June 2024

             


                ಕೊಂಬಾರು ಗ್ರಾಮದ ಕೆಂಜಾಲದಿಂದ ಪ್ರಾರಂಭಗೊಂಡು, ಕೊಲ್ಕಜೆ, ಓಡೋಳಿ, ನಾರಡ್ಕ, ಸುಬ್ರಹ್ಮಣ್ಯ ರೇಲ್ವೆ ಸ್ಟೇಷನ್ ಮೂಲಕ ಹಾದು ನೆಟ್ಟಣವನ್ನು ಸೇರುವ ಈ ಭಾಗದ ಜನರ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಯೂ ದ.ಕ. ಜಿಲ್ಲಾ ಪಂಚಾಯತಿನ ಅಧೀನದಲ್ಲಿ ಬರುವ ರಸ್ತೆಯಾಗಿರುತ್ತದೆ, ಸುಮಾರು ಹದಿನೈದು ವರ್ಷಗಳಿಂದಲೂ ಕೂಡ ಈ ರಸ್ತೆ ತುಂಬಾ ಹದಗೆಟ್ಟಿ ಜನರಿಗೆ ಸಂಚಾರಿಸಲು ಕೂಡ ಪರದಾಡುವಂತಹ ಪರಿಸ್ಥಿತಿ ಇದೆ.



ಮಾತ್ರವಲ್ಲದೆ ಇದೆ ರಸ್ತೆಯ ಮಧ್ಯ ಭಾಗದ ಓಡೋಳಿ ಎಂಬ ಸ್ಥಳದಲ್ಲಿ ರೈಲ್ವೇ ಇಲಾಖೆಯವರು ನಿರ್ಮಿಸಿದ ಓಬಿರಾಯನ ಕಾಲದ ಕಬ್ಬಿಣದ ತಗಡು ಶೀಟ್ ಹಾಸಿ ನಿರ್ಮಿಸಿದ ಒಂದು ಸೇತುವೆ ಇದ್ದು ಈ ಸಂಕದಲ್ಲಿ ಸಂಚಾರಿಸುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಹೋಗುವಂತಹ ಪರಿಸ್ಥಿತಿ.ಇದರಿಂದ ಈ ಭಾಗದ ಜನರು ಅಸಮಾಧಾನಗೊಂಡು ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನನ್ನು ಬಹಿಷ್ಕಾರ ಮಾಡುವುದೆಂದು ಅಲ್ಲಲ್ಲಿ ಬ್ಯಾನರ್ಗಳನ್ನು ಕೂಡ ಹಾಕಿ ಪ್ರತಿಭಟಿಸಿದ್ದರು, ಇದರಿಂದ ಎಚ್ಚೆತ್ತುಕೊಂಡ ಪ್ರಮುಖ ರಾಜಕೀಯ ಪಕ್ಷಗಳ ಧುರಿಣರುಗಳು ಮತ್ತು ಅಧಿಕಾರಿಗಳು ಮತದಾನ ಬಹಿಷ್ಕರಿಸುವಂತೆ ಕರೆ ನೀಡಿದ ಊರಿನ ಪ್ರಮುಖ ರೊಂದಿಗೆ ಮಾತುಕತೆ ನಡೆಸಿ ಚುನಾವಣೆ ಕಳೆದ ತಕ್ಷಣವೇ ಈ ರಸ್ತೆ ಮತ್ತು ಅಪಾಯದಂಚಿನಲ್ಲಿರುವ ಮೋರಿ ಮತ್ತು ಸಂಕವನ್ನು ಸಂಪೂರ್ಣ ದುರಸ್ತಿ ಮಾಡಿ ಜನರ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿರುವುದರ ಸಲುವಾಗಿ ಮತದಾನ ಬಹಿಷ್ಕಾರವನ್ನು ಹಿಂಪಡೆಯಲಾಗಿತ್ತು.



ಮಾತ್ರವಲ್ಲದೆಊರಿನವರು ಸೇರಿಕೊಂಡು ಶ್ರಮದಾನ ಎಂಬ ಒಂದು ವಾಟ್ಸಪ್ ಗ್ರೂಪ್ ರಚನೆ ಮಾಡಿಕೊಂಡು ಆ ಮೂಲಕ ಕಳೆದ ಬೇಸಿಗೆಯಲ್ಲಿ ಜನರು ಓಡಾಡುವಂತೆ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿ ಮಾಡಿ ಕೊಂಡಿರುತ್ತಾರೆ, ಮತ್ತು ಈಗ ಮುಳುಗಡೆಯಾಗಿರುವ ಕಾರು ಇರುವ ಸ್ಥಳದಲ್ಲಿ ಊರಿನವರು ಸೇರಿ ಮರದ ದಿಮ್ಮಿಗಳನ್ನು ಜೋಡಿಸಿ ತಾತ್ಕಾಲಿಕವಾದ ಪಾಲ ತರಹದ ಸಂಕವನ್ನು ನಿರ್ಮಿಸಿದ್ದು ಈ ಸಂಕದಲ್ಲಿ ಕಾರು ಚಲಾಯಿಸಲು ಭಯಗೊಂಡು ಕಾರಿನ ಚಾಲಕ ಹೊಳೆ ದಾಟಿಸಲು ಮುಂದಾದ ಸಂದರ್ಭದಲ್ಲಿ ಕಾರು ನೀರಲ್ಲಿ ಮುಳುಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.


   ಆದರೆ ಭಾರತದ ಹವಾಮಾನ ಇಲಾಖೆ ಮಳೆಯ ಗಂಭೀರತೆಯನ್ನು ಅರಿತು ಮುನ್ಸೂಚನೆ ನೀಡಿರುವುದು ಜನಪ್ರತಿನಿಧಿಗಳಿಗೂ ಮತ್ತು ಅಧಿಕಾರಿ ವಲಯಕ್ಕೂ ತಿಳಿದಿದ್ದರೂ ಕೂಡ ಜನರ ಸಂಕಷ್ಟಕ್ಕೆ ಸ್ಪಂದಿಸದ ನಿಟ್ಟಿನಲ್ಲಿ ಜನ ಆಕ್ರೋಶಿತರಾಗಿದ್ದಾರೆ.ಇನ್ನಾದರೂ ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು,ಇಲ್ಲದೆ ಇದ್ದಲ್ಲಿ ಕಡಬ ತಹಸ್ಸಿಲ್ದಾರ್ ಕಚೇರಿ ಮುಂಭಾಗದಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

            


                ಅಲ್ಲಿ ಪುತ್ತೂರು ರಿಜಿಸ್ಟ್ರೀ ಆಫೀಸಿನಲ್ಲಿ ಒಂದು ಜೆರಾಕ್ಸ್ ಮಿಸನ್ ಇಲ್ವಾ ಮಾರಾಯ್ರೆ. ಬಹುಶಃ ಸ್ವಾತಂತ್ರ್ಯ ಪೂರ್ವದಿಂದಲೂ ಈ ರಿಜಿಸ್ಟ್ರೀ ಆಫೀಸ್ ಪುತ್ತೂರಿನಲ್ಲಿದೆ. ಈಗ ಆಧುನಿಕತೆಯನ್ನೂ ಮೈಗೂಡಿಸಿಕೊಂಡು ಮಿನಿ ವಿಧಾನಸೌಧದ ಫಸ್ಟ್ ಫ್ಲೋರಲ್ಲಿ ಇದೆ. ಆದರೆ ಇಲ್ಲಿ ಒಂದು ಜೆರಾಕ್ಸ್ ಮಿಸನ್ ಗೆ ಗತಿ ಇಲ್ಲ ಎಂದು ತಿಳಿದುಬಂದಿದೆ. ಈ ಆಫೀಸಿನಲ್ಲಿ ರಿಜಿಸ್ಟ್ರೀ ಆದ ಎಲ್ಲಾ ದಾಖಲೆಗಳನ್ನು ವಿಟ್ಟಣ್ಣನ ಜೆರಾಕ್ಸ್ ಅಂಗಡಿಯಲ್ಲಿ ಜೆರಾಕ್ಸ್ ತೆಗೆಯಲಾಗುತ್ತದೆ. ಅಲ್ಲಿ ಜೆರಾಕ್ಸ್ ತೆಗೆದು ಬುಕ್ಕೊ, ಮಧ್ಯಾಹ್ನ, ಬಯ್ಯಗ್,ಎಲ್ಲೆ ತಂದು ರಿಜಿಸ್ಟ್ರೀ ಆಫೀಸಿಗೆ ಮುಟ್ಟಿಸಲಾಗುತ್ತದೆ. ಏನಾದರೂ ಹೆಚ್ಚು ಕಡಿಮೆಯಾದರೆ ಗತಿ ಯಾರು ಮಾರಾಯ್ರೆ? ರೆಕಾರ್ಡ್ಸನ್ನು  ಪೆತ್ತ ತಿಂದರೆ?


ಪುತ್ತೂರು ನಗರ ಸಭೆಯಲ್ಲಿ ರಾಮ..ರಾಮ.. ರಾಮಣ್ಣ: ಇವನ ಹೆಲ್ತೇ ಸರಿ ಇಲ್ಲ ಮಾರಾಯ್ರೆ. ಪರಮ ಸೋಮಾರಿ, ಟೈಟ್, ಕ್ಲಬ್ಬು, ಉಡಾಫೆ, ಚಾಡಿ ಮತ್ತು PM ಮುಂತಾದ ಸದ್ಗುಣ ಸಂಪನ್ನ ಅಂತ ಇವನ ದರ್ಶನ ಮಾಡಿದವರು ಹೇಳುತ್ತಾರೆ. ನಗರ ಸಭೆಗೆ ಕೆಲಸದ ಮೇಲೆ ಬರುವ ಲೇಡೀಸ್ ಗಳ ನಂಬರ್ ಕೇಳೋದು ನಂತರ ಅವರಿಗೆ ಗುಡ್ನೈಟ್, ಗುಡ್ ಮಾರ್ನಿಂಗ್, ಗುಡುರ್ನು ಹೇಳೋದು ಇವನ ಹಾಬಿ. ಈಗಾಗಲೇ ಲೋಕಾಯುಕ್ತ ಕೇಸ್ ಇದೆ. ಆ ಮಧ್ಯೆ ತನ್ನ ಪರ್ಮನೆಂಟ್ ಸ್ಟೆಪಿನಿಯೊಂದಕ್ಕೆ ಮನೆ ಕಟ್ಟಿಸಿ ಕೊಟ್ಟ ನಗರ ಸಭೆಯ ಶಿಲ್ಪಿ ಇವನು. ಈ ನಡುವೆ ಸಹೋದ್ಯೋಗಿಯೊಬ್ಬಳ ಗಂಡ ಬಂದು ಕೋರ್ಟು ಮೈದಾನದಲ್ಲಿ, ನಗರ ಸಭೆಯ ಮುಂದೆಯೇ ಇವನಿಗೆ ಎರಡ್ಡು ಕೊಟ್ಟಿದ್ದಾನೆ ಎಂದು ಸುದ್ದಿ. ಯಾಕೆಂತ ಗೊತ್ತಿಲ್ಲ. ರಾಮ..ರಾಮ.. ಏನಿದು ನಿನ್ನಯ ಲೀಲೆ. ಬರೆದರೆ ಕಾದಂಬರಿ, ಓದಿದರೆ ಪುರಾಣ.


ಕಲ್ಲುಗುಂಡಿ ಪೋಲಿಸರಿಗೆ ಒಂದು‌ ಜೀಪು ಕೊಡಿ ಮಾರಾಯ್ರೆ: ಪಾಪ ಅವರು. ಮುಟ್ಟಿದರೆ ಮುನಿ ಅಂತವರು. ಇವರು ಕಲ್ಲುಗುಂಡಿ ಚೆಕ್ ಪೋಸ್ಟ್ ಪೋಲಿಸರು. ಸುಳ್ಯ ಪೋಲಿಸ್ ಸ್ಟೇಷನ್ ಸರಹದ್ದಿನಲ್ಲಿ ಬರುತ್ತಾರೆ ಇವರು. ಅವರಿಗೆ ಅಂಚಿಂಚಿ ಹೋಗಲು ಒಂದು ಸರಿಕಟ್ಟಾದ ಜೀಪು ಇಲ್ಲ ಮಾರಾಯ್ರೆ. ಹಿಂದೆ ರಾಧಾಕೃಷ್ಣ ಪೋಲಿಸಣ್ಣ ಇರುವಾಗ‌ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಯಾವ ಸ್ಟೇಷನ್ ಗೂ ಬೇಡವಾದ ಒಂದು ಬಸಳೆ ದೊಂಪದಂತಿದ್ದ ಜೀಪು ಕೊಡಲಾಗಿತ್ತು. ರಾಧಣ್ಣ ಅದೇ ಪರಬ್ಬು ಜೀಪಿಗೆ ಮದುಮಗಳ ಶೃಂಗಾರ ಮಾಡಿ ಅಂಚಿಂಚಿ ಹೋಗುತ್ತಿದ್ದರು. ಆಮೇಲೆ ರಾಧಣ್ಣ ಟ್ರಾನ್ಸ್ ಫರ್ ಆಗಿ ಹೋದರು. ನಂತರ ಬಂದ ಪೋಲಿಸರೂ ಅದೇ ಜೀಪಿನಲ್ಲಿ ಡ್ಯೂಟಿ ಮಾಡಿದರು. ಆದರೆ ಈಗ ಆ ಜೀಪು ತುಂಬಾ ಹಳೆಯದಾಗಿ ಅದರಲ್ಲಿ ಓಡಾಡಲೂ ಪೋಲಿಸರಿಗೆ ನಾಚಿಕೆ ನಾಚಿಕೆ ಆಗುತ್ತಿದೆ. ಜೀಪಿಗೆ ಈಗಾಗಲೇ ಶುಗರು, ಹಾರ್ಟ್ ಪ್ರಾಬ್ಲಂ, ಶ್ವಾಸಕೋಶದ ಸಮಸ್ಯೆ ಎಲ್ಲಾ ಇದೆ. ಕಲ್ಲುಗುಂಡಿ ಪೋಲಿಸರು ಕಳ್ಳರನ್ನು ಹಿಡಿಬೇಕಲ್ಲ ಮಾರಾಯ್ರೆ.  ಈ ಜೀಪಿನಲ್ಲಿ ಹೇಗೆ? ಇದರಲ್ಲಿ ರಿವರ್ಸ್ ಗೇರ್ ಹಾಕಿದರೆ ಟಾಪಿಗೆ ಬೀಳುತ್ತದೆ, ಬಾಳಿಗೆರ್ ಹಾಕಿದರೆ ಆರಿಗೆರ್ ಬೀಳುತ್ತದೆ. SP ಮನಸು ಮಾಡಿದರೆ ಕಲ್ಲುಗುಂಡಿ ಪೋಲಿಸರಿಗೆ ಟಾಪೆಂಡ್ ಟಾಪಲ್ಲಿ ಹೋಗಬಹುದು.


ಕಟ್ಟಕ್ಕೆ ಸುಳ್ಯ ಬಸ್ಸು ಬರಲಿ: ಹಾಗೆ ನೋಡಿದರೆ ಈ ಸುಳ್ಯ ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರ ಎಲ್ಲಾ ಅಂಡಮಾನ್ ಇದ್ದ ಹಾಗೇ. ಸರಿಯಾಗಿ ಬಸ್ ವ್ಯವಸ್ಥೆ, ವಾಹನ ವ್ಯವಸ್ಥೆ ಈ ಊರುಗಳಲ್ಲಿ ಕಮ್ಮಿ. ಸುಬ್ರಹ್ಮಣ್ಯ ಸುಳ್ಯಗಳಿಂದ ಏರುತ ಇಳಿಯುತ‌ ಬಸ್ ಇಲ್ಲಿಗೆಂತಲೇ ಬರಬೇಕು ಮತ್ತು ತಿರ್ಗಿ ಹೋಗಬೇಕು. ಇಲ್ಲಿಂದ ಮುಂದೆ ಮಾರ್ಗ ಇಲ್ಲ. ಈಗ ವಿಷಯ ಏನಪ್ಪಾ ಅಂದರೆ ಬೆಳಿಗ್ಗೆ ಕಲ್ಮಕಾರಿನಿಂದ ಸುಳ್ಯಕ್ಕೆ ಹೋಗುವ   ಸರ್ಕಾರಿ ಸಾರಿಗೆ ಬಸ್ಸು ಕಲ್ಮಕಾರಿನಿಂದ ಹೊರಟು ಕಟ್ಟ ಗೋವಿಂದ ನಗರಕ್ಕೂ ಬಂದು ಹೋಗಲಿ ಎಂಬುದು ಕಟ್ಟದ ಕಟ್ಟಾಳುಗಳ ಬೇಡಿಕೆ. ಕಟ್ಟದಲ್ಲಿ ಕಾಲೇಜು ಮಕ್ಕಳು ಉಟ್ಟು ಗಡ. ಈಗ ಕಾಲೇಜು ಮಕ್ಕಳು ಕಟ್ಟ ಕ್ರಾಸ್ ತನಕ ಅರ್ಧ ಗಂಟೆ ನಡೆದು ಬಂದು ಬಸ್ ಹಿಡಿಯ ಬೇಕು. ಅದೂ ಅಲ್ಲದೆ ಗೋವಿಂದ ನಗರದ ಜನರಿಗೆ ಸುಳ್ಯಕ್ಕೆ ಅದಕ್ಕೆ ಇದಕ್ಕೆ ಅಂತ ಅರ್ಜೆಂಟ್ ಹೋಗ್ಲಿಕ್ಕೆ ಬರ್ಲಿಕ್ಕೆ ಇರ್ತದೆ. ಅವರೂ ಕಟ್ಟ ಕ್ರಾಸ್ ತನಕ ನಡೆದೇ ಹೋಗಬೇಕು. ಹಾಗೆಂದು ಕಲ್ಮಕಾರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ಸು ಬೆಳಿಗ್ಗೆ ಮತ್ತು ಸಂಜೆಗೆ ಮರೆಯದೆ ಗೋವಿಂದ ನಗರಕ್ಕೆ ಬಂದು ಹೋಗುತ್ತದೆ. ಆದರೆ ಸುಳ್ಯ ಬಸ್ ಬರಲ್ಲ. ಬಸ್ಸುಗಳು ಎರಡಾದರೂ ಡಿಪೋ ಒಂದೇ ಅಲ್ವಾ ಎಂಬುದು ಕಟ್ಟಾ ಜನರ ಅಭಿಪ್ರಾಯ. ಆದ್ದರಿಂದ ಸುಳ್ಯ ಬಸ್ಸಿನ ಡ್ರೈವರ್ ಇನ್ನಾದರೂ ಕಟ್ಟ ಕಡೆಗೆ ಸೆಮಿಗೆ ಮಣೆಯ ಸ್ಟೇರಿಂಗ್ ತಿರುಗಿಸಿದ ಹಾಗೆ ಬಸ್ ಸ್ಟೇರಿಂಗ್ ತಿರುಗಿಸಿ ಪ್ರಯಾಣವನ್ನು ಚಂದಗಾಣಿಸಿ ಕೊಡಬೇಕೆಂಬುದು ಕಟ್ಟ ಜನರ ಆಶಯ. ಈ ಬಗ್ಗೆ ಡಿಪೋ ಮ್ಯಾನೇಜರ್ ಗೆ ಒಂದು ಮನವಿ ಕೊಟ್ಟರೆ ಒಳ್ಳೆಯದು. KSRTC DC ಕೂಡ ಈಗ ಪುತ್ತೂರಿನಲ್ಲಿಯೇ‌ ಇದ್ದಾರೆ ಎಂದು ಸುಳ್ಯ ಬಸ್ ಡ್ರೈವರ್ ಗೆ ಯಾರಾದರೂ ಹೇಳುವುದು ಉತ್ತಮ.

          



           ಒಂದು ಮಳೆ ಬಿದ್ದರೆ ಸಾಕು ಅರಣ್ಯ ಇಲಾಖೆಯವು ಪೌಡರ್ ಬಳಿದುಕೊಂಡು, ಕ್ರಾಪ್ ಸರಿ ಮಾಡಿಕೊಂಡು, ಹೊಸ ಹೊಸ ಬಟ್ಟೆ ಧರಿಸಿಕೊಂಡು ರೆಡಿಯಾಗಿ ಬಿಡ್ತಾರೆ ವನ ಮಹೋತ್ಸವ ಮಾಡಲು. ಈ ವನಮಹೋತ್ಸವ ಎಂಬ ಉತ್ಸವ ಮಾರ್ನೆಮಿಯ ಹಾಗೆ ವರ್ಷ ವರ್ಷವೂ ಬರುತ್ತಾ ಇರುತ್ತದೆ. ಈ ಸಲವೂ ಗಮ್ಮತ್ ಇರಬಹುದು ವನಮಹೋತ್ಸವ ಲೆಕ್ಕದಲ್ಲಿ.
   ಅಲ್ಲಿ ಸುಬ್ರಹ್ಮಣ್ಯ ಉಪವಿಭಾಗದಲ್ಲಿ ಈ ವರ್ಷ "ಭೂಮಿಗೆ ಹಸಿರು ಹೊದಿಕೆ" ಎಂಬ ಟೈಟಲ್ ಅಡಿಯಲ್ಲಿ 2.03 ಲಕ್ಷ ಗಿಡಗಳನ್ನು ಮಾಡಿ ಅದನ್ನು ಗುಂಡಿಗೆ ಹಾಕಲು ರೆಡಿಯಾಗಿದ್ದಾರೆ.  ಸುಬ್ರಹ್ಮಣ್ಯ ಉಪವಿಭಾಗದಲ್ಲಿ ಈ ಮರ್ಯಲದಲ್ಲಿ 243.8 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಸಲು ಅರಣ್ಯ ಇಲಾಖೆ ಪಣ ತೊಟ್ಟಿದೆ. ಅದರಲ್ಲಿ ಸುಳ್ಯ ವಲಯ, ಪಂಜ ವಲಯ, ಸುಬ್ರಹ್ಮಣ್ಯ ವಲಯಗಳು  ಸೇರಿದ್ದು ಮುಂದಿನ ವರ್ಷಗಳಲ್ಲಿ ಈ ಮೂರೂ ವಲಯಗಳು ಪಚ್ಚೆ ಪಚ್ಚೆ ಆಗಲಿವೆ. ಸುಳ್ಯ ವಲಯದ ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ ಐವತ್ತೈದು ಸಾವಿರ ಗಿಡಗಳನ್ನು ತೊಟ್ಟೆಯಲ್ಲಿ ಬೆಳೆಸಲಾಗಿದ್ದು ಅರಂತೋಡಿನ ನೆಕ್ಕರೆ, ದೇವಚಳ್ಳದ ಮಂಜೊಳುಕಜೆ, ಆಲೆಟ್ಟಿಯ ಕೂಟೇಲ್, ಮರ್ಕಂಜದ ಕಾಯೇರ್ ಭಾಗಗಳಿಗೆ ಈ ಸಲ ಹಸಿರು ಹೊದಿಕೆ ಹಾಸಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು ಪಂಜ ವಲಯದಲ್ಲಿ 95 ಹೆಕ್ಟೇರ್ ಮತ್ತು ಸುಬ್ರಹ್ಮಣ್ಯ ವಲಯದಲ್ಲಿ 168 ಹೆಕ್ಟೇರ್ ಪ್ರದೇಶವನ್ನು ಪಚ್ಚೆ ಪಚ್ಚೆ ಮಾಡಲಾಗುವುದು ಎಂದು ತಿಳಿದುಬಂದಿದೆ.


    ಹಾಗೆ ನೋಡಿದರೆ ಸುಬ್ರಹ್ಮಣ್ಯ ಉಪವಿಭಾಗದ ಪಂಜ ವಲಯ ಮರಗಳ್ಳರ ಸ್ವರ್ಗ ಇದ್ದ ಹಾಗೇ. ಸಣ್ಣ ಕಳ್ಳರು, ಹದ ಕಳ್ಳರು, ದೊಡ್ಡ ಕಳ್ಳರು ಹೀಗೆ ಎಲ್ಲಾ ಸೈಜಿನ ಮರಗಳ್ಳರ ತವರು ಪಂಜ ವಲಯ. ಈ ವರ್ಷ ಇದೇ ಮರಗಳ್ಳರ ತವರಿನಲ್ಲಿ  95 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಸಲು ಗುಂಡಿ ಪೆರೆಸ್ಸಿ ರಿಪೇರಿ ಮಾಡಲಾಗಿದೆ.
   ಹಾಗೆಂದು ಪ್ರತೀ ವರ್ಷವೂ ಅರಣ್ಯ ಇಲಾಖೆ ಲಕ್ಷ ಲಕ್ಷ ಗಿಡಗಳನ್ನು ನೆಡಲು ಕೋಟಿ ಲೆಕ್ಕದಲ್ಲಿ ಖರ್ಚು ಮಾಡುತ್ತಿದೆ. ಕಳೆದ ವರ್ಷವೂ ಲಕ್ಷ ಲಕ್ಷ ಗಿಡಗಳನ್ನು ನೆಡಲಾಗಿದೆ. ಅದಕ್ಕೆ ಹಿಂದಿನ ವರ್ಷ ವರ್ಷವೂ ನೆಡಲಾಗಿದೆ, ಕೋಟಿ ಕೋಟಿ ಖರ್ಚು ಮಾಡಲಾಗಿದೆ. ಎಲ್ಲಿದೆ ನೆಟ್ಟ ಗಿಡಗಳು?


  ಹಾಗೆಂದು ಇದೊಂದು ಸರಕಾರೀ ಮಾಫಿಯಾ. ಎಷ್ಟೋ ವರ್ಷಗಳ ಹಿಂದೆ ತೆಗೆದ ಗುಂಡಿಗಳನ್ನೇ ರಿಪೇರಿ ಮಾಡಿ ಅದಕ್ಕೆ ಗಿಡಗಳನ್ನು ನೆಟ್ಟು ಬಿಲ್ ಮಾಡಲಾಗುತ್ತದೆ. ಸಸ್ಯ ಕ್ಷೇತ್ರಗಳಿಂದ ತರುವಾಗಲೇ ಗಿಡಗಳನ್ನು ಅರೆಜೀವ ಮಾಡಿಯೇ ತರಲಾಗುತ್ತದೆ. ಅರೆಜೀವ ಗಿಡಗಳನ್ನು ಗುಂಡಿಗೆ ಹಾಕಿ ಸ್ನಾನ ಮಾಡಿ ಸೂತಕ ಮುಗಿಸಿ ವರ್ಷ ವರ್ಷವೂ ಕೋಟಿ ಕೋಟಿ ಬಾಚಲಾಗುತ್ತಿದೆ. ಎಲ್ಲಿದೆ ನೆಟ್ಟ ಗಿಡಗಳು?
   ಇನ್ನು ಆ ಸಾಮಾಜಿಕ ಅರಣ್ಯದ ಕತೆಗಳು, ಉಪ ಕತೆಗಳು, ಕಥಾಸಂಕಲನಗಳ ಕತೆ ಬೇರೆಯೇ ಇದೆ. ವರ್ಷ ವರ್ಷವೂ ಸಾಮಾಜಿಕ ಅರಣ್ಯ ಬೆಳೆಸಲು ಕೋಟಿ ಕೋಟಿ ಗುಂಡಿಗೆ ಹಾಕಲಾಗುತ್ತಿದೆ. ಇನ್ನು ಸಾಮಾಜಿಕ ಅರಣ್ಯದಲ್ಲಿ ವಾಸ್ತು ಪ್ರಕಾರ ಗಿಡಗಳನ್ನು ನೆಡಲಾಗುತ್ತದೆ.     ಈ ವಾಸ್ತು ಸರಿಯಾಗಿ ಕರೆಂಟ್ ಲೈನಿನ ಅಡಿಯಲ್ಲಿಯೇ  ಬರುತ್ತದೆ. ಇವರು ಸಾಮಾಜಿಕ ಅರಣ್ಯದ ವಾಸ್ತು ಪ್ರಕಾರ ಕರೆಂಟ್ ಲೈನಿನ ಅಡಿಯಲ್ಲಿ ಗಿಡ ನೆಡೋದು, ಲೈನ್ ಮ್ಯಾನ್ ಬಂದು ಅದನ್ನು ಕಡಿಯುವುದು. ಮುಂದಿನ ವರ್ಷ ಪುನಃ ಕರೆಂಟ್ ಲೈನಿನ ಅಡಿಯಲ್ಲಿ ಸಾಮಾಜಿಕ ಅರಣ್ಯದ ಯೋಜನೆ, ಮತ್ತೇ ಲೈನ್ ಮ್ಯಾನ್. ಇದು ತುಂಬಾ ವರ್ಷಗಳಿಂದ ನಡೆದು ಬರುತ್ತಿರುವ ವಿದ್ಯಮಾನಗಳು. ಈ ಸಾಮಾಜಿಕ ಅರಣ್ಯದ ಇನ್ನೊಂದು ಕತೆ ಏನೆಂದರೆ ಅರಣ್ಯದಲ್ಲಿ ಉಳಿದ ಮರ ಕಡಿಯುವಾಗ ಒಂದು ಲೋಡ್ ಮರ ಅರಣ್ಯ ಇಲಾಖೆಯ ಡಿಪೋಗೆ ಹೋದರೆ ಐದು ಲೋಡು ಕೇರಳ ಕಡೆ. ಇನ್ನು ಈ ಸಾಮಾಜಿಕ ಅರಣ್ಯ ಯೋಜನೆಯ ಇನ್ನೊಂದು ಸೀಕ್ರೆಟ್ ಏನೆಂದರೆ ಇಲ್ಲಿ ಗಿಡ ನೆಡುವಾಗ ಅರಣ್ಯ ಇಲಾಖೆಯ ದೊಡ್ಡವರಿಗೆ ಅಂದರೆ ರೇಂಜರ್ ಮಟ್ಟದಿಂದ ಮೇಲಿನವರಿಗೆ ದುಡ್ಡಿನ  ಬರ್ಸವೂ ನಂತರ ಮರ ಕಡಿಯುವಾಗ ಫಾರೆಸ್ಟರ್ ಮತ್ತು ಗಾರ್ಡ್ ಗಳು ದುಡ್ಡಿನ ಬೊಳ್ಳದಲ್ಲಿ ಈಜಾಡುತ್ತಾರೆ ಎಂಬ ಪ್ರತೀತಿ ಇದೆ.  ಎಲ್ಲಿದೆ ನೆಟ್ಟ ಗಿಡಗಳು?


     ಇನ್ನು ಈ ಗಿಡಗಳನ್ನು ಅರಣ್ಯದ ನೆಡುತೋಪುಗಳಲ್ಲಿ ನೆಡಲಾಗುತ್ತದೆ.    ಚಿಕ್ಕ ಚಿಕ್ಕ ಗಿಡಗಳನ್ನು ಮಿಸ್ಟರ್ ಮೇರ್ ತಿಂದುಂಡು ಬಿಟ್ಟರೆ ದೊಡ್ಡ ಗಿಡಗಳನ್ನು ಕಾಟಿಗಳು ಮಟಾಷ್ ಮಾಡಿ ಬಿಡುತ್ತದೆ. ಉಳಿದ ಗಿಡಗಳು ದೊಡ್ಡದಾಗಿ ಮದುವೆಗೆ ರೆಡಿಯಾಗುವಾಗ ಬಸಳೆಗೆ ದೊಂಪ ಹಾಕಲು, ಬಚ್ಚಿರೆಗೆ ಸೂನೋ ಹಾಕಲು ಎಂದು ಲಿಂಗಪ್ಪಣ್ಣ ಬಂದು ಖಾಲಿ ಮಾಡಿ ಬಿಡುತ್ತಾರೆ. ಆದರೆ ಗುಂಡಿ ಅಲ್ಲೇ ಇರುತ್ತದೆ. ಅದೇ ಗುಂಡಿಗೆ ವರ್ಷ ವರ್ಷವೂ ಗಿಡಗಳನ್ನು ಹಾಕಿ ಕೋಟಿ ಕೋಟಿ ಮುಗಿಸೋದು. ಪ್ರತೀ ವರ್ಷವೂ ಗಿಡಗಳನ್ನು ನರ್ಸರಿಗಳಲ್ಲಿ ತೊಟ್ಟೆಗೆ ಹಾಕುವಲ್ಲಿಂದ ಹಿಡಿದು ಅದನ್ನು ಕೊಂಡೋಗಿ ಗುಂಡಿಗೆ ಹಾಕುವಲ್ಲಿ ತನಕದ ಪ್ರಕ್ರಿಯೆ ಮಾತ್ರ ನಮಗೆ ಪರದೆಯ ಮುಂದೆ ಕಾಣುತ್ತದೆ. ಉಳಿದದ್ದು ಪರದೆಯ ಹಿಂದೆ.
ಯುವರ್ ಆನರ್,  
    ಕಳೆದ ಹತ್ತು ವರ್ಷಗಳಿಂದ ಇವರು ನೆಟ್ಟ ಗಿಡಗಳಿಲ್ಲ, ಕೋಟಿ ಕೋಟಿ ದುಡ್ಡಿನ ಲೆಕ್ಕವಿಲ್ಲ.ಒಂದು ಉಪ ವಿಭಾಗದಲ್ಲಿ ವರ್ಷ ವರ್ಷವೂ ಲಕ್ಷ ಲಕ್ಷ ಗಿಡಗಳನ್ನು ನೆಟ್ಟಿದ್ದರೆ ಆ ಗಿಡಗಳ ಕತೆ ಏನಾಯಿತು? ಅವುಗಳಲ್ಲಿ ಹತ್ತು ಪರ್ಸೆಂಟ್ ಗಿಡಗಳು ಬದುಕುಳಿಯುತ್ತಿದ್ದರೂ ಒಂದು ಉಪ ವಿಭಾಗವೇ ಗೀರ್ ಅರಣ್ಯವಾಗುತ್ತಿತ್ತು, ಸಿಂಹ ಬಂದು ಕೂರುತ್ತಿತ್ತು. ಸುಳ್ಯ ತಾಲೂಕೇ ಇರುತ್ತಿರಲಿಲ್ಲ.ವರ್ಷ ವರ್ಷವೂ ಅದೇ ಸಿನೆಮಾ, ಅದೇ ಕತೆ. ಅದೇ ಮದ್ಯ ಹೊಸ‌ ಬಾಟಲು. ಇವರು ಸತ್ಯ ಹರಿಶ್ಚಂದ್ರನ ಫ್ಯಾಮಿಲಿಯವರೇ ಆಗಿದ್ದರೆ ಕಳೆದ ಹತ್ತು ವರ್ಷಗಳಿಂದ ಇವರು ನೆಟ್ಟು ಬೆಳೆಸಿದ ಕಾಡಿನ ಅಡ್ರೆಸ್ ಕೊಡಲಿ ಮಾಡಿದ ಸಾಧನೆಗಳ ಅಂಕಿಅಂಶಗಳ ಪಟ್ಟಿ ಇಡಲಿ. ಕಳೆದ  ಹತ್ತು ವರ್ಷಗಳಿಂದ ಇವರು ಮಾಡಿದ ಖರ್ಚು, ಅದರಿಂದ ಇಲಾಖೆಗೆ ಆದ ಲಾಭ, ಅದರ ರಿಸಲ್ಟ್ ಏನು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಿ.  ಪ್ರತಿ ವರ್ಷ ವರ್ಷವೂ ಒಂದೇ ಸೈಜಿನ ಸುಳ್ಳು ಕೇಳಿ ಕೇಳಿ ಕಿವಿ ಹೂಗಳು ಬಾಡಿ ಹೋಗಿದೆ, ಮುದುಡಿ ಹೋಗಿವೆ. ಇನ್ನು ರೈಲು ನಿಲ್ಲಲಿ. ಈ‌ ರಿಸರ್ವ್ ಫಾರೆಸ್ಟ್, ಸಾಮಾಜಿಕ ಅರಣ್ಯ , ಹಸಿರು ಹೊದಿಕೆ ಎಂಬುದೆಲ್ಲ ಒಂದು ಭ್ರಮೆ.    ಆ ಶಬ್ದಗಳನ್ನು ಕೇಳುವಾಗಲೇ ನಗು ಬರುತ್ತದೆ ಮತ್ತು ಪತ್ರಿಕೆಗಳಲ್ಲಿ ಮರಗಳ್ಳರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಫೋಟೋ ನೋಡುವಾಗ ಬಿದ್ದು ಬಿದ್ದು ನಗು ಬರುತ್ತದೆ. ಸಾಕು ಸಾಕು ಹಸಿರು ಹೊದಿಕೆ ಹೊದ್ದದ್ದು ಸಾಕು.

         


           ಹಾಗೆಂದು ಇದು ನಗರ ಪಾಲಿಕೆ, ಮಹಾ ನಗರ ಪಾಲಿಕೆಗಳಲ್ಲಿ ಮಾತ್ರ ಇದ್ದ‌ ಒಂದು ಸಾಮಾಜಿಕ ಪಿಡುಗು. ಎದುರಿಗೆ ಒಂದು ಕಟ್ಟಿಂಗ್ ಅಂಗಡಿ ನಂತರ ಒಳಗೊಳಗೆ ಹೋದಂತೆ ವಿಸ್ವ ದರ್ಶನ. ಒಬ್ಬ ಮನುಷ್ಯನನ್ನು ಕೇವಲ ಚಡ್ಡಿಯಲ್ಲಿ ಮಲಗಿಸಿ ಅವನಿಗೆ ಒಬ್ಬಳು ಸುಂದರಿಯಿಂದ ತಿಕ್ಕಿ ತಿಕ್ಕಿ ಮಸಾಜ್ ಮಾಡಿಸಿದರೆ ಲಾಸ್ಟ್ ಓವರ್ ಗಳಲ್ಲಿ ಏನಾಗಬಹುದೆಂದು ನೀವೇ ಊಹಿಸಿಕೊಂಡರೆ ಸಾಕು. ಅದನ್ನು ಬರೆದರೆ ನನ್ನ ಪತ್ರಕರ್ತ ಮಿತ್ರರು ಕರೆದು ಬಯ್ದು ಬಿಡುತ್ತಾರೆ.


    ಇದು ಪುತ್ತೂರು. ಕಟ್ಟಿಂಗ್ ಅಂಗಡಿ ರೋಗ ಇಲ್ಲೂ ನಿಧಾನವಾಗಿ ಸ್ಪೀಡ್ ತಗೊಂಡಿದೆ. ಇಲ್ಲಿನ ದರ್ಬೆ ಸರ್ಕಲ್  ನಲ್ಲಿ ಒಂದು ಮಸಾಜ್ ಅಂಗಡಿ ಬೆಳಕಿಗೆ ಬಂದಿದ್ದು ನೀವು ದರ್ಬೆ ಸರ್ಕಲ್ ನಲ್ಲಿ ನಿಂತು ಮಸಾಜ್ ಅಂತ ಗುನುಗಿದರೂ ಸಾಕು ನಿಮ್ಮನ್ನು ಪುಸ್ಕ ಅಂತ ಈ ಅಂಗಡಿ ಒಳಗೆ ಎಳೆದುಕೊಳ್ಳುತ್ತದೆ. ಒಮ್ಮೆ ನೀವು ಒಳಗೆ ಹೋದರೆ ಸಾಕು ನಿಮ್ಮ ಸರ್ವಾಂಗಗಳನ್ನೂ ಫ್ರೆಶ್ & ರೀಕಂಡೀಷನಿಂಗ್ ಮಾಡಿ ಬಿಡುತ್ತಾರೆ. ಕಣ ಕಣದಲ್ಲೂ ಶಕ್ತಿ ಡೋಸ್ ಮಾಡಿಬಿಡುತ್ತಾರೆ ಆದರೆ ಕಿಸೆ ಖಾಲಿ ಮಾಡಿ ಬಿಡ್ತಾರೆ.


  ಹಾಗೆಂದು ದರ್ಬೆ ಸರ್ಕಲ್ ಮಸಾಜ್ ಪಾರ್ಲರ್ ನಲ್ಲೂ ವಿವಿಧತೆಯಲ್ಲಿ ಏಕತೆ ಹುಡುಗಿಯರ ಸರ್ವೀಸ್ ಇದೆ. ಚಿಕ್ಕ ಕಣ್ಣಿನ ಹುಡುಗಿಯರು, ಪುಚ್ಚೆ ಕಣ್ಣಿನ ಹುಡುಗಿಯರು, ಚಟ್ಟೆ ಮೂಗಿನ ಚಿಟ್ಟೆಗಳು, ಚಂದಿರನ ತಂಗಿಯರು ಮುಂತಾದ ವಿವಿಧ ತಳಿಯ, ಪ್ರಭೇದಗಳ ಹುಡುಗಿಯರಿಂದ ಇಲ್ಲಿ ಮಸಾಜೋ   ಮಸಾಜು. ವಿಷಯ ಅದೇ ಮಾರಾಯ್ರೆ ಮೊದಲು ಹತ್ತು ಓವರ್ ಚಂದಿರನ ತಂಗಿಯರು ಮಸಾಜ್ ಮಾಡುತ್ತಾರೆ ನಂತರದ ಹತ್ತು ಇವನು ಅವರಿಗೆ ಮಸಾಜ್ ಮಾಡುತ್ತಾನೆ. ಇದಕ್ಕೆಲ್ಲ ರೇಟ್ ಕೌಂಟರಿನಲ್ಲಿ ಬೇರೆ, ಒಳಗೆ ಬೇರೆ, ಇನ್ನೂ ಒಳಗೆ ಬೇರೆ ಬೇರೆ.


     ಹಾಗೆಂದು ಇಂಥಾ ಎಲ್ಲಾ ಮಸಾಜ್ ಪಾರ್ಲರ್ ಗಳಿಗೂ ರಾಜಕೀಯ ಲೀಡರ್ ಗಳ Z+ ಭದ್ರತೆ ಇರುತ್ತದೆ. ದರ್ಬೆ ಪಾರ್ಲರ್ ಪುತ್ತೂರು ದೇಶ ಭಕ್ತರ ಟೀಮಿನ ವಿರಾಟ್ ಕೊಹ್ಲಿ ಮತ್ತು ಕಾಂಗ್ರೆಸ್ ಜೆಡಿಎಸ್ ಪಕ್ಷದ ಐಶೂ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿದೆ ಎಂದು ಗುಸುಗುಸು ಇದೆ. ಇನ್ನು ಪುತ್ತೂರು ಟೌನು ಪೋಲಿಸರು ದರ್ಬೆ ಸರ್ಕಲ್ ಹತ್ತಿರ ಬರುವಾಗ ಗಟ್ಟಿಯಾಗಿ ಕಣ್ಣು ಮುಚ್ಚಿಕೊಳ್ಳುತ್ತಾರೆ ಮತ್ತು ಸರ್ಕಲ್  ಪಾಸಾದ ಕೂಡಲೇ ಓಪನಿಂಗ್ ಐಸ್. ಕೇಳುವವರೇ ಇಲ್ಲ. ಮಸಾಜ್ ಮಾಡಿ ಮಾಡಿ ಇನ್ನು ಬಿಲ್ಡಿಂಗ್ ಗೋಡೆಗಳು ಸ್ಲೇಕ್ ಬೀಳದಿದ್ದರೆ ಸಾಕು.
ಯುವರ್ ಆನರ್,  
    ನಾಚಿಕೆ ಇಲ್ಲ, ಮಾನ ಮರ್ಯಾದೆ ಇಲ್ಲ, ಲಜ್ಜೆ ಪೊಲೆಜ್ಜಿ ಯಾವುದೂ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿಯೇ, ಕಮರ್ಷಿಯಲ್ ಕಾಂಪ್ಲೆಕ್ಸ್ ಗಳಲ್ಲಿಯೇ, ಜನ ನಿಭಿಡ ಪ್ರದೇಶಗಳಲ್ಲಿಯೇ ಒಂದು ವ್ಯವಸ್ಥಿತ ವ್ಯವಸ್ಥೆಗೆ ಸವಾಲು ಹಾಕುವ ರೀತಿಯಲ್ಲಿ, ಭಾರತೀಯ ಸಂಸ್ಕೃತಿಗೆ ಅವಮಾನ ಮಾಡುವ ರೀತಿಯಲ್ಲಿ ಈ ಮಸಾಜ್ ಪಾರ್ಲರ್  ನಡೆಯುತ್ತಿದೆ. ರಾಜಕೀಯದ ಮರಿ ಪುಢಾರಿಗಳ ರಕ್ಷಣೆ ಮತ್ತು ಪೋಲಿಸರ ಭಕ್ಷಣೆಯ ಮಧ್ಯೆ ಮಸಾಜ್ ಪಾರ್ಲರ್ ಪರ್ಮಿಷನ್ ನಲ್ಲಿ ನಡೆಯುವ ಇಂತಹ ಅಧಿಕೃತ ಹೈಟೆಕ್ ವೇಶ್ಯಾವಾಟಿಕೆಗಳನ್ನು ಕೂಡಲೇ ಬಂದ್ ಮಾಡಿಸದಿದ್ದರೆ ಮುಂದೊಂದು ದಿನ ಈ ಪಿಡುಗು ಸಮಾಜದ ವಿವಿಧ ಸ್ತರಗಳನ್ನು ಲಗಾಡಿ ತೆಗೆಯುವುದರಲ್ಲಿ ಸಂಶಯವೇ ಇಲ್ಲ.

Copy to SPDK


        


           ಸುಳ್ಯದ ಕೆಲವು ಅಂಡಮಾನ್ ಗಳಲ್ಲಿ ಯಾರು ಏನು ಮಾಡಿದರೂ ಏನೂ ಆಗಲ್ಲ. ಇತ್ತೀಚಿನ ದಿನಗಳಲ್ಲಿ ಸಮಾಜ ಘಾತುಕ ಶಕ್ತಿಗಳು ಸುಳ್ಯದ ಕೆಲವು ಅಂಡಮಾನ್ ಗಳಲ್ಲಿ ಬಂದು ಶೀಟ್ ಹಾಕುತ್ತಿದ್ದು ಈ ವಿಚ್ಛಿದ್ರಕಾರಿ ಶಕ್ತಿಗಳನ್ನು ಕುಪ್ಪಿಯಲ್ಲಿ ತುಂಬಿಸಿ ಪಯಸ್ವಿನಿಯಲ್ಲಿ ವಿಸರ್ಜನೆ ಮಾಡಿದರೆ ಮಾತ್ರ ಸುಳ್ಯದ ಅಂಡಮಾನ್ ಗಳನ್ನು ಬಚಾವ್ ಮಾಡ ಬಹುದು. ಇಲ್ಲದಿದ್ದರೆ ಇಲ್ಲಿ ಕೋತಿ ತಾನೂ ಕೆಡುತ್ತದೆ, ವನವನ್ನೆಲ್ಲ ಕೆಡಿಸಿ ಬಿಡುತ್ತದೆ.


    ಅಲ್ಲಿ ಹರಿಹರ, ಬಾಳುಗೋಡು, ಗುತ್ತಿಗಾರು,ಬಳ್ಪ‌ ಭಾಗಗಳಲ್ಲಿ ನಿರಂತರವಾಗಿ ಕೋಳಿ ಕಟ್ಪ ನಡೆಯುತ್ತಿದ್ದು ಕಾನೂನು ವ್ಯವಸ್ಥೆಯ  ಸವಾಲಿಗೆ ಸವಾಲ್ ಹಾಕಲಾಗುತ್ತಿದೆ. ಶೀಟ್ ಹಾಕಿ, ಶಾಮಿಯಾನ ಸುತ್ತಿ,ಪಿಚ್ ತಯಾರಿಸಿ, ಕುಲೆಗಳಿಗೆ ಬಡಿಸಿ, ಅಗೆಲು ಕೊಟ್ಟು ನಿರಂತರವಾಗಿ ಎರಡ್ಮೂರು ದಿವ್ಸ ಕೋಳಿ ಕಟ್ಟ ನಡೆಸಲಾಗುತ್ತಿದೆ. ಇವತ್ತು ಹರಿಹರದಲ್ಲಿ ನಡೆಸಿದರೆ ಆಫ್ಟರ್ ತ್ರೀ ಡೇಸ್ ಬಾಳುಗೋಡಿನಲ್ಲಿ ಕಟ್ಟ. ಬಾಳುಗೋಡಿನಲ್ಲಿ ಕಟ್ಟದ ಫೈಟಿಂಗ್ ನಲ್ಲಿ ಸತ್ತ ಪೆಟ್ಟಿಸ್ಟ್ ಕೋಳಿಗಳ ಬೊಜ್ಜ ಮುಗಿಯುವ ಮೊದಲೇ ಗುತ್ತಿಗಾರಿನಲ್ಲಿ ಶೀಟ್ ಹಾಕಲಾಗುತ್ತದೆ. ನಾಳೆ ಬಲ್ಪದಲ್ಲಿ ಕಟ್ಟ ಇದೆ ಎಂದು ನಮ್ಮ ಕೋಳಿ ಕಟ್ಟ ಬೇಹುಗಾರರು ಕೊ..ಕ್ಕೋ.... ಕೋ...ಕೋ... ಎಂದು ಹೇಳಿದ್ದಾರೆ.


  ಹಾಗೆಂದು ಈ ವ್ಯವಸ್ಥೆ ಎಲ್ಲವೂ ಹಗಲೇ ಸಾರ್ವಜನಿಕ ಸ್ಥಳಗಳಲ್ಲಿಯೇ ರಾಜಾರೋಷವಾಗಿ  ನಡೆಯುತ್ತಿದೆ. ಆದರೆ ಕಾನೂನು ಮಾತ್ರ ಅವರು ಕೊಟ್ಟಿದ್ದನ್ನು ತಿಂದುಂಡು ಕಣ್ಣು ಮುಚ್ಚಿ ಕುಂತಿರುತ್ತದೆ. ಇದೀಗ ನಾಳೆ ಬಲ್ಪದಲ್ಲಿ ಕಟ್ಟ. ಮೈಪೆ, ಕೆಮೈರೆ, ಉರಿಯೆ, ಕುಪ್ಪುಳೆ, ಬೊಳ್ಳೆ, ಗಿಡಿಯೆ,ಕರ್ಬೊಳ್ಳೆ, ಕಾವೆ, ನೀಲೆ, ಕೆಮೈರೆ ಕುಪ್ಪುಳೆ, ಕೆಮೈರೆ ಗಿಡಿಯೆ ಮುಂತಾದ ಈ ಭಾಗದ ಪೆಟ್ಟಿಸ್ಟ್ ಕೋಳಿಗಳು ಇವತ್ತೇ ನೆಟ್ ಪ್ರಾಕ್ಟೀಸ್ ಮಾಡಿದ್ದು ನಾಳೆ ಟಿಕೆಟ್ ತೆಗೆಯಲು ರೆಡಿಯಾದಂತಿದೆ. ಸತ್ತ ಪೆಟ್ಟಿಸ್ಟ್ ಕೋಳಿಗಳ ಬೊಜ್ಜ ಬರ್ಪಿ ವರ್ಷ ಬೊಳ್ಪುಗು ಬೇಗ.


 
ರಿಷ್ಯಂತ್ IPS, ಪೋಲಿಸ್ ವರಿಷ್ಠಾಧಿಕಾರಿ ದ.ಕ

    ಅದರಲ್ಲೂ ಈ ಕಟ್ಟಕ್ಕಿಂತ ಅಪಾಯಕಾರಿ ಆಟ ಅಂದರೆ ಇದೇ ಶೀಟ್ ನ ಅಡಿಯಲ್ಲಿ ನಡೆಯುವ ಕಲರ್ ಬಾಲ್ ಮತ್ತು ಕುಟು ಕುಟು ಎಂಬ ಗ್ಯಾಂಬ್ಲಿಂಗ್ ಗಿಂತಲೂ ಅಪಾಯಕಾರಿ ಆಟಗಳು. ಕೋಳಿ ಕಟ್ಟಗಳಲ್ಲಿ ಕೋಳಿ ಬಾಡಿಯಾದರೂ ಸಿಗುತ್ತದೆ ಆದರೆ ಕುಟು ಕುಟು ಆಡಿದವ ಸೀದಾ ಕೆರೆ,‌ಬಾವಿಗೆ ಗ್ಯಾರೆಂಟಿ. ಪರ್ಮಿಷನ್ ಕೋಳಿ ಕಟ್ಟಕ್ಕೆ. ಅದರ ಅಡಿಯಲ್ಲಿ ಕುಟು ಕುಟು.
ಯುವರ್ ಆನರ್,  
    ಹೇಳುವವರಿಲ್ಲ, ಕೇಳುವವರಿಲ್ಲ. ಕಾನೂನಿನ ಪಾಲನೆಯಿಲ್ಲ. ಸಮಾಜ ಕಂಟಕರ ಮೆರವಣಿಗೆಯಲ್ಲಿ ಕಾರ್ಯಾಂಗದ್ದೇ ಬ್ಯಾಂಡ್ ಸೆಟ್, ಮಂಗಳವಾದ್ಯ, ಗೊಂಬೆ ಕುಣಿತ.ಮೇಲೆ ಕುಂತವರಿಂದ, ಕೆಳಗೆ ಕುಂತವರಿಂದ ಅಡ್ಡ ಪಂಕ್ತಿ ನೀಟ ಪಂಕ್ತಿಯಲ್ಲಿ ಸಹ ಭೋಜನ. ಮೆರವಣಿಗೆ ಎತ್ತ ಸಾಗುತ್ತಿದೆ, ಎಲ್ಲಿ ನಿಲ್ಲುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಚಿಕ್ಕ ಚಿಕ್ಕ ಸಮಾಜ ಕಂಟಕರಿಗೇ ಆನ್ ದಿ ಸ್ಪಾಟ್ ಜಡ್ಜ್ ಮೆಂಟ್ ಕೊಡಲು ಆಗದ ಈ ವ್ಯವಸ್ಥೆಯಲ್ಲಿ ಸಾಮಾನ್ಯ ಜನರ ಪಾಡೇನು? ಕತೆಯೇನು?

       


             ಹಾಗೆಂದು ಸುಬ್ರಹ್ಮಣ್ಯ ಎಂಬ ಊರು ಇರೋದೇ ನಿತ್ಯ ಹರಿದ್ವರ್ಣದ ದಟ್ಟ ಕಾಡಿನ ಮಧ್ಯದಲ್ಲಿ, ಕುಮಾರ ಪರ್ವತದ ತಪ್ಪಲಿನಲ್ಲಿ. ಇಲ್ಲಿ ಪ್ರಕೃತಿಯೇ ಒಂದು ದೊಡ್ಡ ಪಾರ್ಕ್ ಮತ್ತು ಆ ಪಾರ್ಕ್ ಮಧ್ಯೆ ಕುಮಾರಧಾರನ ಜುಳು ಜುಳು. ಇದು ಸಾಲದಕ್ಕೆ ಅಧಿಕಪ್ರಸಂಗಿ ಮನುಷ್ಯ ದುಡ್ಡು ಮಾಡ್ಲಿಕ್ಕೆ ತನ್ನದೂ ಒಂದಿರ್ಲಿ ಎಂದು ಪ್ರಕೃತಿಯ ಪಾರ್ಕಿನ ಮಧ್ಯೆ ಒಂದು ಅಂಡಿಗುಂಡಿ ಪಾರ್ಕ್ ಮಾಡಿದ್ದಾನೆ. ಆ ಪಾರ್ಕಿಗೆ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನ ಹೆಸರು ಕೂಡ ಇಟ್ಟಿದ್ದಾನೆ. ಆದರೆ ಪಾರ್ಕಿನಲ್ಲಿ ನಡೆಯುತ್ತಿರುವುದೇನು?


    ಇದು ಸುಬ್ರಹ್ಮಣ್ಯದ ತಿಮ್ಮಕ್ಕ ಪಾರ್ಕ್. ಕುಲ್ಕುಂದ ಕಡೆ ಇದೆ. ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನ ಗೌರವಾರ್ಥವಾಗಿ ಸರ್ಕಾರ ಇದನ್ನು ನಿರ್ಮಾಣ ಮಾಡಿದೆ. ಕೋಟಿ ಲೆಕ್ಕದ ಬಜೆಟ್ ಸುರಿದಿದೆ ಈ ಪಾರ್ಕಿಗೆ. ಆದರೆ ಇಲ್ಲಿ ಪಾರ್ಕ್ ನಿರ್ಮಾಣದಲ್ಲಿಯೇ ಕೋಟಿ ನುಂಗಿ ಲಕ್ಷಗಳನ್ನು ಮಾತ್ರ ಹಾಕಲಾಗಿದೆ ಎಂದು ತಿಳಿದುಬಂದಿದೆ.  ಸದ್ಯಕ್ಕೆ ಈ   ಪಾರ್ಕ್ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು ಅದರ ಮೈಂಟೇನೆನ್ಸ್ ಎಲ್ಲಾ ಅವರಿಗೇ ವಹಿಸಿ ಕೊಡಲಾಗಿದೆ. ಆದರೆ ಈ ಪಾರ್ಕ್ ಈಗಾಗಲೇ ಕಂಟ್ರೋಲ್ ತಪ್ಪಿ ಜುಳು ಜುಳು ಕುಮಾರಧಾರಕ್ಕೆ  ಬಿದ್ದು ಬೊಳ್ಳಕ್ಕೆ ಹೋಗುವ ತಯಾರಿಯಲ್ಲಿದೆ.


  ಸುಬ್ರಹ್ಮಣ್ಯದ ಸಾಲು ಮರದ ತಿಮ್ಮಕ್ಕ ಪಾರ್ಕಿನಲ್ಲಿ ನಿರಂತರ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಪಾರ್ಕ್ ಇರುವುದೇ ಅನೈತಿಕ ಚಟುವಟಿಕೆ ನಡೆಸಲು ಎಂದು ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿರುವ ಸುಬ್ರಹ್ಮಣ್ಯದ ಕೆಲವು ಪಡ್ಡೆಗಳು ಮತ್ತು ಪಡ್ಡಿಗಳು ಈ ಪಾರ್ಕನ್ನೇ ತಮ್ಮ ಬೆಡ್ ರೂಮನ್ನಾಗಿ ಮಾಡಿಕ್ಕೊಂಡು ಪಾರ್ಕಿನ ಕುಲ ಕೆಡಿಸಿ ಬಿಟ್ಟಿದ್ದಾವೆ. ಇವರ ಯೌವನದ ತೆವಲುಗಳಿಂದಾಗಿ ಪಾರ್ಕಿಗೆ ಮರ್ಯಾಧಸ್ಥರು‌ ಬರುವುದೇ ದುಸ್ತರವಾಗಿದೆ. ಬಂದರೆ ಪ್ರೀಶೋ ಗ್ಯಾರೆಂಟಿ. ಇನ್ನು ಸುಬ್ರಹ್ಮಣ್ಯ ಕಾಲೇಜಿನ ಕ್ಲಾಸ್ ಲವರ್ಸ್, ಇಂಟರ್ ಕ್ಲಾಸ್ ಲವರ್ಸ್, ಕಾಲೇಜ್ ಲವರ್ಸ್, ಓಲ್ಡ್ ಸ್ಟೂಡೆಂಟ್ ಪರಬ್ಬ ಪರಬ್ಬು ಲವರ್ಸ್ ಗಳಿಗೆಲ್ಲ ಈ ಪಾರ್ಕ್ ಸ್ವರ್ಗ ಇದ್ದ ಹಾಗೆ. ಚೀಪು & ಬೆಸ್ಟು. ಇವರ ಯೌವನದ ಚುಟು ಚುಟು ಚಟುವಟಿಕೆಗಳ ಪರಿಣಾಮವಾಗಿ ಪಾರ್ಕ್ ತುಂಬಾ ನೀರಿದ್ದು, ಬೀರಿದ್ದು, ಕೂಲ್ ಡ್ರಿಂಕ್ಸಿದ್ದು ಬಾಟಲಿಗಳು, ಇನ್ನು ನೋಡಬಾರದ  ಚೈಲ್ಡ್ ಕಂಟ್ರೋಲರ್ ವಸ್ತುಗಳು ಪಾರ್ಕಿನಲ್ಲಿ ಕಾಣ ಸಿಗುವುದು ಸರ್ವೇ ಸಾಮಾನ್ಯವಾಗಿದೆ. ಈ ಪಾರ್ಕಿನ ಸುತ್ತ ಮುತ್ತ ಅರಣ್ಯವೇ ಇದ್ದು ಇದು ಪ್ರಾಜೆಕ್ಟ್ ವಿದ್‌ ಪ್ರಾಕ್ಟಿಕಲ್ಸ್ ಮಾಡಲು ಬರುವ ಸುಬ್ರಹ್ಮಣ್ಯ ಕಾಲೇಜಿನ ಜೋಕುಲೆಗ್ ವರದಾನವಾಗಿ ಪರಿಣಮಿಸಿದೆ. ಸೊಳ್ಳೆ ಕಡಿಯಲ್ವಾ ಮಾರಾಯ್ರೆ ಇವರಿಗೆ?


  ಇನ್ನು ಪಾರ್ಕಿನ ಮೈಂಟೇನೆನ್ಸ್ ಬಗ್ಗೆ ಬರೆದರೆ ಅದರ ಬಗ್ಗೆ ಕತೆಗಳಿವೆ ಮತ್ತು ಉಪ ಕತೆಗಳೂ ಕೂಡ ಇದೆ ಎಂದು ಗುಸುಗುಸು ಗುಸುಗುಸು ಇದೆ. ಈ ಪಾರ್ಕಿಗೆ ಒಬ್ಬಳು ಕ್ಯಾಷಿಯರ್ ಇದ್ದು ಅವಳದ್ದು ಡೈರೆಕ್ಟ್ ಅಪಾಯಿಂಟ್ಮೆಂಟಾ ಅಥವಾ ರಾಜ್ಯ ಸಭಾ ಸದಸ್ಯೆಯಾ ಎಂದು ಸುಬ್ರಹ್ಮಣ್ಯದಲ್ಲಿ ಯಾರನ್ನು ಕೇಳಿದರೂ ಗೊತ್ತಿಲ್ಲ. ಅವಳಿಗೆ ಸಂಬ್ಳ ಕೊಡೋದು ಯಾರು ಎಂಬ ಪ್ರಶ್ನೆ ಕುಮಾರ ಪರ್ವತದಷ್ಟು ದೊಡ್ಡದಾಗಿ ಬೆಳೆದು ನಿಂತಿದೆ.


   ಇನ್ನುಳಿದಂತೆ ಈ ಪಾರ್ಕಿಗೆ ಎಂಟ್ರಿ ಫೀ‌ ಅಂತ ಪ್ರತೀ ಬಾಡಿಗೆ ಇಪ್ಪತ್ತು ಕೀಳಲಾಗುತ್ತದೆ. ಇನ್ನು ನಿಮ್ಮ ಕಾರಿಗೆ ಪಾರ್ಕಿಂಗ್ ಶುಲ್ಕ ಇಪ್ಪತ್ತು. ಈ ದುಡ್ಡು ಯಾರ ಡಬ್ಬಿಗೆ ಬೀಳುತ್ತದೆ ಎಂದು ಗೊತ್ತಿಲ್ಲ. ಹಾಗೆಂದು ಇದೇನು ದೊಡ್ಡ ಕಬ್ಬನ್ ಪಾರ್ಕ್ ಅಲ್ಲ. ಯಾಕೆ ಈ ಪಾರ್ಕಿಗೆ ದುಡ್ಡು ಸುರಿಯುತ್ತಾರೋ ಅದೂ ಗೊತ್ತಿಲ್ಲ. ಇಷ್ಟೆಲ್ಲಾ ದುಡ್ಡು ಸುರಿದು ಈ ಪಾರ್ಕನ್ನು ಅನೈತಿಕ ಚಟುವಟಿಕೆಗಳ ಅಡ್ಡೆ ಮಾಡುವುದಕ್ಕಿಂತ ದೈಯರ ಅಂಗಡಿಯಿಂದ ಒಂದು ಬೀಗ ತಂದು ಹಾಕುವುದು ಒಳ್ಳೆಯದು.
ಯುವರ್ ಆನರ್,  
    ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಯಾಕೆ ಸಾಲು ಮರ ಬೆಳೆಸಿದಳೆಂದರೆ ಆ ಮರಗಳಿಂದ ಸಮಾಜಕ್ಕೆ ನೆರಳಾಗಿ ಆ ಮೂಲಕ ಜೀವಸಂಕುಲದ ಅಭಿವೃದ್ಧಿಗೆ, ಬೆಳವಣಿಗೆಗೆ ಸಹಕಾರಿಯಾಗಲೆಂದು. ಆದರೆ ನಾವು ಅದೇ ನೆರಳಲ್ಲಿ ಅನೈತಿಕ ಚಟುವಟಿಕೆಗಳ ಮಾಡುತ್ತಿದ್ದೇವೆ. ಒಂದು ಕೆಟ್ಟ ವ್ಯವಸ್ಥೆ, ಕೆಟ್ಟ‌ ಇಲಾಖೆ, ಕೆಟ್ಟ ಜನ ಇದ್ದರೆ ಈ ಸಮಾಜ ಎಂದೂ ಉದ್ಧಾರ ಆಗದು. ಇಲ್ಲಿ ಮಹಾನ್ ವ್ಯಕ್ತಿಗಳ ಮಾರ್ಗದಲ್ಲಿ ಕೆಟ್ಟ ಜನರ, ಕೆಟ್ಟ ಸಾಧನೆಗಳ ಮೆರವಣಿಗೆ ಹೋಗುತ್ತಿದೆ. ಕಳ್ಳನಿಗೆ ಸನ್ಮಾನ ಮಾಡುವ ಸಮಾಜದಿಂದ, ವಂಚಕರಿಗೆ ಡಾಕ್ಟರೇಟ್ ಕೊಡುವ ವಿಶ್ವ ವಿದ್ಯಾಲಯದಿಂದ, ಕಾಲೇಜು ಜೀವನದಲ್ಲಿಯೇ ಅನೈತಿಕ ಚಟುವಟಿಕೆ ಮಾಡುವ ವಿದ್ಯಾರ್ಥಿಗಳಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ?

     




              ಕಾಣಿಯೂರು - ಸುಬ್ರಹ್ಮಣ್ಯ ಇಂಟರ್ ಸ್ಟೇಟ್ ಹೈವೇಯ ಪಂಜ ಸೀಮೆ ಜಂಕ್ಷನ್ ನಲ್ಲಿ ಮೊನ್ನೆ ನಿನ್ನೆ ಎಲ್ಲಾ ಗಲಾಟೆಯೋ ಗಲಾಟೆ. ಲೋಕಸಭೆ ಮುಗ್ಸಿ ಬ್ಯಾನರ್, ಬಂಟಿಂಗ್ಸ್ ಎಲ್ಲಾ ಮಡಚಿ ಅಟ್ಟದಲ್ಲಿಟ್ಟು ಅಮ್ಮಬ್ಬಾ ಎಂದು ಕಾಲು ಚಾಚಿ, ಚಾಚಿ ಮಾಡಲು ಹೊರಟಿದ್ದ ಪಂಜದ ಪೊಲಿಟಿಕಲ್ ಲೀಡರ್ ಗಳಿಗೆ ಪೊಕ್ಕಡೆ ಬೊಬ್ಬೆ ಹೊಡೆಯಲು ಒಂದು ತುಂಡು ಮ್ಯಾಟರು ಸಿಕ್ಕಿಯೇ ಬಿಟ್ಟಿದೆ. ಮೊದಲು ಕಾಂಗ್ರೆಸಿಗರು ಪೋಲಿಸ್ ಗೆ ಹೋದರೆ ನಂತರ ದೇಶಭಕ್ತರು ಮಾರಿ ಓಡಿಸಿದರು.


    ಇವರು ಸನ್ಮಾನ್ಯ ವೆಂಕಪ್ಪಣ್ಣ. ಪಂಜದಲ್ಲಿ ಫ್ಯಾನ್ಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಪಾಪ ಅವರಷ್ಟಕ್ಕೆ ಅವರಿದ್ದರು. ಆದರೆ ಮೊನ್ನೆ ಲೋಕಸಭಾ ರಿಸಲ್ಟ್ ನೋಡಿ ಅದೆಲ್ಲಿತ್ತೋ ಪಿತ್ತ ವೆಂಕಪ್ಪಣ್ಣನ ನೆತ್ತಿಗೇರಿ ಬಿಟ್ಟಿತು. ಹಾಗೆಂದು ವೆಂಕಪ್ಪಣ್ಣನಿಗೆ ಮಾತ್ರ ಪಿತ್ತ ನೆತ್ತಿಗೇರಿದ್ದಲ್ಲ ಸಿಂಧೂ ನಾಗರೀಕತೆಯ ಜೀನ್ಸ್ ಇರುವ ನೂರು ಕೋಟಿಗೂ ಪಿತ್ತ ಕೆಜಲಿತ್ತು. ಆದರೆ ಪಂಜದಲ್ಲಿ ಮಾತ್ರ ವೆಂಕಪ್ಪಣ್ಣನ ಗ್ರಹಗತಿ ಕೆಟ್ಟಿತ್ತು. ದೇಶಭಕ್ತರಿಗೆ ಬಹುಮತ ಬಾರದ ಬೆಚ್ಚದಲ್ಲಿ ವಾಟ್ಸ್ ಆ್ಯಪ್ ತಗೊಂಡು   ಕೈಗೆ ಸಿಕ್ಕಿದ್ದನ್ನೆಲ್ಲ ಗೀಚಿ ಸ್ಟೇಟಸ್ ಹಾಕಿಕೊಂಡಿದ್ದರು. ಇದನ್ನು ಕೌಂಟಿಂಗ್ ಮುಗಿದು ಮುಂದಿನ ಸಲ ಕಪ್ ನಮ್ಮದೇ ಎಂದು ಚಾಚಿ ಮಾಡಲು ಹೊರಟಿದ್ದ ಪಂಜ ಕಾಂಗ್ರೆಸಿಗರು ಇಣುಕಿ ನೋಡಿ ಬಿಟ್ಟರು. ಆ.....ಅಂದು ಬೊಬ್ಬೆ ಹಾಕಿಬಿಟ್ಟರು ಮತ್ತು ಸೀದಾ ಹೋಗಿ ಪೋಲಿಸ್ ದೂರು ಕೊಟ್ಟು ಬಿಟ್ಟರು. ಬೇಕಾ ವೆಂಕಪ್ಪಣ್ಣನಿಗೆ. ಕಾಲ್‌ ಬಂದೇ ಬಂತು ಪೋಲಿಸರಿಂದ. ಪಾಪ ವೆಂಕಪ್ಪಣ್ಣ ಹೋದರು ಸ್ಟೇಷನ್ ಗೆ. ಸರ್ವ ತಪ್ಪಿತು ಎಂದು ಪಂಜದ ಖಾದಿಗಳ ಮುಂದೆ ಮತ್ತು ಸುಬ್ರಹ್ಮಣ್ಯದ ಖಾಕಿಗಳ ಮುಂದೆ ಮುಚ್ಚಳಿಕೆ ಬರೆದು ಕ್ಷಮೆಯಾಚನೆ ಮಾಡಿ ಬಿಟ್ಟರು. ಕಾಂಗ್ರೆಸಿಗರಿಗೆ ಅಲ್ಲಿಗೆ ಕೇಸ್ ಮುಗಿಸಿ ಸುಮ್ಮನೆ ಕೂರ ಬಹುದಿತ್ತು. ಆದರೆ ಸರ್ಕಾರ ಉಂಟಲ್ಲ, ವೆಂಕಪ್ಪಣ್ಣನನ್ನು ಮತ್ತಷ್ಟು ಬಚ್ಚಿಸಲು ನೋಡಿದರು. ಕಾಂಗ್ರೆಸಿಗರ ವಿರುದ್ಧ ಬರೆದ ಪಾಪ ಪ್ರಾಯಶ್ಚಿತ್ತಕ್ಕಾಗಿ ಸ್ಟೇಷನ್ ಹೊರಗೆ ಬಂದು ಕಾಂಗ್ರೆಸಿಗರು ವೆಂಕಪ್ಪಣ್ಣನಿಗೆ ಕೆಲವೊಂದು ಕಂಡೀಷನ್ ಗಳನ್ನು ಹಾಕಿದರು. ಅದರಂತೆ ವೆಂಕಪ್ಪಣ್ಣ ಒಂದು ವಾರ ತನ್ನ ಅಂಗಡಿ ಬಂದ್ ಮಾಡ ಬೇಕು,  ಅಂಗಡಿ ಮುಂದೆ ಕಾಂಗ್ರೆಸಿಗರಿಗೆ ಬಯ್ದ ಪಾಪ ಪ್ರಾಯಶ್ಚಿತ್ತಕ್ಕಾಗಿ ಅಂಗಡಿ ಬಂದ್ ಎಂದು ಬರೆಯ ಬೇಕು, ಲೋಕಲ್ ಪತ್ರಿಕೆಯಲ್ಲಿ ಕ್ಷಮೆ ಕೇಳಿ ಕಾಲಂ ಪ್ರಕಟಿಸ ಬೇಕು ಎಂಬಿತ್ಯಾದಿ ಅಂಡಿಗುಂಡಿ ಷರತ್ತುಗಳು. ಇಲ್ಲದಿದ್ದರೆ ವೆಂಕಪ್ಪಣ್ಣ ಒಳಗೆ ಎಂದು ಕೂಡ ಹೆದರಿಸಲಾಯಿತು. ಕಾಂಗ್ರೆಸ್ ಸರ್ಕಾರ ಉಂಟಲ್ಲ ಹೆದರಿ, ಬೆವರಿ, ಆಯ್ತು ಎಂದು ವೆಂಕಪ್ಪಣ್ಣ ದುಖಾನ್ ಕ್ಲೋಸ್ ಮಾಡಿ ಬಿಟ್ಟರು.
   ಈ ವಿಷಯ ಮಂಡೆಬೆಚ್ಚದಲ್ಲಿ ನೈಂಟಿ, ಸಿಕ್ಸ್ ಟಿ ಹಾಕಿ ಮಲಗಿದ್ದ ದೇಶಭಕ್ತರಿಗೆ ಗೊತ್ತಾಯಿತು. ಓ...... ಪಂಜ ಮುಳುಗಿತು ಎಂಬಂತೆ ಎದ್ದು ಬಿಟ್ಟರು. ರಾತ್ರೋರಾತ್ರಿ ಸಭೆ ಕೂತು, ವೆಂಕಪ್ಪಣ್ಣನಿಗೆ ಗಾಳಿ ಹಾಕಿ ಮರುದಿನವೇ ಅಂಗಡಿ ಓಪನ್ ಮಾಡಿಸಿ ಬಿಟ್ಟರು. ಅದರ ಮರುದಿನ ಪಂಜದಲ್ಲಿ ದೊಡ್ಡ ಪ್ರತಿಭಟನೆ. ಅಮಾಯಕರ ಮೇಲೆ ಕಾಂಗ್ರೆಸ್ ದಬ್ಬಾಳಿಕೆ ಮಾಡುತ್ತಿದೆ ಎಂದು ದೊಡ್ಡ ಸಭೆ. ಸಭೆಯಲ್ಲಿ ಕಡಬ, ಗುತ್ತಿಗಾರು, ಸುಳ್ಯ ಕಡೆಯ ದೇಶಭಕ್ತರಿಂದ ಕಿವಿಯ ಹೂ ಹರಿದು ಹೋಗುವಷ್ಟು ಬೊಬ್ಬೆಯೋ ಬೊಬ್ಬೆ. ಇದೀಗ ಎರಡೂ ಪಾರ್ಟಿಗಳ BP ಡೌನ್ ಗೆ ಬಂದಿದೆ. ವೆಂಕಪ್ಪಣ್ಣನಿಗಂತೂ ಪಾಪ ಮೊಬೈಲ್ ಕಂಡರೆ ಸಾಕು ಅಲ್ಕಿ ಬೀಳುವ ಪರಿಸ್ಥಿತಿ.


  ಹಾಗೆಂದು ಇಲ್ಲಿ ದೇಶ ಭಕ್ತರ ಎಂಟ್ರಿ ಅಗತ್ಯವೇ ಇರಲಿಲ್ಲ. ಯಾಕೆಂದರೆ ವೆಂಕಪ್ಪಣ್ಣ ಹಿಂದೂಗಳಿಗೂ ಅವೈಜ್ಞಾನಿಕ ಪದ ಪ್ರಯೋಗ ಮಾಡಿದ್ದರು. ಹಿಂದೂಗಳ ಜೀನ್ಸನ್ನೇ ಪ್ರಶ್ನೆ ಮಾಡಿದ್ದರು. ಹಾಗೇನಾದರೂ ದೇಶಭಕ್ತರಿಗೆ ಈ ಬಗ್ಗೆ ತಗಡ್ ಬೆಚ್ಚ ಆಗಿದ್ದರೆ ಸೀದಾ ಹೋಗಿ ಪೋಲಿಸ್ ಕಂಪ್ಲೇಂಟ್ ಕೊಡ ಬೇಕಿತ್ತು, ವೆಂಕಪ್ಪಣ್ಣನನ್ನು ಪೋಲಿಸ್ ಬ್ಯಾಂಡಲ್ಲಿ ಠಾಣೆಗೆ ಕರೆಸ ಬೇಕಿತ್ತು. ಆದರೆ ದೇಶಭಕ್ತರಿಗೆ ಹಿಂದೂಗಳಿಗೆ ಬರೆದ ಬಗ್ಗೆ ಬೆಚ್ಚ ಇರಲಿಲ್ಲ ಬದಲಾಗಿ ಕಾಂಗ್ರೆಸಿಗರ ವಿರುದ್ಧ ಬೆಚ್ಚ ಇತ್ತು ಅದಕ್ಕೆ ಪ್ರತಿಭಟನೆ, ಬೊಬ್ಬೆ, ಗಲಾಟೆ ಎಲ್ಲಾ. ವೆಂಕಪ್ಪಣ್ಣ ಹಿಂದೂಗಳ ಬಗ್ಗೆ ಬರೆದ ಲೆಕ್ಕದಲ್ಲಿ ದೇಶಭಕ್ತರು ಅವರ ಚಳಿ ಬಿಡಿಸಿ ಬೆವರಿಳಿಸ ಬೇಕಾಗಿತ್ತು. ಆದರೆ ಕಾಂಗ್ರೆಸ್ಸಿಗರು ವೆಂಕಪ್ಪಣ್ಣನಿಗೆ ವಿರುದ್ಧ ಇದ್ದಾರಲ್ಲ ಅದಕ್ಕೆ ದೇಶಭಕ್ತರು ವೆಂಕಪ್ಪಣ್ಣನ ಪಾರ್ಟಿ. ಹಾಗಾದರೆ ಕಾಂಗ್ರೆಸಿಗೆ ವಿರುದ್ಧ ಇದ್ದವನು ಹಿಂದೂಗಳಿಗೆ ಏನು ಬೇಕಾದರೂ ಬರೆಯ ಬಹುದಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.


  ಇನ್ನು ಈ ಪಂಜ ಕಾಂಗ್ರೆಸಿಗರು ಕೂಡ ವೆಂಕಪ್ಪಣ್ಣನಿಗೆ ಕೊಟ್ಟ ಮದ್ದು ಓವರ್ ಡೋಸ್ ಆಯ್ತು. ಪೋಲಿಸ್ ಕಂಪ್ಲೇಂಟ್ ಮತ್ತು ಮುಚ್ಚಳಿಕೆಯಲ್ಲಿಯೇ ವೆಂಕಪ್ಪಣ್ಣನ ಸಾಧಾರಣ ಎಲ್ಲಾ ಸೀಕ್ ಗಳೂ ಗುಣಮುಖದತ್ತ ಇತ್ತು.  ಠಾಣೆಯಿಂದ  ಹೊರಗೆ ಬಂದು ಅಂಗಡಿ ಬಂದ್ ಮಾಡು, ಕ್ಷಮೆ ಕೇಳು, ಪತ್ರಿಕೆಯಲ್ಲಿ ಕ್ಷಮೆ ಕೇಳು ಎಂದೆಲ್ಲಾ ಕಂಡೀಷನ್ ಹಾಕಿದ್ದು ಕೇರಳ ಸ್ಟೈಲ್ ಆಯ್ತು. ಕೇರಳ ಸ್ಟೈಲ್ ಪಂಜದಲ್ಲಿ ನಡೆಯೋದು ಸ್ವಲ್ಪ ಕಷ್ಟ ಕಷ್ಟ ಅಂತ ಕಾಂಗ್ರೆಸ್ ಬಿ ಟೀಂ, ಎ ಟೀಂ ಎರಡಕ್ಕೂ ಈಗೀಗ ಅರಿವಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಒಂದು ವಾರ ಅಂಗಡಿ ಬಂದ್ ಮಾಡಿದರೆ ಊಟಕ್ಕೆ ಏನು ಮಾಡಲಿ ಎಂದು ಕಾಂಗ್ರೆಸಿಗರಲ್ಲಿ ವೆಂಕಪ್ಪಣ್ಣ ಕೇಳಿದಾಗ " ಊಟಕ್ಕೆ ದೇವಸ್ಥಾನಕ್ಕೆ ಬಾ, ಅಲ್ಲಿ ಡೈನಿಂಗ್ ಹಾಲ್ ನಲ್ಲಿ ಕೆಲಸವೂ ಉಂಟು, ಊಟವೂ ಉಂಟು" ಎಂದು ಅಂದಿದ್ದರಂತೆ ಪಂಜದ ಜನಪ್ರಿಯ ಕಾಂಗ್ರೆಸ್ ನಾಯಕರೊಬ್ಬರು. ಪಂಜ ದೇವಸ್ಥಾನ ಪ್ರೈವೇಟಾ?

    


              ಪೆರ್ಲ ಯಾವ ಪೋಲಿಸ್ ಸ್ಟೇಷನ್ ಸರಹದ್ದಿನಲ್ಲಿ ಬರುತ್ತದೆ ಎಂದು ಗೊತ್ತಿಲ್ಲ. ಅದು ಕರ್ನಾಟಕ ಅಲ್ಲ. ಕೇರಳ ಸ್ಟೇಟ್ ನ ವಿಷಯ. ವಿಷಯ ಎಂಥದ್ದಿಲ್ಲ ಅಲ್ಲಿ ಪೆರ್ಲದ ಗುಡ್ಡೆಯಲ್ಲಿ ದಿನಾ ಜುಗಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಪೆರ್ಲದ ಗುಡ್ಡೆಯಲ್ಲಿ ಟೆಂಟ್ ಹಾಕಿ, ಬರ್ಸದ ನೀರು ಬೀಳದ ಹಾಗೆ ಶೀಟ್ ಹಾಕಿ, ಫೆಡ್ಲೈಟ್ ಬೊಲ್ಪಿನಲ್ಲಿ ಇಂಟರ್ ಸ್ಟೇಟ್ ಜುಗಾರಿ ನಡೆಸಲಾಗುತ್ತಿದೆ. 


    ಈ ಜುಗಾರಿ ಗೇಮ್ ಗೆ ಇತ್ಲ ಕಡೆಯಿಂದ ಪುತ್ತೂರು, ಬಂಟ್ವಾಳ, ಕಡಮ್ಮ ತಾಲೂಕಿನ ಹೈಟೆಕ್ ಜುಗಾರಿ ಪ್ಲೇಯರ್ಸ್ ಕೂಡ  ಬರುತ್ತಿದ್ದು ಇಲ್ಲಿನ ಜುಗಾರಿ ಸ್ವಯಂ ಸೇವಕರು ಇದ್ದವರನ್ನೆಲ್ಲ ಹೊತ್ತುಕೊಂಡು ಬಂದು ಅತ್ತುಕೊಂಡು ಹೋಗುತ್ತಿದ್ದಾರೆ. ಪೆರ್ಲ ಗುಡ್ಡೆಯಲ್ಲಿ ಕೋಮಣವನ್ನೂ ಕಳೆದುಕೊಂಡು ‌ಹೋದವರ ಸಂಖ್ಯೆಯೂ ದೊಡ್ಡದಿದೆ. ಈ ಜುಗಾರಿ ಅಡ್ಡೆ ಬಹಳ ದಿನಗಳಿಂದ ಚಾಲ್ತಿಯಲ್ಲಿದ್ದು   ಸಂಬಂಧ ಪಟ್ಟ ಪೋಲಿಸರಿಗೆ ಗುಡ್ಡೆ ಹತ್ತಲು ಬಹಳ ಕಷ್ಟವಾದ ಕಾರಣ ಜುಗಾರಿ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ. ಅದರಲ್ಲೂ ಪೆರ್ಲ ಗುಡ್ಡೆಯಲ್ಲಿ ಭಯಂಕರ ನೈಟ್ ಶುರುವಾದ ಮೇಲೆ ಜುಗಾರಿ ಕಲ ಬಿಡಿಸುತ್ತಿದ್ದು ಒಂದು ಮೆನ್ಪುರಿ  ಲೈಟ್ ಹಾಕಿಕೊಂಡು ಸೂಸು ಮಾಡಲು ಬಂದರೂ " ಅದು ಮೆನ್ಪುರಿ" ಎಂಬ ಕರೆಕ್ಟ್ ಮೆಸೇಜ್ ಬರುವಷ್ಟು ಇವರ ನೆಟ್ ವರ್ಕ್ ಇದೆ. ಹಾಗಾಗಿ ಇಲ್ಲಿ ತನಕ ಈ ಪರಮ ಪವಿತ್ರ ಸ್ಥಳಕ್ಕೆ ಯಾವುದೇ ಪೋಲಿಸರು ರೈಡು ಬಿದ್ದಿಲ್ಲ.


  ಇವತ್ತು ಕೂಡ ನೈಟ್ ಪೆರ್ಲ ಗುಡ್ಡೆಯಲ್ಲಿ ಜುಗಾರಿ ಇದ್ದು ಜುಗಾರಿಕೋರರು ಈಗಾಗಲೇ ಪೌಡರ್ ಬಳಿದುಕೊಂಡು ಫ್ರೆಂಡ್ ಮನೆಯಲ್ಲಿ ಕುಲೆಗಳಿಗೆ ಬಡಿಸ್ಲಿಕೆ ಉಂಟು ಎಂದು ಪಜ್ಜಿ ಪಜ್ಜಿಲೊಟ್ಟೆ ಹೇಳಿ ಮನೆಯಿಂದ ಹೊರಟು ಪೆರ್ಲ ಗುಡ್ಢೆ ಕಡೆ ಹೊರಟಿದ್ದಾರೆ. ಸಂಬಂಧಪಟ್ಟ ಪೋಲಿಸರಿಗೆ ಗುಡ್ಡೆ ಹತ್ತಲು ಕಷ್ಟವಾದರೆ ರಿಕ್ಷಾದಲ್ಲಿಯಾದರೂ ಹೋಗಿ ಡೆಡೆನ್ ಡಿಶ್ ಎಂದು ಒಮ್ಮೆ ಜುಗಾರಿಕೋರರ ಎದುರು ಪ್ರತ್ಯಕ್ಷರಾಗಿ ವರ ಕೊಟ್ಟು ಬರೋದು ಒಳ್ಳೆಯದು. ಇಲ್ಲದಿದ್ದರೆ ಗುಡ್ಡೆಯಲ್ಲಿ ಜಾತ್ರೆ, ರಥೋತ್ಸವ ಎಲ್ಲಾ ಮಾಡಿಯಾರು.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget