
ಸುಳ್ಯ ತಾಲೂಕು ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನದಲ್ಲಿ ಇತ್ತೀಚೆಗೆ ನವರಾತ್ರಿ ಉತ್ಸವಗಳು ಬಹಳ ವಿಜೃಂಭಣೆಯಿಂದ ನಡೆದಿದ್ದು, ಊರ ಪರವೂರ ಸಾವಿರಾರು ಭಕ್ತಾಧಿಗಳು ಆಗಮಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಿ ಪುನೀತರಾಗಿದ್ದಾರೆ. ದೇವಸ್ಥಾನದಲ್ಲಿ ಈ ವರ್ಷದಿಂದ ಶುರುವಾದ ಹರಿವಾಣ ಸೇವೆ ಮತ್ತು ದೊಡ್ಡ ಲಡ್ಡು ಸೇವೆ ಭಕ್ತಾದಿಗಳ ಇಷ್ಟಾರ್ಥಗಳನ್ನು ಪೂರೈಸುವ ಸೇವೆ ಎಂದು ಜನರು ನಂಬಿದ್ದಾರೆ. ಇದೀಗ ಪೆರುವಾಜೆ ದೇವಸ್ಥಾನ ಆಡಳಿತ ಮಂಡಳಿ ನವರಾತ್ರಿ ದಿನಗಳಲ್ಲಿ ಮತ್ತೊಂದು ವಿಶೇಷ ಕೆಲಸ ಶುರು ಮಾಡಿದ್ದು ಈ ಸೇವೆಗೆ ದೇವಿಯ ಪರಮ ಭಕ್ತರ ಆನಂದ ಭಾಷ್ಪದ ಪ್ರತಿಕ್ರಿಯೆಗೆ ಖುದ್ದು ಆಡಳಿತ ಮಂಡಳಿಯೇ ಪುಳಕಿತಗೊಂಡಿದೆ.
ಹಾಗೆಂದು ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನ ಇಪ್ಪತ್ತೊಂದು ಗ್ರಾಮಗಳ ಒಂದು ಮಾಗಣೆ ದೇವಸ್ಥಾನ. ಪೆರುವಾಜೆ ಗ್ರಾಮದ ಕೇಂದ್ರ ಭಾಗದಲ್ಲಿ ಈ ದೇವಿ ದೇವಸ್ಥಾನ ಇದ್ದು ಶತಮಾನಗಳ ಹಿಂದಿನಿಂದಲೇ ಪೆರುವಾಜೆ ಗುತ್ತು ಮನೆತನ ಈ ದೇವಸ್ಥಾನದ ಒಂದನೇ ಮನೆಯಾಗಿತ್ತು. ಇದೀಗ ಪೆರುವಾಜೆ ಗುತ್ತು ಮನೆತನದ ಸುನಿಲ್ ಕುಮಾರ್ ರೈ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದು ದೇವಸ್ಥಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಹಾಗೆಂದು ಈ ಸಲದ ನವರಾತ್ರಿ ಉತ್ಸವಗಳು ಕೂಡ ಮೊನ್ನೆ ತಾನೆ ಬಹಳ ವಿಜೃಂಭಣೆಯಿಂದ ನಡೆದಿದೆ. ಆದರೆ ಎಲ್ಲಾ ವಿಜೃಂಭಣೆಗಳ ನಡುವೆ ಆಡಳಿತ ಮಂಡಳಿ ತೆಗೆದು ಕೊಂಡ ಒಂದು ನಿರ್ಧಾರಕ್ಕೆ ಇಡೀ ಭಕ್ತ ಸಮೂಹವೇ ಆನಂದ ಭಾಷ್ಪ ಸುರಿಸಿದೆ. ಅದು ಅನ್ನ ಪ್ರಸಾದ. ಮಾಮೂಲಾಗಿ ಯಾವುದೇ ದೇವಸ್ಥಾನದಲ್ಲಿ ಅನ್ನ ಪ್ರಸಾದ ದೇವರಿಗೆ ಮಹಾಪೂಜೆ ನಡೆದ ನಂತರ ದೇವಸ್ಥಾನದಲ್ಲೇ ಕೊಡಲಾಗುತ್ತದೆ. ಇದು ಶತಮಾನಗಳಿಂದ ನಡೆದು ಬಂದ ರೂಢಿ, ನಮ್ಮ ಸಂಪ್ರದಾಯ. ಆದರೆ ಪೆರುವಾಜೆ ದೇವಸ್ಥಾನದ ಆಡಳಿತ ಮಂಡಳಿ ಈ ಸಲ ಒಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ದೇವಸ್ಥಾನದಲ್ಲಿ ಹೇಗೂ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಪ್ರಸಾದ ಕೊಡುವ ಜೊತೆ ಜೊತೆಗೆ ಆಡಳಿತ ಮಂಡಳಿ ಈ ಸಲ ಒಂದು ಹೊಸ ಪ್ರಯೋಗ ಮಾಡಿತು. ದೇವಸ್ಥಾನದ ಯಾವುದೇ ಕಾರ್ಯಕ್ರಮಗಳಿಗೆ ಬರಲಾಗದ ಅಶಕ್ತರ, ಹಿರಿಯರ, ವಿಕಲ ಚೇತನರ, ಅಂಗವಿಕಲರ ಒಂದು ಪಟ್ಟಿ ರೆಡಿ ಮಾಡಿತು. ಆ ಪಟ್ಟಿಯಲ್ಲಿ ಈ ಹಿಂದೆ ದೇವಿಯ ಪರಮ ಭಕ್ತರಾಗಿದ್ದು ಈಗ ದೇವಸ್ಥಾನಕ್ಕೆ ಬರಲು ಅಶಕ್ತರಾಗಿದ್ದವರು, ಮನೆಯಲ್ಲೇ ನಡೆದಾಡಲು ಪರದಾಡುವ ಹಿರಿಯರು, ವಿಕಲ ಚೇತನರು, ಅಂಗ ವಿಕಲರು, ದೃಷ್ಟಿ ಹೀನರು ಹೀಗೆ ಸಮಾಜದ ಕಟ್ಟ ಕಡೇಯ ಅಶಕ್ತನ ಹೆಸರನ್ನು ಕೂಡ ಸೇರಿಸಿ ಆ ಪಟ್ಟಿಯನ್ನು ಕೊಂಡೋಗಿ ನಳ ಪಾಕದ ಅಡುಗೆ ಭಟ್ರ ಕೈಯಲ್ಲಿ ಕೊಡಲಾಯಿತು ಮತ್ತು ಜೊತೆಗೆ ಎರಡು ಟಿಫಿನ್ ಕ್ಯಾರಿಯರ್ ಸಹ. “ಅಲ್ಲಿ ದೇವಿಗೆ ಮಹಾಪೂಜೆ ಮುಗಿದ ಕೂಡಲೇ ಅನ್ನ ಪ್ರಸಾದ ಶುರುವಾಗುವ ಮೊದಲು ಈ ಎರಡು ಟಿಫಿನ್ ಕ್ಯಾರಿಯರ್ ಗಳಿಗೆ ಇವತ್ತು ದೇವಸ್ಥಾನದಲ್ಲಿ ಅನ್ನ ಪ್ರಸಾದಕ್ಕೆ ಇರುವ ಎಲ್ಲಾ ಬೆಚ್ಚ ಬೆಚ್ಚ ಐಟಂಗಳನ್ನು ಹಾಕಿಡ ಬೇಕು” ಎಂದು ಆಡಳಿತ ಮಂಡಳಿ ಸೂಚನೆ ಕೊಟ್ಟಿತ್ತು. ಹಾಗೆ ಭರ್ತಿಯಾದ ಎರಡು ಟಿಫಿನ್ ಕ್ಯಾರಿಯರ್ ಗಳು ಸೀದಾ ಹೋಗಿದ್ದು ಅದೇ ಮೊದಲು ಆಡಳಿತ ಮಂಡಳಿ ಕೈಯಲ್ಲಿದ್ದ ಲಿಸ್ಟ್ ನಲ್ಲಿ ಹೆಸರಿದ್ದವರ ಮನೆಗೆ. ಅಶಕ್ತರು, ಹಿರಿಯರು, ಅಂಗ ವಿಕಲರು ದೇವಸ್ಥಾನದ ಈ ಒಂದು ನಡೆಯಿಂದ ಹಿರಿಹಿರಿ ಹಿಗ್ಗಿದರು, ಹರ್ಷಗೊಂಡರು, ಪುಳಕಿತರಾದರು, ಕಣ್ಣೀರು ಸುರಿಸಿದರು, ಆನಂದ ಭಾಷ್ಪದ ಸುರಿಮಳೆಯೇ ಸುರಿಸಿದರು. ಖುದ್ದು ಸಾಕ್ಷಾತ್ ಜಲದುರ್ಗಿಯೇ ನಮಗೆ ಅನ್ನ ಪ್ರಸಾದ ಕಳಿಸಿದ್ದಾಳೆಂದು ಖುಷಿಗೊಂಡ ಅಶಕ್ತ ಭಕ್ತರು ಅನ್ನ ಪ್ರಸಾದಕ್ಕೆ ಕೈಮುಗಿದರು, ಅಡ್ಡ ಬಿದ್ದರು, ಸಾಷ್ಟಾಂಗ ಮುಗಿಸಿದರು, ದೀಪ ಹೊತ್ತಿಸಿದರು,ಪ್ರಥಮ ತುತ್ತನ್ನು ಕಣ್ಣಿಗೆ ಒತ್ತಿಕೊಂಡರು. ಅಮ್ಮ ಕಳಿಸಿದ್ದ ಬಿಸಿ ಬಿಸಿ, ರುಚಿ ರುಚಿಯಾದ ಅನ್ನ ಪ್ರಸಾದ ಸ್ವೀಕರಿಸಿದ ಅಶಕ್ತ ಭಕ್ತ ಟಿಫಿನ್ ಕ್ಯಾರಿಯರ್ ಜೊತೆಗೆ ದೇವಿಗೆ ತನ್ನಿಂದಾದ ಕಾಣಿಕೆ ಕಳಿಸಿ ಪುನೀತನಾಗಿದ್ದ.

ಸುನಿಲ್ ಕುಮಾರ್ ರೈ, ಅಧ್ಯಕ್ಷರು ಆಡಳಿತ ಮಂಡಳಿ
ಇದೊಂದು ಒಳ್ಳೆಯ ಬೆಳವಣಿಗೆ. ಇದು ಅಶಕ್ತ ಭಕ್ತರು ಮತ್ತು ದೇವರ ನಡುವೆ ಮತ್ತೇ ಬೆಸೆದ ಕೊಂಡಿಯಾಗಿದೆ. ಸಮಾಜದಿಂದ, ವ್ಯವಸ್ಥೆಯಿಂದ ರಿಟೈರ್ಡ್ ಆದವರ ಮನೆಗೆ ಅನ್ನ ಪ್ರಸಾದ ಕಳಿಸಿ ಆ ಮೂಲಕ ಅವರನ್ನು ಮಾನಸಿಕವಾಗಿ ಮತ್ತೇ ಭರವಸೆಗಳ ಹೈವೇಗೆ ಎಳೆದು ತಂದಿದ್ದು ಶ್ಲಾಘನೀಯ. ಬದುಕಿನ ಮುಸ್ಸಂಜೆಯಲ್ಲಿ, ಅನಿರೀಕ್ಷಿತ ಕತ್ತಲೆಯಲ್ಲಿ ದೇವರ ಜೊತೆಗಿನ ನೆನಪುಗಳ ಟಿಫಿನ್ ಕ್ಯಾರಿಯರ್ ಮನೆಗೇ ಬಂದಿದ್ದು, ಅದನ್ನು ಖುದ್ದು ಅಮ್ಮನೇ ಕಳಿಸಿದ್ದು ನಿಜಕ್ಕೂ ಆನಂದಭಾಷ್ಪ ಸುರಿಯುವಂತಹ ವಿಷಯವೇ. ದೇವಿ ಸನ್ನಿಧಿಯಿಂದ ತನಗಾಗಿ ಅಮ್ಮ ಅನ್ನ ಪ್ರಸಾದ ಕಳಿಸಿದ್ದಾಳೆ ಎಂದರೆ ಯಾವ ಭಕ್ತನಿನಾದರೂ ಖುಷಿ ಪಡುವಂತಹ ವಿಷಯವೇ.
