ನಾವು ಮೊನ್ನೆ ತಾನೇ ಕುದ್ಮಾರು ಗ್ರಾಮದ ಬರೆಪ್ಪಾಡಿಯಲ್ಲಿ ಬಾರ್ ಒಂದು ಓಪನ್ ಆಗುತ್ತಿದೆ ಎಂದು ಬರೆದು ಕೈಪಸೆ ಆಜಿರಲಿಲ್ಲ ಮಾರಾಯ್ರೆ. ಈಗ ನೋಡಿದರೆ ಅದೇ ಬರೆಪ್ಪಾಡಿ ಯಲ್ಲಿ ಇನ್ನೊಂದು ಬಾರ್ ಓಪನ್ ಆಗಲಿದೆಯಂತೆ. ಒಂದು ಬಾರ್ ಬಂಡಸಾಲೆಯ ಬಲತ್ತ ಮೈಟ್, ಇನ್ನೊಂದು ಬಾರ್ ಬಂಡಸಾಲೆಯ ಎಡತ್ತ ಮೈಟ್. ಒಂದು ಕಾಂಗ್ರೆಸ್ ಬಾರ್ ಇನ್ನೊಂದು ಬಿಜೆಪಿ ಬಾರ್. ಒಂದು ಬಾರ್ ಶೆಟ್ರುಗಳದ್ದು ಇನ್ನೊಂದು ಬಾರ್ ಗೌಡ್ರುಗಳದ್ದು. ಆದರೆ ಕುಡುಕರು ಮಾತ್ರ ಸರ್ವ ಧರ್ಮಗಳಿಗೆ ಸೇರಿದವರು.
ಹಾಗೆಂದು ಕಾಣಿಯೂರು-ಸುಬ್ರಮಣ್ಯ ರಸ್ತೆಯಲ್ಲಿ ನೀವು ಸವಣೂರು ಚಡವು ದಾಟಿ ಥರ್ಡ್ ಗೇರ್ ಬದಲಿಸಿ ಟಾಪ್ ಗೇರಲ್ಲಿ ಚಾಪಲ್ಲ ಚಡವು ಹತ್ತಿ ಟಾಪೆಂಡ್ ಟಾಪಲ್ಲಿ ಹೋಗುವಾಗ ಬರೆಪ್ಪಾಡಿ ಎಂಬ ಊರು ಸಿಗುತ್ತದೆ. ಈ ಜಂಕ್ಷನ್ ಹಿಂದೆ ಕುದ್ಮಾರು ಗ್ರಾಮದ ರಾಜಧಾನಿಯಾಗಿತ್ತು. ಹಾಗೆಂದು ಬರೆಪ್ಪಾಡಿ ಜಂಕ್ಷನ್ ಬಹಳ ಹಿಂದೆ ದೊಡ್ಡ ದೊಡ್ಡ ಪೆಟ್ಟಿಸ್ಟ್ ಗಳ ಅಡ್ಡೆಯಾಗಿತ್ತು. ಇಲ್ಲಿ ಪೆಟ್ಟು ಗುಟ್ಟು ನಡೆಯದ ದಿನಗಳೇ ಕ್ಯಾಲೆಂಡರ್ ನಲ್ಲಿ ಇರುತ್ತಿರಲಿಲ್ಲ. ಕಡಬ ಪೊಲೀಸರಿಗಂತೂ ಇಲ್ಲಿ ಓಡಿ ಓಡಿ ಓಡಿ ಸಾಕೋ ಸಾಕಾಗಿತ್ತು. ಪೋಲಿಸ್ ಜೀಪ್ ಕಂಡರೆ ಸಾಕು ಪೆಟ್ಟಿಸ್ಟ್ ಗಳು ಜಂಕ್ಷನ್ ನಿಂದ ಒಂದು ಜಂಪು ರೈಲ್ದ ಪಟ್ಟೆಗೆ, ಅಲ್ಲಿಂದ ಇನ್ನೊಂದು ಜಂಪು ಡೆಬ್ಬೆಲಿಗೆ ಹಾರಿ ಡೆಬ್ಬೆಲಿಯ ನೀರಿನಲ್ಲಿ ಕಂಬಳದಲ್ಲಿ ಓಡಿದ ಹಾಗೇ ಒಯ್ತಬುಡಿ ಮಾಡಿ ಕುಮಾರಜ್ಜನ ತೋಟ ಹತ್ತಿದರೆ ಸಾಕು ಕಡಬ ಪೊಲೀಸರ ಬಂದ ದಾರಿಗೆ ಸುಂಕ ಇಲ್ಲದಾಗುತ್ತಿತ್ತು. ಅಂಥ ಟೈಮಲ್ಲಿ ಬರೆಪ್ಪಾಡಿಯಲ್ಲಿ ಇದ್ದದ್ದು ಒಂದು ಕಲಿತ್ತ ಗಡಂಗ್ ಇನ್ನೊಂದು ತೊಟ್ಟೆ ಗಡಂಗ್. ಅದನ್ನು ಕುಡಿದೇ ಬರೆಪ್ಪಾಡಿಯ ಪೆಟ್ಟಿಸ್ಟ್ ಗಳು ಮಾಡಿದ ಕಾರುಬಾರು ಗಳು ಇವತ್ತಿಗೂ ದಂತಕತೆಗಳಾಗಿ ಉಳಿದುಕೊಂಡಿದೆ. ಇದೀಗ ಎರಡೆರಡು ಬಾರ್ ಗಳಾದರೆ ಗತಿ ಏನು. ಪುಣ್ಯಕ್ಕೆ ಹಿಂದಿನ ಪೆಟ್ಟಿಸ್ಟ್ ಗಳೆಲ್ಲ ಈಗ ನಿವೃತ್ತರಾಗಿದ್ದು ಬರೆಪ್ಪಾಡಿ ಶಾಂತ ವಾಗಿದೆ. ಇಲ್ಲಿ ಸದ್ಯಕ್ಕೆ ಹೊಸ ಪೆಟ್ಟಿಸ್ಟ್ ಗಳು ಇಲ್ಲ.
ಹಾಗೇ ನೋಡಿದರೆ ಬರೆಪ್ಪಾಡಿಯಲ್ಲಿ ಎರಡೆರಡು ಬಾರ್ ಯಾರಿಗೆ ಕುಡುದು ಸೂಸು ಮಾಡಲೆಂದೇ ಅರ್ಥ ಆಗುತ್ತಿಲ್ಲ. ಇವರಿಗೆ ಬಿಸಿನೆಸ್ ಸಿಕ್ಕಿದರೂ ಅಂಚಿ ಬೈತ್ತಡ್ಕ ಸಂಕದಿಂದ ಇಂಚಿ ಚಾಪಲ್ಲ ಸಂಕದವರೆಗಿನ ಕುಡುಕರದ್ದು ಸಿಗಬಹುದು. ಬೈತ್ತಡ್ಕ ಸಂಕ ದಾಟಿದರೆ ಕಾಣಿಯೂರಿನ ಬಾರ್ ಕುಡುಕರನ್ನು ಕೈ ಬೀಸಿ ಕರೆಯುತ್ತದೆ. ಇನ್ನು ಇತ್ಲಕಡೆ ಚಾಪಲ್ಲ ಸಂಕದ ಮಂಡೆ ದಾಟಿದರೆ ಸವಣೂರು ಬಾರ್ ಗಳು ಕುಡುಕರನ್ನು ಪುಸ್ಕ ಅಂತ ಎಳ್ಕೊಂಡು ಬಿಡುತ್ತದೆ. ಹಾಗಾದರೆ ಬರೆಪ್ಪಾಡಿ ಬಾರ್ ಗಳಿಗೆ ಕುಡುಕರನ್ನು ಎಲ್ಲಿಂದ ತರೋದು? ಅದರಲ್ಲೂ ಬೆಳಂದೂರು ಗ್ರಾಮದಲ್ಲಿ "ನಂಗಳೆ ಆಳ್" ಜಾಸ್ತಿ. ಬಾಕಿಯವರು ಮಾರಿ ಯಿಂದ ಮಾರಿಗೆ ಕುಡಿಯುವವರು. ಇನ್ನು ಕುದ್ಮಾರು ಗ್ರಾಮದ ಕುಡುಕರು ಬಯ್ಯಬಯ್ಯ ಆನಗ, ಬಾಯಿ ಚಪ್ಪೆ ಚಪ್ಪೆ ಆನಗ ಬಾರ್ ನತ್ತ ಮುಖ ಮಾಡುವ ಚಾನ್ಸಸ್ ಉಂಟು. ಇನ್ನು ಕಾಯ್ಮಣ ಗ್ರಾಮದವರಿಗೆ ಆಚೆ ನಿಂತರೆ ಕಾಣಿಯೂರು ಈಚೆ ನಿಂತರೆ ಮಾತ್ರ ಬರೆಪ್ಪಾಡಿಗೆ ಬರಬಹುದು. ಚಾರ್ವಾಕ ದವರದ್ದೂ ಇದೇ ಕತೆ. ಎರಡು ಬಾರ್ ಬೇಡ ಇತ್ತು ಬರೆಪ್ಪಾಡಿ ಯಲ್ಲಿ.
ಹಾಗೆಂದು ಒಂದು ಬಾರ್ ಶಾಲೆಯ ಎದುರೇ ಎಂದು ಯಾರೋ ಬರೆದಿದ್ದರು. ಬಹುಶಃ ನಾನೇ ಬರೆದಿರಬೇಕು. ಆದರೆ ಎಕೇಶೀಯಾ ಮರಗಳು ಬಾರನ್ನು ಶಾಲೆಯ ಮಕ್ಕಳಿಂದ ರಕ್ಷಿಸಿದೆ. ಆದರೆ ಶಾಲೆಯ ಮಕ್ಕಳು ದಿನಾ ಶಾಲೆಗೆ ಹೋಗುವ ಸಾದಿಯಲ್ಲೇ ಬಾರಿದೆ. ಇನ್ನೊಂದು ಬಾರ್ ಸಿಎಲ್ ಸೆವೆನಂತೆ. ಅದು ಕಾಣಿಯೂರು-ಸುಬ್ರಮಣ್ಯ ಸ್ಟೇಟ್ ಹೈವೇಗೆ ಪೀಂಕನ್ ಹಾಕಿ ಬಿಸಿನೆಸ್ ಶುರು ಮಾಡಲಿದೆಯಂತೆ. ಅಂದರೆ ಕುಡುಕರು ಹಿಂದಿನಿಂದ ಬಂದು ಒಳಗೆ ಹೋಗುವ ವ್ಯವಸ್ಥೆ. ಅದರಲ್ಲೂ ಗಮ್ಮತ್ತಿನ ವಿಷಯ ಏನೆಂದರೆ ಒಂದು ಬಾರ್ ಸ್ಟೇಟ್ ಹೈವೇ ಬದಿಯಲ್ಲೇ ಶುರುವಾಗಲಿದ್ದು ಕುಡುಕರಿಗೆ ಬಸ್ಸ್ ಹತ್ತಲು, ಬಸ್ಸಿಂದ ಬೀಳಲು ಹೇಳಿ ಮಾಡಿಸಿದಂತಿದೆ. ಇನ್ನೊಂದು ಬಾರ್ ನ ಹತ್ತಿರ ಬೆಂಗ-ಮಂಗ ರೈಲ್ವೇ ಟ್ರ್ಯಾಕ್ ಹೋಗಿದ್ದು ಕುಡುಕರಿಗೆ ಬೆಂಗಳೂರಿಗೆ ಅಥವಾ ಎಲ್ಲಿಗೆ ಬೇಕಾದರೂ ಟಿಕೇಟ್ ಪಡೆಯಲು ಅವಕಾಶಗಳಿವೆ. ಟೋಟಲಿ ಯಾಗಿ ಹೇಳುವುದಾದರೆ ಬರೆಪ್ಪಾಡಿಗೆ ಎರಡು ಬಾರ್ ಬೇಡ ಇತ್ತು. ನಾವು ಸಮಾಜದಲ್ಲಿ ಕುಡುಕರನ್ನು ಕಡಿಮೆ ಮಾಡಬೇಕೆ ಹೊರತು ಇಡೀ ಸಮಾಜಕ್ಕೆ ಕುಡಿತದ ಚಟವನ್ನು ಅಂಟಿಸುವು ದಲ್ಲ. ಅದರಲ್ಲೂ ಒಂದೇ ಗ್ರಾಮದಲ್ಲಿ ಒಂದೇ ಜಂಕ್ಷನ್ ನಲ್ಲಿ ಎರಡೆರಡು ಬಾರ್ ಗಳಿಗೆ ಅನುಮತಿ ಕೊಟ್ಟಿದ್ದೇ ತಪ್ಪು. ಇವರೆಲ್ಲ ಸಮಾಜವನ್ನು ಏನು ಮಾಡಲು ಹೊರಟಿದ್ದಾರೆಂದೇ ಅರ್ಥವಾಗುತ್ತಿಲ್ಲ. ಹರ್ ಘರ್ ಹರ್ ಬಾರ್? ಏನೇ ಆಗಲಿ ಬೆಳಂದೂರು ಕುದ್ಮಾರು ಗ್ರಾಮದ ಕುಡುಕರಿಗೆ ಇನ್ನು ನಿತ್ಯ ಹಬ್ಬ ಹರಿದಿನ.
Post a Comment