ಯೇನೆಕಲ್ ಬಳಿ ಮೋರಿ ಮಾರಿದ್ದು ಯಾರು?

Pattler News

Bureau Report

ಆರೋಗ್ಯವಂತವಾಗಿದ್ದ, ಹೆಲ್ದಿ ಹೆಲ್ದಿಯಾಗಿದ್ದ, ಪುಡ್ಕೆನ ಪುಡ್ಕೆನ ಇದ್ದ ಪಂಚಾಯ್ತಿ ರಸ್ತೆಯೊಂದನ್ನು ಎತ್ತರ ಮಾಡಿಕೆ ಉಟ್ಟು, ಚೆಂದ ಮಾಡಿಕೆ ಉಟ್ಟು ಎಂದು ಅಗೆದು ಹಾಕಿ, ಎತ್ತರಕ್ಕೂ ಏರಿಸದೆ, ಚೆಂದವೂ ಮಾಡದೆ ಇದೀಗ ಮಳೆಗಾಲದಲ್ಲಿ ಗಸೆಮಿ ಮಾಡಿ ಹಾಕಿದ ಘಟನೆ ಯೇನೆಕಲ್ ಬಳಿ ಗುಂಡಡ್ಕದಲ್ಲಿ ನಡೆದಿದೆ. ಸದ್ಯಕ್ಕೆ ಈ ರೋಡಿನಲ್ಲಿ ಜೆಸಿಬಿ, ಹಿಟಾಚಿ,ಕ್ರೇನ್ ಮುಂತಾದ ಕೊಂಬಚೇಳು ಜಾತಿಯ ವಾಹನಗಳಿಗೆ ಮಾತ್ರ ಜಾರಿಕ್ಕೊಂಡು ಹೋಗಲು ಸಾಧ್ಯ. ಬಾಕಿ ವಾಹನಗಳು ಹೋದರೆ ಪಿಂಖಾನ್ ತಿರುಗಿಸುವುದರಲ್ಲಿ ಸಾಧ್ಯವೇ ಇಲ್ಲ.

ಅಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯೇನೆಕಲ್ ಕಡೆಯಿಂದ ಕಡಂಬಿಲ ಸೈಡಿಗೆ ಹೋಗುವ ರಸ್ತೆಯು ಎರಡು ಮಳೆ ಬಿದ್ದ ಕೂಡಲೇ ಕೋಮಕ್ಕೆ ಹೋಗಿದೆ. ಈ ಸೈಜಿನಲ್ಲಿ ರಸ್ತೆ ಹಾಳಾಗಲು ಕಾರಣ ಸ್ಥಳೀಯ ಆಡಳಿತ. ಯಾಕೆ ಹೀಗೆ ಎಂದು ಕೇಳಿದರೆ ಪೆದಂಬು ಮಾತಾಡುತ್ತಾರೆ. ರಿಪೇರಿ ಮಾಡ್ಲಿಕ್ಕೆ ನನ್ನ ಅಪ್ಪನ ಖದೀಂ ವರ್ಗ ಜಾಗ ಅಲ್ಲ ಎಂದೂ ಪೆದಂಬು ಡೈಲಾಗ್ ಡೆಲಿವರಿ ಆಗುತ್ತದೆ. ಹಾಗೆಂದು ಈ ಯೇನೆಕಲ್ – ಕಡಂಬಿಲ ರಸ್ತೆ ಸರಿಯಾಗಿಯೇ ಇತ್ತು. ಹಿಂದೆ ಹಾಕಿದ್ದ ಡಾಮಾರ್ ಢಮಾರ್ ಆಗಿ ರಸ್ತೆ ಬೋಲ್ಡ್ರಸ್ ನಲ್ಲಿ ಒಳ್ಳೆ ಸರ್ವಿಸ್ ಕೊಡುತ್ತಿತ್ತು. ಈ ರಸ್ತೆವಾಸಿಗಳು ಈ ರಸ್ತೆಯೊಂದಿಗೆ ಸುಖವಾಗಿದ್ದರು ಮತ್ತು ಪಾಲಿಗೆ ಬಂದದ್ದೇ ಪಂಚಕಜ್ಜಾಯ ಎಂದು ಸುಮ್ಮನಿದ್ದರು.

ಈಗೀರುತ್ತಲಾಗಿ ಈ ರಸ್ತೆಗೆ ಮೂರು ಮೋರಿ ಹಾಕಲು ಅನುದಾನ ಬಂತು. ಆ ಮೂರು ಮೋರಿಗಳಲ್ಲಿ ಒಂದು ಮೋರಿ ಗುಂಡಡ್ಕ ಎಂಬ ಸ್ಥಳಕ್ಕೆ ಬಂದು ಬಿತ್ತು. ಅಲ್ಲಿಂದ ಶುರುವಾಯಿತು ಈ ರಸ್ತೆಗೆ ಶನಿ ಗ್ರಹಚಾರ. ಗುಂಡಡ್ಕದಲ್ಲಿ ಮೋರಿ ಹಾಕಲು ರಸ್ತೆ ಎತ್ತರ ಮಾಡಿಕೆ ಉಟ್ಟು ಎಂದು ಸರಿ ಇದ್ದ ಬೋಲ್ಡ್ರಸ್ ರಸ್ತೆಯನ್ನು ಕೊಂಬಚೇಳು ತಂದು ಅಗೆದು ಹಾಕಲಾಯಿತು. ಅರೆಗ್ಗಲದಲ್ಲಿ ಎಲ್ಲವೂ ಸರಿ ಇತ್ತು. ಆದರೆ ಮುಂಗಾರು ಪೂರ್ವ, ಓಪನಿಂಗ್, ವನ್ ಡೌನ್ ಅಂತ ಬರ್ಸದ ಮೇಲೆ ಬರ್ಸ ಬಂತಲ್ಲ ರಸ್ತೆ ಬರ್ಬಾದ್ ಆಗಿ ಹೋಯ್ತು. ಇದೀಗ ರಸ್ತೆ ಪೋಡಿ ಕಾಯಿಸಲು ಕಡೆದ ಬಂದದ ಹಾಗೆ ಆಗಿದೆ. ನಡೆದುಕೊಂಡು, ಓಡಿಕ್ಕೊಂಡು, ಸರಿದಾಡಿಕೊಂಡು, ಹರಿದಾಡಿಕೊಂಡು, ಹಾರಿಕ್ಕೊಂಡು ಹೋಗಲು ಸಾಧ್ಯವೇ ಇಲ್ಲ. ಇನ್ನು ವಾಹನಗಳ ಪೈಕಿ ಯಾವುದೇ ವಾಹನ ಹೋದರೂ ಪಿಂಖಾನ್ ತಿರ್ಗಿಸಿ, ತಿರ್ಗಿಸಿಕೊಂಡು ಪಾಸಾದರೆ ಬಚಾವ್. ಇಲ್ಲದಿದ್ದರೆ ಚರಂಡಿಗೆ ಗ್ಯಾರೆಂಟಿ. ಈ ರಸ್ತೆಯಲ್ಲಿ ನಿತ್ಯ ಅನೇಕ ಜನ ತಮ್ಮ ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ.

ಹಾಗೆಂದು ಈ ರಸ್ತೆ ದುಸ್ಥಿತಿ ಬಗ್ಗೆ ಈ ರಸ್ತೆಯ ಸಂಬಂಧ ಪಟ್ಟವರಿಗೆ ದೂರು ಕೊಡಲಾಗಿದೆ, ಮನವರಿಗೆ ಮಾಡಲಾಗಿದೆ. ದೂರು ಕೊಡಲು ಬಂದವರಿಗೆ “ಈ ರಸ್ತೆ ನನ್ನಪ್ಪನ ವರ್ಗ ಜಾಗದಲ್ಲಿ ಇಲ್ಲ ರೀಪೇರಿ ಮಾಡಲು” ಎಂದು ಸ್ಥಳೀಯ ತುಂಡು ಲೀಡರ್ ಒಬ್ಬರು ಕೊಚ್ಚಿ ಹಾಕಿದ್ದಾರೆ. ಇನ್ನು ಸ್ಥಳೀಯ ಪಿಡಿಒ 15 ಲೋಡ್ ಚರೆಲ್ಲ್ ತಂದು ಹಾಕಿದ್ದೇನೆ ಎಂದು ಕೊಚ್ಚಿಕೊಂಡದ್ದು ಬಿಟ್ಟರೆ ರಸ್ತೆ ಇನ್ನೂ ವೆಂಟಿಲೇಟರ್ ನಲ್ಲೇ ಇದೆ. ಒಂದೆರಡು ಲೋಡ್ ಚರೆಲ್ಲ್ ತಂದು ಹಾಕಿದ್ದನ್ನು ಕಣ್ಣಾರೆ ಕಂಡವರು, ಕಿವಿಯಾರೆ ಕೇಳಿದವರು ಲೋಕಲ್ ನಲ್ಲಿ ಇದ್ದಾರೆಯೇ ಹೊರತು 15 ಲೋಡ್ ಚರೆಲ್ಲ್ ಎಲ್ಲಿಗೆ ಬಿದ್ದಿದೆ ಎಂದು ಬಲಿಮ್ಮೆಯಲ್ಲೇ ಕೇಳಬೇಕಷ್ಟೇ. ಒಂದು ಮಾಹಿತಿ ಪ್ರಕಾರ ಗುತ್ತಿಗೆದಾರನಿಗೆ ಮೋರಿಯ ಬಿಲ್ ಪೆಂಡಿಂಗ್ ಆಗಿದ್ದು ಬಿಲ್ ಪಾಸ್ ಆಗದೆ ಕೆಲಸ ಮುಂದುವರೆಸಲು ಅವರಿಗೆ ಶಕ್ತಿ ಇಲ್ಲಂತೆ ಎಂದು ತಿಳಿದುಬಂದಿದೆ.

ಅಲ್ಲ ಮಾರಾಯ್ರೆ, ಆ ಸುಬ್ರಹ್ಮಣ್ಯ ಪಂಚಾಯ್ತಿ ಅಷ್ಟು ದೊಡ್ಡ ಪಂಚಾಯ್ತಿ. ಇನ್ ಕಮ್ ಕೂಡ ದೊಡ್ಡದಾಗಿಯೇ ಇದೆ. ಅಷ್ಟು ಆದಾಯ ಇರುವಾಗ ಈ ರಸ್ತೆ ಕೆಲಸ ಮುಂಗಾರು ಪೂರ್ವದಲ್ಲೇ ಮಾಡಿದ್ದರೆ ಏನಾಗುತ್ತಿತ್ತು. ಅದರಲ್ಲೂ ಈ ರಸ್ತೆಗೆ ಮೂರು ಮೋರಿಗಳು ಪಾಸಾಗಿದ್ದು ಎರಡು ಮಾತ್ರ ಹಾಕಲಾಗಿದೆ. ಉಳಿದ ಒಂದು ಮೋರಿ ಮಾದನ ಮನೆ ಕಡೆ ಉರುಳಿ ಕೊಂಡು ಹೋಗಿದ್ದನ್ನು ನೋಡಿದವರಿದ್ದಾರೆ, ಕೇಳಿದವರಿದ್ದಾರೆ. ಇದನ್ನೆಲ್ಲ ಸ್ಥಳೀಯ ಜನಪ್ರತಿನಿಧಿಗಳು ಯಾಕೆ ಗಮನಿಸುತ್ತಿಲ್ಲ? ಕೋಟಿ ಮನೆಯ ಲೀಡರ್ ಯಾಕೆ ಸುಮ್ಮನಿದ್ದಾರೆ? ಮಾದನ ಮನೆಗೆ ಮೋರಿ ಮಾರಿದ ವಿಷಯ ಕೋಟಿ ಮನೆಗೆ ಗೊತ್ತಿಲ್ವಾ? ಉರುಳಿ ಹೋದ ಮೋರಿ ಬಗ್ಗೆ ಪಿಡಿಒಗೆ ಗೊತ್ತಿಲ್ವಾ? ಹಾಗಾದರೆ ಮೋರಿ ಮಾರಿದ್ದು ಯಾರು? ತಾಲೂಕು ಪಂಚಾಯಿತಿ ಯಾಕೆ ಸುಮ್ಮನಿದೆ? ಯೇನೆಕಲ್ ನಲ್ಲಿ ಪ್ರಶ್ನೆಗಳ ಮುಂಗಾರು ಮಳೆ ಕೂಡ ಶುರುವಾಗಿದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top