ಮಳೆಗಿಂತ ರಜೆ ಹೆಚ್ಚು! ಮಕ್ಕಳಿಗೆ ಖುಷಿ… ಶಿಕ್ಷಕರಿಗೆ ಟೆನ್ಷನ್!

Pattler News

Bureau Report

ಜಿಲ್ಲೆಯಿಂದ ಆಚೆ ಅರಬ್ಬಿಯಲ್ಲಿ ಸ್ವಲ್ಪ ಮೋಡ ಕತ್ತಲೆ ಹಾಕಿದರೂ ಸಾಕು “ನಾಳೆ ರಜೆ ಉಂಟಾ?” ಎಂದು ಹಿಂದಿನ ಕಲೆಕ್ಟರ್ ಮುಲ್ಲೈ ಮುಹಿಲನ್ ಬಳಿ ಮಕ್ಕಳು ಫೋನ್ ಮಾಡಿ ಕೇಳಿದ್ದು ಈಗ ಇತಿಹಾಸ. ಇದನ್ನು ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿ ಹೊಟ್ಟೆ ತುಂಬಾ ನಕ್ಕಿದ್ದರು ಸಹ. ಈಗಲೂ ಅದೇ ಸಂಪ್ರದಾಯ ಮುಂದುವರೆದಿದೆ. ಮಳೆ ಬರಲಿ, ಬಾರದೆಯೇ ಇರಲಿ “ರಜೆ ಉಂಟಾ” ಎಂಬ ಪ್ರಶ್ನೆಯೇ ಈಗ ಮಕ್ಕಳ ಬೆಳಗಿನ ಪ್ರಾರ್ಥನೆ ಆಗಿದೆ. ಆಕಾಶದಲ್ಲಿ ಎರಡು ಮೋಡ ಆಚೀಚೆ ಠಳಾಯಿಸಿದರೂ ಸಾಕು, ಮಕ್ಕಳು ಮೊಬೈಲ್ ಹಿಡಿದು ಕಲೆಕ್ಟರ್ ದರ್ಶನನ ದರ್ಶನಕ್ಕಾಗಿ ರಿಫ್ರೆಶ್ ಮಾಡುತ್ತಾ ಕುಳಿತಿರುತ್ತಾರೆ. ಎಲ್ಲಿಯಾದರೂ ರಜೆ ಘೋಷಣೆಯಾದರೆ ಸಾಕು ಕೂಡಲೇ ಮಕ್ಕಳ ಮುಖದಲ್ಲಿ ಅರಳುವ ನಗು ನೋಡಿದರೆ, ಪರೀಕ್ಷೆಯಲ್ಲಿ ಫಸ್ಟ್ ಬಂದ ಖುಷಿಯೂ ಅಷ್ಟಿರಲಿಕ್ಕಿಲ್ಲ. ಜಗತ್ತನ್ನೇ ಗೆದ್ದಂತೆ. ಆದರೆ ಈ ಮಳೆಯ ರಜೆಯ ಲೆಕ್ಕವನ್ನೆಲ್ಲ ಕೊನೆಯಲ್ಲಿ ಯಾರ ತಲೆ ಮೇಲೆ ಹಾಕುತ್ತಾರೆ ಗೊತ್ತಾ? ಶಿಕ್ಷಕರ ತಲೆ ಮೇಲೆ! “ಇಂದು ರಜೆ… ನಾಳೆ ಡಬಲ್ ಕ್ಲಾಸ್… ಶನಿವಾರವೂ ಶಾಲೆ… ಬೇಕಾದರೆ ಭಾನುವಾರವೂ ಬನ್ನಿ!” ಎನ್ನುವ ಪರಿಸ್ಥಿತಿ ಬರಬಹುದು. ಬೂಮ್ರಾನ ಲಾಸ್ಟ್ ಓವರಿಗೆ ಮೂವತ್ತಾರು ಹೊಡೆಯಲೇ ಬೇಕಾದ ಪರಿಸ್ಥಿತಿ.


ಇನ್ನು ಮನೆಯಲ್ಲಿ ಮಕ್ಕಳ ಪರಿಸ್ಥಿತಿ ಹೇಗಿರುತ್ತದೆ ಗೊತ್ತಾ? ಪುಸ್ತಕಕ್ಕೆ ರಜೆ, ಆದರೆ ಮೊಬೈಲ್‌ಗೆ ಓವರ್‌ಟೈಮ್! ಶಾರ್ಟ್ ವಿಡಿಯೋ, ಗೇಮ್, ರೀಲ್ಸ್, ಚಾಟ್… ಮಧ್ಯೆ ಅಮ್ಮ ಕರೆದರೆ ಮಾತ್ರ ದೊಡ್ಡ ಬಟ್ಟಲಮ್ಮ ಅಂತ ಊಟಕ್ಕೆ ಬ್ರೇಕ್. ಇಲ್ಲದಿದ್ದರೆ ತೋಟದಲ್ಲಿ ಮೀನು ಹಿಡಿಯುವುದು, ಗಾಳ ಹಾಕುವುದು, ನೆರೆಮನೆಯ ಸುತ್ತ ಸುತ್ತುವುದು, ಗಲ್ಲಿ ವರ್ಲ್ಡ್ ಕಪ್, ಮಳೆಯಲ್ಲಿ ಸೈಕಲ್ ಬ್ಯಾಲೆನ್ಸ್… ಹೀಗೆ “ಸೃಜನಾತ್ಮಕ ಚಟುವಟಿಕೆಗಳು” ಜೋರಾಗುತ್ತವೆ!

ಇದಕ್ಕೆ ನಮ್ಮದೊಂದು ಪುಟ್ಟ ಸಲಹೆ. ಇಡೀ ಜಿಲ್ಲೆಗೆ ಕಲೆಕ್ಟರ ಒಂದೇ ಆದೇಶ ಕೊಡುವ ಬದಲು, ಎಲ್ಲಿ ನಿಜವಾಗಿಯೂ ಮಳೆ, ನೆರೆ, ರಸ್ತೆ, ಸಂಕ ಸಮಸ್ಯೆ ಇದೆಯೋ ಅಲ್ಲಿ ಮಾತ್ರ ರಜೆ ನೀಡುವ ಅಧಿಕಾರವನ್ನು ತಹಶೀಲ್ದಾರ್‌ಗಳಿಗೆ, ಲೋಕಲ್ ಗ್ರಾಮ ಪಂಚಾಯಿತಿಗಳಿಗೆ ಅಥವಾ ಶಾಲೆಯ ಮುಖ್ಯಶಿಕ್ಷಕರಿಗೆ ನೀಡಿದರೆ ಹೇಗೆ ಅಂತ? ಆದರೆ ಈಗ ಹೇಗಿದೆ ಅಂದರೆ ಊರು ಒಣಗಿದ್ದರೂ, ಸೂರ್ಯ ಬಾನದಲ್ಲಿ ಹಾರಾಟ, ಚೀರಾಟ, ನಡೆಸಿದರೂ ಜಿಲ್ಲೆಗೆ ರಜೆ. ಅಧಿಕಾರದ ಹಂಚಿಕೆಯಿಂದ ಮಕ್ಕಳು ಮನೆಯಲ್ಲಿ ಮೊಬೈಲ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುವ ಪರಿಸ್ಥಿತಿ ತಪ್ಪಬಹುದು. ಮಳೆ ಜಾಸ್ತಿ ಇರುವ ಕೊಲ್ಲಮೊಗ್ರ, ಬಾಳು ಗೋಡು ಗ್ರಾಮಗಳಿಗೆ ರಜೆ ಸರಿ. ಆದರೆ ಬಿಸಿಲು ಹೊಡೆಯುತ್ತಿರುವ ಸೈಂಟ್ ಆಗ್ನೆಸ್, ಕೆನರಾ ಮಕ್ಕಳಿಗೂ ರಜೆ ಕೊಟ್ಟರೆ ಅವರಿಗೆ ಓದಿಗಿಂತ ರಜೆಯ ಕ್ಯಾಲೆಂಡರ್‌ವೇ ಹೆಚ್ಚು ನೆನಪಾಗುವ ಅಪಾಯ ಇದೆ.
ಆದರೂ ನಮ್ಮ ಕೊನೆಯ ಮಾತು ಒಂದೇ… ಇದು ನಮ್ಮ ವ್ಯಂಗ್ಯಭರಿತ ಸಲಹೆ ಮಾತ್ರ. ಅಂತಿಮ ನಿರ್ಧಾರ ಮಾನ್ಯ ಕಲೆಕ್ಟರನಿಗೆ ಸೇರಿದ್ದು. ಮಕ್ಕಳ ಸುರಕ್ಷತೆ ಮೊದಲ ಆದ್ಯತೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಾಧ್ಯವಾದಲ್ಲಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ರಜೆ ನೀಡಿದರೆ ಮಕ್ಕಳ ಓದುಗೂ, ಶಿಕ್ಷಕರಿಗೂ, ಪೋಷಕರಿಗೂ ಸ್ವಲ್ಪ ನೆಮ್ಮದಿ ಸಿಗಬಹುದು! ಇಲ್ಲದಿದ್ದರೆ ಯಾರು ಮಾರಾಯ್ರೆ ಆ ರಜೆಯ ಮಕ್ಕಳನ್ನು ಸಂಭಾಳಿಸೋದು. ಮಳೆಗೆ ನೆನೆದುಕೊಂಡು ಸಿಂಬಳ ಇಳಿಸಿಕೊಂಡರೆ ನಮ್ಮ ಸಂಬಳ ಉಳಿಸಿಕೊಳ್ಳಲು ಕಷ್ಟ ಆಗಬಹುದು. (ಶಿವಣ್ಣರ ಅಕ್ಷರಗಳ ಬುಟ್ಟಿಯಿಂದ ಕದ್ದಿದ್ದು)

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top