
ಮಂಗಳೂರು ತಾಲೂಕು ಗುರುಪುರ ಸಮೀಪದ ಬಂಡಸಾಲೆಯಲ್ಲಿ ಯುವಕರ ತಂಡವೊಂದು ವಿಶಿಷ್ಟ ರೀತಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಿ ವೈರಲ್ ಆಗಿದ್ದಾರೆ. ಇಲ್ಲಿ ಬಸ್ಸೇ ಬಸ್ ನಿಲ್ದಾಣ.

ಹಾಗೆಂದು ಬಸ್ ನಿಲ್ದಾಣಗಳನ್ನು ಬೇರೆ ಬೇರೆ ವಿನ್ಯಾಸದಲ್ಲಿ ನಿರ್ಮಿಸುವುದು ವಾಡಿಕೆ. ಯಾರದೋ ಸ್ಮರಣಾರ್ಥ ಪ್ರೈವೇಟ್ ಬಸ್ ನಿಲ್ದಾಣಗಳು ಇಂಥ ಚಿತ್ರವಿಚಿತ್ರ ವಿನ್ಯಾಸಗಳಲ್ಲಿ ನಿರ್ಮಾಣವಾಗುತ್ತದೆ. ಕೆಲವು ಕಡೆ ಸ್ಥಳೀಯ ಯುವಕ ಸಂಘಗಳು, ಯುವತಿ ಮಂಡಳಿಗಳು, ಜೆ.ಸಿ, ರೋಟ್ರಿ, ಲಯನು ಮುಂತಾದ ಸಂಸ್ಥೆಗಳ ಬಸ್ ನಿಲ್ದಾಣಗಳೂ ವಿಶಿಷ್ಟ ವಿನ್ಯಾಸಗಳಲ್ಲಿ ಇರುತ್ತದೆ. ಇದೀಗ ಮಂಗಳೂರು – ಬೆದ್ರ ರೋಡಿನ ಗುರುಪುರ ಸಮೀಪದ ಬಂಡಸಾಲೆಯಲ್ಲಿ ಯುವಕರ ತಂಡವೊಂದು ಬಸ್ ಮಾದರಿಯಲ್ಲೇ ಬಸ್ ನಿಲ್ದಾಣ ನಿರ್ಮಿಸಿದೆ. ಇದೊಂದು ವಿಶಿಷ್ಟ ವಿನ್ಯಾಸ, ಆಧುನಿಕ ಸೌಲಭ್ಯಗಳು ಹಾಗೂ ಸಾಮಾಜಿಕ ಕಳಕಳಿಯಿಂದ ಎಲ್ಲರ ಗಮನ ಸೆಳೆದಿದೆ.

ಹಾಗೆಂದು ಸ್ಥಳೀಯ ಬಂಡಸಾಲೆಯ ವಿ2 ಗೈಸ್ ತಂಡಕ್ಕೆ ಊರಿಗೆ ಏನಾದರೂ ಮಾಡಬೇಕೆಂಬ ಕನಸಿತ್ತು. ಬಂಡಸಾಲೆಯಲ್ಲಿ ಜನ ಬಸ್ಸಿಗೆ ಕಾಯಲು ಸರಿಯಾದ ಆಶ್ರಯ ಇಲ್ಲ ಎಂದು ಮನಗಂಡ ವಿ2 ಗೈಸ್ ಬಂಡಸಾಲೆಯಲ್ಲಿ ಒಂದು ಬಸ್ ನಿಲ್ದಾಣ ಮಾಡಲು ಸ್ಕೆಚ್ ಹಾಕಿತ್ತು. ಸ್ಕೆಚ್ಚು ವಿಶಿಷ್ಟ ರೀತಿಯಲ್ಲಿ ಇತ್ತು ಮತ್ತು ಗಮನ ಸೆಳೆಯುವಂತೆ ಇತ್ತು.
ಶುರುವಿಗೆ 2 ಲಕ್ಷದಲ್ಲಿ ಮುಗಿಸುವ ಅಂತ ಇದ್ದ ಬಜೆಟು ನಂತರ ಪ್ರಯಾಣಿಕರಿಗೆ ಎಲ್ಲಾ ಸೌಲಭ್ಯಗಳನ್ನು ಕೊಡಬೇಕು ಎಂಬ ಇರಾದೆಯಿಂದ ಬಸ್ ಸ್ಟ್ಯಾಂಡ್ ಬಜೆಟ್ 6 ಲಕ್ಷದ ತನಕ ಏರಿದೆ. ಕೊನೆಗೆ ಎಲ್ಲಾ ಮುಗಿಯುವಾಗ ಬಸ್ ಸ್ಟ್ಯಾಂಡ್ ಯುವಕರ ಏಳು ಲಕ್ಷ ತಿಂದು ಮುಗಿಸಿದೆ. ಇದೀಗ ಬಂಡಸಾಲೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದು ಬಂಡಸಾಲೆ ಜನ ಫುಲ್ ಖುಷ್ ಆಗಿದ್ದಾರೆ.
ಹಾಗೆಂದು ಎಲ್ಲೂ ಇಲ್ಲದ, ಯಾರೂ ಮಾಡದ ಬಸ್ ನಿಲ್ದಾಣ ಮಾಡಬೇಕೆಂದು ವಿ2 ಗೈಸ್ ಪರತ್ ಬಸ್ಸೊಂದನ್ನು ತಂದು ಅದನ್ನೇ ಆಲ್ಟ್ರೇಶನ್ ಮಾಡಿ ಬಸ್ ನಿಲ್ದಾಣ ಮಾಡಿದ್ದಾರೆ.



