ದೇವರಿಗೆ ತಿಂಗಳು ತಪ್ಪಿದೆ!

Pattler News

Bureau Report

ಮುಂಗಾರು ಕ್ಷೀಣ ಮಾರಾಯ್ರೆ. ಮುಂಗಾರು ಪೂರ್ವ ಮಳೆಯೂ ಇಲ್ಲ, ಪಶ್ಚಿಮ ಮಳೆಯೂ ಇಲ್ಲ. ಆಕಾಶದಲ್ಲಿ ಮೋಡಗಳ ಸ್ಟಾಕ್ ಇಲ್ಲ. ಲೋಡ್ ಬರುವ ಅಂದಾಜೂ ಕಾಣ್ತಿಲ್ಲ. ಜೂನ್ ಜುಲಾಯಿ ಒಟ್ಟಿಗೆ ಬಂದರೂ ಇನ್ನೂ ತೋಡಿನಲ್ಲಿ ಒಂದು ಟ್ರಿಪ್ ನೀರು ಕೂಡ ಹೋಗಿಲ್ಲ. ಕಡೇ ಪಕ್ಷ ತೋಡು ಕ್ಲೀನಿಂಗ್ ಕೂಡ ಆಗಿಲ್ಲ. ಮಳೆಗೆ ಏನಾಯ್ತು ಅಂತಲೇ ಗೊತ್ತಾಗುತ್ತಿಲ್ಲ.

“ನಿಮ್ಗೆ ಸೌದೆ ಆಯ್ತಾ” ಅಂತ ಮೊನ್ನೆ ಯಾರೋ ಕೇಳಿದ್ದರು. ಬೆಚ್ಚಿ ಬಿದ್ದು ಚಿವುಟಿ ನೋಡಿಕೊಂಡಿದ್ದೆ. ಈ ಸಲ ಸೌದೆ ಕೆಲಸ ಮೇ ಎಂಡ್ ಗೆ ಮುಗಿಸಿ ಮೊಟ್ಟಿ ಕೂಡ ಆಗಿದೆ. ಇಲ್ಲದಿದ್ದರೆ ಅಮ್ಮ ಬಿಡಲ್ಲ. ಸೌದೆಗಾಗಿ ಜಗಳಗಳೇ ನಡೆದು ಹೋಗಿದೆ. ಅದರಲ್ಲೂ ಮೇ ತಿಂಗಳಲ್ಲಿ ಪ್ರತೀ ವರ್ಷ ಸೌದೆ ಜಗಳ ಇದ್ದದ್ದೇ. ಮಾಡಿಸ್ತೇನೆ ಅಮ್ಮ ಅಂದರೆ ಕೇಳೋದೇ ಇಲ್ಲ. ಸೌದೆಗಾಗಿ ಬೊಬ್ಬೆ, ಪ್ರತಿಭಟನೆ, ಬಾವಿಗಿಳಿದು ಪ್ರತಿಭಟನೆ, ಅವಿಶ್ವಾಸ ನಿರ್ಣಯ, ಹಕ್ಕುಚ್ಯುತಿ ಮಂಡನೆ ಇತ್ಯಾದಿ ಮೇ ಶುರುವಲ್ಲೇ ಶುರುವಾಗಿ ಬಿಡುತ್ತದೆ. ಆಯ್ತು ಸೌದೆ ಮೆಷಿನ್ ಆನಂದನಿಗೆ ಮೇ ತಿಂಗಳು ಸೀಸನ್. ಆನಂದನ ಡೇಟ್ಸ್ ಸಿಗಲ್ಲ. ಆದರೂ ಬಂದು ಕುಂಟೆಯನ್ನು ಸೌದೆ ಮಾಡಿ ಹೋಗಿದ್ದಾನೆ. ಟೋಟಲಾಗಿ ಸೌದೆ ಅಟ್ಟಿ ಕಟ್ಟಿ ಗಿರ್ಜನವರು ಕೈಕಾಲು ತೊಳೆಯುವಲ್ಲಿ ತನಕ ಹತ್ತು ಸಾವ್ರ ಬೇಕು. ಹತ್ತು ಗ್ಯಾಸ್ ಅಂಡೆ ತರಬಹುದಲ್ವಾ ಅಮ್ಮ, ಸೌದೆ ಯಾಕೆ ಅಂತ ಹೇಳಿದ್ರೆ ಕೇಳಲ್ಲ ಮಾರಾಯ್ರೆ. ಸೌದೆ ಆಗದಿದ್ದರೆ ಅಳುವೇ ಬಂದು ಬಿಡುತ್ತದೆ ಅಮ್ಮನಿಗೆ. ಅಂಡೆ ಮುಗಿಸಲು ಅಮ್ಮನಿಗೆ ಒಂದು ಕುರೆ ಆಸೆ.

“ಅಣ್ಣಾ, ಮಳೆ ಬರ್ಲಿ, ಬಾರದೆ ಇರ್ಲಿ ಜೂನ್ ಫಸ್ಟ್ ಗೆ ತೋಟಕ್ಕೆ ಮದ್ದು ಬಿಡಲೇ ಬೇಕು” ಅಂತ ಚೆನ್ನಾವರ ಶೆಟ್ರು ಒಂದು ಕಿವಿ ಮಾತು ಹೇಳಿದ್ದರು. ಆ ಕಿವಿ ಮಾತನ್ನು ಪ್ರತಿವರ್ಷ ಪಾಲಿಸುತ್ತಾ ಬರಲಾಗಿದೆ. ಸೌದೆ ಗೌಜಿಯಲ್ಲಿರುವಾಗಲೇ ಮದ್ದು ಬಿಡುವ ಸ್ಪೆಷಲಿಸ್ಟ್ ಗಿರೀಶನನ್ನು ಜೂನ್ ಒಂದಕ್ಕೆ ಬುಕ್ ಮಾಡಿದ್ದೆ. ಗಿರೀಶನೂ ಜೂನ್ ಒಂದಕ್ಕೆ ಡೇಟ್ ಕೊಟ್ಟಿದ್ದ. ಎರಡು ಮೈಲುತುತ್ತಿಗೆ ನಾಲ್ಕು ಸುಣ್ಣ ಬಿಡಲಾಗಿದೆ. ಮದ್ದು ಬಿಡುವ ದಿನ ಮದುವೆ ಸಂಭ್ರಮ ಮನೆಯಲ್ಲಿ. ಸುಣ್ಣದ ಪಾಯಸಕ್ಕೆ ಬಿಸಿನೀರು ಕಾಯಿಸುದೇನು, ಮೈಲು ತುತ್ತು ಬೊದುಲರ ಹಾಕುವುದೇನು, ಡ್ರಮ್ಮಿಗೆ ನೀರು ತುಂಬಿಸುವ ಕಾರ್ಯಕ್ರಮ, ಪೈಪ್ ಎಳೆಯುವವನು, ಗಾಳಿ ಹಾಕುವ ಸೋಮಾರಿ ಹೀಗೆ ಗೌಜಿಯೋ ಗೌಜಿ. ಇನ್ನು ಮದ್ದು ಬಿಡುವ ಪಂಪಿನ ಇಸಿಜಿ, ಸಿಟಿ ಸ್ಕ್ಯಾನ್, ಎಕ್ಸ್ ರೇ, ಫಿಟ್ ನೆಸ್ ಪರೀಕ್ಷೆ, ಫಿಸಿಯೋ ಎಲ್ಲಾ ಮುಗಿಸಿ ಫಸ್ಟ್ ಡೋಸ್ ಮದ್ದು ಪಿಂಗಾರಕ್ಕೆ ಬೀಳುವಾಗ ಮನೆಯಿಂದ”ಚಾಗ್ ಬಲೇ” ಕೂಕುಲು ಬಿದ್ದು ಬಿಡುತ್ತದೆ. ಹಾಗೆ ಮುಂಗಾರು ಪೂರ್ವ ಮುಗಿದು ಒರಿಜಿನಲ್ ಮುಂಗಾರು ಬರುವ ದಿನವೇ ತೋಟ ಕಾರ್ಯಕ್ರಮ ಮುಗಿಸಿ ಮೇಲೆ ಬಂದಾಗಿದೆ.

ಮಳೆ ಇಲ್ಲ ಮಾರಾಯ್ರೆ. ಮಳೆಯ ಲಕ್ಷಣಗಳೂ ಕಾಣಿಸ್ತಿಲ್ಲ. ಭಂಡಾರ ಎಲ್ಲಿಗೆ ಹೋಗಿದೆ ಅಂತಲೇ ಗೊತ್ತಿಲ್ಲ. ಮುಂಗಾರು ಪೂರ್ವ ಮಳೆ ಕಾರಣ ತೋಟ ತುಂಬಾ ಬಲ್ಲೆ ಬಂದು ತೋಟಕ್ಕೆ ಕಾಲು ಹಾಕ್ಲಿಕ್ಕೆ ಸಾಧ್ಯವಿಲ್ಲ. ಟೈಗರ್ ಬಂದು ಕುಂತರೂ ಕಾಣದಷ್ಟು ಬಲ್ಲೆ ಬಂದಿದೆ. ಇನ್ನು ತೋಟದಲ್ಲಿ, ಮನೆಯಲ್ಲಿ ಡೆಂಗ್ಯೂ, ಮಲೇರಿಯಾ ಏಜೆಂಟ್ ಗಳ ಬಗ್ಗೆ ಹೇಳಿ ಸುಖವಿಲ್ಲ. ವಿಜಯ್ ಸುತ್ತಾ ಪ್ರೆಸ್ ನವರು ಮುತ್ತಿಗೆ ಹಾಕಿದ ಹಾಗೆ ಮಾರಾಯ್ರೆ. ನಮ್ಮನ್ನೇ ಎತ್ತಿಕ್ಕೊಂಡು ಹೋಗುತ್ತವೆಯೋ ಅನ್ನುವಷ್ಟು ಉಮಿಲ್. ವೀಣೆ ಕೈಯಲ್ಲೇ. ನನ್ನ ಪ್ರಕಾರ ಈ ದೇವರಿಗೆ ತಿಂಗಳು ತಪ್ಪಿದೆ. ಅವನು ಮುಂಗಾರು ಪೂರ್ವವನ್ನು ಜೂನ್ ಜುಲೈ ಅಂದು ಕೊಂಡನೋ ಅಥವಾ ವರುಣನತ್ರ ಏನಾದರೂ ಕಿರಿಕ್ ಮಾಡಿಕೊಂಡಿದ್ದನೋ ಗೊತ್ತಿಲ್ಲ. ಅಂತೂ ಇಂತೂ ಕುಂತಿ ಮಕ್ಲಿಗೆ ಮಳೆ ಇಲ್ಲ. ಮೇ ಅಕೇರಿಗೆ ಅವಮಾನ ತಜ್ಞರು ಅಲ್ಲಿ ಅಂಡಮಾನ್ ಬಳಿ ಲೋಡ್ ಬಂದು ನಿಂತಿದೆ ಅಂದಿದ್ದರು. ಲೋಡ್ ಈ ಕಡೆ ಮೂವ್ ಆಗುತ್ತಿಲ್ಲ ಎಂದು ಕೂಡ ಹೇಳಿದ್ದರು. ಹಾಗಾದರೆ ಅಂಡಮಾನ್ ಗೆ ಬಂದ ಲೋಡ್ ಕೇರಳಕ್ಕೆ ಯಾಕೆ ಬರಲಿಲ್ಲ? ಕೇರಳಕ್ಕೆ ಬಂದಿದ್ದು ಕರ್ನಾಟಕಕ್ಕೆ ಯಾಕೆ ಬರ್ಲಿಲ್ಲ ಎಂಬುದೇ ದೇವರಲ್ಲಿ ಕೇಳಬೇಕಾದ ಪ್ರಶ್ನೆ. ಸೌದೆ ಖಾಲಿಯಾಗುತ್ತಿದೆ, ಸೆಕೆಂಡ್ ರೌಂಡಿಗೆ ಗಿರೀಶ ಜುಲೈ ಹದಿನೈದಕ್ಕೆ ಡೇಟ್ ಕೊಟ್ಟಿದ್ದಾನೆ. ಆದ್ರೆ ಮಳೆ ಇಲ್ಲ.

ಹಾಗೆಂದು ಬೇಸ ಹೋಗಿ ಕಾರ್ತೆಲ್ ಶುರುವಾಗಿದೆ. ಈ ಸಮಯದಲ್ಲಿ ನೀರಾಗಿ ಕಪ್ಪೆಗಳ ಆರ್ಭಟ ಮೇರೆ ಮೀರುತ್ತಿತ್ತು, ಇರಿಂಟಿಗಳ ಸೌಂಡ್ ಕಿವಿಗಡಚಕ್ಕುವಂತಿರುತ್ತಿತ್ತು. ಆದರೆ ಆಕಾಶದಲ್ಲಿ ಮೋಡಗಳೇ ಇಲ್ಲದೆ ಆ ಸೂರಜ್ ಪೊತ್ತುವುದರಲ್ಲಿ ತಡೆಯಾಗುತ್ತಿಲ್ಲ. ಒಂಚೂರು ಬ್ರೈಟ್ ನೆಸ್, ಶಾರ್ಪ್ ನೆಸ್ ಕಡಿಮೆ ಮಾಡದೆ ಸಿಕ್ಕಿದ್ದೇ ಚಾನ್ಸ್ ಎಂದು ಬಿಸಿಲ ಮಳೆ ಸುರಿಸುತ್ತಿದ್ದಾನೆ, ಬೆವರ ಹನಿ ಇಳಿಸುತ್ತಿದ್ದಾನೆ. ಮಳೆ ಬರ್ಲಿ, ಮಳೆ ಬರ್ಲಿ, ದಿನಕ್ಕೆ ಒಂದಾದರೂ ಬರ್ಲಿ ಎಂಬ ಕೂಗು ಎದ್ದಿದೆ. ಎಲೆ ಚುಕ್ಕಿ ರೋಗಕ್ಕೆ ಮಳೆ ಕಡಿಮೆ ಬಂದಷ್ಟು ಒಳ್ಳೇದು ಎಂದು ಕೃಷಿ ಪಂಡಿತರು ಹೇಳಿದರೂ ಸ್ನಾನಕ್ಕೆ ಬೇಡವಾದರೂ ಕುಡಿಯಲಾದರೂ ನೀರು ಬೇಕಲ್ಲ ಮಾರಾಯ್ರೆ. ಕ್ಯಾಲೆಂಡರಿನ ಜೂನ್ ತಿಂಗಳ ಪಟ್ಟಿಯಲ್ಲಿ ಇನ್ನು ಕೊನೆಯ ಡೆಟ್ ಓವರ್ ಗಳು ಮಾತ್ರ ಉಳಿದಿದ್ದು ಆಲ್ ರೌಂಡರ್ ಗಳು ಮತ್ತು ಬೌಲರ್ ಗಳು ಮಾತ್ರ ಬ್ಯಾಟಿಂಗಿಗೆ ಬಾಕಿ. ಮಳೆ ಇಲ್ಲ. ಕಾರ್ತೆಲ್ ತಿಂಗಳು ರನ್ನಿಂಗ್ ಇದ್ದು ಇನ್ನು ಆಟಿದ್ದು ಒಂದು ಓವರ್ ಮತ್ತು ಸೋಣದ್ದು ಒಂದು ಓವರ್ ಮಾತ್ರ ಉಳಿದಿದೆ. ಅದರಲ್ಲಿ ವರುಣ ಏನಾದರೂ ದಡಬಡ ಹೊಡೆದ್ರೆ ಬಚಾವ್. ಇಲ್ಲದಿದ್ದರೆ ಬರ್ಪಿ ವರ್ಷಕ್ಕೆ ಸ್ನಾನಕ್ಕೆ ವಾಟರಿಲ್ಲದ ಪರಿಸ್ಥಿತಿ ಬರಬಹುದು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top