ಕರೆಂಟ್ ಇಲ್ಲದವರಿಗೆ ಕರೆಂಟ್ ಮಾಡಿಸಿ ಕೊಡುತ್ತೇನೆ ಎಂದು ಜನರಿಂದ ಕಲೆಕ್ಷನ್ ಮಾಡಿ ಇದೀಗ ಕರೆಂಟ್ ಕಜೆಂಟ್ ಆದ ಚಿಕ್ಕ ಪ್ರಕರಣ ಒಂದು ಮಡಿಕೇರಿ ಘಟ್ಟದ ತಪ್ಪಲಿನಲ್ಲಿ ನಡೆದಿದೆ.
ಅದು ಚೆಂಬು ಗ್ರಾಮದ ದಬ್ಬಡ್ಕ ಏರಿಯಾ. ಮಡಿಕೇರಿ ಘಟ್ಟದ ತಪ್ಪಲಿನಲ್ಲಿದೆ. ಗಾಂಧಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ಇಷ್ಟು ವರ್ಷ ಕಳೆದರೂ, ಸಿಲಿಕಾನ್ ಸಿಟಿ, ಬುಲೆಟ್ ಟ್ರೈನು, ಸ್ಮಾರ್ಟ್ ಸಿಟಿ, ಚಂದಿರನ ಅಂಗಳ, ಮಂಗಳನ ದರ್ಖಾಸ್ತು ಎಂದೆಲ್ಲ ನಾವು ಕೊಚ್ಚಿ ಕೊಳ್ಳುತ್ತಿದ್ದರೂ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಎಂಬ ಏರ್ಯಾಕ್ಕೆ ಇನ್ನೂ ಕರೆಂಟ್ ಬಂದಿಲ್ಲ ಮಾರಾಯ್ರೆ. ಕೊಡಗು ಜಿಲ್ಲೆಯ ಅಷ್ಟೂ ರಾಜಕಾರಣಿಗಳು ದಬ್ಬಡ್ಕದ ಮಟ್ಟಿಗೆ ಇಷ್ಟು ದಿನವೂ ಬಿಟ್ಟಿದ್ದು ರೈಲು ಎಂದು ಜನರಿಗೆ ಈಗಾಗಲೇ ಗೊತ್ತಾಗಿ ಹೋಗಿದೆ . ಆದರೆ ಈಗ ಒಬ್ಬ ಬಂದು ಬುಲೆಟ್ ರೈಲೇ ಬಿಟ್ಟು ದಬ್ಬಡ್ಕದ ಇಪ್ಪತ್ತೆಂಟು ಮನೆಗಳ ಜನರಿಗೆ ಕರೆಂಟ್ ಇಲ್ಲದೆಯೇ ಚಿಕ್ಕ ಶಾಕ್ ಕೊಟ್ಟಿದ್ದಾನೆ.
ಅವನು ಲೋಕಲ್ ಕಾಂಗ್ರೆಸ್ ಲೀಡರ್. ಹಿಂದೆ ಜೆಡಿಎಸ್ ಪಕ್ಷಕ್ಕೆ ಮಣ್ಣು ಹೊತ್ತು ಹೊತ್ತು ಬೊಡಿದಾಗ ಮೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಲಾಂಗ್ ಜಂಪ್ ಮಾಡಿದವನು. ಸ್ಟೇಟಲ್ಲಿ ಕೈ ಇರುವಾಗ ಸದ್ಯಕ್ಕೆ ಸಾಹೇಬ್ರದ್ದು ಸ್ವಲ್ಪ ನಡಿತಿದೆ. ಹಾಗಾಗಿ ಅದು ಮಾಡುತ್ತೇನೆ, ಇದು ಮಾಡುತ್ತೇನೆ ಅಂತ ಸ್ವಲ್ಪ ಜೋರಾಗಿಯೇ ಇದೆ. ದಬ್ಬಡ್ಕಕ್ಕೆ ಬುಲೆಟ್ ಟ್ರೈನ್ ತರುತ್ತೇನೆ ಎಂದು ಒಂದು ಹೇಳದೆ ಬಿಟ್ಟಿದ್ದು ಬಿಟ್ಟರೆ ಈ ಜನಪ್ರಿಯ ನಾಯಕ ಬಾಕಿ ಎಲ್ಲಾ ಹೇಳಿ ಆಗಿದೆ.ಇದೀಗ ಆ ಚೆಂಬು ಗ್ರಾಮದ ದಬ್ಬಡ್ಕ ಪ್ರದೇಶಕ್ಕೆ ಈ ಭೂಮಿ ಉಂಟಾದ ಮೇಲೆಯೇ ಇಲ್ಲಿ ತನಕ ಕರೆಂಟಿಲ್ಲ. ಫಾರೆಸ್ಟ್ ನವರದ್ದು ಏನೋ ಟಿಕಿಟಿಕಿ. ದಬ್ಬಡ್ಕದ ಒಂದು ಇಪ್ಪತ್ತೆಂಟು ಮನೆಗಳು ಇವತ್ತಿಗೂ ಚಿಮಿಣಿಯಲ್ಲಿವೆ. ಆದ್ದರಿಂದ ಈ ಇಪ್ಪತ್ತೆಂಟು ಮನೆಗಳೂ ಒಂದಾಗಿ ಚೆಸ್ಕಾಂಗೆ ಅರ್ಜಿ ಕೊಟ್ಟಿದ್ದು ಚೆಸ್ಕಾಂ ಈ ಇಪ್ಪತ್ತೆಂಟು ಮನೆಗಳಿಂದಲೂ ತಲಾ ಎರಡೆರಡು ಸಾವಿರ ವಸೂಲಿ ಮಾಡಿ ಆ ದುಡ್ಡನ್ನು ಕೊಂಡೋಗಿ ಈ ಲೋಕಲ್ ಕಾಂಗ್ರೆಸ್ ಲೀಡರ್ ಕೈಲಿ ಕೊಟ್ಟಿದೆ. ಯಾಕೆಂದರೆ ಸನ್ಮಾನ್ಯರು ಮೇಲೆ ದೊಡ್ಡ ದೊಡ್ಡ ಕೈಗಳನ್ನು ಹಿಡಿದು ಕರೆಂಟ್ ತರುತ್ತೇನೆ ಎಂದು ಬುಲೆಟ್ ಟ್ರೈನೇ ಬಿಟ್ಟಿದ್ದರು. ಇದೀಗ ಕರೆಂಟ್ ಕಜೆಂಟ್ ಆಗಿದೆ. ಅತ್ತ ಕರೆಂಟೂ ಇಲ್ಲ, ಇತ್ತ ಕೊಟ್ಟ ಎರಡೂ ಇಲ್ಲ.

ಹಾಗೇ ದಬ್ಬಡ್ಕದ ಇಪ್ಪತ್ತೆಂಟು ಮನೆಗಳು ಇದೀಗ ಕರೆಂಟಿಗೆ ದುಡ್ಡು ಕೊಟ್ಟು ತುಂಬಾ ಡೇಟ್ ಗಳು ಕೆಲೆಂಡರಿಂದ ಕಾಣೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಇಪ್ಪತ್ತೈದೂ ಮುಗಿಯಲಿದೆ. ಆದರೂ ಕರೆಂಟ್ ಬಂದಿಲ್ಲ ಮತ್ತು ಈ ನಿಟ್ಟಿನಲ್ಲಿ ಯಾವುದೇ ಕೆಲಸಗಳಲ್ಲಿ ಪ್ರಗತಿ ಕಂಡು ಬಂದಿಲ್ಲ. ದಬ್ಬಡ್ಕದ ಜನ ಕಾದು ಕಾದು ಹೈರಾಣಾಗಿ ಹೋಗಿದ್ದಾರೆ. ಕೆಲವರು ತಲೆಗೆ ಮೈಗೆ ಸ್ನಾನ ಮಾಡಿ ಕಲ್ಲುಗುಂಡಿ ವಿಷ್ಣುಮೂರ್ತಿ ಎದುರು ನಿಂತಿದ್ದಾರೆಂದು ಸುದ್ದಿ. ಮತ್ತೆ ಕೆಲವರು ಕಾನತ್ತೂರು, ಪಣೋಲಿಬೈಲು, ಧರ್ಮಸ್ಥಳ ಅಂತ ಬಸ್ ಹತ್ತಿದ್ದಾರೆ. ಒಂದು ವಿಷಯ ಮಾರಾಯ್ರೆ ಕರೆಂಟ್ ಬರ್ಲಿ ಅಥವಾ ಪಯಸ್ವಿನಿ ಕಯಕ್ಕೆ ಬಿದ್ದು ಸಾಯಲಿ, ಆದರೆ ಜನಗಳ ಆ ಎರಡು ಸಾವಿರ ಮಾತ್ರ ರಿಟರ್ನ್ ಮಾಡೋದು ಒಳ್ಳೇದು. ಯಾಕೆಂದರೆ ಜನ ಇಂಚಿಪ ತನಕ ಹೇಳಿದ ಪರಕ್ಕೆಯಲ್ಲಿ ಈ ಕಾಂಗ್ರೆಸ್ ಲೀಡರ್ ಕನಸಿನಲ್ಲಿ ಈಗಾಗಲೇ ದೈವ ದೇವರುಗಳ ಚಿತ್ರ ವಿಚಿತ್ರಗಳು ಬಂದಿರ ಬಹುದು. ಅದಕ್ಕಿಂತಲೂ ದೊಡ್ಡ ವಿಷಯ ಏನೆಂದರೆ ದಬ್ಬಡ್ಕ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಬರುವ ಕಾರಣ ಎರಡು ಸಾವಿರದ ವಿಷಯ ಶಾಸಕ ಪೊನ್ನಣ್ಣರಿಗೆ ಏನಾದರೂ ಗೊತ್ತಾದರೆ ಕತೆ ಕೈಲಾಸ ಆಗಬಹುದು ಮಾರಾಯ್ರೆ.





