ದುಡ್ಡು ಕಟ್ ಆಗುತ್ತಿದೆ, ಬ್ಯಾಂಕಿಗೆ ಬರೋಡಾ ಎಂದು ನೀವು ಕಾಣಿಯೂರು ಬರೋಡಾ ಬ್ಯಾಂಕಿಗೆ ಫೋನಾಯಿಸಿದರೆ ಅದು ಸೈಬರ್ ಫ್ರಾಡ್ ಎಂಬ ಉತ್ತರ ಬರುತ್ತದೆ. ಮತ್ತೆ ಬರೋಡಾನೂ ಇಲ್ಲ, ಪೋವೋಡಾನೂ ಇಲ್ಲ. ಇದು ಅಷ್ಟಮಠಗಳಲ್ಲಿ ಒಂದಾದ ಕಾಣಿಯೂರು ಮಠ ಇರುವ ಕಾಣಿಯೂರಿನ ಬ್ಯಾಂಕೊಂದರ ಕತೆ.
ಅಲ್ಲಿ ಕಾಣಿಯೂರಿನಲ್ಲಿ ಮೊದಲು ವಿಜಯ ಬ್ಯಾಂಕಿತ್ತು. ಆಮೇಲೆ ಬೋರ್ಡ್ ಛೇಂಜ್ ಮಾಡಿ ಬರೋಡಾ ಅಂತ ಹಾಕಿದರು. ಜನ ಕಿಟಿ ಕಿಟಿ ಎಂದು ನಕ್ಕರು. ಮೊದಲಿನಿಂದಲೂ ಕಾಣಿಯೂರು ಬ್ಯಾಂಕಿದ್ದು ಸಮಸ್ಯೆಯೆ. ಒಮ್ಮೊಮ್ಮೆ ಹಿಂದಿ ಮ್ಯಾನೇಜರ್ ಗಳು ಬಂದರಂತೂ ಸಮಸ್ಯೆ ಬಿಗಡಾಯಿಸುತ್ತಿತ್ತು. ಹಿಂದಿ ಮ್ಯಾನೇಜರನಿಗೆ ಕನ್ನಡ ಬರಲ್ಲ, ಕಾಣಿಯೂರು ಮಂದಿಗೆ ಹಿಂದಿ ಎಂತೂ ಬರಲ್ಲ ಕನ್ನಡವೂ ಅಪ್ಪಿಡಿಪ್ಪುಡಿ. ಇದೀಗ ಕಾಣಿಯೂರು ಬ್ಯಾಂಕಿನಲ್ಲಿ ಏನೋ ಹೊಸದೊಂದು ಸಮಸ್ಯೆ ಶುರುವಾಗಿದೆ.
ನಿಮ್ಮ ಅಕೌಂಟಿನಲ್ಲಿ ಇವತ್ತು ಇದ್ದ ದುಡ್ಡು ಒಮ್ಮಿಂದೊಮ್ಮೆಲೆ ಮಾಯಕ ಆಗೋದು. ಇವತ್ತು ನೀವು ಬರೋಡಾ ಬರೋಡಾ ಎಂದು ಹೋಗಿ ಬ್ಯಾಂಕಿಗೆ ಒಂದು ಹತ್ತು ಸಾವ್ರ ಕಟ್ಟಿ ಬನ್ನಿ. ನಾಳೆ ಅಲ್ಲ ನಾಡಿದ್ದು ಒಂದು ಪೆತ್ತ ತೆಗಿಲಿಕ್ಕೆ ಉಂಟು ಎಂದು ಹೋಗಿ ಎಟಿಎಂಗೆ ಕೈ ಹಾಕಿದರೆ ಅಕೌಂಟಲ್ಲಿ ದುಡ್ಡಿಲ್ಲ. ಏನು ಸ್ವಾಮಿ ಇದು ಎಂದು ಬ್ಯಾಂಕಲ್ಲಿ ಕೇಳಿದರೆ ಅದು ಸೈಬರ್ ಫ್ರಾಡ್ ಆಗಿರಬಹುದು ಎಂಬ ಉತ್ತರ. ದುಡ್ಡು ಕಟ್ ಆಗಿದ್ದಕ್ಕೆ ಮೆಸೇಜ್ ಬಂದಿಲ್ಲ, ಪಾಸ್ ಬುಕ್ಕಲ್ಲಿ ಎಂಟ್ರಿ ಇಲ್ಲ ಎಂದು ಹೇಳಿದರೆ ಬ್ಯಾಂಕಿನವರಲ್ಲಿ ತಕ್ಕ ಉತ್ತರವಿಲ್ಲ.
ನೀವು ರಮ್ಮಿ ಸರ್ಕಲ್ ಆಡುತ್ತೀರಾ, ಲೂಡ ಕೂಡ ಆಡುತ್ತೀರಾ ಹಾಗಿದ್ದರೆ ಅವರು ಕಟ್ ಮಾಡಿರ ಬಹುದು ಎಂಬ ಮಾಹಿತಿ ಬ್ಯಾಂಕಿಂದ. ಹಾಗಾದರೆ ನಾಳೆ ಒಬ್ಬರ ಅಕೌಂಟಿನಲ್ಲಿ ಇರುವ ಲಕ್ಷಾಂತರ ದುಡ್ಡನ್ನು ಗುಡಿಸಿ ಗುಂಡಾಂತರ ತೆಗೆದರೆ ಹೊಣೆ ಯಾರು ಮಾರಾಯ್ರೆ.
ಹಾಗೆಂದು ಬ್ಯಾಂಕಿನ ಈಗೀನ ಸ್ಟಾಫ್ ಒಳ್ಳೆ ಜನ. ಅದರಲ್ಲೂ ಬೇಗಂ ಒಬ್ಬರ ಸರ್ವೀಸ್ ಅಂತೂ ಶ್ಲಾಘನೀಯ. ಒಂದು ಕ್ಷಣವೂ ಗ್ರಾಹಕರನ್ನು ಕಾಯಿಸದೆ, ಸುಮ್ಮನೆ ಕುಂತವರನ್ನೂ ಕರೆದು, ಏನಾಗಬೇಕೆಂದು ವಿಚಾರಿಸಿ ಕೆಲಸ ಮಾಡಿಕೊಡುವ ಬೇಗಂ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆ ಅಭಿಪ್ರಾಯ ಇದೆ. ಆದರೆ SB ಅಕೌಂಟಿಂದ ದುಡ್ಡು ಯಾಕೆ ಕಟ್ ಆಗುತ್ತಿದೆ ಎಂಬುದಕ್ಕೆ ಬೇಗಂ ಹತ್ರಾನೂ ಉತ್ತರವಿಲ್ಲ. ಹೀಗೆ ಉಳಿತಾಯ ಖಾತೆಯಿಂದ ದುಡ್ಡು ಖಾಲಿಯಾಗುವ ಕತೆ ತುಂಬಾ ಜನರಿದ್ದಿದೆ.

ಎಲ್ಲರೂ ದಾಯಿತ ಮಲ್ಪುನ ಅಂತ ಸುಮ್ಮನೆ ಕುಂತವರೆ. ಅಲ್ಲ ಮಾರಾಯ್ರೆ ಮನೆಯಲ್ಲಿ ದುಡ್ಡಿಟ್ಟರೆ ಕಳ್ಳರು, ಹೆಂಡತಿ, ಇನ್ ಕಂ ಟ್ಯಾಕ್ಸಿನವರು, ED ಯವರೆಲ್ಲ ಉಪದ್ರ ಮಾಡುತ್ತಾರೆಂದು ಕೊಂಡುಹೋಗಿ ಬ್ಯಾಂಕಿನಲ್ಲಿ ಇಡುವುದು. ಅಲ್ಲಿಯೂ ದುಡ್ಡು ಸೇಫಲ್ಲ ಅಂದರೆ ದುಡ್ಡು ಎಲ್ಲಿಡುವುದು? ಈ ಬಗ್ಗೆ ಬ್ಯಾಂಕಿನವರು ಉಡಾಫೆ ಮಾತಾಡಿದರೆ ಕಾಣಿಯೂರಿನಿಂದಲೇ ಬೆಳ್ಳಾರೆ ಬಸ್ ಹತ್ತಿ ಹೋಗಿ ಈರಯ್ಯರಿಗೆ ಒಂದು ಕಂಪ್ಲೈಂಟ್ ಮಾಡಿದ್ರೂ ಸಾಕು. ನಿಮ್ಮ ದುಡ್ಡು ಎಲ್ಲಿ ಲೀಕ್ ಆಗಿದೆ ಎಂದು ಮ್ಯಾನೇಜರ್ ಮನೆಗೆ ಬಂದು ದಾಖಲೆ ಸಮೇತ ಹೇಳುತ್ತಾನೆ. ಅಷ್ಟು ಮಾಡಿ. ಇಲ್ಲದಿದ್ದರೆ ನಮ್ಮ ದುಡ್ಡಿಗೆ ನಾವೇ ಕಳ್ಳರಾಗಬೇಕಾಗುತ್ತದೆ.
....................................................................
ಪುತ್ತೂರಿನಲ್ಲಿ ದೇವಿ ಮಹಾತ್ಮೆ ಯಕ್ಷಗಾನ
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment