ಹಾಗೆಂದು ಕಳಸ ತಾಲೂಕಿನ ಕುದುರೆಮುಖ ಟೌನನ್ನು ಹುಲಿಗಳಿಗೆ ಬೇಕಾಗಿ ಮುಚ್ಚಿ ದಶಕಗಳೇ ಕಳೆದಿದೆ. ಕುದುರೆಮುಖ ದೊಡ್ಡ ಟೌನು ಮಾರಾಯ್ರೆ. ಒಂದು ಟೌನಲ್ಲಿ ಏನೆಲ್ಲಾ ಬೇಕೋ ಅದೆಲ್ಲಾ ಅಲ್ಲಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕುದುರೆಮುಖ ಕಬ್ಬಿಣದ ಅದಿರಿನ ಕಂಪೆನಿ ಇತ್ತು. ಜನಸಂಖ್ಯೆಯೂ ಬೇಕಾದಷ್ಟು ಇತ್ತು. ಆದರೆ ಸರಕಾರಕ್ಕೆ ಅದೇನು ಅನ್ನಿಸಿತೋ ಗೊತ್ತಿಲ್ಲ. ಒಂದು ಶುಭ್ರ ಮುಂಜಾನೆ ಸರ್ಕಾರ ಕುದುರೆಮುಖ ಕಬ್ಬಿಣದ ಅದಿರಿನ ಕಂಪೆನಿಯನ್ನು ಮುಚ್ಚಿ ಇಡೀ ಕುದುರೆಮುಖವನ್ನು ಹುಲಿಗಳಿಗೆ ವಾಸಿಸಲು ಯೋಗ್ಯ ಎಂದು ಹುಲಿ ನ್ಯಾಶನಲ್ ಪಾರ್ಕ್ ಎಂದು ಘೋಷಿಸಿ ಬಿಟ್ಟಿತು. ಆಯ್ತಲ್ಲ, ಕಂಪೆನಿ ಮುಚ್ಚಿದ ಮೇಲೆ ಜನರಿಗೇನು ಕೆಲಸ ಕುದುರೆಮುಖದಲ್ಲಿ. ಹುಲಿ ಬರುತ್ತದೆ ಎಂದು ಅವರೂ ಜಾಗ ಖಾಲಿ ಮಾಡಿ ಬಿಟ್ಟರು. ಇಡೀ ಸಿಟಿಗೆ ಸಿಟಿಯೇ ಖಾಲಿ ಆಯ್ತು.
ಉಳಿದದ್ದು ಕುದುರೆಮುಖ ಪೋಲಿಸ್ ಸರ್ಕಲ್ ಇನ್ಸ್ ಪೆಕ್ಟರನ ಆಫೀಸ್ ಮತ್ತು ಕುದುರೆಮುಖ ಪಿಎಸೈ ಆಫೀಸ್ ಹಾಗೂ ಅವರಿಗೆ ಸಂಬಂಧಪಟ್ಟ ಪೋಲಿಸರು. ನಟ್ಟ ನಡು ಭಯಂಕರ ಕಾಡು, ಅದರೊಳಗೊಂದು ಘೋಸ್ಟ್ ಟೌನು ಮತ್ತು ಟೌನ್ ಒಳಗಡೆ ಒಬ್ಬ ಸರ್ಕಲ್ ಇನ್ಸ್ ಪೆಕ್ಟರನ ಆಫೀಸ್. ಪಾಪ ಪೋಲಿಸರು.
ಹಾಗೆ ಕುದುರೆಮುಖ ಘೋಸ್ಟ್ ಟೌನ್ ಆಗಿ ತುಂಬಾ ವರ್ಷಗಳೇ ಕಳೆದರೂ ಈ ಸರ್ಕಲ್ ಇನ್ಸ್ ಪೆಕ್ಟರನ ಆಫೀಸ್ ಕುದುರೆಮುಖದಲ್ಲೇ ಆ ದಟ್ಟ ಕಾಡಿನ ಮಧ್ಯೆಯೇ ಇತ್ತು. ಆಮೇಲೆ ಮೂಡಿಗೆರೆ ತಾಲೂಕಿನಲ್ಲಿದ್ದ ಕಳಸ ಸ್ವಂತ ತಾಲೂಕಾಯ್ತು. ಹಾಗೆಂದು ಕಳಸದಲ್ಲಿ ಮಾಳಿಗೆಯ ಪೋಲಿಸ್ ಠಾಣೆ ಇದೆ. ಆದರೆ ಕಳಸ ಕುದುರೆಮುಖ ಸರ್ಕಲ್ ಇನ್ಸ್ ಪೆಕ್ಟರನ ಸರಹದ್ದಿನಲ್ಲಿ ಬರುತ್ತದೆ. ಹಾಗೆಂದು ಕುದುರೆಮುಖ ಸರ್ಕಲ್ ಇನ್ಸ್ ಪೆಕ್ಟರನ ಆಫೀಸ್ ಗೆ ಕೂಡ ಮಾಳಿಗೆ ಇದೆ. ದೊಡ್ಡ ಆಫೀಸ್. ಒಂದು ನೂರು ಪೋಲಿಸ್ ಇಡಬಹುದು. ಆದರೆ ಏನು ಪ್ರಯೋಜನ? ಕೇಸುಗಳೇ ಇಲ್ಲ.
ಇತ್ತೀಚೆಗೆ ಪತ್ರಿಕೆಗಳು ಬರೆದು ಬರೆದು, ನಾವೂ ಬರೆದು ಕುದುರೆಮುಖ ಸರ್ಕಲ್ ಇನ್ಸ್ ಪೆಕ್ಟರನಿಗೆ ಕಳಸ ಪೋಲಿಸ್ ಠಾಣೆಯ ಮಹಡಿ ಮೇಲೆ ಒಂದು ಆಫೀಸ್ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ಸರ್ಕಲ್ ಇನ್ಸ್ ಪೆಕ್ಟರನ ಕಂಪ್ಯೂಟರ್, ಲ್ಯಾಪ್ ಟಾಪ್, ಒಂದಿಬ್ಬರು ಸಿಬ್ಬಂದಿಗೆ ಕಳಸ ಠಾಣೆಯ ಮಹಡಿ ಮೇಲೆ ವ್ಯವಸ್ಥೆ ಮಾಡಲಾಗಿದೆ. ಇಷ್ಟೂ ಮಾಡಿದ್ದು ಯಾಕೆಂದರೆ ಯಾವಾಗ ನೋಡಿದರೂ ಇಡೀ ಕುದುರೆಮುಖ ಸರ್ಕಲ್ ಇನ್ಸ್ ಪೆಕ್ಟರನ ಸಮೇತ ಅವನ ಆಫೀಸ್ ನಾಟ್ ರೀಚೆಬಲ್ ಆಗಿರುತ್ತಿತ್ತು. ಕಾರಣ ಕುದುರೆಮುಖದಲ್ಲಿ ಯಾವುದೇ ಮೊಬೈಲ್ ಕಂಪೆನಿಯ ಟವರ್ ಇಲ್ಲ. ಜನರೇ ಇಲ್ಲ ಅಂದ ಮೇಲೆ ಟವರ್ ಯಾಕೆ?
ಹಾಗೆ ಕುದುರೆಮುಖದಿಂದ ಸರ್ಕಲ್ ಇನ್ಸ್ ಪೆಕ್ಟರ್ ಹೋದ ಮೇಲೆ ಇದೀಗ ಪಿಎಸೈ ಗತಿ ಏನು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಕಳಸಕ್ಕೆ ಪಿಎಸೈ ಬೇಡ ಯಾಕೆಂದರೆ ಕಳಸ ತಾಲೂಕು ಹೆಡ್ ಕ್ವಾರ್ಟರ್ಸ್ ಆದ ಕಾರಣ ಈಗಾಗಲೇ ಅಲ್ಲಿ ಗಟ್ಟಿ ಗಟ್ಟಿ, ಜಗಜಟ್ಟಿ ಪೋಲಿಸರು ಇದ್ದಾರೆ ಮತ್ತು ಪಿಎಸೈ ಕೂಡ ಇದ್ದಾರೆ. ಹಾಗಾದರೆ ಕುದುರೆಮುಖ ಪಿಎಸೈಯನ್ನು ಎಲ್ಲಿ ಸ್ಥಾಪನೆ ಮಾಡುವುದು ಎಂದು ಯೋಚಿಸಲಾಗಿ ಕುದುರೆಮುಖ ಸಮೀಪದ ಸಂಸೆ ಎಂಬಲ್ಲಿ ಹೊಸ ಠಾಣೆ ನಿರ್ಮಿಸುವುದು ಎಂದು ಒಂದು ರೌಂಡು ಎಸ್.ಪಿ ಬಂದು ಮೀಟಿಂಗ್ ಆಗಿದೆ. ಆದರೆ ಸಂಸೆಯಲ್ಲಿ ಪೋಲಿಸ್ ಇಡುವುದಕ್ಕೆ ಒಂದೆರಡು ಗ್ರಾಮಗಳ ಜನರ ವಿರೋಧ ವ್ಯಕ್ತವಾದ ಕಾರಣ ಕುದುರೆಮುಖ ಪಿಎಸೈ ಶಿಫ್ಟಿಂಗ್ ಕೆಲಸ ಪೆಂಡಿಂಗ್ ಆಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ದಟ್ಟ ಕಾಡು ಮಾರಾಯ್ರೆ. ಕಾಡು ಅಂದರೆ ಭಯಂಕರ ಕಾಡು. ಆ ಕಾಡಿನ ಮಧ್ಯೆ ಒಂದು ಘೋಸ್ಟ್ ಟೌನ್. ಆ ಟೌನಿನಲ್ಲಿ ಒಂದು ಪೋಲಿಸ್ ಸ್ಟೇಷನ್. ಪಾಪ ಪೋಲಿಸರು ಹಗಲು ಬಿಡಿ, ನೈಟ್ ಶಿಫ್ಟ್ ಹೇಗೆ ಡ್ಯೂಟಿ ಮಾಡುತ್ತಾರೆ ಎಂಬುದನ್ನು ನೆನೆಸಿಕೊಳ್ಳಲೂ ಭಯ ಆಗುತ್ತಿದೆ.
ರೈಲಿನಷ್ಟು ದೊಡ್ಡ ಕಾಳಿಂಗ ಸರ್ಪಗಳು, ಆನೆಯಂತ ಕಾಡು ಪಂಜಿಗಳು, ಹುಲಿಯಂತ ಚಿರತೆಗಳು, ಜುರಾಸಿಕ್ ಪಾರ್ಕಿನ ಡೈನೋಸಾರ್ ಸೈಜಿನ ಆನೆಗಳು, ಲಕ್ಷಗಟ್ಟಲೆ ಮಂಗಗಳು, ನರಿಗಳು, ತೋಳಗಳು, ಕ್ರಿಮಿಕೀಟಗಳು, ನಕ್ಸಲರು ಹಾಗೂ ಇತರೇ ಕಳ್ಳಕಾಕರು. ಇವರ ಮಧ್ಯೆ ಪೋಲಿಸರು. ಇನ್ನೂ ಇಲ್ಲಿಗೆ ಹುಲಿರಾಯ ಬಂದಿಲ್ಲ ಮಾರಾಯ್ರೆ. ಬಂದ್ರೆ ಪಾಪ ಪೋಲಿಸರು ಮಾಳಿಗೆ ಇಳಿಲಿಕ್ಕೆ ಕಷ್ಟ. ಅಡವಿಯಲ್ಲೊಂದು ಸ್ಟೇಷನ್ ಮಾಡಿ ಮೃಗಗಳಿಗೆ ಅಂಜಿದೆಡೆ ಎಂತಯ್ಯ ಸಾಂಗು ಹಾಡಬೇಕಷ್ಟೆ ಆ ಪೋಲಿಸರಿಗೆ ಒಂದು ವ್ಯವಸ್ಥೆ ಮಾಡಿ ಮಾರಾಯ್ರೆ. ಸುಮ್ಮನೆ ಉಂಬುರು ಕಚ್ಚಿಸಿಕೊಂಡು ಇನ್ನು ಪೋಲಿಸರ ನೆತ್ತೆರ್ ಕಡಿಮೆ ಆದರೆ ಕಳ್ಳರನ್ನು ಹೇಗೆ ಹಿಡಿಯೋದು?
Post a Comment