
ಕೆಲವು ದಿನಗಳ ಹಿಂದೆ ಕಲ್ಮಡ್ಕದಲ್ಲಿ ಕಾಡು ಹಂದಿ ಬೇಟೆಗೆ ಬಿಟ್ಟಿದ್ದ ಕರೆಂಟ್ ವಯರ್ ಶಾಕ್ ತಗುಲಿ ಇಬ್ಬರು ಬಲಿಯಾದ ವಿಷಯ ಮತ್ತು ಅದರ ಬಾಬ್ತು ಇಬ್ಬರು ಬಂದೀಖಾನೆ ಪಾಲಾದದ್ದು ಊರಿಡೀ ಗೊತ್ತಿರುವ ವಿಷಯ. ಊರಿಡೀ ಗೊತ್ತಿರುವ ಇನ್ನೊಂದು ವಿಷಯ ಏನೆಂದರೆ ಕಲ್ಮಡ್ಕದಲ್ಲಿ ಅವರಿಬ್ಬರೇ ಬೇಟೆಗಾರರಲ್ಲ ಇನ್ನೊಬ್ಬ ರಣ ಬೇಟೆಗಾರ ಈ ಪ್ರಕರಣದಿಂದ ಬಚಾವ್ ಆಗಿದ್ದಾನೆ ಎಂಬ ವಿಚಾರ. ಪೋಲಿಸರು ಮಂಡೆ ಪಾಲು ಯಾಕೆ ಬಿಟ್ಟರು ಎಂಬುದೇ ಪ್ರಶ್ನೆ.

ಹಾಗೆಂದು ಕಲ್ಮಡ್ಕದಂತಹ ಕಾಡಂಚಿನ ಗ್ರಾಮದಲ್ಲಿ ಕಾಡುಪ್ರಾಣಿಗಳ ಕಾಟ ದೊಡ್ಡದು. ಅದರಲ್ಲೂ ಆನೆ ಸೈಜಿನ ಕಾಡು ಹಂದಿಗಳಂತೂ ತೋಟದ ತುಂಬಾ ಡೈಲಿ ಹಿಟಾಚಿ ವರ್ಕ್ ಮಾಡುತ್ತಲೇ ಇರುತ್ತದೆ. ಇದಕ್ಕೆಲ್ಲ ಚಿಕ್ಕ ವ್ಯವಸ್ಥೆ ಏನೆಂದರೆ ಉರ್ಲು ಇಡೋದು. ಅದು ಬಿಟ್ಟರೆ ಹಂದಿಗಳ ಮೆರವಣಿಗೆ ಬರುವ ಗಂಡಿಗಳಿಗೆ, ತೋಡಿಗೆ ವಯರ್ ಅಡ್ಡ ಕಟ್ಟಿ ಅದಕ್ಕೆ ಕರೆಂಟ್ ಬಿಡೋದು ಮತ್ತು ಲಾಸ್ಟ್ ಸ್ಟೇಜ್ ಏನೆಂದರೆ ಗನ್ನು ಹಿಡ್ಕೊಂಡು ಮರ ಹತ್ತಿ ಕೂರೋದು ಅಷ್ಟೇ. ಇನ್ನು ಹಂದಿ ಬಾರದ ಹಾಗೆ ಮಾಡಲು ಕೆಲವು ಪ್ಲಾನ್ ಗಳಿದ್ದು ಮೇಲಿನ ಮೂರು ಐಡಿಯಾಗಳ ಮೂಲಕ ಬೇಟೆಗಾರರು ಹಂದಿ ಬೋಂಟೆ ಮಾಡುತ್ತಾರೆ. ಆದರಲ್ಲೂ ಪಂಜುರ್ಲಿ ಭೂತದ ಏರಿಯಾಗಳಲ್ಲಿ ಪಂಜಿ ಯಾವ ಕಾರಣಕ್ಕೂ ರಣ ಬೇಟೆಗಾರರ ಯಾವುದೇ ಪ್ಲಾನ್ ಗಳಿಗೂ ಸಿಗಲ್ಲ ಎಂಬ ನಂಬಿಕೆ ಬೇಟೆಗಾರರಲ್ಲಿದೆ.

ಇನ್ನು ಹಂದಿ ಬೇಟೆಗಾರರು ಹೆಚ್ಚಾಗಿ ಉರ್ಲು ಇಟ್ಟೇ ಬೇಟೆಯಾಡುತ್ತಾರೆ. ಉರ್ಲಿಗೆ ಸಿಗದಿದ್ದರೆ ಕರೆಂಟ್. ಇಲ್ಲಿ ಬೇಟೆಗಾರರು ಯಾರ ಜಾಗದಲ್ಲಿ ಆಪರೇಷನ್ ಮಾಡಿದರೋ ಆ ಜಾಗದ ಮಾಲೀಕನಿಗೆ ಮಂಡೆ ಪಾಲು ಕೊಡಲೇ ಬೇಕೆಂಬ ಅಲಿಖಿತ ನಿಯಮ ಇದೆ. ಮಂಡೆ ಪಾಲು ಅಂದರೆ ಮಾಂಸದಲ್ಲಿ ದೊಡ್ಡ ಪಾಲು. ಇನ್ನು ಕಾಡಿನಲ್ಲಿ ಬೋಂಟೆ ನಡೆದರೆ ಬೆಡಿ ಬಿಸಾಡಿದವನಿಗೆ ಮಂಡೆ ಪಾಲು ಕಡ್ಡಾಯ. ಕಾಡು ಪಂಜಿಯ ಹೆಲ್ದಿ ಹೆಲ್ದಿ, ಟೇಸ್ಟಿ ಟೇಸ್ಟಿ ಮಾಂಸಕ್ಕೆ ಊರಲ್ಲಿ ಕೆ.ಜಿಗೆ ಐನೂರರಿಂದ ಏಳುನೂರು ತನಕ ಮಾರ್ಕೆಟ್ ಇದೆ. ಬೀಜೋದ ಗಂಗಸರ ಮತ್ತು ಕಾಡಪಂಜಿ ಮಾಂಸ ಒಳ್ಳೆಯ ಕಾಂಬಿನೇಶನ್ ಅಂತ ಚಪ್ಪರಿಸಿದವರ ಮಾತು. ಎರಡೂ ಕಾನೂನು ಬಾಹಿರ. ಎಸ್ಸೈ ಈರಯ್ಯರಿಗೆ ಗೊತ್ತಾದರೆ ಒದ್ದು ಒಳಗೆ ಹಾಕ್ತಾರೆ ಅಷ್ಟೇ.

ಇನ್ನು ಅಲ್ಲಿ ಕಲ್ಮಡ್ಕದಲ್ಲಿ ಒಬ್ಬ ರಣಬೇಟೆಗಾರ ಇದ್ದಾನೆ. ಹೆಸರು ಎಲ್. ಆರ್ ರಮೇಸೆ. ಒಬ್ಬ ಚಿಲ್ಲರೆ ಬೇಟೆಗಾರ ರಮೇಸನನ್ನು ಬೆಳ್ಳಾರೆ ಪೋಲಿಸರು ಮೊನ್ನೆ ಭಟ್ರ ಜೊತೆ ಬಂದೀಖಾನೆಗೆ ಸೆಂಡ್ ಮಾಡಿದ್ದಾರೆ. ಆದರೆ ಈ ರಣ ಬೇಟೆಗಾರ ಎಲ್.ಆರ್ ರಮೇಸ ಬಾಕಿಯಾಗಿದ್ದಾನೆ. ಕಲ್ಮಡ್ಕದಲ್ಲಿ ರಾತ್ರಿ ಪಾಳಿಯಲ್ಲಿ ಬೇಟೆಯಾಡುವ ರಣ ಬೇಟೆಗಾರ ಇವನು.ಇಡೀ ಕಲ್ಮಡ್ಕದ ಹಂದಿ ಬರುವ ಅಷ್ಟೂ ಗಂಡಿಗಳು, ತೋಡುಗಳು, ಓಣಿ ಒರುಂಕುಗಳ ಬಗ್ಗೆಯೇ ಇವನು ಪಿಎಚ್ಡಿ ಮಾಡಿದ್ದಾನೆ. ಕಳೆದ ವರ್ಷವೊಂದರಲ್ಲೇ ರಮೇಸ ಹದಿಮೂರು ಹಂದಿಗಳನ್ನು ಮಲಗಿಸಿದ್ದಾನೆ ಎಂದು ಮಾಹಿತಿ ಇದೆ. ಒಂದೊಂದು ಹಂದಿಯೂ ಮಿನಿಮಮ್ ಎಪ್ಪತ್ತೈದು ಕೆ.ಜಿ ಇದ್ದರೂ, ಮಂಡೆ ಪಾಲು, ಬೆಡಿ ಪಾಲು ಎಂದು ಇಪ್ಪತ್ತೈದು ಹೋದರೂ ಐವತ್ತು ರಮೇಶನಿಗೆ ಉಳಿದೇ ಉಳಿಯುತ್ತದೆ. ಐವತ್ತು ಇಂಟೂ ಐನೂರು ಆದರೂ ಒಂದು ನೈಟಿನ ಇನ್ ಕಂ ರಮೇಸನ ಪಾಲಿಗೆ ದೊಡ್ಡದೇ. ರಮೇಸನತ್ರ ಮಾಂಸ ಸಾಗಿಸಲು ಕರೆಂಟ್ ರಿಕ್ಷಾ, ಸ್ಕೂಟರ್, ಬೈಕ್ ಮುಂತಾದ ಗಾಡಿಗಳಿವೆ. ಪಂಜ, ಪೆರ್ಲಂಪಾಡಿ ಕಡೆ ರಮೇಸನ ಪಂಜಿ ಮಾರ್ಕೆಟ್ ಇದೆ.

ಹಾಗೆಂದು ಮೊನ್ನೆ ಭಟ್ರ ಮತ್ತು ಬುಕ್ಕೊಂಜಿ ರಮೇಸನ ಕಾರ್ಯಾಚರಣೆಯಲ್ಲಿ ಎರಡು ಬಲಿ ಆಯ್ತಲ್ಲ, ಆ ಆಪರೇಷನ್ ನ ಕಿಂಗ್ ಪಿನ್ ಕೂಡ ಇದೇ ಎಲ್.ಆರ್ ರಮೇಸ ಎಂಬ ಗುಸುಗುಸು ಇದೆ. ಒಳಗೆ ಹೋದ ರಮೇಸ ಮತ್ತು ಹೊರಗೆ ಇರುವ ರಮೇಸ ಇಬ್ಬರೂ ಬೇಟೆಗಾರರೇ. ಆದರೆ ಒಳಗೆ ಹೋದ ರಮೇಸ ಹೊರಗೆ ಇರುವ ರಮೇಸನ ಅಸಿಸ್ಟೆಂಟ್ ಬೇಟೆಗಾರ. ಉರ್ಲು ಎಲ್ಲಿ ಇಡಬೇಕು, ಪಂಜುರ್ಲಿಗೆ ಹೇಗೆ ತಡೆ ಕಟ್ಟಬೇಕು, ಹಂದಿ ಬರುವ ಗಂಡಿಗೆ ವಯರ್ ಹೇಗೆ ಕಟ್ಟಬೇಕು, ಎಲ್ಲಿ ಕಟ್ಟಬೇಕು, ಹೇಗೆ ಕರೆಂಟ್ ಬಿಡಬೇಕು, ಎಲ್ಲಿಂದ ಬಿಡಬೇಕು, ಬರುವ ಹಂದಿಯ ಸೈಜು, ವೈಟಿನ ಅಂದಾಜು ಮಾಡುವುದು, ಬೆಡಿಯವನು ಇದ್ದರೆ ಅವನನ್ನು ಹೇಗೆ, ಎಲ್ಲಿ ನಿಲ್ಲಿಸಬೇಕು, ಮಂಡೆಪಾಲಿನಲ್ಲಿ ಹೇಗೆ ಸ್ವಿಚ್ ಆಫ್ ಮಾಡಬೇಕು ಎಂಬುದರ ಬಗ್ಗೆ ಡಿಸೈಡ್ ಮಾಡೋದು ಇದೇ ಹೊರಗೆ ಇರುವ ರಮೇಸ. ಮೊನ್ನೆ ಭಟ್ರ ತೋಟದಲ್ಲಿ ಕೂಡ ಸ್ಕೆಚ್ ಎಲ್.ಆರ್ ರಮೇಸನದ್ದೇ ಆಗಿತ್ತು. ಆದರೆ ಸ್ಪಾಟಿಗೆ ಮಾತ್ರ ಒಳಗೆ ಹೋದ ರಮೇಸ ಹೋಗಿದ್ದ. ಆತ ಹೋಗಿ ಒಟ್ರಾಸಿ ವಯರ್ ಎಳೆದು, ತೋಡಿಗೆ ಅಡ್ಡವಾಗಿ ಕಟ್ಟಿದ್ದ. ಭಟ್ರು ಬಂದು ಪಂಪು ಶೆಡ್ ಸ್ವಿಚ್ ಹಾಕಿದ್ದರು. ಹಂದಿ ಪುಣ್ಯಕ್ಕೆ ಅವತ್ತು ಹಂದಿ ರಜೆ ಮೇಲಿತ್ತು. ಅಮಾಯಕರಿಬ್ಬರು ಸಿಕ್ಕಿ ಬಿಟ್ಟರು ಅಷ್ಟೇ.
