ಓ ಮೊನ್ನೆಯಿಂದ ಕಡಬ ಪೋಲಿಸರು ಕಾದು ಕುಳಿತಿದ್ದರು ಬಕಪಕ್ಷಿಯಂತೆ. ಕಡಬ ತುಂಬಾ ಶಥಪತ ಹಾಕಿದ್ದರು, ಉಗುರು ಕಚ್ಚಿದ್ದರು. ಒಮ್ಮೆ ಗಣೇಶ ಸಿಕ್ಕಿದರೆ ವಿಸರ್ಜನೆ ಮಾಡಬಹುದಿತ್ತು ಎಂದು ಠಾಣೆಯಲ್ಲೇ ಕುಂತು ಮಂಡಿಗೆ ತಿಂದಿದ್ದರು. ನಿನ್ನೆ ಕಾಲ ಕೂಡಿ ಬಂತು. ಕ್ರೋಧಿ ನಾಮ ಸಂವತ್ಸರದ ಶಿಶಿರ ಋತು ದಿನಾಂಕ 4 ತಾರೀಕು, ಭರಣಿ ನಕ್ಷತ್ರ, ಮಂಗಳವಾರ ರಾತ್ರಿ ರಾಹುಕಾಲ ದಲ್ಲಿ ಗಣೇಶ ಸಿಕ್ಕಿ ಬಿಟ್ಟ. ಚೌತಿಗೆ ಕೊಂಡುಹೋದ ಹಾಗೆ ಠಾಣೆಗೆ ಕೊಂಡೋಗಿ ಅಲ್ಲಿ ಅಪರಾತ್ರಿ ತನಕ ಕೂರಿಸಿ ನಂತರ ಅವರೇ ವಿಪರೀತ ಹೆದರಿಕೊಂಡು, ಏನಾದರೂ ಆದೀತು ಎಂದು ಗಣೇಶನನ್ನು ಪೊಟ್ಟು ಸೆಕ್ಷನ್ ಗಳನ್ನು ಹಾಕಿ ಬಿಟ್ಟು ಕಳಿಸಿದ್ದಾರೆ.
ಹಾಗೆಂದು ಮೊನ್ನೆಯ ಗಣೇಶನ ಗಲಾಟೆ ಎಲ್ಲರಿಗೂ ಗೊತ್ತು. ಕಡಬದ ಪೇಟೆಯಲ್ಲಿ ಟಿಪ್ಪರ್ ಗಳು ಟಾರ್ಪಲ್ ಹಾಕದೆ ಮಣ್ಣು ಸಾಗಿಸಿದ್ದು, ಗಣೇಶ್ ಸಮೇತ ಎಲ್ಲಾ ಪತ್ರಕರ್ತರು ಅದನ್ನು ವರದಿ ಮಾಡಿದ್ದು, ಇದರಿಂದ ತಗಡ್ ಬೆಚ್ಚ ಮಾಡಿಕೊಂಡ ಟಿಪ್ಪರ್ ಮಾಲೀಕನೊಬ್ಬ ಗಣೇಶನನ್ನು ಟಿಪ್ಪರ್ ಅಡಿಗೆ ಹಾಕಲು ಅವರ ಸಂಘಕ್ಕೆ ಸಲಹೆ ಸೂಚನೆ ಕೊಟ್ಟಿದ್ದು, ಗಣೇಶ್ ಪೋಲಿಸ್ ಕಂಪ್ಲೈಂಟ್ ಮಾಡಿದ್ದು, ಟಿಪ್ಪರ್ ಮಾಲೀಕರು ಪತ್ರಿಕಾ ಗೋಷ್ಠಿ ಕರೆದಿದ್ದು ಇತ್ಯಾದಿ ಇತ್ಯಾದಿ. ಇಂಟರ್ವಲ್ ತನಕ ಆ ಕತೆ. ಇದೀಗ ಅದೇ ಕತೆ ಬ್ರೇಕಿನ ನಂತರ.

ಹಾಗೆಂದು ಗಣೇಶ್ ಮೇಲೆ ಕಡಬ ಪೋಲಿಸರಿಗೆ ಕೆಂಡದಂತಹ ಕೋಪವಿದೆ. ಚಕ್ಕುಲಿ ತಿಂದ ಹಾಗೆ ಕಟುಕುಟು ಮಾಡಲು ಆಸೆಯಿದೆ. ಯಾಕೆಂದರೆ ಗಣೇಶ್ ಪೋಲಿಸರನ್ನೂ ಸಮಾಜ ಕಂಟಕರ ಜೊತೆ ಲಿಂಕ್ ಮಾಡಿ ಬರೆಯುತ್ತಾನೆ ಎಂಬ ಕೋಪ. ಹಾಗೆ ಮೊನ್ನೆ ಟಿಪ್ಪರ್ ಮಾಲೀಕರು ಹಾಗೆಲ್ಲ ಕಾನೂನು ಬಾಹಿರವಾಗಿ ಮಣ್ಣು ಸಾಗಿಸಿದರೂ ಕಡಬ ಪೋಲಿಸರು ಕ್ರಮ ಜರುಗಿಸಿಲ್ಲ ಎಂದು ಬರೆಯಲಾಗಿತ್ತು ಮತ್ತು ಗಣೇಶನನ್ನು ಟಿಪ್ಪರ್ ಅಡಿಗೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ ಟಿಪ್ಪರ್ ಟಿಪ್ಪು ಬಗ್ಗೆ ಪೋಲಿಸರು ಯಾವ ಕ್ರಮ ಕೈಗೊಳ್ಳಲಿಲ್ಲ ಎಂದು ಗಣೇಶ್ ಗೆ ಅಸಮಾಧಾನ ಇತ್ತು. ಅದೇ ನಿನ್ನೆ ಅಲ್ಲೇ ಎಲ್ಲೋ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಚಾಲಕನನ್ನು ಟಾರ್ಪಲ್ ಹಾಕದೆ ಮಣ್ಣು ಸಾಗಿಸುವ ಬಗ್ಗೆ ಗಣೇಶ್ ಪ್ರಶ್ನಿಸಿದ್ದಾರೆ. ಅಷ್ಟೇ! ಕಡಬದ ಕಾ.ಸು ಎಸ್ಸೈ ಅಕ್ಷಯ್ ಕುಮಾರ್ ಓಡಿ ಬಂದು ಗಣೇಶ್ ನನ್ನು ಜೀಪಿನಲ್ಲಿ ಕೂರಿಸಿ ಠಾಣೆಗೆ ತಂದಿದ್ದಾರೆ.
![]() |
ಗಣೇಶ್ ಇಡಾಲ |
ಕಡಬದ ಕಾ.ಸು ಎಸ್ಸೈ ಅಕ್ಷಯ್ ಪ್ರಕಾರ ಗಣೇಶ್ ಕುಡಿದು ಗಲಾಟೆ ಮಾಡಿದ್ದಾನೆ ಅದಕ್ಕೆ ಠಾಣೆಗೆ ತಂದಿದ್ದೇವೆ ಎಂಬುದು. ಆದರೆ ಕಾ.ಸು ಎಸ್ಸೈ ಅವರೇ ಟಿಪ್ಪರ್ ಚಾಲಕನಲ್ಲಿ ಬಂದು ಕಂಪ್ಲೈಂಟ್ ಕೊಡುವಂತೆ ಹೇಳಿದ್ದು ರೆಕಾರ್ಡ್ ಆಗಿದೆ. ಅಕ್ಷಯ್ ಕುಮಾರನೇ ಕಂಪ್ಲೈಂಟ್ ಕೊಡಲು ಪಾರ್ಟಿಗೆ ಹೇಳುತ್ತಿದ್ದಾನೆ ಅಂದರೆ ಅದರ ಅರ್ಥ ಎನು? ಅಕ್ಷಯ್ ಯಾಕೆ ಅಷ್ಟು ಇಂಟರೆಸ್ಟೆಡ್?
ಹಾಗೆಂದು ಪತ್ರಕರ್ತರು ಕೂಡ ಥಿಯರಿಯಲ್ಲಿ ಮಾತ್ರ ಇರಬೇಕು. ಪ್ರಾಕ್ಟಿಕಲ್ಸ್ ಗೆ ಹೋದರೆ ಸಮಾಜ ಕಂಟಕ ಸುಧಾರಕರು ಮತ್ತು ಸಮಾನ ಮನಸ್ಕ ಪೋಲಿಸರು ಇಬ್ಬರೂ ಅಕ್ರಮ ಕೂಟ ಸೇರಿಕ್ಕೊಂಡು ಫಿಕ್ಸ್ ಮಾಡಿ ಬಿಡುತ್ತಾರೆ. ಅದರಲ್ಲೂ ಕ್ರೈಂ ಪತ್ರಕರ್ತರಂತೂ ಹೊರಗೆ ಬರೋದೇ ಡೇಂಜರ್. ಅದಕ್ಕೆ ನಾನು ಕೂಡ ಗುಳಿಗ್ಗ ಬನದಲ್ಲಿ ಕುಂತು ಬರೇಯೋದು. ಹೊರಗೇ ಬರ್ಲಿಕ್ಕೇ ಇಲ್ಲ. ಅಲ್ಲಿಗೇ ಅಗೆಲು,ತಂಬಿಲ,ಕುರಿ ತಂಬಿಲ ಇತ್ಯಾದಿ. ಇಲ್ಲಿ ಗಣೇಶ್ ವಿಷಯದಲ್ಲೂ ಆದದ್ದು ಇಷ್ಟೇ. ಗಣೇಶ್ ಆ ಟಿಪ್ಪರ್ ಚಾಲಕನನ್ನು ಪ್ರಶ್ನಿಸದಿದ್ದರೆ ಏನೂ ಆಗುತ್ತಿರಲಿಲ್ಲ. ಪ್ರಾಕ್ಟಿಕಲ್ಸ್ ಗೆ ಇಳಿದರು, ಪೋಲಿಸರು ಬಂದು ಕೊಂಡೋದರು ಅಷ್ಟೇ. ಸಮಾಜ ಕೆಟ್ಟು ಹೋದ ಹಾಲಿನಂತೆ. ಅದರಲ್ಲಿ ಕಾಫಿ ಮಾಡಲೂ ಆಗಲ್ಲ, ಕೇಟಿ ಮಾಡಲೂ ಆಗಲ್ಲ. ಇನ್ನು ಮೊಸರು ಮಜ್ಜಿಗೆ, ತುಪ್ಪ ಮಾಡಲು ಸಾಧ್ಯವೇ ಇಲ್ಲ. ಗಣೇಶ್ ಆ ಕೆಟ್ಟು ಹೋದ ಹಾಲಿನಲ್ಲಿ ಕಾಫಿ, ಟೀ ಮಾಡಲು ಹೋಗುತ್ತಿದ್ದಾರೆ. ಹಾಲು ಕೆಟ್ಟು ಹೋಗಿದೆ ಎಂದು ಮಾತ್ರ ಗಣೇಶ್ ಬರೆಯ ಬೇಕು. ಅದರಲ್ಲಿ ಮೊಸರು ಮಾಡಲು ಹೋದರೆ ಇದೇ ಕತೆ.
ಕೊನೆಯದಾಗಿ, ಗಣೇಶ್ ನನ್ನು ಠಾಣೆಯಲ್ಲಿ ಕೂರಿಸಿ ಕಾ.ಸು ಎಸ್ಸೈ ಕುಡಿದಿದ್ದಾನ ಎಂದು ಚೆಕ್ ಮಾಡಲು ಟೈಟ್ ಟೆಸ್ಟಿಂಗ್ ಮಿಷನ್ ತಂದಿದ್ದಾರೆ. ನಾನು ಮೂಸುವ ಮೊದಲು ನೀವು ಮೂಸಬೇಕೆಂದು ಗಣೇಶ್ ಎಸ್ಸೈಗೆ ಹೇಳಿದ್ದರಂತೆ. ಹಾಗೆ ನೀ ಮೂಸು, ನೀ ಮೂಸು ಎಂದು ಗಣೇಶ್ ಮತ್ತು ಎಸ್ಸೈ ನಡುವೆ ಚರ್ಚೆ ಆಗುವಾಗ ಉಳಿದ ಪೋಲಿಸರು ಒಳಗೆ ಮುಸು ಮುಸು ನಕ್ಕಿದ್ದಾರೆಂದು ಸುದ್ದಿ. ಹಾಗಾದರೆ ಪೋಲಿಸರೂ ಕುಡಿದಿದ್ರಾ? ಗಾಂಧಿ ದೇಶದಲ್ಲಿ ಕುಡಿದು ಡ್ಯೂಟಿ ಮಾಡೋದು ಸರಿನಾ? ಕೊನೆಗೆ ಮೂರು ಗಂಟೆ ನೈಟಿಗೆ ಗಣೇಶನನ್ನು ಠಾಣೆಯಿಂದ ಬೀಳ್ಕೊಡುವ ಸಮಯದಲ್ಲಿ ಪೋಲಿಸರು ವಿಡಿಯೋ ಶೂಟಿಂಗ್ ಮಾಡಿ "ಪೋಲಿಸರು ನನಗೆ ಹೊಡೆದಿಲ್ಲ, ಬಡಿದಿಲ್ಲ, ಕಣ್ಣೀರು ಹಾಕಿಸಿಲ್ಲ" ಎಂದು ಗಣೇಶನ ಬಾಯಲ್ಲಿ ಹೇಳಿಸುವ ಸಮಯ. ಪೋಲಿಸ್ ವಿಡಿಯೋ ಹಿಡಿದು ನಿಂತಿದ್ದಾನೆ. ವಿಡಿಯೋದ ಎದುರು ಗಣೇಶ್. ಲೈಟ್ಸ್ ಆನ್, ಕ್ಯಾಮೆರಾ, Action ಎಂದು ಎಸ್ಸೈ ಹೇಳಿದ್ದಾರೆ. "ನನಗೆ ಪೋಲಿಸರು ಹೊಡೆಯಲಿಲ್ಲ, ಬಡಿಯಲಿಲ್ಲ, ಕಣ್ಣೀರು ಹಾಕಿಸಿಲ್ಲ ಹಾಗೆಂದು ಪೋಲಿಸರೇ ಹೇಳಲು ಹೇಳಿದ್ದಾರೆ"ಎಂದು ಗಣೇಶ್ ಹೇಳಿ ಬಿಟ್ಟ. ಕಟ್ ಕಟ್ ಎಂದು ಎಸ್ಸೈ ಹೇಳಿದ್ದಾರೆ. "ಪೋಲಿಸರೇ ಹೇಳಿದ್ದಾರೆ"ಎಂಬ ಡೈಲಾಗ್ ಕಟ್ ಮಾಡಲು ಹೇಳಿದ ಎಸ್ಸೈ ಪುನಃ action ಎಂದು ಹೇಳಿದ್ದಾರೆ. ಗಣೇಶ್ ಬಾಯಿಯಿಂದ ಪುನಃ ಅದೇ ಡೈಲಾಗ್. "ಅಯನ್ ಒರ ಸಾಬೀತ್ ಡ್ ಕಡಪುಡ್ಲೆ ಮಾರಾಯ್ರೆ" ಎಂದು ಯಾರೋ ಸೀನಿಯರ್ ಪೋಲಿಸ್ ಒಳಗಿಂದ ಗೊಣಗಾಡಿದರಂತೆ. ಅಲ್ಲಿಗೆ ಗಣೇಶ್ ರಿಲೀಸ್. ಇನ್ನು ಆರು ತಾರೀಕಿಗೆ ಕುಲೆಗಳಿಗೆ ಬಡಿಸ್ಲಿಕ್ಕೆ ಗಣೇಶನನ್ನು ಠಾಣೆಗೆ ಬರಬೇಕೆಂದು ನೋಟೀಸ್ ಕೊಡಲಾಗಿದೆ.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

Post a Comment