ಕಷ್ಟದ ಸಮಯದಲ್ಲಿ, ಜೀವ ಹೋಗುವ ಟೈಮಲ್ಲಿ ಜನ ಎಂಥ ನಕಲಿಗಳನ್ನೂ ನಂಬಿ ಬಿಡುತ್ತಾರೆ. ಬಾವಿಗೆ ಬಿದ್ದವರಿಗೆ ಹುಲುಕಡ್ಡಿ ಆಸರೆ ಎಂಬಂತೆ "ಕೆಲಸ ಆಗಬಹುದು" ಎಂಬ ನಂಬಿಕೆಯಿಂದ ಜನ ನಕಲಿ ಮಂತ್ರವಾದಿ ಬಳಿ ಹೋಗಿ ಮೋಸ ಹೋಗುತ್ತಾರೆ. ಈ ನಕ್ಲಿಗಳು ಇಂಥ ಜನರನ್ನೇ ಕಾಯುತ್ತಾ ಇರುತ್ತಾರೆ ಮತ್ತು ಬಂದ ಕೂಡಲೇ ಕಡಿದು ಬಿಡುತ್ತಾರೆ. ಇದೀಗ ಪುತ್ತೂರು ಕೋಟಿ ಚೆನ್ನಯ ಇಂಟರ್ ನ್ಯಾಷನಲ್ ಬಸ್ ನಿಲ್ದಾಣದಲ್ಲಿ ಒಬ್ಬ ನಕಲಿ ಮಂತ್ರವಾದಿ ಮಂಡಲವಿಟ್ಟು ನಾಗವಲ್ಲಿಯನ್ನು ಯಾರು ತರುತ್ತಾರೆ ಎಂದು ಕಾಯುತ್ತಾ ಇದ್ದಾನೆ. ಕಾಲ್ ಮಾಡಿದರೂ ಸಾಕು, ಮಂತ್ರವಾದಿ ನುಂಗಿ ಬಿಡುತ್ತಾನೆ.
ಇವರು ಮಂತ್ರವಾದಿ ಕಿಷ್ಣಣ್ಣ. ಸದ್ಯಕ್ಕೆ ಪುತ್ತೂರು ಕೋಟಿ ಚೆನ್ನಯ ಬಸ್ ನಿಲ್ದಾಣದಲ್ಲಿ ಒಂದು ಅಂಡಿಗುಂಡಿ ಅಂಗಡಿ ಇಟ್ಟುಕ್ಕೊಂಡು ಸೈಡ್ ಬಿಸಿನೆಸ್ ಅಂತ ಶ್ರೀ ದೇವಿ ದರ್ಶನದ ಮೂಲಕ ಜನರ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುವುದಾಗಿ ಮಂಗ ಮಾಡುತ್ತಿದ್ದಾರೆ. ನೀವು ಕೇವಲ ಪೋನ್ ಮಾಡಿದರೂ ಸಾಕು ಫೋನಿನಲ್ಲೇ ದೇವಿ ದರ್ಶನ ಬಂದು ಸಮಸ್ಯೆ ಪರಿಹರಿಸುವ ವ್ಯವಸ್ಥೆಯನ್ನೂ ಶನಿ ಹಿಡಿದಿರುವ ಗ್ರಾಹಕರಿಗಾಗಿ ಮಾಡಲಾಗಿದೆ. ಒಂದು ಶನಿ ಹಿಡಿದಿರುವ ಕುಟುಂಬ ಮತ್ತು ಮಾಟ ದಾಟಿರುವ ವ್ಯಕ್ತಿಗೆ ಸಂಬಂಧ ಪಟ್ಟಂತೆ ಭೂತ ಬಾಧೆ, ದೇವರ ಉಪದ್ರ, ನಾಗಪ್ಪಣ್ಣನ ದೋಸಗಳ ಬಗ್ಗೆ ಅಲ್ಲೇ ಅಂಬಟೆ ಮೂಲೆಗೆ ಹೋಗುವ ಬಸ್ಸಿನ ಮೂಲೆಯಲ್ಲಿ ಪ್ರಶ್ನೆ ಚಿಂತನೆ ನಡೆಸಿ ಶಾಶ್ವತ ದೋಸೆ ನಿವಾರಣೆ ಮಾಡಲಾಗುತ್ತದೆ. ಇನ್ನು ನಿಮ್ಮ ಮನೆ, ಕಟ್ಟಡ, ಜಮೀನಿನಲ್ಲಿ ಬಾಡಿಗೆ ಬಾಕಿ ಇಟ್ಟು ಅನಧಿಕೃತವಾಗಿ ವಾಸಿಸಿ ಉಪದ್ರ ಮಾಡುತ್ತಿರುವ ಬ್ರಹ್ಮ ರಕ್ಕಸ, ಪರ ಕುಲೆ, ಪೀಡೆ, ಗುಳಿಗ್ಗ ರಾವ್, ರಣ, ಮೋಹಿನಿ, ಮೋಹನ ಮುಂತಾದವರನ್ನು ಕಿಷ್ಣಣ್ಣ ದರ್ಶನದ ಮೂಲಕ ಗುಂಡ್ಯ ಚೆಕ್ ಪೋಸ್ಟ್ ತನಕ ಓಡಿಸಿ ಬಿಡುತ್ತಾರೆ ಎಂದು ತಿಳಿದುಬಂದಿದೆ. ಇನ್ನು ಆರಂಭದಲ್ಲಿ ನೀವು ಒಂದು ಪೋನ್ ಕರೆ ಮಾಡಿ ಮನೆಯ ಸಮಸ್ಯೆ ಹೇಳಿದರೂ ಸಾಕು ಕಿಷ್ಣಣ್ಣ ಫೋನಿನಲ್ಲೇ ಓಡಿಸಿ ಬಿಡುತ್ತಾರೆ ಮತ್ತು ಓಡಿಸಿದ ಚಾರ್ಜ್ ಫೋನ್ ಪೇ ಮಾಡಿದರೆ ಕತೆ ಮುಗಿಯಿತು.
ಹಾಗೆಂದು ನಿಮ್ಮ ಜಾಗದಲ್ಲಿ ನಾಗಪ್ಪಣ್ಣನ ಯಾವುದೇ ಕಿರಿಕ್ ಇರಲಿ ಸುಬ್ರಹ್ಮಣ್ಯದಲ್ಲಿ ಮುಗಿಸಬಹುದಾದ ಸಮಸ್ಯೆಯನ್ನು ಕಿಷ್ಣಣ್ಣ ಪುತ್ತೂರು ಬಸ್ ಸ್ಟ್ಯಾಂಡಲ್ಲೇ ಘಳಿಗ್ಗೆಯಲ್ಲಿ ಮುಗಿಸಿ ಬಿಡುತ್ತಾರೆ. ಇನ್ನು ನೀವು ಹೊಸ ಮನೆ, ಜಾಗೆ,ಕಟ್ಟಡ ಪರ್ಚೆಸ್ ಮಾಡುವುದಿದ್ದರೆ ಕಿಷ್ಣಣ್ಣನಲ್ಲಿ ಒಂದು ಮಾತು ಕೇಳಲೇ ಬೇಕು. ಇಲ್ಲದಿದ್ದರೆ ವಾಸ್ತು ಸರಿ ಬರಲ್ಲ. ಇನ್ನು ಕಿಷ್ಣಣ್ಣನಲ್ಲಿ ಬಾವಿಗೆ, ಕೆರೆಗೆ, ಬೋರಿಗೆ ನೀರು ನೋಡುವ ಒಂದು ವಿಶೇಷ ಟೆಕ್ನಿಕ್ ಕೂಡ ಇದ್ದು ಕರಿ ಪಾದೆ ಎಲ್ಲಿದೆ ಎಂದು ಕುಂತಲ್ಲಿಂದಲೇ ನೋಡುವ ಒಂದು ಸಿದ್ದಿ ಇದೆ. ಇನ್ನು ಕಿಷ್ಣಣ್ಣನ ಇನ್ನೊಂದು ವಿಶಿಷ್ಟ ಸಿದ್ದಿ ಏನೆಂದರೆ ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ. ಈ ಕೇಸಲ್ಲಿ ಹಂಡ್ರೆಡ್ ಪರ್ಸೆಂಟ್ ಕಿಷ್ಣಣ್ಣನ ಬೆರಿ ಪೊಡಿಯಾಗುವ ಚಾನ್ಸಸ್ ಇದ್ದು ಸಂತಾನ ಹೇಗೆ ದಯಪಾಲಿಸುತ್ತಾರೆಂದು ಅದನ್ನು ಪಡೆದವರಿಗೇ ಗೊತ್ತು. ಏಕಾಂತ ಪೂಜೆ ಏನಾದರೂ ಮಾಡಲು ಹೋದರೆ ಕಿಷ್ಣಣ್ಣನ ಬೆಂಡ್ ತೆಗೆದರೂ ದೊಡ್ಡ ವಿಷಯವಲ್ಲ. ಮತ್ತೆ ಕಿಷ್ಣಣ್ಣ ಕಂಕಣ ಭಾಗ್ಯ ಸ್ಪೆಷಲಿಸ್ಟ್ ಕೂಡ ಆಗಿದ್ದು ಕೆಲವು ಗುಜುರಿಗಳಿಗೆ "ಅವುಪೋವು" ತನಕ ಮುಟ್ಟಿಸಿದ ಉದಾಹರಣೆಗಳಿವೆ.
ಹಾಗೆಂದು ಕಿಷ್ಣಣ್ಣ ಕುಲೆ ಮದುವೆಯಲ್ಲಿ ಕೂಡ ದೊಡ್ಡ ಪರಿಣತಿ ಪಡೆದಿದ್ದಾರೆ. ಈ ಬಗ್ಗೆ ಬೀರಮಲೆ ಗುಡ್ಡೆಯಲ್ಲಿ ಒಂಟಿ ಕಾರಲ್ಲಿ ಕುಂತು ತಪಸ್ಸು ಮಾಡಿ ಕುಲೆ ಮದುವೆಯಲ್ಲಿ ಹೈಯರ್ ಸ್ಟಡೀಸ್ ಮಾಡಿದ್ದಾರೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ಮದುವೆಗೆ ಮುನ್ನ ಟಿಕೆಟ್ ತೆಗೆದಿದ್ದರೆ, ಅವರ ಕುಲೆ ನಿಮ್ಮ ಮದುವೆ ತಪ್ಪಿಸುತ್ತಿದ್ದರೆ ನೀವು ಸೀದಾ ಕಿಷ್ಣಣ್ಣನನ್ನು ಭೇಟಿಯಾದರೆ ಸಾಕು. ಅವರು ನಿಮ್ಮ ಅಣ್ಣ ಕುಲೆಗೆ ಅತ್ತಿಗೆ ಕುಲೆ ಹುಡುಕಿ ಮದುವೆ ಮಾಡಿಸಿ ನಿಮ್ಮ ಮದುವೆಗೆ ಇರುವ ವಿಘ್ನಗಳ ನಿವಾರಣೆ ಮಾಡುತ್ತಾರೆ. ಇನ್ನು ನಿಮ್ಮ ಕುಟುಂಬದಲ್ಲಿ ಟಿಕೆಟ್ ತೆಗೆದರೂ ಮೋಕ್ಷ ಸಿಗದೆ ವೈಟಿಂಗ್ ಲಿಸ್ಟಲ್ಲಿ ಇರುವ ಮತ್ತು ಭೂತಗಳ ಕೈಯಲ್ಲಿರುವ ಪ್ರೇತಾತ್ಮಗಳಿಗೆ ಕಿಷ್ಣಣ್ಣ ಶಾಶ್ವತ ಸದ್ಗತಿ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಹಾಗೆಂದು ಬಸ್ ಸ್ಟ್ಯಾಂಡ್ ಕಿಷ್ಣಣ್ಣನ ಬಾಡಿ ಒಂಥರಾ ಕುಲ್ ಕುಲೆ, ಪೀಡೆ, ಪಿಶಾಚಿ, ಭೂತ, ಬ್ರಹ್ಮ ರಕ್ಕಸ ಮತ್ತು ಎಲ್ಲಾ ಜಾತಿಯ ದೈವ ದೇವರುಗಳ ನೆಲೆವೀಡು ಇದ್ದಂತೆ. ಒಂಥರಾ ಭೂತಗಳ ಹಾಸ್ಟೆಲ್ ಇದ್ದಂತೆ. ಯಾಕೆಂದರೆ ನಿಮಗೆ ರಕ್ತೇಶ್ವರಿಯ ಬಾಧೆ ಇದ್ದರೆ ಕಿಷ್ಣಣ್ಣ ತನ್ನ ಬಾಡಿಗೆ ರಕ್ತೇಶ್ವರಿಯನ್ನು ಆವಾಹನೆ ಮಾಡಿಕ್ಕೊಂಡು ರಕ್ತೇಶ್ವರಿಗೆ ನಿಮ್ಮಿಂದ ಏನಾಗ ಬೇಕು ಎಂದು ತಿಳಿಸಿ ಭೂತ ಇಳಿಸಿ ಬಿಡುತ್ತಾರೆ. ಬ್ರಹ್ಮ ರಕ್ಕಸ ಬಂದಿದ್ದರೆ ಕಿಷ್ಣಣ್ಣ ಕೂಡ ಬ್ರಹ್ಮ ರಕ್ಕಸ ಹತ್ತಿಸಿಕೊಂಡು ನಿಮ್ಮಿಂದ ಇಳಿಸಿ ಬಿಡುತ್ತಾರೆ.ಇನ್ನು ನಿಮಗೆ ಯಾವುದೇ ಶಕ್ತಿಗಳಿಂದ ತೊಂದರೆ ಇದ್ದರೂ ಕಿಷ್ಣಣ್ಣನ ಹತ್ತಿರ ಆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ. ಆಕಸ್ಮಾತ್ ನಿಮ್ಮ ಬಾಡಿಯಲ್ಲಿ ದೇವರು ಬಂದಿದ್ದರೆ, ಯಾವುದೋ ಕಿರಿಕ್ ಪಾರ್ಟಿ ಭೂತ ಬಂದಿದ್ದರೆ ನಿಮ್ಮನ್ನು ಕಿಷ್ಣಣ್ಣ ಹೇಗಾದರೂ ಮಾಡಿ ಮಂಡಲದಲ್ಲಿ ಕೂರಿಸಿ ನಿಮ್ಮ ಬಾಡಿಯಿಂದ ಭೂತ ಇಳಿಸಿ ಬಿಡುತ್ತಾರೆ. ಇನ್ನು ದೈವ ಹಾಗೂ ನಾಗದೇವರ ಕೈಯಲ್ಲಿರುವ ಆತ್ಮಗಳನ್ನೂ ಕಿಷ್ಣಣ್ಣ ಹತ್ತಿಸಿಕೊಂಡು ಸಮಸ್ಯೆಗಳನ್ನು ಕ್ಲೀಯರ್ ಮಾಡಿ ಬಿಡುತ್ತಾರೆ. ಇನ್ನು ಕಡೆಯದಾಗಿ ಕಿಷ್ಣಣ್ಣ ಸರ್ವ ಧರ್ಮೀಯರ ಸರ್ವ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಮಾಡುವುದಾಗಿ ಘೋಷಿಸಿ ಕೊಂಡಿದ್ದಾರೆ. ಇವರ ಕತೆ ಹೀಗೆಯೇ ಮುಂದುವರೆದರೆ ದಕ್ಷಿಣ ಕನ್ನಡಕ್ಕೆ ಹೊಸತೊಂದು ಬಸ್ ಸ್ಟ್ಯಾಂಡ್ ಬಾಬ ಅಥವಾ ಬಸ್ ಸ್ಟ್ಯಾಂಡ್ ಸ್ವಾಮಿಯ ದರ್ಶನ ಆಗುವುದರಲ್ಲಿ ಸಂಶಯವೇ ಇಲ್ಲ.
ಅಲ್ಲ ಮಾರಾಯ್ರೆ ಸುನೀತಾ ವಿಲಿಯಮ್ಸ್ ಅಂತರಿಕ್ಷ ನಿಲ್ದಾಣದಲ್ಲಿ ಎಷ್ಟೋ ಸಮಯ ಇದ್ದು ಭೂಮಿಗೆ ಬಂದಿದ್ದರೆ ಇಲ್ಲಿ ಕಿಷ್ಣಣ್ಣ ಬಸ್ ನಿಲ್ದಾಣದಲ್ಲಿ ಭೂತ, ಪ್ರೇತ, ಕುಲೆ, ಪೀಡೆ, ಪಿಚಾಚಿ ಎಂದು ಜನರನ್ನು ಮಂಗನ ಮೇಲೆ ಮಂಗ ಮಾಡುತ್ತಿದ್ದಾರೆ. ಹೀಗೆಲ್ಲ ಮಾಡಲು ಒಂದು ನಾಚಿಕೆ ಕೂಡ ಆಗಲ್ವಾ ಮಾರಾಯ್ರೆ. ಭೂತದ ಹೆಸರಲ್ಲಿ, ದುಷ್ಟ ಶಕ್ತಿಗಳ ಹೆಸರಲ್ಲಿ ಅಮಾಯಕರ ಮಂಡೆ ಸವಾರಿ ದುಡ್ಡು ಮಾಡುವ ಇಂತಹ ನಕಲಿ ಮಂತ್ರವಾದಿಗಳನ್ನು ಬಾಟ್ಲಿಯಲ್ಲಿ ತುಂಬಿಸಿ ಬೂಚಿ ಬಂದ್ ಮಾಡಿ ಉಬಾರ್ ಸಂಗಮದಲ್ಲಿ ಬೊಲ್ಲಕ್ಕೆ ಬಿಡಬೇಕು. ಇಲ್ಲದಿದ್ದರೆ ಅಮಾಯಕರಿಗೆ ಉಳಿಗಾಲವಿಲ್ಲ.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

Post a Comment