್ಲಿದೆ ನಮ್ಮ ದುಡ್ಡು? ದೇವರು ಮತ್ತು ಭಿಕ್ಷುಕರಿಗೆ ಮಾತ್ರ ಚಿಲ್ಲರೆ ಹುಡುಕಿ ಹಾಕುವ ನಾವು ಧರ್ಮಸ್ಥಳದವರ ದುಡ್ಡು ನಮ್ಮದು ಎಂದು ಕೊಚ್ಚಿಕೊಳ್ಳುತ್ತೆವೆ. ಧರ್ಮಸ್ಥಳಕ್ಕೆ ನಾವು ಹಾಕಿದ ದುಡ್ಡಿನಲ್ಲಿ ಧರ್ಮ ಕಾರ್ಯಗಳು ನಡೆಯುತ್ತವೆ ಎಂದು ‌ಬೊಗಳುತ್ತೇವೆ. ನಮ್ಮ ದುಡ್ಡನ್ನೇ ನಮಗೆ ಕೊಡೋದು ಎಂದೂ ಹೇಳುತ್ತೇವೆ. ನಿಮ್ಗೆ ಉಡುಪಿ ಅಷ್ಟ ಮಠಗಳು ಗೊತ್ತಾ? ಅದು ಕೂಡ ಧರ್ಮಸ್ಥಳದ ಹಾಗೇ ಖಾಸಗೀ ದೇವಸ್ಥಾನ. ಧರ್ಮಸ್ಥಳ ಹೇಗಿದ್ದರೂ ಜೈನರದ್ದು, ಅಲ್ಲಿ ನಮ್ಮ ಹಿಂದೂಗಳ ದುಡ್ಡೇ ಇರೋದು ಎಂದು ನಾವು ಮಾರ್ಗದ  ಬದಿಯಲ್ಲಿ, ಗಡಂಗಿನಲ್ಲಿ ಕುಂತು ಧರ್ಮ ಸ್ಥಳವನ್ನು ದೂರುತ್ತೇವಲ್ಲ ನೀವೋಮ್ಮೆ ನಿಮ್ಮ ಊರಿನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಉಡುಪಿ ಮಠ ಗಳಿಗೆ ಕಲೆಕ್ಷನ್ ಮಾಡಲು ಹೋಗಿ. ಹೋಗಿ ನೋಡಿ. ಪಂಚ ಕಜ್ಜಾಯ ಕೊಟ್ಟು ಕಳುಹಿಸುತ್ತಾರೆ ನಿಮ್ಮನ್ನು. ಧರ್ಮ ರಕ್ಷ ಣೆಗಾಗಿ ಧರ್ಮಸ್ಥಳಕ್ಕೆ ಹೋದವನು ಯಾರೇ ಆಗಿರಲಿ ಅವನು ಬರೀ ಕೈಯಲ್ಲಿ ಹಿಂತಿರುಗಿದ ಉದಾಹರಣೆಗಳಿಲ್ಲ.
   ಬನ್ನಿ ಧರ್ಮಸ್ಥಳಕ್ಕೆ, ಊಟ ಮಾಡಿ ಹೋಗುವಿರಂತೆ.










                                  


      ಒಬ್ಬ ಪ್ರವಾದಿಯ ಬಗ್ಗೆ ಕೇವಲ ಒಂದು ವಾಕ್ಯ ಬರೆದಿದ್ದಕ್ಕೆ ಪ್ರಜಾಪ್ರಭುತ್ವದ ಒಬ್ಬ ಹಿಂದೂ ಶಾಸಕನ ಮನೆಯನ್ನೇ ಹೊತ್ತಿಸಲಾಯಿತು. ಪೋಲಿಸ್ ಠಾಣೆಗಳನ್ನು ಪುಡಿ ಮಾಡಲಾ ಯಿತು. ಪೋಲಿಸ್ ವಾಹನಗಳನ್ನು ಜಖಂ ಮಾಡಲಾಯಿತು. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಲಾಯಿತು. ಸೆಂಟ್ರ ಲ್‌ನಲ್ಲಿ, ಸ್ಟೇಟ್‌ನಲ್ಲಿ ಹಿಂದೂ ಸರಕಾರಗಳಿದ್ದರೂ ಏನೂ ಮಾಡಲಾಗಲಿಲ್ಲ. ಮನೆ ಕಳಕ್ಕೊಂಡು ಬೀದಿಗೆ ಬಿದ್ದ ಹಿಂದೂ ಶಾಸಕನಿಗೆ ಈವತ್ತಿಗೂ ನಮಗೊಂದು ನ್ಯಾಯ ಒದಗಿಸಿ ಕೊಡಲಾಗಲಿಲ್ಲ. ಒಬ್ಬ ರಜಪೂತ ರಾಣಿ ಪದ್ಮಿನಿಗೆ ಈ ಹಿಂದೂ ದೇಶದಲ್ಲಿ ನಮಗೆ ರಕ್ಷಣೆ ಕೊಡಲಾಗಲಿಲ್ಲ. ಅವಳು ತನ್ನ ಮಾನವನ್ನು ಕಾಪಾಡಿಕೊಳ್ಳಲು ಗಂಡನ ಚಿತೆಗೆ ಹಾರಿ ಪ್ರಾಣ ತ್ಯಾಗ ಮಾಡಿಕೊಂಡಳು. ಅವಳ ಶಾಪ ಈ ಹಿಂದೂ ದೇಶಕ್ಕೆ ಈವತ್ತಿಗೂ ಬಾಧಿಸುತ್ತಿದೆ. ಇಷ್ಟಾಗಿಯೂ ನಮಗೆ ನಮ್ಮ ಧರ್ಮ ವಿರೋಧಿಗಳನ್ನು ಏನೂ ಮಾಡಲಾಗುತ್ತಿಲ್ಲ. ಯಾಕೆಂ ದರೆ ಅವರ ಪ್ರವಾದಿಯ ಧರ್ಮದಲ್ಲಿ ಪ್ರವಾದಿಯೇ ಮತ್ತೆ ಮತ್ತೇ ಹುಟ್ಟಿ ಬಂದು ಧರ್ಮವನ್ನು ಜಾಗೃತಗೊಳಿಸುತ್ತಾನೆ. ಕ್ರಿಸ್ತ ಧರ್ಮದಲ್ಲಿ ಜೀಸಸ್ ಮತ್ತೆ ಮತ್ತೇ ಹುಟ್ಟಿ ಬಂದು ಧರ್ಮದ ರಕ್ಷಣೆ ಮಾಡುತ್ತಾನೆ. ಆದರೆ ಮಹಾವೀರನ ಧರ್ಮದಲ್ಲಿ ಮಹಾವೀರ ಮತ್ತೇ ಹುಟ್ಟಿ ಬರಲೇ ಇಲ್ಲ. ಆದ್ದ ರಿಂದ ಜೈನ ಧರ್ಮ ನಶಿಸುತ್ತಾ ಹೋಯ್ತು. 



    ಇನ್ನು ರಾಮನ ಧರ್ಮದಲ್ಲಿ? ರಾಮನ ಧರ್ಮದಲ್ಲಿಯೂ ರಾಮ ಮತ್ತೇ ಹುಟ್ಟಿ ಬರಲೇ ಇಲ್ಲ. ಇಲ್ಲಿ ರಾಮನ ಬದಲಾಗಿ ಹಿಂದೂ ಧರ್ಮದಲ್ಲಿ ನಾವು ನೀವೆಲ್ಲ ಹುಟ್ಟಿಕ್ಕೊಂಡಿದ್ದೇವೆ. ನಾವು ಏನು ಮಾಡುತ್ತಿದ್ದೇವೆ ಅಂದರೆ ಹಿಂದೂ ಧರ್ಮದ ಆರಾಧ್ಯ ದೈವ ಮಂಜುನಾಥನ ದೇಗುಲವನ್ನು, ಅಣ್ಣಪ್ಪನ ಗುಡಿಯನ್ನು ಜೆಸಿಬಿ ತಂದು ಪುಡಿ ಮಾಡಬೇಕು ಎಂದು ಹೇಳುವವರ ಹಿಂದೆ ಮೆರವಣಿಗೆ ಹೊರಟಿದ್ದೇವೆ. ರಾಮನ  ಧರ್ಮಕ್ಕೆ ಹಾಲೆರೆದ ಪುಣ್ಯಕೋಟಿಯನ್ನು ಹಿಡಿಯಲು ನಾವು ಹಿಂದೂ ಹುಲಿಯನ್ನು ಬಿಟ್ಟಿದ್ದೇವೆ. ನಮ್ಮ ವಿರೋಧಿಗಳ ಟಾರ್ಗೆಟ್ ೨೦೪೦ಕ್ಕೆ ನಮ್ಮ ತಯಾರಿ ಇಷ್ಟು ಸಾಕು. ಜೈನರ ಪರಿಸ್ಥಿತಿಯೇ ಹಿಂದೂಗಳಿಗೆ ಬರುವ ದಿನ ದೂರದಲ್ಲಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಗಳು ಮಿಷನ್ ೨೦೪೦ಕ್ಕೆ ಪೂರಕ ವಾಗಿದೆ. ಕೇವಲ ಒಂದು ಕೊಲೆಯ ನೆವದಲ್ಲಿ ಹಿಂದೂ ಸಂಸ್ಕೃತಿಯ ಪಿಲ್ಲರನ್ನೇ ಒಡೆದು ಹಾಕಲು ನಿತ್ಯ ಹೋರಾಡು ತ್ತಿರುವ ನಮಗೆ ಹಿಂದೂ ಧರ್ಮದಲ್ಲಿ ಬುದ್ಧಿ ಹೇಳುವವರೇ ಇಲ್ಲವಾಗಿದ್ದು ವಿಪರ್ಯಾಸವೇ ಸರಿ. ಹಿಂದೂತ್ವದ ಅಮಲು ಏರಬೇಕು ಆದರೆ ತಲೆಗೆ ಏರಬಾರದು. ತಲೆಗೆ ಏರಿದರೆ ನಮಗೇ ಅಪಾಯ. ಇದಕ್ಕೆಲ್ಲ ಮೂಲ ಕಾರಣ ಆ ಹುಡುಗಿಯ ಕೊಲೆಯೂ ಅಲ್ಲ, ಅತ್ಯಾಚಾರವೂ ಅಲ್ಲ. ಬದಲಾಗಿ ಒಂದು ದೇವಸ್ಥಾನ. ನಮ್ಮ ಕಣ್ಣು ಆ ದೇವಸ್ಥಾನದ ಮೇಲೆ, ಅದೆರ ಕಾಣಿಕೆ ಡಬ್ಬಿಯ ಮೇಲೆ. ನಮ್ಮ ಗುರಿ ಆ ಧರ್ಮಾಧಿಕಾರಿ. ಅದನ್ನೊಂದು ವಶಪಡಿಸಿಕ್ಕೊಂಡರೆ ಅಡ್ಡ ಪಂಕ್ತಿ, ನೀಟ ಪಂಕ್ತಿಯಲ್ಲಿ ಕುಂತು ಸಹಭೋಜನ, ಸಾಮೂಹಿಕ ಭೋಜನ ಮಾಡಬಹುದು ಎಂಬುದು ನಮ್ಮ ಕನಸು. ಅದು ನನಸಾಗಲ್ಲ ಬಿಡಿ. ಇತಿಹಾಸ ಮಾಡಿದವರ ಮುಂದೆ ಇತಿಹಾಸ ಓದಿದವರ ಆಟ ನಡೆಯಲ್ಲ. ಬನ್ನಿ ಧರ್ಮಸ್ಥಳಕ್ಕೆ ಊಟ ಮಾಡಿ ಹೋಗು ವಿರಂತೆ. ಆಮೇಲೆ ದೇವಸ್ಥಾನದ ಕತೆ ಹೇಳುತ್ತೇನೆ.








                                 



     ಅಲ್ಲೊಂದು ಕೊರಗಜ್ಜನ ಸಾನಿಧ್ಯ ಇದೆ. ಶುರುವಿನಿಂದಲೂ ಅಜ್ಜನಿಗೆ ಕ್ವಾಟ್ರು ಇಡೋದು ಪದ್ಧತಿ. ಇದೀಗ ಅದನ್ನೇ ನೆಪ ಮಾಡಿಕೊಂಡು ದೊಡ್ಡಡ್ಕ ಪರಿಸರದಲ್ಲಿ ಕೆಲವು ಮಂದಿ ಕ್ವಾಟ್ರು ಮಾರುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ದೊಡ್ಡಡ್ಕ ಪರಿಸರದ ಟೈಟ್ ಮಾಸ್ಟರ್ ಗಳು ಟೈಟ್ ಆಗಲು ಒಂದೋ ಕಲ್ಲುಗುಂಡಿಗೆ ಹತ್ತ ‌ಬೇಕು ಅಥವಾ ಅರಂತೋಡಿನಲ್ಲಿ ಇಳಿಯ ಬೇಕು. ಹಾಗಾಗಿ ದೊಡ್ಡಡ್ಕದಲ್ಲೇ ಅಜ್ಜನ ನೆವದಲ್ಲಿ ಕ್ವಾಟ್ರು ಸಿಗುವ‌ ಕಾರಣ ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂತ ಖುಷಿಯಲ್ಲಿದ್ದಾರೆ. 
        ದೊಡ್ಡಡ್ಕ ಪರಿಸರದಲ್ಲಿ ಪುಣಿಟ್ ಅಂಗಡಿ, ಮಲೆಯಾಳಿ ಅಂಗಡಿಗಳಲ್ಲಿ ಕೂಲ್ ಡ್ರಿಂಕ್ ಮಾರಿದ ಹಾಗೆ ಕ್ವಾಟ್ರು ಮಾರ ಲಾಗುತ್ತಿದೆ. ಇನ್ನು ಇಲ್ಲಿ ದೊಡ್ಡಡ್ಕ ಪರಿಸರದಲ್ಲಿ ಪೆರ್ಮರಿ ಒಂದಿದ್ದು ಅದು ಆ ಭಾಗದ ಅಷ್ಟೂ ಅಂಗಡಿಗಳಿಗೆ, ಮನೆ ಗಳಿಗೆ ರಖಂ ಮತ್ತು ಚಿಲ್ಲರೆ ಕ್ವಾಟ್ರು ಸರಬರಾಜು ಮಾಡುವ ಏಕೈಕ ಡೀಲರ್ ಎಂದು ತಿಳಿದುಬಂದಿದೆ. ಇವನದ್ದು ಒಂಥರಾ ಕ್ವಾಟ್ರು ಲೈನ್ ಸೇಲ್ ಇದ್ದ‌ ಹಾಗೇ. ಇನ್ನು ಕಲ್ಲುಗುಂಡಿ ಪೋಲಿ ಸರು ಏನಾದರೂ ಅಪ್ಪಿ ತಪ್ಪಿ ದೊಡ್ಡಡ್ಕ ಸೈಡಿಗೆ ಬಂದರೆ ಎಲ್ಲರೂ ಸೇರಿ ಅಜ್ಜನನ್ನು ತೋರಿಸಿ ಬಿಡುತ್ತಾರೆ. ಪೋಲಿಸರೂ ಪಾಪ ಅಜ್ಜನಿಗೆ ಕೈ ಮುಗಿದು ಮುಂದೆ ಹೋಗುತ್ತಾರೆ.





                                



      ಹಾಗೆಂದು ಗುತ್ತಿಗಾರು ಭಾಗದ ವಳಲಂಬೆ ಒಂದು ರಿಪಬ್ಲಿಕ್ ಇದ್ದಂತೆ. ಅಲ್ಲಿ ಏನಿದ್ದರೂ ಆನೆ ನಡೆದದ್ದೇ ದಾರಿ. ಈ ಗುತ್ತಿಗಾರು ಕೂಡ ವಳಲಂಬೆ ರಿಪಬ್ಲಿಕ್‌ಗೇ ಸೇರ್ಪಡೆ ಆಗುವ ಎಲ್ಲಾ ಅಪಾಯಗಳಿವೆ. ಓ ಮೊನ್ನೆ ತಾನೆ ಯಾರೋ ವಳಲಂಬೆ ರಿಪಬ್ಲಿಕ್‌ನಲ್ಲಿ ಬೋರ್‌ವೆಲ್ ಕದ್ದು ಸಿಕ್ಕಿ ಬಿದ್ದಿದ್ದರು. ಈ ಬಗ್ಗೆ ನಾವು ವರದಿಗಳನ್ನು ಪ್ರಕಟಿಸಿದಾಗ ಒಂದೇ ಬೋರ್‌ವೆಲ್ ಅಲ್ಲ ಗಡ, ಇನ್ನೊಂದು ಗುತ್ತಿಗಾರು ಪೇಟೆಯಲ್ಲಿದ್ದ ಬೋರ್‌ ವೆಲ್ ಕೂಡ ಆಚೆ ಮನೆಗೂ ಹೋಗದೆ, ಇತ್ತ ಅಜ್ಜಿ ಮನೆಗೂ ಹೋಗದೆ ಕಾಣೆಯಾಗಿದೆ ಎಂಬ ಮಾಹಿತಿ ಬಂದಿತ್ತು. ಇದೀಗ ಸಿಮೆಂಟು ಕತೆ ಒಂದು ಬಂದಿದೆ. ಅಲ್ಲಿ ವಳಲಂಬೆಯಲ್ಲಿ ಕೂವೆಕ್ಕೋಡಿ-ವಳಲಂಬೆ ರಸ್ತೆ ಕಾಂಕ್ರೀಟಿಕರಣಕ್ಕೆಂದು ಎರ ಡು ಲೋಡ್ ಸಿಮೆಂಟು ಬಂದಿತ್ತಂತೆ ಗಡ. ಕಾಂಕ್ರೀಟಿಕರಣ ಮುಗಿದು ಉಳಿದ 42 ಗೋಣಿ ಸಿಮೆಂಟನ್ನು ಕಂತ್ರಟ್ಟಿನವನು ಅಲ್ಲೇ ಎಲ್ಲೋ ಕಲ್ಚರ್ ಎಂಬಲ್ಲಿಯೋ ಅಥವಾ ವಳಲಂಬೆ ಸಂಕಪಾಲನ ಆಲಯದ ಎದುರೋ ಇಟ್ಟು ನಾಳೆ ಬಂದು ಇನ್ನೊಂದು ಕಾಂಕ್ರೀಟೀಕರಣ ನಡೆಯುವ ಜಾಗಕ್ಕೆ ಕೊಂಡೋ ದರಾಯಿತು ಎಂದು ಅಲ್ಲಿಂದ ತೆರಳಿದ್ದನಂತೆ. ಆದರೆ ಮರು ದಿನ ಬಂದು ನೋಡಿದರೆ 42ರಲ್ಲಿ ಅರ್ಧದಷ್ಟು ಸಿಮೆಂಟು ಗೋಣಿ ಇಲ್ಲ. 
    ವಳಲಂಬೆಯಲ್ಲಿ ಬೊಳ್ಳಗಿಳ್ಳ ಏನಾದರೂ ಬಂದಿದೆಯಾ ಎಂದು ಕೇಳಿದರೆ, 'ಇಲ್ಲ ರಾತ್ರಿಯಿಡಿ ಚಂದಿರ ಬಾನಲ್ಲಿದ್ದ' ಎಂಬ ಉತ್ತರ ಬಂದಿದೆ. ಇನ್ನು ಇಲಿ ಹೆಗ್ಗಣಗಳಿಗೆ ಎಸಿಸಿ ಸಿಮೆಂಟು ಬೇಡ, ಅವುಗಳು ಕೋರಮಂಡಲ್ ಸಿಮೆಂಟ್ ಮಾತ್ರ ಮೂ ಸೋದು. ಹಾಗಾದರೆ ಸಿಮೆಂಟು ಗೋಣಿಗಳು ಎಲ್ಲಿ ಹೋದ ವು? ಈ ಬಗ್ಗೆ ಸ್ಥಳೀಯ ಮಹಾನ್ ದೇಶಭಕ್ತ, ಬಡವರ ಬಂಧು, ಬೆಚ್ಚ ರಕ್ತದ ಯುವಕರ ಕಣ್ಮಣಿ, ಅಜಾತ ಸತ್ರು, ದೀನ ದಲಿತರ ಉದ್ಧಾರಕ, ಗುತ್ತಿಗಾರಿನ ಸಿಲ್ಪಿ, ವಳಲಂಬೆಯ ಸೆಲ್ಫೀಯಲ್ಲಿ ಕೇಳಿದರೆ 'ರಾತ್ರಿ ಸ್ವಲ್ಪ ಅರ್ಜೆಂಟ್ ಇತ್ತು, ಅದಕ್ಕೆ ಸಿಮೆಂಟ್ ಕೊಂಡೋಗಿದ್ದೇನೆ' ಎಂಬ ಉತ್ತರ ಬಂದಿದೆ. ಅಲ್ಲ ಮಾರಾ ಯ್ರೇ ರಾತ್ರಿ ಹೊತ್ತಲ್ಲಿ ಸಿಮೆಂಟ್‌ನ ಅರ್ಜೆಂಟ್ ಯಾಕೆ ಬಂತೆಂದೇ ಕಾಂಟ್ರಕ್ಟ್ನವನಿಗೆ ಇಲ್ಲಿ ತನಕ ಅರ್ಥವೇ ಆಗಿ ಲ್ಲವಂತೆ. ಅಲ್ಲ ಮಾರಾಯ್ರೇ ರಾತ್ರಿ ಹೊತ್ತಲ್ಲಿ ಟಾರ್ಚು, ಪಜೆ, ಬೆಡ್‌ಶೀಟು, ಹೇಸಿಗೆ ಮಾಡಲು ಹಾಸಿಗೆ, ಸೊಳ್ಳೆ ಬತ್ತಿ, ನೈಂಟಿ, ನೈಟಿ ಮತ್ತು ನಿದ್ದೆ ಇದ್ದರೆ ರಾತ್ರಿಗೆ ಸಾಕಾಗುತ್ತದೆ. ಇದು ರಾತ್ರಿ ಸಿಮೆಂಟ್‌ನ ಅರ್ಜೆಂಟ್ ಮನುಷ್ಯರಿಗೆ ಯಾಕೆ ಬೀಳುತ್ತದೆ ಎಂದೇ ಅರ್ಥವಾಗುತ್ತಿಲ್ಲ. ನೈಟ್ ಹಲ್ಲುನೋವು ಏನಾದರೂ ಶುರುವಾಯ್ತಾ?ಅದಕ್ಕೂ ಅಷ್ಟು ಸಿಮೆಂಟ್ ಬೇಡ. ಮತ್ಯಾಕೆ ಸಿಮೆಂಟು?




MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget