
ಬೆಳ್ಳಾರೆ ಪೇಟೆ ಬದಿಯಲ್ಲಿ ಜಾಯಿಂಟ್ ಕಟ್ಟಾಗಿ ನಿಂತಿದ್ದ ಟಿಂಬರ್ ಲಾರಿಯೊಂದರ ಮೇಲೆ ಮಂಗಳೂರು ಅರಣ್ಯ ಸಂಚಾರಿ ದಳದವರು ಧಾಳಿ ನಡೆಸಿದ್ದು ಪರ್ಮಿಟ್ ಇಲ್ಲದ ಮರ ಮತ್ತು ರಕ್ಕಸ ಲಾರಿಯನ್ನು ದಳದವರು ವಶ ಪಡಿಸಿಕೊಂಡು ಟೈಟ್ ಕೇಸ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲಿ ಐವರ್ನಾಡು ಸೈಡಿನ ಬಾಂಜೀಕೋಡಿ ಕಡೆಯಿಂದ ಪುತ್ತೂರು ಕಡೆ ಹೋಗುತ್ತಿದ್ದ ಕಳ್ಳ ಟಿಂಬರ್ ಲಾರಿಯೊಂದು ಬೆಳ್ಳಾರೆ ಪೇಟೆ ಬದಿಯ ವಹಿದಾ ಮನೆಯ ಹತ್ರ ಹತ್ರ ರೀಚ್ ಆಗುವಾಗ ಜಾಯಿಂಟ್ ಕಟ್ಟಾಗಿ ಕಂಜಿ ಹಾಕಿ ಬಿಟ್ಟಿತು. ಅದು ಪರ್ಮಿಟ್ ಇಲ್ಲದೆ ಸಾಗಾಟ ಮಾಡುತ್ತಿದ್ದ ಬಣ್ಪು ಜಾತಿಯ ಮೇಲ್ಜಾತಿಯ ಮರ. ಅರಣ್ಯ ಇಲಾಖೆಗೆ ಏನಾದರೂ ಗೊತ್ತಾದರೆ ಲಾರಿಯ ಚಿತ್ರ ಕೂಡ ಸಿಗಲಿಕ್ಕಿಲ್ಲ ಎಂದು ಕಂಡುಗಳಿಗೆ ಕೂಡ ಗೊತ್ತಿತ್ತು. ಅದೂ ಅಲ್ಲದೆ ಬೆಳ್ಳಾರೆ ಪುತ್ತೂರು ರೇಂಜ್ ಸರಹದ್ದಿನಲ್ಲಿ ಬರುತ್ತಿದ್ದು ಅಲ್ಲಿ ಭ್ರಷ್ಟಾಚಾರಕ್ಕೆ ಎಂಟ್ರಿ ಇಲ್ಲದ ಕಾರಣ ಎಂಥ ಮಾಡುವುದು, ಎಂಥ ಮಾಡುವುದು ಎಂದು ಮರಕಂಡುಗಳಿಗೆ ಪುಕು ಪುಕು ಶುರುವಾಗಿತ್ತು. ಹಾಗಾಗಿ ಇನ್ನು ಪುತ್ತೂರು ರೇಂಜ್ ನವರು ಬರುವುದು ಬೇಡ ಎಂದು ಮನಗಂಡ ಮರಕಂಡುಲು ಲಾರಿಯನ್ನು ಮೆಲ್ಲಗೆ ಚಲಾಯಿಸಿ ಸೂರ್ಯ ಕುಮಾರ್ ಯಾದವ್ ಸಿಕ್ಸ್ ಹೊಡೆಯುವ ಜಾಗದಲ್ಲಿ ಕೊಂಡೋಗಿ ಅಡಗಿಸಿಟ್ಟಿದ್ದರು ಮತ್ತು ಲಾರಿ ರಿಪೇರಿಗೆ ಡಾಕ್ಟರನ್ನು ಹುಡುಕುತ್ತಾ ಓಡಾಡಿಕೊಂಡಿದ್ದರು.
ಹಾಗೆ ಸೂರ್ಯ ಕುಮಾರ್ ಯಾದವ್ ಸಿಕ್ಸ್ ಹೊಡೆಯುವ ಜಾಗದಲ್ಲಿ ಒಂದು ಟಿಂಬರ್ ಲಾರಿ ಜಾಯಿಂಟ್ ಕಟ್ಟಾಗಿ ನಿಂತಿದ್ದ ವಿಷಯವನ್ನು ಯಾರೋ ಚಾಡಿಗಳು ಮಂಗಳೂರು ಅರಣ್ಯ ಸಂಚಾರಿ ದಳಕ್ಕೆ ಮಾಹಿತಿ ಕೊಟ್ಟಿದ್ದಾರೆ. ಹಾಗೆ ಪುತ್ತೂರು ರೇಂಜನ್ನು ಬಿಟ್ಟು ಸಂಚಾರಿ ದಳಕ್ಕೆ ದೂರು ಕೊಡಲು ಕಾರಣಗಳುಂಟು. ಯಾಕೆಂದರೆ ಸಂಚಾರಿ ದಳದಲ್ಲಿ ಈಗ ಸಂತೋಷ್ ಎಂಬವರು ರೇಂಜರ್ ಆಗಿದ್ದು ಈ ಸಂತೋಷ್ ಹಿಂದೆ ಬೆಳ್ಳಾರೆಯಲ್ಲಿ ಫಾರೆಸ್ಟರ್ ಆಗಿ ಜನಪ್ರಿಯತೆ ಗಳಿಸಿದ್ದರು. ಹಾಗಾಗಿ ಆ ಲಿಂಕ್ ಬಳಸಿ ಯಾರೋ ಸಂತೋಷ್ ಗೆ ಕಾಲ್ ಮಾಡಿದ್ದಾರೆ. ರಕ್ಕಸ ಬಂದ ಹಾಗೆ ಸಂತೋಷ್ ಟೀಂ ಬೆಳ್ಳಾರೆಗೆ ಬಂದಿದೆ ಮತ್ತು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಐವರ್ನಾಡು ಸೈಡಿನ ಚಿನ್ನಪ್ಪ ಗೌಡ್ರ ಮಗ ಶಶಿ ಮೇಲೆ ಕೇಸ್ ಕೂಡ ಹಾಕಿದ್ದಾರೆ. ಶಶಿಗೆ ಇನ್ನು ಅರೆಗ್ಗಲ ಇಡೀ ಕೋರ್ಟ್, ಕಚೇರಿ ಕಾಯುವ ಕೆಲಸ.
ಹಾಗೆಂದು ಅರಣ್ಯ ಸಂಚಾರಿ ದಳದ ಸಂತೋಷ್ ಟೀಂ ಶಶಿ ಮೇಲೆ ಕೇಸ್ ಟೈಟ್ ಮಾಡಿದ್ದರೂ ಈ ಇಡೀ ಪ್ರಕರಣ ದಲ್ಲಿ ಕಾಣದ “ಕೈ✋”ಗಳು ಕೆಲಸ ಮಾಡಿದ ಬಗ್ಗೆ ಇಡೀ ಬೆಳ್ಳಾರೆಯಲ್ಲಿ ಮತ್ತು ಸುಳ್ಯ ತಾಲೂಕು ಮಟ್ಟದಲ್ಲಿ ಗುಸು ಗುಸು ಇದೆ. ಶಶಿ ಜೊತೆ ಡ್ರೈವರ್ ಕೌಸರ್ ಮತ್ತು ಲಾರಿ ಓನರ್ ಮದನ್ ಮೇಲೂ ಟೈಟ್ ಕೇಸ್ ಜಡಿಯಲಾಗಿದೆ. ತನ್ನ ಲಾರಿ ಸೀಝ್ ಆದ ಬಗ್ಗೆ ಕೆಂಡಾಮಂಡಲ ಆಗಿರುವ ಮಾಲೀಕ ಮದನ್ “ಮುಂದೆ ಬೆಳ್ಳಾರೆಯಿಂದ ಒಂದು ಉಪ್ಪೊಳಿಗೆ ಮರವನ್ನೂ ಹೋಗಲು ಬಿಡಲ್ಲ”ಎಂದು ಲಾರಿ ತಲೆ ಮೇಲೆ ಕೈಯಿಟ್ಟು ಪ್ರತಿಜ್ಞೆ ಮಾಡಿದ ಬಗ್ಗೆ ಕೂಡ ಮಾಹಿತಿ ಇದೆ. ಈಗ ಇಷ್ಟೇಲ್ಲಾ ಕತೆ ನಡೆದಿದ್ದು ಪರದೆ ಮುಂದೆ. ಆದರೆ ಪರದೆ ಹಿಂದೆ ಇನ್ನೊಂದು ಕತೆ ಇದೆ. ಈ ಮರದ ವ್ಯಾಪಾರದ ಕಿಂಗ್ ಪಿನ್ ಒಬ್ಬ ಹೆಸರಾಂತ ದೇವಸ್ಥಾನ ಒಂದರ ಟ್ರಸ್ಟಿ ಮಗನಾಗಿದ್ದು ಮರ ಟ್ರಸ್ಟಿ ಮಗಂದು ಎಂಬ ಗುಸು ಗುಸು ಇಡೀ ಸುಳ್ಯ ಕಾಂಗ್ರೇಸಿನಲ್ಲಿ ಹರಿದಾಡುತ್ತಿದೆ. ಆದರೆ ಯಾವಾಗ ಸಂತೋಷ್ ಟೀಂ ಬಂದು ಲಾರಿ ವಶ ಪಡಿಸಿಕೊಂಡಿತೋ ಟ್ರಸ್ಟಿ ತನ್ನ ಪ್ರಭಾವ ಬಳಸಿ ದೊಡ್ಡ ದೊಡ್ಡ ಕೈ✋ ಗಳಿಗೆ ಹೇಳಿ ಒಂದು ಮಾತು ಸಂತೋಷ್ ಗೆ ಹೇಳಿಸಿ ಮಗನನ್ನು ಬಚಾವ್ ಮಾಡಿಸಿದ್ದಾರೆ ಎಂದು ಊರಿಡೀ ಟಾಂ ಟಾಂ ಆಗಿದೆ. ಇನ್ನು ಈ ಬಗ್ಗೆ ಅರಣ್ಯ ಇಲಾಖೆಯ ಸಂಚಾರಿ ದಳದವರು ಕೂಡ ತುಟಿ ಪಿಟಿಕ್ ಅನ್ನದೆ ಟ್ರಸ್ಟಿ ಮಗನನ್ನು FIRನಿಂದ ಕೈ ಬಿಟ್ಟಿದ್ದು ಪಾಪ ಪಾಂಡುಗಳ ಮೇಲೆ ಮಾತ್ರ ಕೇಸ್ ಟೈಟ್ ಮಾಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಇಡೀ ಸುಳ್ಯ ತಾಲೂಕಿನಲ್ಲೇ ಅಸಮಾಧಾನದ ಹೊಗೆ ಎದ್ದಿದ್ದು ಟ್ರಸ್ಟಿಯ ಮಗನ ಬಾಲ ಲೀಲೆಗಳಿಗೆ ಅಂಕುಶ ಹಾಕಲು ಜನ ದಿನ ನೋಡುತ್ತಿದ್ದಾರೆ.

