ಅವನ ಮೇಲೆ ಎಫ್ಐಆರ್ ದಾಖಲಿಸು, ಕಾನೂನು ಕ್ರಮ ತೆಗೆದುಕೋ ಎಂದು ಕೋರ್ಟ್ ಹೇಳಿದರೂ, ಆದೇಶ ಪತ್ರ ಕೊಟ್ಟರೂ ಕಡಬ ಪೋಲಿಸರು ಮಾತ್ರ ಉತ್ತರಾಯಣ ಬರಲಿ, ದಕ್ಷಿಣಾಯನ ಹೋಗಲಿ ಎಂದು ಯಾಕೆ ಬಾಲ್ ವೇಸ್ಟ್ ಮಾಡುತ್ತಿದ್ದಾರೆ ಎಂದೇ ಗೊತ್ತಾಗುತ್ತಿಲ್ಲ. ಇದು ಕಡಬ ಕುಟ್ರುಪಾಡಿ ಗ್ರಾಮದ ಕತೆ. ಇಲ್ಲಿ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ನಿರಂತರ ದೌರ್ಜನ್ಯ ನಡೆದರೂ ಕೇಳುವವರೇ ಇಲ್ಲ. ಕೆಬಿ ಬಂದ್!
ಇದೆಲ್ಲ ಶುರುವಾಗಿದ್ದು ಕೊರೋನ 2020 ಸಮಯದಲ್ಲಿ. ಆವತ್ತು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಆಶಾ ಕಾರ್ಯಕರ್ತೆಯಾಗಿದ್ದ ರಾಜೀವಿ ಎಂಬವರ ಮೇಲೆ ಜಿನ್ನಣ್ಣ- ಜನ್ನಣ್ಣ ಗ್ಯಾಂಗಿನಿಂದ ಗಂಭೀರ ಹಲ್ಲೆ ನಡೆದಿತ್ತು. ಜಿನ್ನಣ್ಣನಿಗೆ ಕೊರೋನಾ ಪಾಸಿಟಿವ್ ಬಂದಿದ್ದ ಕಾರಣ ತಾಲೂಕು ಆರೋಗ್ಯ ಕೇಂದ್ರದಿಂದ ಆಶಾ ಕಾರ್ಯಕರ್ತೆ ರಾಜೀವಿ ಅವರಿಗೆ ತಕ್ಷಣದಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ಬಂದಿತ್ತು. ರಾಜೀವಿಯವರು ಈ ಬಗ್ಗೆ ಗ್ರಾಮದಲ್ಲಿ ಕೆಲವರಿಗೆ ಮಾಹಿತಿ ನೀಡಿದರು ಎಂಬ ಏಕೈಕ ಕಾರಣಕ್ಕೆ ತಗಡ್ ಬೆಚ್ಚ ಮಾಡಿಕೊಂಡ ಜಿನ್ನಣ್ಣ- ಜನ್ನಣ್ಣ ಟೀಮ್ ಆಶಾ ಕಾರ್ಯಕರ್ತೆ ರಾಜೀವಿ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿತ್ತು ಮತ್ತು ಮೈಪುಸೂಡಿಯಲ್ಲಿ ಕೂಡ ಬಡಿದಿತ್ತು. ಆಮೇಲೆ ಈ ಬಗ್ಗೆ ಪೋಲಿಸ್ ಕಂಪ್ಲೈಂಟ್ ಆಗಿ, ಎಫ್ಐಆರ್ ಆಗಿ ಕೋರ್ಟ್ ಕೇಸ್ ಕೂಡ ಆಗಿತ್ತು. ಕೋರ್ಟಲ್ಲಿ ಅದೇನು ವಾದ ನಡೆಯಿತೋ ರಾಜೀವಿಯಕ್ಕಳಿಗೆ ಗೊತ್ತೇ ಆಗಲಿಲ್ಲ. ಒಮ್ಮೆ ಬಂದು ಹೋಗು ಎಂದು ಬಂದ ಸಮನ್ಸ್ ಬಿಟ್ಟರೆ ಕೇಸ್ ಪುಸ್ಕ ಆಗಿದ್ದು ಗೊತ್ತಾದದ್ದು ಆಮೇಲೆಯೇ. "ನಾನು ಕೊರೋನಾ ವಾರಿಯರ್, ನನ್ನ ಮೇಲೆ ಗಂಭೀರವಾಗಿ ಹಲ್ಲೆ ಆಗಿದೆ, ಕೊರೋನಾ ಸಮಯದಲ್ಲಿ ಜೀವದ ಹಂಗು ತೊರೆದು ಸರ್ಕಾರದ ಜೊತೆ ಕೆಲಸ ಮಾಡಿದ ನನಗೆ ನ್ಯಾಯ ಇಲ್ವಾ" ಎಂದು ಕೇಳಿದರೆ, ಸಂಬಂಧ ಪಟ್ಟವರು "ಅದೆಲ್ಲ ನೀವು ಕೇಳುವ ಹಾಗಿಲ್ಲ" ಅಂದಿದ್ದರಂತೆ. ರಾಜೀವಿಯಕ್ಕ ಸೈಲೆಂಟಾಗಿ ಸೈಡಿಗೆ ಹೋಗಿಬಿಟ್ಟರು.
ಹಾಗೆ ಆವತ್ತು ಶುರುವಾದ ಗಲಾಟೆ, ಪೆಟ್ಟುಗುಟ್ಟು ಇನ್ನೂ ನಿಂತಿಲ್ಲ.ಕಳೆದ ಜನವರಿಯಲ್ಲಿ ಎರಡನೇ ಪಾಣಿಪತ್ ನಡೆದಿತ್ತು ಮತ್ತು ಕದನ ವಿರಾಮ ಘೋಷಣೆಯಾಗಿತ್ತು. ಮೊನ್ನೆ ಪರ್ಬ ಸಮಯದಲ್ಲಿ ಮೂರನೇ ಪಾಣಿಪತ್. ಆವತ್ತು ಬಂದಿದ್ದು ಜಿನ್ನಣ್ಣ ಟೀಮಿನ B ಟೀಂ. ಸುನಿಲ್ ಅಂತ. ರಂಬಾರೋಟಿ ಮಾಡಿ ಹಾಕಿದ್ದಾನೆ. ಆಶಾ ಕಾರ್ಯಕರ್ತೆಯವರ ಮನೆಗೆ ನುಗ್ಗಿ ಕಿಟಕಿ ಬಾಗಿಲು ಮುರಿದು, ಫರ್ನಿಚರ್ ಡ್ಯಾಮೇಜ್ ಮಾಡಿ, ಕಿಟಕಿ ಗ್ಲಾಸ್ ಗಳನ್ನು ಪುಡಿ ಪುಡಿ ಪುಡಿ ಮಾಡಿ, ಕಾರ್ಯಕರ್ತೆಯವರ ಎದೆ ಭಾಗಕ್ಕೆ ಹೊಡೆದು, ದೆಪ್ಪೆ ದೀಪೆ ಹೇಳಿ, ಮದವೇರಿದ ಆನೆಯಂತೆ, ಹುಚ್ಚು ಹಿಡಿದ ನಾಯಿಯಂತೆ, ತೆಲುಗು ಸಿನಿಮಾಗಳ ಪ್ರಕಾಶ್ ರೈಯಂತೆ ವರ್ತಿಸಿ, ಆಶಾ ಕಾರ್ಯಕರ್ತೆ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾನೆ. ಆಯ್ತಪ್ಪಾ ಆಯ್ತು ನೀನೇ ದೊಡ್ಡವನು, ನಿನ್ನದೇ ದೊಡ್ಡದು ಎಂದು ರಾಜೀವಿ ಯಕ್ಕೆ ಜೀವಭಯದಿಂದ ಓಡಿ ಹೋಗಿ ಕಡಬ ಪೋಲಿಸರಿಗೆ ಕಂಪ್ಲೈಂಟ್ ಮಾಡಿದರೆ ಪೋಲಿಸರು ಎರಡೂವರೆ ಸಲ ಆಕಳಿಸಿ ಒಂದು ಅಂಡಿಗುಂಡಿ ಸೆಕ್ಷನ್ ಹಾಕಿ ರಾಜೀವಿಯಕ್ಕನಿಗೆ ಒಂದು ಹಿಂಬರಹ ಕೊಟ್ಟು ಕೈಕಾಲು ತೊಳೆದುಕೊಂಡಿದ್ದಾರೆ. ಕಡಬ ಪೋಲಿಸರು ಆ ಸೈಲೆಂಟ್ ಸುನಿಲನ ಮೇಲೆ ಯಾವ ಸೆಕ್ಷನ್ ಹಾಕಿ ಇವರಿಗೆ ಹಿಂಬರಹ ಕೊಟ್ಟಿದ್ದಾರೆಂದರೆ ಈ ರಾಜೀವಿಯಕ್ಕ ಸುನಿಲನ ಮೇಲೆ ಎಫ್ಐಆರ್ ದಾಖಲು ಮಾಡಿಸಲೂ ಕೋರ್ಟಿಂದ ಪರ್ಮಿಶನ್ ತೆಗೆದ ನಂತರವಷ್ಟೇ ಕಡಬ ಪೋಲಿಸರು ಇವನ ಮೇಲೆ ಎಫ್ಐಆರ್ ದಾಖಲು ಮಾಡುವಂತಹ ಸೆಕ್ಷನ್. ಅಲ್ಲ ಮಾರಾಯ್ರೆ ಆರೋಪಿ ದೂರುದಾರಳ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾನೆ, ಕೊಲೆ ಬೆದರಿಕೆ ಹಾಕಿದ್ದಾನೆ, ಮನೆಯ ಕಿಟಕಿ ಬಾಗಿಲುಗಳನ್ನು ಲಗಾಡಿ ತೆಗೆದಿದ್ದಾನೆ, ಮನೆಯ ಸೊತ್ತುಗಳಿಗೆ ಹಾನಿ ಮಾಡಿದ್ದಾನೆ, ನಾನ್ ವೆಜ್ಜಲ್ಲಿ ಬಾಯ್ತುಂಬಾ ಬೈದಿದ್ದಾನೆ, ಸಾಲದು ಎಂಬಂತೆ ದೂರುದಾರ ಮಹಿಳೆಯ ಎದೆಗೆ ಹೊಡೆದಿದ್ದಾನೆ. ಇಷ್ಟು ಮಾಡಿದವನನ್ನು ಎಳಕ್ಕೊಂಡು ತಂದು ಮಂಡಲದಲ್ಲಿ ಕೂರಿಸಿ ಭೂತ ಬಿಡಿಸುವುದು ಬಿಟ್ಟು ಕಡಬ ಪೊಲೀಸರು ಮಾಡಿದ್ದೇನು.ಆಯಮ್ಮ ಪುನಃ ಕೋರ್ಟು ಕಚೇರಿ ಅಂತ ಅಲೆದಾಡುವಂತೆ ಮಾಡಿದ್ದು.
ಬಿಡ್ಲಿಲ್ಲ ರಾಜೀವಿಯಕ್ಕೆ. ಕೋರ್ಟ್ ಬಾಗಿಲು ಬಡಿದು ಸೈಲೆಂಟ್ ಸುನಿಲನ ಜಾತಕ ಬರೆಸಿಕೊಂಡು ಬಂದರು. ಕೋರ್ಟ್ ಸೈಲೆಂಟ್ ಸುನಿಲನ ಮೇಲೆ ಎಫ್ಐಆರ್ ದಾಖಲಿಸಲು ಕಡಬ ಪೋಲಿಸರಿಗೆ ಆದೇಶ ಹೊರಡಿಸಿತು. ಪೋಲಿಸರು ಪುನಃ ಆಕಳಿಸಿ ಬಿಟ್ಟರು.
ಅದೂ... ಒಂದು ಎರಡ್ಮೂರು ಸಾಕ್ಷಿ ಬೇಕು, ಸ್ಥಳ ಮಹಜರು ಸಾಕ್ಷಿಗಳು ಇದ್ದು ಆಗಬೇಕು, ಮಾಡುವ, ನೋಡುವ, ಮಾತಾಡುವ, ಯೋಚಿಸುವ, ಚರ್ಚಿಸುವ ಎಂದು ಪೋಲಿಸರು ಉತ್ತರಾಯಣಕ್ಕೆ ಕಾಯುವವರಂತೆ ವರ್ತಿಸ ತೊಡಗಿದರು. ಕಡೆಗೆ ಮಾತಾಡಿ ಮಾತಾಡಿ ಈಗ ಎಫ್ಐಆರ್ ಆಗಿದೆ ಎಂದು ಸುದ್ದಿ. ಅಲ್ಲ ಮಾರಾಯ್ರೆ ಪೋಲಿಸ್ತಕುಲೇ ಹೀಗೆ ಮಾಡಿದರೆ ಮುಂದೆ ನಮ್ಮ ಗತಿಯೇನು? ಒಬ್ಬ ಆಶಾ ಕಾರ್ಯಕರ್ತೆ ಮೇಲೆ ವಿನಾಕಾರಣ ಹಲ್ಲೆ, ದೌರ್ಜನ್ಯ ನಡೆಯುತ್ತಿದ್ದರೂ, ಆಕೆ ನ್ಯಾಯಕ್ಕಾಗಿ ಕಾಡಿ ಬೇಡುತ್ತಿದ್ದರೂ ಆಕೆಗೊಂದು ನ್ಯಾಯ ಕೊಡಲಾಗಿಲ್ಲವೆಂದರೆ ಈ ವ್ಯವಸ್ಥೆ ಯಾಕೆ? ವ್ಯವಸ್ಥೆಯಲ್ಲಿ ಯಾಕೆ ಅವ್ಯವಸ್ಥೆ ಎಂದೇ ಅರ್ಥ ಆಗುತ್ತಿಲ್ಲ.
..............................................
ಸುಬ್ರಹ್ಮಣ್ಯ ಪೋಲಿಸರಿಗೆ; ಅಲ್ಲಿ ಹರಿಹರ ಸಮೀಪದ ಕಲ್ಲೇರಿ ಕಟ್ಟದಿಂದ ಟಿಪ್ಪರ್ ಗಟ್ಟಲೆ, ರಾತ್ರಿ, ಹಗಲು ಪೊಯ್ಯೆ ಸಾಗಾಟ ಮಾಡಲಾಗುತ್ತಿದೆ. ಪೊಯ್ಯೆ ತೆಗೆಯಲು ಸನ್ಮಾನ್ಯರು ಪರ್ಮಿಟ್ ಏನಾದರೂ ಮಾಡಿಸಿದ್ದಾರ ಎಂದು ಒಮ್ಮೆ ಟಿಪ್ಪರ್ ನಿಲ್ಲಿಸಿ ಕೇಳುವುದು ಒಳ್ಳೆಯದು. ಇಲ್ಲದಿದ್ದರೆ ದೊಡ್ಡ ಟೊಪ್ಪಿಯ ಪೋಲಿಸರಿಗೆ ಗೊತ್ತಾದರೆ ಮ್ಯಾಟರು ಸೀರಿಯಸ್ ಆಗುವ ಅಪಾಯಗಳಿವೆ.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment