ಮನ್ ಮತ ಅಂದರೆ ಮನದಿಂದ ಮತ ಎಂದರ್ಥ. ಅಂದರೆ ಇಲ್ಲಿ ಯಾವುದೇ ಸದಸ್ಯ ತನ್ನ ಮನದಲ್ಲಿ ಯಾರು ಅಭ್ಯರ್ಥಿ ಇದ್ದಾರೋ ಅವರಿಗೆ ಮತ ಚಲಾಯಿಸಿ ತೃಪ್ತಿ ಪಡಬಹುದು. ಯಾಕೆಂದರೆ ಇಲ್ಲಿ ಯಾವುದೇ ಸದಸ್ಯನ ನೆಚ್ಚಿನ ಕ್ಯಾಂಡಿಡೇಟಿಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಸದಸ್ಯನಿಗೆ ಯಾವುದೇ ಮಂಡೆ ಬಿಸಿ ಇಲ್ಲ. ಯಾಕೆಂದರೆ ಅವನ ಕ್ಯಾಂಡಿಡೇಟಿಗೆ ಇನ್ನೊಂದು ಟೀಮಲ್ಲಿ ಟಿಕೆಟಿದೆ. ಹಾಗಾಗಿ ಅವನು ಮನದಿಂದ ಮತ ಹಾಕಬಹುದು. ಅದನ್ನೇ ಮನ್ ಮತ ಅಂತ ಶಾರ್ಟಾಗಿ ಹೇಳಬಹುದು. ಇದು ಐವರ್ನಾಡಿನ ಪರಮ ದೇಶಭಕ್ತರ ಕತೆ. ಕೇವಲ ಒಂದು ಸೊಸೈಟಿ ಓಟಿಗಾಗಿ ಬಿಜೆಪಿ ಗ್ರಾಮ ಸಮಿತಿಯನ್ನೇ ಒಡೆದು ಒಡೆದು ಹಾಕಿ ಕುರ್ಚಿ ಅಲಂಕರಿಸುವ ಹುನ್ನಾರ ಐವರ್ನಾಡಿನಲ್ಲಿ. ಸುಳ್ಯ ತಾಲೂಕು.
ಹಾಗೆಂದು ಸುಳ್ಯದ ಅಷ್ಟೂ ಪರಮ ಪರಬ್ಬ ದೇಶಭಕ್ತರಿಗೆ ಇನ್ನೂ ಅಧಿಕಾರದ ಚೀಪೆ ಹೋಗಿಲ್ಲ. ಜಿ.ಪಗಳಲ್ಲಿ ಎರಡೆರಡು ಸಲ ಮಂಗಳೂರಿಗೆ ಹೋದವು, ನಿಗಮ ಮಂಡಳಿಗಳಲ್ಲಿ ಕುರ್ಚಿ ಬಿಸಿ ಮಾಡಿದವು, ಡಿ.ಸಿ.ಸಿ ಬ್ಯಾಂಕಿನಲ್ಲಿ ರಾಶಿ ಹಾಕಿದವು, ಎರಡೆರಡು ಸಲ ಲೋಕಲ್ ಸೊಸೈಟಿಯಲ್ಲಿ ರೈಸಿದವು ಈಗ ಬೆಂಗಳೂರಿನಲ್ಲಿ ಅಥವಾ ಡೆಲ್ಲಿಯಲ್ಲಿ ಇರಬೇಕಿತ್ತು. ಆದರೆ ಅಂಥ ಜನ ಇಲ್ಲಿ ಐವರ್ನಾಡಿನಲ್ಲೇ ಇನ್ನೂ ಬಾಕಿಯಾಕಿದೆ. ವಿರಾಟ್ ಕೊಹ್ಲಿ ಐವರ್ನಾಡಿನ ಸ್ಕೂಲ್ ಟೀಮ್ ಜೊತೆ ಕ್ರಿಕೆಟ್ ಆಡಿದಂತೆ. ಅಲ್ಲ ಮಾರಾಯ್ರೆ ಅವರಿಗೆಲ್ಲ ಏಜ್ ಮುಕ್ಕಾಲು ಶತಮಾನದ ಹತ್ರ ಹತ್ರ ಇದೆ. ತನ್ನ ಯೋಗ್ಯತೆಗೆ, ಅರ್ಹತೆಗೆ ಅನುಗುಣವಾಗಿ ಸಿಕ್ಕಿದ ಎಲ್ಲಾ ಕುರ್ಚಿಗಳನ್ನು ಅಲಂಕರಿಸಿ ಆಗಿದೆ. ಈಗ ಪುನಃ ಸ್ಟೂಲಲ್ಲಿ ಕೂರುತ್ತೇನೆ ಟಿಕೆಟ್ ಕೊಡಿ ಅಂದ್ರೆ? ಇವರ ಕುರ್ಚಿಗಳಿಗಾಗಿ ದುಡಿದ, ಬ್ಯಾನರ್ ಅಂಟಿಸಿದ,ಜೈ ಶ್ರೀರಾಮ್ ಅಂದ,ಭಾರತ್ ಮಾತಾ ಕೀ ಜೈ ಅಂದ ಹುಡುಗ್ರಿಗೆ ಕುತ್ತಿ ಮೀಸೆ ಬಂದು, ಇಡೀ ಮೀಸೆ ಬಂದು, ಶಿವಾಜಿ ಗಡ್ಡ ಇಟ್ಟು, ಮದುವೆಯಾಗಿ, ಮಕ್ಕಳಾಗಿ, ಸೂಸು ಮಂದ ಆಗುವ ಟೈಮಾದರೂ ಈ ನಾಯಕರಿಗೆ ಇನ್ನೂ ನುರ್ಕು ನಿಂತಿಲ್ಲ. ಕುರ್ಚಿಗಾಗಿ ಪಕ್ಷ ಒಡೆಯುವುದು, ಗ್ರಾಮ ಒಡೆಯುವುದು, ಮನಸ್ಸುಗಳನ್ನು ಒಡೆಯುವುದು, ಕುರ್ಚಿ ಸಿಗದಿದ್ದರೆ ವಾಪಾಸ್ ಪಕ್ಷದ ನಿಷ್ಠಾವಂತ ನಾಯಕನಂತೆ ವರ್ತಿಸುವುದು ಸುಳ್ಯದ ಕೆಲವು ದೇಶಭಕ್ತ ತಾತಗಳ ಹುಟ್ಟು ಗುಣ. ಒಬ್ಬ ಕಂಜಿಪಿಲಿಯನ್ನು ಬಿಟ್ಟರೆ, ಒಬ್ಬ ದಂಬೆಕೋಡಿಯನ್ನು ಬಿಟ್ಟರೆ ನೋಡುವ ಪುತ್ತೂರಿಗೆ ಎಂಎಲ್ಎ ಕ್ಯಾಂಡಿಡೇಟಿಗೆ ಒಂದು ಪ್ರೋಡಕ್ಟ್ ಆದರೂ ಸುಳ್ಯದಲ್ಲಿ ರೆಡಿಯಾಗಿದಾ? ರೆಡಿ ಮಾಡಿದ್ದಾರ? ಇದಕ್ಕೆ ಕಾರಣ ಪರಬ್ಬರ ಅಧಿಕಾರದ ಆಸೆ. ಸಾಯುವ ತನಕದ ಕುರ್ಚಿಯ ಆಸೆ ಮತ್ತು ಕುರ್ಚಿಯಲ್ಲೇ ಢಂ ಆದರೆ ಉತ್ತಮ ಎಂಬ ಆಸೆ. ಬಿಜೆಪಿಯ ಭದ್ರಕೋಟೆ ಸುಳ್ಯ ಅಂತ ಹೇಳಲಾಗುತ್ತಿದೆ. ಆದರೆ ಕೋಟೆಯೋಳಗೆ ಇರೋದು ಯಾರು? ಉತ್ತರ ಕುಮಾರನಿಗೆ ಯುದ್ಧ ಮಾಡಲು ಬರಲ್ಲ, ಧೃತರಾಷ್ಟ್ರನಿಗೆ ಕಣ್ಣು ಕಾಣಲ್ಲ, ನಕುಲ ಸಹದೇವ. ಅರ್ಜುನ ಮನೆಯಲ್ಲಿ ತೋಟಕ್ಕೆ ಮದ್ದು ಬಿಡುತ್ತಿದ್ದಾನೆ ಎಲೆಚುಕ್ಕಿ ರೋಗಕ್ಕೆ.
ಹಾಗೆಂದು ಐವರ್ನಾಡು ದೇಶಭಕ್ತರ ಭದ್ರ ಕೋಟೆ. ಐವರ್ನಾಡು ಸುಳ್ಯಕ್ಕೆ ನಂಬರ್ ವನ್ ಲೀಡರ್ ಗಳನ್ನ ಕೊಟ್ಟಿದೆ. ಆದರೆ ಇವರೆಲ್ಲ ಇನ್ನೂ ಐವರ್ನಾಡಿನಲ್ಲೇ ಏನು ಮಾಡೋದು? ಹೊಸ ನೀರು ಯಾವಾಗ ಹರಿಯೋದು? ಐವರ್ನಾಡು ಸೊಸೈಟಿ ಚುನಾವಣೆ ಅಂದರೆ ಎಂಥ ಮಹಾರಾಷ್ಟ್ರ ವಿಧಾನಸಭೆ ಚುನಾವಣೆವಣೆಯಾ? ಐವರ್ನಾಡಿನಲ್ಲಿ ಯಾಕೆ ಏಕನಾಥ್ ಶಿಂಧೆ? ದಶಕಗಳಿಂದ ಐವರ್ನಾಡು ಸೊಸೈಟಿಯನ್ನು ಮೆಟ್ಟಿಲು ಮಾಡಿಕೊಂಡು ಹತ್ತಿ ಏರಿ ಮೇಲೆ ಹೋದ ಮೇಲೆ ಪುನಃ ಯಾಕೆ ಅದೇ ಮೆಟ್ಟಿಲಲ್ಲಿ ಇಳಿಯೋದು?
ಇದೀಗ ಐವರ್ನಾಡು ಸೊಸೈಟಿಗೆ ಎಲೆಕ್ಷನ್. ಹಾಗೆಂದು ಸೊಸೈಟಿಗೆ ಓಟಿಗೆ ನಿಂತು, ಗೆದ್ದು ಸೊಸೈಟಿ ನಿರ್ದೇಶಕರಾದರೆ ಸಿಗೋದು ಮಹಾಸಭೆಯ ಪಾಯಿಸದೂಟ ಮತ್ತು ಮೀಟಿಂಗ್ ಬೈ ಮೀಟಿಂಗ್ ಟೀ ಮತ್ತು ಬಿಸ್ಕತ್ತು. ಅದಕ್ಕೆ ಒಂದು ರಾಷ್ಟ್ರೀಯ ಪಕ್ಷವನ್ನು ಒಡೆಯ ಬೇಕಾ? ಒಡೆದಿದ್ದು ಯಾರು? ಪಕ್ಷದ ಜಿಲ್ಲಾ ಮಟ್ಟದ ನಾಯಕರು. ಇದೀಗ ಐವರ್ನಾಡಿನಲ್ಲಿ ಬಿಜೆಪಿ ಒಡೆದು ಎರಡು ಭಾಗಗಳಾಗಿದ್ದು ಸೊಸೈಟಿ ಓಟಿಗೆ ಪ್ರತ್ಯೇಕ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಕೆ ಮಾಡಿ ಯುದ್ಧ ಪೋಷಣೆ ಮಾಡಿದೆ. ಸದ್ಯಕ್ಕೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿ, ರೆಬೆಲ್ ಗಳು ಮತ್ತು ಕಾಂಗ್ರೇಸಿಗರು ಕಣದಲ್ಲಿದ್ದಾರೆ. ಮನ್ ಮತಕ್ಕೆ ತೊಂದರೆ ಇಲ್ಲ. ಯಾರಿಗೂ ಓಟ್ ಮಾಡಬಹುದು.
ಐವರ್ನಾಡು ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಗ್ರಾಮ ಸಮಿತಿಯ ನೇತೃತ್ವದ ತಂಡ ಮತ್ತು ಬಿಜೆಪಿ ನಾಯಕ ಎಸ್.ಎನ್.ಮನ್ಮಥರ ನೇತೃತ್ವದ ತಂಡ ಪರಸ್ಪರ ಎದುರಾಳಿಗಳಾಗಿ ಸೆಣಸಾಡಲು ನಿರ್ಧರಿಸಿರುವುದರಿಂದ ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ ಗ್ರಾಮದಲ್ಲಿ ಮತ್ತೊಮ್ಮೆ ಬಿ.ಜೆ.ಪಿ. ಇಬ್ಭಾಗಗೊಂಡಿದೆ.
ಸೊಸೈಟಿಯ ಹಾಲಿ ಅಧ್ಯಕ್ಷ ಎಸ್.ಎನ್.ಮನ್ಮಥರ ನೇತೃತ್ವದಲ್ಲಿ ಎಸ್.ಎನ್ .ಮನ್ಮಥ, ಸತೀಶ್ ಎಡಮಲೆ, ಮಹೇಶ್ ಜಬಳೆ, ಅನಂತಕುಮಾರ್ ಖಂಡಿಗೆಮೂಲೆ, ನಟರಾಜ ಸಿ ಕೂಪ್, ಮಧುಕರ ನಿಡುಬೆ, ರವಿನಾಥ ಮಡ್ತಿಲ, ಗೋಪಾಲಕೃಷ್ಣ ಚೆಮ್ನೂರು, ಚಂದ್ರಶೇಖರ, ಭವಾನಿ ಮಡ್ತಿಲ, ದಿವ್ಯಾ ರಮೇಶ್, ಪುರಂದರ ಕಣದಲ್ಲಿದ್ದಾರೆ.
ಬಿಜೆಪಿ ಗ್ರಾಮ ಸಮಿತಿ ಅಭ್ಯರ್ಥಿಗಳಾಗಿ ಶ್ರೀನಿವಾಸ ಮಡ್ತಿಲ, ಕಿಶನ್ ಜಬಳೆ, ಅಜಿತ್ ಐವರ್ನಾಡು, ದೇವದಾಸ್ ಕತ್ಲಡ್ಕ, ಗಣೇಶ್ ಕೊಚ್ಚಿ, ಅನಿಲ್ ದೇರಾಜೆ, ಪ್ರದೀಪ್ ಪಾಲೆಪ್ಪಾಡಿ, ನವೀನ್ ಸಾರಕರೆ, ಪ್ರವೀಣ್ ಕುಮಾರ್, ಮಾಯಿಲಪ್ಪ, ಲೀಲಾವತಿ ಸಿ.ಎಸ್, ರಾಜೀವಿ ಪರ್ಲಿಕಜೆ ಇವರು ಕಣದಲ್ಲಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ರಾಜೇಶ್ ಎಂ.ಜಿ, ಸತೀಶ್ ಕತ್ಲಡ್ಕ, ಪ್ರಮೋದ್ ಆರಿಕಲ್ಲು, ಆಶಾ ಎಂ.ಎಸ್., ದೇವಿ ಕುಮಾರಿ, ಚಂದ್ರಕುಮಾರೇಶನ್,ಕೇಶವ ನಾಯ್ಕ ಉದ್ದಂಪಾಡಿ, ಮಂಜುನಾಥ ಮಡ್ತಿಲ, ಕಣ್ಣ ಪಾಟಾಳಿ, ಕರುಣಾಕರ ಮಡ್ತಿಲ ಮತ್ತು ಅಶ್ವಥ್ ಕುಮಾರ್ ಕಣದಲ್ಲಿದ್ದಾರೆ.
....................................................................
ಪುತ್ತೂರಿನಲ್ಲಿ ದೇವಿ ಮಹಾತ್ಮೆ ಯಕ್ಷಗಾನ
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment