ಓ ಮೊನ್ನೆ ತಾನೇ ಬೊಳ್ಳೂರು ರಾಧಾ ಕೃಷ್ಣರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮೇಲಿಂದ ಮಾಡಲಾಗಿತ್ತು. ಅವರ ನೇಮಕಾತಿ ಹೊರಬೀಳುತ್ತಿದ್ದಂತೆ ಇಡೀ ಸುಳ್ಯ ಕಾಂಗ್ರೆಸ್ಸಿನಲ್ಲಿ ಭಿನ್ನಮತದ ಹೊಗೆ ಎದ್ದು ವಾಯು ಮಾಲಿನ್ಯ ಶುರುವಾಗಿ ಹೋಯ್ತು. ಭಿನ್ನಮತೀಯ ಮೀಟಿಂಗ್ ಕಾಂಗ್ರೇಸಿಗರ ಮನೆ ಮನೆಯಲ್ಲಿ ನಡೆಯಿತು. ಬೊಳ್ಳೂರು ಮೊನ್ನೆ ತಾನೇ ಕಾಂಗ್ರೆಸ್ ಗೆ ಬಂದಿದ್ದು ಹಾಗಾಗಿ ಇಷ್ಟು ಬೇಗ ಅಧ್ಯಕ್ಷ ಕುರ್ಚಿ ಕೊಡುವುದು ಯಾವ ನ್ಯಾಯ, ಸ್ವಲ್ಪ ಕಾಂಗ್ರೆಸ್ ಪೋಸ್ಟರ್ ಅಂಟಿಸಿ, ಬ್ಯಾನರ್ ಕಟ್ಟಲಿ ಆಮೇಲೆ ಕುರ್ಚಿ ಎಂಬುದು ಪರಬ್ಬ ಕಾಂಗ್ರೇಸಿಗರ ವಾದ. ಅದರಲ್ಲೂ ಸ್ಥಳೀಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ಕೇಳದೆ ಏಕಾಏಕಿ ಅಧ್ಯಕ್ಷರ ನೇಮಕಾತಿ ನಡೆದಿದ್ದು ತಪ್ಪು ಎಂದು ಆ ನೇಮಕಾತಿಗೆ ತಡೆ ತರಲಾಗಿತ್ತು. ಹಾಗಾದರೆ ಅಧ್ಯಕ್ಷ ಯಾರಾಗ ಬಹುದು?
ಹಾಗೆಂದು ಸುಳ್ಯದ ಮಟ್ಟಿಗೆ ಗೌಡ್ರುಗಳನ್ನೇ ಬ್ಲಾಕ್ ಅಧ್ಯಕ್ಷರ ಕುರ್ಚಿಯಲ್ಲಿ ಕೂರಿಸ ಬೇಕು ಎಂಬುದು ಕಾಂಗ್ರೆಸ್ ಪಕ್ಷದ ಅಂಡಿಗುಂಡಿ ರೂಲ್ಸ್. ಯಾಕೆಂದರೆ ಸುಳ್ಯ ಗೌಡ್ರುಗಳ ಭದ್ರಕೋಟೆ ಮತ್ತು ಮೆಜಾರಿಟಿ ಜನ ಅವರೇ. ಆದರೆ ಅಷ್ಟು ದೊಡ್ಡ ಮೆಜಾರಿಟಿಯಲ್ಲಿ ನೈಂಟಿ ಫೈವ್ ಪರ್ಸೆಂಟ್ ಜನ ಬಿಜೆಪಿಗೆ ಹೋಗಿಯಾಗಿದೆ. ಉಳಿದ ಐದು ಪರ್ಸೆಂಟ್ ಗೌಡ್ರುಗಳಿಗೆ ಕಾಂಗ್ರೆಸ್ ಅಧ್ಯಕ್ಷರ ಪಟ್ಟ ಯಾಕೆ ಕಟ್ಟುತ್ತಿದ್ದಾರೆ ಎಂದೇ ಅರ್ಥವಾಗುತ್ತಿಲ್ಲ. ಅದರಲ್ಲೂ ಗೌಡ್ರುಗಳ ಬೆಲ್ಟ್ ನಲ್ಲಿ ಈಗಾಗಲೆ ದೊಡ್ಡ ಮುಂಡೋಡಿ, ಚಿಕ್ಕ ಮುಂಡೋಡಿಗಳಿಗೆ ಸುಳ್ಯ ಕಾಂಗ್ರೆಸನ್ನೇ ಎಷ್ಟೋ ವರ್ಷಗಳ ಕಾಲ ಕೊಡಲಾಗಿತ್ತು. ಕಡೇ ಪಕ್ಷ ಗುತ್ತಿಗಾರು ಉಳಿಸಿಕೊಳ್ಳಲಾಗಲಿಲ್ಲ ಅವರಿಗೆ. ನಂತರ ಪಿ.ಸಿಗೆ ಕೊಡಲಾಯಿತು,ಮಡಪ್ಪಾಡಿ ಸೊಸೈಟಿ ಢಮಾರ್ ಆಯ್ತು. ಅಡ್ಪಂಗಾಯರಿಗೆ ಕಾಂಗ್ರೇಸಿನಲ್ಲೇ ಉಸಿರು ಕಟ್ಟಿಸುವ ಸ್ಥಿತಿ, ಜ್ಯೂನಿಯರ್ ವಕೀಲರಿಗೆ ಕೊಟ್ಟರೆ ನಗರ ಪಂಚಾಯತೂ ಉಳಿಸಿಕೊಳ್ಳಲಾಗಲಿಲ್ಲ. ಇದಕ್ಕೆಲ್ಲ ಕಾರಣ ಬಿಜೆಪಿ ಪ್ರಭಾವ. ಬಿಜೆಪಿ ಮುಂದೆ ಇವರಿಗೆ ಬ್ಯಾಟಿಂಗ್ ಮಾಡಲು ಆಗುತ್ತಿಲ್ಲ. ಹಾಗೆ ಜಿ ಬೆಲ್ಟ್ ನ ಎಲ್ಲಾ ಗ್ರಾಮಗಳೂ ಬಿಜೆಪಿ ಕಡೆ ಹೋಗಿರುವಾಗ ಗೌಡ್ರುಗಳು ಕಾಂಗ್ರೆಸ್ಸಿನಲ್ಲಿ ಅಲ್ಪಸಂಖ್ಯಾತರು. ಹಾಗಾಗಿ ಸುಳ್ಯ ಕಾಂಗ್ರೆಸನ್ನು ಜಿ ಬೆಲ್ಟ್ ಗೆ ಕೊಟ್ಟರೆ ಅದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆಯೇ ಹೊರತು ದೊಡ್ಡ ಲಾಭ ಇಲ್ಲ. ಯಾಕೆಂದರೆ ತಮಗೆ ಚಾನ್ಸೇ ಇಲ್ಲ, ಯಾವಾಗ ನೋಡಿದರೂ ಅಧ್ಯಕ್ಷ ಪಟ್ಟ ಗೌಡ್ರುಗಳಿಗೆ ಎಂದು ಅಸಮಾಧಾನಗೊಂಡು ಇತರೇ ಬೆಲ್ಟ್ ಜನ ಸಾಮೂಹಿಕವಾಗಿ ಬಿಜೆಪಿ ಕಡೆ ಹೋದರೆ ಸುಳ್ಯದಲ್ಲಿ ಕಾಂಗ್ರೆಸ್ ಸ್ಟ್ರೈಕ್ ರೇಟ್ ಪಾತಾಳಕ್ಕೆ ಇಳಿಯಬಹುದು.

ಇನ್ನು ಇತರೇ ಬೆಲ್ಟ್ ಗಳ ಕಡೆ ನೋಡುವುದಾದರೆ ಬಂಟ ಸಮುದಾಯದ ಜೆ.ಪಿಗೆ ಕೊಟ್ಟು ನೋಡಲಾಯಿತು. ಏನೂ ಪ್ರಯೋಜನವಾಗಲೇ ಇಲ್ಲ. ಬಂಟ ಸಮುದಾಯದಲ್ಲಿ ಬೆಳ್ಳಾರೆ ಕಡೆ ಉತ್ತಮ ಸಂಘಟಕರಿದ್ದರೂ ಅವರನ್ನು ಮೂಲೆಗುಂಪು ನಾಯಕ ಮಾಡಲಾಯಿತು. ಹಾಗೆ ನೋಡುವುದಾದರೆ ಸುಳ್ಯದಲ್ಲಿ ಕಾಂಗ್ರೆಸಿಗೆ ಗೌಡ್ರುಗಳಿಗಿಂತ ಜಾಸ್ತಿ ಬಂಟ ಸಮುದಾಯದ ಮತದಾರರು ಇದ್ದಾರೆ. ಹಾಗೆಂದು ಬಂಟ ಸಮುದಾಯವೇ ಪ್ರಬಲವಾಗಿರುವ ಬೆಳ್ಳಾರೆಯಲ್ಲಿ ಮೊದಲು ಗ್ರಾಮ ಪಂಚಾಯತಿ ಢಮಾರ್ ಆಯ್ತು ನಂತರ ಓ ಮೊನ್ನೆ ಮೊನ್ನೆ ಸೊಸೈಟಿಯೂ ಢಂ ಢಮಾರ್ ಆಗಿ ಹೋಯ್ತು. ಶಬ್ದ ಕೇಳಿರ ಬೇಕು ನಿಮಗೆ. ಆದರೂ ಒಂದು ಕೈ ಬಂಟ ಸಮುದಾಯದ ಯಾವುದಾದರೂ ಡ್ಯಾಶಿಂಗ್ ನಾಯಕನಿಗೆ ಲೀಡರ್ ಶಿಪ್ ಕೊಟ್ಟು ನೋಡಬಹುದು. ಇನ್ನು ಜೆ.ಪಿಗೆಲ್ಲ ಸುಳ್ಯ ಕಾಂಗ್ರೆಸನ್ನು ಟ್ಯಾಕಲ್ ಮಾಡಲು ಸಾಧ್ಯವಿಲ್ಲ.
ಮತ್ತೆ ಬ್ರಾಹ್ಮಣ ಬೆಲ್ಟ್ ಕಡೆ ನೋಡುವುದಾದರೆ ಅದು ಕೂಡ ಸೇಮ್ ಜಿ ಬೆಲ್ಟ್ ಪರಿಸ್ಥಿತಿಯಲ್ಲಿಯೇ ಇದೆ. ಲೀಡರ್ಸ್ ಇದ್ದಾರೆ ಆದರೆ ಕಾಂಗ್ರೆಸ್ಗೆ ಬ್ರಾಹ್ಮಣ ಮತದಾರರಿಲ್ಲ. ಕಲ್ಮಡ್ಕದ ಉದಯಣ್ಣ ಮತ್ತು ಕರಿಕ್ಕಳದ ಅಜಾನುಬಾಹು ಕಲ್ಮಡ್ಕ ಸೊಸೈಟಿ ಮತ್ತು ಕಲ್ಮಡ್ಕ ಪಂಚಾಯ್ತಿಯನ್ನು ಇಲ್ಲಿ ತನಕ ಫ್ರಿಡ್ಜ್ ನಲ್ಲಿ ಇಟ್ಟು ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಸುಬ್ರಹ್ಮಣ್ಯದಲ್ಲಿ ರುದ್ರಪಾದರು ದೇಶಭಕ್ತರ ಭದ್ರಕೋಟೆಯಲ್ಲಿ ಒಮ್ಮೊಮ್ಮೆ ಮ್ಯಾಕ್ಸ್ ವೆಲ್ ಅವತಾರ ಎತ್ತಿ ಬಿಡುತ್ತಾರೆ. ಇನ್ನು ಕ್ರಿಶ್ಚಿಯನ್ ಬೆಲ್ಟ್ ಇಲ್ಲಿ ಮತದಾರರ ಪಟ್ಟಿಯಲ್ಲಿ ಮಾತ್ರ. ಇನ್ನು ಒಬಿಸಿ ಕಡೆ ನೋಡುವುದಾದರೆ ಕಾಂಗ್ರೆಸಿಗೆ ಅಲ್ಲೂ ಗಟ್ಟಿ ಲೀಡರ್ ಸಿಗೋದು ಡೌಟು. ಮತ್ತೆ ಲೇಡಿ ಲೀಡರ್ ಗಳ ಪೈಕಿ ಈಗಾಗಲೇ ಚಿಲ್ತಡ್ಕದ ನಾಯಕಿ ಜೆಡಿಎಸ್ ಗೆ ಹಾರಿ ರಾಜಕೀಯವಾಗಿ ಮುಗಿದು ಹೋಗಿದ್ದಾರೆ. ಮುಸ್ಲಿಂ ನಾಯಕಿ ವಹಿದೆ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ.ಮತ್ತೆ ಉಳಿದಿರುವುದು ಝೆಡ್.ಪಿ ಮಾಜಿ ಮೆಂಬರ್ ಗಳಾದ ಸರಸ್ವತಿ ಕಾಮತ್ ಮತ್ತು ರಾಜೀವಿ ರೈ. ಇವರಲ್ಲಿ ಸರಸ್ವತಿ ಕಾಮತ್ ಅಧ್ಯಕ್ಷ ಪಟ್ಟದ ಆಕಾಂಕ್ಷಿಯಾಗಿದ್ದು ಡಿ.ಕೆ ಮೊನ್ನೆ ಸಿಕ್ಕಿದಾಗ "ಏನಮ್ಮಾ ಸುಳ್ಯದಲ್ಲಿ ಕಾಂಗ್ರೆಸ್ ಜವಾಬ್ದಾರಿ ವಹಿಸಿಕೊಳ್ಳಬಹುದಾ" ಎಂದು ಕೇಳಿದ್ದರಂತೆ. ಮಹಿಳಾ ಮಣಿಗಳಿಗೆ ಒಂದು ಚಾನ್ಸ್ ಕೊಟ್ಟು ನೋಡಬಹುದು.
ಇನ್ನು ಉಳಿದಿರುವುದು ಮುಸ್ಲಿಂ ಬೆಲ್ಟ್. ಈ ಬೆಲ್ಟ್ ನಲ್ಲಿ ನೈಂಟಿ ಫೈವ್ ಪರ್ಸೆಂಟ್ ಓಟರ್ಸ್ ಕೂಡ ಇದ್ದಾರೆ, ಲೀಡರ್ಸ್ ಕೂಡ ಇದ್ದಾರೆ. ಪರಬ್ಬ ಲೀಡರ್ಸ್ ಕೂಡ ಇದ್ದಾರೆ, ಬಾಲಕ್ಕಾರ್ ಲೀಡರ್ಸ್ ಕೂಡ ಇದ್ದಾರೆ. ಆದರೆ ಅವರಿಗೆ ಒಂದು ಬಗೆ ಅಧ್ಯಕ್ಷ ಪಟ್ಟ ಕನಸಿನ ಮಾತು. ಹಾಗಾಗಿ ಅವರು ಅವರ ಹೆಸರು ತೇಲಿ ಕೂಡ ಬಿಡಲ್ಲ.ಇದೀಗ ಸುಳ್ಯದ ಈ ಅಧ್ಯಕ್ಷ ಮ್ಯಾಟರ್ ಬೆಂಗಳೂರಿಗೆ ಶಿಫ್ಟ್ ಆಗಿದೆ ಎಂದು ತಿಳಿದುಬಂದಿದೆ. ಸುಳ್ಯ ಸಂಪಾಜೆಯ ಕಾಂಗ್ರೆಸ್ ನಾಯಕ ಸೋಮಣ್ಣನಿಗೆ ಅಧ್ಯಕ್ಷ ಪಟ್ಟ ಕಟ್ಟ ಬೇಕೆಂದು ಜಿ ಬೆಲ್ಟ್ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದೆ. ಹಾಗೆಂದು ಸೋಮಣ್ಣ ಸಕ್ರೀಯ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ವರ್ಷಗಳ ಹಿಂದೆಯೇ ಹೇಳಿದ್ದರು. ಈಗಲೂ ಬೇಡ ಬೇಡ ಎಂದು ಹೇಳಿದರೂ ಕೇವಲ ಜಿ ಬೆಲ್ಟಿಗಾಗಿ ಅವರನ್ನು ಹೊತ್ತುಕೊಂಡು ಬೆಂಗಳೂರಿಗೆ ಹೋಗಲಾಗಿದೆ ಎಂದು ಸುದ್ದಿ. ಹಾಗೆಂದು ಸಂಪಾಜೆಯಲ್ಲಿ ಜಿ ಬೆಲ್ಟ್ ಇಲ್ಲ. ಸಂಪಾಜೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ತಮಿಳರು, ಒಬಿಸಿ ಮತ್ತು ಎಸ್ಸಿ ಎಸ್ಟಿಗಳು ಜಾಸ್ತಿ ಇರುವ ಕಾರಣ ಇಲ್ಲಿ ನಿರಂತರವಾಗಿ ಪಂಚಾಯ್ತಿ ಮತ್ತು ಸೊಸೈಟಿಯಲ್ಲಿ ಕಾಂಗ್ರೆಸ್ ಬರುತ್ತದೆಯೇ ಹೊರತು ಯಾವುದೇ ಲೀಡರ್ ಗಳ ಲೀಡರ್ ಶಿಪ್ ನಲ್ಲಿ ಅಲ್ಲ. ಹಾಗೆಂದು ಸೋಮಣ್ಣ ನಾನ್ ಕರಫ್ಟ್, ಒಳ್ಳೇ ಲೀಡರ್. ಆದರೆ ಸಂಪಾಜೆಯಲ್ಲಿ ಸೋಮಣ್ಣನಿಂದಾಗಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂಬ ಮಾತನ್ನು ತಳ್ಳಿಹಾಕಬಹುದು. ಇದೀಗ ಸುಳ್ಯ ಕಾಂಗ್ರೆಸ್ ನ ಒಂದು ಟೀಮ್ ಬೆಂಗಳೂರಿಗೆ ಶಿಫ್ಟ್ ಆಗಿದ್ದು ಎಕ್ಸ್ ಝೆಡ್ ಪಿ ಲೇಡಿ ಲೀಡರ್, ಕಲ್ಮಡ್ಕದ ಪರಮೊಚ್ಚ ಮುಸ್ಲಿಂ ನಾಯಕ, ಸೋಮಣ್ಣ, ಲೀಡರ್ ಆಫ್ ಗೂನಡ್ಕ, ಜಾನ್ ಜಾನಿ ಮುಂತಾದವರು ಶತಪ್ರಯತ್ನದಲ್ಲಿದ್ದಾರೆ. ಸುಳ್ಯದಲ್ಲಿ ಯಾರು ಅಧ್ಯಕ್ಷರಾದರೂ ಒಬ್ಬ ಕಾಂಗ್ರೆಸ್ ಎಮ್ಮೆಲ್ಲೆಯನ್ನು ಬೆಂಗಳೂರು ಬಸ್ ಹತ್ತಿಸಲು ಭಗೀರಥ ಪ್ರಯತ್ನ ಬೇಕು. ಆದರೆ ಭಾಗೀರಥಿ ಬಿಡಬೇಕಲ್ಲ.
..............................................
ಒಂದು ಸಣ್ಣ ಸಹಾಯ :
ಮೇಲಿನ ವಿಡಿಯೋದಲ್ಲಿ ಕಾಣುತ್ತಿರುವುದು ತಾಯಿ ಮತ್ತು ಮಗು. ಚಿಕ್ಕ ಮಗುವಿನ ಲಾಲನೆ ಪಾಲನೆ ಮಾಡಬೇಕಾದ ಅಮ್ಮನೇ ಹಾಸಿಗೆ ಹಿಡಿದು ಮಲಗಿದ್ದಾಳೆ. ಮಗುವಿನ ಭವಿಷ್ಯ ತೂಗುಯ್ಯಾಲೆಯಲ್ಲಿ. ಇವಳು ಯಶಸ್ವಿನಿ. ಗುತ್ತಿಗಾರು ಗ್ರಾಮದ ಕಮಿಲ ದಲ್ಲಿ ಮನೆ. 23 ವರ್ಷ ಪ್ರಾಯ. ಮದುವೆಯಾಗಿ ಒಂದು ಚಿಕ್ಕ ಮಗು ಇದೆ. ಒಂದು ವರ್ಷದ ಹಿಂದೆ ಯಶಸ್ವಿನಿಗೆ ವಿಷಪೂರಿತ ಹಾವು ಕಡಿದು ಹಾಸಿಗೆ ಹಿಡಿದವಳು ಇವತ್ತಿಗೂ ಎದ್ದಿಲ್ಲ. ಹಾವು ಕಡಿತ ಯಶಸ್ವಿನಿಯ ನರಗಳ ಮೇಲೆ ಪರಿಣಾಮ ಬೀರಿದ್ದು ಅವಳ ಕೈಕಾಲುಗಳು ಕೊಕ್ಕೆ ಕಟ್ಟಿ ವೈಬ್ರೇಷನ್ ಆಗುತ್ತಿದೆ. ಮಂಗಳೂರಿನಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಲಕ್ಷಾಂತರ ಖರ್ಚು ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಕೆಳ ಮಧ್ಯಮ ವರ್ಗದ ಮನೆ ಮಗಳಾಗಿರುವ ಯಶಸ್ವಿನಿಯನ್ನು ಈ ಪರಿಸ್ಥಿತಿಯಲ್ಲಿ ನೋಡಲಾಗುತ್ತಿಲ್ಲ. ಅದರಲ್ಲೂ ಅವಳ ಮಗುವಿನ ಮುಂದಿನ ಭವಿಷ್ಯ ಹಾಳಾಗಬಾರದು. ಆದ್ದರಿಂದ ಸಹೃದಯಿಗಳು ತಮ್ಮಿಂದಾದ ಆರ್ಥಿಕ ಸಹಾಯವನ್ನು ಮಾಡಬೇಕೆಂಬುದು ಅವಳದ್ದೊಂದು ಪುಟ್ಟ ಕುಟುಂಬದ ಯಾಚನೆ. ಇಲ್ಲಿ ಕೆಳಗೆ ಅಕೌಂಟ್ ನಂಬರ್ ಮತ್ತು ಸ್ಕ್ಯಾನರ್ ಕೊಡಲಾಗಿದೆ. ಬಡವಿ ತಂಗಿಗೆ ಏನಾದರೂ ನೀವು ತೆಗೆದಿಟ್ಟಿದ್ದರೆ ಅದನ್ನು ಯಶಸ್ವಿನಿಗೆ ಕೊಟ್ಟರೆ ಅವಳ ಮುಂದಿನ ಚಿಕಿತ್ಸೆಗೆ ಸಹಾಯ ಆಗಬಹುದು.ಇನ್ನು ಆ ಅಮಾಯಕ ಪುಟ್ಟ ಮಗುವಿನ ಮುಖ ನೋಡಿ ಆ ನಗು ಶಾಶ್ವತವಾಗಿರಲಾದರೂ ಒಂದು ಸಣ್ಣ ಸಹಾಯ ಮಾಡಿ.
S/b ac.no 83680100010772
Bank of Baroda.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

Post a Comment