ಸುಬ್ರಹ್ಮಣ್ಯ: ಸ್ಟೇಟ್ ಹೈವೇಯನ್ನು ನುಂಗಲು ಕುಮಾರಧಾರ ರೆಡಿ!

               

       ಹಾಗೆ ನೋಡಿದರೆ ಮಂಜೇಶ್ವರ - ಸುಬ್ರಹ್ಮಣ್ಯ ಸ್ಟೇಟ್ ಹೈವೇ ಇಷ್ಟೆಲ್ಲಾ ಅಭಿವೃದ್ಧಿ ಕಾಣಬಹುದೆಂದು ಯಾರೂ ಕನ ಮನಸ್ಸಿನಲ್ಲೂ ನೆನೆಸಿರಲಿಲ್ಲ. ಕೇವಲ ಸಿಂಗಲ್ ರೋಡ್ ಆಗಿದ್ದು ಕೊಂಡು ಸೈಡ್ ಕೊಡುವ ವಿಷಯದಲ್ಲಿ ದಿನಾ ಪೆಟ್ಟುಗುಟ್ಟಿಗೆ ಕಾರಣವಾಗುತ್ತಿದ್ದ ಈ ರಸ್ತೆ ನಂತರದ ದಿನಗಳಲ್ಲಿ ಡಬಲ್ ರೋಡ್ ವಿದ್ ಇಂಟರ್ ಸ್ಟೇಟ್ ಹೈವೇ ಕೆಟಗರಿಗೆ ಪ್ರಮೋಟ್ ಆದದ್ದು ಈಗ ಇತಿಹಾಸ. ಈಗ ಈ ಹೈವೇಯಲ್ಲಿ ವಾಹನಗಳು ಹೋಗುತ್ತಿಲ್ಲ, ಹಾರುತ್ತವೆ. ಹಾಗೆ ಎಲ್ಲಾ ಸರಿ ಹೋಯ್ತು ಎಂದು ಈ ಭಾಗದ ಜನ ನಿಟ್ಟುಸಿರು ಬಿಡುವಷ್ಟರಲ್ಲಿ ಅಲ್ಲಿ ಸುಬ್ರಹ್ಮಣ್ಯದಲ್ಲಿ ಕುಮಾರಧಾರನ ಕಿರಿಕ್ ಶುರುವಾಗಿದೆ. ಅವನೀಗ ಸ್ಟೇಟ್ ಹೈವೇಯನ್ನೇ ನುಂಗಲು ಹೊಂಚು ಹಾಕುತ್ತಿದ್ದಾನೆ. ಯಾವುದೋ ಅಮಾವಾಸ್ಯೆಯಲ್ಲಿ ಹುಟ್ಟಿದ ಲೋಕೋಪಯೋಗಿ ಗುತ್ತಿಗೆದಾರನ ಕಿಸೆ ಬೆಚ್ಚ ಮಾಡಲು ಕುಮಾರಧಾರನ ಅಳಿಲ ಸೇವೆ ರೆಡಿಯಾಗಿದೆ.



   ಅಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ಸ್ಟೇಟ್ ಹೈವೇಯಲ್ಲಿ ಕುಮಾರಧಾರ ಸ್ನಾನ ಘಟ್ಟದ ಕ್ರಾಸ್ ನಿಂದ ಇಂಚಿ ಪುತ್ತೂರಿಗೆ ಬರುವ ದಾರಿಯಲ್ಲಿ ತಿರ್ಗಣೆ ಗುಂಡಿ ಎಂಬಲ್ಲಿ ಕುಮಾರಧಾರ ತೀರಾ ಹೈವೇ ಪಕ್ಕಕ್ಕೇ ಬಂದು ಬಿಟ್ಟಿದ್ದಾನೆ. ಪಾಪ ರಸ್ತೆ ಇಲ್ಲದೆ ಜನ ಪರದಾಡುವುದು ಬೇಡ ಎಂಬ ಪಾಪ ಪುಣ್ಯಕ್ಕೆ ಕುಮಾರಧಾರ ರಸ್ತೆ ನುಂಗದೆ ಬಿಟ್ಟಿದ್ದಾನೆಯೇ ಶಿವಾಯಿ, ಇಲ್ಲದಿದ್ದರೆ ರಸ್ತೆಗೆ ಒಂದು ಡಿಶುಂ ಕೊಟ್ಟರೂ ಸಾಕು ಸ್ಟೇಟ್ ಹೈವೇ ಉಪ್ಪಿನಂಗಡಿಯಲ್ಲಿ ಇರಬಹುದು. ಇಲ್ಲಿ ಸ್ಟೇಟ್ ಹೈವೇ ಬದಿಯಲ್ಲಿ ಜರಿತಾ ಇದೆ ಮಾರಾಯ್ರೆ. ಒಂಚೂರು ಹೆಚ್ಚು ಕಡಿಮೆಯಾದರೂ ಹೈವೇ ಬಂದ್ ಆಗುವ ಲಕ್ಷಣಗಳಿವೆ. ಅದರಲ್ಲೂ ಹೈವೇ ಬದಿ ತನಕ ಕುಮಾರಣ್ಣ ಬಂದಿದ್ದು ವಾಹನ ಸವಾರರೂ ಭಾರೀ ಜಾಗ್ರತೆಯಿಂದ ವಾಹನ ಚಲಾಯಿಸುವ ಅನಿವಾರ್ಯತೆ ಇದೆ. ಈ ಸ್ಥಳದಲ್ಲಿ ಒಂಚೂರು ಅಂಚಿಂಚಿ ಆದರೂ ವಾಹನ ಸವಾರರು ವಾಹನ ಸಮೇತ ಉಪ್ಪಿನಂಗಡಿಗೆ ಜುಳು ಜುಳು ಹೋಗುವ ಅಪಾಯಗಳಿವೆ. ಕಳೆದ ವರ್ಷವೂ ಈ ಅಪಾಯದ ಬಗ್ಗೆ ಜನ ಓ..... ಅಂದಿದ್ದಕ್ಕೆ ಪಂಚಾಯ್ತಿಯವರು ಎರಡು ಸೂಣ  ಹಾಕಿ ಒಂದು ಟೇಪ್ ಕಟ್ಟಿದ್ದು ಬಿಟ್ಟರೆ ಬೇರೆಂತ ಕರ್ಮನೂ ಮಾಡಿಲ್ಲ. ಪಂಚಾಯ್ತಿಯವರ ಅಜ್ಜಿ ಪುಣ್ಯಕ್ಕೆ ಈ ವರ್ಷ ತನಕವೂ ಟೇಪ್ ಉಳಿದದ್ದು ಸಾರ್ವಜನಿಕರ ಪುಣ್ಯ.
ಹಾಗೆಂದು ಆವತ್ತು ಗುಡ್ಡ ಜರಿದು ಎರಡು ಮಕ್ಕಳು ತೀರಿಕ್ಕೊಂಡ ನೆನಪು ಮಾಸುವ ಮೊದಲೇ ಅಲ್ಲಿ ಕುಸುಮಕ್ಕನ ಮನೆ  ಹತ್ತಿರ ಗುಡ್ಡೆ ಮತ್ತೇ ಜರಿಯಲು ಶುರುವಾಗಿದೆ. ಕರೆಂಟ್ ಕಂಬಗಳೂ ಇಲ್ಲಿಯೇ ಹಾದು ಹೋಗಿದ್ದು ಜರಿಯಲು ಶುರುವಾದರೆ ಮನೆ, ಕರೆಂಟ್ ಕಂಬಗಳು ಎಲ್ಲಾ ಒಟ್ಟಿಗೆ ಜಾರಿ ಬಂದು ಹೈವೇ ಬದಿಯಲ್ಲಿ ಲ್ಯಾಂಡ್ ಆಗಲಿದೆ. ಆಚೆಯಿಂದ ಕುಮಾರಧಾರ ಈಚೆಯಿಂದ ಗುಡ್ಡೆ, ಅಂತೂ ಇಂತೂ ಹೈವೇಗೇ ಸುಬ್ಬಪ್ಪನೇ ಗತಿ. ಈ ಭಾಗದ ಕೆಲವು ಮನೆಗಳಿಗೆ ಪಂಚಾಯ್ತಿ ಈಗಾಗಲೇ ಲಕ್ಲೆ... ಲಕ್ಲೆ.. ಎಂದು ನೋಟಿಸ್ ಕೊಟ್ಟರೂ ಜನ ಮಾತ್ರ ಇನ್ನೂ ಜಾಗ ಖಾಲಿ ಮಾಡಿಲ್ಲ. ಇನ್ನಾದರೂ ಪಂಚಾಯಿತಿ ಇವರ ಬಗ್ಗೆ ಕಠಿಣ ನಿರ್ಧಾರ ತಗೊಂಡು ಇವರನ್ನು ಅಪಾಯದಿಂದ ಪಾರು ಮಾಡ ಬೇಕಾಗಿದೆ.




ಯುವರ್ ಆನರ್,      ‌‌                       
ಕುಮಾರಧಾರನಿಗೆ ಹತಾಶೆಯ ಅಹಂಕಾರ. ಪ್ರತಿಫಲ ಸಿಗದ ನೋವು. ಸುಬ್ರಹ್ಮಣ್ಯದಲ್ಲಿ ಸುಬ್ಬಪ್ಪ  ಮತ್ತು ವೀರಮಂಗಲದಲ್ಲಿ ಮಹತೋಭಾರ ತಮ್ಮನ್ನು ಶುದ್ಧೀಕರಿಸಿಕೊಳ್ಳಲು ಮಾತ್ರ ತನ್ನನ್ನು ಉಪಯೋಗಿಸಿ ಕೊಳ್ಳುತ್ತಾರೆ ಎಂಬ ಸಣ್ಣ ಕೋಪ. ತನ್ನ ಪಾತ್ರವನ್ನು ಎಷ್ಟು ಹಸಿರಾಗಿಸಿದರೂ ತನಗೊಂದು ಆಲಯವಿಲ್ಲ, ದೇವಸ್ಥಾನವಿಲ್ಲ, ಗುಡಿಗೋಪುರಗಳಿಲ್ಲ ಎಂಬ ಹತಾಶೆ ಕುಮಾರಧಾರನಿಗೆ. ಆಯಿತು, ತನ್ನ ಮನದಣ್ಣೆ ನೇತ್ರಾವತಿಯನ್ನಾದರೂ ವರಿಸೋಣ ಎಂದರೆ ಅದಕ್ಕೂ ಉಪ್ಪಿನಂಗಡಿ ತನಕ ಹರಿದು ಹಾದು ಹೋಗಬೇಕು ಎನ್ನುವ ಅನಿವಾರ್ಯತೆ. ಅವಳೋ ದಿಗ್ಗಡ್ ದಿಮ್ಮಿ ಹೈವೇಯ ಸಮಾ ಸಮಾ ಹರಿದು ಬರುವವಳು ಕೊಕ್ಕೆ ಹಲ್ಲಿನ ಕುಮಾರಧಾರ ಬೇಡ ಎಂದು ನೇರವಾಗಿ ತನ್ನ ಇನಿಯ ಸಮುದ್ರ ರಾಜನ ಸೇರಿ ಕೊಳ್ಳಲು ಹಾತೊರೆಯುತ್ತಾ ಹರಿದು ಹೋಗುತ್ತಿರುತ್ತಾಳೆ ಕುಮಾರಧಾರನನ್ನು ಕ್ಯಾರೇ ಅನ್ನದೆ. ಹತಾಶೆಗೊಂಡ ಕುಮಾರಧಾರನೂ ನಂತರ ನೇತ್ರಾವತಿಯನ್ನು ಸೇರಿಕ್ಕೊಂಡು ಸಮುದ್ರ ರಾಜನ ಸಾಮ್ರಾಜ್ಯದತ್ತ ಜುಳುಜುಳು  ಮೆರವಣಿಗೆ ಹೋಗುತ್ತಾನೆ.ಅವರದ್ದು ಒಂದು ತ್ರಿಕೋನ ಪ್ರೇಮ. ಇವರ ಕತೆಯಲ್ಲಿ ಕುಮಾರಧಾರ ಭಗ್ನಪ್ರೇಮಿ.
ಅದಕ್ಕೆ ಅವನು ಅಷ್ಟೆಲ್ಲ ಹಾರೋದು,ಹರಿಯೋದು. ಯಾರದೋ ಕೋಪ, ಯಾರಿಗೋ ಶಿಕ್ಷೆ. ಇವತ್ತಿಗೆ ಇಷ್ಟು ಸಾಕು.




Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget