ಕಡಬ: ಸುಬ್ರಹ್ಮಣ್ಯದ ಪಾರ್ಕಿಂಗ್ ಸ್ಥಳಗಳಲ್ಲಿ ಅನಧಿಕೃತ ಅಂಗಡಿಗಳು

                 


  ಹಾಗೆಂದು ಸುಬ್ರಹ್ಮಣ್ಯದ ಯಾವುದೇ ಸಮಸ್ಯೆಗಳು ಸರ್ಕಲ್ ಸುತ್ತಾ ಓಡಿದಂತೆ. ಮುಗಿಯಲ್ಲ ಸಮಸ್ಯೆ. ಒಂದು ಸಮಸ್ಯೆ ಸರಿಪಡಿಸಿದರೆ ಹತ್ತು ಹುಟ್ಟಿಕೊಳ್ಳುತ್ತವೆ. ಹತ್ತು ಮುಟ್ಟಲು ಹೋದರೆ ನೂರಾರು ಸಮಸ್ಯೆ. ಇದೀಗ ಸುಬ್ರಹ್ಮಣ್ಯದಲ್ಲಿ ಪಾರ್ಕಿಂಗ್ ಸಮಸ್ಯೆ, ವನ್ ವೇ ಸಮಸ್ಯೆ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಕಿರಿಕಿರಿ ಕಿರಿಕಿರಿ ಆಗುತ್ತಿದೆ. ಯಾರಲ್ಲಿ ಹೇಳೋಣ ಪ್ರಾಬ್ಲಂ?
  ಹಾಗೆಂದು ಸುಬ್ರಹ್ಮಣ್ಯಕ್ಕೆ ಮಾಸ್ಟರ್ ಪ್ಲಾನರಿ ಯೋಜನೆ ಬಂದ ನಂತರ ಸುಬ್ರಹ್ಮಣ್ಯ ಕೂಡ ಅಭಿವೃದ್ಧಿ ಆಗಿದೆ, ಜೊತೆಗೆ ಗುತ್ತಿಗೆದಾರರು ಮತ್ತು ಇತರೇ ಗಣಗಳು ಕೂಡ ಅಜೀರ್ಣ ಆಗುವಷ್ಟು ತಿಂದುಂಡಿದ್ದಾರೆ. ಆದರೆ ಯೋಜನೆಯ ಸದುಪಯೋಗ ಯಾತ್ರಾರ್ಥಿಗಳಿಗೆ ಮಾತ್ರ ಆಗುತ್ತಿಲ್ಲ. ಯಾಕೆಂದರೆ ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿಗಳನ್ನು ನಟ್ಟ ತಿರುಗಿಸಿ ಬಿಡಲಾಗುತ್ತಿದೆ. ಹಾಗೆಂದು ಈಗ ಸುಬ್ರಹ್ಮಣ್ಯದ ಎಲ್ಲಾ ರಸ್ತೆಗಳೂ ಅಗಲಗಲ ಆಗಿ ಹೋಗಿದೆ. ಕಾಶೀ ಕಟ್ಟೆಯಿಂದ ಸ್ನಾನ ಘಟ್ಟದ ತನಕದ ರಸ್ತೆಯಂತೂ ಮಿರ ಮಿರ ಮಿಂಚುತ್ತಿದೆ. ಪಾರ್ಕಿಂಗ್ ಮಾಡಲೂ ಒಂದು ಲೋಕದ ಜಾಗ ಮೀಸಲಿಡಲಾಗಿದೆ. ಸುಬ್ರಹ್ಮಣ್ಯನ ಮನೆಯ ಬಾಗಿಲು ತನಕ ಯಾವುದೇ ಸಮಸ್ಯೆಯಿಲ್ಲ. ಆದರೆ ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿಗಳನ್ನು ಲೂಟುವ ಒಂದು ವರ್ಗದ ಜನ ಇದ್ದಾರಲ್ಲ ಅವರಿಂದಾಗಿ ಸಮಸ್ಯೆ ಬಿಗಡಾಯಿಸುತ್ತಿದೆ. ತಮ್ಮ ಕಿಸೆ ತುಂಬಿಸಿಕೊಳ್ಳುವ ಬರದಲ್ಲಿ ಅವರು ಕೋತಿ ತಾನೂ ಕೆಟ್ಪಿತ್ತಲ್ಲದೆ ಸುಬ್ರಹ್ಮಣ್ಯವನ್ನೆಲ್ಲ ಕೆಡಿಸಿತು ಎಂಬಂತೆ ಸಮಸ್ಯೆಗಳ ಮೂಟೆಗಳನ್ನು ಇವರು ಸಾರ್ವಜನಿಕರ ಮೇಲೆ ಹೊರಿಸುತ್ತಿದ್ದಾರೆ.


  ಉದಾಹರಣೆಗೆ ಆ ಪಾರ್ಕಿಂಗ್ ಸ್ಥಳಗಳ ವಿಷಯದ ಬಗ್ಗೆ ನೋಡುವುದಾದರೆ ಸುಬ್ರಹ್ಮಣ್ಯದ ಅಷ್ಟೂ ಪಾರ್ಕಿಂಗ್ ಸ್ಥಳಗಳು ಅಂಡಿಗುಂಡಿ ಅಂಗಡಿಗಳ ಪಾಲಾಗಿದೆ. ಎಲ್ಲೆಲ್ಲಿ ಪಾರ್ಕಿಂಗ್ ಉಂಟು   ಆ ಜಾಗದಲ್ಲೆಲ್ಲ ಟೆಂಪರರಿ, ಅನಧಿಕೃತ ಅಂಗಡಿಗಳು ಶುರುವಾಗಿದೆ. ಒಂದು ಪ್ಲಾಸ್ಟಿಕ್ ಹೊದಿಕೆ ಮತ್ತು ನಾಲ್ಕು ಬಿದಿರಿನ ಕಂಬ ಇದ್ದರೆ ಸಾಕು ಸುಬ್ರಹ್ಮಣ್ಯದ ಪಾರ್ಕಿಂಗ್ ನಲ್ಲಿಯೇ ಒಬ್ಬ ಸಾಫ್ಟವೇರ್ ಇಂಜಿನಿಯರ್ ಅಕೌಂಟಿನಷ್ಟು ಕೌಂಟ್ ಮಾಡಬಹುದು.  ಹಾಗೆ ಯಾವಾಗ ಪಾರ್ಕಿಂಗ್ ಸ್ಥಳಗಳಲ್ಲಿ ಸಾಲು ಸಾಲು ಅಂಡಿಗುಂಡಿ ಅಂಗಡಿಗಳ ನಿರ್ಮಾಣ ಆಯಿತೋ ಜನ ಮಾರ್ಗದಲ್ಲೇ ಕಾರು, ಬಸ್ಸು, ಆಪೆ ನಿಲ್ಲಿಸ ತೊಡಗಿದರು. ಪರಿಣಾಮ ಟ್ರಾಫಿಕ್ ಜಾಮ್ ಶುರುವಾಯಿತು. ಜಾಮಲ್ಲಿ ಬ್ರೆಡ್ ತಿನ್ನಲು ಹಲವು ಜನ ಸೇರಿ ಒಂದು ಪ್ಲಾನ್ ರೂಪಿಸಿ ಬಿಟ್ಟರು. ಅದೇ ವನ್ ವೇ ಐಡಿಯಾ?
  ಈಗ ಸುಬ್ರಹ್ಮಣ್ಯದಲ್ಲಿ ಮೈನ್ ರೋಡನ್ನೇ ವನ್ ವೇ ಮಾಡಿದ್ದಾರೆ. ಅಲ್ಲಿ ಕಾಶಿ ಕಟ್ಟೆಯಿಂದ ರಥಬೀದಿ ಜಂಕ್ಷನ್ ವರೆಗಿನ ಅನೇಕ ಮುಖಗಳಿದ್ದ ಮೈನ್ ರೋಡಿಗೆ ಏಕಮುಖ ಕೊಡಲಾಗಿದೆ. ಇನ್ನು ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ವನ್ ವೇ ನಿರ್ಗಮನದ ನಿಯಮ ಮಾಡಲಾಗಿದ್ದು ಬಸ್ಸಿನ ಚಾಲಕರಂತೂ ಪವರ್ ಸ್ಟೇರಿಂಗನ್ನು ಸೇಮಿಗೆಯ ಮಣೆ ತಿರುಗಿಸುವ ಹಾಗೆ ತಿರುಗಿಸುವ ಅನಿವಾರ್ಯತೆ ಎದುರಾಗಿದೆ. ಇಷ್ಟೆಲ್ಲಾ ಬೇಕಿತ್ತಾ? ರೋಡ್ ಅಗಲ ಮಾಡಿದ್ದೇ ಜಾಮ್ ಆಗದಿರಲಿ ಎಂದು. ಈಗ ಅದನ್ನೇ ವನ್ ವೇ ಮಾಡಲಾಗಿದೆ. ಯಾರ ಮಂಡೆ ಮಾರಾಯ್ರೆ ಇದು? ಈಗ ಸುಬ್ರಹ್ಮಣ್ಯದ ಬಸ್ ನಿಲ್ದಾಣದಿಂದ ಬೆಂಗಳೂರಿಗೆ, ಮಂಗಳೂರಿಗೆ ಅಂತ ಗರಡಿ ಇಳಿಯುವ ಬಸ್ ಗಳು ರೈಟಿಗೆ ತಗೊಂಡು ಸೀದಾ ಕಾಶಿಕಟ್ಟೆಗೆ ಬರುವಂತಿಲ್ಲ. ಅವನು ಬಸ್ ನಿಲ್ದಾಣದಿಂದ ಇಳಿದು ಎಡಕ್ಕೆ ಸೇಮಿಗೆದ ಮಣೆ ತಿರುಗಿಸಿ ರಥಬೀದಿ ಜಂಕ್ಷನ್ ಗೆ ಬಂದು ಅಲ್ಲಿ ಬಲಕ್ಕೆ ತಿರುಗಿಸಿ ಸವಾರಿ ಮಂಟಪಕ್ಕೆ ಬಂದು ಅಲ್ಲಿ ಪುನಃ ಬಲಕ್ಕೆ ಸೇಮಿಗೆದ ಮಣೆ ತಿರುಗಿಸಿ ಕಾಶಿಕಟ್ಟೆಗೆ ಬರಬೇಕಾಗುತ್ತದೆ. ಅಲ್ಲ ಮಾರಾಯ್ರೆ ಅಷ್ಟು ಅಗಲದ ರೋಡನ್ನು ಯಾರಾದರೂ ವನ್ ವೇ ಮಾಡಿಯಾರ? ಮತ್ತೆ ಮಾಸ್ಟರ್ ಪ್ಲಾನರಿ ಯಾಕೆ? ಮಾಸ್ಟರ್ ಪ್ಲಾನರಿ ಮಾಡಿ ಟೀಚರ್ ಪ್ಲಾನರಿ ಆದದ್ದು ವಿಪರ್ಯಾಸವೇ ಸರಿ.


   ಹಾಗೆಂದು ಈ ಪಾರ್ಕಿಂಗ್ ಸ್ಥಳಗಳಲ್ಲಿ ಅಷ್ಟು ಧೈರ್ಯದಲ್ಲಿ ಯಾತ್ರಾರ್ಥಿಗಳನ್ನು ಲೂಟಿ ಮಾಡಲು ಅಂಡಿಗುಂಡಿ ಅಂಗಡಿ ಮಾಡಿದ್ದು ಯಾರು ಹೊರಗಿನವರಲ್ಲ. ಒಳಗಿನ ಲೂಟಿಕೋರರೇ ತಮ್ಮ ಸೈಡ್ ಖರ್ಚಿಗೆ ಅಂತ ಇಂಥ ಅಂಗಡಿಗಳನ್ನು ಮಾಡಿದ್ದಾರೆ. ದೇವಸ್ಥಾನದ ಒಳಗಿನ ಕೆಲವರ ಅಂಗಡಿ ಇರುವುದರಿಂದ ದೇವಸ್ಥಾನದ ಆಡಳಿತ ಮಂಡಳಿ ಕುರುಡರಂತೆ ವರ್ತಿಸಿದರೆ, ಪಂಚಾಯ್ತಿಗೆ  ಸಂಬಂಧ ಪಟ್ಟವರ, ಚಿಲ್ಲರೆ ರಾಜಕೀಯ ಜನಗಳ ಅಂಗಡಿಗಳು ಇರುವುದರಿಂದ ಪಂಚಾಯ್ತಿ ಪೊಟ್ಟರಂತೆ ವರ್ತಿಸುತ್ತದೆ. ಇನ್ನು ಪೋಲಿಸರ ಕೇರ್‌ ಆಫ್ ನಲ್ಲಿ ಕೂಡ ಅಂಡಿಗುಂಡಿ ಅಂಗಡಿಗಳು ಸುಬ್ರಹ್ಮಣ್ಯದ ಪಾರ್ಕಿಂಗ್ ಸ್ಥಳಗಳಲ್ಲಿ ಇದೆ ಎಂದು ಸುದ್ದಿ ಇದೆ. ಹಾಗಾಗಿ ಯಾವ ಅಂಗಡಿಯನ್ನೂ ಯಾರೂ ತೆಗೆಯುವಂತಿಲ್ಲ. ಅದಕ್ಕೆ ಶೀತ ಅಂದಿದ್ದಕ್ಕೆ ಮೂಗನ್ನೇ ಕೊಯ್ದು ಬಿಟ್ಟಿದ್ದು. ಇನ್ನು ಸದ್ರಿ ಅಂಗಡಿಗಳಲ್ಲಿ ರೇಟು ಕೂಡ ಲೇಡೀಸ್ ಬಾರಿಯಂತೆ ಡಬಲ್ ಚಾರ್ಜಸ್ ಇರುತ್ತದೆ ಎಂದು ತಿಳಿದು ಬಂದಿದೆ. ಬೀಡಿ ಸಿಗರೇಟು ಇತ್ಯಾದಿ ರೈಲು ಬಿಡುವ ಮಾಲುಗಳನ್ನು ಮಾರಲು ಪರ್ಮಿಶನ್ ಇಲ್ಲದಿದ್ದರೂ ಈ ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆಗಳಿಗೆ ಮಾರಲಾಗುತ್ತಿದೆ. ಒಂಜಿ ಪ್ಯಾಕ್ ಸಿಗ್ರೇಟಿಗೆ ರೂ ಎಪ್ಪತ್ತೈದು ಇದ್ದರೆ ಈ ಅಂಡಿಗುಂಡಿ ಅಂಗಡಿಗಳಲ್ಲಿ ಪೋಲಿಸರಿಗೆ ದೂರಾಕಿ ದುಪ್ಪಟ್ಟು ಲೂಟಿ ಹೊಡೆಯಲಾಗುತ್ತಿದೆ. ಇನ್ನು ಬೀಡಿ ಪರಿಸ್ಥಿತಿ ಕೂಡ ಸುಬ್ರಹ್ಮಣ್ಯದಲ್ಲಿ ಒಳ್ಳೆದಿಲ್ಲ. ಇನ್ನು ಯಾವುದೋ ಒಂದು ಅಂಡಿಗುಂಡಿ ಅಂಗಡಿಯಲ್ಲಿ ಗಾಂಜಾ ಹೊಗೆಯಾಡುವ ವಿಷಯ ಕೂಡ ಹೊರಗೆ ಬಂದಿದ್ದು ಅಲ್ಲಿ ಕಲ್ಯಾಣ ಮಂಟಪದಲ್ಲಿ ಗಾಂಜಾ ಬೆಳೆಸಿದ ಕೇಸ್ ಪುಸ್ಕ ಆಯಿತೆಂದು ಈ ಕೇಸ್ ಕೂಡ ಪುಸ್ಕ ಆಗಲು ಸಾರ್ವಜನಿಕರು ಬಿಡಲ್ಲ ಎಂಬ ನಂಬಿಕೆ ಇದೆ. ಇಷ್ಟಕ್ಕೂ ಗಾಂಜಾ ಬೆಳೆದ ಭಟ್ರು ಏನಾದರೂ ಈ ಅಂಡಿಗುಂಡಿ ಅಂಗಡಿಗಳಿಗೆ ಗಾಂಜಾ ಸರಬರಾಜು ಮಾಡುವ ವಹಿವಾಟು ಮಾಡುತ್ತಿದ್ದಾರ ಹೇಗೆ?

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget