ಉಪ್ಪಿನಂಗಡಿ: ವಳಾಲು - ಮುಗೇರಡ್ಕ ಅಕ್ರಮ ಮರಳುಗಾರಿಕೆ ವಿರುದ್ಧ ಲೋಕಾಯುಕ್ತರಿಗೆ ದೂರು. (ಪುತ್ತೂರಿನ ಕೋರ್ಟ್ ನಿರ್ಮಾಣಕ್ಕೆ ಎಂದು ಕಳ್ಳರ ಪಿಳ್ಳೆ ನೆವ)
ಅಲ್ಲಿ ಪುತ್ತೂರು ತಾಲೂಕು ಆಡಳಿತಕ್ಕೆ ಒಳಪಟ್ಟ, ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ, ವಳಾಲು, ಮುಗೇರಡ್ಕ, ಮಠದ ನೇತ್ರಾವತಿ ನದಿ ತೀರದಲ್ಲಿ ಅಕ್ರಮವಾಗಿ, ನಿರಂತರವಾಗಿ, ರಾಜಾರೋಷವಾಗಿ ಮರಳುಗಾರಿಕೆ ನಡೆಯುತ್ತಿದ್ದರೂ, ಈ ಬಗ್ಗೆ ಪತ್ರಿಕೆಗಳು, ಜಾಲತಾಣಗಳು ಸುದ್ದಿ ವೈರಲ್ ಮಾಡಿದರೂ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ಶಿಖಂಡಿ ವರ್ತನೆ ತೋರಿದ ಕಾರಣ ಇದೀಗ ಈ ಒಂದು ಅಕ್ರಮ ವಹಿವಾಟಿನ ಬಗ್ಗೆ ಲೋಕಾಯುಕ್ತರ ಟೇಬಲ್ ಗೆ ದೂರು ಹೋಗಿದೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಕಲೆಕ್ಟರನ ಟೇಬಲಿಗೂ ಒಂದು ಪ್ರತಿ ದೂರು ಸಲ್ಲಿಸಲಾಗಿದೆ.
ಅಲ್ಲಿ ನೇತ್ರಾವತಿ ತೀರದ ವಳಾಲು ಮತ್ತು ಮುಗೇರಡ್ಕಗಳಲ್ಲಿ ಯಾವುದೇ ಪರ್ಮಿಶನ್ ಇಲ್ಲದೆ, ಗಣಿ ಇಲಾಖೆಯ ಅಧಿಕಾರಿಗಳಿಗೆ ಪಾರ್ಲೆ ಜಿ ಬಿಸಾಡಿ ನಿರಂತರವಾಗಿ ದೊಡ್ಡ ಮಟ್ಟದಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದೆ. ಈ ಅಡ್ಡೆಯಲ್ಲಿ ಮರಳು ಕ್ಲೀನಿಂಗ್ ಕೂಡ ನಡೆಸಲಾಗುತ್ತಿದ್ದು ಇದು ಕೂಡ ಡಬ್ಬಲ್ ಕಾನೂನು ಬಾಹಿರವೇ. ದಿನ ನಿತ್ಯ ನೂರಾರು ಟಿಪ್ಪರ್ ಗಳು, ಲಾರಿಗಳನ್ನು ಬಳಸಿ ಇಲ್ಲಿಂದ ಮರಳು ಸಾಗಿಸಲಾಗುತ್ತಿದೆ. ಹಿಟಾಚಿಗಳು, ಜೆಸಿಬಿಗಳನ್ನು ಬಳಸಿ ಮರಳು ತೆಗೆದು, ಬಗೆದು ನೇತ್ರಾವತಿಯನ್ನು ಬರಿದು ಮಾಡಲಾಗುತ್ತಿದೆ. ತಾಲೂಕು ಆಡಳಿತವನ್ನು ಕ್ಯಾರೇ ಅನ್ನದೆ ಈ ವಹಿವಾಟು ನಡೆಯುತ್ತಿದೆ. ಯಾವುದೇ ಕಾಗದ ಪತ್ರಗಳು ಇಲ್ಲದೆ, ನೇತ್ರಾವತಿಯನ್ನು ಡ್ಯಾಡೀಸ್ ಪ್ರಾಪರ್ಟಿ ಎಂದು ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಂಡಿರುವ ಒಂದು ಕಳ್ಳಕಾಕರ ಗ್ಯಾಂಗ್ ಇದರ ಹಿಂದೆ ಕೆಲಸ ಮಾಡುತ್ತಿದ್ದು ರೌಡಿಸಂ, ಪೊಲಿಟಿಕಲ್ ಪವರ್ ಮತ್ತು ದೊಡ್ಡ ದುಡ್ಡು ಬಳಸಿ ಈ ವಹಿವಾಟು ನಡೆಸಲಾಗುತ್ತಿದೆ. ಇದೀಗ ಈ ಒಂದು ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರಿಗೆ ದೂರು ಕೊಡಲಾಗಿದೆ. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಕಲೆಕ್ಟರನಿಗೂ ದೂರಾಗಿದ್ದು ಅವರು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡ ಬೇಕಾಗಿದೆ.
ಒಂದು ಅಕ್ರಮ ಗಣಿಗಾರಿಕೆ ಬಗ್ಗೆ ಊರಿಡೀ ಡಂಗುರ ಸಾರಿದರೂ ಅದಕ್ಕೆ ಸಂಬಂಧಪಟ್ಟ ಗಣಿ ಇಲಾಖೆಗೆ ಬಾರಿ ಬಾರಿ ದೂರು ಕೊಟ್ಟರೂ, ಕಾಲ್ ಮಾಡಿ ಹೇಳಿದರೂ, ತಳ್ಳಿ ಅರ್ಜಿಗಳ ಸುರಿಮಳೆ ಸುರಿಸಿದರೂ ಗಣಿ ಇಲಾಖೆ ಪೊಟ್ಟರಂತೆ,ಕೆಪ್ಪರಂತೆ ವರ್ತಿಸಿದ್ದು ಮಾತ್ರ ದುರದೃಷ್ಟಕರ. ಲಕ್ಷಗಟ್ಟಲೆ ಇಲಾಖೆಗೆ ಕಟ್ಟಿ ಪರ್ಮಿಟ್ ತೆಗೆದು ಮರಳು ತೆಗೆಯುವ ಮಂದಿಗೆ ದಿನಕ್ಕೊಂದು, ಗಂಟೆಗೊಂದು ಅಂಡಿಗುಂಡಿ ಕಾನೂನು ಮಾಡುವ ಗಣಿ ಇಲಾಖೆ, ಅಂಥಹ ಅಧಿಕೃತ ಮರಳುಗಾರಿಕೆಯ ಅಡ್ಡೆಗಳ ಮೇಲೆ ಹದ್ದಿನ ಕಣ್ಣಿಡುವ ಇಲಾಖೆ ಅದೇ ಯಾವುದೇ ಪರ್ಮಿಶನ್ ಇಲ್ಲದೆ ನಡೆಯುವ ಕಳ್ಳಕಾಕರ ಅಕ್ರಮ ಮರಳುಗಾರಿಕೆ ವಿರುದ್ಧ ಯಾವುದೇ ಗಣಿ ಕಾನೂನು ಜಾರಿ ಮಾಡುವುದೇ ಇಲ್ಲ. ವಳಾಲು ಮತ್ತು ಮುಗೇರಡ್ಕದ ಅಕ್ರಮ ಮರಳುಗಾರಿಕೆಯಲ್ಲಿ ಗಣಿ ಅಧಿಕಾರಿಗಳೂ ಪಾಲುದಾರರು ಎಂಬ ಮಾಹಿತಿ ಇದೆ. ಇಂತಹ ಅಕ್ರಮ ಮರಳುಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಲೆಕ್ಕದಲ್ಲಿ ಲಾಸ್ ಆಗುತ್ತಿದ್ದರೂ ಗಣಿ ಅಧಿಕಾರಿಗಳು ಮಾತ್ರ ತಮ್ಮ ಶೇರ್ ತಗೊಂಡು ಹಾಯಾಗಿದ್ದಾರೆ. ಗಣಿ ಇಲಾಖೆ ಮುಂದೆ ಮರಳು ತೆಗೆಯುವ ಪರ್ಮಿಶನ್ ಗೆ ಬರುವ ಅಮಾಯಕರನ್ನು ಆ ರೂಲ್ಸ್ ಈ ರೂಲ್ಸ್ ಎಂದು ನಟ್ಟ ತಿರ್ಗಿಸಿ ಬಿಡುವ ಅಧಿಕಾರಿಗಳು ಕಳ್ಳಕಾಕರಿಗೆ ಮಾತ್ರ ಯಾವುದೇ ರೂಲ್ಸ್ ಹೇಳುವುದೇ ಇಲ್ಲ. ಗಣಿ ಅಧಿಕಾರಿಗಳು ಮತ್ತು ಕಳ್ಳಕಾಕರು ಒಂದು ರೀತಿಯಲ್ಲಿ ಕಸಿನ್ ಬ್ರದರ್ಸ್ ಇದ್ದ ಹಾಗೆ.
ಆಯಿತು, ಗಣಿ ಇಲಾಖೆಯವರು ವಳಾಲು ಮತ್ತು ಮುಗೇರಡ್ಕದ ಅಕ್ರಮ ಮರಳುಗಾರಿಕೆಯಲ್ಲಿ ಪಾಲುದಾರರು ಎಂದೇ ಇಟ್ಟುಕೊಳ್ಳೋಣ ಸಾರ್ವಜನಿಕರು ಉಪ್ಪಿನಂಗಡಿ ಪೋಲಿಸರಿಗೆ ಕೂಡ ಬೇಸಿಗೆ ಶುರುವಿನಿಂದಲೇ ಮಾಹಿತಿ ಕೊಟ್ಟಿದ್ದರು. ಆದರೆ ಉಪ್ಪಿನಂಗಡಿ ಪೊಲೀಸರು ಮಾತಿನಲ್ಲಿ ಮಂಜುನಾಥ ದುಡ್ಡಿನಲ್ಲಿ ತಿಮ್ಮಪ್ಪ. ಅಕ್ರಮ ಮರಳುಗಾರಿಕೆ ಬಗ್ಗೆ ದೂರು ಬಂದಾಗ ಪೋಲಿಸರು ಓ... ಎಂದು ಗುಳಿಗ್ಗ ಬೊಬ್ಬೆ ಹೊಡೆದರು. ಅರ್ಥ ಮಾಡಿಕ್ಕೊಂಡ ಅಕ್ರಮ ಮರಳುಗಾರಿಕೆಯ ಕಳ್ಳಕಾಕರು ಉಪ್ಪಿನಂಗಡಿ ಪೋಲಿಸರಿಗೆ ಡಾರ್ಕ್ ಫೇಂಟಸಿ ಕೊಟ್ಟು ಸಮಾಧಾನ ಮಾಡಿದರು. ಇನ್ನು ಸ್ಥಳೀಯ ವಿ.ಎ, ಪಿ.ಡಿ.ಒ ಮುಂತಾದ ಸಹಭೂತಗಳಿಗೆ ಕೋಳಿ ಮಂಡೆ ಕೊಡಲಾಯಿತು. ಪುತ್ತೂರು ತಾಲೂಕು ಆಡಳಿತ ಸ್ಪಾಟಿಗೆ ಬರಲೇ ಇಲ್ಲ. ಇದೀಗ ಸ್ಥಳೀಯ ಪಂಚಾಯತ್ ಅಧ್ಯಕ್ಷರೊಬ್ಬರು ಲೋಕಾಯುಕ್ತ ಮತ್ತು ಜಿಲ್ಲಾ ಕಲೆಕ್ಟರನಿಗೆ ದೂರು ಕೊಟ್ಟಿದ್ದು action ಆಗುತ್ತಾ ಎಂಬುದು ದೇವರಿಗೇ ಗೊತ್ತು. ಆದರೆ ಲೋಕಾಯುಕ್ತರಿಗೆ ಕಂಪ್ಲೈಂಟ್ ಆಗಿದೆ ಎಂದು ಗೊತ್ತಾಗುತ್ತಲೇ ನೇತ್ರಾವತಿಯ ಎರಡೂ ದಡಗಳಿಂದ ಎಲ್ಲಾ ಜೆಸಿಬಿ, ಹಿಟಾಚಿ, ಟಿಪ್ಪರ್ ಗಳನ್ನ ಸ್ಥಳಾಂತರ ಮಾಡಲಾಗಿ ಸೈಟ್ ಕ್ಲೀನ್ ಮಾಡಲಾಗಿದೆ.
ಈ ಅಕ್ರಮ ಮರಳುಗಾರಿಕೆ ಬಗ್ಗೆ ಇನ್ನೊಂದು ದೂರು ಏನೆಂದರೆ ಪುತ್ತೂರಿನ ಆನೆಮಜಲಿನಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ ಈ ಮರಳು ತೆಗೆಯಲಾಗುತ್ತಿದೆ ಎಂದು ಸುಳ್ಳು ನೆಪ ಹೇಳಿ ಇಲಾಖೆಗಳನ್ನು ಹೆದರಿಸಲಾಗಿತ್ತು ಎಂದು ತಿಳಿದುಬಂದಿದೆ. ನ್ಯಾಯಾಲಯ ನಿರ್ಮಾಣದ ಹೊಣೆ ಹೊತ್ತಿರುವ ಪಿಡಬ್ಲ್ಯೂಡಿ ಈ ಬಗ್ಗೆ ಸಾ....ಸೂ....ಅನ್ನದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪಿಡಬ್ಲ್ಯೂಡಿ ಅಧಿಕಾರಿಗಳಿಗೂ ಪಾರ್ಲೆ ಜಿ ಬಿಸಾಡಿರುವ ಸಂಶಯಗಳಿವೆ. ಇಲ್ಲಿ ಇಂತಹ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳುಗಾರಿಕೆ ನಡೆದರೂ ಯಾವುದೇ ಇಲಾಖೆ ಅಕ್ರಮದ ಬಗ್ಗೆ ಕಾನೂನು ಕ್ರಮ ಜರುಗಿಸಿಲ್ಲ ಅಂದರೆ ಇನ್ನು ಮರಳುಗಾರಿಕೆಗೆ ಅಧಿಕೃತ ಪರ್ಮಿಶನ್ ತೆಗೆಯುವುದಾದರೂ ಯಾಕೆ ಎಂಬ ಪ್ರಶ್ನೆ ಬರುತ್ತದೆ. ಅಧಿಕೃತವಾಗಿ ಕೆಲಸ ಮಾಡಲು ಸರಕಾರದ ಅಂಡಿಗುಂಡಿ ರೂಲ್ಸ್ ಅಡ್ಡ ಬರುವುದಾದರೆ, ಅಕ್ರಮಗಳು ಸಲೀಸಾಗಿ, ರಾಜಾರೋಷವಾಗಿ ನಡೆಯುವುದಾದರೆ ಇಲಾಖೆಗಳೇ ಕಳ್ಳರ ಗುರುಕುಲ ಆಗುವುದರಲ್ಲಿ ಸಂಶಯವೇ ಇಲ್ಲ. ಲೋಕಾಯುಕ್ತದ ನಾನ್ ಕರಫ್ಟ್ ಅಧಿಕಾರಿ ಗಾನ ಮ್ಯಾಡಂ ಒಂದು ಭಾರಿ ವಳಾಲಿಗೆ ಬಂದರೂ ಸಾಕು ಬೇಟೆ ಸಿಕ್ಕಿ ಬಿಡುತ್ತದೆ.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
