
ಗುಂಡ್ಯ ಪೇಟೆಯಲ್ಲಿ ಅನಧಿಕೃತರು ಅನಧಿಕೃತವಾಗಿ ನಿರ್ಮಿಸಿರುವ ಅನಧಿಕೃತ ಅಂಗಡಿಗಳಿಗೆ ಲೈಸೆನ್ಸ್ ನೀಡುವ ಬಗ್ಗೆ ಡೀಲಿಂಗ್ ಮುಗಿದಿದ್ದು ಇನ್ನು ಪಿಡಿಒ ಒಮ್ಮೆ ಬಂದು ಸ್ಥಳ ಪರಿಶೀಲನೆಯ ನಾಟಕ ಮಾಡಿದರೆ ಸಾಕು ಎಂಬ ಮಾಹಿತಿ ಲಭ್ಯವಾಗಿದೆ. ಹಾಗೇನಾದರೂ ಆದರೆ ಇದು ಅನಧಿಕೃತರಿಂದ ಅನಧಿಕೃತರಿಗಾಗಿ ಅನಧಿಕೃತರದ್ದೇ ಎಂಬಂತಾಗುತ್ತದೆ. ಬಹುಶಃ ನಾಳೆ ಬರ್ತಾರೆ.

ಹಾಗೆಂದು ಗುಂಡ್ಯ ಪೇಟೆಯಲ್ಲಿ ಈ ಅನಧಿಕೃತ ತಟ್ಟಿ ಅಂಗಡಿಗಳು ಇಂದು ನಿನ್ನೆಯದಲ್ಲ. ಓಬಿರಾಯನ ಕಾಲದಿಂದಲೂ ಇವುಗಳದ್ದು ಅದೇ ಕತೆ, ಅದೇ ವ್ಯಥೆ. ಹೈವೇ ಬದಿಯಲ್ಲಿ ಸೈಕಲ್ ಗ್ಯಾಪ್ ಸಿಕ್ಕಿದರೂ ಸಾಕು ತಟ್ಟಿ ಕಟ್ಟಿ ಆಯ್ತು. ಆದರೆ ಈ ಯಾವುದೇ ಅಂಡಿಗುಂಡಿ ಅಂಗಡಿಗಳಿಗೆ ಪಂಚಾಯ್ತಿ ಲೈಸೆನ್ಸ್ ಕೊಟ್ಟಿಲ್ಲ. ಯಾಕೆಂದರೆ ಅರಣ್ಯ ಮತ್ತು ಲೋಕೋಪಯೋಗಿ ಜಾಗೆಗಳಲ್ಲಿ ಕಟ್ಟಿರುವ ಈ ಅಂಗಡಿಗಳಿಗೆ ಲೈಸೆನ್ಸ್ ಕೊಡಲು ಪಂಚಾಯ್ತಿಗೆ ಕೈ ಬರಲ್ಲ. ಗುಂಡ್ಯದಲ್ಲಿ ಹೀಗೆ ಕಟ್ಟಿರುವ ಅಂಗಡಿಗಳು ಮಾಡಿರುವ ಕುರ್ತೆಲ್ ಗಳನ್ನು ನೀವೊಮ್ಮೆ ನೋಡಬೇಕು. ನೋಡಲು ಎರಡು ಕಣ್ಣು ಸಾಲದು, ಮೂಸಲು ರಾವಣನ ಮೂಂಕುಗಳು ಸಾಲದು. ಅದರಲ್ಲೂ ಕೆಲವು ಅನಧಿಕೃತ ಹೋಟೆಲ್ ಗಳಂತೂ ಮೂಂಕಿನ ರೋಮಗಳೇ ಉದುರಿ ಹೋಗುವಷ್ಟು ಪರಿಮಳಾ ಕೊಟ್ಟಿವೆ. ಇವೆಲ್ಲವನ್ನೂ ವರ್ಣಿಸಲು ದಿನಕ್ಕೆ ಟೂ ಜಿಬಿ ಸಾಲದು.

ಹಾಗೆಂದು ಗುಂಡ್ಯದಲ್ಲಿ ಸೈಕಲ್ ಗ್ಯಾಪಲ್ಲಿ ಕಟ್ಟಿದ ಹೆಚ್ಚಿನ ತಟ್ಟಿಅಂಗಡಿಗಳೆಲ್ಲ ಕೊಂಪ್ಲಾನ್ ಕುಡಿದು ಕುಡಿದು ಈಗ ದಷ್ಟಪುಷ್ಟವಾಗಿ ಬೆಳೆದಿದೆ. ಈ ಬಗ್ಗೆ ಗ್ರಾಮ ಸಭೆಗಳಲ್ಲಿ ವಿಸ್ಕ್ರತ ಚರ್ಚೆಗಳಾಗಿವೆ. ಅನಧಿಕೃತ ಅಂಗಡಿಗಳನ್ನು ತೆಗೆಯಬೇಕು, ಅವುಗಳಿಗೆ ಲೈಸೆನ್ಸ್ ಕೊಟ್ಟರೆ ಅಲ್ಲಿ ಸಮಾಜಬಾಹಿರ ಚಟುವಟಿಕೆಗಳು ನಡೆಯಬಹುದು ಎಂದು ಗ್ರಾಮಸ್ಥರ ಆಗ್ರಹವೂ ಆಗಿತ್ತು. ಈ ಬಗ್ಗೆ ಪಂಚಾಯ್ತಿ ಪಿಡಿಒ ಒತ್ತಾಯದ ಮೇರೆಗೆ ತಾಲೂಕು ಪಂಚಾಯಿತಿಗೆ ಲೆಟರ್ ಕೂಡ ಬರೆದಿದ್ದರು. ಈ ನಿಟ್ಟಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರ ನೇತೃತ್ವದಲ್ಲಿ ಸುಮಾರು ಹದಿನಾಲ್ಕು ಇಲಾಖೆಗಳ ಅಧಿಕಾರಿಗಳು ಗುಂಡ್ಯದ ಅಂಗಡಿಗಳ ಪರಿಶೀಲನೆ ನಡೆಸಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಅವು ಅನಧಿಕೃತ ಅಂಗಡಿಗಳು ತೆರವು ಗೊಳಿಸಬೇಕು ಎಂದು ಸೂಚನೆ ನೀಡಿದ್ದರು. ಆದರೆ ಕಳೆದ ವಾರ ಪಂಚಾಯ್ತಿ ವತಿಯಿಂದ ಅನಧಿಕೃತ ಹತ್ತು ಅಂಗಡಿಗಳ ಓನರ್ ಆಗಿರುವ ಜಿಮ್ಮು ಮತ್ತು ಅವನ ಅನಧಿಕೃತ ಟೀಮಿಗೆ ಅಂದಾಜು ಮೂವತ್ತು ಅರ್ಜಿಗಳನ್ನು ವಿತರಿಸಿ ಅವುಗಳನ್ನು ತುಂಬಿಸಿ ಕೊಡಬೇಕೆಂದು ಸೂಚಿಸಲಾಗಿತ್ತು ಎಂದು ಪಂಚಾಯ್ತಿ ಸೈಡಿಂದ ಮಾಹಿತಿ ಇದೆಯಂತೆ. ಇದೀಗ ನಾಳೆ ಪಂಚಾಯ್ತಿ ಕಡೆಯಿಂದ ಪಿಡಿಒ ಅರ್ಜಿ ಹಿಡಕ್ಕೊಂಡು ಸ್ಥಳ ಪರಿಶೀಲನೆ ನಡೆಸಲಿದ್ದು ಈ ಟ್ರಿಪ್ಪಲ್ಲಿ ಅಕ್ರಮವಾಗಿ ಹಾಗೂ ಕಾನೂನನ್ನು ಗಾಳಿಗೆ ತೂರಿ ಲೈಸೆನ್ಸ್ ನೀಡುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ ಎಂಬ ಬಗ್ಗೆ ಆರೋಪಗಳು ಕೇಳಿ ಬಂದಿವೆ.

ಹಾಗೆಂದು ಎಲ್ಲಿಯಾದರೂ ನಾಳೆ ಪಿಡಿಒ ಸ್ಥಳ ಪರಿಶೀಲನೆ ನಡೆಸಿ ಈ ಅನಧಿಕೃತರೆಲ್ಲರಿಗೂ ಲೈಸೆನ್ಸ್ ಕೊಟ್ಟರೆ ಅದೊಂದು ದೊಡ್ಡ ರಾಮಾಯಣವೇ ಆಗಬಹುದು. ಮೂಲಗಳ ಪ್ರಕಾರ ಗುಂಡ್ಯದಲ್ಲಿ ಪಿಡಿಒನ ದಸ್ಕತ್ತ್ ಪೋರ್ಜರಿ ಮಾಡಿ ಬರ್ಕತ್ ಆಗಲು ಹೋಗಿರುವ ಜಿಮ್ಮು ಗುಂಡ್ಯ ಪೇಟೆಯಲ್ಲಿ ಹತ್ತು ಅನಧಿಕೃತ ಅಂಗಡಿಗಳನ್ನು ಹೊಂದಿದ್ದು ಇವನೇ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಿಟ್ಟಿಂಗ್ ನಡೆಸಿ ನಡೆಸಿ ಡೀಲಿಂಗ್ ಮುಗಿಸಿದ್ದಾನೆ ಎಂದು ಮಾಹಿತಿ ಇದೆ. ಈ ಬಗ್ಗೆ ಎಲ್ಲಾ ಸೈಕಲ್ ಗ್ಯಾಪ್ ಅಂಗಡಿ ಓನರ್ ಗಳ ಕಡೆಯಿಂದ ದುಡ್ಡು ಕಲೆಕ್ಷನ್ ಶುರು ಮಾಡಿರುವ ಬಗ್ಗೆ ವಿಷಯ ವೈರಲ್ ಆಗಿದೆ. ಈ ಬಗ್ಗೆ ಕಡಬದ ರಾಜಕೀಯ ಪಕ್ಷವೊಂದರ ವಾಟ್ಸಪ್ ಗ್ರೂಪ್ ನಲ್ಲಿ ಸದ್ರಿ ವಿಷಯದ ನಿಮಿತ್ತ ದುಡ್ಡು ಕಲೆಕ್ಷನ್ ಮಾಡುವ ಬಗ್ಗೆ ಮಾತಾಡಿದ ಆಡಿಯೋ ಎಲ್ಲರ ಕಿವಿಯೊಳಗೆ ಸೇವಾಗಿದೆ ಎಂದು ತಿಳಿದುಬಂದಿದೆ.
ಅಲ್ಲಿ ಏನೆಕಲ್ ಪ್ರೈಮರಿ ಶಾಲೆಯ ಗ್ರೌಂಡಿನಲ್ಲಿ ಯಾರೋ ಮಂಡೆ ಸರಿ ಇಲ್ಲದವರು ಲೋಡ್ ಗಾಡಿ ಕೊಂಡುಹೋಗಿ ಪುಟ್ಟ ಪುಟ್ಟ ಕಾಲುಗಳು ಆಡುವ ಗ್ರೌಂಡಿನ ಕುಲ ಕೆಡಿಸಿದ್ದಾರೆಂದು ಜನ ತಾರಮಾರ ತಗಡ್ ಬೆಚ್ಚ ಮಾಡಿಕೊಂಡಿದ್ದಾರೆ. ಅಷ್ಟು ಚೆಂದದ ಗ್ರೌಂಡಿನಲ್ಲಿ ಯಾವನೋ ಮರ್ಲ ಲೋಡ್ ಗಾಡಿ ಕೊಂಡೋಗುವ ಜರೂರತ್ತಾದರೂ ಏನಿತ್ತು ಎಂಬ ಪ್ರಶ್ನೆ ಇದೆ. ಗ್ರೌಂಡಿನಲ್ಲಿ ಹಾದು ಹೋಗಲು ಎಲ್ಲಿಗೂ ಕನೆಕ್ಷನ್ ಟಚ್ ಇಲ್ಲ, ಗ್ರೌಂಡಿನ ಸುತ್ತ ಮುತ್ತ ಎಲ್ಲರಿಗೂ, ಎಲ್ಲಾ ಕಡೆಗೂ ರಸ್ತೆ ವ್ಯವಸ್ಥೆ ಇರುವಾಗ ಇವನ ಭಂಡಾರ ಗ್ರೌಂಡಿಗೆ ಯಾಕೆ ಇಳಿಯಿತು ಎಂಬುದೇ ಯೇನೆಕಲ್ ಜನರಿಗೆ ಅರ್ಥ ಆಗುತ್ತಿಲ್ಲ.

ಗ್ರೌಂಡಿನಲ್ಲಿ ಲೋಡ್ ಗಾಡಿ ಕೊಂಡೊದದ್ದು ಯಾರು ಯಾರು ಎಂಬ ಪ್ರಶ್ನೆಗೆ ಯಾರು ಕೂಡ ಇಲ್ಲಿ ತನಕ ಬಲಿಮ್ಮೆಯ ಬಚ್ಚಿರೆಯಲ್ಲಿ ಕಂಡು ಬಂದಿಲ್ಲ. ಊರ ಕಳ್ಳನಾ ಅಥವಾ ಪರ ಊರಿನ ಸೊಬಗನಾ ಎಂದು ಗೊತ್ತಾಗುತ್ತಿಲ್ಲ. ಆದರೆ ಹೊಟ್ಟೆಗೆ ರೈತಬಂಧು ಇಳಿಸುವವನು ಇಂಥ ಹಲ್ಕಟ್ ಕೆಲಸ ಮಾಡಲಿಕ್ಕಿಲ್ಲ ಅಂತ ಏನೆಕಲ್ ಜನ ಹೇಳುತ್ತಿದ್ದಾರೆ.