ಹಾಗೆಂದು ಕಡಬ ಎಂಬ ಪೊಸ ತಾಲೂಕಿಗೆ ಇನ್ನೂ ಕೆಲವು ಅಂಗಗಳು ಹುಟ್ಟಿಲ್ಲ, ಇದ್ದ ಕಾರ್ಯಾಂಗದ ಅಂಗಗಳೇ ಸರಿ ಇಲ್ಲದೆ ಅಂಗವೈಕಲ್ಯ ಶಾಶ್ವತವಾಗಿ ಬಿಡುವ ಅಪಾಯಗಳಿವೆ. ಮೊದಲಿಗೆ ಆ ಪಟ್ಟಣ ಪಂಚಾಯಿತಿಯನ್ನೇ ತಗೊಳ್ಳಿ. ಅದೊಂದು ಮುಂಡವಿಲ್ಲದ ರುಂಡದಂತಿದೆ. ಯಾಕೆಂದರೆ ಅದಕ್ಕೆ ಬಾಡಿಯೇ ಇಲ್ಲ. ರುಂಡವಿದ್ದರೂ ಅದಕ್ಕೆ ಕಿವಿ ಕೇಳಲ್ಲ, ಕಣ್ಣು ಕಾಣಲ್ಲ. ಪಂಚಾಯಿತಿಗೆ ಬಾಡಿ ಇಲ್ಲದಿದ್ರೂ ಬಕಾಸುರನ ಹಸಿವಿದೆ. ನಾಲಿಗೆ ಇಲ್ಲದಿದ್ದರೂ ದುಡ್ಡಿನ ರುಚಿ ಗೊತ್ತಿದೆ.ಚಡ್ಡಿಯಲ್ಲಿದ್ದ ಗ್ರಾಮ ಪಂಚಾಯಿತಿಗೆ ಪ್ಯಾಂಟು ಸಿಕ್ಕಿಸಿ ಪ್ರಮೋಷನ್ ಕೊಟ್ಟಿದ್ದು ಬಿಟ್ಟರೆ ಇದು ಹೊಸ ಕುಪ್ಪಿಯಲ್ಲಿ ಹಳೇ ಗಂಗಸರ ಕೊಟ್ಟಂತಾಗಿದೆ. ಕೆಲಸ ಕಾರ್ಯಗಳು ಕಸದ ಬುಟ್ಟಿಯಲ್ಲಿದೆ. ಟೋಟಲಿಯಾಗಿ ಹೇಳುವುದಾದರೆ ಕಡಬ ಪಟ್ಟಣ ಪಂಚಾಯಿತಿ ICUನಲ್ಲಿದೆ. ಪೊಸ ಸರ್ಕಾರ ಬಂದರೂ ಇದರದ್ದು ಮಾತ್ರ ಅದೇ ರಾಗ ಅದೇ ಹಾಡು.
ಇನ್ನು ಕಡಬದ ಅನಾರೋಗ್ಯ ಕೇಂದ್ರದ ಕತೆ ಬರೆದೂ ಬರೆದೂ ನಮಗೇ ವಿಕ್ ನೆಸ್ ಶುರುವಾಗಿದೆ ಮಾರಾಯ್ರೆ. ಇಲ್ಲಿ ಎಲ್ಲವೂ ಇದೆ ಆದರೆ ಡಾಕ್ಟ್ರೇ ಇಲ್ಲ. ಕಡಬದಂತಹ ತಾಲೂಕ ಹೆಡ್ ಕ್ವಾರ್ಟರ್ಸ್ ನಲ್ಲಿ ಕಡೇ ಪಕ್ಷ ಬಿಪಿ ಡೌನಾದರೂ ಮರಕಟ್ಟುವ ಪರಿಸ್ಥಿತಿ ಇದೆ. ಇನ್ನು ಅನಾರೋಗ್ಯ ಕೇಂದ್ರದ ಸಿಬ್ಬಂದಿಗಳೆಲ್ಲರೂ IAS ಪಾಸು ಮಾಡಿ ಬಂದವರೇ. Dc ಮುಲೈ ಮುಗಿಲನ್ ಹತ್ತಿರವಾರೂ ದಾನೆ ಎಡ್ಡೆ ಮಾತಾಡಬಹುದು ಅದರೆ ಕಡಬ ಅನಾರೋಗ್ಯ ಕೇಂದ್ರದ ಸಿಬ್ಬಂದಿಗಳ ಹತ್ತಿರ ಮಾತ್ರ ನೀವು ಸಾ...ಸೂ..ಅನ್ನಂಗಿಲ್ಲ. ಅವರು ಯಾವಾಗಲೂ ಮುಡಿ ಹೊತ್ತುಕೊಂಡೇ ಇರ್ತಾರೆ. ಧರ್ಮಕ್ಕೆ ಕೆಲಸ ಮಾಡುವವರ ಹಾಗೆ. ಇದ್ದ ಸಿಬ್ಬಂದಿಗಳಲ್ಲಿ ನರ್ಸ್ ಲತಕ್ಕಳ ಬಗ್ಗೆ ಮಾತ್ರ ಸಾರ್ವಜನಿಕರಲ್ಲಿ ಒಳ್ಳೆ ಅಭಿಪ್ರಾಯಗಳಿವೆ. ಅವರ ನಗುಮುಖದ ಸೇವೆಂಯಿಂದಾಗಿಯೇ ಅನಾರೋಗ್ಯ ಕೇಂದ್ರಕ್ಕೆ ಬೋಣಿಯಾದರೂ ಆಗುತ್ತಿದೆ ಅವರಿಲ್ಲದಿರುತ್ತಿದ್ದರೆ ಕೇಂದ್ರಕ್ಕೆ ಪೇಶೆಂಟ್ ಗಳ ಕುಲೆಯೂ ಹೋಗಲಿಕ್ಕಿಲ್ಲ ಎಂಬ ಮಾತು ಕಡಬದಲ್ಲಿ ಚಾಲ್ತಿಯಲ್ಲಿದೆ.
ಇನ್ನು ಕಡಬದಲ್ಲಿ ಕರೆಂಟ್ ಕಜೆಂಟ್ ಆಗಿದೆ. ಆಚೆ ಸುಬ್ರಹ್ಮಣ್ಯದಲ್ಲಿ ಒಂದು ಬೊಳ್ಳುಳ್ಳಿ ಪಟಾಕಿ ಢಂ ಅಂದರೂ ಲೈನ್ ಮೆನ್ ಗಳು ಓಡಿ ಹೋಗಿ ಫ್ಯೂಸು ತೆಗೆದು ಅಡಗಿಸಿಡುತ್ತಾರೆ. ಇನ್ನು ಕಡಬದಲ್ಲಿ ಲೈನ್ ರಿಪೇರಿ ಈ ಜನ್ಮದಲ್ಲಿ ಮುಗಿಯಲ್ಲ. ಲೈನ್ ರಿಪೇರಿ ಇದ್ದರಂತೂ ಕರೆಂಟ್ ನ ಫೋಟೋ ಕೂಡ ಸಿಗಲ್ಲ. ಬೆಳಿಗ್ಗೆ ಎದ್ದು ಒಟ್ಟೆ ದೋಸೆ ತಿಂದು ಸಾಯೋಣ ಎಂದು ಅಕ್ಕಿ ಕಡಿಲಿಕ್ಕೆ ಗ್ರೈಂಡರ್ ಗೆ ಹಾಕಿ ಎರಡು ಸುತ್ತು ತಿರ್ಗಿದ ಕೂಡಲೇ ಕರೆಂಟ್ ಚುಂಯ್ಕ ಎಂದು ಹೋಗಿ ಬಿಡುತ್ತದೆ. ಸುಮಾರು ಪೊರ್ತು ಸುದ್ದಿ.. ಇಜ್ಜಿ. ಇನ್ನು ಕರೆಂಟ್ ಬರಲ್ಲ ಎಂದು ಗ್ರೈಂಡರ್ ನಿಂದ ಅಕ್ಕಿ ತೆಗೆದು ಕಡೆಪ್ಪಲಿಗೆ ಹಾಕಿ ಡ್ರೈವಿಂಗ್ ಸೀಟಿನಲ್ಲಿ ಕೂತು ಎರಡು ಸುತ್ತು ತಿರ್ಗಿದ ಕೂಡಲೇ ಕರೆಂಟ್ ಫಳ್ಳೆಂದು ಬರುತ್ತದೆ. ಕರೆಂಟ್ ಬಂತೆಂದು ಪುನಃ ಕಡೆಪ್ಪಲಿನಿಂದ ಅಕ್ಕಿ ತೆಗೆದು ಗ್ರೈಂಡರ್ ಗೆ ಹಾಕಿದರೆ ಪುನಃ ಕರೆಂಟ್ ಚುಂಯ್ಕ. ಹಾಗೇ ಇಲ್ಲಿ ತನಕ ಕಡಬದ ಜನರನ್ನು ಕಡೆಪ್ಪಲಿನಿಂದ ಗ್ರೈಂಡರ್ ಗೆ, ಗ್ರೈಂಡರ್ ನಿಂದ ಕಡೆಪ್ಪಲಿಗೆ ಹಾಕುತ್ತಾ ಕೆಇಬಿ ವಂಚಿಸುತ್ತಾ ಬಂದಿದೆ. ದೋಸೆಯೂ ಇಲ್ಲ, ಅಕ್ಕಿ ಬಂದವೂ ಇಲ್ಲ. ಕುಂತಿ ಮಕ್ಕಳಿಗೆ ವನವಾಸವೇ ಗತಿ.
ಬಹಳ ಹಿಂದೆ ಟೆಲಿಫೋನ್ ಇಲಾಖೆ ಅಂತ ಒಂದಿತ್ತು. ಅವರು ಕಂಬ ಹಾಕಿ ಅದರಲ್ಲಿ ತಂತಿ ಎಳೆದು ಫೋನ್ ಸಂಪರ್ಕ ಮನೆ ಮನೆಗೆ ಕೊಡುತ್ತಿದ್ದರು. ಅಬ್ಬಬ್ಬಾ ದೇವ್ರೇ ಅವರ ಕತೆ ನೋಡ ಬೇಕಿತ್ತು ನೀವು. ಒಂದು ಬೈಹುಲ್ಲಿನ ಲಾರಿ ಅವರ ಕಂಬದಡಿಯಲ್ಲಿ ಪಾಸಾದರೆ ಒಂದು ವಾರ ಫೋನಿಲ್ಲ. ಲೈನ್ ಆಚೆ ಬರ್ಲಿಕ್ಕೆ ಇದ್ದರೆ ಮಾತ್ರ ಬರೋದು, ಲೈನ್ ಸರಿ ಆಗೋದು. ಇಲ್ಲದಿದ್ದರೆ ಇಲ್ಲ. ನೀವೇ ಹೋಗಿ ಅವನನ್ನು ಬ್ಯಾಂಡು ವಾಲಗದಲ್ಲಿ ಕರೆತರಬೇಕು. ಯಾವಾಗ ಮೊಬೈಲ್ ಫೋನ್ ಸಂಪರ್ಕ ಬಂತೋ ಅಂದಿನಿಂದ ಇವರ ಕತೆ ಕ್ಲೋಸ್ ಆಗಿತ್ತು. ಹಾಗೆ ಕರೆಂಟ್ ಗೆ ಕೂಡ ಏನಾದರೂ ಪರ್ಯಾಯ ಬಂದು ಅವರು ನೊಣ ಹೊಡೆಯುವುದನ್ನು ನೋಡಲು ಅದೆಷ್ಟೋ ಜನ ಕಾಯುತ್ತಿದ್ದಾರೆ. ಅಲ್ಲ ಮಾರಾಯ್ರೆ ಈ ದೇಸಕ್ಕೆ ಸ್ವತಂತ್ರ ಬಂದು ಎಷ್ಟು ವರ್ಷ ಆಯ್ತು ಎಂದು ಈ ಕೆಇಬಿಯವರಿಗೆ ಒಮ್ಮೆ ಮನವರಿಕೆಯಾದರೂ ಮಾಡಿಕೊಡಬೇಕು. ಸ್ವತಂತ್ರ ಬಂದು ಇಷ್ಟು ವರ್ಷಗಳಾದರೂ ಒಂದು ಇಪ್ಪತ್ತನಾಲ್ಕು ಗಂಟೆ ಬಿಡಿ, ಕಡೇ ಪಕ್ಷ ಹತ್ತು ಗಂಟೆಯಾದರೂ ನಿರಂತರ ಕರೆಂಟ್ ಕೊಡುವ ಯೋಗ್ಯತೆ ಇಲ್ಲದ ಇಲಾಖೆ ಇದ್ದೂ ಇಲ್ಲದಂತಾಗಿದೆ. ಈ ಇಲಾಖೆಯ ಮುಖ್ಯ ಕೆಲಸವೇ ಕರೆಂಟ್ ಕಟ್ ಮಾಡೋದು. ಕಡಬದಂತಹ ಪೇಟೆಯಲ್ಲಿ ಕರೆಂಟ್ ಇಲ್ಲ ಅಂದ್ರೆ ಏರ್ಲ ದಾನೆ ಪನ್ವೆರ್? ನೈಟ್ ತೆಗೆಯೋದು ಹಗಲು ಹಾಕೋದು, ನೈಟ್ ಹನ್ನೆರಡು ಗಂಟೆಗೆ ಭೂತ, ಕುಲೆ, ಪೀಡೆ ಪಿಚಾಚಿಗಳಿಗೆ ಕರೆಂಟ್ ಹಾಕೋದು, ತ್ರೀ ಫೇಸ್ ಬೇಕಾದಾಗ ಸಿಂಗಲ್ ಕೊಡೋದು, ವೋಲ್ಟೇಜ್ ಡೌನ್ ಮಾಡಿ ಲೈನ್ ಕೊಡೋದು ಇತ್ಯಾದಿ ಇತ್ಯಾದಿ. ಈ ಕರೆಂಟ್ ಇಲಾಖೆ ಮಾಡುವ ಬೇಜವಾಬ್ದಾರಿ ಕೆಲಸಗಳಿಂದ ಕಡಬದ ಜನ ರೋಸಿ ಹೋಗಿದ್ದಾರೆ. ಈ ಬಗ್ಗೆ ಹೇಳುವವರು ಯಾರು ಕೇಳುವವರು ಯಾರು? ಕಡಬದ ಲೀಡರ್ ಗಳಿಗೆ ಮಾತಾಡಲೂ ವಿಪರೀತ ಸೆಖೆ. ಇದ್ದೊಬ್ಬ ವರ್ಗೀಸ್ ಪೊರ್ಬುಲು ಯಾವುದಕ್ಕೆಲ್ಲ ಮಾತಾಡಲಿ, ಯಾವುದಕ್ಕೆಲ್ಲ ಹೋರಾಡಲಿ? ಇನ್ನು ದೇಸಭಕ್ತರಿಗೆ ಕರೆಂಟೆಲ್ಲ ಬೇಡ. ಚಿಮಿಣಿ ಇದ್ದರೂ ಸಾಕು ಚಾಚಿ ಮಾಡುತ್ತಾರೆ. ಕಡಬಕ್ಕೆ ಕಡಂಬಳಿತ್ತಾಯನೇ ಗತಿ.
Post a Comment