
ಅಲ್ಲಿ ಯೇನೆಕಲ್ – ಕಡಂಬಿಲ ರಸ್ತೆಯ ತೀರಾ ಹದೆಗೆಟ್ಟ ಗುಂಡಡ್ಕ ಎಂಬ ಜಾಗಕ್ಕೆ ಐದೂವರೆ ಲಕ್ಷ ಅನುದಾನ ಸ್ಯಾಂಕ್ಷನ್ ಆಗಿದ್ದು ಕಾಂಕ್ರಿಟೀಕರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ನಿನ್ನೆ ತಾನೇ ಆ ರಸ್ತೆಯ ಜಾತಕ ವೈರಲ್ ಮಾಡಲಾಗಿತ್ತು.

ಅದು ಯೇನೆಕಲ್ – ಕಡಂಬಿಲ ರಸ್ತೆ. ಆ ರಸ್ತೆಯ ಗುಂಡಡ್ಕ ಎಂಬಲ್ಲಿ ಮಳೆಗಾಲದಲ್ಲಿ ಕೆಕ್ಕಿಬಾಯಿ ನೀರು ನಿಂತು ರಸ್ತೆ ಬ್ಲಾಕ್ ಆಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸ್ಥಳೀಯ ಲೀಡರ್ ಕೋಟಿಮನೆ ಆ ರಸ್ತೆಯನ್ನು ಏರಿಸಿ ಮೋರಿ ಹಾಕಲು ಅನುದಾನ ಒದಗಿಸಿದ್ದರು. ಆದರೆ ಇದ್ದ ಬೋಲ್ಡ್ರಸ್ ರಸ್ತೆಯನ್ನು ಎಬ್ಬಿಸಿ, ರಸ್ತೆ ಎತ್ತರ ಮಾಡುವಾಗ ಮುಂಗಾರು ಮಳೆ ಚುರುಕಾಯಿತು. ಹಾಗಾಗಿ ನಾದಿದಲ್ಲಿಗೆ ನಾಯಿ ಉರ್ಚಿತು ಎಂಬಂತೆ ಪರಿಸ್ಥಿತಿ ಹದೆಗೆಟ್ಟು ಬಿಟ್ಟಿತು. ರಸ್ತೆ ಎತ್ತರ ಮಾಡುವ ಸಲುವಾಗಿ ಹಾಕಿದ ಮಣ್ಣು ಗಸೆಮಿ ಗಸೆಮಿ ಆಗಿ ಜನರ ಕಷ್ಟಕ್ಕೆ ದೇವರೇ ಗತಿ ಎಂಬಂತಾಗಿತ್ತು. ಈ ಬಗ್ಗೆ ನಮಗೆ ಮಾಹಿತಿ ಬಂದ ಸಲುವಾಗಿ ನಾವು ರಸ್ತೆಯ ಕತೆ ಸೈಟಿಗೆ ಹಾಕಿ ವೈರಲ್ ಮಾಡಿದ್ದೆವು. ಕೋಟಿ ಮನೆಗೆ ಬೆಚ್ಚಾ… ಆಗಿತ್ತು.

ಹಾಗೆ ಕಡಂಬಿಲ ರಸ್ತೆ ಕತೆ ವೈರಲ್ ಆಗುತ್ತಿದ್ದಂತೆ ಕೋಟಿಮನೆ ಕೂಡಲೇ ಫೀಲ್ಡಿಗೆ ಇಳಿದು ರಸ್ತೆಗೆ ಮತ್ತೇ ಲೋಡ್ ಗಟ್ಟಲೆ ಚರೆಲ್ಲ್ ಹಾಕಿಸಿದ್ದಾರೆ. “ನನ್ನ ಜನರಿಗಾಗಿ ಕೋಟಿ ತನಕ ಅನುದಾನ ತಂದಿದ್ದು, ಹವಾಮಾನ ವೈಪರಿತ್ಯದಿಂದ ಆದ ಸಮಸ್ಯೆಯನ್ನು ನನ್ನ ತಲೆಗೆ ಕಟ್ಟಿದ್ದಾರಲ್ಲ” ಎಂದು ಗರಂ ಆಗಿ ಎಮ್ಮೆಲ್ಲೆಗೆ ಮಾತಾಡಿ ಇವತ್ತು ಅದೇ ಗುಂಡಡ್ಕ ಸಮಸ್ಯೆಗೆ ಐದೂವರೆ ಲಕ್ಷ ಅನುದಾನ ಗ್ರ್ಯಾಂಟ್ ಮಾಡಿಸಿಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲಿ ತೀವ್ರ ಹದೆಗೆಟ್ಟ ಗುಂಡಡ್ಕದ ಎಪ್ಪತ್ತೇಳು ಮೀಟರ್ ಕಾಂಕ್ರಿಟೀಕರಣಕ್ಕಾಗಿ ಐದೂವರೆ ಲಕ್ಷ ಅನುದಾನ ರಿಸರ್ವ್ ಮಾಡಿಸಿಯೇ ಬಿಟ್ಟಿದ್ದಾರಂತೆ. ಉಮ್ಮ, ಕಂಟ್ರಕ್ಟರ್ ಕೂಡ ಇವತ್ತು ಸ್ಪಾಟಿಗೆ ಬಂದು “ಎಂಚಾವು”ಎಂದು ನೋಡಿ ಹೋಗಿದ್ದಾರೆ ಎಂದು ಸುದ್ದಿ ಇದೆ. ಎಲ್ಲಾ ಸರಿ ಹೋದರೆ ರಸ್ತೆ ಸರಿ ಹೋದೀತು.


