ಬೆಂಗಳೂರು – ಮಂಗಳೂರು ರೈಲು ಮಾರ್ಗದ ಫೇಮಸ್ ಜಂಕ್ಷನ್ ನೆಟ್ಟಣದಲ್ಲಿ ರೈಲು ಸ್ಟೇಷನ್ ಸುತ್ತ ಮುತ್ತ ರೈಲು ಜಾಗ ಒತ್ತುವರಿ ಆಗುತ್ತಿರುವ ಬಗ್ಗೆ ಮಾಹಿತಿಗಳು ಬಂದಿದ್ದು ರೈಲು ಇಲಾಖೆ ಈ ಬಗ್ಗೆ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಸ್ವಲ್ಪ ಸ್ವಲ್ಪವೇ ಜಾಗೆ ಗುಳಿಗೆ ನುಂಗಿದ ಹಾಗೆ ನುಂಗಲಾಗುತ್ತಿದೆ. ಬೆಳಿಗ್ಗೆ ಒಂದು ಸೆಂಟ್ಸ್, ಮಧ್ಯಾಹ್ನ ಊಟಕ್ಕೆ ಮೊದಲು ಒಂದು ಸೆಂಟ್ಸ್, ನೈಟ್ ಮಲಗುವ ಮೊದಲು ಎರಡು ಸೆಂಟ್ಸ್ ಮತ್ತು ಗ್ಯಾಸ್ಟ್ರಿಕ್ ಗೆ ಒಂದು ಸೆಂಟ್ಸ್ ಇತ್ಯಾದಿ.
ಅಲ್ಲಿ ಬೆಂಗ – ಮಂಗ ರೈಲು ಮಾರ್ಗದ ಫೇಮಸ್ ಜಂಕ್ಷನ್, ದೊಡ್ಡ ದೊಡ್ಡ ಪೆಟ್ಟಿಗೆಯ ರೈಲುಗಳು ಘಾಟಿ ಹತ್ತುವ ಮೊದಲು ಮತ್ತು ಘಾಟಿ ಇಳಿದ ನಂತರ ಅಮ್ಮಬ್ಬಾ ಮಾಡುವ ನೆಟ್ಟಣ ರೈಲು ಸ್ಟೇಷನ್ ಸುತ್ತ ಮುತ್ತ ಇರುವ ರೈಲು ಜಾಗೆಗಳು ಒತ್ತುವರಿ ಆಗುತ್ತಿದೆ ಎಂದು ತಿಳಿದುಬಂದಿದೆ. ಸ್ಟೇಷನ್ ಸುತ್ತ ಪಿಡಬ್ಲ್ಯೂಡಿ, ಪಂಚಾಯ್ತಿ ಪರ್ಮಿಷನ್ ಇಲ್ಲದೆ ಅಂಡಿಗುಂಡಿ ಅಂಗಡಿಗಳನ್ನು, ಮನೆಗಳನ್ನು ಕಟ್ಟಿ ನಂತರ ಮೆಲ್ಲಗೆ ರೈಲು ನಿದ್ದೆ ಮಾಡುವ ಸಮಯದಲ್ಲಿ ರೈಲ್ವೆ ಬೌಂಡರಿ ಒಳಗೆ ಈಟಿನ ಕೋಲಿನ ಬೇಲಿ ಹಾಕುತ್ತಾ ಹಾಕುತ್ತಾ ಮುಂದೆ ಮುಂದೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಓ ಮೊನ್ನೆ ನೈರುತ್ಯ ರೈಲು ಅಧಿಕಾರಿಗಳ ಗ್ಯಾಂಗ್ ನೆಟ್ಟಣಕ್ಕೆ ಬಂದಿದ್ದು ಒತ್ತುವರಿ ವಿಷಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ನೆಟ್ಟಣ ರೈಲು ಸ್ಟೇಷನ್ ಗೆ ಸುಣ್ಣ ಬಣ್ಣ ಬಳಿಯಲಿದ್ದು ಈ ಸಮಯದಲ್ಲಿ ದೊಡ್ಡ ದೊಡ್ಡ ರೈಲು ಅಧಿಕಾರಿಗಳು ನೆಟ್ಟಣಕ್ಕೆ ಬಂದ ಕಾರಣ ಒತ್ತುವರಿ ವಿಷಯಕ್ಕೆ ರೆಕ್ಕೆಪುಕ್ಕ ಬಂದಿದೆ. ರೈಲಿನ ಬಗ್ಗೆ ಒಂಚೂರು ಸಾ…ಸೂ.. ಅಂದರೂ ರೈಲ್ವೇ ಪೋಲಿಸ್ ಬಂದು ನಮ್ಮನ್ನು ಎತ್ತಾಕಿಕೊಂಡು ಹೋಗುವಷ್ಟು ಕಠಿಣ ರೂಲ್ಸ್ ಇರುವ ರೈಲು ಇಲಾಖೆಯಲ್ಲಿ ರೈಲಿನ ಜಾಗೆ ಒತ್ತುವರಿ ಆದರೂ ಇಲಾಖೆ ಯಾಕೆ ಮುಸುಕು ಎಳೆದು ಮಲಗಿದೆ ಎಂಬುದು ಸಾರ್ವಜನಿಕರ ಪ್ರಶ್ನೆ.

ಹಾಗೆ ನೆಟ್ಟಣದಲ್ಲಿ ರೈಲು ಜಾಗೆ ಗುಳುಂ ಆಗುತ್ತಿರುವ ಬಗ್ಗೆ ಮಾಹಿತಿಗಳು ಮೇಲೆ ಮೇಲೆ ಹೋಗಿದ್ದು ಬೇಗದಲ್ಲೇ ರೈಲ್ವೇ ಲ್ಯಾಂಡ್ ಸರ್ವೆಗೆ ಆದೇಶ ಹೊರಡಿಸುವ ಸೂಚನೆ ಇದೆ. ಎಲ್ಲಿಯಾದರೂ ರೈಲು ಇಲಾಖೆ ಸರ್ವೇ ನಡೆಸಿದರೆ ಕೆಲವು ಮನೆಗಳ ಮೂಂಕು ಮುಸುಂಟು, ಕೆಲವು ಅಂಗಡಿಗಳ ಮಂಡೆ, ಕೈಕಾಲು ಹೋಗಿ ಅಂಗವಿಕಲ ಆಗುವ ಅಪಾಯಗಳಿವೆ. ಈ ನಡುವೆ ನೆಟ್ಟಣ ರೈಲಿನ ಗುಜುರಿ ಕೂಡ ಸದ್ದಿಲ್ಲದೆ ಸುದ್ದಿಯಾಗುತ್ತಿದೆ. ರೈಲಿಗೆ ದೇವರೇ ಗತಿ.
ಮಾಸ್ಟರಲ್ಲಂತೆ ಗಡ!
ಅಲ್ಲಿ ಗುತ್ತಿಗಾರು ಪೈಕ ರಸ್ತೆಯ ಹಸಿ ಕಾಂಕ್ರೀಟ್ ಮೇಲೆಯೇ ಕಾರು ಚಲಾಯಿಸಿ ವಿಕೃತಿ ಮೆರೆದ ಬಗ್ಗೆ ವೈರಲ್ ಆದ ಘಟನೆಯಲ್ಲಿ ಒಬ್ಬ ಮಾಸ್ಟರ್ ಮೇಲೆ ಡೌಟ್ ಕ್ರಿಯೇಟ್ ಆಗಿತ್ತು. ಆದರೆ ಮಾಸ್ಟರ್ ಕಾರಿಗೆ ಮುಂಚೆಯೇ ಒಂದು ಕೆಂಪು ಆಲ್ಟೋ ಈ ಪಜ್ಜಿ ರಸ್ತೆಯಲ್ಲಿ ಹೋಗಿದ್ದು ಈ ವಿಕೃತಿ ಆ ಕೆಂಪು ಆಲ್ಟೋದ್ದೇ ಎಂದು ತಿಳಿದುಬಂದಿದೆ. ಇದೀಗ ಊರವರು ಆ ಕೆಂಪು ಆಲ್ಟೋದ ಹುಡುಕಾಟದಲ್ಲಿದ್ದು ಸಿಕ್ಕಿದರೆ ಪ್ರಸಾದ ವಿತರಣೆ ನಡೆಯಲಿದೆ.

