ರೌಡಿ ಗೆಟಪ್ಪಿನ ಪೆಟ್ಟಿಸ್ಟ್ ಅಧ್ಯಕ್ಷರುಗಳು ಮನೆಗೆ!

Pattler News

Bureau Report

ಸಹಕಾರಿ ಬ್ಯಾಂಕುಗಳಲ್ಲಿ, ಸಹಕಾರ ಸಂಘಗಳಲ್ಲಿ, ಒಕ್ಕೂಟಗಳಲ್ಲಿ, ಅಪೆಕ್ಸ್ ಬ್ಯಾಂಕ್ ಗಳಲ್ಲಿ ಬಂದು ಹತ್ತು ಹಲವು ದಶಕಗಳಿಂದ ಠಿಕಾಣಿ ಹೂಡಿರುವ ಮರಿ ಪುಢಾರಿಗಳಿಗೆ, ಸಂಘಗಳ ಅಧ್ಯಕ್ಷರ ಸೀಟಿನಲ್ಲಿಯೇ ಜೀವ ಬಿಡಲು ರೆಡಿಯಾಗಿರುವ ತೊಂಡ ಅಧ್ಯಕ್ಷರುಗಳಿಗೆ ಆರ್ ಬಿಐ ಖಡಕ್ ನಿಯಮ ಜಾರಿಗೆ ತರಲು ಮುಂದಾಗಿದೆ. ಹತ್ತು ವರ್ಷ ಮಾತ್ರ ದೆಪ್ಪೆ….ದೀಪೆ… ಮಾಡಬಹುದು. ನಂತರ ಮೂರು ವರ್ಷ ತೋಟಕ್ಕೆ ಮುದ್ದು ಮುದ್ದಾಗಿ ಮದ್ದು ಬಿಡುವುದು ಕಡ್ಡಾಯ.

ಹಾಗೆಂದು ಲೋಕಲ್ ಸಹಕಾರ ಸಂಘಗಳ ಅಧ್ಯಕ್ಷರ ಸೀಟಿನಲ್ಲಿ ಇರೋದೇ ಆಚೆ ರೌಡಿ ಲಿಸ್ಟ್ ರೌಡಿಯೂ ಅಲ್ಲದ, ಈಚೆ ಲೋಕಲ್ ಪೆಟ್ಟಿಸ್ಟೂ ಅಲ್ಲದ, ಅತ್ತ ಪ್ರೊಫೆಶನಲ್ ರಾಜಕಾರಣಿಯೂ ಅಲ್ಲದ ಇತ್ತ ಪ್ರೊಬೇಷನರಿ ಮರಿ ಪುಢಾರಿಯೂ ಅಲ್ಲದ ಲೋಕಲ್ ಅಣ್ಣಾಗಳು. ಕಳೆದ ಹಲವು ದಶಕಗಳಿಂದ ಈ ಲೋಕಲ್ ಅಣ್ಣಾಗಳು ಇಡೀ ಸಹಕಾರಿ ರಂಗದಲ್ಲಿ ಭಯಭೀತಿಯನ್ನು ಬಿತ್ತಿದ್ದರು, ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದರು. ಅಬ್ಬಾ… ರಿಸರ್ವ್ ಬ್ಯಾಂಕ್ ಲೇಟಾಗಿಯಾದರೂ ಸಹಕಾರ ಸಂಘಗಳಲ್ಲಿ ದಶಕಗಳ ಕಾಲ ಠಿಕಾಣಿ ಹೂಡಿರುವ ಲೋಕಲ್ ಅಣ್ಣಾಗಳನ್ನು “ಮತ್ತೇ ಕರೆಯುತ್ತೇವೆ” ಎಂದು ಮೂರು ವರ್ಷಗಳ ಕಾಲ ರೆಸ್ಟ್ ಮಾಡಲು ಮನೆಗೆ ಕಳಿಸಲು ನಿರ್ಧರಿಸಿದೆ. ಇದು ಭಾರೀ ಒಳ್ಳೇಯ ಬೆಳವಣಿಗೆ.

“ಏನಾ? ನಿನಗೆ ಲೋನಿಗೆ ಬಡ್ಡಿ ಕಟ್ಟುವ ತಾಕತ್ ಉಂಟಾ, ಅಷ್ಟು ಲೋನ್ ನಿನಗೆ ಯಾಕೆ, ನಿನ್ನ ಜಾಗಕ್ಕೆ ಅಷ್ಟು ಬೆಲೆ ಇಲ್ಲ, ನಿನಗೆ ಲೋನ್ ಕೊಡಲ್ಲ, ಏನು ಮಾಡ್ತಿಯಾ ಮಾಡು” ಎಂದೆಲ್ಲಾ ಸೊಸೈಟಿ ಸಾಲ ಕೇಳಲು ಬಂದ ಬಡ ರೈತರನ್ನು ಹೀಯಾಳಿಸಿದ್ದು, ಉತ್ತರ ಕೊಟ್ಟ ರೈತರ ಮೇಲೆ ಸವಾರಿ ಮಾಡಿದ್ದು, ವಿನಾಕಾರಣ ಸಾಲ ನಿರಾಕರಿಸಿದ್ದು, ತನ್ನ ಮನೆಯಿಂದ ಅಡಿಕೆ ಮಾರಿ ಸಾಲ ಕೊಟ್ಟಂತೆ ವರ್ತಿಸಿದ್ದು, ಸಹಕಾರ ಸಂಘಗಳು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ವರ್ತಿಸಿದ್ದು ಹೀಗೆ ಸಹಕಾರ ಸಂಘಗಳ ಅಧ್ಯಕ್ಷರುಗಳ ವರ್ತನೆ ಇಡೀ ರೈತ ಸಮುದಾಯಕ್ಕೆ ವಾಕರಿಕೆ ತರಿಸುವಂತಿತ್ತು. ಅದರಲ್ಲೂ ಒಂದು ಸಾಲ ಬೇಕು ಎಂದು ಯಾವುದಾದರೂ ಸೊಸೈಟಿಗೆ ಹೋದರೂ ಅದರ ಸಿಇಓಗಳು ಕೇಳುವ ಮೊದಲ ಪ್ರಶ್ನೆಯೇ “ಅಣ್ಣಾನ ಜೊತೆ ಮಾತಾಡಿದ್ರಾ”ಎಂದು.

ಆಯ್ತು ಅಣ್ಣಾನತ್ರ ಹೋಗಿ ಕೇಳೋಣ ಅಂದ್ರೆ ಅಣ್ಣಾನ ಪುರುಸೊತ್ತು ಕಾಯಬೇಕು, ಅಣ್ಣಾನ ಮೂಡ್ ನೋಡಿಕೊಳ್ಳಬೇಕು, ಅಣ್ಣಾನ ಮನೆಯ ನಾಯಿಗಳನ್ನು ಸಂಭಾಳಿಸ ಬೇಕು, ಅಣ್ಣಾನ ವೈಭವವನ್ನು ಕೊಂಡಾಡ ಬೇಕು, ಅಣ್ಣಾನನ್ನು “ಧನಿಗಳೇ…ಧನಿಗಳೇ” ಅಂತ ತುಂಬಾ ಸಲ ಹೇಳುತ್ತಾ ಇರಬೇಕು, ಅಣ್ಣಾನ ಎದುರು ಕೈಕಟ್ಟಿ ನಿಲ್ಲಬೇಕು, ನಂತರ ಅಣ್ಣಾ ಮಾಡುವ ಮಂಗಳಾರತಿ, ಕುಂಕುಮಾರ್ಚನೆಗೆ ಕೈಮುಗಿದು ನಿಲ್ಲಬೇಕು. ಇಷ್ಟೆಲ್ಲಾ ಆದ ಮೇಲೆ ರೈತರಿಗೆ ಸಾಲ ಎಂಬ ಪ್ರಸಾದ ವಿತರಣೆ. ಅದರಲ್ಲೂ ಅಣ್ಣಾ ಅಂದರೆ, ಅಣ್ಣಾನ ಎದುರು ಸಾಲಕ್ಕೆ ನಿಲ್ಲೋದು ಅಂದರೆ ಸೂಸು ಬಂದು ತುದಿಯಲ್ಲಿ ಬಂದು ನಿಂತಿರುತ್ತದೆ. ಫೇಲಾದ ವಿಧ್ಯಾರ್ಥಿ ಹೆಡ್ ಮಾಸ್ಟರನ ಮುಂದೆ, ಯಾವುದೋ ಆರೋಪಿ ಸರ್ಕಲ್ ಇನ್ಸ್ಪೆಕ್ಟರನ ಮುಂದೆ ನಿಂತಂತೆ. ಎಂಥಾ ಒಂದು ಅವ್ಯವಸ್ಥೆ ಸಹಕಾರ ರಂಗದಲ್ಲಿ.

ಇದೀಗ ರಿಸರ್ವ್ ಬ್ಯಾಂಕ್ ಈ ಗಡಂಗ್ ಮಾಸ್ಟರ್ ಅಧ್ಯಕ್ಷರುಗಳ ರೆಕ್ಕೆ ಪುಕ್ಕ ಕಟ್ ಮಾಡಲು ನಿರ್ಧರಿಸಿದೆ. ಸಹಕಾರಿ ಕ್ಷೇತ್ರದಲ್ಲಿ ಹೊಸತನ ತರಲು, ಆಡಳಿತ ಸುಧಾರಣೆಗೆ ಕೇಂದ್ರ ಹಣಕಾಸು ಇಲಾಖೆಯ ಅಡಿಯಲ್ಲಿ ಬರುವ ಮತ್ತು ಆರ್ ಬಿಐ ನಿಯಂತ್ರಣದಲ್ಲಿ ಬರುವ ಜಿಲ್ಲಾ ಸಹಕಾರಿ ಬ್ಯಾಂಕುಗಳು, ಸಂಘಗಳು, ಅಪೆಕ್ಸ್ ಬ್ಯಾಂಕ್ ಹೀಗೆ ಅಣ್ಣಾ ಪಾಳೇಗಾರಿಕೆಯ ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಅಧ್ಯಕ್ಷ ಮತ್ತು ನಿರ್ದೇಶಕರು ಎರಡು ಅವಧಿಗೆ ಅಂದರೆ ಹತ್ತು ವರ್ಷಗಳ ಕಾಲ ಮಾತ್ರ ಕುರ್ಚಿ ಬಿಸಿ ಮಾಡ ಬಹುದು. ಎರಡು ಟರ್ಮ್ ಮುಗಿಸಿ ಮೂರು ವರ್ಷ ಮನೆಯಲ್ಲಿ ಕುಂತು ನಂತರ ಬೇಕಿದ್ರೆ ಮತ್ತೇ ಎರಡು ಟರ್ಮ್ ಆಡಳಿತ ಮಂಡಳಿ ಒಳಗೆ ಬರಬಹುದು ಎಂಬ ಕೇಂದ್ರದ ಕಾಯಿದೆಯ ಅಧಿಸೂಚನೆಯನ್ನು ಆರ್ಬಿಐ ಈಗಾಗಲೇ ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ಟಪ್ಪಾಲ್ ಕಳಿಸಿದ್ದು ಕಾರ್ಯರೂಪಕ್ಕೆ ತರುವಂತೆ ಸುತ್ತೋಲೆ ಹೊರಡಿಸಿದೆ. ಈಗಾಗಲೇ ಈ ಕಾನೂನು ಕೆಲವು ಸಹಕಾರಿ ಬ್ಯಾಂಕುಗಳಲ್ಲಿ ಕಾರ್ಯರೂಪಕ್ಕೆ ಬರುತ್ತಿದ್ದು ಕೆಲವು ಗಡಂಗ್ ಮಾಸ್ಟರ್ ಅಧ್ಯಕ್ಷರುಗಳ ಕುಂಡೆಗೆ ನೀರು ಬರಲಿದೆ ಎಂದು ತಿಳಿದುಬಂದಿದೆ.

ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ ಈ ಸಹಕಾರಿ ರಂಗವನ್ನು ಕೂಡ ಮಾಹಿತಿ ಹಕ್ಕು ಕಾಯ್ದೆಯಡಿ ತರಲೇ ಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಈ ಸಹಕಾರ ಸಂಘಗಳು ಆಡಿದ್ದೇ ಆಟವಾಗಿದ್ದು ಇಲ್ಲಿನ ಪಾಳೇಗಾರ ಅಧ್ಯಕ್ಷರುಗಳು ಮತ್ತು ಅವರ ಹೊಗಳುಭಟ ಡೈರೆಕ್ಟರ್ ಗಳು ಮತ್ತು ಸಿಬ್ಬಂದಿ ವರ್ಗ ಸಂಘದೊಳಗೆ ಏನೆಲ್ಲಾ ಮಾಡುತ್ತಿದ್ದಾರೆ, ಮಾಡಿದ್ದಾರೆ ಎಂದೇ ಹೊರಗಿನ ಜಗತ್ತಿಗೆ ಗೊತ್ತಾಗುತ್ತಿಲ್ಲ. ಪುಚ್ಚೆ ಇಜ್ಜಂದಿ ಕಲಟ್ಟ್ ಎಲಿ ಕರ್ನ ಕುತ್ತ ಮಗ್ರ್ಂಡ್ ಗೆ ಎಂಬಂತೆ ಮಾಹಿತಿ ಹಕ್ಕು ಇಲ್ಲದೆ ಸಹಕಾರ ಇಲಾಖೆಯೊಳಗೆ ದೊಡ್ಡ ಮಟ್ಟದ ಯಾವ ಭ್ರಷ್ಟಾಚಾರ ನಡೆದರೂ ಕೇಳುವವರೇ ಇಲ್ಲವಾಗಿದೆ. ಸಹಕಾರಿ ಸಂಘಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಮೂಗುದಾರ ಹಾಕಲೇ ಬೇಕಾಗಿದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top