ಹಾಗೆ ಬಾರಿಯ ಮರೆಂಗಾಲ ಮಲೆಯಲ್ಲಿ ಬೆಳೆ ಬೆಳೆಯಲು ಕಾಡು ಕಡಿಯುತ್ತಿದ್ದ ಅಂಜಿಯ, ಬಿರ್ಮು, ಮಂಜಿಯ ಬಿರ್ಮು ಮತ್ತು ದೇವು ನೆರಂಗಿ ಎಂಬವರಿಗೆ ಒಮ್ಮೆಲೇ ಕಾಡು ಕಳ್ಳರ ಹಾವಳಿ ಶುರುವಾದಾಗ ಅವರಿಗೆ ತಮ್ಮ ಬೆಳೆಯ ರಕ್ಷಣೆ ಬಗ್ಗೆ ಆತಂಕ ಶುರುವಾಯಿತು. ಹಾಗೆ ತಮ್ಮ ಬೆಳೆಗೆ ಕಾಡುಗಳ್ಳರಿಂದ ರಕ್ಷಣೆ ಪಡೆಯಲು ಅವರು ಮಲೆ ಇಳಿದು ಸೀದಾ ಪಡಂಗಡಿಯ ಕೋಟ್ಯನ ಬಳೊಳ್ಳಿ ಮನೆಗೆ ಬರುತ್ತಾರೆ. ಅವರು ಬಂದ ವಿಷಯದ ಬಗ್ಗೆ ಸುದೀರ್ಘವಾಗಿ ವಿಚಾರಿಸಿದ ಕೋಟ್ಯನ ಬಳೊಳ್ಳಿ ತಾನು ನಿತ್ಯ ಪೂಜಿಸುತ್ತಿದ್ದ ಆನೆಯಷ್ಷು ದೊಡ್ಡ ದೈವವನ್ನು ಕುಂಬಳ ಕಾಯಿಯಷ್ಟು ಚಿಕ್ಕದು ಮಾಡಿ, ನಂತರ ಅಡಿಕೆಯ ಗಾತ್ರಕ್ಕೆ ತಂದು, ಆಮೇಲೆ ಅಡಿಕೆ ತುಂಡಿನ ಗಾತ್ರಕ್ಕೆ ಇಳಿಸಿ ಅಂಜಿಯ ಬಿರ್ಮು ತಂಡಕ್ಕೆ ಬೆಳೆ ರಕ್ಷಣೆಗೆ ಕೊಡುತ್ತಾನೆ. ಹಾಗೆ ಪಡಂಗಡಿಯ ಕೋಟ್ಯನ ಬಳೊಳ್ಳಿ ಕೊಟ್ಟ ದೈವವನ್ನು ಹಿಡಕ್ಕೊಂಡು ಹೊರಟ ಬಿರ್ಮು ತಂಡ ಆ ದೈವದ ರಕ್ಷಣೆಯಲ್ಲಿ ಅನೇಕ ಮಲೆಗಳನ್ನು ಕಡಿಯುತ್ತಾ, ಬೆಳೆ ಬೆಳೆಯುತ್ತಾ, ಬೆಳೆಯುತ್ತಾ ಒಂದು ದಿನ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಸಾರತ್ತ ಬರ್ಕೆಯ ಜೈನ ಮನೆತನದ ಕಾಬಯ ವಂಶದ ರಾಜ ಕಾಬಯರ ಮನೆಗೆ ಬರುತ್ತಾರೆ. ಜೊತೆಗೆ ಕೋಟ್ಯನ ಬಳೊಳ್ಳಿಯ ಭೂತ ಸಹ. ಹಾಗೆ ಕಾಬಯರ ಮನೆಯಲ್ಲೂ ಕಾಡು ಕಡಿದು, ಬೆಳೆ ಬೆಳೆದು ಬಿರ್ಮು ಗ್ಯಾಂಗ್ ಹೊರಟು ನಿಂತರೆ ಅವರೊಂದಿಗೆ ಬಂದಿದ್ದ ಪಡಂಗಡಿಯ ಕೋಟ್ಯನ ಬಳೊಳ್ಳಿಯ ದೈವ ತಾನು ರಾಜ ಕಾಬಯರ ಮನೆಯಲ್ಲಿಯೇ ನೆಲೆಯಾಗುತ್ತೇನೆಂದು ನುಡಿ ಹೇಳುತ್ತದೆ. ತಮಗೆ ಇಲ್ಲಿ ತನಕ ರಕ್ಷಣೆ ಕೊಟ್ಟ ದೈವದ ಇಚ್ಛೆಗೆ ವಿರುದ್ಧವಾಗಿ ಮಾತಾಡದ ಬಿರ್ಮು ಗ್ಯಾಂಗ್ ದೈವವನ್ನು ರಾಜ ಕಾಬಯರ ಜವಾಬ್ದಾರಿಗೆ ಒಪ್ಪಿಸುತ್ತಾರೆ. ಆವತ್ತಿನಿಂದ ರಾಜ ಕಾಬಯರ ಚಾವಡಿಯಲ್ಲಿ ನೆಲೆಯಾದ ದುಷ್ಟರ ಪಾಲಿನ ಸಿಂಹ ಸ್ವಪ್ನ ದೈವಕ್ಕೆ ಅಂಗರ್ದೊಟ್ಟಿನಾಯ ಎಂಬ ಹೆಸರಾಯಿತು ಮತ್ತು ಅಂಗರ್ದೊಟ್ಟಿನಾಯ ನೆಲೆಯಾದ ಕಾಬಯ ವಂಶದ ರಾಜ ಕಾಬಯರ ಮನೆಗೆ ಅಂಗರ್ದೊಟ್ಟು ಎಂಬ ಹೆಸರು ಬಂತು.
ಹಾಗೆ ಕಾಲ ಚಕ್ರ ಉರುಳಲಾಗಿ ರಾಜ ಕಾಬಯರು ಮರಣ ಹೊಂದುತ್ತಾರೆ. ನಂತರ ಅನೇಕ ಕಾಬಯರು ಅಧಿಕಾರ ನಡೆಸಿದ್ದು ಎಲ್ಲರೂ ಅಂಗರ್ದೊಟ್ಟಿನಾಯನಿಗೆ ಕಾಲ ಕಾಲಕ್ಕೆ ಎಲ್ಲಾ ಕ್ರಮಗಳನ್ನು ಮಾಡುತ್ತಾ ಬಂದರು. ಇಂತಿರ್ಪಲಾಗಿ ಕಾಬಯ ವಂಶದ ಬ್ರಹ್ಮಯ್ಯ ಕಾಬಯರ ಕಾಲದಲ್ಲಿ ಕೇಳ ಮರೋಡಿ ಕಾಶಿಪಟ್ನ ಅರಮನೆಯ ಮಹಾರಾಣಿ ತಂಕರ್ ಪೂಂಜೆದಿ ದಂಡು ಕಟ್ಟಿಕೊಂಡು ಕಾಬಯ ವಂಶದ ಅಂಗರ್ದೊಟ್ಟನ್ನು ಸ್ವಾಧೀನ ಮಾಡಲು ಬಂದಳು. ರಾಣಿಯ ದಂಡು ಅಂಗರ್ದೊಟ್ಟು ಕಂಬಳವನ್ನು ಹಾದು ಬರಬೇಕಾದರೆ ಒಮ್ಮೆಲೇ ಸುಂಟರಗಾಳಿ ಎದ್ದು ರಾಣಿ ಕುಂತಿದ್ದ ದಂಡಿಗೆಗೆ ಕೆಸರು ನೀರು ಚಿಮ್ಮುತ್ತದೆ. ರಾಣಿ ಕೆಸರು ನೀರಿನಲ್ಲಿ ಒದ್ದೆಯಾಗಿ ಬಿಡುತ್ತಾಳೆ. ಸುಂಟರಗಾಳಿ ಮತ್ತೂ ಜೋರಾಗುತ್ತದೆ. ಆ ಗಾಳಿಗೆ ರಾಣಿಯ ದಂಡಿಗೆಯ ಸತ್ತಿಗೆ ಬಿದ್ದು ಹೋಗುತ್ತದೆ. ಗಡಿ ಗಡಿ ಅಪಶಕುನ ಮತ್ತು ಭಯಂಕರ ಸುಂಟರಗಾಳಿಗೆ ಹೆದರಿ ಕೇಳ ಕಾಶಿಪಟ್ನದ ರಾಣಿ ಸ್ವಾಧೀನತೆ ಕೈ ಬಿಟ್ಟು ವಾಪಸ್ ಅರಮನೆಗೆ ಹೊರಟು ಹೋಗುತ್ತಾಳೆ.
ಹಾಗೇ ಅರಮನೆಗೆ ಮರಳಿದ ರಾಣಿಗೆ ಆ ಸುಂಟರಗಾಳಿಯಲ್ಲಿ ಬೇರೇನೋ ಇದೆ ಎಂಬ ಸಂಶಯ ಬರುತ್ತದೆ. ಅದಕ್ಕಾಗಿ ರಾಜ ಗುರುವನ್ನು ಕರೆದು ಪ್ರಶ್ನೆ ಚಿಂತನೆ ನಡೆಸಲಾಗುತ್ತದೆ ಮತ್ತು ಆ ಪ್ರಶ್ನೆಯಲ್ಲಿ ಅಂಗರ್ದೊಟ್ಟಿನಾಯ ಮತ್ತು ಕಾಬಯ ವಂಶದ ಬಗ್ಗೆ ತಿಳಿದು ಬರುತ್ತದೆ. ಈ ಎಲ್ಲಾ ಬೆಳವಣಿಗೆಗಳಿಗೆ ತಪ್ಪು ಕೇಳೋದು ಒಂದೇ ಪರಿಹಾರ ಎಂದು ಕೂಡ ರಾಜ ಗುರುಗಳು ರಾಣಿಗೆ ಸೂಚಿಸುತ್ತಾರೆ. ಹಾಗಾಗಿ ರಾಣಿಯ ದೂತರು ಅಂಗರ್ದೊಟ್ಟಿಗೆ ಬಂದು ರಾಣಿಯ ಸಂದೇಶವನ್ನು ಕಾಬಯರ ಎದುರು ವಾಚಿಸುತ್ತಾರೆ. ಆವತ್ತೇ ರಾತ್ರಿ ಕಾಬಯರ ಕನಸಿನಲ್ಲಿ ಕಾಣಿಸಿಕೊಂಡ ಅಂಗರ್ದೊಟ್ಟಿನಾಯ "ಕೇಳದ ಅರಮನೆಯ ಜನರಿಗೆ ನೀವು ಕೂತುಕೊಂಡು ಮಾತು ಹೇಳುವುದು ಬೇಡ, ನಿಂತುಕೊಂಡು ನೀರು ಹಾಕುವುದು ಬೇಡ" ಎಂದು ಆದೇಶಿಸುತ್ತದೆ.
ಮೊನ್ನೆ ಎಪ್ರಿಲ್ ತಿಂಗಳ 3,4 ರಂದು ಅದೇ ಕಾಬಯ ವಂಶದ ಅಂಗರ್ದೊಟ್ಟು ಮನೆಯಲ್ಲಿ ಅಂಗರ್ದೊಟ್ಟಿನಾಯನಿಗೆ ನೇಮ ನಡಾವಳಿ. ಗೌಜಿಯೋ ಗೌಜಿ. ಊರಿಡೀ ಹಬ್ಬದ ವಾತಾವರಣ, ಗ್ರಾಮದ ತುಂಬಾ ಸಂಭ್ರಮ. ಮುಕ್ಕಾಲು ಮೂರು ಘಳಿಗೆ ಅಂಗರ್ದೊಟ್ಟಿನಾಯ ಕೂಡ ಬಂದು ಖುಷಿ ಪಟ್ಟಿರಬಹುದು.
Post a Comment