ಶಾಲೆಗೆ ಬಂದ ಆನೆ!

Pattler News

Bureau Report

ಹಾಸನ ಜಿಲ್ಲಾ ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ಬುಧವಾರ ಶಾಲಾ ಟೈಮಲ್ಲಿ ಕಾಡಾನೆಯೊಂದು ಎಂಟ್ರಿ ಹಾಕಿದ್ದು ವಿದ್ಯಾರ್ಥಿಗಳು ಮತ್ತು ಮೇಸ್ಟ್ರುಗಳಿಗೆ ಸ್ವಲ್ಪ ಕಾಲ ಪುಕುಪುಕು ಆದ ಘಟನೆ ನಡೆದಿದೆ. ಶಾಲೆಗೆ ಬಂದಿದ್ದು ಲೋಕಲ್ ಭೀಮ. ಜನ ಪಾಪ ಅಂತೆ ಭೀಮ. ಬಂದ ಪುಟ್ಟ ಹೋದ ಪುಟ್ಟ ಅಷ್ಟೇ.

ಹಾಗೆಂದು ಮಲೆನಾಡು ಪ್ರದೇಶದಲ್ಲಿ ಆನೆ ಸವಾರಿ ಮಾಮೂಲಿ. ಇದ್ದವರ ತೋಟಗೀಟ ಲಗಾಡಿ ತೆಗೆದು ತಿಂದಿದ್ದು ಜೀರ್ಣ ಆಗಲು ಆನೆ ನಡೆದದ್ದೇ ದಾರಿಯಲ್ಲಿ ವಾಕ್ ಹೋಗುವ ಆನೆಗಳು ಹಲವು ಸಲ ದಾರಿ ತಪ್ಪಿ ಊರಿಗೆ ಎಂಟ್ರಿ ಹಾಕಿದ ಸಾವಿರ ಉದಾಹರಣೆಗಳಿವೆ. ಇದೀಗ ಮೊನ್ನೆ ಸಕಲೇಶಪುರ ಬಳಿಯ ಶಾಲೆಯೊಂದಕ್ಕೆ ಆನೆ ಬಂದಿದ್ದು ಸಕಾಲದಲ್ಲಿ ETF ತಂಡ ಶಾಲೆಗೆ ದೌಡಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದರು. ಮೊನ್ನೆ ಬುಧವಾರ ಬೆಳಿಗ್ಗೆ ಉದೇವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂದಿನಂತೆ ವಿದ್ಯಾರ್ಥಿಗಳು ಜಮಾವಣೆಯಾಗಿದ್ದರು. ಆದರೆ ಅದೇ ಹೊತ್ತಿಗೆ ಶಾಲೆ ಬದಿಯ ಕಾಫಿ ತೋಟದಿಂದ ಶಾಲೆಯ ಗ್ರೌಂಡಿಗೆ ಅತಿಥಿಯೊಬ್ಬನ ಎಂಟ್ರಿ ಆಗಿದೆ. ವಿದ್ಯಾರ್ಥಿಗಳೆಲ್ಲ ಓ…ಭೀಮ ಎಂದು ಮುಗಿಲು ಮುಟ್ಟುವಂತೆ ಬೊಬ್ಬೆ ಹೊಡೆದಿದ್ದಾರೆ. ಶಾಲಾ ಆವರಣಕ್ಕೆ ಬಂದಿದ್ದು ಲೋಕಲ್ ಕಾಡಾನೆ ಭೀಮ. ಭೀಮ ಆ ಭಾಗದಲ್ಲಿ ಚಿರಪರಿಚಿತ ಕಾಡಾನೆಯಾಗಿದ್ದು ವಿದ್ಯಾರ್ಥಿಗಳು ಆನೆ ಭಂಡಾರ ಸಾಗಿ ಹೋಗುವಷ್ಟು ಸಮಯ ಆನೆಯನ್ನು ನೋಡಿ ಖುಷಿಗೊಂಡಿದ್ದರು. ಕೂಡಲೇ ಆನೆ ವಿಷಯ ETF ಗೆ ಹೋಗಿದ್ದು ಅವರು ಶಾಲೆಗೆ ಧಾವಿಸಿ ಬಂದು ಆನೆಯನ್ನು ಕಾಡೊಳಗೆ ಅಟ್ಟಿದ್ದರು.

ಹಾಗೆಂದು ಈ ಭೀಮ ದೊಡ್ಡದ್ರಲ್ಲಿ ದೊಡ್ಡ ಆನೆ. ದೊಡ್ಡ ಅಶೋಕ್ ಲೈಲ್ಯಾಂಡು. ಈ ಭೀಮನಿಗೆ ಮಲೆನಾಡು ಭಾಗದಲ್ಲಿ ಅವನದೇ ಇತಿಹಾಸ ಇದ್ದು ದೊಡ್ಡ ಪೆಟ್ಟಿಸ್ಟ್ ಎಂಬ ಹೆಗ್ಗಳಿಕೆ ಇದೆ. ಆದರೆ ಕೆಲವು ಸಮಯಗಳ ಹಿಂದೆ ಭೀಮ ಮತ್ತು ಇನ್ನೊಂದು ಪೆಟ್ಟಿಸ್ಟ್ ಆನೆ ಕ್ಯಾಪ್ಟನ್ ಜೊತೆ ಭೀಕರ ಉರ್ಡಪತ್ತ ಆಗಿ ಕ್ಯಾಪ್ಟನ್ ಭೀಮನ ಒಂದು ದಾಡೆ ಮುರಿದು ಹೋಗಿತ್ತು. ನಂತರ ಭೀಮ ಈಗ ಏಕದಂತನಾಗಿ,ಅಲೆಮಾರಿಯಂತೆ ತಿರುಗಾಡುತ್ತಿದ್ದು ಜನರಲ್ಲಿ ಪುಕುಪುಕು ಹೆಚ್ಚಿಸಿದ್ದ. ಹಾಗೆಂದು ಭೀಮ ಶಾಲೆಗೆ ಯಾಕೆ ಬಂದ ಅಂತಲೇ ಗೊತ್ತಾಗುತ್ತಿಲ್ಲ. ಭೀಮ ಚಿಕ್ಕವನಿರುವಾಗ ಶಾಲೆ ಹೋಗು, ಶಾಲೆಗೆ ಹೋಗು ಎಂದು ತಾಯಾನೆ ಎಷ್ಟು ಹೇಳಿದರೂ ಕೇಳದೆ, ತಾಯಾನೆಗೆ “ತಾಯಾಣೆ ಶಾಲೆಗೆ ಹೋಗಲ್ಲ” ಎಂದು ಆಣೆ ಹಾಕಿ ಕಾಡು ಹತ್ತಿದವನು ಮೊನ್ನೆ ಯಾಕೆ ಶಾಲೆ ಕಡೆ ಚಿತೈಸಿದ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ಹಾಗೆಂದು ಆನೆ ಬಗ್ಗೆ ಅನೇಕ ಮುಂಜಾಗ್ರತಾ ಸೂಚನೆಗಳನ್ನು ಅರಣ್ಯ ಇಲಾಖೆ ನೀಡಿದ್ದು ಮೊನ್ನೆ ಕೂಡ ETF ವಿದ್ಯಾರ್ಥಿಗಳು ಮತ್ತು ಭೀಮನ ಮಧ್ಯೆ ಸಾಕಷ್ಟು ಅಂತರ ನಿರ್ಮಿಸಿದ್ದರು. ಆನೆ ಕಂಡು ಬಂದಲ್ಲಿ ಆನೆಯ ಸನಿಹಕ್ಕೆ ಹೋಗೋದು, ಆನೆ ಬಳಿ ಸೆಲ್ಫಿಗೆ ಒತ್ತಾಯ, ಆನೆಗೆ ಕುಲ್ಫಿ ಕೊಡುವ ಪ್ರಯತ್ನ, ಆನೆಗೆ ತಗಡ್ ಬೆಚ್ಚ ಮಾಡೋದು, ಆನೆ ಮುಂದೆ ಸೊಬಗರಂತೆ ವರ್ತಿಸೋದು, ಇದು ನಾನು ಆನೆ ಅಂತ ಪರಿಚಯ ಮಾಡಿಕೊಳ್ಳೋದು, ನಾಯಿಗೆ ಕಲ್ಲು ಬಿಸಾಡಿದ ಹಾಗೆ ಕಲ್ಲು ಬಿಸಾಡೋದು, ದನಕ್ಕೆ ಬಡಿದಂತೆ ಬಡಿಯಲು ಹೋಗೋದು ಮುಂತಾದ ಮನುಷ್ಯ ಸಹಜ ಅಧಿಕಪ್ರಸಂಗಗಳಿಂದ ಆನೆಗೆ ತಗಡ್ ಬೆಚ್ಚ ಆಗಿ ಮನುಷ್ಯನ ಮೇಲೆ ಧಾಳಿ ನಡೆಸುತ್ತದೆ. ಇಷ್ಟಕ್ಕೂ ಒಂದು ಕಾಟ್ ಕಂತ್ರಿ ನಾಯಿಯನ್ನೇ ನಮಗೆ ಕಂಟ್ರೋಲ್ ಮಾಡಲಾಗಲ್ಲ, ಮತ್ತೆ ಆನೆ ವಹಿವಾಟು ಯಾಕೆ ಮಾರಾಯ್ರೆ. ಇರುವೆಗೆ ಕಬ್ಬಿಣದ ಕೆಲಸ ಯಾಕೆ?

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top