ಕೆಲವು ದಿನಗಳ ಹಿಂದೆ ನಮ್ಮ ವೆಬ್ ಸೈಟ್ ನಲ್ಲಿ ಗುತ್ತಿಗಾರು ಪಿಎಂಶ್ರೀ ಶಾಲೆಯಲ್ಲಿ ನಡೆದ ಕೆಲವು ಅಹಿತಕರ ಘಟನೆಗಳ ಬಗ್ಗೆ ಬರೆಯಲಾಗಿತ್ತು. ಈ ಬಗ್ಗೆ ಗುತ್ತಿಗಾರಿನಲ್ಲಿ ಪರ ವಿರೋಧ ಚರ್ಚೆಗಳು ನಡೆದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ನನಗೆ ಕಾಲ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು ಮತ್ತು ಅವರು ಶಾಲೆಗಾಗಿ ಮಾಡಿದ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಹೇಳಿದ್ದರು. ಚಿಕ್ಕ ಚಿಕ್ಕ ಘಟನೆಗಳಿಗಾಗಿ ಶಾಲೆಯ ಹೆಸರಿಗೆ ಡ್ಯಾಮೇಜ್ ಮಾಡಿದ್ರಿ ಎಂದು ಬೇಸರಿಸಿದ್ದರು. ವೆಂಕಟ್ ದಂಬೆಕೋಡಿ ಸುಳ್ಯ ಬಿಜೆಪಿಯಲ್ಲಿ ನಾನು ಕಂಡಿರುವ ಅಪರೂಪದ ರಾಜಕಾರಣಿ ಮತ್ತು ಸಜ್ಜನ ದೇಶಭಕ್ತ. ಈ ದಂಬೆಕೋಡಿಗೆ ಒಕ್ಕಲಿಗರ ಕೋಟಾದಲ್ಲಿ ಪುತ್ತೂರು ಎಂಎಲ್ಎ ಟಿಕೆಟ್ ಸಿಕ್ಕಿ ಗೆದ್ದು ಬಿಡಲಿ ಎಂದು ಹಾರೈಸುವವನು ನಾನು. ಆದರೆ ಗುತ್ತಿಗಾರು ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಂಬೆಕೋಡಿ ಎಂದು ನನಗೆ ಗೊತ್ತಿರಲಿಲ್ಲ ಮತ್ತು ಮಾಹಿತಿ ಕೊಟ್ಟವರಲ್ಲಿ ಆ ಬಗ್ಗೆ ನಾನು ವಿಚಾರಿಸಲೂ ಹೋಗಿರಲಿಲ್ಲ. ಹಾಗೆ ಗುತ್ತಿಗಾರು ಶಾಲೆಯಲ್ಲಿ ನಡೆದ ಕೆಲವು ಅಹಿತಕರ ಘಟನೆಗಳನ್ನ ವೈರಲ್ ಮಾಡಲಾಗಿತ್ತು. ಈ ಬಗ್ಗೆ ಅಧ್ಯಕ್ಷರು ನಮಗೆ ಸ್ಪಷ್ಟಣೆ ನೀಡಿದ್ದು ಗುತ್ತಿಗಾರು ಶಾಲೆಯ ಇಮೇಜಿಗೆ ನನ್ನ ವರದಿಯಿಂದ ಡ್ಯಾಮೇಜ್ ಆಗಿದ್ದರೆ ಅದಕ್ಕಾಗಿ ನಾನು ಅಧ್ಯಕ್ಷ ಶ್ರೀ ವೆಂಕಟ್ ದಂಬೆಕೋಡಿ ಮತ್ತು ಗುತ್ತಿಗಾರು ಮಹಾಜನತೆಯಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಆ ಒಂದು ವರದಿಗಾಗಿ ವಿಷಾದಿಸುತ್ತೇನೆ.
ಹಾಗೆಂದು ನನ್ನ ಇಪ್ಪತ್ತು ವರ್ಷಗಳ ಪತ್ರಿಕೋದ್ಯಮದ ಜೀವನದಲ್ಲಿ ನನ್ನ ಪತ್ರಿಕೆ ಪ್ರಸಾರವಿದ್ದ ನಾಲಕ್ಕು ಜಿಲ್ಲೆಗಳ ಅಷ್ಟೂ ಊರುಗಳಲ್ಲಿ ನನ್ನ ಫೆವರೇಟ್ ಊರು ಗುತ್ತಿಗಾರು. ಗುತ್ತಿಗಾರು ಲೈನಿಗೆ ಬರುವುದೆಂದರೆ ಆವತ್ತು ನನಗೆ ಸಂಭ್ರಮ. ಮುಂಡೋಡಿ ಬ್ರದರ್ಸ್, ದಂಬೆಕೋಡಿ, ವಳಲಂಬೆ, ಚಿಲ್ತಡ್ಕದ ಲೇಡಿ ಲೀಡರ್, ಮುತ್ತಪ್ಪ ತಿರುವಪ್ಪ ದೈವಸ್ಥಾನ, ವಳಲಂಬೆ ಶಂಕಪಾಲ ದೇವಸ್ಥಾನ, ಈಶ್ವರ ಮಾಸ್ತರರ ಪೇಪರ್ ಸ್ಟಾಲಿನ ಶರಬತ್ತು, ಇತರ ಪೇಪರ್ ಸ್ಟಾಲ್ ಗಳ ನಮ್ಮ ಪ್ರೀತಿಪಾತ್ರರು, ನನ್ನ ಅಕ್ಷರಗಳ ಅಭಿಮಾನಿ ದೇವರುಗಳು, ನನ್ನ ಹಿಡನ್ ಫ್ರೆಂಡ್ಸ್,ದಶಕಗಳ ಹಿಂದೆ ಪತ್ರಿಕೆಯೊಂದಿಗೆ ಒಡನಾಟದಲ್ಲಿದ್ದ ರವೀಶು, ನೈಟ್ ಕುಡಿದು ಟೈಟಾಗಿ ನನಗೆ ವಾಚಾಮಗೋಚರವಾಗಿ ಬಯ್ಯುವ ನನ್ನ ಪ್ರೀತಿಪಾತ್ರರು, ಗುತ್ತಿಗಾರಿಗೆ ಬಾ ಎಂದು ಫೋನಲ್ಲಿ ಕರೆಯುವ ನನ್ನ ಅತೀ ಪ್ರೀತಿಯ ಪೆಟ್ಟಿಸ್ಟ್ ಗಳು ಹೀಗೆ ಗುತ್ತಿಗಾರಿನ ಯಾರನ್ನೂ ನಾನು ಜೀವಮಾನದಲ್ಲಿ ಮರೆಯುವಂತಿಲ್ಲ. ನಾನು ಉದಾಸೀನ ಆಗಿ ಏನೂ ಬರೆಯದಿದ್ದರೂ ಮಿನಿಮಮ್ ಮುನ್ನೂರು ಪತ್ರಿಕೆಗಳನ್ನು ದುಡ್ಡು ಕೊಟ್ಟು ಖರೀದಿಸಿ ಓದಿ ನನ್ನನ್ನು ಪ್ರೋತ್ಸಾಹಿಸಿದ ಗುತ್ತಿಗಾರು ಜನರ ಹುಚ್ಚು ಪ್ರೀತಿಗೆ ನಾನು ಚಿರಋಣಿ. ಗುತ್ತಿಗಾರುನಲ್ಲಿ ನನ್ನ ಬಗ್ಗೆ, ನನ್ನ ಪತ್ರಿಕೆ ಬಗ್ಗೆ ಏನೇ ಚರ್ಚೆಗಳಾದರೂ, ವಿವಾದಗಳು ಎದ್ದರೂ ಹೊರಗೆ ಉತ್ತರ ಕುಮಾರನ ಹಾಗೆ ಪೌರುಷ ತೋರಿಸುತ್ತೇನೆಯೇ ವಿನಃ ಮನಸಿನ ಮೂಲೆಯಲ್ಲಿ ಎಲ್ಲೋ ಪಾಪ ಪ್ರಜ್ಞೆ ಕಾಡಿ ಬಿಡುತ್ತದೆ. ಗುತ್ತಿಗಾರಿನ ಬಗ್ಗೆ ನನಗೆ ಎಷ್ಟು ಅಭಿಮಾನ ಅಂದರೆ ಪುತ್ತೂರು ತಾಲೂಕು ಒಡೆದು ಕಡಬ ತಾಲೂಕು ಉದಯಿಸಿದಾಗ ಸುಳ್ಯ ಒಡೆದು ಗುತ್ತಿಗಾರು ತಾಲೂಕು ಆಗಲಿ, ಪಾಪ ಗುತ್ತಿಗಾರು ಜನರಿಗೆ ಏರುತ ಇಳಿಯುತ ಸುಳ್ಯ ಹೋಗಲು ಕಷ್ಟ ಆಗುತ್ತಿದೆ ಎಂದು ಮರುಕ ಪಟ್ಟವನು ನಾನು. ಆ ಕಲ್ಮಕಾರು, ಕೊಲ್ಲಮೊಗ್ರ, ಹರಿಹರ,ಬಾಳುಗೋಡು ಕಡೆಯ ಗ್ರಾಮಗಳನ್ನೆಲ್ಲ ಸೇರಿಸಿ ಗುತ್ತಿಗಾರು ತಾಲೂಕು ಮಾಡಿದರೆ ಜನರಿಗೆ ಭಾರೀ ಪ್ರಯೋಜನ ಆದೀತು ಎಂಬುದು ನನ್ನ ಭಾವನೆ. ಗುತ್ತಿಗಾರಿನಲ್ಲಿ ಆ ಚಿಕ್ಮುಳಿಯ ಹುಡುಗ ಬಹುಮಹಡಿಗಳ ಕಟ್ಟಡ ಕಟ್ಟಿದಾಗ ಬಹಳ ಖುಷಿ ಪಟ್ಟವನು ನಾನು. ಹಾಗಾಗಿ ಅವರ ಶಾಲೆಯ ಬಗ್ಗೆ ಬರೆದಿದ್ದಕ್ಕೆ ಅವರಿಗೆ ಬೇಸರವಾಗಿದ್ದರೆ ಕ್ಷಮೆಯಿರಲಿ.
ಇನ್ನು ಮೊನ್ನೆ ಶಾಲೆಯ ಬಗ್ಗೆ ಬರೆದಿದ್ದಕ್ಕೆ ಯಾರೋ ಒಬ್ಬ ಕಾಟಿ ನನ್ನ ಬಗ್ಗೆ ಸುಮ್ಮನೆ ಅನಾವಶ್ಯಕವಾಗಿ ಬಯ್ದಿದ್ದ. ನೋಡಿ ಕಾಟಿ ಸಾಮಿ, ನನ್ನದು RNI ಯಲ್ಲಿ ರಿಜಿಸ್ಟರ್ ಆಗಿರುವ ಪತ್ರಿಕೆ. RNI ಅಂದರೆ ಏನು ಅಂತ ನಿಮಗೆ ಗೊತ್ತಿರಲಿಕ್ಕಿಲ್ಲ ಮತ್ತು ಅದರ ಬಗ್ಗೆ ನಿಮಗೆ ಹೇಳುವ ಅವಶ್ಯಕತೆಯೂ ನನಗಿಲ್ಲ. ಒಬ್ಬ ಪತ್ರಕರ್ತನಾಗಿ ಪತ್ರಿಕೆಯಲ್ಲಿ ವರದಿ ಪ್ರಕಟಿಸುವುದು ಪತ್ರಿಕಾ ಧರ್ಮ. ಈಗ ವೆಬ್ ಸೈಟ್ ಕೂಡ ಇದ್ದು ಅದರಲ್ಲೂ ನಾನು ನ್ಯೂಸ್ ವೈರಲ್ ಮಾಡುತ್ತಾ ಇರುತ್ತೇನೆ. ನಾನು ಕೇವಲ ಕಾಂಜಿಪೀಂಜಿಯಾಗಿ ಯಾವುದೋ ಗಡಂಗಿನಲ್ಲಿ ಕುಂತು ಟೈಟಾಗಿ ಇದನ್ನೆಲ್ಲ ಬರೆಯೋದು ಅಲ್ಲ ಮತ್ತು ನಿಮ್ಮಂತೆ ಚಿಲ್ಲರೆ ಚಿಲ್ಲರೆಯಾಗಿ ವಾಯಿಸ್ ಮೆಸೇಜ್ ಮಾಡಿ ಅದನ್ನು ವೈರಲ್ ಮಾಡುವ ಮರ್ಲ ಕೂಡ ನಾನಲ್ಲ. ಒಬ್ಬ ಪತ್ರಕರ್ತನಾಗಿ, ರಿಜಿಸ್ಟ್ರೇಷನ್ ಹೊಂದಿರುವ ಪತ್ರಿಕೆ ನನ್ನ ಕೈಯಲ್ಲಿ ಇರುವ ಕಾರಣ ಯಾವುದೇ ಊರಿನ ಮಾಹಿತಿ, ಯಾರ ಬಗ್ಗೆಯೂ ಬರೆಯುವ ಹಕ್ಕಿದೆ. ಕೇವಲ ಏನೂ ಇಲ್ಲದೆ ಗಡಂಗಿನಲ್ಲಿ ಕುಂತು ಜಾಲತಾಣಗಳಲ್ಲಿ ಸುದ್ದಿ ವೈರಲ್ ಮಾಡುವ ಮರ್ಲ ನಾನಲ್ಲ. ಇನ್ನು ನನಗೆ ಫ್ಯಾಮಿಲಿ ಇಲ್ಲ ಅಂತ ಕಾಟಿ ಸಾಮಿ ಹೇಳಿದ್ದಾರೆ. ನನಗೂ ಫ್ಯಾಮಿಲಿ ಇದೆ ಸಾಮಿ. ಒಂದು ಕಟ್ಟರ್ ಜೈನ ಮನೆತನದಿಂದ ಬಂದವನು ನಾನು. ನನ್ನ ತಾತ ಮೂರು ಗ್ರಾಮಗಳಿಗೆ ಪಟೇಲರು ಆಗಿದ್ದವರು. ಸ್ವಂತ ಬಸದಿ, ಸ್ವಂತ ದೇವಸ್ಥಾನ ಈಗಲೂ ನನ್ನ ಫ್ಯಾಮಿಲಿಗೆ ಇದೆ. ನನ್ನ ಅಪ್ಪ ಕೂಡ ಎರಡು ಗ್ರಾಮಗಳಿಗೆ ಪಠೇಲರಾಗಿದ್ದವರು.ಇನ್ನು ನೀವು ಹೇಳಿದಂತ, ಯೋಚಿಸಿಂದತಹ ಜನ ನಾನಲ್ಲ, ಮುಟ್ಟಿ ನೋಡಿಕೊಂಡಿದ್ದೇನೆ. ನನಗೆ ಸರ್ಕಾರಿ ಶಾಲೆಯಲ್ಲಿ ಹೋಗಿ ಮರಗೆಣಸು ನೆಟ್ಟು ಬದುಕ ಬೇಕಾದ, ದುಡ್ಡು ಮಾಡಬೇಕಾದ ಜರೂರತ್ತು ಇನ್ನೂ ಬಂದಿಲ್ಲ. ಇನ್ನು ತಾಕತ್ ಇದ್ದರೆ ಗುತ್ತಿಗಾರಿಗೆ ಬಾ, ಕಬಡ್ಡಿ ಲೆಕ್ಕ ತೋರಿಸುತ್ತೆವೆ ಎಂದು ಕಂತ್ರಿ ಬೊಗ್ಗಿಯ ಹಾಗೆ ಬೊಗಳಿದ್ದೀರಿ. ಕಬಡ್ಡಿ ಲೆಕ್ಕ ನನಗೆ ಯಾಕೆ ಸಾಮಿ? ನ್ಯೂಸ್ ಬಂದಿತ್ತು ಒಬ್ಬ ಪತ್ರಕರ್ತನಾಗಿ ಅದನ್ನು ಪ್ರಕಟಿಸುವುದಷ್ಟೇ ನನ್ನ ಕೆಲಸ. ಇನ್ನು ತಾಕತ್ ಇದ್ದರೆ ಅಂತ ಹೇಳಿದ್ದೀರಿ. ಈಗ ವಯಸ್ಸಾಗಿದೆ ಸಾಮಿ ನನಗೆ. ಮಕ್ಕಳು ದೂಡಿ ಹಾಕುವ ಟೈಂ. ಬರುವುದಿದ್ದರೆ ನಿಮಗೆ ಹೇಳಿಯೇ ಬರುತ್ತೇನೆ. ನೀವು ನನಗೆ ಕಬಡ್ಡಿ ಲೆಕ್ಕ ತೋರಿಸುವುದು ಬೇಡ. ಮರಗೆಣಸಿನ ಲೆಕ್ಕ ಕೊಟ್ಟರೆ ಸಾಕು.
ಗುತ್ತಿಗಾರು: ಬಿದ್ದು ಸಿಕ್ಕಿದ ಚೈನ್ ಹಿಂತಿರುಗಿಸಿದ ದೊಡ್ಡಣ್ಣ ಗೌಡರು
ಮೊನ್ನೆ ಅಲ್ಲಿ ಗುತ್ತಿಗಾರು ದೇವಿ ಸಿಟಿಯಲ್ಲಿ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕಬಡ್ಡಿ ಪಂದ್ಯಾವಳಿ ನಡೆದಿತ್ತು. ಭಾರೀ ಗೌಜಿದ ಕಬಡ್ಡಿ. ಅಂತ ಗೌಜಿ ಗದ್ದಲದಲ್ಲಿ ಅರಂತೋಡಿನ ಪ್ರಫುಲ್ ಎಂಬ ಕಬಡ್ಡಿ ಆಟಗಾರನ ಎರಡೂವರೆ ಪವನಿನ ಚೈನ್ ಎಲ್ಲೋ ಬಿದ್ದೋಯ್ತು.ಚೈನ್ ಇಜ್ಜಿ, ಇಜ್ಜಿ ಇಜ್ಜಿಯೇ. ಅಷ್ಟರಲ್ಲಿ ಒಂದು ಗುಡ್ ನ್ಯೂಸ್. ಗುತ್ತಿಗಾರಿನಲ್ಲಿ ದೇವಿ ಸಿಟಿ ಅಂತ ದೊಡ್ಡ ಕಮರ್ಷಿಯಲ್ ಕಾಂಪ್ಲೆಕ್ಸ್ ಇದೆ. ಚಿಕ್ಮುಳಿ ದೇವಿದ್ದು ಕಾಂಪ್ಲೆಕ್ಸ್ ಅದು. ನಾಲ್ಕು ಮಹಡಿ ಮತ್ತು ಇನ್ನೂ ಮೇಲೆ ಹೋಗಲಿದೆ. ಸುಬ್ರಹ್ಮಣ್ಯ ಸುಳ್ಯ ಲೈನಿನ ದೊಡ್ಡ ಕಾಂಪ್ಲೆಕ್ಸ್ ಅದು. ಆ ಕಾಂಪ್ಲೆಕ್ಸ್ ಮಾಲೀಕ ದೇವಿ ತಂದೆ ಚಿಕ್ಮುಳಿ ದೊಡ್ಡಣ್ಣ ಗೌಡರಿಗೆ ಪ್ರಫುಲ್ ಚೈನ್ ಸಿಕ್ಕಿದೆ. ಸಿಕ್ಕಿದ್ದನ್ನು ಎತ್ತಿಕ್ಕೊಂಡ ದೊಡ್ಡಣ್ಣ ಗೌಡರು ಈ ಬಗ್ಗೆ ವಿಚಾರಿಸಿ, ಸಂಬಂಧ ಪಟ್ಟವರಿಗೆ ತಿಳಿಸಿ ಚೈನ್ ವಾರೀಸುದಾರರಿಗೆ ಪ್ರಾಮಾಣಿಕವಾಗಿ ಹಿಂತಿರುಗಿಸಿದ್ದಾರೆ.ದೊಡ್ಡಣ್ಣ ಗೌಡರ ಪ್ರಾಮಾಣಿಕತೆಯನ್ನು ಇಡೀ ಗುತ್ತಿಗಾರು ಹಾಡಿ ಹೊಗಳಿದೆ, ಕೊಂಡಾಡಿದೆ.
ಹಾಗೆಂದು ದೊಡ್ಡಣ್ಣ ಗೌಡರು ಕೇವಲ ಬಿದ್ದು ಸಿಕ್ಕಿದ ಬಂಗಾರ ವಾಪಾಸ್ ಕೊಟ್ಟು ದೊಡ್ಡವರಾದದ್ದಲ್ಲ. ಅವರು ದೇವಿಪ್ರಸಾದ್ ಎಂಬ ಬಂಗಾರದಂತ ಮಗನನ್ನೇ ಗುತ್ತಿಗಾರಿಗೆ ಕೊಟ್ಟು ದೊಡ್ಡವರಾಗಿಯೇ ಇದ್ದಾರೆ. ದೇವಿಪ್ರಸಾದ್ ಚಿಕ್ಮುಳಿ ಎಂಬ ಬಂಗಾರ್ ಕುಟ್ಟಿಯನ್ನು ಅವರು ಗುತ್ತಿಗಾರಿಗೆ ಕೊಟ್ಟ ಕಾರಣ ಗುತ್ತಿಗಾರಿನಲ್ಲಿ DEVI CITY ಎಂಬ ಬೃಹತ್ ಕಮರ್ಷಿಯಲ್ ಕಾಂಪ್ಲೆಕ್ಸ್ ಎದ್ದು ನಿಂತಿತು. ದೇವಿ ಸಿಟಿ ಗುತ್ತಿಗಾರಿನ ಮುಕುಟ ಮಣಿ. ದೊಡ್ಡಣ್ಣ ಗೌಡರು ಯಾವತ್ತೂ ದೊಡ್ಡವರೇ. ದೊಡ್ಡ ದೊಡ್ಡ ಕನಸುಗಳ ಹೆತ್ತವರು.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment