
ಸಚಿವರೊಬ್ಬರ ಕಾರ್ಯಕ್ರಮದ ಬಗ್ಗೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಪತ್ರಕರ್ತರಿಗೆ ಯಾವುದೇ ಮಾಹಿತಿ ನೀಡದ ಬಗ್ಗೆ ಇದೀಗ ಆಡಳಿತ ವಿರುದ್ಧ ಪತ್ರಕರ್ತರು ಅಸಮಾಧಾನ ಹೊರ ಹಾಕಿದ್ದಾರೆ. ಪ್ರೈವೇಟ್ ಪ್ರೋಗ್ರಾಂ ಅಲ್ಲ, ಸಚಿವರು ಪ್ರೈವೇಟ್ ಜನವೂ ಅಲ್ಲ, ಪ್ರೈವೇಟ್ ದೇವಸ್ಥಾನವೂ ಅಲ್ಲ. ಮತ್ತೇನು ಹೇಳಿಕ್ಕೆ? ವೆಂಕು ಪಣಂಬೂರಿಗೆ ಬಂದದ್ದಾ? ಬಂದ ಪುಟ್ಟ, ಹೋದ ಪುಟ್ಟ ಪ್ರೋಗ್ರಾಮಾ?
ಕೃಷಿ ಸಚಿವ ನರೇಂದ್ರ ಸ್ವಾಮಿ ಪ್ರೋಗ್ರಾಂ ಇತ್ತು ಇವತ್ತು ಸುಬ್ರಹ್ಮಣ್ಯಕ್ಕೆ. ಸಚಿವರದ್ದು ಆಶ್ಲೇಷ ಬಲಿ ಪೂಜೆ ಇತ್ತು ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ. ಬೆಳಿಗ್ಗೆ ಬಂದಿದ್ದರು. ಸಚಿವರಿಗೆ ಭದ್ರತೆ ಇತ್ತು, ಪ್ರೊಟೋಕಾಲ್ ಇತ್ತು, ದೇವಸ್ಥಾನದ ವತಿಯಿಂದ ಎಲ್ಲಾ ಗೌರವಗಳೊಂದಿಗೆ ಸ್ವಾಗತಿಸಲಾಯಿತು, ಬೀಳ್ಕೊಡುಗೆ ಮಾಡಲಾಯಿತು. ಬಂದ ಪುಟ್ಟ ಹೋದ ಪುಟ್ಟ. ಆದರೆ ಸಚಿವರ ಸುಬ್ರಹ್ಮಣ್ಯದ ಕಾರ್ಯಕ್ರಮ ದೊಡ್ಡ ಸುದ್ದಿ ಆಗಲೇ ಇಲ್ಲ. ಯಾಕೆಂದರೆ ಪ್ರೋಗ್ರಾಂ ಬಗ್ಗೆ ಸುಬ್ರಹ್ಮಣ್ಯದ ಲೋಕಲ್ ಪತ್ರಕರ್ತರಿಗೆ ದೇವಸ್ಥಾನದ ಕಡೆಯಿಂದ ಮಾಹಿತಿಯೇ ಇರಲಿಲ್ಲ. ಯಾಕೆ?
ಈ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡದೆ ಪತ್ರಕರ್ತರನ್ನು ಯಾಕೆ ಸುತಗುಂಡಿಗೆ ಹಾಕಿದ್ದೀರಿ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಲ್ಲಿ ಕೇಳಿದರೆ “ಸಚಿವರೇ ಹೇಳಿದ್ದಾರೆ, ಫೋಟೋ ಬೇಡ, ಯಾರಿಗೂ ಮಾಹಿತಿ ಬೇಡ” ಎಂದು ಮೊದಲೇ ತಿಳಿಸಿದ್ದರು ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುಬ್ರಹ್ಮಣ್ಯದಲ್ಲಿ ಗಣ್ಯರ ಭೇಟಿ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತರಿಗೆ ಮಾಹಿತಿ ನೀಡದಿರುವ ಘಟನೆಗಳು ಮುಂದುವರೆದಿದೆ. ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕುಕ್ಕೆಗೆ ಗಣ್ಯರ ಭೇಟಿ ಹಾಗೂ ಪ್ರಮುಖ ಕಾರ್ಯಕ್ರಮಗಳ ಕುರಿತು ಸ್ಥಳೀಯ ಪತ್ರಕರ್ತರಿಗೆ ಕೈ ಕಾಣಿಕೆ ಹೇಳಿಕೆ ಬೇಡ, ಬಚ್ಚಿರೆ ಬಜ್ಜೆಯಿ ಹೇಳಿಕೆಯೂ ಬೇಡ. ಕಡೇ ಪಕ್ಷ ಒಂದು ಫೋನ್ ಮಾಡಿ ಕರಿಲಿಕ್ಕೆ ಏನು ಅಷ್ಟೊಂದು ಉದಾಸೀನ? ಅದರಲ್ಲೂ ಇವತ್ತು ಬಂದಿದ್ದು ಕೃಷಿ ಸಚಿವರು. ಇಲ್ಲಿ ಅಡಿಕೆಗೆ ಶನಿ ಸಂಕಟ ಹಿಡಿದಿದೆ, ಬೆಳೆ ವಿಮೆ ಕಡಿಮೆ ಆಗಿದೆ, ಸಹಕಾರಿ ಸಂಘಗಳ ಜೀರೋ ಪರ್ಸೆಂಟ್ ಸಾಲ ಏರಿಕೆ ಇಲ್ಲ, ಹೀಗೆ ಸಚಿವರ ಜೊತೆ ತುಂಬಾ ಪಟ್ಟಾಂಗ ಹೊಡೀಲಿಕ್ಕೆ ಇತ್ತು. ಛೇ… ಬಂದಿದ್ದು ಗೊತ್ತೇ ಆಗ್ಲಿಲ್ಲ ಅಂತ ಪತ್ರಕರ್ತರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.