ಹಾಗೆಂದು ಈ ಕಾಂಕ್ರೀಟೀಕರಣ, ಡಾಮಾರೀಕರಣ, ಪ್ಯಾಚ್ ವರ್ಕ್ ಅದು,ಇದು ಎಂದೆಲ್ಲ ಮಾಡೋದು ಜನರಿಗೆ ಉಪಯೋಗ ಆಗಲಿ ಎಂದು. ನಮ್ಮ ರಸ್ತೆಗಳು ನೈಸ್ ನೈಸ್, ಏಮಾ ಮಾಲಿನಿಯ ಕೆನ್ನೆಯ ಹಾಗೆ ಇರಲಿ ಎಂಬುದು ಪ್ರತಿಯೊಬ್ಬ ಪ್ರಜೆಯ ಆಶಯ. ಅದಕ್ಕೆ ಸರಿಯಾಗಿ ಈಗೀಗ ಸರಕಾರಗಳೂ ರಸ್ತೆಗಳಿಗೆ ಲೋಡ್ ಲೋಡ್ ದುಡ್ಡು ಅನ್ ಲೋಡ್ ಮಾಡುತ್ತಿದೆ. ಆದರೆ ಆ ದುಡ್ಡು ಕೆಲವು ಕಡೆಗಳಲ್ಲಿ ಸರಿಯಾಗಿ ಯೂಸ್ ಆಗುತ್ತಿಲ್ಲ. ಯೂಸ್ ಲೆಸ್ ಆಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳ, ಗುತ್ತಿಗೆದಾರರ ಸ್ವಾರ್ಥ, ಮೇಲಾಟ, ಲಂಚಗೂಳಿತನಗಳು ಸರ್ಕಾರದ ಅನುದಾನಗಳನ್ನು ಲಗಾಡಿ ತೆಗೆಯುತ್ತಿದೆ. ದ್ಯಾವರು ಕೊಟ್ಟರೂ ಪೂಜಾರಿ ಬಿಡಲ್ಲ ಎಂಬಲ್ಲಿ ತನಕ ಕೆಲವು ಕಡೆಗಳಲ್ಲಿ ಅನುದಾನ ಚರಂಡಿ ಪಾಲಾಗುತ್ತಿದೆ. ಉದಾಹರಣೆಗೆ ನರಮಾನಿ ಸಂಚಾರ ಇಲ್ಲದ ಕಡೆ ರಸ್ತೆ ಮಾಡೋದು, ಕಾಡಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗುಡ್ಡದ ಕೊಡಿಯಲ್ಲಿ ಬಸವ ವಸತಿ, ಸ್ಮಶಾನದ ಬಳಿ ಅಂಗನವಾಡಿ ಇತ್ಯಾದಿ ಇತ್ಯಾದಿ. ಇದೀಗ ಪುತ್ತೂರು ತಾಲೂಕಿನ ಶಾಂತಿಗೋಡು ಎಂಬಲ್ಲಿ ಅದೇನೋ ಮನುಷ್ಯನಿಗೆ ಉಪಯೋಗ ಇಲ್ಲದ ಅಂಡಿಗುಂಡಿ ಕೆಲಸ ಒಂದು ಆಗುತ್ತಿದೆ. ಇದನ್ನು ಯಾರು, ಯಾಕೆ ಮಾಡಿಸುತ್ತಿದ್ದಾರೆ, ಯಾವ ಪುರುಷಾರ್ಥಕ್ಕೆ ಎಂಬುದು ಇನ್ನೂ ಯಾರಿಗೂ ಅರ್ಥವಾಗುತ್ತಿಲ್ಲ.
ಇದು ಶಾಂತಿಗೋಡು-ಪಜಿರೋಡಿ-ಪಾಣಂಬು ರಸ್ತೆ. ಈ ರಸ್ತೆಗೆ ಕಜ್ಜಿ ಬಿದ್ದು, ಬಿದ್ದು, ಹುಷಾರಿಲ್ಲದೆ ಇನ್ನೇನು ಬಂದ್ ಆಗುವ ಪರಿಸ್ಥಿತಿಯಲ್ಲಿ ಇತ್ತು. ಈ ರೋಡಿನಲ್ಲಿ ಸಂಚರಿಸಲು ಜೆಸಿಬಿ ಮತ್ತು ಕೊಂಬಚೇಳು ಹಿಟಾಚಿ ಬಿಟ್ಟರೆ ಬೇರೆ ಯಾವುದೇ ವಾಹನ ಬಳಸಿದರೂ ಅವುಗಳು ಗ್ಯಾರೇಜಿಗೆ ಡೈರೆಕ್ಟ್ ಅಡ್ಮಿಟ್ ಆಗುವ ಪರಿಸ್ಥಿತಿ ಇತ್ತು. ಇನ್ನು ಈ ರಸ್ತೆಯಲ್ಲಿ ಸ್ಕೂಲ್ ಬಸ್ಸುಗಳೂ ಕಾಂಡೆ ಮತ್ತು ಬಯ್ಯಗ್ ಬರುತ್ತಿದ್ದು ಮಕ್ಕಳ ಪರಿಸ್ಥಿತಿಯೂ ಕೇಳುವವರೇ ಇಲ್ಲದಾಗಿತ್ತು. ಮತ್ತೆ ಎರಡು ಚಕ್ರದವರ ಕತೆ, ಮೂರು ಚಕ್ರದವರ ವ್ಯಥೆ ಹೇಳಿ ಸುಖವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅದ್ಯಾರೋ ಪುಣ್ಯಾತ್ಮ ಈ ರೋಡಿನ ಮುನ್ನೂರು ಮೀಟರ್ ಕಾಂಕ್ರೀಟೀಕರಣಕ್ಕೆ ಅನುದಾನ ಬಿಡುಗಡೆ ಮಾಡಿಬಿಟ್ಟ. ನಿಜವಾಗಿಯೂ ನೋಡುವುದಾದರೆ ಈ ಅನುದಾನ ರಸ್ತೆ ಪರಿಸ್ಥಿತಿ ಎಲ್ಲಿ ಗಂಭೀರವಾಗಿದೆಯೋ ಅಲ್ಲಿ ಕೊಂಡುಹೋಗಿ ಹಾಕಬೇಕಾದ್ದು ಧರ್ಮ. ಅದರಿಂದ ಕಡೇ ಪಕ್ಷ ಶಾಲೆ ಮಕ್ಕಳಿಗಾದರೂ ಪ್ರಯೋಜನ ಆಗುವಂತೆ ಇರಬೇಕಿತ್ತು. ಆದರೆ ಇಲ್ಲಿ ರಸ್ತೆ ಸರಿ ಇದ್ದಲ್ಲಿ ಕಾಂಕ್ರೀಟ್ ಹಾಕಲಾಗುತ್ತಿದೆ. ಸಾಮಾನ್ ತಪ್ಪಿಸಿ ಕೋಮಣ ಕಟ್ಟಿದ ಹಾಗೆ.
ಅಲ್ಲ ಮಾರಾಯ್ರೆ ಆ ಸ್ಕೂಲ್ ಬಸ್ಸುಗಳು ತೆವಳಿಕೊಂಡು, ಪರಡ್ಡಿಕೊಂಡು ಫಸ್ಟ್ ಗೇರಲ್ಲಿ ಹೋಗುವ ಕಡೆ ಕಾಂಕ್ರೀಟ್ ಹಾಕದೆ ಟಾಪ್ ಗೇರಲ್ಲಿ ಹೋಗುವ ಕಡೆ ಕಾಂಕ್ರೀಟ್ ಹಾಕುತ್ತಿದ್ದೀರಲ್ಲ ಇದು ಯಾರ ಮಂಡೆ? ಯಾಕೆ ಈ ಮಂಡೆ? ಇದರಿಂದ ಈ ಮಂಡೆಗೆ ಏನು ಪ್ರಯೋಜನ? ಕೊತ್ತಲಿಂಗೆಯಲ್ಲಿ ಒಂದು ಕೊಡಬೇಕು ಇಂಥ ಮಂಡೆಗಳಿಗೆ. ಕೆಟ್ಟು ಹೋದ ಕಡೆ ರಸ್ತೆ ಸರಿ ಮಾಡೋದು ಬಿಟ್ಟು ಸರಿ ಇದ್ದ ಕಡೆ ಎಂಥ ರಿಪೇರಿ. ಒಂಚೂರು ಪೋಡಿಗೆಯೇ ಇಲ್ಲ ಮಾರಾಯ್ರೆ ಇವ್ರಿಗೆ. ಇಲ್ಲಿ ಯಾರೂ ಜನ ಪ್ರತಿನಿಧಿಗಳು ಇಲ್ವಾ? ನಿದ್ರೆಯಲ್ಲಿ ಇದ್ದಾರಾ?
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment