ಪುತ್ತೂರು: ಚೆಲ್ಯಡ್ಕ ಸಂಕದ ಶಂಕುಸ್ಥಾಪನೆಗೆ ಮುನ್ನವೇ 25 ಲಕ್ಷ ಗುಳುಂ

 


  ಅದೊಂದು ಓಬಿರಾಯನ ಕಾಲದ ಸಮಸ್ಯೆ. ಪುತ್ತೂರು ಕ್ಷೇತ್ರದ  ಶಾಸಕರಾಗಿದ್ದವರು ಈ ರಾಜ್ಯದ ಮುಖ್ಯಮಂತ್ರಿ ಆದಾಗಲೂ ಈ ಸಂಕದ ಸಮಸ್ಯೆ ಪರಿಹಾರ ಕಾಣಲಿಲ್ಲ. ಈ‌ ಒಂದು ಸಮಸ್ಯೆಯ ಪರಿಹಾರಕ್ಕೆ ಆ ಭಾಗದ ಜನ ಅಶೋಕ್ ಕುಮಾರ್ ರೈ ಎಂಬ ಜನನಾಯಕ ಪುತ್ತೂರು ಶಾಸಕನಾಗುವ ತನಕ ಕಾಯ ಬೇಕಾಯಿತು. ಶಬರಿ ರಾಮನನ್ನು ಕಾದಂತೆ, ಭಾರತೀಯರು ವಿಶ್ವಕಪ್ ಕಾದಂತೆ. ಇದೀಗ ಈ ಸಮಸ್ಯೆ ಮುಗಿಯುವ ಹಂತದಲ್ಲಿದೆ. ಆದರೆ ಎಲ್ಲರೂ ಸೇರಿ ಮದುವೆ ಖರ್ಚು ಚಪ್ಪರದಲ್ಲೇ ಮುಗಿಸುವ ಹುನ್ನಾರದಲ್ಲಿದ್ದಾರೆ. ಎಲ್ಲಿಯಾದರೂ ಸಂಕ ಬಾಕಿಯಾದರೆ ಮಾರಾಯ್ರೆ!   
ಇದು ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆಯ ಕತೆ. ಇದೊಂದು ಮುಳುಗು ತಜ್ಞ ಸೇತುವೆ. ಬೇಸ, ಕಾರ್ತೆಲ್, ಆಟಿ, ಸೋಣಗಳಲ್ಲಿ ಈ ಸಂಕ ಸಂಕಷ್ಟದಲ್ಲಿರುತ್ತದೆ. ಅದಕ್ಕೆಂದೇ ಶಾಸಕ ಅಶೋಕ್ ಕುಮಾರ್ ರೈ ಕಳೆದ ಬಜೆಟ್ ನಲ್ಲಿ ಹೊಸ ಸಂಕ ಮಾಡಲು ಮೂರು ಕೋಟಿ ಅನುದಾನ ಮೀಸಲಿಡಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವ ಕಾರಣ ನಂತರದ ದಿನಗಳಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿ ಗುತ್ತಿಗೆದಾರರೊಬ್ಬರು ಸದ್ರಿ ಅನುದಾನದ ಮಂಜೂರಾತಿಗೆ ಕೆಲಸ ಮಾಡಲು ಶುರುವಿಟ್ಟುಕ್ಕೊಂಡಿದ್ದರು ಮತ್ತು ಆ ಕಾಮಗಾರಿಯ ಟೆಂಡರನ್ನು ತಾವೇ ಪಡೆದು ಕೊಳ್ಳುವ ಇರಾದೆಯಲ್ಲಿದ್ದರು. ಈ ಬಗ್ಗೆ ಸಂಬಂಧ ಪಟ್ಟವರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು. ಆದರೆ ಆ ಕೆಲಸಕ್ಕೆ ಇಳಿದ ಮೇಲೆ ಅವರಿಗೆ ಅದರ ಆಳ ಅಗಲ ಗೊತ್ತಾಗಿ ಹೋಯ್ತು. ಯಾಕೆಂದರೆ PWD ಇಲಾಖೆಯಲ್ಲಿ ಬಡಿಸಿದಷ್ಷು ಮುಗಿಯದ ಸಂಖ್ಯೆಯಲ್ಲಿ ಕುಲೆಗಳಿವೆ, ಭೂತಗಳಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ, ಗುತ್ತಿಗೆದಾರರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಯಾಗಿದ್ದರೂ, ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಸದ್ರಿ ಗುತ್ತಿಗೆದಾರರು ಚೆಲ್ಯಡ್ಕ ಸಂಕದ ಅನುದಾನದ ಮಂಜೂರಾತಿಗೆ ಬರೋಬ್ಬರಿ ಇಪ್ಪತ್ತು ಲಕ್ಷ ರೂಪಾಯಿಗಳನ್ನು PWD ಇಲಾಖೆಯ ಭೂತಗಳಿಗೆ ಮತ್ತು ಕುಲೆಗಳಿಗೆ ಬಡಿಸಿಯೇ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದರು.


ಹಾಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಇಪ್ಪತ್ತು ಲಕ್ಷ ಲಂಚ‌ ಮತ್ತು ಲಂಚ್ ಕೊಟ್ಟು ಅನುದಾನ ಮಂಜೂರು ಮಾಡಿಸಿಕೊಂಡು ಬಂದ ಗುತ್ತಿಗೆದಾರರಿಗೆ ಟೆಂಡರ್ ಸಮಯದಲ್ಲಿ ಶಾಕ್ ಒಂದು ಕಾದಿತ್ತು. ಸಂಕದ ಟೆಂಡರ್ ಸಮಯದಲ್ಲಿ ಅಲ್ಲಿ ಒಬ್ಬ ಹೊಸ ಗುತ್ತಿಗೆದಾರನ ಎಂಟ್ರಿ ಆಗಿತ್ತು. ಯಾರೆಂದು ನೋಡಿದರೆ ಕೇಡರ್ ಭಟ್ರು, ದುಡ್ಡಿನ ಚೀಲ ಹಿಡಕ್ಕೊಂಡು ರೆಡಿಯಾಗಿ ನಿಂತಿದ್ದಾರೆ. ಏನು ಭಟ್ರೇ ನಿಮ್ಮ ಕತೆ ಎಂದು ಕೇಳಿದರೆ ನಾನೂ ಟೆಂಡರ್ ಕರೆಯುತ್ತೇನೆ ಎಂದು ಭಟ್ರು ಘೋಷಿಸಿದ್ದಾರೆ. ಆಗ PWDಗೆ ಇಪ್ಪತ್ತು ಲಕ್ಷ ಅಗೆಲು ಬಡಿಸಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿದ್ದ ಗುತ್ತಿಗೆದಾರನ ಚಡ್ಡಿ ಜಾರುವ ಸ್ಥಿತಿಗೆ  ಬಂದಿದೆ. ಹಾಗೆ ಇಬ್ಬರೂ ಗುತ್ತಿಗೆದಾರರ ಮಧ್ಯೆ ಕುಂತು, ನಿಂತು ಎಲ್ಲಾ ಸೈಜಿನ ಮಾತುಕತೆಗಳು ನಡೆದರೂ ಭಟ್ರು ಟೆಂಡರಿಂದ ಹಿಂದೆ ಸರಿಯಲು ಒಪ್ಪಲೇ ಇಲ್ಲ. ಕಡೆಗೆ ವಿವಾದ ಪುತ್ತೂರಿನ ಪ್ರಭಾವೀ ಕಾಂಗ್ರೆಸ್ ನಾಯಕರೊಬ್ಬರ ಎದುರು ಬಂದಿತ್ತು. ಅವರೂ ಹಾಗೇ ಸುಮ್ಮನೆ ಪಂಚಾಯಿತಿ ನಡೆಸದೆ ತನ್ನದೇ ಪಕ್ಷದ, ಪಕ್ಷ ಪದಾಧಿಕಾರಿ ಗುತ್ತಿಗೆದಾರನಿಂದ ಐದು ಲಕ್ಷ ರೂಪಾಯಿಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಿಯೇ ಭಟ್ರರನ್ನು ಸಂಕದ ಟೆಂಡರ್ ಪ್ರಕ್ರಿಯೆಯಿಂದ ಹಿಂದೆ ಸರಿಸಿದ್ದರು. ಅಲ್ಲಿಗೆ ಚೆಲ್ಯಡ್ಕ ಸಂಕದ ಬಾಬ್ತು ಮೂರು ಕೋಟಿಯಲ್ಲಿ ಇಪ್ಪತ್ತೈದು ಲಕ್ಷ ಮುಗಿದು ಹೋಗಿದೆ. ಇನ್ನು ಉಳಿದಿರುವ ದುಡ್ಡು ಎರಡು ಕೋಟಿ ಎಪ್ಪತ್ತೈದು ಲಕ್ಷ. ಅದರಲ್ಲಿ ಲೋಕಲ್ ಭೂತಗಳಿಗೆ, ಸ್ಥಳೀಯ ಕುಲೆಗಳಿಗೆ ಬಡಿಸಲು, ಅದಕ್ಕೆ ಇದಕ್ಕೆ ಅಂತ ಒಂದು ಹತ್ತು ಲಕ್ಷ, ಇನ್ನು ಗುತ್ತಿಗೆದಾರ ಸಿಮೆಂಟು ತಿಂದು, ಕಬ್ಬಿಣ ನುಂಗಿ ಮಾಡಿಕೊಳ್ಳುವ ಲಾಭ ಕಡಿಮೆ ಅಂದರೂ ಒಂದು ಇಪ್ಪತ್ತೈದು ಲಕ್ಷ ಎಂದು ತೆಗೆದಿಟ್ಟರೂ ಚೆಲ್ಯಡ್ಕ ಸಂಕಕ್ಕೆ ಉಳಿಯುವುದು ಎರಡು ನಲವತ್ತು. ಆ ಎರಡು ನಲವತ್ತರಲ್ಲಿ ಸಂಕ ಮಾಡಿ ನಿಲ್ಲಿಸ ಬೇಕು. ಸಂಕ ಹೇಗೆ ಆಗ ಬಹುದು, ಅದರ ಆಯುಷ್ಯ ಏನು ಎಂಬುದನ್ನು ಕಾಲವೇ ನಿರ್ಧರಿಸ ಬೇಕಷ್ಟೇ.
  ಇಷ್ಟಕ್ಕೂ ಈ ಭಟ್ರು ಯಾರು ಮಾರಾಯ್ರೆ? ಟೆಂಡರ್ ಟೈಮಲ್ಲೇ ಶಿವ ಪೂಜೆಯಲ್ಲಿ ಕರ್ಡಿ ಬಂದ ಹಾಗೆ ಯಾಕೆ ಬಂದದ್ದು? ಭಟ್ರ ಹಿಂದೆ ಬೇರೆ ಯಾವುದಾದರೂ ಭೂತ ಇದೆಯಾ? ಗೊತ್ತಿಲ್ಲ. ಚೆಲ್ಯಡ್ಕ ಸಂಕದ ಮೇಲೆ ಕುಂತು ಅಷ್ಟಮಂಗಲ ಪ್ರಶ್ನೆ ನೋಡಬೇಕಷ್ಟೇ.





Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget