ಇನ್ನು ದರ್ಶನ್ ಒಂದು ಬಂದರೆ ಆಯ್ತು ಸಿನಿಮಾದ ಫೈನಲ್ ಡಿಶುಂ ಡಿಶುಂ ಮಾಡಿ ಮುಗಿಸಿ ಬಿಡಬಹುದು. ಈಗಾಗಲೇ ಶೋಭರಾಜ್, ಪ್ರಕಾಶ್ ರೈ ಎಲ್ಲಾ ಡಿಶುಂ ಡಿಶುಂ ಶುರುವಿಟ್ಟುಕ್ಕೊಂಡಿದ್ದಾರೆ. ಇದು ಗುತ್ತಿಗಾರು ಶಾಲೆಯ ಮಾಸ್ತರಗಳ ಕತೆ. ಕೋಲ್ಡ್ ವಾರ್, ಡಿಶುಂ ಡಿಶುಂ, ದೆಪ್ಪೆದೀಪೆ ಎಲ್ಲಾವೂ ಇಲ್ಲಿದೆ.
ಅಲ್ಲಿ ಗುತ್ತಿಗಾರು ಪಿಎಂ ಶ್ರೀ ಶಾಲೆಯಲ್ಲಿ ಮಾಸ್ತರ್ ಗಳ ನಡುವಿನ ಕೋಲ್ಡ್ ವಾರ್ ಮೊನ್ನೆ ತಾರಕಕ್ಕೇರಿದ್ದು ಜೋಕುಲುಗಳ ಎದುರಲ್ಲೇ ಸರ್ ಮತ್ತು ಹೆಡ್ಡೀಚರ್ ಇಂಗ್ಲೀಷ್ ಸಂಸ್ಕೃತ ಭಾಷೆಗಳಲ್ಲಿ ಬೈದಾಡಿ ಕೊಂಡಿದ್ದಾರೆ. ಈ ಸೈಲೆನ್ಸರ್ ಇಲ್ಲದ ಜಗಳಕ್ಕೆ ಮಕ್ಕಳು ಹೆದರಿಕೊಂಡು ಸೀದಾ ಮನೆಗೆ ಹೋಗಿ ತಿಂಡಿ ತಿನ್ನುವ ಮೊದಲೇ ವಿಷಯ ಪೋಷಕರಿಗೆ ತಿಳಿಸಿದ ಕಾರಣ ಪ್ರಕರಣ ಕ್ಷೇತ್ರ ಶಿಕ್ಷಣಾಧಿಕಾರಿ ಟೇಬಲ್ಲಿಗೆ ಮುಟ್ಟಿ ಅವರು ಡಿಶುಂ ಡಿಶುಂ ಬಗ್ಗೆ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದ್ದು ಕದನ ವಿರಾಮ ಏರ್ಪಡಿಸಲಾಗಿದೆ. ಒಂದು ಶಾಲೆಯಲ್ಲಿ ಅದರಲ್ಲೂ ಪುಟಾಣಿ ಮಕ್ಕಳ ಮುಂದೆ ಜಗಳ ಮಾಡಿಕೊಳ್ಳುವ ಶಿಕ್ಷಕರೂ ಇದ್ದಾರೆಂದರೆ ಅವರು ಯಾವ ಸೀಮೆ ಶಿಕ್ಷಕರು ಮಾರಾಯ್ರೆ.
ಹಾಗೆಂದು ಈ ಶಾಲೆಯ ಕೋಲ್ಡ್ ವಾರಿಗೆ ಮೂಲ ಕಾರಣ ಆಗುತ್ತಿರುವುದು ಒಬ್ಬ ಮಾಜಿ ಆಟದ ಮಾಸ್ತರ. ಸದ್ರಿ ಆಟದ ಮಾಸ್ತರ ಇದೇ ಶಾಲೆಯಲ್ಲಿ ಆಟಕ್ಕೆ ಮಾಸ್ತರ ಆಗಿದ್ದು ಎರಡು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದ. ಆದರೆ ನಿವೃತ್ತಿ ಹೊಂದಿದ ನಂತರವೂ ಆಟದ ಮಾಸ್ತರ ಎಲೆ ಚುಕ್ಕಿ ರೋಗಕ್ಕೆ ಮದ್ದು ಬಿಡುತ್ತಾ ಮನೆಯಲ್ಲಿಯೇ ಇರುವುದು ಬಿಟ್ಟು ದಿನಾ ಬೆಳಿಗ್ಗೆ ಶಾಲೆಗೆ ಬಂದು ಸಂಜೆಗೆ ಮನೆಗೆ ಹೋಗುವುದು ರೂಢಿಯಾಗಿತ್ತು. ಹಾಗೆ ಕೆಲಸವಿಲ್ಲದ ಬಡಗಿ ಮಗುವಿನ ಕುಂಡೆ ಕೆತ್ತಿದ ಎಂಬಂತೆ ಆಟದ ಮಾಸ್ತರ ದಿನಾ ಶಾಲೆಯಲ್ಲಿ ಕುಂತು ಕುಂತು ಪಠ್ಯೇತರ ಚಟುವಟಿಕೆಗಳಲ್ಲಿ ಕೈಯಾಡಿಸ ತೊಡಗಿದ. ಹಾಗೆ ಶಾಲೆಯಲ್ಲಿ ಮಾಸ್ತರಗಳ ನಡುವೆ ಫಿಟ್ಟಿಂಗ್ ಇಟ್ಟ ಕಾರಣ ಈಗ ಗುತ್ತಿಗಾರು ಶಾಲೆಯಲ್ಲಿ ಸೂರ್ಯಂಗು ಚಂದ್ರಂಗು ಮುರಿದೋಗಿದೆ ಮನಸು.

ಹಾಗೆಂದು ಮೊನ್ನೆ ನಡೆದ ಕಬಡ್ಡಿಯಲ್ಲಿ ಕಲೆಕ್ಷನ್ ಆದ ದುಡ್ಡಿನ ಲೆಕ್ಕ ಇನ್ನೂ ಬಂದಿಲ್ಲ. ಕೆಲವು ಚೀಟಿಗಳು ಗಾಳಿಗೆ ಹಾರಿಹೋಗಿವೆ, ಮತ್ತೆ ಕೆಲವು ಚೀಟಿಗಳನ್ನು ಪೆತ್ತ ತಿಂದಿದೆ ಎಂಬ ಮಾಹಿತಿ ಇದೆ. ಕಬಡ್ಡಿ ಏನೋ ಗೌಜಿ ಯಲ್ಲಿ ಮುಗಿದಿದೆ ಮತ್ತು ಕಲೆಕ್ಷನ್ ಕೂಡ ಗೌಜಿಯಲ್ಲೇ ಮಾಡಲಾಗಿದೆ. ಆದರೆ ಲೆಕ್ಕಾಚಾರ ಇನ್ನೂ ಆಗಿಲ್ಲ. ಕಬಡ್ಡಿ ದುಡ್ಡು ಲಬಡ್ಡಿ ಹಾಕುವ ಅಪಾಯಗಳಿವೆ. ಇನ್ನು ಶಾಲೆಯಿಂದ ಆ ನಿವೃತ್ತ ಆಟದ ಮಾಸ್ತರನಿಗೆ ಗೇಟ್ ಪಾಸ್ ಕೊಡಲೇ ಬೇಕಾಗಿದೆ ಇಲ್ಲದಿದ್ದರೆ ಶಾಲೆಯ ಶಾಂತಿ ನೆಮ್ಮದಿ ಇನ್ನೂ ಹದಗೆಡುವ ಅಪಾಯಗಳಿವೆ. ಎರಡು ವರ್ಷದಿಂದ ಶಾಲೆಗೆ ಮಾಟ ಆಗಿರುವ ಈ ಆಟದ ಮಾಸ್ತರ ಕೂಡಲೇ ಮನೆಗೆ ಹೋಗಬೇಕು ಮತ್ತು ಎಲೆ ಚುಕ್ಕಿ, ಹಳದಿ ಸೀಕಿನ ಬಗ್ಗೆ ಅಧ್ಯಯನ ಮಾಡಿದರೆ ಊರಿಗೆ ಉಪಕಾರ.ಅದು ಬಿಟ್ಟು ಶಾಲೆಯಲ್ಲಿ ಕಲೆಂಗ್ ಹೊಡೆಯೋದು ಬ್ಯಾಡ.ಅದು ಯಾರು ಮಾರಾಯ್ರೆ ಶಾಲೆಗೆ ಟೈಟಾಗಿ ಬರುವುದು? ಟೈಟಾಗಿ ಬಂದರೆ ಪಾಠದ ಗತಿ ಏನು? ಪಾಠ ಎಲ್ಲಿಂದ ಎಲ್ಲಿಗೋ ಹೋಗಿ ಗಡಂಗಿಗೆ ಹೋದರೆ?
....................................................................
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment