
ಅಲ್ಲಿ ಅಂಡಮಾನ್ ಬಳಿ ಮುಂಗಾರು ಮಳೆಯ ಲೋಡ್ ಬಂದು ನಿಂತಿದೆ ಎಂದು ಹವಾಮಾನ ಇಲಾಖೆಯ ಮಾಹಿತಿ ಬರುತ್ತಿದ್ದಂತೆ ಇತ್ತ ಪುತ್ತೂರು ಅರಣ್ಯ ಇಲಾಖೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪುತ್ತೂರಿನಲ್ಲಿ ಅರಣ್ಯ ಇಲಾಖೆಯ ಹಸಿರೀಕರಣ ಜೋರಾಗಿದೆ. ಮುಂದಿನ ಪೀಳಿಗೆಯ ಹಿತದೃಷ್ಠಿ ಮತ್ತು ಸಾಮಾಜಿಕ ಕಳಕಳಿಯೇ ಕಾರಣ.
ಹಾಗೆಂದು ಪುತ್ತೂರು ಅರಣ್ಯ ಇಲಾಖೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಅರಣ್ಯ ಇಲಾಖೆಗಳಂತೆ ಪೋಲಿಸ್ ಸ್ಟೈಲ್ ನಲ್ಲಿ ವರ್ತಿಸುತ್ತಿಲ್ಲ. ಆ ಒಂದು ಬ್ರಿಟಿಷ್ ಮರ್ಜಿಗೆ ಗುಡ್ ಬೈ ಹೇಳಿ ಫ್ರೆಂಡ್ಲಿ ಸರ್ವಿಸ್ ಸಾರ್ವಜನಿಕರಿಗೆ ಕೊಡುತ್ತಿದೆ. ಇದಕ್ಕೆಲ್ಲ ಕಾರಣ ಈಗೀನ ಪುತ್ತೂರು ರೇಂಜ್ ಫಾರೆಸ್ಟ್ ಆಫೀಸರ್ ಕಿರಣ್. ಅರಣ್ಯ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಇರುವ ಭಯಭೀತಿಯನ್ನು ಹೊಡೆದೋಡಿಸಿ ಅದನ್ನು ಜನಸ್ನೇಹಿ ಅರಣ್ಯ ಇಲಾಖೆಯನ್ನಾಗಿ ಮಾಡಿದ ಕ್ರೆಡಿಟ್ ಕಿರಣ್ ಗೆ ಸಲ್ಲುತ್ತದೆ. ಸದ್ಯಕ್ಕೆ ದಕ್ಷಿಣ ಕನ್ನಡದ ಅಷ್ಟೂ ರೇಂಜೆರ್ ಗಳ ಹಿಸ್ಟರಿ ತೆಗೆದು ನೋಡಿದರೆ ಅದರಲ್ಲಿ ಕಿರಣ್ ಹೆಸರು ಪ್ರಾಮಾಣಿಕ, ದಕ್ಷ, ಪಾರದರ್ಶಕ ಕಾಲಮಲ್ಲಿ ಬರುತ್ತದೆ. ಹಾಗೆಂದು ಪುತ್ತೂರು ಅರಣ್ಯ ಇಲಾಖೆಯ ಹಿಂದಿನ ಜಾತಕ ಸರಿ ಇರಲಿಲ್ಲ. ಬೀಟಿ ಮರ ಇಟ್ಟು ಫಿಕ್ಸಿಂಗ್ ಮಾಡಿದ ಅಧಿಕಾರಿಗಳಿಂದ ಹಿಡಿದು ಸೀಜ್ ಆದ ಸಾಗುವಾನಿ ಮರವನ್ನು ತನ್ನ ಮನೆಗೆ ಸಾಗಿಸಿದ ಅಧಿಕಾರಿಗಳ ತನಕದ ಇವರ ಕತೆ ಎವರ್ ಗ್ರೀನ್ ಆದದ್ದು. ಆದರೆ ಈಗ ದಕ್ಷಿಣ ಕನ್ನಡದ ಬಾಕಿ ರೇಂಜ್ ಗಳಿಗೆ ಹೋಲಿಸಿದರೆ ಪುತ್ತೂರು ರೇಂಜ್ ಬೆಸ್ಟ್ ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ. ಕಾರಣ ಕಿರಣ್.
ಇದೀಗ ಮುಂಗಾರು ಮಳೆ ಶುರುವಾಗುತ್ತಿದ್ದಂತೆ ಪುತ್ತೂರು ರೇಂಜ್ ನಲ್ಲಿ ಅರಣ್ಯ ಇಲಾಖೆ ಬರಡು ಭೂಮಿಗೆ ಮತ್ತೇ ಪಚ್ಚೆ ಪೈಂಟ್ ಕೊಡಲು ಶುರು ಮಾಡಿದೆ. ಸಾಮಾಜಿಕ ಅರಣ್ಯ ಸ್ಕೀಮಿನಡಿಯಲ್ಲಿ ಅಲ್ಲಿ ಬಲ್ನಾಡು ವಿಲೇಜಿನ ದೊಡ್ಡಡ್ಕದಲ್ಲಿ ಪುತ್ತೂರು ರೇಂಜ್ ದೊಡ್ಡ ಮಟ್ಟದಲ್ಲಿ ಹಸಿರೀಕರಣ ಶುರುವಿಟ್ಟುಕೊಂಡಿದೆ. ದೊಡ್ಡಡ್ಕದ ಅಂದಾಜು ಹದಿನೇಳು ಹೆಕ್ಟೇರ್ ಭೂಮಿಯಲ್ಲಿ ಹಸಿರು ಕೃಷಿ ಶುರುವಾಗಿದೆ. ಸದ್ರಿ ಹದಿನೇಳು ಹೆಕ್ಟೇರ್ ಪ್ರದೇಶದಲ್ಲಿ 6800 ಗುಂಡಿಗಳನ್ನು ತೆಗೆದು ಅದರಲ್ಲಿ ಬೆಲೆ ಬಾಳುವ ಮರಗಳ ಮಗುವನ್ನು ನೆಟ್ಟು ಆ ಮೂಲಕ ಹಸಿರನ್ನು ಉಳಿಸುವ ಪ್ರಯತ್ನ ಮಾಡಲಾಗಿದೆ. ಕುಕ್ಕು, ಪಿಲಕ್ಕಯಿ, ಬೆಂಗ, ದೂಪೊ, ನೇರಳೆ, ಹೆಬ್ಬಲಸು, ಪುನರ್ಪುಳಿ, ಪರ್ತಿ, ರೆಂಜೆ ಬುಕ್ಕ ಹಾಲ್ಮಡ್ಡಿ ಮುಂತಾದ ಸಸಿ ನೆಡುವ ಕೆಲಸ ನಡೆದಿದೆ. ಅದರಲ್ಲೂ ವಿಶೇಷ ಏನೆಂದರೆ ಪುತ್ತೂರು ರೇಂಜ್ ಮನುಷ್ಯರಿಗೆ ಉಪಯೋಗವಾಗುವ ಸಸಿಗಳನ್ನು ಮಾತ್ರ ನೆಟ್ಟಿದ್ದು ಭೂಮಿಯ ನೀರು ಖಾಲಿ ಮಾಡುವ ಅಕೇಶಿಯ ಗಿಡಗಳನ್ನು ಎಲ್ಲೂ ನೆಟ್ಟಿಲ್ಲ. ಇಷ್ಟಕ್ಕೂ ಅರಣ್ಯ ಇಲಾಖೆಗೆ ಅಕೇಶಿಯ ಗಿಡಗಳನ್ನು ನೆಡುವ ಪ್ಲಾನ್ ಯಾವ ಚಾಣಕ್ಯ ಹೇಳಿಕೊಟ್ಟ ಎಂಬುದೇ ಇಲ್ಲಿ ತನಕ ಬಹಿರಂಗವಾಗಿಲ್ಲ.
ಹಾಗೆಂದು ಬಲ್ನಾಡು ವಿಲೇಜಿನ ದೊಡ್ಡಡ್ಕ ಸೈಟ್ ಮಾತ್ರವಲ್ಲದೆ ಬೇರೆ ಕಡೆಗಳಲ್ಲೂ ಹಸಿರು ಮೆತ್ತುವ ಕೆಲಸಗಳು ನಡೆದಿವೆ. ಅರಣ್ಯ ಇಲಾಖೆ ಅಂದರೆ ಕೇವಲ ಮರಗಳ್ಳರನ್ನು ಹಿಡಿದು ದುಡ್ಡು ಕೀಳುವ ಇಲಾಖೆ ಎಂಬ ಹಣೆಪಟ್ಟಿಯನ್ನು ಹೊಸಕಿ ಹಾಕಿ ಇಲಾಖೆಯನ್ನು ಸಮಾಜ ಮುಖಿ ಕೆಲಸ, ಪರಿಸರ ಪ್ರೇಮಿ, ಜನ ಸ್ನೇಹಿ ಇಲಾಖೆಯನ್ನಾಗಿಸುವಲ್ಲಿ ಕಿರಣ್ ರಂತಹ ಪ್ರಾಮಾಣಿಕ ಅಧಿಕಾರಿಗಳು ಹೆಚ್ಚು ಹೆಚ್ಚು ಬರಬೇಕಾಗಿದೆ. ಒಂದು ಪೊಂಗರೆ ಮರ ಕಡಿದರೆ ಕೇಸ್ ಹಾಕುವ, ಸೊಪ್ಪು ತೆಗೆದರೆ ಕತ್ತಿ ಎಳೆದು ಕೊಳ್ಳುವ, ಲುಂಗೆಲ್ ಸೌದೆ ಕಡಿದರೆ ಸಿಂಗಮ್ ಸ್ಟೈಲ್ ತೋರಿಸುವ, ಮರದ ಅಡ್ಡದಲ್ಲಿ ನಿಂತು ಲಂಚ ಪಡೆಯುವ, ಮರಗಳ್ಳರೊಂದಿಗೆ ಪಾರ್ಟ್ನರ್ ಶಿಪ್ ಹೊಂದಿರುವ ಮತ್ತು ಬೆಂಝ್ ಕಾರ್ ತೆಗೆದರೆ ಹೇಗೆ ಎಂದು ದುರಾಲೋಚನೆ ಮಾಡುವ ಅರಣ್ಯ ಇಲಾಖೆಯ ಪ್ರತೀ ಅಧಿಕಾರಿಯೂ ಕಿರಣ್ ರೇಂಜರ್ ರವರ ಸಿಂಪ್ಲಿಸಿಟಿ ಮಾದರಿಯನ್ನು ಅಳವಡಿಸಿಕೊಂಡರೆ ಇಲಾಖೆಗೂ ಉತ್ತಮ, ಅವರವರ ಆರೋಗ್ಯಕ್ಕೂ ಉತ್ತಮ.

