
ಕಡಬ ಕಾಡಿನಲ್ಲಿ ಕಾಟಿ ಬೇಟೆಯಾಡಿದ ಕೇಸಿನಲ್ಲಿ ಎಲ್ಲಾ ಕಾಟಿ ಕಿಲ್ಲರ್ಸ್ ಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದ್ದು, ಒಟ್ಟು ಕಡಬ ಕಾಡಿನಲ್ಲಿ ಆಲ್ ಇಂಡಿಯಾ ಪರ್ಮಿಟ್ ನಲ್ಲಿದ್ದ ಹನ್ನೆರಡು ಕಾಟಿಗಳಲ್ಲಿ ಉಳಿದ ಏಳನ್ನು ಯಾವಾಗ ಢಂ ಮಾಡುತ್ತಾರೆ ಎಂದು ಕಾದು ಕೂರಬೇಕಾಗಿದೆ. ಬೇಟೆಯೇ ಅವರ ಜೀವನ, ಹಾಬೀ, ಫ್ಯಾಷನ್.
ಹಾಗೆ ನೋಡಿದರೆ ಕಡಬ ಸೈಡ್ ಸ್ವಲ್ಪ ಬೇಟೆಗಾರರ ಸಂಖ್ಯೆ ಜಾಸ್ತಿಯೇ ಇದೆ. ಕಡಬ ತುಂಬಾ ಕಾಡು, ಕಾಡು ತುಂಬಾ ಪ್ರಾಣಿಗಳು ಇಲ್ಲಿನ ಬೇಟೆಗಾರರಿಗೆ ವರದಾನವಾಗಿದೆ. ಕಾಡು ಇಲ್ಲಿನ ಬೇಟೆಗಾರರಿಗೆ ಕಾಮಧೇನು ಇದ್ದ ಹಾಗೆ, ಎಟಿಎಂ ಇದ್ದ ಹಾಗೆ. ಬೇಟೆಗಾರರಿಗೆ ಬಾಯಿ ಚಪ್ಪೆ ಚಪ್ಪೆ ಆದರೆ ಸಾಕು ಢಂ ಢಂ ಮಾಡಿಯೇ ಬಿಡುತ್ತಾರೆ. ಆಯ್ತು ತುಂಬಾ ಸಲ ಈ ಬೇಟೆಗಾರರ ಬೆಂಡ್ ತೆಗೆದಾಯ್ತು, ಏರೋಪ್ಲೇನ್ ಹತ್ತಿಸಿ ಆಯ್ತು. ಆದರೆ ಹುಟ್ಟು ಗುಣ ಶಿರಾಡಿ ಹತ್ತಿದರೂ ಬಿಡಲ್ಲ.
ಓ ಮೊನ್ನೆ ಕಳೆದ ತಿಂಗಳು ಜನವರಿ 24ರಂದು ಐತ್ತೂರು ಗ್ರಾಮದ ಓಟೆಕಜೆ ಸಮೀಪದ ಅರ್ಬಿ ತೋಡಿಂದ ಬಂದ ಢಂ ಶಬ್ದ ಸುಬ್ರಹ್ಮಣ್ಯ ಸರಹದ್ದಿನ ಅರಣ್ಯ ಇಲಾಖೆ ಆಫೀಸಿಗೂ ಕೇಳಿಸಿದೆ. ಹುಡುಕುತ್ತಾ, ಹುಡುಕುತ್ತಾ ಬಂದ ಅರಣ್ಯ ಇಲಾಖೆ ಜನವರಿ 25ರಂದು ಐತೂರು ಗ್ರಾಮದ ಓಟೆಕಜೆಯ ಅರ್ಬಿತೋಡಿಗೆ ಬಂದಿದೆ. ಅಲ್ಲಿ ಅರ್ಬಿತೋಡಿನಲ್ಲಿ ಒಂದು ದೊಡ್ಡ ಕಾಟಿಯನ್ನು ಕಸಾಯಿಗಳು ಕಸಾಯಿ ಮಾಡಿ ಮಾಂಸ ಮಾಡುತ್ತಿದ್ದ ದೃಶ್ಯ ಅರಣ್ಯ ಇಲಾಖೆಯವರ ಕಣ್ಣಿಗೆ ಬಿದ್ದಿದೆ. ಕೂಡಲೇ ರೌಂಡಪ್ಪಾದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪೊಸಿಷನ್ ತಗೊಳ್ತಿದ್ದಂತೆ ಕಸಾಯಿಗಳು ವಿಷಯ ಗೊತ್ತಾಗಿ ಪರಾರಿಯಾಗಿದ್ದಾರೆ. ಸ್ಪಾಟಲ್ಲಿ ಅಂದಾಜು ಎಂಟು ಕ್ವಿಂಟಾಲ್ ಕಾಟಿ ಮಾಂಸ ದೊರೆತ್ತಿದ್ದು ಕಸಾಯಿ ಮಾಡಲು ಉಪಯೋಗಿಸುತ್ತಿದ್ದ ಅತ್ಯಾರ್ ಗಳನ್ನು ಮತ್ತು ಒಂದು ಸ್ಕೂಟರನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿತ್ತು. ಕಾಟಿ ಕಸಾಯಿ ಮಾಡುತ್ತಿದ್ದ ಜನ ಏರ್ ಎಂದು ಅರಣ್ಯ ಇಲಾಖೆ ತನಿಖೆ ನಡೆಸಲಾಗಿ ಸ್ಥಳದಲ್ಲಿ ಸಿಕ್ಕ ಸ್ಕೂಟರ್ ಆಧಾರದ ಮೇಲೆ ಅಟ್ಟದಲ್ಲಿ ಕುಂತಿದ್ದ ಸುಂಕದ ಕಟ್ಟೆಯ ಚಂದ್ರಮೋಹನ್ ಮಗ ಮಣಿಗಂಡನ್ ಎಂಬ ಕಸಾಯಿಯನ್ನು ಅರಣ್ಯ ಇಲಾಖೆ ತಂದು ಬೆಂಡ್ ತೆಗೆದು, ಸಂದ್,ಸಂದ್ ಗುದ್ದಿ, ಸನ್ಮಾನ ಮಾಡುತ್ತದೆ. ಆ ಸಮ್ಮನದ ಪ್ರತಿಫಲವಾಗಿ ಒಂದೊಂದೇ ಹೆಸರು ಮಣಿಗಂಡನ ಬಾಯಿಯಿಂದ ಕಕ್ಕಿಸಲಾಗುತ್ತದೆ.
ಹಾಗೆ ಅರಣ್ಯ ಇಲಾಖೆಯ ಎದುರು ಚಡ್ಡಿಯಲ್ಲಿ ಕುಂತು ಕಾಟಿ ಕಿಲ್ಲರ್ಸ್ ಗಳ ಒಂದೊಂದೇ ಹೆಸರು ಕಕ್ಕಿದ ಮಣಿಗಂಡ ಇಲ್ಲಿ ತನಕ ಚಪ್ಪರಿಸಿದ ಅಷ್ಟೂ ಕಾಟಿ ಕೋಣಗಳ ಚರ್ಬಿ ಇಳಿಸಲಾಗಿದೆ. ಮಣಿಗಂಡನ ಪ್ರಕಾರ ಆವತ್ತು ಕಾಟಿ ಕಿಲ್ಲ್ ಮಾಡಿ ಕಸಾಯಿ ಮಾಡುತ್ತಿದ್ದ ರಣ ಕಸಾಯಿಗಳ ಹೆಸರು ಇಂತಿದೆ. ಕೊಂಡೆ ಸಂಕಪ್ಪಣ್ಣನ ಮಗ ಭುವನೇಶ್, ಕೊಂಡೆ ಮೋನಪ್ಪಣ್ಣನ ಮಗೆ ಜೀವನೆ, ಕೊಂಡೆ ಜಿನ್ನಪ್ಪಣ್ಣನ ಮಗು ಸಚಿನು, ಕೆರ್ಮಾಯಿ ಪಿಲಿಫೋಸು ಮಗ ಜೈನ್ ವರ್ಕೆ ಮತ್ತು ಪಿಲಿಫೋಸು ಪುಳ್ಳಿ, ಜೈನ್ ವರ್ಕೆ ಮಗ ಜಸ್ಟಿನ್ ಜೈನ್ ಇವರೆಲ್ಲ ಅಕ್ರಮ ಕೂಟ ಸೇರಿಕ್ಕೊಂಡು ಅರಣ್ಯ ಇಲಾಖೆಗೆ ಸವಾಲೆಸೆಯುವಂತೆ ಕಾಟಿ ಬೇಟೆಯಾಡಿ ಕಸಾಯಿ ಮಾಡಿರುವುದಾಗಿ ಅರಣ್ಯ ಇಲಾಖೆಗೆ ತಿಳಿಸಿದ್ದಾನೆ. ಅರಣ್ಯ ಇಲಾಖೆ ಈ ಕಸಾಯಿಗಳ ಮೇಲೆ ಭಯಂಕರ ಸೆಕ್ಷನ್ ಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದು ಒಂಚೂರು ಅಂಚಿಂಚಿ ಆದರೂ ಇವರೆಲ್ಲ ಮೂರು ವರ್ಷಗಳ ಅವಧಿಗೆ ಅಂದರ್ ಆಗುವ ಅಪಾಯಗಳಿವೆ. ಇದೀಗ ಈ ಎಲ್ಲಾ ಕಸಾಯಿಗಳೂ ಅಟ್ಟದಿಂದಲೇ ನಿರೀಕ್ಷಣಾ ಜಾಮೀನು ತಗೊಂಡಿದ್ದು ಸದ್ಯಕ್ಕೆ ಪೆಟ್ಟಿನ ಬರ್ಸದಿಂದ ಬಚಾವಾಗಿದ್ದಾರೆ.
ಹಾಗೆಂದು ಈ ಪೋಲಿಸರು ಮತ್ತು ಅರಣ್ಯ ಇಲಾಖೆಯವರು FIR ಮಾಡುವಾಗ ಯಾವಾಗಲೂ ರಾಮ,ದೂಮ,ಚೋಮ ಮತ್ತು “ಇತರರು” ಎಂದೇ FIR ಮಾಡುವುದು ರೂಢಿ ಮತ್ತು ಅದು ಅವರ ಹುಟ್ಟುಗುಣ ಸಹ. ರಾಮ,ದೂಮ ಚೋಮ ಮೂವರೇ ಅಪರಾಧ ಮಾಡಿದ್ದರೂ, ಬೇರೆ ಯಾರೂ ಸೀನಲ್ಲಿ ಇಲ್ಲದಿದ್ದರೂ ಈ “ಇತರರು” ಎಂಬ ಶಬ್ದವನ್ನು ಇಲಾಖೆ ಯಾವತ್ತೂ ಬಿಡಲ್ಲ, ಮರೆಯಲ್ಲ. ಈ “ಇತರರು” ಕಾಲಂನಲ್ಲಿ ನನ್ನನ್ನೂ ಸೇರಿಸಬಹುದು, ನಿಮ್ಮನ್ನು ಸಹ. ಕೆಲವು ಸಲ ಈ “ಇತರರು” ಶಬ್ದ ಅವರಿಗೆ ಆದಾಯದ ಮೂಲವೂ ಆಗಿ ಬಿಡುತ್ತದೆ ಮತ್ತು ಒಮ್ಮೊಮ್ಮೆ ತಮಗಾಗದವರ ಮೇಲೆ ದ್ವೇಷ ಸಾಧನೆಗೂ ಉಪಯೋಗ ಆಗುತ್ತದೆ.ಈಗ ಕಾಟಿ ಕಿಲ್ಲರ್ಸ್ ಕೇಸಲ್ಲಿ “ಇತರರು” ಕಾಲಂನಲ್ಲಿ ಅರಣ್ಯ ಇಲಾಖೆಯ ಏಳೇಳು ಜನ್ಮದ ವೈರಿ ಪ್ರಸಾದ್ ಹೆಸರು ಹೆಸರಿಸಲಾಗಿದೆ. ಪ್ರಸಾದ್ ಕಾರಲ್ಲಿ ಆವತ್ತು ಬೇಟೆ ಪರಿಕರಗಳು ಸಿಕ್ಕಿತ್ತು ಎಂದು ಅರಣ್ಯ ಇಲಾಖೆಯ ಸಂಧ್ಯಾ ಮ್ಯಾಮ್ ಪ್ರಸಾದ್ ಮನೆಗೆ ಧಾಳಿ ನಡೆಸಿ ದೊಡ್ಡ ಸುದ್ದಿಯಾಗಿತ್ತು. ಅವತ್ತಿನಿಂದ ಪ್ರಸಾದ್ ಮತ್ತೆ ಅರಣ್ಯ ಇಲಾಖೆಗೆ ಹಾವು ಮುಂಗುಸಿ ಸಂಬಂಧ. ಇದೀಗ ಕಾಟಿ ಕೇಸಲ್ಲಿ “ಇತರರು” ಕಾಲಂನಲ್ಲಿ ಪ್ರಸಾದ್ ಹೆಸರು “ಇಪ್ಪಡ್” ಎಂದು ಇಡೆಟ್ಟೆ ಹೆಸರಿಸಲಾಗಿದೆ. ಹಾಗೆಂದು FIRನಲ್ಲಿ ಪ್ರಸಾದ್ ಹೆಸರಿಲ್ಲ. ಆದರೆ ಅರಣ್ಯ ಇಲಾಖೆ ಮುಂದೆ ಚಡ್ಡಿಯಲ್ಲಿ ಕುಂತ ಮಣಿಗಂಡ ಪ್ರಸಾದ್ ಹೆಸರು ಒದರಿದ್ದ. ಹಾಗೆಂದು FIRನಲ್ಲಿ ಪ್ರಸಾದ್ ಹೆಸರು ಸೇರಿಸಿದರೆ ಪ್ರಸಾದ್ ಜಾಗೃತನಾಗಿ ಅಟ್ಟ ಹತ್ತಿ ಬಿಡುತ್ತಾನೆ ಮತ್ತು ತಮಗೆ ಬೆಂಡ್ ತೆಗೆಯಲು ಸಿಗಲ್ಲ ಎಂದು ಅರಣ್ಯ ಇಲಾಖೆ ಸ್ಕೆಚ್ ಹಾಕಿ ಮೆಲ್ಲನೆ ನೈಟ್ ಪ್ರಸಾದ್ ನನ್ನು ಎತ್ತುವುದು ಎಂದು ನಿರ್ಧರಿಸಿತ್ತು. ಆದರೆ ಈ ಸ್ಕೆಚ್ ಅರಣ್ಯ ಇಲಾಖೆಯಿಂದಲೇ ಲೀಕ್ ಆಗಿ ಪ್ರಸಾದ್ ಅಟ್ಟ ಹತ್ತಿ ನಿರೀಕ್ಷಣಾ ಜಾಮೀನು ತೆಗೆದು ಬಿಟ್ಟಿದ್ದಾನೆ. ಹಾಗೆಂದು ಪ್ರಸಾದ್ ಕೂಡ ಆ ಭಾಗದ ಕ್ಲಾಸ್ ವನ್ ಬೇಟೆಗಾರ ಎಂಬ ಮಾಹಿತಿ ಇದೆ ಮತ್ತು ಅದು ಅರಣ್ಯ ಇಲಾಖೆಗೂ ಗೊತ್ತಿದೆ. ಬೇಟೆಯಲ್ಲಿ ಪ್ರಸಾದ್ ನ ಸ್ಟ್ರೈಕ್ ರೇಟ್ ಒಳ್ಳೆದಿದೆ ಎಂದೂ ಅಂಕಿಅಂಶಗಳು ಹೇಳುತ್ತಿವೆ.ಹಾಗಾಗಿ ಚಾಣಾಕ್ಷ ಪ್ರಸಾದ್ ಕೈಕ್ “ತಿಕ್ಕುಜೆ”ಎಂದು ಅರಣ್ಯ ಇಲಾಖೆಗೆ ಪ್ರಸಾದ್ ಮೇಲೆ ಕೆಂಡದಂತಹ ಕೋಪ ಮತ್ತು “ಇತರರು”ಕಾಲಂಗೆ ಸೇರ್ಪಡೆ.
ಹಾಗೆ ನೋಡಿದರೆ ಕಡಬ ತುಂಬಾ ಒಂದು ವರ್ಲ್ಡ್ ಕಪ್ಪಿಗಾಗುವಷ್ಟು ಬೇಟೆಗಾರರ ಟೀಮಿದೆ. ಕೊಂಡೆ ಟೀಮ್, ಕೇನ್ಯ ಟೀಮ್, ಕೋಕಲ ಟೀಮ್, ಕುಟ್ರುಪ್ಪಾಡಿಯ ಮಲೆಯಾಳಿ ಕಡಪ್ಪು ಟೀಮ್ ಹೀಗೆ ಇನ್ನೂ ಅನೇಕ ಬೋಂಟೆ ಟೀಮುಗಳಿವೆ. ಈ ಎಲ್ಲಾ ಟೀಮುಗಳ ಬಗ್ಗೆಯೂ ಅರಣ್ಯ ಇಲಾಖೆಗೆ ಗೊತ್ತಿದೆ. ಇವರೊಳಗೆ ಸಂಬಂಧಗಳಿವೆ, ಅನೈತಿಕ ಸಂಬಂಧಗಳೂ ಇದೆ. ಇಲಾಖೆಯೊಳಗೂ ಕಸಾಯಿ ಬೇಟೆಗಾರರ ಪ್ರೆಂಡ್ಸ್ ಇರೋ ಕಾರಣ ಬೇಟೆಗೆ ಸೈಲೆನ್ಸರ್ ಸಿಕ್ಕಿಸಿಯೇ ಬೇಟೆ ನಡೆಯುತ್ತಿದೆ. ಮೊನ್ನೆ ಸಿಕ್ಕಿ ಬಿದ್ದ ಟೀಮ್ ಕೂಡ ಖತರ್ನಾಕ್ ಟೀಮೇ. ಜೈನ್ ವರ್ಕೆ ಈ ಟೀಮಿನ ಕ್ರಿಸ್ ಗೇಲ್ ಇದ್ದ ಹಾಗೆ. ಇವನು ಹೆಚ್ಚಿಗೆ ಕಾಡಿನಲ್ಲೇ ಇರುವ ಟಾರ್ಜನ್ ಟೈಪಿನ ಮನುಷ್ಯ. ಕಾಡಿನಲ್ಲಿ ಸಿಗುವ ಯಾವ ಪ್ರಾಣಿಯಾದರೂ ಸಾಕು ಇವನು ಢಂ ಮಾಡಿ ಬಿಡುತ್ತಾನೆ. ಉರೆ, ಕಡಮ್ಮ, ಕಾಟಿ,ಪಂಜಿ ಕಡೆಗೆ ಕುದಿಕ್ಕ ಸಿಕ್ಕರೂ ಇವನು ಬಿಡಲ್ಲ ಎಂದು ತಿಳಿದುಬಂದಿದೆ. ಯಾವುದೂ ಸಿಗದಿದ್ದರೆ ಕಾಡಿನಲ್ಲಿ ಅಂಚಿನ ಕುಮಾರಧಾರನ ತಟದಲ್ಲಿ ಮೇಯಲು ಬಂದಿರುವ ಅಲೆಮಾರಿ ದನಗಳಲ್ಲಾದರೂ ಒಡೆಯದೆ ಇವನಿಗೆ ನಿದ್ದೆ ಬಾರದು. ಹಾಗೆ ಬೇಟೆಯಾಡಿದ ಪ್ರತೀ ಪ್ರಾಣಿಗಳ ಮಾಂಸವನ್ನೂ ಇವನು ಕಸಾಯಿ ಮಾಡಿ ರಬ್ಬರ್ ಡ್ರೈಯರ್ ನಲ್ಲಿ ಒಣಗಿಸಿ, ಪ್ಯಾಕ್ ಮಾಡಿ ಕೇರಳಕ್ಕೆ ಎಕ್ಸ್ ಪೋರ್ಟ್ ಮಾಡುತ್ತಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆ, ಕಡಬ ಪೋಲಿಸರು ಒಂದು ರೌಂಡ್ ಜೈನ್ ನನ್ನು ಕೂರಿಸಿ ಮಾತಾಡಿಸಿದರೆ ಇವನು ಢಂ ಮಾಡಿದ ಅಷ್ಟೂ ಪ್ರಾಣಿಗಳ ಆತ್ಮಕ್ಕೆ ಚಿರ ಶಾಂತಿ ಸಿಗಬಹುದು. ಕೇರಳದಲ್ಲಿ ಡ್ರೈ ಮಾಂಸದ ಗಿರಾಕಿ ಯಾರು ಅಂತ ಪತ್ತೆ ಹಚ್ಚಿದರೂ ಸಾಕು. ಇಷ್ಟಕ್ಕೂ ಒಣಗಿಸಿದ ಕಾಟಿ ಮಾಂಸ ಯಾಕೆ ಅಂತಲೇ ಗೊತ್ತಾಗುತ್ತಿಲ್ಲ. ಎಂಥ ಪತ್ರೋಡೆ ಮಾಡ್ಲಿಕ್ಕಾ? ಅದು ಯಾರು ಮಾರಾಯ್ರೆ ಐತೂರು ಗಾರ್ಡು?
