
ಏಳು ವರ್ಷಗಳ ಹಿಂದೆ ನಡೆದಿದ್ದ ಪುತ್ತೂರು ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ ಅವರ ಅಮಾನುಷ ಹತ್ಯೆಗೆ ನ್ಯಾಯ ದೇವತೆ ಕೊನೆಗೂ ನ್ಯಾಯ ದಯ ಪಾಲಿಸಿದ್ದಾಳೆ. ಮರ್ಡರ್ ಮಾಡಿದ್ದ ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಫೈಲ್ ಕ್ಲೋಸ್ ಮಾಡಿದೆ. ಮರ್ಡರ್ ನಡೆದದ್ದು ಸಂಪ್ಯ ಪೋಲಿಸ್ ಸ್ಟೇಷನ್ ಮುಂದೆ ಮತ್ತು ಚೌತಿಗೆ ಬಂದಿದ್ದ ಗಣೇಶನ ಪೆಂಡಾಲ್ ನಲ್ಲಿ. ಅಷ್ಟರಲ್ಲಾಗಲೇ ಗಣೇಶ ವಿಸರ್ಜನೆಗೆ ಹೊರಟು ಹೋಗಿದ್ದ.
ಆವತ್ತು ಚೌತಿಗೆ ಗಣೇಶ ಬಂದಿದ್ದ. ಪುತ್ತೂರು ಗ್ರಾಮಾಂತರ ಸಂಪ್ಯ ಪೋಲಿಸ್ ಠಾಣೆ ಮುಂದುಗಡೆ ಪೆಂಡಾಲ್ ಹಾಕಿ ನವ ಚೇತನ ಯುವಕ ಸಂಘದ ವತಿಯಿಂದ ಗಣೇಶನನ್ನು ವಿಜೃಂಭಣೆಯಿಂದ ಸ್ವಾಗತಿಸಿ ಸ್ಥಾಪನೆ ಮಾಡಲಾಗಿತ್ತು. ಚೌತಿ ಗೌಜಿಯೋ ಗೌಜಿ. ಸಂಪ್ಯ ಗಣಪತಿ ಅಂದರೆ ಆ ಭಾಗದ ದೊಡ್ಡ ಗಣಪತಿ. ಜೊತೆಗೆ ಸಂಪ್ಯ ಪೋಲಿಸರ ಜುಗಲ್ ಬಂದಿ ಸಹ. ಹಾಗೆ ಚೌತಿಗೆ ಬಂದ ಗಣಪ ವಿಜೃಂಭಣೆಯಿಂದ ಪೂಜೆ ಸ್ವೀಕರಿಸಿ ಇಳಿ ಸಂಜೆ ಹೊತ್ತಲ್ಲಿ ಹೊರಟು ನಿಂತ. ಇಡೀ ಊರಿಗೆ ಊರೇ ಎದ್ದು ನಿಂತು ಸಿಡಿಮದ್ದು ಸಿಡಿಸಿ, ಬ್ಯಾಂಡ್ ವಾಲಗದಲ್ಲಿ, ಕೊಂಬು ಕಹಳೆಯಲ್ಲಿ, ಗೊಂಬೆ ಕುಣಿತದಲ್ಲಿ ಗಣಪನ ಜೊತೆ ಅದ್ದೂರಿ ಮೆರವಣಿಗೆ ಹೊರಟು ಹೋಯ್ತು. ಪೆಂಡಾಲ್ ಖಾಲಿ. ಮಸ್ಕ್ ಮಸ್ಕ್ ಕತ್ತಲೆ. ಇನ್ನೇನು ಯಕ್ಷಗಾನ ಶುರುವಾಗಲಿತ್ತು. ಆಗ ಪೆಂಡಾಲ್ ಗೆ ಬಂದಿದ್ದು ಮೇರ್ಲ ಕಾರ್ತಿಕ್ ಸುವರ್ಣ. ಕಾರ್ತಿಕ್ ಹಿಂದೂ ಸಂಘಟನೆಗಳ ರಾಯಭಾರಿ.
ಹಾಗೆಂದು ಸದ್ರಿ ಕಾರ್ತಿಕ್ ಸುವರ್ಣ ಮತ್ತು ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳಿಗೆ ಭಾರೀ ದೊಡ್ಡ ವೈರತ್ವ ಅಂತ ಏನೂ ಇರಲಿಲ್ಲ. ಒಬ್ಬರನ್ನೊಬ್ಬರು ಮರ್ಡರ್ ಮಾಡದೆ ನಿದ್ದೆ ಬರಲ್ಲ ಎಂಬಂತಹ ಪರಿಸ್ಥಿತಿ ಇರಲಿಲ್ಲ. ಆದರೂ ಮರ್ಡರ್ ನಡೆದು ಹೋಗಿದೆ. ಇಲ್ಲಿ ಚಿಕ್ಕ ಚಿಕ್ಕ ಕಾರಣಗಳನ್ನು ದೊಡ್ಡದು ಮಾಡಲಾಯಿತಾ? ಸದ್ರಿ ಕಾರ್ತಿಕ್ ಸುವರ್ಣನ ಚಿಕ್ಕಪ್ಪನ ಮನೆ ನಿರ್ಮಾಣದ ಗುತ್ತಿಗೆ ಕೆಬ್ಲಾಡಿ ಕಿಟ್ಟಣ್ಣನ ದೊಡ್ಡ ಮಗ ಕಿರಣ್ ರೈ ವಹಿಸಿಕೊಂಡಿದ್ದು, ಮನೆ ನಿರ್ಮಾಣ ಲೇಟ್ ಆದದ್ದಕ್ಕೆ ಮತ್ತು ಅದೇನೋ ಮೂರು ಲಕ್ಷ ದುಡ್ಡಿನ ವಹಿವಾಟಲ್ಲಿ ಕಾರ್ತಿಕ್ ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳಿಗೆ ಗುರ್ರ್ ಅಂದಿದ್ದ ಅಂತ ಸುದ್ದಿ. ಇದರಿಂದ ಕಿಟ್ಟಣ್ಣನ ಮಕ್ಕಳು ತಗಡ್ ಬೆಚ್ಚ ಮಾಡಿಕೊಂಡು ಕಾರ್ತಿಕ್ ಸುವರ್ಣ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿರ ಬಹುದು ಎಂಬುದು ಒಂದು ಸೈಡಿನ ಅಭಿಪ್ರಾಯ. ಆದರೆ ಇನ್ನೊಂದು ಸೈಡಲ್ಲಿ ಕೆಬ್ಲಾಡಿ ಕಿಟ್ಟಣ್ಣನ ಚಿಕ್ಕ ಮಗ ಚರಣ್ ರೈದ್ದು ಅದೇನೋ ಹುಡುಗಿ ಕಿರಿಕ್ ನಲ್ಲಿ ಭಾರೀ ಪೆಟ್ಟುಗುಟ್ಟು ನಡೆದು, ಬೊಳುವಾರಿನಲ್ಲಿ ಪೆಟ್ಟು, ಅದಕ್ಕೆ ರಿವೆಂಜ್ ಆಗಿ ಸಂಪ್ಯದಲ್ಲಿ ಸೋಡಾ ಬಾಟ್ಲಿ ಯುದ್ದ ಎಲ್ಲಾ ನಡೆದಿತ್ತು. ಈ ಸೋಡಾ ಬಾಟ್ಲಿ ಯುದ್ದದಲ್ಲಿ ಕಾರ್ತಿಕ್ ಸುವರ್ಣನ ಹೆಸರು ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳ ವಿರೋಧಿ ಗ್ಯಾಂಗ್ ನ ಎಫ್ ಐಆರ್ ನಲ್ಲಿ ಇತ್ತು. ಇನ್ನು ಎಲ್ಲಕ್ಕಿಂತ ಹೆಚ್ಚಾಗಿ ಕಾರ್ತಿಕ್ ಸುವರ್ಣ ಹಿಂದೂ ಸಂಘಟನೆಗಳ ಯುವ ನಾಯಕನಾಗಿದ್ದವನು ಮತ್ತು ಹಿಂದೂ ಲೀಡರ್ ಆಗಿ ಮಿತಿ ಮೀರಿ ಬೆಳೆದಿದ್ದ. ಈ ಬೆಳವಣಿಗೆ ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳಿಗೆ ನುಂಗಲಾರದ ತುತ್ತಾಗಿತ್ತು. ಇನ್ನು ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳು ಕೂಡ ಅಷ್ಟೇನೂ ದೊಡ್ಡ ಪೆಟ್ಟಿಸ್ಟ್ ಗಳೂ ಆಗಿರಲಿಲ್ಲ ಮತ್ತು ಕ್ರಿಮಿನಲ್ ಗಳೂ ಅಲ್ಲ. ಆದರೆ ಪುತ್ತೂರಿನಲ್ಲಿ “ಅಣ್ಣಾ” ಆಗಬೇಕು ಎಂಬ ಒಂದು ಕನಸು ಮಾತ್ರ ಇತ್ತು. ಕೆಬ್ಲಾಡಿ ಕಿಟ್ಟಣ್ಣನ ದೊಡ್ಡ ಮಗ ಕಿರಣ್ ರೈ ಇದೇ ನವಚೇತನ ಯುವಕ ಸಂಘದ ಕಾರ್ಯದರ್ಶಿ ಮತ್ತು ಕಾರ್ತಿಕ್ ಸುವರ್ಣ ಸಂಘದ ಸಕ್ರಿಯ ಸದಸ್ಯ. ಇಬ್ಬರೂ ಸೇರಿಯೇ ಪುತ್ತೂರು ಗ್ರಾಮಾಂತರ ಸಂಪ್ಯ ಪೋಲಿಸ್ ಠಾಣೆ ಮುಂದುಗಡೆ ಚೌತಿಗೆ ಗಣಪತಿ ಇಟ್ಟಿದ್ದು ಮತ್ತು ಮೆರವಣಿಗೆ ಹೊರಡಿಸಿದ್ದು. ಆದರೆ ಕತೆ ಮಾತ್ರ ಬೇರೆಯದೇ ಆದದ್ದು.
ಹಾಗೆ ಅತ್ತ ಸಂಪ್ಯ ಗಣಪತಿ ಮೆರವಣಿಗೆ ಹೊರಟು ಹೋದ ಮೇಲೆ ಇಡೀ ಪೆಂಡಾಲ್ ಖಾಲಿ ಆಗಿತ್ತು. ಸಂಪ್ಯ ಪೊಲೀಸರೂ ಗಣಪತಿಗೆ ಬಂದೋಬಸ್ತ್ ಮಾಡಲು ಮೆರವಣಿಗೆಯಲ್ಲಿ ಸಾಗಿ ಹೋಗಿದ್ದರು. ಠಾಣೆಯಲ್ಲೂ ಯಾರೋ ಲಿಂಗಪ್ಪ ಪೋಲಿಸ್, ಓಡ್ಯಪ್ಪ ಪೋಲಿಸ್ ಬಿಟ್ಟರೆ ಠಾಣೆಯೂ ಖಾಲಿ. ಆ ಟೈಮಲ್ಲಿ ಕಾರ್ತಿಕ್ ಸುವರ್ಣ ಪೆಂಡಾಲ್ ಗೆ ಬಂದಿದ್ದಾರೆ.ಪೆಂಡಾಲ್ ತುಂಬಾ ಮಸ್ಕ್ ಮಸ್ಕ್ ಕತ್ತಲೆ. ಯಾಕೆಂತ ಗೊತ್ತಿಲ್ಲ ಅದೇ ಪೆಂಡಾಲ್ ಗೆ ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳ ಎಂಟ್ರಿ ಕೂಡ ಆಗಿದೆ. ಕಿಟ್ಟಣ್ಣನ ಮಕ್ಕಳ ಜೊತೆ ಉಳ್ಳಾಲದ ರೌಡಿಶೀಟರ್ ಪ್ರೀತೇಶ್ ಸಹ. ಇಬ್ಬರಿಗೂ ಅದೇನೋ ಮೊದಲೇ ಕಿರಿಕ್ ಇತ್ತಲ್ಲ, ಕಿಟ್ಟಣ್ಣನ ಮಕ್ಕಳು ಕಾರ್ತಿಕ್ ಸುವರ್ಣನನ್ನು ಮಲೇದ್ ನೋಡಿದ್ದಾರೆ. ಕಾರ್ತಿಕ್ ಕೂಡ ನೋಡಿರ ಬಹುದು. ಇದರಿಂದ ತಗಡ್ ಬೆಚ್ಚ ಮಾಡಿಕೊಂಡ ಕಿಟ್ಟಣ್ಣನ ಮಕ್ಕಳು ಜೊತೆಗಿದ್ದ ಪ್ರೀತೇಶ್ ಗೆ ಕಾರ್ತಿಕ್ ಎದೆಯಲ್ಲಿ ಕೋಳಿ ಬಾಳು ಇಳಿಸಲು ಸಂಜ್ಞೆ ಮಾಡಿದ್ದಾರೆ ಮತ್ತು ಇಬ್ಬರೂ ಸೇರಿ ಕಾರ್ತಿಕ್ ಸುವರ್ಣನನ್ನು ಲಾಕ್ ಮಾಡಿದ್ದಾರೆ. ಪ್ರೀತೇಶ್ ಕಾರ್ತಿಕ್ ಎದೆಯಲ್ಲಿ ಭಾರೀ ಆಳಕ್ಕೆ ಕೋಳಿ ಬಾಳು ಇಳಿಸಿದ್ದಾನೆ. ಕಾರ್ತಿಕ್ ಇಹಲೋಕ ತ್ಯಜಿಸಿದ್ದಾನೆ ಅಷ್ಟೇ.
ಆಮೇಲೆ ಪೋಲಿಸರು ಬಂದರು, ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳನ್ನು ಪ್ರೀತೇಶ್ ಸಮೇತ ಎಲ್ಲೋ ಅಟ್ಟದಿಂದ ಇಳಿಸಿ ಹೊತ್ತುಕ್ಕೊಂಡು ಬಂದರು, ಟೈಟ್ FIR ಹಾಕಿ ಬಂದೀಖಾನೆಗೆ ಕಳಿಸಿ ಕೊಟ್ಟರು. ನಂತರ ಕೋರ್ಟ್ ಸೀನ್ ಬಂತು, ವಾದ ಪ್ರತಿವಾದ ನಡೆದು ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳಿಗೆ ಜಾಮೀನಾಯಿತು. ಹೊರಗೆ ಬಂದ ಕಿಟ್ಟಣ್ಣನ ಮಕ್ಕಳು ಭಾರೀ ಜಾಗ್ರತೆಯಲ್ಲೇ ಇದ್ದರು. ಅವರಿಗೆ ಕಾರ್ತಿಕ್ ಸುವರ್ಣ ಕಡೆಯ ಹುಡುಗರು ಕತ್ತಿ ಕೂಟುತ್ತಿದ್ದ ಶಬ್ದ ಕೇಳಿಸುತ್ತಲೇ ಇತ್ತು. ಬೇಗದಲ್ಲೇ ಟಿಕೆಟ್ ಇಶ್ಯೂ ಆಗುವ ಅಪಾಯಗಳ ಬಗ್ಗೆ ಕಿಟ್ಟಣ್ಣನ ಮಕ್ಕಳಿಗೆ ಅರಿವಿತ್ತು. ಆದರೆ ಬದುಕು ಕೆಬ್ಲಾಡಿ ಕಿಟ್ಟಣ್ಣನ ಮಕ್ಕಳನ್ನೂ ಬಿಡಲ್ಲ. ಅವರೂ ಬದುಕಲೇ ಬೇಕಿತ್ತು ಮತ್ತು ಬದುಕಲು ಹೊರಗಿನ ಜಗತ್ತಿಗೆ ಬರಲೇ ಬೇಕಿತ್ತು. ಹಾಗೆ ಪುತ್ತೂರಿನಿಂದ ಸ್ವಲ್ಪ ಹೊರಗೆ ಪೆರ್ಲಂಪಾಡಿಯಲ್ಲಿ ಕಿಟ್ಟಣ್ಣನ ಎರಡನೇ ಮಗ ಚರಣ್ ರೈ ಅದೇನೋ ಹೊಸ ಬಿಸಿನೆಸ್ ಶುರು ಮಾಡುವವನಿದ್ದ. ನಾಳೆ ಏನೋ ಹೊಸ ವ್ಯಾಪಾರ ಶುರು. ಇವತ್ತು ಅದರ ತಯಾರಿ. ಹಾಗಾಗಿ ಪೆರ್ಲಂಪಾಡಿಗೆ ಬಂದಿದ್ದ. ಜೊತೆ ಜೊತೆಗೆ ಬಂದಿದ್ದು ಕಲ್ಲಡ್ಕದ ಕಿಶೋರ್ ಟೀಂ. ಬಂದಿದ್ದು ಕೊಚ್ಚಿ ಕೊಚ್ಚಿ ಹಾಕಿದ್ದು ಹೋದದ್ದೇ. ರಿವೆಂಜ್ ತೆಗೆದು ಕೊಂಡು ಆಗಿತ್ತು. ನಂತರ ಉಳಿದದ್ದು ಇಬ್ಬರೇ. ಕಿರಣ್ ರೈ ಮತ್ತು ಪ್ರೀತೇಶ್. ಇದೀಗ ಈ ಇಬ್ಬರ ಮೇಲಿನ ಕೊಲೆ ಪ್ರಕರಣದ ಆರೋಪ ಸಾಬೀತಾಗಿದ್ದು ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ ಮೂರು ಲಕ್ಷ ದಂಡ ವಿಧಿಸಿ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.