"ನೀನು ಊರುಬೈಲು ಜಂಕ್ಷನಿಗೆ ಬಾ, ನಾನು ಅಲ್ಲಿ ನಿನ್ನನ್ನು ಕಾಯುತ್ತಿರುತ್ತೇನೆ" ಎಂದು ಕೊಯನಾಡಿನಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟ್ ಟ್ರೈನಿಂಗ್ ಗೆ ಬಂದಿದ್ದ ಮದೆನಾಡು ಭಾಗದ ಹುಡುಗ ಅಲ್ಲಿ ಕಲ್ಲುಗುಂಡಿಯಲ್ಲಿ ಅದೇನೋ ಖಾಸಗೀ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಊರುಬೈಲ್ ಹುಡುಗಿಗೆ ಹೇಳಿದ್ದಾನೆ. ಮಾವನ ಮಗ ಅಲ್ಲ, ಮಾಮಿ ಮಗ ಅಲ್ಲ. ಕಸಿನ್ ಬ್ರದರ್ ಅಲ್ಲ, ಭಾವನ ತಮ್ಮ, ಸೋದರ ಸಮ್ಮಲೆ, ದೊಡ್ಡನ ಮಗ, ತಿದ್ದಿಯ ತಮ್ಮ ಯಾವುದೂ ಅಲ್ಲ. ನೆರೆಹೊರೆಯವನು, ಫ್ರೆಂಡ್ ಅಣ್ಣ, ಲೈನ್ ಹೊಡೆಯುವವನು, ಓಂಗುವವನು, ಸೈಡ್ ಲವ್ವಿನವನು ಅಲ್ಲವೇ ಅಲ್ಲ. ಯಾರೋ ಇಲ್ಲಿ ತನಕ ನೋಡ್ಲಿಕ್ಕೆ ಸಿಗದವನು, ಮಾತಾಡ್ಲಿಕ್ಕೆ ಒದಗದವನು ಊರುಬೈಲು ಜಂಕ್ಷನಿಗೆ ಬಾ ಅಂದ್ರೆ ಹೇಗೆ? ಹುಡುಗಿಗೆ ಪಿತ್ತ ನೆತ್ತಿಗೇರಿದೆ. ಹಾಗೆ ಕಲ್ಲುಗುಂಡಿಯಿಂದ ಹೊರಟವಳು ಸೀದಾ ಊರುಬೈಲ್ ಜಂಕ್ಷನಿಗೆ ಬರುವಾಗ ದಾರಿಯಲ್ಲಿ ಸಿಕ್ಕ ಒಂದಿಬ್ಬರು ಲೋಕಲ್ ಲೀಡರ್ ಗಳಲ್ಲಿ ವಿಷಯ ಹೇಳಿದ್ದಾಳೆ. ಯಾರೋ ಗುರುತು ಪರಿಚಯ ಇಲ್ಲದವನು ನಮ್ಮ ಊರಿನ ಹುಡುಗಿಯನ್ನು ಊರುಬೈಲ್ ಜಂಕ್ಷನಿಗೆ ಬರ್ಲಿಕ್ಕೆ ಹೇಳಿದ್ದಾನೆ ಎಂಬ ವಿಷಯ ಕ್ಷಣಮಾತ್ರದಲ್ಲಿ ಊರಿಡೀ ಪ್ರಚಾರ ಆಯಿತು. ಜನ ಸೇರಿತು. ಎಲ್ಲರೂ ಸೇರಿ ಊರುಬೈಲ್ ಜಂಕ್ಷನಿಗೆ ಬಂದರೆ ಮದೆನಾಡು ಹುಡುಗ ಮೊಬೈಲ್ ನೋಡುತ್ತಾ ಹುಡುಗಿಯನ್ನು ವೈಟ್ ಮಾಡುತ್ತಾ ಇದ್ದಾನೆ.
ಹಾಗೆ ಹುಡುಗಿ ಬರುತ್ತದೆ ಎಂದು ಉಬ್ಬಿ ನಿಂಗುತ್ತಾ ಕುಂತಿದ್ದ ಹುಡುಗನಿಗೆ ಹುಡುಗಿ ಐವತ್ತು ಜನರ ಗ್ಯಾಂಗಿನೊಂದಿಗೆ ಬಂದಿದ್ದು ನೋಡಿ ಅಕಲ್ ಚಕ್ರ ಆಗಿದೆ. ಬಂದ ಜನ ಹುಡುಗನ ವಿಚಾರಣೆ ಮಾಡಿದೆ, ಮಂಗಳಾರತಿ ಮಾಡಿದೆ. ಇನ್ನೇನು ಹುಡುಗನಿಗೆ ಸನ್ಮಾನ ಮಾಡಬೇಕೆಂದು ಕೆಲವರು ರಟ್ಟೆ ಸರಿ ಮಾಡಿಕೊಂಡರೆ " ಬೇಡ ಬೇಡ ಹೊಡೆಯೋದು ಬೇಡ, ಗಲಾಟೆ ದೊಡ್ಡದು ಮಾಡಿದರೆ ಹುಡುಗನ ಭವಿಷ್ಯಕ್ಕೆ ತೊಂದರೆ ಆದೀತು" ಎಂದು ಯಾರೋ ಸಭ್ಯರು ಗುಂಪಿನಲ್ಲಿ ಹೇಳಿದ್ದಾರೆ. ಅದಕ್ಕೆ ಇಡೀ ಗುಂಪಿನಲ್ಲಿ ಹೌದು ಹೌದು ಎಂದು ಗೋವಿಂದ ಕೇಳಿ ಬಂದಿದೆ. ಹಾಗಾಗಿ ಹುಡುಗನಿಗೆ ಎಚ್ಚರಿಕೆ ಕೊಟ್ಟು, ಬೆದರಿಸಿ,ಬೆವರಿಳಿಸಿ ತಿರ್ಗಿ ನೋಡಲೂ ಬಾರದು ಎಂದು ಹೆದರಿಸಿ ಕಳಿಸಲಾಯಿತು. ಅಲ್ಲಿಗೆ ಪ್ರಕರಣ ಶುಭಂ ಕಂಡಿದೆ.
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................
ಅಲ್ಲ ಮಾರಾಯ್ರೆ ಈ ಹುಡುಗನಿಗೆ ಏನು ಮಂಡೆಗೆ ಪೆಟ್ಟಾಗಿದೆಯಾ? ಕಣ್ಣಿಗೆ ಕಂಡ ಹುಡುಗಿಯನ್ನು ನೀನು ಅಲ್ಲಿಗೆ ಬಾ, ಇಲ್ಲಿಗೆ ಬಾ ಎಂದು ಕರೆಯಲು ಹುಡುಗಿಯರು ಏನು ರಿಕ್ಷಾವ? ಜನ ಮಂಡೆ ಶರ್ಬತ್ತ್ ಮಾಡಬಹುದು. ಪಾಪ ಊರುಬೈಲು ಜನ ಆದ ಕಾರಣ ಹಾಗೆ ಸುಮ್ಮನೆ ಬಿಟ್ಟರು. ಬಾಕಿ ಯಾರೇ ಆಗುತ್ತಿದ್ದರೂ ಪೀಸ್ ಪೀಸ್ ಮಾಡಿ ಪಾರ್ಸೆಲ್ ಮಾಡುತ್ತಿದ್ದರು.
........................................................
ವಿ.ಸೂ: ಅಲ್ಲಿ ಪೆರಾಜೆಯಲ್ಲಿ ಗೂಡಂಗಡಿಯೊಂದು ಗಾಂಜಾ ಪುಗೆ ಹೊರ ಸೂಸುತ್ತಿದೆ ಮತ್ತು ಆ ಗೂಡಂಗಡಿ ಟೈಟ್ ಮಾಸ್ಟರ್ ಗಳ ಅಡ್ಡೆ ಆಗಿದೆ. ಇಲ್ಲಿಗೆ ಮಡಿಕೇರಿ ಪೋಲಿಸರು ಘಟ್ಟ ಇಳಿದು ಬರಬೇಕು. ಯಾವಾಗ ಬರ್ತಾರೆ?
ನೀವೂ ಮಾಹಿತಿ ಕಳಿಸಿ:
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment