
ಸುಮಾರು ಆರು ನೂರು ವರ್ಷಗಳ ಹಿಂದೆ ಇಲ್ಲಿ ದೇವಸ್ಥಾನ ಇತ್ತಂತೆ, ಭಾರೀ ರಾಜ ವೈಭವ ಇತ್ತಂತೆ, ಶೂಲಿನಿ ದುರ್ಗಿ ಇಲ್ಲಿ ನೆಲೆಯಾಗಿದ್ದಳಂತೆ ನಂತರ ಕಾಲಘಟ್ಟದ ವಿವಿಧ ತಿರುವುಗಳಲ್ಲಿ ಕ್ರಮೇಣ ಇಲ್ಲಿ ಪೂಜೆ ನಿಂತು ದೇವಸ್ಥಾನವೇ ಪಾಳು ಬಿದ್ದು ಕಾಲಗರ್ಭದಲ್ಲಿ ಸೇರಿ ಹೊಯ್ತು ಎಂದು ಚಿಂತಕರು ಚಿಂತನೆ ನಡೆಸಿದಾಗ ತಿಳಿದು ಬಂದ ವಿಚಾರ. ಆರು ಶತಮಾನಗಳ ನಂತರ ಅದೇ ದೇವಸ್ಥಾನದಲ್ಲಿ ನೆಲೆಯಾಗಿದ್ದ ಶೂಲಿನಿ ದುರ್ಗಿ ಮತ್ತೇ ಕಾಣಿಸಿಕೊಂಡಿದ್ದು ಮುತ್ಲಾಜೆ ಫ್ಯಾಮಿಲಿಯ ಪ್ರಶ್ನೆ ಚಿಂತನೆಯಲ್ಲಿ. ದುರ್ಗಿಗೆ ಮತ್ತೇ ಗೌಜಿಯ ಪೂಜೆ ಶುರುವಾಗಿದೆ.

ಹಾಗೆಂದು ಗುತ್ತಿಗಾರಿನ ಪ್ರತಿಷ್ಠಿತ ಮನೆತನಗಳಲ್ಲಿ ಮುತ್ಲಾಜೆ ಮನೆತನವೂ ಒಂದು. ಕೆಲವು ವರ್ಷಗಳ ಹಿಂದೆ ಈ ಮುತ್ಲಾಜೆ ಫ್ಯಾಮಿಲಿಯ ಗಣ್ಯರು ತಮ್ಮ ಕುಟುಂಬದ ಬಗ್ಗೆ ಪ್ರಶ್ನೆ ಚಿಂತನೆ ನಡೆಸುತ್ತಿದ್ದ ಸಮಯದಲ್ಲಿ ಅದ್ಯಾಕೋ ಚಿಂತನೆ ಸರಿಯಾಗದೆ ಅರ್ಧಕ್ಕೆ ನಿಂತಿತ್ತು. ಇದೇ ರೀತಿ ನಾಲಕ್ಕು ಸಲವೂ ಇಟ್ಟ ಪ್ರಶ್ನೆ ಚಿಂತನೆ ಅರ್ಧಕ್ಕೇ ನಿಂತಿತ್ತು. ನಂತರ ಮತ್ತೇ ಚಿಂತನೆಗೆ ಅಡೆತಡೆಗಳು ಎದುರಾದಾಗ ದಿಗಿಲಿಗೆ ಬಿದ್ದ ಮುತ್ಲಾಜೆ ಫ್ಯಾಮಿಲಿಯ ಯಜಮಾನರುಗಳು ಚಿಂತಕ ವಿಟ್ಲದ ಮುಳಿಯ ಗಣೇಶ ಭಟ್ ಎಂಬವರ ಮೂಲಕ ಪ್ರಶ್ನೆ ಚಿಂತನೆ ನಡೆಸಿದಾಗ ಶೂಲಿನಿ ದುರ್ಗಿ ಕಾಣಿಸಿಕೊಂಡಿದ್ದಾಳೆ. ಮುತ್ಲಾಜೆ ಫ್ಯಾಮಿಲಿಗೆ ಸಂಬಂಧ ಪಟ್ಟಂತೆ ಒಂದು ದುರ್ಗಾ ಸಾನಿಧ್ಯ ಇದೆ, ಫ್ಯಾಮಿಲಿಯವರು ದುರ್ಗಾ ಆರಾಧನೆ ನಡೆಸಬೇಕು ಎಂದು ಚಿಂತಕರು ತಿಳಿಸಿದ್ದಾರೆ. ಈ ಬಗ್ಗೆ ವಿಮರ್ಶೆ ನಡೆಸಿದ ಮುತ್ಲಾಜೆ ಫ್ಯಾಮಿಲಿಯ ಹಿರಿಯರ ಚರ್ಚೆಯಲ್ಲಿ ಆರು ನೂರು ವರ್ಷಗಳ ಹಿಂದಿನ ಶೂಲಿನಿ ದುರ್ಗಿ ನೆಲೆ, ಶಾಸ್ತಾವು ದೇವರ ಸಾನಿಧ್ಯದ ಬಗ್ಗೆ ತಿಳಿದು ಬಂದಿದೆ. ಹಾಗೆ ಅವರೆಲ್ಲ ಶ್ರೀಕ್ಷೇತ್ರದಲ್ಲಿ ಹೋಗಿ ಪ್ರಾರ್ಥನೆ ಮಾಡಿದ್ದರು.

ಹಾಗೆ ಮುತ್ಲಾಜೆ ಫ್ಯಾಮಿಲಿಯವರು ದುರ್ಗಾ ದೇವಿಯ ಆರಾಧನೆ ಮಾಡಬೇಕೆಂದು ಚಿಂತನೆಯಲ್ಲಿ ಕಂಡು ಬಂದ ಕಾರಣ ಫ್ಯಾಮಿಲಿಯವರು ಅದೇ ಆರು ನೂರು ವರ್ಷಗಳ ಹಿಂದೆ ದೇವಸ್ಥಾನ ಇದ್ದ ಜಾಗದಲ್ಲೇ ಒಂದು ಕಟ್ಟೆ ಕಟ್ಟಿ ಅದರಲ್ಲಿ ಶೂಲಿನಿ ದುರ್ಗಿ ಮತ್ತು ಶಾಸ್ತಾವು ದೇವರ ಪ್ರತಿಷ್ಠೆ ಮಾಡಿದ್ದರು. ನಂತರದ ಕಾಲಘಟ್ಟದಲ್ಲಿ ಮುತ್ಲಾಜೆ ಫ್ಯಾಮಿಲಿಯವರು ವರ್ಷದಲ್ಲಿ ಒಂದು ದಿನ ದುರ್ಗಾ ಪೂಜೆ ಮಾಡುತ್ತಾ ಬರಲಾಗಿ, ಇತ್ತೀಚಿನ ವರ್ಷಗಳಲ್ಲಿ ಭಕ್ತರ ಸಂಖ್ಯೆ ಜಾಸ್ತಿಯಾದ ಕಾರಣಕ್ಕೆ ಅದೇ ದುರ್ಗಾ ಪೂಜೆಯನ್ನು ಸಾರ್ವಜನಿಕ ಉತ್ಸವ ಮಾಡಲಾಗಿದ್ದು, ಅಭಿವೃದ್ಧಿ ಸಮಿತಿ ರಚಿಸಿ ಸಾರ್ವಜನಿಕ ಸಹಕಾರದೊಂದಿಗೆ ಬಹಳ ವಿಜೃಂಭಣೆಯಿಂದ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಸದ್ರಿ ಸಾನಿಧ್ಯ ಇರುವ ಸ್ಥಳ ಚಣಿಲ ತಿರುಮಲೇಶ್ವರ ಭಟ್ ಎಂಬವರಿಗೆ ಸೇರಿದ್ದಾಗಿದ್ದು ಸದ್ರಿಯವರು ದುರ್ಗಾ ಪೂಜೆ ನಡೆಸಲೆಂದು ಅರ್ಧ ಎಕರೆ ಜಾಗವನ್ನು ಸಮಿತಿಗೆ ಬಿಟ್ಟು ಕೊಟ್ಟಿದ್ದಾರೆ. ತಿರುಮಲೇಶ್ವರ ಭಟ್ ರವರನ್ನು ದುರ್ಗಾ ಪೂಜಾ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಮಾಡಲಾಗಿದ್ದು ಮುತ್ಲಾಜೆ ಫ್ಯಾಮಿಲಿಯ ಯಜಮಾನರಾದ ದಯಾನಂದ ಮುತ್ಲಾಜೆ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇನ್ನು ವಳಲಂಬೆ ಜಯರಾಮರವರು ಸಮಿತಿಯ ಕಾರ್ಯದರ್ಶಿ ಆಗಿದ್ದು, ರವಿಪ್ರಕಾಶ್ ಕೋಶಾಧಿಕಾರಿಯಾಗಿದ್ದು ಸುಮಾರು ಹದಿನೈದು ಜನರ ಸಾರ್ವಜನಿಕ ದುರ್ಗಾ ಪೂಜಾ ಸಮಿತಿ ಇದೆ. ಮುತ್ಲಾಜೆ ಶೂಲಿನಿ ದುರ್ಗಿಗೆ ಬಹಳ ಕಾರಣಿಕ ಇದ್ದು ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ತಾಯಿಯಾಗಿ ನೆಲೆಯಾಗಿದ್ದಾಳೆ. ಸುಮಾರು ವರ್ಷಗಳಿಂದ ಇಲ್ಲಿ ದುರ್ಗಾ ಪೂಜಾ ದಿನದಂದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದ್ದು ಸಾರ್ವಜನಿಕರೇ ಹರಿಕೆ ರೂಪದಲ್ಲಿ ಸಂತರ್ಪಣೆ ನಡೆಸುತ್ತಿದ್ದಾರೆ. ಆರು ನೂರು ವರ್ಷಗಳ ಹಿಂದೆ ಕಾಲಗರ್ಭಕ್ಕೆ ಸೇರಿ ಹೋಗಿದ್ದ ಒಂದು ದುರ್ಗಾ ಸಾನಿಧ್ಯ ಮತ್ತೇ ಆರು ನೂರು ವರ್ಷಗಳ ನಂತರ ಒಂದು ಫ್ಯಾಮಿಲಿಯ ಪ್ರಶ್ನೆ ಚಿಂತನೆಯಲ್ಲಿ ಮತ್ತೇ ಕಾಣಿಸಿಕೊಳ್ಳುವುದೆಂದರೆ ಅವಳು ಭಾರೀ ಕಾರಣಿಕದ ದೇವರೇ ಆಗಿದ್ದಾಳೆ. ಆ ಫ್ಯಾಮಿಲಿಗೂ ಮತ್ತು ಶೂಲಿನಿ ದುರ್ಗಿ ಸಾನಿಧ್ಯಕ್ಕೂ ಅದೇನೋ ಬಿಟ್ಟು ಬಿಡಲಾಗದ ಸಂಬಂಧಗಳಿರ ಬಹುದು.




