ಬೆಳ್ತಂಗಡಿ: ಪುಂಜಾಲಕಟ್ಟೆ TO ಚಾರ್ಮಾಡಿ ರಸ್ತೆಗೆ 375 ಕೋಟಿ ಯಾಕೆ?

                             


    "ಹಾಗೆಂದು ಬಂಟ್ವಾಳದಿಂದ ಪುಂಜಾಲಕಟ್ಟೆ ತನಕದ 21 ಕಿಲೋ  ಹೈವೇ ಫಿನಿಷ್ ಆಗಿದೆ. 21 ಕಿಲೋ ಹೈವೇ ಮಾಡಲು ಮೊದಲು 125 ಕೋಟಿ ಅಂದರು, ನಂತರ ಹೈವೇಗೆ ಸಂಬಂಧ ಪಟ್ಟ ಎಲ್ಲಾ ಭೂತ ಪ್ರೇತಾದಿಗಳಿಗೆ ಬಡಿಸಿ ಹೈವೇ ಫಿನಿಷ್ ಆಗುವಾಗ 215 ಕೋಟಿ ತನಕ ಬಿಲ್ ಬೆಳೆಯಿತು ಮತ್ತು ಸ್ಯಾಂಕ್ಷನ್ ಕೂಡ ಆಗಿತ್ತು. ಇಷ್ಟು ಸುರಿದು ಮಾಡಿದ ಹೈವೇ ಸರಿಯಾದರೂ ಉಂಟಾ? ಅದೂ ಅವೈಜ್ಞಾನಿಕ ಹೈವೇ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಕುತ್ತಕಂಡೆ ಹೋದ ಹಾಗೆ, ಕುಡುಕರ ಹಾಗೆ ಮಾಲಿಕೊಂಡು, ವಾಲಿಕೊಂಡು ಹೋದ ಹಾಗೆ, ತಲೆ ತಿರುಗಿದ ಹಾಗೆ, ಬಗ್ಗಿಕೊಂಡು ಹೋದ ಹಾಗೆ, ಪರತ್ತೊಂದು ಹೋದ ಹಾಗೆ  ವಾಹನಗಳು ಈ ಹೈವೇಯಲ್ಲಿ ಹೋಗುತ್ತಿವೆ ಎಂದು ಯಾರೋ ಹೇಳಿದ ಹಾಗೆ ಆಗಿದೆ. ಇರ್ಲಿ ಆ ಕತೆ ಮುಗಿದಿದೆ. ಈಗ ಆ ಹೈವೇಯ ನಂತರದ ಕತೆ ಇನ್ನೂ ಗುಂಡಿ ಗುರುಂಪಿದೆ. ರೀಪೇರಿ ಆಗೋದೇ ಕಷ್ಟ ಕಷ್ಟ.
  ಹಾಗೆ ಬಂಟ್ವಾಳದಿಂದ ಹೊರಟ ಹೈವೇ ಪುಂಜಾಲಕಟ್ಟೆ ಮುಟ್ಟುವ ಹೊತ್ತಿಗೆ 215  ಕೋಟಿ ನುಂಗಿ ನೀರು ಕುಡಿಯಿತಲ್ಲ ಮುಂದಿನ ಚಾರ್ಮಾಡಿ ತನಕ ಮುಂದುವರಿಯಲು 32 ಕಿಲೋ ಮೀಟರ್ ಗೆ 375 ಕೋಟಿ ಕೇಳಿತು. ಅಂದರೆ ಒಂದು ಕಿಲೋ ಮೀಟರ್ ಗೆ  ಹನ್ನೊಂದುವರೆ ಕೋಟಿಯ ಹಾಗೆ. ಎಂಥ ಹಸಿವು ಮಾರಾಯ್ರೆ ಈ ಹೈವೇಗೆ.  ತಿಂದು ತಿಂದು ಹೈವೇಗೆ ಜುಲಾಬು ಶುರುವಾಗದಿದ್ದರೆ ಸಾಕು.


  ಹಾಗೆ ಪುಂಜಾಲಕಟ್ಟೆ to ಚಾರ್ಮಾಡಿ ತನಕದ ಹೈವೇ ಕೆಲಸವನ್ನು ಡಿ.ಪಿ ಜೈನ್ ಅಂಥ ಯಾರೋ ಮಾರ್ವಾಡಿ ಜೈನ್ ಗುತ್ತಿಗೆ ಪಡೆದು ಕೊಂಡಿದ್ದು ಆತ ಬ್ಯಾಟಿಂಗ್ ಗೆ ಇಳಿಯದೆ ಇಲ್ಲಿನ ಲೋಕಲ್ ಗುತ್ತಿಗೆದಾರರಿಗೆ ಸಬ್ ಕಾಂಟ್ರಾಕ್ಟ್ ಕೊಟ್ಟು ಮನೆಯಲ್ಲೇ ಚಾಚಿ ಮಾಡಿ ಬಿಟ್ಟ. ಇತ್ತ ಈ ಸಬ್ ಕಾಂಟ್ರಕ್ಟರ್ ಗಳು ಏನು ಮಾಡಿದರೆಂದರೆ ಊರಿಗೆ ಮೊದಲೇ ಕೆಲಸ ಆರಂಭಿಸಿ ಬಿಟ್ಟರು. ಅವರು ಮಾಡಿದ ಮೊದಲ ಕೆಲಸವೇ ಕಲ್ತಪ್ಪ ಎಬ್ಬಿಸಿದ ಹಾಗೆ ಇದ್ದ ಡಾಂಬರ್ ಎಬ್ಬಿಸಿ ಬಿಟ್ಟು ರಸ್ತೆಯೆಲ್ಲಾ ಅಗೆದು ಹಾಕಿ ಬಿಟ್ಟರು. ಸಮಸ್ಯೆ ಶುರುವಾಗಿದ್ದೇ ಆವಾಗ. ಈಗ ಯಾವುದೇ ರಸ್ತೆ ಅಗಲೀಕರಣ ಮಾಡುವುದಿದ್ದರೆ ಮೊದಲು ಮಾಡ ಬೇಕಾದ ಕೆಲಸ ಏನೆಂದರೆ ರಸ್ತೆಗೆ ಬೇಕಾದ ಜಾಗ ಸ್ವಾಧೀನ ಪ್ರಕ್ರಿಯೆ ನಡೆಯ ಬೇಕು. ಆ ಕೆಲಸವನ್ನು ಇವರು ರಸ್ತೆ ಅಗೆದ ಮೇಲೆ  ಶುರು ಮಾಡಿದ್ದು. ಹಾಗೆಲ್ಲ ಕೇಳಿದಷ್ಟು ಜಾಗ ಜನ ಬಿಡ್ತಾರ, ಅವರು ಕೊರ್ಟು ಕಛೇರಿ ಎಂದು ಬಸ್ ಹತ್ತಿ ಬಿಟ್ಟರು. ಅದರಲ್ಲೂ ಈ ಗುತ್ತಿಗೆದಾರರು ಸರ್ಕಾರಿ ಜಾಗ ಇದ್ದ ಕಡೆ ಕೆಲಸ ಶುರು ಮಾಡುತ್ತಿದ್ದರೂ ಕೆಲಸ ಓ.ಕೆ ಆಗುತ್ತಿತ್ತು. ಅದೆಲ್ಲ ಬಿಟ್ಟು ಇವರು ಜೆಸಿಬಿ ಡ್ರೈವರ್ ಗೆ ಕೆಲಸ ಇಲ್ಲ ಅಂತ ಊರಿಡೀ ಅಗೆದು ಹಾಕಿ ಬಿಟ್ಟರು. ಈಗ ಕುತ್ತಿಗೆಗೆ ಬಂದಿದೆ.


ಇನ್ನು ಯಾವುದೇ ರಸ್ತೆ ಅಗಲೀಕರಣ, ರಿಪೇರಿ, ಹೊಸ ರಸ್ತೆ ಆಗುವುದಿದ್ದರೂ ಆ ಅರಣ್ಯ ಇಲಾಖೆ ಏಳರಾಷ್ಟ್ರ ಶನಿಯ ಹಾಗೆ ಅಡ್ಡ ಬಂದು ನಿಲ್ಲುತ್ತದೆ. ಇಲ್ಲೂ ಅದೇ ಕತೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ಹೈವೇ ನಿರ್ಮಾಣಕ್ಕೆ ರಸ್ತೆ ಬದಿಯ ಬೆಲೆ ಬಾಳುವ ಮತ್ತು ಯಾವುದೇ ಮರಗಳನ್ನು ಕಡಿಯಲು, ಕದಿಯಲು ಅರಣ್ಯ ಇಲಾಖೆ ಪರ್ಮಿಶನ್ ಕೊಟ್ಟಿಲ್ಲ. ಹಾಗಾಗಿ ಗುತ್ತಿಗೆದಾರರು ಮರಗಳನ್ನು ನಡುವೆ ಬಿಟ್ಟು ಅದರ ಸುತ್ತ ಅಗೆದು ಮರಗಳ ಸುತ್ತ ಒಂದು ಕಟ್ಟೆ ನಿರ್ಮಾಣ ಮಾಡಿ ಬಿಟ್ಟರು. ಹಾಗಾಗಿ ರಸ್ತೆ ಬದಿಯಲ್ಲಿ ಅಮಾಯಕರನ್ನು ಕೊಲ್ಲಲು ಹೊಂಚು ಹಾಕುತ್ತಿದ್ದ ದೊಡ್ಡ ದೊಡ್ಡ ಜಂಬೋ ಮರಗಳೆಲ್ಲ ಈಗ ಬಂದು ರಸ್ತೆ ಮಧ್ಯೆ ನಿಂತಿದೆ. ಅರಣ್ಯ ಇಲಾಖೆ ಮರ ಕಡಿಯಲೂ ಬಿಡುತ್ತಿಲ್ಲ, ಕದಿಯಲೂ ಬಿಡುತ್ತಿಲ್ಲ. ಗುತ್ತಿಗೆದಾರರಿಗೆ ಕುತ್ತಿಗೆಗೆ ಬಂದಿದೆ.
   

ಹಾಗೆ ಪುಂಜಾಲಕಟ್ಟೆ ಚಾರ್ಮಾಡಿ ಹೇವೇ ನಿರ್ಮಾಣಕ್ಕೆ ರಸ್ತೆ ಬದಿಯ 1376ಮರಗಳನ್ನು ಕಡಿಯಲು ಮತ್ತು ಉಳಿದ ಮರಗಳನ್ನು ಕದಿಯಲು ಮಾರ್ಕ್ ಮಾಡಲಾಗಿದೆ. ಆದರೆ ಕಟ್ಟಿಂಗ್ ಆಗಿಲ್ಲ. ಕಟ್ಟಿಂಗ್ ಆಗದೆ ಕೆಲಸ  ಮುಂದೆ ಹೋಗುತ್ತಿಲ್ಲ. ಇನ್ನು ಆ ಕರೆಂಟಿನವರು. ಅವರಿಗೆ ರಸ್ತೆಗಳು, ಹೈವೇಗಳು ಅಂದರೆ ಪಿತ್ರಾರ್ಜಿತ ಆಸ್ತಿ ಇದ್ದ ಹಾಗೆ. ರಸ್ತೆ ಬದಿಯಲ್ಲಿಯೇ ಅವರದ್ದೊಂದು ಕಂಬ. ಮರಗಳನ್ನಾದರೂ ಬೆಳಿಗ್ಗೆ ಆಗುವಾಗ ಒಂದು ಎಲೆ ಮೂಸ್ಲಿಕ್ಕೂ ಸಿಗದ ಹಾಗೆ ಕಡಿಯ ಬಹುದು,ಕದಿಯ ಬಹುದು. ಆದರೆ ಈ ಕರೆಂಟ್ ಕಂಬಗಳನ್ನು ಯಾರೂ ಮುಟ್ಟಕ್ಕೆ ಹೋಗಲ್ಲ ಮಾರಾಯ್ರೆ. ಇಲ್ಲೂ ಅದೇ ಕತೆ. ಹೈವೇ ಗುತ್ತಿಗೆದಾರರಿಗೆ ಕಂಬ ತೆಗೆಯಲು ಮೆಸ್ಕಾಂ ಪರ್ಮಿಶನ್ ಸಿಕ್ಕಿಲ್ಲ. ವನ್ಸ್ ಎಗೈನ್ ಜೆಸಿಬಿಗಳು ರಸ್ತೆ ಬದಿಯ ಕಂಬಗಳ ಸುತ್ತ ಅಗೆದು ಕಂಬಗಳಿಗೂ ಕಟ್ಟೆ ಮಾಡಲಾಗಿದೆ. ಈಗ ಲೈಟ್ ಕಂಬಗಳೂ ರಸ್ತೆಯಲ್ಲಿ, ಮರಗಳೂ ರಸ್ತೆಯಲ್ಲಿ. ಕೆಲಸ ಕೂಡ ನಿಂತಿದೆ. ಹೈವೇ ಬದಿಯ 70 ಪರ್ಸೆಂಟ್ ಸರ್ಕಾರಿ ಜಾಗದಲ್ಲಿ ಇವರು ಕಾಮಗಾರಿ ಶುರು ಮಾಡುವ ಬದಲು ಕೊಡಿಯಿಂದ ಕೊಡಿ ಇವರು ಅಗೆದು ಹಾಕಿದ್ರೆ ಈಗ ಗುತ್ತಿಗೆದಾರನ ಕುತ್ತಿಗೆಗೆ ಬಂದಿದೆ.
   ಹಾಗೆ ಪ್ರಾಥಮಿಕ ಹಂತದ ಯಾವುದೇ ಪ್ರಕ್ರಿಯೆಗಳು ನೆನೆಗುದಿಗೆ ಬಿದ್ದಿರುವ ಕಾರಣ ಹೈವೇ ಕಾಮಗಾರಿ ವೆಂಟಿಲೇಟರಿಗೆ ಹೋಗಿದೆ. ಎಲ್ಲಾ ಕಡೆ ರಸ್ತೆ ಅಗೆದ ಕಾರಣ ವಾಹನ ಸಂಚಾರವೇ ಡೇಂಜರಸ್ ಆಗಿದೆ, ಬಸ್ಸುಗಳಿಗೆ ಸೊಂಟನೋವು, ಮೈಕೈ ನೋವು ಶುರುವಾಗಿದೆ. ಹಾಗೆಂದು ಈ ಕೆಲಸ ಮಾಡಿದ ಸಬ್ ಕಾಂಟ್ರಾಕ್ಟರ್ ಗಳಿಗೆ ಅಷ್ಟೊಂದು ಅನುಭವ ಇಲ್ಲ. ಯಾರೋ ಹೈವೇ ಅಗಲೀಕರಣ ಅಂದರು ಇವನತ್ರ ಜೆಸಿಬಿ, ಹಿಟಾಚಿ ಇತ್ತು ಇಡೀ ಊರಿಗೆ ಊರೇ ಅಗೆದು ಹಾಕಿ ಬಿಟ್ಟ. ಇಷ್ಟು ಅಗೆದು ‌ಹಾಕಿದ್ದಕ್ಕೆ ಇವನಿಗೇನಾದರೂ ಬಿಲ್ ಬಂತಾ ಗೊತ್ತಿಲ್ಲ. ಆದರೆ ಮೂಲ ಗುತ್ತಿಗೆದಾರ ಇದ್ದಾನಲ್ಲ ಡಿ.ಪಿ ಜೈನ್ ಕಂಪೆನಿ ಅದು ಮಾತ್ರ 37 ಕೋಟಿ ಬಿಲ್ ಬಾಚಿದೆ. ಯಾಕೆಂತ ಗೊತ್ತಿಲ್ಲ. ಕೊಟ್ಟದ್ದು ಯಾರು, ಯಾವ ಕೆಲಸಕ್ಕೆ ಅಂತ ಹೈವೇ ಮಾರಿಯಮ್ಮನಿಗೇ ಗೊತ್ತು.
  ಈಗ ವಿಷಯಕ್ಕೆ ಬರೋಣ. ಕೇವಲ ಮೂವತ್ತೆರಡು ಕಿಮೀ ಉದ್ದದ ಹೈವೇ ನಿರ್ಮಾಣಕ್ಕೆ 375 ಕೋಟಿ ಬೇಕಾ ಎಂಬ ಪ್ರಶ್ನೆ ಯಾವ ಕೋತಿ ತಲೆಯಲ್ಲೂ ಹುಟ್ಟಿಯೇ ಹುಟ್ಟುತ್ತದೆ. ಈ ಮೂವತ್ತೆರಡು ಕಿಮೀಯಲ್ಲಿ ಘಾಟ್ ಸೆಕ್ಷನ್ ಬರಲ್ಲ, ಸಂಕಗಳು ಬರಲ್ಲ, ಪ್ರಪಾತಗಳು, ಸುರಂಗಗಳು ಯಾವುದೂ ಬರಲ್ಲ. ಈ ಹೈವೇಯಲ್ಲಿ ದೊಡ್ಡ ಸಂಕ ಅಂತ ಇದ್ದರೆ ಅದು ನಿಡಿಗಲ್ ಸಂಕ. ಅದನ್ನು ಈಗಾಗಲೇ ಹರೀಶಣ್ಣ ಅಗಲಗಲಗಲ ಮಾಡಿಸಿದ್ದಾರೆ. ಮತ್ಯಾಕೆ 375 ಕೋಟಿ? 32 ಕಿಮೀ ಗೆ 375 ಕೋಟಿ ಅಂದರೆ ಒಂದು ಕಿಮೀ ಗೆ ಹನ್ನೊಂದುವರೆ ಕೋಟಿ ಆಯ್ತು. ಇಷ್ಟು ದೊಡ್ಡ ದುಡ್ಡು ಯಾಕೆ ಮಾರಾಯ್ರೆ, ಮದುವೆಗೆ ಬಡಿಸ್ಲಿಕ್ಕೆ ಉಂಟಾ ಅಥವಾ ಕುಲೆಗಳಿಗೆ ಬಡಿಸ್ಲಿಕ್ಕೆ ಉಂಟಾ? ಒಂದು ಕಿಮೀ ಗೆ ಹನ್ನೊಂದುವರೆ ಕೋಟಿ ಅಂದರೆ ಹೈವೇಯನ್ನು ಕಡ್ಲೆ ಬಜಿಲ್ ಮಿಕ್ಸ್ ಮಾಡಿ ಗಟ್ಟಿಯಾಗಿ ಕಾಂಕ್ರೀಟೀಕರಣವೇ ಮಾಡಿಸಬಹುದಿತ್ತು. ರಾಷ್ಟ್ರೀಯ ಹೆದ್ದಾರಿ ವಿಭಾಗ ಏನು ಏಮಾ ಮಾಲಿನಿಯ ಕೆನ್ನೆಯಷ್ಟು ನುಣುಪಾದ ಹೈವೇ ನಿರ್ಮಾಣಕ್ಕೆ ಹೊರಟಿದೆಯಾ? 375 ಕೋಟಿಯಲ್ಲಿ ಯಾರಿಗೆಲ್ಲ ಎಷ್ಟೆಷ್ಟು ಎಂಬ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ. 375 ಕ್ಕೆ ಸ್ವಲ್ಪ ಸೇರಿಸಿದ್ರೆ ಆಲೂಕಾಸ್ ನವರು ಬಂಗಾರದ್ದೇ ಏನಾದರೂ ಮಾಡಿ ಕೊಡುತ್ತಿದ್ದರು. ಹುಚ್ಚು ಮುಂಡೆ ರಿಸೆಪ್ಷನ್ ನಲ್ಲಿ ಉಂಡವನೇ ಜಾಣ ಎಂಬಂತೆ ಎಲ್ಲಮ್ಮನ ಜಾತ್ರೆ ನಡೆಯುತ್ತಾ ಇರುತ್ತದೆ. ನಾವು ಜಾತ್ರೆ ನೋಡಲು ಬಂದವರು ಅಷ್ಟೇ.
...................................................


ಮಂಗಳೂರು ಮಹಾವೀರ ಕ್ರೆಡಿಟ್ ಸೊಸೈಟಿಯ ಕೇಂದ್ರ ಕಚೇರಿಯು ನವೀಕರಣಗೊಂಡು ಇತ್ತೀಚೆಗೆ ಉದ್ಘಾಟನೆಗೊಂಡಿತು. ಸಮಾರಂಭದಲ್ಲಿ ಸೊಸೈಟಿ ಅಧ್ಯಕ್ಷರಾದ ಪಿ.ಪಿ ಹೆಗ್ಡೆ, ಕಾಂಗ್ರೆಸ್ ನಾಯಕರಾದ ಸುರೇಶ್ ಬಲ್ಲಾಳ್, ಪುತ್ತೂರು ನಗರ ಸಭೆಯ ಮಾಜೀ ಅಧ್ಯಕ್ಷರಾದ ಜೀವಂಧರ್ ಜೈನ್, ಹಲವು ಉದ್ಯಮಿಗಳು, ಸೊಸೈಟಿಯ ಡೈರೆಕ್ಟರ್ ಗಳು, ಸದಸ್ಯರು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
...................................................

   ನಮ್ಮನ್ನು ಮುರಿಯಲು ಪ್ರಯತ್ನ ಪಡುವವರ ಎದುರು ನಾವು ಹೊಸತಾಗಿ ಬಾಡಿ ಹೋಗುವುದಕ್ಕಿಂತ ಹಳತಾಗಿ ಇರುವುದೇ ಒಳ್ಳೆಯದು.

-ಶ್ರೀಮತಿ ಶಾಂತಾ ಕುಂಟಿನಿ
...................................................

ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget