ಸುಬ್ರಹ್ಮಣ್ಯ: ಭೂಮಿಗೆ ಹಸಿರು ಹೊದಿಕೆ ! 2.03 ಲಕ್ಷ ಗಿಡಗಳು ಗುಂಡಿಗೆ

          



           ಒಂದು ಮಳೆ ಬಿದ್ದರೆ ಸಾಕು ಅರಣ್ಯ ಇಲಾಖೆಯವು ಪೌಡರ್ ಬಳಿದುಕೊಂಡು, ಕ್ರಾಪ್ ಸರಿ ಮಾಡಿಕೊಂಡು, ಹೊಸ ಹೊಸ ಬಟ್ಟೆ ಧರಿಸಿಕೊಂಡು ರೆಡಿಯಾಗಿ ಬಿಡ್ತಾರೆ ವನ ಮಹೋತ್ಸವ ಮಾಡಲು. ಈ ವನಮಹೋತ್ಸವ ಎಂಬ ಉತ್ಸವ ಮಾರ್ನೆಮಿಯ ಹಾಗೆ ವರ್ಷ ವರ್ಷವೂ ಬರುತ್ತಾ ಇರುತ್ತದೆ. ಈ ಸಲವೂ ಗಮ್ಮತ್ ಇರಬಹುದು ವನಮಹೋತ್ಸವ ಲೆಕ್ಕದಲ್ಲಿ.
   ಅಲ್ಲಿ ಸುಬ್ರಹ್ಮಣ್ಯ ಉಪವಿಭಾಗದಲ್ಲಿ ಈ ವರ್ಷ "ಭೂಮಿಗೆ ಹಸಿರು ಹೊದಿಕೆ" ಎಂಬ ಟೈಟಲ್ ಅಡಿಯಲ್ಲಿ 2.03 ಲಕ್ಷ ಗಿಡಗಳನ್ನು ಮಾಡಿ ಅದನ್ನು ಗುಂಡಿಗೆ ಹಾಕಲು ರೆಡಿಯಾಗಿದ್ದಾರೆ.  ಸುಬ್ರಹ್ಮಣ್ಯ ಉಪವಿಭಾಗದಲ್ಲಿ ಈ ಮರ್ಯಲದಲ್ಲಿ 243.8 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಸಲು ಅರಣ್ಯ ಇಲಾಖೆ ಪಣ ತೊಟ್ಟಿದೆ. ಅದರಲ್ಲಿ ಸುಳ್ಯ ವಲಯ, ಪಂಜ ವಲಯ, ಸುಬ್ರಹ್ಮಣ್ಯ ವಲಯಗಳು  ಸೇರಿದ್ದು ಮುಂದಿನ ವರ್ಷಗಳಲ್ಲಿ ಈ ಮೂರೂ ವಲಯಗಳು ಪಚ್ಚೆ ಪಚ್ಚೆ ಆಗಲಿವೆ. ಸುಳ್ಯ ವಲಯದ ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ ಐವತ್ತೈದು ಸಾವಿರ ಗಿಡಗಳನ್ನು ತೊಟ್ಟೆಯಲ್ಲಿ ಬೆಳೆಸಲಾಗಿದ್ದು ಅರಂತೋಡಿನ ನೆಕ್ಕರೆ, ದೇವಚಳ್ಳದ ಮಂಜೊಳುಕಜೆ, ಆಲೆಟ್ಟಿಯ ಕೂಟೇಲ್, ಮರ್ಕಂಜದ ಕಾಯೇರ್ ಭಾಗಗಳಿಗೆ ಈ ಸಲ ಹಸಿರು ಹೊದಿಕೆ ಹಾಸಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು ಪಂಜ ವಲಯದಲ್ಲಿ 95 ಹೆಕ್ಟೇರ್ ಮತ್ತು ಸುಬ್ರಹ್ಮಣ್ಯ ವಲಯದಲ್ಲಿ 168 ಹೆಕ್ಟೇರ್ ಪ್ರದೇಶವನ್ನು ಪಚ್ಚೆ ಪಚ್ಚೆ ಮಾಡಲಾಗುವುದು ಎಂದು ತಿಳಿದುಬಂದಿದೆ.


    ಹಾಗೆ ನೋಡಿದರೆ ಸುಬ್ರಹ್ಮಣ್ಯ ಉಪವಿಭಾಗದ ಪಂಜ ವಲಯ ಮರಗಳ್ಳರ ಸ್ವರ್ಗ ಇದ್ದ ಹಾಗೇ. ಸಣ್ಣ ಕಳ್ಳರು, ಹದ ಕಳ್ಳರು, ದೊಡ್ಡ ಕಳ್ಳರು ಹೀಗೆ ಎಲ್ಲಾ ಸೈಜಿನ ಮರಗಳ್ಳರ ತವರು ಪಂಜ ವಲಯ. ಈ ವರ್ಷ ಇದೇ ಮರಗಳ್ಳರ ತವರಿನಲ್ಲಿ  95 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಸಲು ಗುಂಡಿ ಪೆರೆಸ್ಸಿ ರಿಪೇರಿ ಮಾಡಲಾಗಿದೆ.
   ಹಾಗೆಂದು ಪ್ರತೀ ವರ್ಷವೂ ಅರಣ್ಯ ಇಲಾಖೆ ಲಕ್ಷ ಲಕ್ಷ ಗಿಡಗಳನ್ನು ನೆಡಲು ಕೋಟಿ ಲೆಕ್ಕದಲ್ಲಿ ಖರ್ಚು ಮಾಡುತ್ತಿದೆ. ಕಳೆದ ವರ್ಷವೂ ಲಕ್ಷ ಲಕ್ಷ ಗಿಡಗಳನ್ನು ನೆಡಲಾಗಿದೆ. ಅದಕ್ಕೆ ಹಿಂದಿನ ವರ್ಷ ವರ್ಷವೂ ನೆಡಲಾಗಿದೆ, ಕೋಟಿ ಕೋಟಿ ಖರ್ಚು ಮಾಡಲಾಗಿದೆ. ಎಲ್ಲಿದೆ ನೆಟ್ಟ ಗಿಡಗಳು?


  ಹಾಗೆಂದು ಇದೊಂದು ಸರಕಾರೀ ಮಾಫಿಯಾ. ಎಷ್ಟೋ ವರ್ಷಗಳ ಹಿಂದೆ ತೆಗೆದ ಗುಂಡಿಗಳನ್ನೇ ರಿಪೇರಿ ಮಾಡಿ ಅದಕ್ಕೆ ಗಿಡಗಳನ್ನು ನೆಟ್ಟು ಬಿಲ್ ಮಾಡಲಾಗುತ್ತದೆ. ಸಸ್ಯ ಕ್ಷೇತ್ರಗಳಿಂದ ತರುವಾಗಲೇ ಗಿಡಗಳನ್ನು ಅರೆಜೀವ ಮಾಡಿಯೇ ತರಲಾಗುತ್ತದೆ. ಅರೆಜೀವ ಗಿಡಗಳನ್ನು ಗುಂಡಿಗೆ ಹಾಕಿ ಸ್ನಾನ ಮಾಡಿ ಸೂತಕ ಮುಗಿಸಿ ವರ್ಷ ವರ್ಷವೂ ಕೋಟಿ ಕೋಟಿ ಬಾಚಲಾಗುತ್ತಿದೆ. ಎಲ್ಲಿದೆ ನೆಟ್ಟ ಗಿಡಗಳು?
   ಇನ್ನು ಆ ಸಾಮಾಜಿಕ ಅರಣ್ಯದ ಕತೆಗಳು, ಉಪ ಕತೆಗಳು, ಕಥಾಸಂಕಲನಗಳ ಕತೆ ಬೇರೆಯೇ ಇದೆ. ವರ್ಷ ವರ್ಷವೂ ಸಾಮಾಜಿಕ ಅರಣ್ಯ ಬೆಳೆಸಲು ಕೋಟಿ ಕೋಟಿ ಗುಂಡಿಗೆ ಹಾಕಲಾಗುತ್ತಿದೆ. ಇನ್ನು ಸಾಮಾಜಿಕ ಅರಣ್ಯದಲ್ಲಿ ವಾಸ್ತು ಪ್ರಕಾರ ಗಿಡಗಳನ್ನು ನೆಡಲಾಗುತ್ತದೆ.     ಈ ವಾಸ್ತು ಸರಿಯಾಗಿ ಕರೆಂಟ್ ಲೈನಿನ ಅಡಿಯಲ್ಲಿಯೇ  ಬರುತ್ತದೆ. ಇವರು ಸಾಮಾಜಿಕ ಅರಣ್ಯದ ವಾಸ್ತು ಪ್ರಕಾರ ಕರೆಂಟ್ ಲೈನಿನ ಅಡಿಯಲ್ಲಿ ಗಿಡ ನೆಡೋದು, ಲೈನ್ ಮ್ಯಾನ್ ಬಂದು ಅದನ್ನು ಕಡಿಯುವುದು. ಮುಂದಿನ ವರ್ಷ ಪುನಃ ಕರೆಂಟ್ ಲೈನಿನ ಅಡಿಯಲ್ಲಿ ಸಾಮಾಜಿಕ ಅರಣ್ಯದ ಯೋಜನೆ, ಮತ್ತೇ ಲೈನ್ ಮ್ಯಾನ್. ಇದು ತುಂಬಾ ವರ್ಷಗಳಿಂದ ನಡೆದು ಬರುತ್ತಿರುವ ವಿದ್ಯಮಾನಗಳು. ಈ ಸಾಮಾಜಿಕ ಅರಣ್ಯದ ಇನ್ನೊಂದು ಕತೆ ಏನೆಂದರೆ ಅರಣ್ಯದಲ್ಲಿ ಉಳಿದ ಮರ ಕಡಿಯುವಾಗ ಒಂದು ಲೋಡ್ ಮರ ಅರಣ್ಯ ಇಲಾಖೆಯ ಡಿಪೋಗೆ ಹೋದರೆ ಐದು ಲೋಡು ಕೇರಳ ಕಡೆ. ಇನ್ನು ಈ ಸಾಮಾಜಿಕ ಅರಣ್ಯ ಯೋಜನೆಯ ಇನ್ನೊಂದು ಸೀಕ್ರೆಟ್ ಏನೆಂದರೆ ಇಲ್ಲಿ ಗಿಡ ನೆಡುವಾಗ ಅರಣ್ಯ ಇಲಾಖೆಯ ದೊಡ್ಡವರಿಗೆ ಅಂದರೆ ರೇಂಜರ್ ಮಟ್ಟದಿಂದ ಮೇಲಿನವರಿಗೆ ದುಡ್ಡಿನ  ಬರ್ಸವೂ ನಂತರ ಮರ ಕಡಿಯುವಾಗ ಫಾರೆಸ್ಟರ್ ಮತ್ತು ಗಾರ್ಡ್ ಗಳು ದುಡ್ಡಿನ ಬೊಳ್ಳದಲ್ಲಿ ಈಜಾಡುತ್ತಾರೆ ಎಂಬ ಪ್ರತೀತಿ ಇದೆ.  ಎಲ್ಲಿದೆ ನೆಟ್ಟ ಗಿಡಗಳು?


     ಇನ್ನು ಈ ಗಿಡಗಳನ್ನು ಅರಣ್ಯದ ನೆಡುತೋಪುಗಳಲ್ಲಿ ನೆಡಲಾಗುತ್ತದೆ.    ಚಿಕ್ಕ ಚಿಕ್ಕ ಗಿಡಗಳನ್ನು ಮಿಸ್ಟರ್ ಮೇರ್ ತಿಂದುಂಡು ಬಿಟ್ಟರೆ ದೊಡ್ಡ ಗಿಡಗಳನ್ನು ಕಾಟಿಗಳು ಮಟಾಷ್ ಮಾಡಿ ಬಿಡುತ್ತದೆ. ಉಳಿದ ಗಿಡಗಳು ದೊಡ್ಡದಾಗಿ ಮದುವೆಗೆ ರೆಡಿಯಾಗುವಾಗ ಬಸಳೆಗೆ ದೊಂಪ ಹಾಕಲು, ಬಚ್ಚಿರೆಗೆ ಸೂನೋ ಹಾಕಲು ಎಂದು ಲಿಂಗಪ್ಪಣ್ಣ ಬಂದು ಖಾಲಿ ಮಾಡಿ ಬಿಡುತ್ತಾರೆ. ಆದರೆ ಗುಂಡಿ ಅಲ್ಲೇ ಇರುತ್ತದೆ. ಅದೇ ಗುಂಡಿಗೆ ವರ್ಷ ವರ್ಷವೂ ಗಿಡಗಳನ್ನು ಹಾಕಿ ಕೋಟಿ ಕೋಟಿ ಮುಗಿಸೋದು. ಪ್ರತೀ ವರ್ಷವೂ ಗಿಡಗಳನ್ನು ನರ್ಸರಿಗಳಲ್ಲಿ ತೊಟ್ಟೆಗೆ ಹಾಕುವಲ್ಲಿಂದ ಹಿಡಿದು ಅದನ್ನು ಕೊಂಡೋಗಿ ಗುಂಡಿಗೆ ಹಾಕುವಲ್ಲಿ ತನಕದ ಪ್ರಕ್ರಿಯೆ ಮಾತ್ರ ನಮಗೆ ಪರದೆಯ ಮುಂದೆ ಕಾಣುತ್ತದೆ. ಉಳಿದದ್ದು ಪರದೆಯ ಹಿಂದೆ.
ಯುವರ್ ಆನರ್,  
    ಕಳೆದ ಹತ್ತು ವರ್ಷಗಳಿಂದ ಇವರು ನೆಟ್ಟ ಗಿಡಗಳಿಲ್ಲ, ಕೋಟಿ ಕೋಟಿ ದುಡ್ಡಿನ ಲೆಕ್ಕವಿಲ್ಲ.ಒಂದು ಉಪ ವಿಭಾಗದಲ್ಲಿ ವರ್ಷ ವರ್ಷವೂ ಲಕ್ಷ ಲಕ್ಷ ಗಿಡಗಳನ್ನು ನೆಟ್ಟಿದ್ದರೆ ಆ ಗಿಡಗಳ ಕತೆ ಏನಾಯಿತು? ಅವುಗಳಲ್ಲಿ ಹತ್ತು ಪರ್ಸೆಂಟ್ ಗಿಡಗಳು ಬದುಕುಳಿಯುತ್ತಿದ್ದರೂ ಒಂದು ಉಪ ವಿಭಾಗವೇ ಗೀರ್ ಅರಣ್ಯವಾಗುತ್ತಿತ್ತು, ಸಿಂಹ ಬಂದು ಕೂರುತ್ತಿತ್ತು. ಸುಳ್ಯ ತಾಲೂಕೇ ಇರುತ್ತಿರಲಿಲ್ಲ.ವರ್ಷ ವರ್ಷವೂ ಅದೇ ಸಿನೆಮಾ, ಅದೇ ಕತೆ. ಅದೇ ಮದ್ಯ ಹೊಸ‌ ಬಾಟಲು. ಇವರು ಸತ್ಯ ಹರಿಶ್ಚಂದ್ರನ ಫ್ಯಾಮಿಲಿಯವರೇ ಆಗಿದ್ದರೆ ಕಳೆದ ಹತ್ತು ವರ್ಷಗಳಿಂದ ಇವರು ನೆಟ್ಟು ಬೆಳೆಸಿದ ಕಾಡಿನ ಅಡ್ರೆಸ್ ಕೊಡಲಿ ಮಾಡಿದ ಸಾಧನೆಗಳ ಅಂಕಿಅಂಶಗಳ ಪಟ್ಟಿ ಇಡಲಿ. ಕಳೆದ  ಹತ್ತು ವರ್ಷಗಳಿಂದ ಇವರು ಮಾಡಿದ ಖರ್ಚು, ಅದರಿಂದ ಇಲಾಖೆಗೆ ಆದ ಲಾಭ, ಅದರ ರಿಸಲ್ಟ್ ಏನು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಿ.  ಪ್ರತಿ ವರ್ಷ ವರ್ಷವೂ ಒಂದೇ ಸೈಜಿನ ಸುಳ್ಳು ಕೇಳಿ ಕೇಳಿ ಕಿವಿ ಹೂಗಳು ಬಾಡಿ ಹೋಗಿದೆ, ಮುದುಡಿ ಹೋಗಿವೆ. ಇನ್ನು ರೈಲು ನಿಲ್ಲಲಿ. ಈ‌ ರಿಸರ್ವ್ ಫಾರೆಸ್ಟ್, ಸಾಮಾಜಿಕ ಅರಣ್ಯ , ಹಸಿರು ಹೊದಿಕೆ ಎಂಬುದೆಲ್ಲ ಒಂದು ಭ್ರಮೆ.    ಆ ಶಬ್ದಗಳನ್ನು ಕೇಳುವಾಗಲೇ ನಗು ಬರುತ್ತದೆ ಮತ್ತು ಪತ್ರಿಕೆಗಳಲ್ಲಿ ಮರಗಳ್ಳರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಫೋಟೋ ನೋಡುವಾಗ ಬಿದ್ದು ಬಿದ್ದು ನಗು ಬರುತ್ತದೆ. ಸಾಕು ಸಾಕು ಹಸಿರು ಹೊದಿಕೆ ಹೊದ್ದದ್ದು ಸಾಕು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget