ಪುತ್ತೂರು: ಒಂದು ಹನಿ ಕಂಬನಿ
ಸೋಮನ ಹಳ್ಳಿಯ ಮಲ್ಲಯ್ಯನ ಮಗ ಕೃಷ್ಣ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಎಂ ಕೃಷ್ಣ ಇನ್ನಿಲ್ಲ. ಇನ್ನಿಲ್ಲ ಅಂದರೆ ಸಾವಿರ ಯುಗ ಕಳೆದರೂ ಕೃಷ್ಣ ಇನ್ನು ಮತ್ತೆ ಬರಲ್ಲ. ತಾಯ ಗರ್ಭದಿಂದ ಬಂದವನು ಕಾಲ ಗರ್ಭದೊಳಗೆ ಹೊರಟು ಹೋಗಲೇ ಬೇಕು. ಪರಿವರ್ತನೆ ಜಗದ ನಿಯಮ ಎಂದು ದ್ವಾಪರದ ಕೃಷ್ಣ ಹೇಳಿದ ಮಾತು ಕಲಿಯುಗದ ಕೃಷ್ಣನಿಗೂ ಅನ್ವಯ. ಸೋ ಕೃಷ್ಣ ವಾಪಾಸ್ ಹೊರಟು ಹೋಗಿದ್ದಾರೆ ದೊಡ್ಡ ಯಶಸ್ಸಿನ ಮೂಟೆ ಯೊಂದಿಗೆ.
ಹಾಗೆಂದು ಕೃಷ್ಣ ಕರ್ನಾಟಕ ಕಂಡ ಕಲರ್ಫುಲ್ ಲೀಡರ್. ಹೈಟೆಕ್ ಕನಸುಗಾರ. ಮೂರು ಸಲ ಎಂಪಿ, ನಾಲಕ್ಕು ಸಲ ಎಮ್ಮೆಲ್ಲೆ. ಕೃಷ್ಣ ಮುಖ್ಯಮಂತ್ರಿ ಕ್ಯಾಂಡಿಡೇಟ್ ಎಂದು ಅವರನ್ನು ಸ್ಪೀಕರ್ ಮಾಡಿ ಸುಮ್ಮನೆ ಕೂರಿಸಿದ್ದು, ಸ್ಪೀಕರ್ ಹುದ್ದೆಯಲ್ಲಿ ಇನ್ನು ಕೂರಲಾರೆ ಎಂದು ಕೃಷ್ಣ ಹಠ ಹಿಡಿದಾಗ ಅವರನ್ನು DCM ಮಾಡಿದ್ದು, ನಂತರ ಅವರನ್ನು ಕೆಪಿಸಿಸಿ ಪ್ರೆಸಿಡೆಂಟ್ ಮಾಡಿದ್ದು, ಕೆಪಿಸಿಸಿ ಪ್ರೆಸಿಡೆಂಟ್ ಆಗಿ ಕೃಷ್ಣ ಕಾಂಗ್ರೆಸಿಗೆ ಬಹು ಮತ ತಂದಿದ್ದು, ಕರ್ನಾಟಕದ ಮುಖ್ಯಮಂತ್ರಿ ಆದದ್ದು, ಮುಖ್ಯಮಂತ್ರಿ ಆದ ಕೂಡಲೇ DK ಯನ್ನು ಕರೆದು ಗೃಹ ಖಾತೆ ಮಾಡ್ತಿಯೇನಪ್ಪ ಎಂದು ಕೇಳಿದ್ದು, ಯುವಕ DK ತುಂಬಾ ಜ್ಯೂನಿಯರ್ ಇದ್ದ ಕಾರಣ ಹೆದರಿ ಬೇಡ ಅಂದಿದ್ದು ಎಲ್ಲವೂ ಇನ್ನು ನೆನಪು ಮಾತ್ರ.
ಕರ್ನಾಟಕದ ಮುಖ್ಯಮಂತ್ರಿ ಆಗಿ ಕೃಷ್ಣ ಮಾಡಿದ ಕೆಲಸ ಯುಗಗಳ ಕಾಲ ನೆನಪಿನಲ್ಲಿಟ್ಟು ಕೊಳ್ಳಬೇಕಾದ ಕೆಲಸಗಳು. ಇವತ್ತು ಬೆಂಗಳೂರಿನಲ್ಲಿ ನಮ್ಮ ಮಕ್ಕಳು ಐಟಿ ಬಿಟಿ ಕೆಲಸಗಳಲ್ಲಿ ಇದ್ದರೆ ಅದಕ್ಕೆ ಕೃಷ್ಣ ಕಾರಣ. ಐಟಿ ಬಿಟಿ ಕಂಪನಿಗಳಿಗೆ "ನಮ್ಮಲ್ಲಿಗೆ ಬನ್ನಿ, ನಮ್ಮಲ್ಲಿಗೆ ಬನ್ನಿ" ಎಂದು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿ, ಬೆಂಗಳೂರನ್ನು ಸಿಲಿಕಾನ್ ಸಿಟಿ ಎಂಬಲ್ಲಿ ತನಕ ಮುಟ್ಟಿಸಿದ್ದು ಇದೇ ಸೋಮನ ಹಳ್ಳಿಯ ಮಲ್ಲಯ್ಯನ ಮಗ. ದೇವನಹಳ್ಳಿಯ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೊರ್ಟ್, ಮೆಟ್ರೋ ರೈಲು ಕ್ರೆಡಿಟ್ ಕೂಡ ಕೃಷ್ಣನ ಅಕೌಂಟಿಗೆ. ತನ್ನ ರಾಜ್ಯದ ಬಡವರ ಬಡ ಮಕ್ಕಳು ಶಾಲೆಗೆ ಬಂದು ಹಸಿವಿನಿಂದ ಇರಬಾರದು ಎಂದು ಇಡೀ ರಾಜ್ಯದ ಅಷ್ಟೂ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಗೆ ತಂದಿದ್ದು ಕೃಷ್ಣ, ಬಡ ಮಕ್ಕಳಿಗೆ ಅಂಗಿ ಚಡ್ಡಿ ಕೊಟ್ಟಿದ್ದು, ರೈತರಿಗೆ ಯಶಸ್ವಿನಿ, ಬೆಂಗಳೂರಲ್ಲಿ ಫ್ಲೈ ಓವರ್ ನಿರ್ಮಾಣ, ವಿಕಾಸ ಸೌಧ ಕಟ್ಟಿಸಿದ್ದು, ಬೆಂಗಳೂರನ್ನು ಇಂಟರ್ ನ್ಯಾಷನಲ್ ಮಾರ್ಕೇಟ್ ಮಾಡಿದ್ದು, ಬೆಸ್ಕಾಂ, ಮೆಸ್ಕಾಂ ಎಂದು ವಿದ್ಯುತ್ ವಿಕೇಂದ್ರೀಕರಣ, ಕಾವೇರಿ ನಿಗಮ ಸ್ಥಾಪನೆ, ಮುಖ್ಯಮಂತ್ರಿ ಆಗುವಾಗ ಇದ್ದ ಹದಿಮೂರು ಸಾವಿರ ಕೋಟಿ ರಾಜ್ಯ ಬಜೆಟನ್ನು ಮೂವತ್ತನಾಲ್ಕು ಸಾವಿರ ಕೋಟಿಗೆ ಏರಿಸಿದ್ದು ಇತ್ಯಾದಿ. ಮಳೆ ಇಲ್ಲ, ಮಳೆ ಇಲ್ಲ ಎಂದು ಬೆಂಗಳೂರು ಜನ ಬೊಬ್ಬೆ ಹೊಡೆದಾಗ ಹೆಲಿಕಾಪ್ಟರ್ ಮೂಲಕ ಮೋಡ ಬಿತ್ತನೆ ಮಾಡಿ ಬೆಂಗಳೂರಿಗೆ ಮಳೆ ತರಿಸಿದ ಆಧುನಿಕ ಭಗೀರಥ ಇದೇ ಸೋಮನ ಹಳ್ಳಿಯ ಮಲ್ಲಯ್ಯನ ಮಗ. ಕಾಡುಗಳ್ಳ ವೀರಪ್ಪನ್ ಕನ್ನಡಿಗರ ಆರಾಧ್ಯ ದೈವ ರಾಜ್ ಕುಮಾರ್ ನನ್ನು ಅಪಹರಿಸಿ ನೂರು ದಿನ ಇಟ್ಟುಕೊಂಡು ನೂರು ಕೋಟಿ ಕೇಳಿ ಸರ್ಕಾರವನ್ನೇ ಅಲುಗಾಡಿಸಿದಾಗ ರಾಜ್ ಕುಮಾರ್ ಗೆ ಒಂದು ಗೀಟು ಬೀಳದ ಹಾಗೆ ಸೇಫಾಗಿ ವಾಪಾಸ್ ಕರಕ್ಕೊಂಡು ಬಂದು ಅವರ ಅಭಿಮಾನಿ ದೇವರುಗಳ ಮಧ್ಯೆ ಬಿಟ್ಟಿದ್ದು ಇದೇ ಎಸ್. ಎಂ ಕೃಷ್ಣ.
ಹಾಗೆಂದು ಕೃಷ್ಣರನ್ನು ಆಕ್ಸ್ ಫರ್ಡ್ ಕೃಷ್ಣ ಎಂದೂ ಕರೆಯಲಾಗುತ್ತದೆ. ಮಂಡ್ಯ ಮದ್ದೂರಿನ ಪ್ರತಿಷ್ಠಿತ ಒಕ್ಕಲಿಗರ ಫ್ಯಾಮಿಲಿಯಿಂದ ಬಂದಿರುವ ಕೃಷ್ಣ ಅಮೇರಿಕಾದಲ್ಲಿ ಜಾನ್ ಕೆನಡಿ ಪರ ಚುನಾವಣಾ ಪ್ರಚಾರ ಮಾಡಿದವರು. ಕೃಷ್ಣ ತನ್ನ ಮಗಳು ಮಾಳವಿಕಾಳನ್ನು ಕಾಫಿ ಪ್ಲಾಂಟರ್ ಸಿದ್ದಾರ್ಥನಿಗೆ ಮದುವೆ ಮಾಡಿ ಕೊಟ್ಟಿದ್ದು, ಸಿದ್ದಾರ್ಥ ಕಾಫಿ ಡೇ ಮಾಡಿ ಮುಳುಗಿದ್ದು, ಮುಳುಗಿ ತೀರಿಕೊಂಡಿದ್ದು, ನಂತರ ಸಿದ್ದಾರ್ಥ ಮಗನಿಗೆ ಡಿ.ಕೆ ಮಗಳನ್ನು ಕೊಟ್ಟಿದ್ದು , ಎಲ್ಲ ಸಿನೆಮಾದ ಹಾಗೆ ಮಾರಾಯ್ರೆ.
ನಾಲ್ಕು ಬಾರಿ ಎಮ್ಮೆಲ್ಲೆ ಆದದ್ದು, ಮೂರು ಬಾರಿ ಎಂಪಿ ಆದದ್ದು, ಎಮ್ಮೆಲ್ಸಿ ಆದದ್ದು, ಸ್ಪೀಕರ್, ಡಿಸಿಎಂ,ಕೆಪಿಸಿಸಿ ಪ್ರೆಸಿಡೆಂಟ್, ಮುಖ್ಯಮಂತ್ರಿ, ವಿದೇಶಾಂಗ ವ್ಯವಹಾರಗಳ ಸಚಿವ, ಮರಾಠರ ರಾಜ್ಯದ ಗವರ್ನರ್ ಆದದ್ದು ಕೃಷ್ಣ ಎಂಥ ರಾಜಕೀಯ ಮುತ್ಸದ್ದಿ ಎಂಬುದನ್ನು ಸಾಬೀತು ಪಡಿಸಿದೆ. ರಾಜಯೋಗ ಮತ್ತು ಗಜಕೇಸರಿ ಯೋಗ ಒಟ್ಟಿಗೆ ಸೋಮನಹಳ್ಳಿಯ ಮಲ್ಲಯ್ಯನ ಮಗನ ಜಾತಕದಲ್ಲಿತ್ತು. ಮತ್ತೆ ಪದ್ಮವಿಭೂಷಣ ಯಾರಿಗೆ ಕೊಡೋದು? ಅದಕ್ಕೆ ಸರ್ಕಾರ ಪದ್ಮ ಪ್ರಶಸ್ತಿ ಕೃಷ್ಣನಿಗೆ ಪ್ರಧಾನ ಮಾಡಿದ್ದು ಯಾಕೆಂದರೆ ಒಬ್ಬ ಜನ ಪ್ರತಿನಿಧಿ ಇದಕ್ಕಿಂತ ಜಾಸ್ತಿ ಏನು ಮಾಡಲು ಸಾಧ್ಯವಿಲ್ಲ.
ನಾವೆಲ್ಲ ಎಲ್ಲಿದ್ದೇವೆ? ಅದೇ ಪುತ್ತೂರು ಬಸ್ ಸ್ಟ್ಯಾಂಡಲ್ಲಿ ಯಶಸ್ಸಿನೂರಿಗೆ ಬಸ್ ಕಾಯುತ್ತಾ ಇದ್ದೇವೆ. ಯಶಸ್ಸಿನೂರಿಗೆ ಬಸ್ ಆ ರೂಟಲ್ಲಿ ಬರಲ್ಲ ಎಂದು ನಮಗೆ ಗೊತ್ತಿಲ್ಲ ಅಥವಾ ಗೊತ್ತಿದ್ದೂ ಯಾವತ್ತಾದರೂ ಒಂದು ದಿನ ಬರಬಹುದು ಎಂಬ ನಂಬಿಕೆ ನಮ್ಮದು. ಯಶಸ್ಸಿನೂರಿಗೆ ಬಸ್ ಬರಲ್ಲ ಕಣ್ರೀ, ಅಲ್ಲಿಗೆ ನಾವು ಟ್ಯಾಕ್ಸಿ ಮಾಡಿ ಹೋಗ ಬೇಕು ಅಥವಾ ಯಶಸ್ಸಿನೂರಿಗೆ ಹೋಗಲು ಯಾರಾದರೂ ಮಾಡಿರುವ ಟ್ಯಾಕ್ಸಿಯಲ್ಲಿ ನೇತಾಡಿಕೊಳ್ಳಬೇಕು ಅಷ್ಟೇ.
ಸೋಮನ ಹಳ್ಳಿಯ ಮಲ್ಲಯ್ಯನ ಮಗ ಏನೋ ಟ್ಯಾಕ್ಸಿ ಮಾಡಿ ಯಶಸ್ಸಿನೂರಿಗೆ ಮುಟ್ಟಿ ವಾಪಾಸ್ ಹೊರಟು ಹೋದರು. ಅವರ ಟ್ಯಾಕ್ಸಿಯಲ್ಲಿ ನೇತಾಡಿಕೊಂಡವರೂ ಯಶಸ್ಸಿನೂರು ಮುಟ್ಟಿ ಬಿಟ್ಟರು. ನಾವು ನೀವು ಮಾತ್ರ ಇನ್ನೂ ಪುತ್ತೂರು ಬಸ್ ಸ್ಟ್ಯಾಂಡಲ್ಲಿಯೇ ಇದ್ದೇವೆ. ಬಸ್ ಬರಲ್ಲ ಟ್ಯಾಕ್ಸಿ ಸಿಗಲ್ಲ.
....................................................................
ದೇವಿ ಮಹಾತ್ಮೆ
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.