ಸುಬ್ರಹ್ಮಣ್ಯ: ಕುಕ್ಕೆಯಲ್ಲಿ ಸಿಂಹದ ಮರಿಗಳು

                                                 


    ಮೇಲಿನ ಫೋಟೋ ನೋಡಿದ್ರಾ ನೀವು. ಸುಬ್ರಹ್ಮಣ್ಯದಿಂದ ಬಂದಿದ್ದು. ಕಳೆದ ವರ್ಷದ ನವರಾತ್ರಿ ಟೈಮಲ್ಲಿ ಬಹುಶಃ ಕುತ್ತಿ ಮೀಸೆ ಮೂಡಿದವರು. ಅದರಲ್ಲೂ ಒಂದಕ್ಕೆ ಇನ್ನೂ ಮೀಸೆಯ ಗ್ರೀಟ್ ಕೂಡ ಬಿದ್ದಿಲ್ಲ. ಇವರೆಲ್ಲ ಕೂಡಿಕೊಂಡು ಈ ವರ್ಷ  ಒಂದು ಸಮಾಜ ಮುಖಿ ಕೆಲಸ ಮಾಡಿದ್ದಾರೆ. ಮೊನ್ನೆ ನವರಾತ್ರಿಯಲ್ಲಿ ಇವರು ಸಿಂಹದ ವೇಷ ಹಾಕಿ ಕುಣಿದಿದ್ದಾರೆ. ಯಾರಿಗಾಗಿ? ಯಾಕಾಗಿ? ಆ ಕತೆ ಕೇಳಿದರೆ ಕುತ್ತಿ ಮೀಸೆ ಹುಡುಗರ ಬಗ್ಗೆ ಹೃದಯ ತುಂಬಿ ಬರುತ್ತದೆ. ಕರೆದು ಸನ್ಮಾನ ಮಾಡಿ ಮಾರಾಯ್ರೆ ಯಾರಾದರೂ. ಸುಮ್ಮನೆ ಕಳ್ಳಕಾಕರಿಗೆಲ್ಲ ಶಾಲು ಹೊದಿಸಿ ಫಲ ಪುಷ್ಪ ಕೊಡುತ್ತಾರೆ.


ಇವರು ಕುಕ್ಕೆ ಸರ್ಕಲ್ ಫ್ರೆಂಡ್ಸ್. ಈ ನವರಾತ್ರಿಯಲ್ಲಿ ಇವರು ಸಿಂಹದ ವೇಷ ಹಾಕಿ ಸುಬ್ರಹ್ಮಣ್ಯ ತುಂಬಾ ಕುಣಿದದ್ದೇ ಕುಣಿದದ್ದು.  ಅದೆಷ್ಟು ಕುಣಿದರೊ, ಎಷ್ಟು ಆಯಾಸ ಪಟ್ಟುಕೊಂಡರೋ, ಎಷ್ಟು ಬೆವರಿಕೊಂಡರೋ ಗೊತ್ತಿಲ್ಲ.


ಆದರೆ ನವರಾತ್ರಿ ಇಡೀ ಕುಣಿದಿದ್ದಾರೆ. ಬಾಕಿ ಎಲ್ಲಾ ದೊಡ್ಡ ದೊಡ್ಡ ಹುಲಿ, ಸಿಂಹ, ಕರ್ಡಿಗಳು ಕುಣಿದು ಕಲೆಕ್ಷನ್ ಆದ ದುಡ್ಡನ್ನು ಹಂಚಿಕೊಂಡು ಗಮ್ಮತ್ ಮಾಡಿರಬಹುದು. ಆದರೆ ಕುಕ್ಕೆ ಸರ್ಕಲ್ ನ ಈ ಸಿಂಹದ ಮರಿಗಳು ತಾವು ಕುಣಿದು, ಬೆವರು ಸುರಿಸಿ ಕಲೆಕ್ಷನ್ ಮಾಡಿದ ದುಡ್ಡನ್ನು ಅನಾರೋಗ್ಯದಿಂದ ಮಲಗಿರುವ ಹುಡುಗನೊಬ್ಬನ ಚಿಕಿತ್ಸೆಗೆ ಮತ್ತು ಅವನ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಧನವಾಗಿ ಕೊಟ್ಟಿದ್ದಾರೆ. ಸಿಂಹದ ಮರಿಗಳ ಈ ಸಾಮಾಜಿಕ ಕಾರ್ಯಕ್ಕೆ ಎದ್ದು ನಿಂತು ಚಪ್ಪಾಳೆ ಹೊಡೆಯಲೇ ಬೇಕಾಗಿದೆ.



ಅದರಲ್ಲೂ ಖುಷಿ ಕೊಟ್ಟದ್ದು ಹುಡುಗರು ಸಿಂಹದ ವೇಷದ ಲೆಕ್ಕ ಕೂಡ ಸಮಾಜದ ಮುಂದೆ ಇಟ್ಟಿದ್ದಾರೆ. ಬಹುಶಃ ಹುಡುಗರು ಆ ದುಡ್ಡಿನಲ್ಲಿ ಒಂದು ಸಿಂಗಲ್ ಕೇಟಿ ಕೂಡ ಕುಡಿದ ಹಾಗೆ ಕಾಣುತ್ತಿಲ್ಲ. ಯಾಕೆಂದರೆ ಸಿಂಹದ ಮರಿಗಳ ಹೊಟ್ಟೆ ಖಾಲಿ ಖಾಲಿ ಕಾಣಿಸುತ್ತಿದೆ.


ಸಿಂಹದ ಮರಿಗಳು ಸಿಂಹದ ವೇಷದ ಬಾಬ್ತು ಸಮಾಜದ ಮುಂದೆ ಇಟ್ಟ ಲೆಕ್ಕ ಈ ಕೆಳಗಿನಂತಿದೆ.
ಪೆಟ್ಟಿಗೆಯಲ್ಲಿ ಸಂಗ್ರಹವಾದ ಹಣ -41,505
ಸಿಂಹಕ್ಕೆ ಗೂಗಲ್ ಪೇಯಲ್ಲಿ ಬಂದ ಹಣ 3,515
ಒಟ್ಟು -45,020
ಈ ದುಡ್ಡನ್ನು ಹಾಗೆ ಲೆಕ್ಕ ಮಾಡಿ, ರಬ್ಬರ್ ಬ್ಯಾಂಡ್ ಹಾಕಿ ಕೊಂಡೋಗಿ ಅನಾರೋಗ್ಯದಿಂದ ಮಲಗಿದ್ದ ಸಾಯಿ ಸುದರ್ಶನ್ ಗೆ ಕೊಟ್ಟಿದ್ದಾರೆ. ಸಿಂಹದ ಮರಿಗಳ ನಡೆ ಸಜ್ಜನ ಸಮಾಜದ ಒಳಿತಿಗಾಗಿ ಅಂತ ಹೇಳಿದ್ದಾರೆ. ಈ ಸಿಂಹದ ಮರಿಗಳು ಸಜ್ಜನ ಸಮಾಜದ ಮುಕುಟ ಮಣಿಗಳಾಗಲಿ.


ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.






Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget