ನಾಡಿನ ಗಂಡುಕಲೆ ಯಕ್ಷಗಾನದ ಪುರಾತನ ಮೇಳಗಳಲ್ಲಿ ಸುಬ್ರಹ್ಮಣ್ಯ ಮೇಳವೂ ಒಂದು. ಒಂದು ಕಾಲದಲ್ಲಿ ಎಷ್ಟೋ ಕುಟುಂಬಗಳಿಗೆ ಆಧಾರವಾಗಿ ಇದ್ದು, ಅಸಂಖ್ಯಾತ ಕಲಾವಿದರನ್ನು ಪರಿಚಯಿಸಿ, ಬೆಳೆಸಿ ಯಕ್ಷರಂಗಕ್ಕೆ ನೀಡಿದ ಹಿರಿಮೆ ಈ ಮೇಳದ್ದು. ತದನಂತರ ಮೇಳದಲ್ಲಿ ಸೂಕ್ತ ವ್ಯವಸ್ಥಾಪಕರ ಕೊರತೆಯಿಂದ ಹಾಗೂ ಕಲಾವಿದರು ಇತರ ಟೆಂಟ್ ಮೇಳ ಗಳಿಗೆ ವಲಸೆ ಹೋದ ಪರಿಣಾಮ ಸುಬ್ರಹ್ಮಣ್ಯ ಮೇಳಕ್ಕೆ ಮಂಗಲಂ ಹಾಡಲಾಯಿತು.ಇದೀಗ ಮತ್ತೆ ಸುಬ್ರಹ್ಮಣ್ಯ ಮೇಳ ಪ್ರಚಾರಕ್ಕೆ ಬಂದಿದೆ. ಮೇಳದ ಉದ್ಘಾಟನೆಯೂ ಆಗಿ ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ನೀಡಿ,ಮುಂದಿನ ಆಟಗಳಿಗೆ ಬುಕ್ಕಿಂಗ್ ಮಾಡಿಕೊಳ್ಳುತ್ತಿದೆ. ಆದರೆ ಇಲ್ಲಿ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಸುಬ್ರಹ್ಮಣ್ಯ ಮೇಳ ಅಂತ ಇದ್ದದ್ದು ಈಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮೇಳ ಅಂತ ಆಗಿದೆ. ಅದರಲ್ಲಿ ತಪ್ಪೇನು ಅಂತ ನೀವು ಯೋಚಿಸಬಹುದು ವಿಷಯ ಇರುವುದು ಅಲ್ಲೇ….!
ಪ್ರಸ್ತುತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮೇಳಕ್ಕೂ ಯಾವುದೇ ಸಂಬಂಧವಿಲ್ಲ. ದೇವಸ್ಥಾನಕ್ಕೆ ಸಂಬಂಧಿಸದ ಕೆಲವೊಂದು ಖಾಸಗಿ ವ್ಯಕ್ತಿಗಳು ಸೇರಿಕೊಂಡು ಸುಬ್ರಹ್ಮಣ್ಯನ ಹೆಸರಿನಲ್ಲಿ ದುಡ್ಡು ಮಾಡುವುದಕ್ಕಾಗಿ ಕಟ್ಟಿಕೊಂಡಿರುವ ಮೇಳ ಇದು ಅಂತ ಸುಬ್ರಹ್ಮಣ್ಯ ತುಂಬಾ ಗುಸು..ಗುಸು ಸುದ್ದಿ. ಈ ಹಿಂದೆ ಸುಬ್ರಹ್ಮಣ್ಯದ ಖಾಸಗೀ ಮಠದವರು ಊರಿನ ಹೆಸರಾದ ಸುಬ್ರಹ್ಮಣ್ಯವನ್ನು ಮಠದ ಹೆಸರಿನ ಜೊತೆ ಸೇರಿಸಿಕೊಂಡಿದ್ದನ್ನೇ ದೊಡ್ಡ ರಾದ್ದಾಂತ ಮಾಡಿ, ರಣರಂಪ ಮಾಡಿ,ಬೀದಿ ಬೀದಿಗಳಲ್ಲಿ ಲಾಟರಿ ಮಾರುವವರಂತೆ ಮೈಕ್ ಕಟ್ಟಿಕೊಂಡು ಹಾರಾಟ,ಹೋರಾಟ, ದೊಂಬರಾಟ, ಅರಚಾಟ ಮಾಡಿ ಕ್ಷೇತ್ರದ ಹೆಸರನ್ನು ಹಾಗೂ ಶ್ರೀ ದೇವರ ಚಿತ್ರವನ್ನು ಯಾವುದೇ ಖಾಸಗಿ ವ್ಯಕ್ತಿಗಳು ಬಳಸಿಕೊಳ್ಳುವಂತಿಲ್ಲ, ಒಂದು ವೇಳೆ ಬಳಸಿಕೊಂಡರೆ ಅದು ಕಾನೂನು ಬಾಹಿರ ಅಂತ ನ್ಯಾಯಾಲಯದಿಂದ ಆದೇಶ ಮಾಡಿಸಿಕೊಂಡು ಬಂದವರೇ.., ಇಂದು ಅದೇ ದೇವಳದ ಹೆಸರು ಹಾಗೂ ದೇವರ ಚಿತ್ರ ಬಳಸಿಕೊಂಡು ಮೇಳ ಕಟ್ಟಿಕೊಂಡು ದೇವರ ಹೆಸರಿನಲ್ಲಿ ದುಡ್ಡು ಮಾಡಲು ಹೊರಟಿರುವುದು ವಿಪರ್ಯಾಸವೇ ಸರಿ.

ಅಲ್ಲ ಮಾರ್ರೆ, ಈ ರೀತಿ ಶ್ರೀ ದೇವಳದ ಹೆಸರನ್ನು ದುರ್ಬಳಕೆ ಮಾಡಿಕೊಂಡು ದುಡ್ಡು ಮಾಡಲು ಹೊರಟಿರುವ ಈ ಮೇಳದ ಉದ್ಘಾಟನೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಹೋಗಿದ್ದೀರಲ್ಲ, ನಿಮಗೂ ಕೋರ್ಟ್ ಆದೇಶ ಇರುವುದು ಗೊತ್ತಿಲ್ಲವೇ…? ಅಥವಾ ಮೇಳದ ವ್ಯವಸ್ಥಾಪಕರ ಭಯವೇ ಅಥವಾ ದಾಕ್ಷಿಣ್ಯವೇ? ಅಷ್ಟೂ ಮಾತ್ರವಲ್ಲದೆ ಮೂರನೇ ಆಟದ ಪ್ರಾಯೋಜಕರು ಕೂಡ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಂತೆ…!?
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಹೆಸರು ಹಾಗು ಚಿತ್ರಗಳನ್ನು ಖಾಸಾಗಿಯಾಗಿ ಯಾರೂ ಬಳಸಿಕೊಳ್ಳುವಂತಿಲ್ಲ ಎಂಬ ಸ್ಪಷ್ಟ ಆದೇಶ ನ್ಯಾಯಾಲಯದಿಂದ ಇದ್ದರೂ, ಇವರು ತಮ್ಮ ಖಾಸಗಿ ಮೇಳಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮೇಳ ಎಂಬ ಹೆಸರು ಹೇಗೆ ಇಟ್ಟರು? ಸುಬ್ರಹ್ಮಣ್ಯ ಮೇಳ ಎಂದು ಹೆಸರು ಇಡಬಹುದು, ಯಾಕೆಂದರೆ ಸುಬ್ರಹ್ಮಣ್ಯ ಎಂಬುದು ದೇವರ ಹೆಸರಾದರೂ ಊರಿನ ಹೆಸರೂ ಅದೇ ಆಗಿರುವ ಕಾರಣ ಸುಬ್ರಹ್ಮಣ್ಯ ಮೇಳ ಎಂದು ಹೆಸರಿಡಲು ಕ್ಷೇತ್ರದ ಭಕ್ತರ ತಕರಾರು ಇಲ್ಲ. ಆದರೆ “ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮೇಳ.” ಎಂದು ಹೆಸರು ಇಟ್ಟದ್ದು ಕ್ಷೇತ್ರದ ಹೆಸರನ್ನು ದುರ್ಬಳಕೆ ಮಾಡಿಕೊಂಡಂತೆ. ಶ್ರೀ ದೇವಳದ ವತಿಯಿಂದ ಅಧಿಕೃತವಾಗಿ ನಡೆಸಲ್ಪಡುವ ಮೇಳ ಎಂದು ತಪ್ಪಾಗಿ ಅರ್ಥೈಸಿಕೊಂಡು ದೇವರ ಸೇವೆ ಎಂದು ಪರಿಗಣಿಸಿ ಆಟ ಬುಕ್ ಮಾಡಿದ ಭಕ್ತರಿಗೆ ಮೇಳದ ಯಜಮಾನರು ದೇವರು ಅಲ್ಲ ಅಂತ ಮನವರಿಕೆ ಆಗುವಷ್ಟರಲ್ಲಿ ಮೊಸ ಹೋಗಿ ಆಗಿರುತ್ತದೆ. ದಯವಿಟ್ಟು ಶ್ರೀ ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಅಧ್ಯಕ್ಷರು ಜಂಟಿ ಸುದ್ದಿಗೋಷ್ಠಿ ನಡೆಸಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮೇಳಕ್ಕೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಯಾವ ರೀತಿಯ ಸಂಬಂಧ ಇದೆ ಎಂದು ಸ್ಪಷ್ಟವಾಗಿ ಬಹಿರಂಗ ಪಡಿಸಬೇಕು. ಅದೇ ರೀತಿ ಶ್ರೀ ದೇವಳಕ್ಕೂ ಮೇಳಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲದ ಪಕ್ಷದಲ್ಲಿ ಶ್ರೀ ದೇವಳದ ಹೆಸರನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕ್ಷೇತ್ರದ ಭಕ್ತರ ಒಕ್ಕೊರಲ ಆಗ್ರಹ.





