ಮೊನ್ನೆಯಿಂದ ಕುದ್ಮಾರು ಗ್ರಾಮದ ಬರೆಪ್ಪಾಡಿಯದ್ದೇ ಸುದ್ದಿ. ಬರೆಪ್ಪಾಡಿಯಲ್ಲಿ ಕುದ್ಮಾರು ಶಾಲೆಯ ಎದುರುಗಡೆಯೇ ಒಂದು ಬಾರ್ ತಲೆ ಎತ್ತಲಿದೆ ಎಂದು ಬರೆದ ಮರುದಿನವೇ ಬರೆಪ್ಪಾಡಿಯಲ್ಲಿ ಮತ್ತೊಂದು ಬಾರ್ ಓಪನ್ ಆಗಲಿದೆ ಎಂದು ಮಾಹಿತಿ ಬಂದ ಕಾರಣ ಆ ಬಾರ್ ಬಗ್ಗೆಯೂ ನಾಲ್ಕಕ್ಷರ ಟೈಟಾಗಿ ಬರೆದಿದ್ದೆವು. ಇದೀಗ ಅದೇ ಬರೆಪ್ಪಾಡಿಯಲ್ಲಿ ಓಪನ್ ಆಗಲಿರುವ ಮೂರನೇ ಬಾರಿನ ಕತೆಯೂ ಬಂದಿದೆ. ಹೌದು ಬರೆಪ್ಪಾಡಿಯಲ್ಲಿ ಮೂರನೇ ಬಾರ್ ಓಪನ್ ಮಾಡಲು ಈಗಾಗಲೇ ಚಪ್ಪರ ಹಾಕಿಯಾಗಿದೆ. ಇನ್ನು ಬೋರ್ಡ್ ಸಿಕ್ಕಿಸಿ ಕುಡುಕಣ್ಣ ಬಂದರೆ ಮುಗಿಯಿತು ಅಷ್ಟೇ. ಬಾಕಿ ಎಲ್ಲಾ ಕೆಲಸ ಮುಗಿದಿದೆ.
ಹಾಗೆಂದು ಬರೆಪ್ಪಾಡಿಯಲ್ಲಿ ಓಪನ್ ಆಗಲಿರುವ ಮೂರನೇ ಪೊಯ್ಯೆ ಬಾರ್ ಬರೆಪ್ಪಾಡಿ ಜಂಕ್ಷನ್ ಬಿಟ್ಟು ಸ್ವಲ್ಪ ಪಡ್ಡಾಯಿ ಭಾಗದ ನೂಜೋಲ್ತಡ್ಕ ಎಂಬ ಜಂಕ್ಷನ್ ಬಳಿ ಓಪನ್ ಆಗಲಿದೆ. ಇತ್ತೀಚಿನ ದಿನಗಳಲ್ಲಿ ನೂಜೋಲ್ತಡ್ಕ ಜಂಕ್ಷನ್ ನಿಂತಿಕಲ್ ವೇಗದಲ್ಲಿ ಬೆಳೆಯುತ್ತಿದ್ದು ಆಚೆ ಹೋದರೆ ಪುತ್ತೂರು, ಈಚೆ ಬಂದರೆ ಕಾಣಿಯೂರು, ಮೇಲೆ ಹೋದರೆ ಆಲಂಕಾರು, ಕೆಳಗೆ ಹೋದರೆ ದೈಪಿಲ ಚಾರ್ವಾಕ ಹೀಗೆ ಎಲ್ಲಾ ಸೈಜಿನ ಜನರು ಬಂದು ಹೋಗುವ ಒಂದು ಜಂಕ್ಷನ್ ಇದಾಗಿದೆ. ಹಾಗೆ ಇಲ್ಲಿಗೆ ಬರುವ ಎಲ್ಲಾ ಸೈಜಿನ ಜನರ ತೃಷೆಯ ಬಗ್ಗೆ ಅರಿವಿದ್ದ ನೂಜೋಲ್ತಡ್ಕದ ಶಿಲ್ಪಿ ಇಲ್ಲಿ ಒಂದು ಬಾರ್ ಓಪನ್ ಮಾಡಲು ರಾಕ್ಷಸ ಕ್ರೀಯೆ, ದೇವಕ್ರೀಯೆ ಎರಡರಲ್ಲೂ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಂದೇ ಗ್ರಾಮದಲ್ಲಿ ಮೂರು ಬಾರ್, ಒಂದೇ ಜಂಕ್ಷನ್ ನಲ್ಲಿ ಮೂರು ಬಾರ್. ಬರೆಪ್ಪಾಡಿಯನ್ನು ಗೋವಾ ಮಾಡಲು ಹೊರಟಿರುವ ಅಬಕಾರಿ ಇಲಾಖೆಗೆ ಒಂದು ದೊಡ್ಡ ಸೈಜಿನ ಧಿಕ್ಕಾರವಿರಲಿ. ಅದರಲ್ಲೂ ವಿಶೇಷವೇನೆಂದರೆ ಮೊದಲನೇ ಬಾರ್ ಕುದ್ಮಾರು ಶಾಲೆಯ ಎದುರೇ ಓಪನ್ ಆದರೆ ಮೂರನೇ ಬಾರ್ ಕುದ್ಮಾರು ಅಂಗನವಾಡಿಯ ಎದುರೇ ಓಪನ್ ಆಗಲಿದೆ. ಕುದ್ಮಾರು ಅಂಗನವಾಡಿ ಮುಂದೆ ಓಪನ್ ಆಗಲಿರುವ ಬಾರ್ ನ ವಿಶೇಷತೆ ಏನೆಂದರೆ ಇಲ್ಲಿ ಒಂದು ಪಂಪೂ ಇದ್ದೂ ಇಲ್ಲೇ ಗಾಡಿಗೂ ಇಂಧನ ಹಾಕಬಹುದು ನಮಗೂ ಹಾಕಿಕೊಳ್ಳಬಹುದು. ಅಂಥದ್ದೊಂದು ವ್ಯವಸ್ಥೆ ನೂಜೋಲ್ತಡ್ಕದ ಶಿಲ್ಪಿಯಿಂದ ಆದರೆ ಕುದ್ಮಾರು ಗ್ರಾಮ ಧನ್ಯ ಧನ್ಯ.
Post a Comment