ಮೊನ್ನೆ ಅಲ್ಲಿ ಕಡಬದಲ್ಲಿ ಎಲ್ಲೋ ರಾಜಾರೋಷವಾಗಿ ಕೊರ್ದ ಕಟ್ಟ ನಡೆದಿದೆಯಂತೆ ಮತ್ತು ದಿನಾ ಬೇರೆ ಬೇರೆ ಊರುಗಳಲ್ಲಿ, ಬೇರೆ ಬೇರೆ ಭೂತ ಗಳಿಗೆ ದೂರು ಹಾಕಿ ಕೋಳಿ ಕಟ್ಟ ನಡೆಯುತ್ತಲೇ ಇದೆಯಂತೆ. ಈ ಬಗ್ಗೆ ಕಡಬದ NEWS UPDATES ವೆಬ್ ಸೈಟ್ ವರದಿ ಪ್ರಕಟಿಸಿ ಕಡಬ ಪೋಲಿಸರು ಕಾಸು ತಗೊಂಡು ಕೋಳಿ ಕಟ್ಟಕ್ಕೆ ಪರ್ಮಿಶನ್ ಕೊಡುತ್ತಿದ್ದಾರೆ ಎಂದೂ ಅಂಡರ್ ಲೈನ್ ಹಾಕಿ ವೈರಲ್ ಮಾಡಿತ್ತು. ಕಡಬ ಪೋಲಿಸರಿಗೆ ಕೋಪವೋ ಕೋಪ! ಇಡೀ ವೆಬ್ ಸೈಟನ್ನು ಅದರ ಸಂಪಾದಕರ ಸಮೇತ ತಿಂದು ಬಿಡುವಷ್ಟು ಕೋಪ. ಎಂಥ ಮಾಡುವುದು, ಎಂಥ ಮಾಡುವುದು ಎಂದು ಶತಪಥ ಹಾಕಿದ ಕಾ.ಸು ಪೋಲಿಸರು ಕಡೇಗೇ ವೆಬ್ ಸೈಟ್ ಸಂಪಾದಕ ಗಣೇಶ್ ಇಡಾಲರಿಗೆ ಒಂದು ಕೆಂಪು ಕೆಂಪು ನೋಟಿಸ್ ಜಾರಿ ಮಾಡಿದ್ದಾರೆ. ಈ ನೋಟಿಸ್ ತಲುಪಿದ ಇಂತಿಷ್ಟು ದಿನಗಳಲ್ಲಿ ಪೋಲಿಸರು ಕಾಸು ತಗೊಂಡು ಕೋಳಿ ಕಟ್ಟಕ್ಕೆ ಪರ್ಮಿಶನ್ ಕೊಡುತ್ತಿದ್ದಾರೆ ಎಂಬ ಬಗ್ಗೆ ಸಾಕ್ಷ್ಯಾಧಾರಗಳನ್ನು ಕಾ.ಸು ಉಪನಿರೀಕ್ಷಕರ ಮುಂದೆ ಪ್ರೊಡ್ಯೂಸ್ ಮಾಡಬೇಕು ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸಲ್ಲಿ ಎಚ್ಚರಿಕೆ ಕೊಡಲಾಗಿತ್ತು.
ಅಲ್ಲ ಮಾರಾಯ್ರೆ, ಗ್ರೌಂಡ್ ತುಂಬಾ ಶಾಮಿಯಾನ, ಅದರ ಮೇಲೆ ತಗಡ್ ಶೀಟ್, ಕೂರಲು ಪ್ಲಾಸ್ಟಿಕ್ ಚೇರ್ ಗಳು, ಹೋದವರಿಗೆಲ್ಲ ನೂರು ರೂಪಾಯಿ, ಇನ್ನೂರು ರೂಪಾಯಿಗಳ ಪ್ರಿಂಟೆಡ್ ಟಿಕೆಟ್, ಅಲ್ಲೇ ಮಟನ್, ಚಿಕನ್ ಹೋಟೆಲ್, ಬೀಡಾ ಬೀಡಿ, ಮಾರುತಿ. ಕುಟು ಕುಟು, ಮೈಕದಲ್ಲಿ ವೀಕ್ಷಕ ವಿವರಣೆ, ಕಿಲೋ ಮೀಟರ್ ದೂರದ ತನಕ ಟ್ರಾಫಿಕ್, ಕೋಳಿ ಕಟ್ಟ ಗ್ರೂಪಿನಲ್ಲಿ ಅಬ್ಬರದ ಪ್ರಚಾರ, ಲಕ್ಷಾಂತರ ಕಾಸಿನ ವ್ಯವಹಾರ. ಕಾನೂನು, ಸುವ್ಯವಸ್ಥೆ ಅಲ್ಲೇ ಮೇಲೆ ಗಾಳಿಯಲ್ಲಿ ಹಾರಾಡುವುದು, ಜಾತ್ರೆಯಂತೆ, ದೊಡ್ಡ ತಲೆ ಪಟ್ಟದ ಭೂತದ ನೇಮದಂತೆ, ಮಂತ್ರಿ ಸತ್ತಂತೆ. ಇದು ಈ ಕಾಲದ, ಈಗ ನಡೆಯುತ್ತಿರುವ ಹೈಟೆಕ್ ಕೋಳಿಕಟ್ಟಗಳ ವ್ಯವಸ್ಥೆ. ಇಂತ ಗೌಜಿ ತಮ್ಮ ಸರಹದ್ದಿನಲ್ಲಿ ನಡೆದರೆ ಪೋಲಿಸರಿಗೆ ಗೊತ್ತಾಗಲ್ವಾ? ಒಬ್ಬ ಕಳ್ಳ ಸೈಲೆಂಟಾಗಿ ಸೈಡಲ್ಲಿ ಊಸು ಬಿಟ್ಟರೂ ಅದು ಗೊತ್ತಾಗಿ ರಪಕ್ಕನೆ ಅಲರ್ಟ್ ಆಗುವ ಪೋಲಿಸರಿಗೆ ಇಷ್ಟೆಲ್ಲಾ ಗಾಂಡ್ ಗೌಜಿಯಲ್ಲಿ ಕೋಳಿ ಕಟ್ಟ ನಡೆದರೆ ಅದು ಯಾಕೆ ಗೊತ್ತಾಗಲ್ಲ? ಯಾಕೆ ಕಟ್ಟದ ಮೇಲೆ ರೈಡ್ ಬೀಳಲ್ಲ? ಕಟ್ಟ ನಡೆಯದಂತೆ ಯಾಕೆ ತಡೆಯಲ್ಲ? ಬೀಟ್ ಪೋಲಿಸರಿಗೆ ಯಾಕೆ ಲೋಕಲ್ ಮಾಹಿತಿದಾರ ಮಾಹಿತಿ ಕೊಡಲ್ಲ? ಇದನ್ನೇ NEWS UPDATES ಗಣೇಶ್ ಬರೆದಿದ್ದು. ಅದಕ್ಕೆ ನೋಟಿಸ್.
ಹಾಗೆಂದು ಪೋಲಿಸರು ಕಾಸು ಮುಟ್ಟಲ್ಲ ಎಂದು ಬರೆದರೆ ಅದು ಈ ಜಗತ್ತಿನ ಅತೀ ದೊಡ್ಡ ಸುಳ್ಳಾಗುತ್ತದೆ. ಪೋಲಿಸರೂ ತಗೊಳ್ತಾರೆ, ಎಲ್ಲರೂ ತಗೊಳ್ತಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಹೀಗೆ ಯಾವ ಅಂಗವೂ ಇವತ್ತು ಶುದ್ಧ ಹಸ್ತದಲ್ಲಿ ಇಲ್ಲ. ಯಾರೂ ಕ್ಲೀನ್ ಇಲ್ಲ ಅಂದ ಮೇಲೆ ಪೋಲಿಸರು ಮಾತ್ರ ಕ್ಲೀನ್ ಇರಬೇಕು ಅನ್ನೋದು ಸರಿ ಅಲ್ಲ. ಪಾಪ ಪೋಲಿಸರೂ ಕಾಸು ತಗೊಂಡ್ರೆ ಇರ್ಲಿ. ಸಾಮಾನಿಗೆ,ಇಡೆಪುಡೆ ಖರ್ಚಿಗೆ, ಕಂತು ಕಟ್ಲಿಕ್ಕೆ, ಅದಕ್ಕೆ ಇದಕ್ಕೆ ಅಂತ ಅವರಿಗೂ ಕಾಸು ಬೇಕಾಗುತ್ತದೆ. ಆದರೆ ತಾವು ಮಾಡಿದ ವ್ಯವಹಾರಗಳ ಬಗ್ಗೆ ಬೇರೆ ಯಾರೂ ಸಾ..ಸೂ.. ಅನ್ನಬಾರದು ಎಂಬ ಮನಸ್ಥಿತಿ ಮಾತ್ರ ಅವರಲ್ಲಿ ಇರಬಾರದು.
ಈಗ ಕಡಬದಲ್ಲಿ ಕೋಳಿಕಟ್ಟದವರಿಂದ ಕಾ.ಸು ಪೋಲಿಸರು ಕಾಸು ತಗೊಂಡು ಪರ್ಮಿಶನ್ ಕೊಟ್ಟಿದ್ದಾರೆ ಎಂದು NEWS UPDATES ಗಣೇಶ್ ತನ್ನ ಸೈಟಲ್ಲಿ ಬರೆದರೆ ಅದಕ್ಕೆ ಯಾವ ಪುರುಷಾರ್ಥಕ್ಕೆ ಕಾ.ಸು ಎಸ್ಸೈ ನೋಟಿಸ್ ಕೊಟ್ಟಿದ್ದಾರೆಂದೇ ಅರ್ಥವಾಗುತ್ತಿಲ್ಲ. ಕಾ.ಸು ಪೋಲಿಸರಿಗೆ ಕಾಸು ಬಾರದೆ ಅಷ್ಟು ಗೌಜಿಯಲ್ಲಿ ಕೋಳಿ ಕಟ್ಟ ನಡೆಸಲು ಅದೇನು ಹುಚ್ಚು ಮುಂಡೆ ಮದುವೆಯಲ್ಲ. ಇಷ್ಟಕ್ಕೂ ಕಾ.ಸು ಪೋಲಿಸರು ಕಾಸು ತಗೊಂಡ ಬಗ್ಗೆ ಗಣೇಶ್ ನಲ್ಲಿ ಸಾಕ್ಷಾಧಾರಗಳನ್ನು ಕೇಳಲಾಗಿದೆ. ಕಾಸು ತಗೊಳ್ಳುವಾಗ ಯಾರೇ ಆಗಲಿ ಫೋನ್ ಪೇ, ಗೂಗಲ್ ಪೇ, ವಿಡಿಯೋ ಶೂಟಿಂಗ್, ಸಿ.ಸಿ ಶೂಟಿಂಗ್, ಚೆಕ್, ಡಿ.ಡಿ, ಅಫಿದಾವಿತ್, ಪ್ರೂನೋಟ್, ಸ್ಟೇಂಪ್ ಪೇಪರ್ ಮುಂತಾದ ಅಪಾಯಕಾರಿ ಸಿವಿಲ್ ಕಿಲ್ಲರ್ ಗಳ ಮೂಲಕ ಕಿಸೆಗೆ ಹಾಕಿ ಕೊಳ್ಳಲ್ಲ. ಎಲ್ಲೋ ಸಿ.ಸಿ ಇಲ್ಲದ ಕಡೆಗಳಲ್ಲಿ, ಮರದಡ್ಡದಲ್ಲಿ, ಟಾಯ್ಲೆಟ್ ಬರಿಗಳಲ್ಲಿ, ಯಾರದೋ ಅಂಗಡಿ ಮೂಲಕ ಕಾಸು ಬರುತ್ತದೆ. ಸಾಕ್ಷಾಧಾರ ಕೊಡಿ ಅಂದ್ರೆ ಅದನ್ನು ಕಾ.ಸು ಪೋಲಿಸರಿಗೆ ಒಪ್ಪಿಸಲೇ ಬೇಕೆಂದಿಲ್ಲ. ನೋಟಿಸ್ ಕೊಟ್ಟು ಬರದಿದ್ದರೆ ಮುಂದಿನ ಕ್ರಮ ಅಂತ ಎಚ್ಚರಿಕೆ ನೀಡಿದ್ದಾರೆ. ಅದು ಏನು ಕ್ರಮ ಅಂತ ಅವರಿಗೇ ಗೊತ್ತು. ಕಡಬ ಪೋಲಿಸರು ಅಷ್ಟೆಲ್ಲ ಜೋರಿದ್ದಾರ?
ಹಾಗೆಂದು ಪತ್ರಿಕೆಗಳು, ಚಾನೆಲ್ ಗಳು, ವೆಬ್ ಸೈಟ್ ಗಳು ಅವುಗಳ ಕೆಲಸ ಅವು ಮಾಡುತ್ತಾ ಇರುತ್ತವೆ. ಪೋಲಿಸರೂ ಅವರ ಕೆಲಸ ಅವರು ಮಾಡಿದ್ರೆ ಒಳ್ಳೆದು. ಈಗ ನೋಟಿಸ್ ಕೊಟ್ಟು ಒಬ್ಬರನ್ನು ಹೆದರಿಸಿದರೆ (ಹೆದರಲ್ಲ) ಇನ್ನೊಬ್ಬ ಇನ್ನೊಂದು ಕತೆ ಬರೆಯುತ್ತಾನೆ. ಮತ್ತೆ ಎಲ್ಲರೂ ಸಾಲಾಗಿ ಕುಂತು ಕತೆ,ಕವನ ಬರೆಯುತ್ತಾರೆ. ಆಮೇಲೆ ಚಾನೆಲ್ ನವರು ಧಾರಾವಾಹಿ ಶುರು ಮಾಡುತ್ತಾರೆ. ಕತೆ ಕೈಲಾಸ ಆಗುತ್ತದೆ. ಹಾಗೆ ಎಲ್ಲರಿಗೂ ನೋಟಿಸ್ ಕೊಡಲು ಆಗಲ್ಲ. ಪತ್ರಕರ್ತರನ್ನು ಮತ್ತು ಕೋಳಿ ಕಟ್ಟದವರನ್ನು ಒಂದೇ ತಟ್ಟೆಯಲ್ಲಿ ಇಟ್ಟು ತೂಗಕ್ಕಾಗಲ್ಲ. ಇಲ್ಲಿ ಏನಾಗಿದೆ ಅಂದರೆ ಕೋಳಿ ಕಟ್ಟದ ಬಗ್ಗೆ ಬರೆದ ಪತ್ರಕರ್ತರಿಗೆ ನೋಟಿಸ್ ಕೊಡಲಾಗಿದೆ, ಕಾನೂನು ಬಾಹಿರವಾಗಿ ಕೋಳಿ ಕಟ್ಟ ನಡೆಸಿದವರಿಗೆ ಯಾವುದೇ ನೋಟಿಸ್ ಹೋಗಿಲ್ಲ. ನೋಟು ಬಂದ ಕಾರಣ ನೋಟಿಸ್ ಹೋಗಿಲ್ವಾ ಅಥವಾ ಅಡ್ರೆಸ್ ಬರೆದಿದ್ದು ಮಿಸ್ಟೇಕ್ ಆಗಿದ್ಯಾ? ಪರಾಂಬರಿಸಿ ನೋಡುವುದು ಒಳ್ಳೆಯದು.
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................
....................................................
ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ :-
ಹೌದು... ಈಗಿನ ದಿನಗಳಲ್ಲಿ ಪತ್ರಿಕೆಯ ಪುಟ ತೆರೆದರೆ ಸಾಕು, ಯುವ ಸಮುದಾಯದವರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಸುದ್ದಿಗಳು ಬಿತ್ತರಗೊಂಡಿರುತ್ತವೆ. ಆಟ -ಪಾಠಗಳಲ್ಲಿ ತೊಡಗಿಸಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಬೇಕಾಗಿರುವ ದೇಶದ ನಾಳಿನ ಪ್ರಜೆಗಳೇ ಇಂದು ಕಂಬಿ ಹಿಂದೆ ಬಂಧಿಯಾಗುತ್ತಿರುವುದು ವಿಪರ್ಯಾಸವೇ ಸರಿ.
ಇಲ್ಲಿ ನಾವು ಚಿಂತಿಸಬೇಕಾಗಿರುವುದೊಂದೇ, ಯಾಕಿನ್ನೂ ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು.... ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ.ಎಳವೆಯಲ್ಲೇ ಮಕ್ಕಳನ್ನು ಅತಿಯಾಗಿ ಮುದ್ದಿಸಿರುವ ಕಾರಣದಿಂದಲೋ ಅಥವಾ ಸರಿಯಾದ ಸಮಯದಲ್ಲಿ ಸೂಕ್ತ ರೀತಿಯಲ್ಲಿ ದಂಡಿಸದಿರುವುದರಿಂದಲೋ ಮುಂದೊಂದು ದಿನ ದುರಂತವೊಂದಕ್ಕೆ ಸಾಕ್ಷಿಯಾಗುತ್ತದೆ.ಇಂದಿನ ಕೆಲ ಪೋಷಕರು ತಮ್ಮ - ತಮ್ಮ ಕೆಲಸಗಳಲ್ಲಿ ಕಳೆದುಹೋಗುತ್ತಿದ್ದಾರೆ, ಮಕ್ಕಳ ಕುರಿತಾಗಿ ಸೂಕ್ಷ್ಮ ಗಮನಹರಿಸುವಲ್ಲಿ ಸೋತುಹೋಗುತ್ತಿದ್ದಾರೆ.ಇಂದು ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆಗಳಿಂದಾಗಿ ನಮಗಾಗೇ ಸಮಯ ಮೀಸಲಿಡಲಾಗದ ಪರಿಸ್ಥಿತಿಗೆ ಬಂದುಬಿಟ್ಟಿರುವ ನಾವು, ಇನ್ನಾದರೂ ಮಕ್ಕಳ ಕುರಿತಾಗಿ ಮುತುವರ್ಜಿವಹಿಸಬೇಕಿದೆ. ತಮ್ಮ ಮಕ್ಕಳಿಗೆ ದೇಶಭಕ್ತಿ, ದೇಶಪ್ರೇಮ ಮೂಡಿಸಲು ಶ್ರಮಿಸಬೇಕು; ಅನಾದಿ ಕಾಲದಿಂದಲೂ ಉಳಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕೃತಿಯನ್ನು ಅವರಿಗೆ ಅರ್ಥ ಮಾಡಿಸಬೇಕು. ಪವಿತ್ರ ಗ್ರಂಥಗಳನ್ನು ಓದಿ ಅದರ ಮಾರ್ಗದಂತೆ ಮುನ್ನಡೆಯಲು ಪ್ರೇರೇಪಿಸಬೇಕು.ಇಂದಿನ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕಕ್ಕಿಂತ, ಮೊಬೈಲ್ ಕಲಿಕಾ ಸಾಧನವಾದಂತಾಗಿದೆ. ಅವರ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಅವರ ಜೊತೆಯಲ್ಲಿ ಕುಳಿತು ಓದಲು ಬರೆಯಲು ಸಹಕರಿಸುತ್ತಾ, ಅವರ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕು. ಇತರ ಅನಗತ್ಯ ವಿಷಯಗಳತ್ತ ವಾಲದಂತೆ, ಮುಂದೊಂದು ದಿನ ಅಪಾಯಕ್ಕೆ ಆಸ್ಪದ ನೀಡದಂತೆ ಪೋಷಕರಾದ ನಾವೇ ಜಾಗ್ರತೆವಹಿಸಬೇಕು. ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ, ನಾಳೆಯ ದಿನ ದೇಶಕ್ಕೆ ನಾವು ಸಂಸ್ಕಾರಯುತ ಪ್ರಜೆಯನ್ನು ಪರಿಚಯಿಸಬೇಕಿದೆ.
ಪೋಷಕರಾದ ನಾವುಗಳು; ಮಕ್ಕಳ ವಯಸ್ಸಿಗೆ,ಅವರ ಅಭಿರುಚಿಗೆ ತಕ್ಕಂತೆ ನೀತಿಕಥೆಗಳನ್ನೂ ನಮ್ಮ ನೆಲದ ಸಂಸ್ಕೃತಿಯನ್ನೂ ಅವರಿಗೆ ಅರ್ಥೈಸಿಕೊಳ್ಳಲು ಅನುವು ಮಾಡಿಕೊಡೋಣ., ಜೀವನವೆಂಬ ಮಹಾನ್ ಸಾಗರದಲ್ಲಿ ಸಂಸ್ಕಾರವಂತರಾಗಿ ಬಾಳ್ವೆ ನಡೆಸಲು ನಾವು ಅಡಿಪಾಯಗಳಾಗೋಣ...
-ಶ್ರೀಮತಿ ಜನಶ್ರೀ ಹರೀಶ್, ಸುಳ್ಯ
................................
ಅಡಿಕೆ ಗುಂಡಿ, ಪಿಲ್ಲರ್ ಹೊಂಡ,
ಪೈಪ್ ಲೈನ್, ಇಂಗು ಗುಂಡಿ,
ಮನೆಯ ಪಾಯ,
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
................................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment