
ಪುತ್ತೂರಿನಲ್ಲಿ ಜೇನು ತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳನ್ನು ರೆಡಿ ಮಾಡುವ ರೈತೋತ್ಪಾದಕ ಕಂಪೆನಿಯೊಂದು ತನ್ನ ಕೊನೆಯುಸಿರೆಳೆಯಲು ರೆಡಿಯಾಗಿದೆ ಎಂದು ತಿಳಿದುಬಂದಿದೆ. ಇದೊಂದು ಬಾಲ್ಯದಲ್ಲಿಯೇ ಮುದುಕಿ ಸತ್ತಳು ಎಂಬ ಗಾದೆ ಮಾತಿಗೆ ಟ್ಯಾಲಿ ಆಗುತ್ತಿದೆ. ಯಾಕೆಂದರೆ ಕಂಪೆನಿ ಇನ್ನೂ ಶುರುವೇ ಆಗಿಲ್ಲ, ಅದಾಗಲೇ ಲಾಸ್ಟ್ ಓವರಿನ ಕತೆ. ಕರೆಕ್ಟಾಗಿ ಮುಳುಗಿದರೆ ನಾಲಕ್ಕು ಕೋಟಿ ಒದ್ದೆ ಆಗಲಿದೆ.

ಹಾಗೆಂದು ಇತ್ತೀಚಿನ ದಿನಗಳಲ್ಲಿ ರೈತೋತ್ಪಾದಕ ಕಂಪನಿಗಳ ಹೆಸರಿನಲ್ಲಿ ಕೋಟಿ ಕೋಟಿಯಲ್ಲಿ ಮುರ್ಕಿಸ್ ಮಾಡುವ ವಂಚಕ ಉದ್ಯಮಿಗಳ ಜಾತ್ರೆಗೆ ಕೈಲು ಕಡಿದು ಕೊಡಿ ಏರಿಸಲಾಗಿದೆ. ಹಲಸಿನ ಹಣ್ಣಿನಲ್ಲಿ ಏನೇನೋ ಮಾಡುತ್ತೇವೆ ಎಂದು, ಮಾವಿನಲ್ಲಿ ಇನ್ನೇನೋ ಮಾಡುತ್ತೇವೆ ಎಂದೂ, ಕಾಳು ಮೆಣಸಿನಲ್ಲಿ ಕಷಾಯ ಮಾಡುತ್ತೇವೆ ಎಂದೂ, ಸಾಂಬಾರ ಪದಾರ್ಥಗಳನ್ನು ಡೈರೆಕ್ಟ್ ತಂದು ಬಾಣಲೆಗೆ ಹಾಕುತ್ತೇವೆ ಎಂದೂ ಮತ್ತು ಕಡೆಯದಾಗಿ ದೊಣ್ಣೆ ಮೆಣಸಿನಕಾಯಿಯಲ್ಲೂ ಅದೇನೋ ಮಾಡುತ್ತೇವೆ ಎಂದು ಈಗಾಗಲೇ ಕೋಟಿ ಕೋಟಿ ಮುಳುಗಿಸಿ ಎಸ್ಕೇಪ್ ಆದವರು ಇದ್ದಾರೆ. ಕೋಟಿ ಲೆಕ್ಕದಲ್ಲಿ ಸರ್ಕಾರದ ಸಬ್ಸಿಡಿ ತಿಂದುಂಡು ತೇಗುವುದು ಮತ್ತು ಬ್ಯಾಂಕುಗಳಿಗೆ ಕೋಟಿ ಲೆಕ್ಕದಲ್ಲಿ ಟೋಪಿ ಹಾಕೋದು ಇದು ಇವತ್ತಿನ ರೈತೋತ್ಪಾದಕ ಕಂಪನಿಗಳ ಮೂಲ ಉದ್ದೇಶ. ಹಾಗೆಂದು ಸರ್ಕಾರದ ಈ ಒಂದು ಯೋಜನೆ ಕರೆಕ್ಟಾಗಿಯೇ ಇದೆ. ಆದರೆ ನೈಂಟಿ ಪರ್ಸೆಂಟ್ ಈ ಯೋಜನೆ ಮಿಸ್ ಯೂಸ್ ಆಗಿದೆ. ರೈತರ ಆರ್ಥಿಕ ಸಬಳೀಕರಣಕ್ಕಾಗಿ, ಅವರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು, ಸಂಸ್ಕರಣೆ ಮಾಡಲು, ಶೇಖರಣೆ ಮಾಡಲು, ಪ್ಯಾಕಿಂಗ್, ರಫ್ತು ಮತ್ತು ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುವ ಪ್ಲಾನ್ ಇದಾಗಿದೆ. ಆದರೆ ಈ ಕಾರ್ಯಕ್ರಮ ಇವತ್ತು ಸರ್ಕಾರವನ್ನು ಮತ್ತು ಬ್ಯಾಂಕ್ ಗಳನ್ನ ಲೂಟುವ ಕಾರ್ಯಕ್ರಮ ಆಗಿದ್ದು ವಿಪರ್ಯಾಸವೇ ಸರಿ.

ಹಾಗೆ ಪುತ್ತೂರಿನಲ್ಲಿ ಕೂಡ ಒಂದು ಅಂಥದೇ ಅಂಡಿಗುಂಡಿ ರೈತೋತ್ಪಾದಕ ಸಂಸ್ಥೆ ಯಾವುದೋ ರಾವು ಘಳಿಗೆಯಲ್ಲಿ ಶುರುವಾಯಿತು. ಇವರ ಪ್ರೊಡಕ್ಟ್ ಚೀಯದ ನೈಯಿ. ಇವರ ರೈಲು ಏನೆಂದರೆ ನಾವು ಚೀಯದ ನೈಯನ್ನು ನೇರವಾಗಿ ರೈತರಿಂದ ಯೋಗ್ಯ ಬೆಲೆಗೆ ಖರೀದಿಸಿ ಮತ್ತು ನಾವೇ ಸ್ವತಃ ಅಲ್ಲಲ್ಲಿ ಗೂಡಿಟ್ಟು ಜೇನ್ತುಪ್ಪ ಉತ್ಪಾದಿಸಿ ಅದಕ್ಕೆ ಮೌಲ್ಯವರ್ಧಿತ ಉತ್ಪನ್ನಗಳ ಲೇಬಲ್ ಅಂಟಿಸಿ ಮಾರಾಟ, ಸಂಸ್ಕರಣೆ, ಶೇಖರಣೆ ಮತ್ತು ನೇರ ಮಾರುಕಟ್ಟೆ ಮಾಡುತ್ತೇವೆ ಎಂಬುದು. ಸರಕಾರ ಮತ್ತು ಬ್ಯಾಂಕು ಇವರ ರೈಲನ್ನು ನಂಬಿ ಬಿಟ್ಟಿತು. ಬ್ಯಾಂಕು ಸಾಲ ಕೊಟ್ಟಿತು, ಸರ್ಕಾರ ಸಬ್ಸಿಡಿ ಕೊಟ್ಟಿತು. ಎರಡನ್ನೂ ತಿಂದು ಇವರು ದುಂಡುದುಂಡಗೆ ಆಗಿ ಬಿಟ್ಟರು ಮತ್ತು ಇವರ ನೈಯಿಗೆ ನೈಪಿಜಿನ್ ಬಂದು ಬಿಟ್ಟಿತು.
ಹಾಗೆ ಪುತ್ತೂರಿನಲ್ಲಿ ಶುರುವಾದ ನಾಮ ಜನ್ಯ ಚೀಯದ ನೈಯಿ ರೈತೋತ್ಪಾದಕ ಕಂಪೆನಿಯಲ್ಲಿ ಮೊದಮೊದಲು ದೊಡ್ಡ ದೊಡ್ಡ ಮಂಡೆಗಳಿತ್ತು. ಇವರೆಲ್ಲ ಸೇರಿಕ್ಕೊಂಡು ಜೇನು ರೈತೋತ್ಪಾದಕ ಕಂಪೆನಿಯೊಂದನ್ನು ಶುರು ಮಾಡಿದ್ದರು. ಅದಕ್ಕಾಗಿ ಬೋರ್ಡ್ ಆಫ್ ಡೈರೆಕ್ಟರ್ಸ್ ಮಾಡಿಕ್ಕೊಂಡು ಷೇರುದಾರರಿಗೆ ಎರಡು ಸಾವಿರ, ಐದು ಸಾವಿರ, ಹತ್ತು ಸಾವಿರ ಮುಖ ಬೆಲೆಯ ಷೇರುಗಳನ್ನೂ ಬಿಡುಗಡೆ ಮಾಡಿದ್ದರು ಮತ್ತು ಅಂದಾಜು ಏಳ್ನೂರು ಷೇರುದಾರರನ್ನು ಮಂಗ ಮಾಡುವುದರಲ್ಲಿ ಸಫಲತೆಯನ್ನೂ ಕಂಡಿದ್ದರು. ಒಮ್ಮೆ ಕಂಪೆನಿ ಶುರುವಾಗಿ ಷೇರು ಬಂದ ಮೇಲೆ ಇವರ ಸ್ಪೀಡ್ ಜಾಸ್ತಿಯಾಗಿ ಪುತ್ತೂರಿನ ಪ್ರತಿಷ್ಠಿತ ಬ್ಯಾಂಕ್ ಒಂದರಿಂದ ಎರಡು ಕೋಟಿ ಸಾಲ ಕ್ಲೀನಾಗಿ ಎತ್ತಿ ಬಿಟ್ಟರು. ಆ ದುಡ್ಡಿನಲ್ಲಿ ಚೀಯದ ನೈಯಿ ಪ್ರೊಸೆಸಿಂಗ್ ಯುನಿಟ್ ಒಂದನ್ನು ಶುರು ಮಾಡಿದರು.ಮುಂಡೂರು ಗ್ರಾಮದಲ್ಲಿ ಲ್ಯಾಂಡ್ ಪರ್ಚೇಸ್ ಮಾಡಿ ಅದ್ರಲ್ಲಿ ಒಂದು ಕೊಟ್ಯ ಕಟ್ಟಿ ಚೀಯದ ನೈಯಿ ಸಂಸ್ಕರಣೆಗೆ ಬೇಕಾದ ಮೆಷಿನರಿ ಕೂಡ ತಂದು ಫಿಕ್ಸ್ ಮಾಡಿ ಬಿಟ್ಟರು. ಅಂದಾಜು ಒಂದು ಐನೂರಕ್ಕೂ ಹೆಚ್ಚು ತಮ್ಮ ಷೇರುದಾರರ ಮನೆಗಳಲ್ಲಿ ಚೀಯದ ನೈಯಿ ಉತ್ಪಾದನೆಗೆ ಗೂಡಿಟ್ಟು ಕೂಡ ಬಂದಿದ್ದರು. ನಂತರ ಇವೆಲ್ಲ ಮುರ್ಕಿಸ್ ಕೆಲಸಗಳನ್ನು ಸರ್ಕಾರಕ್ಕೆ ತೋರಿಸಿ ಸರ್ಕಾರದಿಂದ ಸಿಗಬೇಕಾಗಿದ್ದ ಎರಡು ಕೋಟಿ ಸಬ್ಸಿಡಿಯನ್ನೂ ರೆಡ್ ಕಾರ್ಪೆಟಲ್ಲಿ ಹೋಗಿ ತಗೊಂಡು ಬಿಟ್ಟರು. ಅಲ್ಲಿಂದ ಶುರು ಚೀಯದ ನೈಯಿಗೆ ನೈಪಿಜಿನ್.

“ಮೇರೆ ಪ್ಯಾರೇ ದೇಸ್ ವಾಸಿಯೋ…ಫ್ಯಾರೇ ಬಾಯಿ ಓರ್ ಬೆಹೆನೋ”ಎಂದು ಓ ಮೊನ್ನೆ ಮನ್ಕಿ ಬಾತ್ ನಲ್ಲಿ ಪ್ರಧಾನಿಗಳು ಕೂಡ ಪುತ್ತೂರು ಜೇನು ರೈತೋತ್ಪಾದಕ ಸಂಘದ ಬಗ್ಗೆ ಎದೆ ತಟ್ಟಿ ಹೇಳಿದ್ದರು. ಯಾಕೆಂದರೆ ಈ ಮುರ್ಕಿಸ್ ಗಳಿಗೆ ಎರಡು ಕೋಟಿ ಸಬ್ಸಿಡಿ ಕೊಟ್ಟಿದ್ದು ಕೇಂದ್ರ ಸರ್ಕಾರ. ಇಲ್ಲಿ ಚೀಯದ ನೆಯಿ ರೈತರು ಎರಡು ಕೋಟಿಯನ್ನು ಏನು ಮಾಡಿದ್ದಾರೆ ಎಂದು ಗೊತ್ತಿಲ್ಲದೆ ಪ್ರಧಾನಿ ರೈತರನ್ನು ಹುರಿದುಂಬಿಸಿದ್ದರು. ಹಾಗೆ ರೈತೋತ್ಪಾದಕ ಸಂಘ ಮಾಡಿ, ಷೇರು ಕಲೆಕ್ಟ್ ಮಾಡಿ, ಎರಡು ಕೋಟಿ ಬ್ಯಾಂಕ್ ಲೋನ್ ಮಾಡಿ, ಎರಡು ಕೋಟಿ ಕೇಂದ್ರ ಸರ್ಕಾರದ ಸಬ್ಸಿಡಿ ತಗೊಂಡ ಸಂಸ್ಥೆಯಲ್ಲಿ ಪ್ರೊಡಕ್ಷನ್ ಶುರುವಾಗಲೆ ಇಲ್ಲ. ಷೇರುದಾರರ ಮನೆಯಲ್ಲಿ ಇಟ್ಟ ಗೂಡಿಗೂ ಚೀಯದ ಕೆಲೆಂಜಿ ಬರದೆ ಗೂಡಿನಲ್ಲಿ ಮೊಜೆಂಟಿ ಬಂದು ಬಾಡಿಗೆಗೆ ಕುಂತಿತು. ಅತ್ತ ರೈತರಿಂದ ಯೋಗ್ಯ ಬೆಲೆಗೆ ಚೀಯದ ನೆಯಿ ಪರ್ಚೇಸೂ ಮಾಡಲಾಗದೆ, ಇತ್ತ ಇವರಿಗೆ ಕಂಪೆನಿಗೆ ಬೇಕಾಗುವಷ್ಟು ಉತ್ಪಾದನೆಯನ್ನೂ ಮಾಡಲಾಗದೆ ನೆಯಿ ಶಾರ್ಟೆಜ್ ಬಂತು. ನೆಯಿ ಇಲ್ಲದೆ ಮತ್ತೆಂಥ ಮಾಡೋದು ಇವರು, ಅಲ್ಲಲ್ಲಿ ಜಾತ್ರೆಗಳಲ್ಲಿ, ಮೇಳಗಳಲ್ಲಿ ಸಣ್ಸಣ್ಣ ಸ್ಟಾಲ್ ಹಾಕಿ “ನಮ್ಮ ನೆಯಿ ಉತ್ತಮ, ದೇವರಾಣೆಗೂ ಸಕ್ಕರೆ ಪಾಕ ಮಿಕ್ಸಿಲ್ಲ, ನೋ ಬೆಲ್ಲ, ಕಜೆಂಟಿಲ್ಲ” ಎಂದು ಒದ್ದಾಡ ತೊಡಗಿದರು. ಅದೆಲ್ಲ ಪ್ರಯೋಜನಕ್ಕೆ ಬರಲೇ ಇಲ್ಲ. ಈಗ ಇದೆಲ್ಲ ಶುರುವಾಗಿ ಅಂದಾಜು ಎರಡ್ಮೂರು ವರ್ಷಗಳೇ ಕಳೆದು ಹೋಗಿವೆ. ಬೇಗದಲ್ಲೇ ಕಂಪೆನಿ ಕ್ಲೀನಾಗಿ ನಾಲಕ್ಕು ಕೋಟಿ ಪ್ಲಸ್ ಷೇರುದಾರರ ಷೇರಿನೊಂದಿಗೆ ಬುಳುಂಕ ಆಗಲಿದೆ.

ಹಾಗೆಂದು ಕಂಪೆನಿ ತನ್ನ ಷೇರುದಾರರಿಗೆ ಹಿಡಿಸಿದರೆ ಅದು ದೊಡ್ಡ ವಿಷಯವೇ ಅಲ್ಲ. ಯಾಕೆಂದರೆ ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ. ಇನ್ನು ಬ್ಯಾಂಕ್ ಕೊಟ್ಟ ಎರಡು ಕೋಟಿಗೆ ಅದರಲ್ಲಿ ಒಂದು ಕೋಟಿಯ ಮೆಷಿನರಿ ಇದೆಯಂತೆ. ಉಳಿದ ಒಂದು ಕೋಟಿಗೆ ಬಿಲ್ಡಿಂಗ್, ಅಡಿಸ್ಥಳ ಅಂತ ರಿಕವರಿ ಆಗ ಬಹುದು. ಆದರೆ ಸರ್ಕಾರ ಕೊಟ್ಟ ಎರಡು ಕೋಟಿ ಸಬ್ಸಿಡಿ ಉಂಟಲ್ಲ ಅದು ಸಾರ್ವಜನಿಕ ದುಡ್ಡು, ತೆರಿಗೆ ದುಡ್ಡು. ಅದನ್ನೇ ಇಲ್ಲಿ ಮಿಸ್ ಯೂಸ್ ಮಾಡಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಲಾಗಿದೆ. ಅದರಲ್ಲೂ ಇವರು ಎಷ್ಟು ರೋಮ ರೋಮ ವಂಚಕರು ಅಂದರೆ ಇವರ ಪ್ರೋಸೆಸಿಂಗ್ ಯುನಿಟ್ ಬಿಲ್ಡಿಂಗ್ ಕಟ್ಟಿದ ಗುತ್ತಿಗೆದಾರನಿಗೇ ಇಪ್ಪತ್ನಾಲ್ಕು ಲಕ್ಷಗಳ ಕಾಸ್ಟ್ಲಿ ಟೋಪಿ ಹಾಕಿ ಇದೀಗ “ತೀರಿದ್ರೆ ವಸೂಲು ಮಾಡು” ಲೆವೆಲ್ ರೀಚ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಪಾಪ ಆ ಕಂಟ್ರಾಕ್ಟರ್ ಈಗ ಕಂಡ ಕಂಡವರಿಂದ ಹೇಳಿಸಿ, ಪಂಚಾಯ್ತಿ ಮಾಡಿಸಿ, ಸಿಟ್ಟಿಂಗ್ ಮೇಲೆ ಸಿಟ್ಟಿಂಗ್ ನಡೆಸಿದರೂ ಇಪ್ಪತ್ನಾಲ್ಕಕ್ಕೆ ಯಾವುದೇ ಗತಿ ಆಗದೆಯೇ ಉಳಿದಿದೆ. ಇನ್ನೂ ಕೂಡ ಬಾಕಿ ಇಪ್ಪತ್ನಾಲ್ಕರ ಕತೆ ಮುಂದುವರೆದಿದ್ದು ಆಡಳಿತ ಮಂಡಳಿ ದಿನಕ್ಕೊಂದು ಕತೆ ಹೇಳುತ್ತಾ ದಿನ ದೂಡುತ್ತಿದೆ. ಇದು ಸರ್ಕಾರಕ್ಕೆ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ವಂಚಿಸುವ ಒಂದು ಹೈಟೆಕ್ ವಂಚಕರ ಗ್ಯಾಂಗ್ ಆಗಿದ್ದು ಇವತ್ತು ಚೀಯದ ನೆಯಿ ಹೆಸರಿನಲ್ಲಿ ನಾಲಕ್ಕು ಕೋಟಿ ಮುಳುಗಿಸಿದ ಟೇಸ್ಟ್ ಸಿಕ್ಕಿರುವ ಇವರು ಮುಂದೆ ಹಲಸಿನ ಕಾಯಿ ಪಾರ್ಕು, ಗೇರ್ ಹಣ್ಣಿನ ಡಿಸ್ಟಿಲರಿ,ರಾಗಿ ಕಂಪೆನಿ, ಜೋಳದ ಜೋಪಡಿ ಮುಂತಾದ ಸ್ವಮಜಾ ಮುಖಿ ಕೆಲಸ ಮಾಡುವ ಸ್ಕೆಚ್ ಹಾಕುವುದರಲ್ಲಿ ಸಂಶಯವೇ ಇಲ್ಲ. ಈ ಕೇಸಲ್ಲಿ ಈ ಚೀಯದ ಕೆಲೆಂಜಿಗಳನ್ನು ಹಾಗೆ ಸುಮ್ಮನೆ ಬಿಟ್ಟರೆ ಮುಂದೆ ದೊಡ್ಡ ದೊಡ್ಡ ಹೈಟೆಕ್ ವಂಚನೆಗಳಿಗೆ ಸರ್ಕಾರವೇ ರಹದಾರಿ ಮಾಡಿಕೊಟ್ಟಂತಾಗುತ್ತದೆ.
