2

                                   


      ಸುಳ್ಯದಲ್ಲಿ ಭಾರೀ ಪ್ರತಿಭಟನೆ ಗಡ. ಗಡಗಡ ಅಂತ ಧರ್ಮಸ್ಥಳ ಅಲುಗಾಡಿದೆ. ಧರ್ಮಸ್ಥಳದ ಕತೆ ಮುಗಿಯಿತು ಎಂದೇ ಹೇಳುತ್ತಿದ್ದಾರೆ. ಅಧರ್ಮದ ವಿರುದ್ಧದ ಹೋರಾ ಟದಲ್ಲಿ ನಮಗೆಲ್ಲ ಏನು ಹುರುಪು, ಏನು ಘೋಷಣೆಗಳು, ಕೇಸರಿ ಶಾಲು ಹಾಕೊಂಡು ಬಂದಿದ್ದೇನು, ಸುಳ್ಯವೇ ನಡುಗಿ ಹೋಗುವಂತೆ ಬೊಬ್ಬೆ ಹಾಕಿದ್ದೇನು, ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ್ದೇನು, ಅಣ್ಣಪ್ಪನ ಗುಡಿಯನ್ನು, ಮಂಜು ನಾಥನ ಆಲಯವನ್ನು ಜೆಸಿಬಿಯಲ್ಲಿ ಒಡೆದು ಹಾಕಬೇಕು ಎಂದು ಕರೆ ಕೊಟ್ಟವರನ್ನು ಸ್ವಾಗತಿಸಿದ್ದು ಏನು, ಅವರಿಗೆ ಶಾಲು ಶಾಲು ಹೊದೆಸಿದ್ದೇನು, ಅವರ ಹಣೆಗೆ ಕೆಂಪು ಕೆಂಪು ಕೆಂಪು ತಿಲಕ ಇಟ್ಟದ್ದೇನು, ಛೇ ಸುಳ್ಯ ಪ್ರತಿಭಟನೆ ದೊಡ್ಡ ಸಕ್ಸಸ್. ಇನ್ನು ಸುಳ್ಯದಲ್ಲಿ ಓಟಿಗೆ ನಿಲ್ಲಬಹುದು ಅಷ್ಟು ದೊಡ್ಡ ಸಕ್ಸಸ್. ಅಧರ್ಮದ ವಿರುದ್ಧದ ಸುಳ್ಯದ ಮಹಾ ಜನತೆಯ ಹೋರಾಟ ನಿಜವಾಗಿಯೂ ಶ್ಲಾಘನೀಯ. ಅಧರ್ಮದ ವಿರುದ್ಧ ಹೋರಾಟ ಅಂದರೆ ಧರ್ಮ ಯಾವುದಯ್ಯ?



    ಹಾಗೆಂದು ನಾವು ಕೊಲೆಯಾಗಿ ಹೋದ ಹುಡುಗಿಯ ಪರ ನ್ಯಾಯಕ್ಕಾಗಿ ಹೋರಾಟ ಎಂದು ಎಷ್ಟು ಹೇಳಿಕೊಂಡರೂ ಆ ಮಾತುಗಳು  ಕೇವಲ ಉತ್ಸವ ಮೂರ್ತಿ ಅಷ್ಟೇ. ನಮ್ಮ ಗರ್ಭಗುಡಿಯೊಳಗೆ ಮಂಜುನಾಥನ  ಆಲಯ ಬಂದು ಕೂತಿದೆ. ಅದು ಕಳೆದ ಹನ್ನೊಂದು ವರ್ಷಗಳಿಂದ ಕೊತ ಕೊತ ಅಂತ ಕುದಿಯುತಿದೆ. ಹಿಂದೂ ದೇವಸ್ಥಾನದಲ್ಲಿ ಜೈನರಿಗೇನು ಕೆಲಸ, ಅದನ್ನು ಅವರಿಂದ ವಶಪಡಿಸಿಕೊಳ್ಳಬೇಕು, ಆ ಮೂಲಕ ಧರ್ಮ ರಕ್ಷಣೆ ಮಾಡ ಬೇಕೆಂಬುದು ನಮ್ಮ ಹೆಬ್ಬಯಕೆ. ಅದಕ್ಕೆ ಕೊಲೆಯಾದ ಹುಡುಗಿಯ ನೆಪ. ಆ ಮೂಲಕವಾದರೂ ಧರ್ಮಸ್ಥಳದಲ್ಲಿ ಮೀಸೆ ನುಗ್ಗಿಸಲು ಶತ ಪ್ರಯತ್ನ ನಮ್ಮದು. ಅಂಥ ಆಸೆಗಳನ್ನೆಲ್ಲ ಇಟ್ಟು ಕೊಂಡರೆ ನಮ್ಮಷ್ಟು ಮೂರ್ಖರು ಯಾರಿಲ್ಲ.  ಯಾಕೆಂದರೆ ಧರ್ಮ ರಕ್ಷಣೆಗಾಗಿ, ದಾನ ಧರ್ಮ ಗಳಲ್ಲಿ ಧರ್ಮಸ್ಥಳ ಮಾಡಿದಷ್ಟು ಕೆಲಸ ಈ ಭರತ ಖಂಡದಲ್ಲಿ ಬಹುಷಃ ಬೇರೆ ಯಾರೂ ಮಾಡಿರಲಿಕ್ಕಿಲ್ಲ. ಧರ್ಮಸ್ಥಳದ ದಾನ ಧರ್ಮದ, ಧರ್ಮ ರಕ್ಷಣೆಯ ಕತೆ ಇಂದು ನಿನ್ನೆಯದಲ್ಲ. ಅದಕ್ಕೆ ಎಂಟು ನೂರು ವರ್ಷಗಳ ಇತಿಹಾಸವಿದೆ. ಹಾಗೆ ಧರ್ಮಸ್ಥಳದಲ್ಲಿ ಧರ್ಮ ನೆಲೆಯಾಗಿದ್ದ ಕಾರಣದಿಂದಲೇ ಅಣ್ಣಪ್ಪ ಮಂಜುನಾಥನನ್ನು ಹೊತ್ತು ಕ್ಕೊಂಡು ಧರ್ಮಸ್ಥಳಕ್ಕೆ ಹೋದದ್ದು. ಸುಳ್ಯಕ್ಕೆ ಯಾಕೆ ಬರಲಿಲ್ಲ? ಇದೀಗ ನಾವು ಸುಳ್ಯದವರು ಧರ್ಮಸ್ಥಳದವರಿಗೆ ಧರ್ಮ ಬೋಧಿಸಲು ಹೊರಟಿದ್ದೇವೆ. ಅದೂ ಯಾರೊಟ್ಟಿಗೆ? ಅಣ್ಣಪ್ಪನ ಗುಡಿಯನ್ನು ಮತ್ತು ಮಂಜುನಾಥನ ಆಲಯವನ್ನು ಜೆಸಿಬಿಯಲ್ಲಿ ಒಡೆದು ಹಾಕಬೇಕು ಅನ್ನುವವರ ಒಟ್ಟಿಗೆ. ಧರ್ಮ ಯಾವುದಯ್ಯ?
   ಇದೀಗ ನಾವು ನೀವು ಧರ್ಮ ರಕ್ಷಣೆಗಾಗಿ ಅಧರ್ಮದ ವಿರುದ್ಧ ಹೋರಾಟ ಮಾಡುತ್ತಾ ಬೀದಿ ಬೀದಿಗಳಲ್ಲಿ ಮರ್ಲ ರಂತೆ ಅಲೆದಾಡುತ್ತಿದ್ದೇವೆ. ಧರ್ಮಸ್ಥಳದಲ್ಲಿ ಅಧರ್ಮ ನಡೆಯುತ್ತಿದೆ ಎಂದು ನಾವು ನೀವು ಮೊನ್ನೆ ಸುಳ್ಯದಲ್ಲಿ ಪ್ರತಿ ಭಟನೆ ಮಾಡಿದ್ದೇವಲ್ಲ, ಅಧರ್ಮ ನಡೆಯುತ್ತಿದೆ ಎಂಬ ಸ್ಥಳದಿಂದ ಸುಳ್ಯಕ್ಕೆ ಧರ್ಮ ರಕ್ಷಣೆಗಾಗಿ ದಾನ ಧರ್ಮದ ರೂಪದಲ್ಲಿ ಬಂದ ದುಡ್ಡಿನ ಲಿಸ್ಟ್ ಕೆಳಗೆ ಹಾಕಿದ್ದೇನೆ. ಓದ್ಕೊಳ್ಳಿ


   ಲಿಸ್ಟ್ ನೋಡಿದ್ರಾ? ನಾಲ್ಕು ಕೋಟಿ ಹತ್ರ ಹತ್ರ ಸುಳ್ಯಕ್ಕೆ ಮಂಜುನಾಥನ ಹೆಸರಿನಲ್ಲಿ ನಾವೀಗ ಯಾರ ವಿರುದ್ಧ ಹೋರಾಟ ಮಾಡುತ್ತಿದ್ದೇವೆಯೋ ಅವರು ಧರ್ಮ ರಕ್ಷಣೆಗಾಗಿ ಕಳಿಸಿ ಕೊಟ್ಟಿದ್ದಾರೆ. ನಾವೀಗ ಯಾವ‌ ದೇವಾಲಯವನ್ನು ಜೆಸಿಬಿ ತಂದು ಒಡೆಯ ಬೇಕು ಅಂತ ಹೇಳಿದವರ ಜೊತೆ ಮೆರವಣಿಗೆ ಹೋಗುತ್ತಿದ್ದೇವಲ್ಲ ಅದೇ ದೇವಸ್ಥಾನದ ದುಡ್ಡು. ಮಂಜುನಾಥನ ಕಾಣಿಕೆ ಡಬ್ಬಿಯಿಂದ ಮುಂಡಾಸು ಧಾರಿ, ಮುಂಡಾಸು ಧಾರಿ ಎಂದು ನಾವು ನಾವು ನೀವು ಘೋಷಣೆ ಕೂಗುತ್ತಾ ಮರ್ಲ ರಂತೆ ಬೀದಿ ಬೀದಿಗಳಲ್ಲಿ ಅಲೆಯು ತ್ತಿದ್ದೇವಲ್ಲ‌ ಅದೇ ಮುಂಡಾಸು ಧಾರಿ ಸುಳ್ಯ ತಾಲೂಕಿನಲ್ಲಿ ಧರ್ಮ ರಕ್ಷಣೆಗಾಗಿ ಕೊಟ್ಟದ್ದು ಈ ದುಡ್ಡು. ಇಷ್ಟು ಮಾತ್ರವಲ್ಲ. ಅಲ್ಲಿ ಸುಳ್ಯ ಚೆನ್ನಕೇಶವನ ದೇವಾಲಯದ ಮುಂದೆ ಎರಡು ಎಕರೆ ಜಾಗವನ್ನೂ ಅದೇ ನಾವು ನೀವು ಹೇಳುವ ಅಧರ್ಮ ನಡೆಸುವ ಧರ್ಮಸ್ಥಳದವರು ದೇವ ಸ್ಥಾನಕ್ಕೆ ಬಿಟ್ಟು ಕೊಟ್ಟಿದ್ದಾರೆ. ಮಂಜುನಾಥನ ಜಾಗ ಚೆನ್ನಕೇಶವನಿಗಿರಲಿ ಅಂತ. ಇಲ್ಲಿ ಒಂದು ಸೆಂಟ್ಸ್ ಜಾಗಕ್ಕೆ ಮಾರುಕಟ್ಟೆ  ಬೆಲೆ ಐದು ಲಕ್ಷ ಇದೆ. ಈಗ ಲೆಕ್ಕ ಮಾಡಿ. ಎರಡು ಎಕರೆಗೆ ಎಷ್ಟಾಗುತ್ತೆ? ಬಹುಶಃ ಹತ್ತು ಕೋಟಿ. ನಾವು ಆಗ ಲೆಕ್ಕ ಹಾಕಿದ್ದು ನಾಲ್ಕು ಕೋಟಿ. ಜಾಗದ್ದು ಹತ್ತು ಕೋಟಿ. ಒಟ್ಟು ಹದಿನಾಲ್ಕು ಕೋಟಿ.  ಸಾಕಾ? ಧರ್ಮ ಯಾವುದಯ್ಯಾ?
   ನಮ್ಮ ದುಡ್ಡು. ಮಾತೆತ್ತಿದರೆ ನಮ್ಮ ದುಡ್ಡು, ನಮ್ಮ ದುಡ್ಡು. ಎಲ್ಲಿದೆ ನಮ್ಮ ದುಡ್ಡು? ದೇವರು ಮತ್ತು ಭಿಕ್ಷುಕರಿಗೆ ಮಾತ್ರ ಚಿಲ್ಲರೆ ಹುಡುಕಿ ಹಾಕುವ ನಾವು ಧರ್ಮಸ್ಥಳದವರ ದುಡ್ಡು ನಮ್ಮದು ಎಂದು ಕೊಚ್ಚಿಕೊಳ್ಳುತ್ತೆವೆ. ಧರ್ಮಸ್ಥಳಕ್ಕೆ ನಾವು ಹಾಕಿದ ದುಡ್ಡಿನಲ್ಲಿ ಧರ್ಮ ಕಾರ್ಯಗಳು ನಡೆಯುತ್ತವೆ ಎಂದು ‌ಬೊಗಳುತ್ತೇವೆ. ನಮ್ಮ ದುಡ್ಡನ್ನೇ ನಮಗೆ ಕೊಡೋದು ಎಂದೂ ಹೇಳುತ್ತೇವೆ. ನಿಮ್ಗೆ ಉಡುಪಿ ಅಷ್ಟ ಮಠಗಳು ಗೊತ್ತಾ? ಅದು ಕೂಡ ಧರ್ಮಸ್ಥಳದ ಹಾಗೇ ಖಾಸಗೀ ದೇವಸ್ಥಾನ. ಧರ್ಮಸ್ಥಳ ಹೇಗಿದ್ದರೂ ಜೈನರದ್ದು, ಅಲ್ಲಿ ನಮ್ಮ ಹಿಂದೂಗಳ ದುಡ್ಡೇ ಇರೋದು ಎಂದು ನಾವು ಮಾರ್ಗದ  ಬದಿಯಲ್ಲಿ, ಗಡಂಗಿನಲ್ಲಿ ಕುಂತು ಧರ್ಮ ಸ್ಥಳವನ್ನು ದೂರುತ್ತೇವಲ್ಲ ನೀವೋಮ್ಮೆ ನಿಮ್ಮ ಊರಿನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಉಡುಪಿ ಮಠ ಗಳಿಗೆ ಕಲೆಕ್ಷನ್ ಮಾಡಲು ಹೋಗಿ. ಹೋಗಿ ನೋಡಿ. ಪಂಚ ಕಜ್ಜಾಯ ಕೊಟ್ಟು ಕಳುಹಿಸುತ್ತಾರೆ ನಿಮ್ಮನ್ನು. ಧರ್ಮ ರಕ್ಷ ಣೆಗಾಗಿ ಧರ್ಮಸ್ಥಳಕ್ಕೆ ಹೋದವನು ಯಾರೇ ಆಗಿರಲಿ ಅವನು ಬರೀ ಕೈಯಲ್ಲಿ ಹಿಂತಿರುಗಿದ ಉದಾಹರಣೆಗಳಿಲ್ಲ.
   ಬನ್ನಿ ಧರ್ಮಸ್ಥಳಕ್ಕೆ, ಊಟ ಮಾಡಿ ಹೋಗುವಿರಂತೆ.










Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget