ಈ ಸರ್ಕಾರಗಳೇ ಹೀಗೆ. ಏನೋ ಸಾಧಿಸ ಬೇಕೆಂದು ಏನೇನೋ ಶುರು ಮಾಡಿಬಿಡುತ್ತದೆ. ಆಮೇಲೆ ನಂಬಿದವರನ್ನು ನಡು ನೀರಿನಲ್ಲಿ ಕೈ ಬಿಡುವುದು ಸರ್ಕಾರಗಳ ಚಾಳಿ. ಇದೀಗ ಎರಡು ವರ್ಷಗಳ ಹಿಂದೆ ಸರ್ಕಾರವೇ ಶುರು ಮಾಡಿದ್ದ ಕಟ್ಟಡ ಕಾರ್ಮಿಕರ ಮಕ್ಕಳ ಅಂಗನವಾಡಿಗಳಿಗೆ ಸರ್ಕಾರವೇ ಈಗ ಬೀಗ ರೆಡಿ ಮಾಡಿದೆ. ಈಗ ಒಮ್ಮಿಂದೊಮ್ಮೆಲೆ ಬೀಗ ಹಾಕ್ತೇವೆ ಅಂದರೆ ಅಂಗನವಾಡಿ ಕಾರ್ಯಕರ್ತೆಯರು ಎಲ್ಲಿಗೆ ಹೋಗ ಬೇಕು, ಪುಟ್ಟಪುಟ್ಟ ಮಕ್ಕಳು ಎಲ್ಲಿಗೆ ಹೋಗಬೇಕು?
ಇದೆಲ್ಲ ಶುರುವಾಗಿದ್ದು ಎರಡು ವರ್ಷಗಳ ಹಿಂದೆ. ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅಂಗನವಾಡಿ ಪ್ರಾರಂಭಿಸಲು ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದಿತ್ತು. ಅದರಂತೆ ಆ ಯೋಜನೆಗೆ CRECHE ಎಂದು ಹೆಸರಿಟ್ಟು ತೊಟ್ಟಿಲಲ್ಲಿ ಹಾಕಿ ಜೋಯಿ ಹಾಡಲಾಗಿತ್ತು. ಕಟ್ಟಡ ಕಾರ್ಮಿಕರ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದಿದ್ದರು. ಆದರೆ ಇದೀಗ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಲು ತೀರ್ಮಾನಿಸಿದೆ. ಇದಕ್ಕೆ ಸರ್ಕಾರ ಏನು ಕಾರಣ ಕೊಟ್ಟಿದೆ ಅಂದರೆ ಪ್ರತಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ವಿಹಾರಗಳು ಇರುವ ಕಾರಣ ಸಚಿವ ಶ್ರೀ ಸಂತೋಷ್ ಲಾಡ್ ಸಾಹೇಬ್ರಿಗೆ CRECHE ಯೋಜನೆಯನ್ನು ಮುಂದುವರೆಸಲು ಇಷ್ಟವಿಲ್ಲದ ಕಾರಣ ಈ ತಿಂಗಳ ಕೊನೆಯಲ್ಲಿ ಎಲ್ಲಾ CRECHEಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಹಾಗಾದರೆ ಈ ಶಿಶು ವಿಹಾರಗಳ ಮಕ್ಕಳನ್ನು ಪುನಃ ಬೇರೆ ಬೇರೆ ಅಂಗನವಾಡಿಗಳಿಗೆ ಸೇರಿಸಬೇಕು. ಇಲ್ಲಿ ಮಕ್ಕಳ ಸಮಸ್ಯೆ ದೊಡ್ಡದಲ್ಲ. ಅವರನ್ನು ಬೇರೆ ಬೇರೆ ಅಂಗನವಾಡಿ ಗಳಿಗೆ ಸೇರಿಸಬಹುದು. ಆದರೆ ಈ CRECHEಯಲ್ಲಿ ಕೆಲಸ ಮಾಡುತ್ತಿದ್ದ ಟೀಚರ್ಸ್ ಮತ್ತು ಹೆಲ್ಪರ್ ಗಳ ಗತಿ ಏನು. ಅವರೆಲ್ಲ ಈ ಸರ್ಕಾರವನ್ನು ನಂಬಿ ಇದ್ದ ಕೆಲಸ ಕೈ ಬಿಟ್ಟು ಇದಕ್ಕೆ ಸೇರಿ ಈಗ ಅದೂ ಇಲ್ಲ ಇದೂ ಇಲ್ಲ ಎಂಬ ಪರಿಸ್ಥಿತಿಗೆ ಮುಟ್ಟಿದ್ದಾರೆ. ಆದ್ದರಿಂದ ಸರ್ಕಾರ ಈ ಕಾರ್ಯಕರ್ತೆಯರನ್ನು ಅರ್ಧ ನೀರಲ್ಲಿ ಕೈ ಬಿಟ್ಟ ಕಾರಣ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯೋಚಿಸ ಬೇಕಾಗಿದೆ.
Post a Comment