ಹಂಚಿನ ಮಾಡಿನ, ನಾಲಕ್ಕು ಕಂಬ ಮತ್ತು ಒಂದು ಪೋಸ್ಟ್ ಆಫೀಸ್ ಇದ್ದ, ಮಸ್ಕ್ ಮಸ್ಕ್ ಕಲರಿನ, ಒಂದು ಬಸ್ ಸ್ಟ್ಯಾಂಡ್ ಸುಳ್ಯ ಸೋಣಂಗೇರಿಯಿಂದ ಪೋಸ್ಟ್ ಆಫೀಸ್ ಸಮೇತ ಕಾಣೆಯಾಗಿದೆ. ಬಸ್ ಸ್ಟ್ಯಾಂಡ್ ಸಿಕ್ಕಿದವರು ಖುದ್ದಾಗಿ ಜಾಲ್ಸೂರು ಪಂಚಾಯ್ತಿಗೆ ಒಂದು ಕಾಲ್ ಮಾಡಿ ವಿಷಯ ತಿಳಿಸಿ ಬಿಡಿ. ಬಸ್ ಸ್ಟ್ಯಾಂಡ್ ಇಲ್ಲದೆ ಸೋಣಂಗೇರಿಯಲ್ಲಿ ಬಸ್ ನಿಲ್ಲಲ್ಲ, ಸೋಮಾರಿಗಳು ಕುಂತಿಲ್ಲ, ಭಿಕ್ಷುಕರು ಮಲಗಿಲ್ಲ. "ಪ್ರೀತಿಯ ಬಸ್ ಸ್ಟ್ಯಾಂಡ್ ನೀನು ಎಲ್ಲಿದ್ದರೂ ಸೋಣಂಗೇರಿಗೆ ಬಾ. ನಿನಗೆ ದುಡ್ಡಿಲ್ಲದಿದ್ದರೆ ಜಾಲ್ಸೂರು ಪಂಚಾಯ್ತಿಗೆ ಕಾಲ್ ಮಾಡು. ಇಲ್ಲಿ ನಿನ್ನನ್ನು ಬಸ್ ನಿಲ್ಲಲು, ಸೋಮಾರಿಗಳು ಕೂರಲು, ಭಿಕ್ಷುಕರು ಮಲಗಲು ಕಾಯುತ್ತಿದ್ದಾರೆ, ನೀನು ಎಲ್ಲಿದ್ದರೂ ಬಾ"
ಹಾಗೆಂದು ಸೋಣಂಗೇರಿ ಎಂಬ ಊರು ಜಾಲ್ಸೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುತ್ತದೆ. ಅನಾಮತ್ತು ನಾಲ್ಕು ಮಾರ್ಗ ಸೇರುವ ಜಂಕ್ಷನ್. ಪೂರ್ವಕ್ಕೆ ಹೋದರೆ ಗುತ್ತಿಗಾರು, ಪಶ್ಚಿಮಕ್ಕೆ ಬಂದರೆ ಜಾಲ್ಸೂರು. ಉತ್ತರಕ್ಕೆ ಬೆಳ್ಳಾರೆ, ದಕ್ಷಿಣಕ್ಕೆ ಸುಳ್ಯ ಪೇಟೆ. ರೋಡೆಲ್ಲ ಅಗಲಗಲ ಆಗಿದೆ, ಒಂದು ಸರ್ಕಲ್ ಕೂಡ ಆಗಿದೆ. ಆದರೆ ಬಸ್ಸಿಗೆ ನಿಲ್ಲಲಿಕ್ಕೆ, ಕೂರಲಿಕ್ಕೆ ಒಂದು ಬಸ್ ಸ್ಟ್ಯಾಂಡ್ ಇಲ್ಲಿಲ್ಲ. ಹಾಗೆಂದು ಇಲ್ಲಿ ರೋಡ್ ಅಗೆಲ ಆಗುವಾಗ ಒಂದು ಬಸ್ ಸ್ಟ್ಯಾಂಡ್ ಇತ್ತು ಮತ್ತು ಅದರೊಳಗೆ ಒಂದು ಪೋಸ್ಟ್ ಆಫೀಸ್ ಕೂಡ ಇತ್ತು. ಆದರೆ ರೋಡ್ ಅಗಲದ ಕಾರಣ ಬಸ್ ಸ್ಟ್ಯಾಂಡ್ ಇಲ್ಲಿಂದ ತೆಗೆಯಲಾಯಿತು. ಆಮೇಲೆ ಸುದ್ದಿ ಇಲ್ಲ. ಬೇಸಿಗೆಯಲ್ಲೂ ಜನ ನಟಕೋರಿ ದೊಂಬಿಗೆ ನಿಂತರು, ಮಳೆಗಾಲದಲ್ಲಿ ಜಿರಿಕೂಟ ಬರ್ಸವನ್ನೂ ತಡೆದುಕೊಂಡು ಬಸ್ಸಿಗೆ ಕಾದರು. ಇನ್ನು ಚಳಿಗಾಲ ಮಾರಾಯ್ರೆ, ಮೈಂದಿಗೆ ನಿಲ್ಲಬೇಕು. ಜನಗಳಿಗೆ ಶೀತ ಆದರೆ ಯಾರು ಜಾಲ್ಸೂರು ಪಂಚಾಯ್ತಿ ಮದ್ದು ಮಾಡುತ್ತಾ?
ಹಾಗೆಂದು ಸೋಣಂಗೇರಿಯಿಂದ ನಿತ್ಯ ಜನ ಸುಳ್ಯ ಪೇಟೆಗೆ ಹೋಗಲು ಈ ಜಂಕ್ಷನ್ನಲ್ಲಿ ಬಸ್ ಹಿಡಿಯಬೇಕು. ಸೋಣಂಗೇರಿಯ ಅಷ್ಟೂ ವಿದ್ಯಾರ್ಥಿಗಳು ಇಲ್ಲಿಂದಲೇ ಶಾಲಾ ಕಾಲೇಜುಗಳಿಗೆ ಹೋಗಬೇಕು. ಗುತ್ತಿಗಾರು ಸೈಡಿಂದ, ಬೆಳ್ಳಾರೆಯಿಂದ, ಸುಳ್ಯದಿಂದ ಬರುವ ಪ್ರತೀ ಬಸ್ಸೂ ಇಲ್ಲಿ ಲ್ಯಾಂಡಿಂಗ್ ಇದೆ, ಟೇಕ್ ಆಫ್ ಇದೆ. ಆದರೆ ಬಸ್ ಸ್ಟ್ಯಾಂಡ್ ಇಲ್ಲ. ಆದರೆ ಸೋಣ ಇಡೀ ಸೋಣಂಗೇರಿಗೆ ಬಸ್ ಸ್ಟ್ಯಾಂಡ್ ಇಲ್ಲ ಮಾರಾಯ್ರೆ.
ಈ ಬಗ್ಗೆ ಜಾಲ್ಸೂರು ಪಂಚಾಯ್ತಿಯ ಪರಮ ದೇಶಭಕ್ತ ಯುವ ನಾಯಕರೊಬ್ಬರಲ್ಲಿ ಪ್ರಶ್ನಿಸಿದಾಗ ಚೊಕ್ಕಾಡಿಯ ಸತ್ಯ ಸಾಯಿ ವಿದ್ಯಾ ಸಂಸ್ಥೆ ಇಲ್ಲಿ ಒಂದು ಸುಂದರ ಬಸ್ ಸ್ಟ್ಯಾಂಡ್ ನಿರ್ಮಿಸಲು ಪಂಚಾಯ್ತಿಗೆ ಅರ್ಜಿ ಹಾಕಿದ್ದು ಅದು ಓ.ಕೆ ಆಗಿದೆ ಎಂದು ಹೇಳಿದ್ದಾರೆ. ಇನ್ನು PWD ಎನ್ಒಸಿ ಕೂಡ ಸಿಕ್ಕಿದೆಯಂತೆ. ಮತ್ತೆ ಅರಣ್ಯ ಇಲಾಖೆಯವರದ್ದು ಚೂರು ಕಿರಿ ಕಿರಿ ಇದ್ದು ಅವರ ಎನ್ಒಸಿ ಸಿಗಬೇಗಷ್ಟೆ. ಅದಕ್ಕೆ ACF ಪ್ರವೀಣಣ್ಣನಲ್ಲಿ ಒಂದು ರೌಂಡು ಮಾತಾಡಿದರೆ ಆಗುತ್ತದೆ. ಹಾಗಾಗಿ ಬರುವ ಸೋಣಕ್ಕಾದರೂ ಸೋಣಂಗೇರಿಗೆ ಒಂದು ಬಸ್ ಸ್ಟ್ಯಾಂಡ್ ಆಗಲಿ.
Post a Comment